ಚಿತ್ರಾ ನಾಯ್ಕ್

ಚಿತ್ರಾ ಜಯಂತ್ ನಾಯಕ್ (೧೯೧೮-೨೦೧೦)ರವರು ಒಬ್ಬ ಭಾರತೀಯ ಶಿಕ್ಷಣತಜ್ಞ, ಬರಹಗಾರ, ಸಮಾಜ ಸೇವಕ, ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಭಾರತದ ಯೋಜನಾ ಆಯೋಗದ ಪರಿಣಿತ ಸದಸ್ಯರಾಗಿದ್ದರು. [೧] [೨] ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿದ ಅನೌಪಚಾರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಸದಸ್ಯರಾಗಿದ್ದರು. [೩] ೧೯೮೬ರಲ್ಲಿ ಭಾರತ ಸರ್ಕಾರವು ಇವರಿಗೆ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ.[೪]

Chitra Naik
ಜನನ(೧೯೧೮-೦೭-೧೫)೧೫ ಜುಲೈ ೧೯೧೮
ಮರಣ24 December 2010(2010-12-24) (aged 92)
Known forಶೈಕ್ಷಣಿಕ ಸುಧಾರಕರು
ಸಂಗಾತಿಜಯಂತ್ ಪಾಂಡುರಂಗ್ ನಾಯ್ಕ್‌
Awardsಪದ್ಮಶ್ರೀ
ಪ್ರಣವಾನಂದ ಪ್ರಶಸ್ತಿ
ಜೀವನ್ ಸಾಧನಾ ಪ್ರಶಸ್ತಿ
ಕರ್ಮ ವೀರ್ ಬಹುರಾವ್ ಪಾಟೀಲ್ ಸಮಾಜ ಸೇವಾ ಪ್ರಶಸ್ತಿ
ಟ್ಯಾಗೋರ್ ಸಾಕ್ಷರತಾ ಪ್ರಶಸ್ತಿ
ರಾಜಾ ರಾಯ್ ಸಿಂಗ್ ಪ್ರಶಸ್ತಿ
ರಾಜೀವ್ ಗಾಂಧಿ ಪ್ರಶಸ್ತಿ
ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ

ಆರಂಭಿಕ ಜೀವನ

ಚಿತ್ರಾ ನಾಯಕ್‌ರವರು ೧೫ ಜುಲೈ ೧೯೧೮ ರಂದು ಪಶ್ಚಿಮ ಭಾರತದಲ್ಲಿರುವ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು [೫] ಮತ್ತು ಕಲೆಯಲ್ಲಿ ಗೌರವಗಳೊಂದಿಗೆ ಪದವಿ ಪಡೆದರು.[೬] ಅವರು ಶಿಕ್ಷಣದಲ್ಲಿ ಮತ್ತೊಂದು ಪದವಿ ಪಡೆಯಲು ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ (ಪಿಎಚ್‌ಡಿ) ಪಡೆದರು. [೧]ಚಿತ್ರಾರವರು ೧೯೫೩ ರಲ್ಲಿ, ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದು, ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರೇಟ್ ಅಧ್ಯಯನಗಳನ್ನು ಮಾಡಿದರು. [೭][೧] ಅವರ ವೃತ್ತಿಜೀವನವು ಕೊಲ್ಲಾಪುರ ಜಿಲ್ಲೆಯ ಭೂದರ್‌ಗಡ್‌ನಲ್ಲಿರುವ ರೂರಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾರಂಭವಾಯಿತು. ಅಲ್ಲಿ ಅವರು ಹರಿಜನರಲ್ಲಿ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸಿದರು ಮತ್ತು ಮಹಿಳಾ ಸಂಘಗಳನ್ನು (ಮಹಿಳಾ ಮಂಡಲ) ರಚಿಸಲು ಮಹಿಳೆಯರನ್ನು ಒಟ್ಟುಗೂಡಿಸಿದರು ಮತ್ತು ಮಕ್ಕಳ ಡೇಕೇರ್ ಕೇಂದ್ರಗಳು (ಬಾಲ್ವಾಡಿ) ಮತ್ತು ಆರೋಗ್ಯ ಚಿಕಿತ್ಸಾಲಯವನ್ನು ಸ್ಥಾಪಿಸಿದರು. [೬]

ಪರಂಪರೆ ಮತ್ತು ಸ್ಥಾನಗಳು

೧೯೪೮ ರಲ್ಲಿ, ಚಿತ್ರಾರವರು ತಮ್ಮ ಪತಿ ಮತ್ತು ಹೆಸರಾಂತ ಶಿಕ್ಷಣ ತಜ್ಞರಾದ ಜಯಂತ್ ಪಾಂಡುರಂಗ್ ನಾಯ್ಕ್‌ರವರಿಗೆ ಮುಂಬೈ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಸಂಶೋಧನಾ ಸಂಸ್ಥೆಯಾದ ಭಾರತೀಯ ಶಿಕ್ಷಣ ಸಂಸ್ಥೆ (IIE) ಯನ್ನು, ಸ್ಥಾಪಿಸಲು ಸಹಾಯ ಮಾಡಿ, ಬಾಂಬೆ ಗ್ರೇಟರ್‌ ಪ್ರದೇಶದಲ್ಲಿ ಶಿಕ್ಷಕರಿಗೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸಿದರು.[೮][೯] ಕಳೆದ ೨೫ ಶತಮಾನಗಳ ೧೦೦ ಮಹತ್ವದ ಶೈಕ್ಷಣಿಕ ಚಿಂತಕರ ಯುನೆಸ್ಕೋ ರೋಲ್ ಆಫ್ ಆನರ್‌ಗೆ ಸೇರ್ಪಡೆಗೊಂಡ ಜಯಂತ್ ನಾಯಕ್ ಅವರ ಪ್ರಯತ್ನಗಳಲ್ಲಿ ಚಿತ್ರಾ ನಾಯ್ಕ್ ಸಹಭಾಗಿಯಾಗಿದ್ದರು.[೧೦] ಅವರು IIE(ಐಐಇ) ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಮತ್ತು ಅವರ ನಾಯಕತ್ವದಲ್ಲಿ ಈ ಸಂಸ್ಥೆಯು ಮಹಿಳೆಯರಿಗೆ ಮನೆ ಶುಶ್ರೂಷೆ, ಪ್ರಥಮ ಚಿಕಿತ್ಸೆ, ತಾಯಿ ಮತ್ತು ಮಕ್ಕಳ ಆರೈಕೆ, ನೈರ್ಮಲ್ಯ ಮತ್ತು ಪೋಷಣೆಯ ವಿಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿತು. [೬] ಅವರು ಮಕ್ಕಳ ಮನೆ (ಬಾಲ ಭವನ) ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಿದರು ಹಾಗೂ ಮಹಿಳೆಯರಿಗೆ ಕುಟುಂಬ ಯೋಜನೆ ಕುರಿತು ಶಿಕ್ಷಣ ಶಿಬಿರಗಳನ್ನು ಆಯೋಜಿಸಿದರು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗಳನ್ನು ಸಜ್ಜುಗೊಳಿಸುವ ಕುರಿತು ಯೋಜನಾ ಅಧ್ಯಯನವನ್ನು ನಡೆಸಿದರು. [೬]

ಚಿತ್ರಾರವರು ನವದೆಹಲಿಯ ರಾಷ್ಟ್ರೀಯ ಮೂಲ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿದ್ದರು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅನೌಪಚಾರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದರು.[೩] ಇವರು ಭಾರತದ ಯೋಜನಾ ಆಯೋಗದ ಸದಸ್ಯರಾಗಿದ್ದರು ಮತ್ತು ಒಂಬತ್ತನೇ ಪಂಚವಾರ್ಷಿಕ ಯೋಜನೆ (೧೯೯೭-೨೦೦೨) ಗಾಗಿ ಆಯೋಗದ ಪರಿಣಿತ ಸದಸ್ಯರಾಗಿ ಸಾಮಾನ್ಯ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜವಾಬ್ದಾರಿಗಳಿಗೆ ಹಾಜರಾಗಿದ್ದರು. [೨] ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ವಯಸ್ಕರ ಶಿಕ್ಷಣದ ವರ್ಕಿಂಗ್ ಗ್ರೂಪ್ (೧೯೭೮-೮೩) ನ ಸದಸ್ಯರಾಗಿದ್ದರು[೧೧] ಮತ್ತು ಕೇಂದ್ರ ಶಿಕ್ಷಣ ಸಲಹಾ ಮಂಡಳಿಯು ಸ್ಥಾಪಿಸಿದ ಶಿಕ್ಷಣದ ವಿಕೇಂದ್ರೀಕೃತ ನಿರ್ವಹಣೆಯ CABE(ಸಿಎಬಿ‌ಇ) ಸಮಿತಿಯ (೧೯೯೩) ಖಾಯಂ ಸದಸ್ಯರಾಗಿದ್ದರು.[೧೨] ಇವರು ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡಲ್ಟ್ ಅಂಡ್ ಲೈಫ್ಲಾಂಗ್ ಎಜುಕೇಶನ್ (IIALE) ಅದರ ಅಂತರರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.[೩] [೧೩] ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು ಮತ್ತು ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಯ ನಿರ್ದೇಶಕರಾಗಿ, ಉನ್ನತ ಶಿಕ್ಷಣ ನಿರ್ದೇಶಕರಾಗಿ ಮತ್ತು ಶಿಕ್ಷಣ ನಿರ್ದೇಶಕರಾಗಿಯೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.[೧] ಚಿತ್ರಾ ನಾಯ್ಕ್‌ರವರು ಶಿಕ್ಷಣ ಆನಿ ಸಮಾಜ ( ಮರಾಠಿ ),[೧೪] ಭಾರತದಲ್ಲಿ ಶೈಕ್ಷಣಿಕ ಆವಿಷ್ಕಾರ,[೧೫] ಮತ್ತು ಶೈಕ್ಷಣಿಕ ಚಿಂತಕರಾಗಿ ಲೋಕಮಾನ್ಯ ತಿಲಕ್‌ರವರು-ಮುಂತಾದ ಪುಸ್ತಕಗಳ ಲೇಖಕರಾಗಿದ್ದಾರೆ.[೧೬] ಅವರು ಮಕ್ಕಳಿಗಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ನಾಲ್ಕು ಪುಸ್ತಕಗಳನ್ನು ನ್ಯಾಷನಲ್ ಬುಕ್ ಟ್ರಸ್ಟ್ ಹದಿನಾಲ್ಕು ಭಾಷೆಗಳಲ್ಲಿ ಪ್ರಕಟಿಸಿದೆ. [೧]

ಸಾವು

ಆಕೆಯು ಜೀವನದ ನಂತರದ ಭಾಗದಲ್ಲಿ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಡಿಸೆಂಬರ್ ೨೦೧೦ರಂದು [೭] ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಯು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಪುಣೆಯಲ್ಲಿ ೨೦೧೦ ರ ಕ್ರಿಸ್‌ಮಸ್‌ನ ಮುನ್ನಾದಿನದಂದು, ತಮ್ಮ ೯೨ ನೇ ವಯಸ್ಸಿನಲ್ಲಿ ನಿಧನರಾದರು. [೧]

ಪ್ರಶಸ್ತಿಗಳು ಮತ್ತು ಗೌರವಗಳು

ಚಿತ್ರಾ ನಾಯಕ್ ಅವರು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಶೈಕ್ಷಣಿಕ ಸಂಶೋಧನೆಗಾಗಿ 'ಪ್ರಣವಾನಂದ ಪ್ರಶಸ್ತಿ' ಮತ್ತು ಪುಣೆ ವಿಶ್ವವಿದ್ಯಾನಿಲಯದ 'ಜೀವನ್ ಸಾಧನಾ ಪ್ರಶಸ್ತಿ' ಗೆ ಭಾಜನರಾಗಿದ್ದರು. [೭] ಭಾರತ ಸರ್ಕಾರವು ಅವರಿಗೆ ೧೯೮೬ ರಲ್ಲಿ 'ಪದ್ಮಶ್ರೀ ಪ್ರಶಸ್ತಿ' ಯನ್ನು ನೀಡಿತು ಹಾಗೂ [೪] [೫] ಇವರು ೧೯೮೯ ರಲ್ಲಿ ಮೊದಲ 'ಕರ್ಮ ವೀರ್ ಬಹುರಾವ್ ಪಾಟೀಲ್ ಸಮಾಜ ಸೇವಾ ಪ್ರಶಸ್ತಿ' ಯನ್ನು ಪಡೆದರು. ಇಂಡಿಯನ್ ಅಡಲ್ಟ್ ಎಜುಕೇಶನ್ ಅಸೋಸಿಯೇಷನ್ (IAEA) ಆಕೆಯನ್ನು ೧೯೯೨ ರಲ್ಲಿ 'ಟ್ಯಾಗೋರ್ ಸಾಕ್ಷರತಾ ಪ್ರಶಸ್ತಿ' ಗೆ ಆಯ್ಕೆ ಮಾಡಿತು ಮತ್ತು ಅದೇ ವರ್ಷ UNESCO ಆಕೆಗೆ 'ರಾಜಾ ರಾಯ್ ಸಿಂಗ್ ಪ್ರಶಸ್ತಿ' ಯನ್ನು ನೀಡಿತು. [೬] [೧೭] ಇದರ ನಂತರ ಚಿತ್ರಾ ನಾಯ್ಕ್‌ರವರು ತಮ್ಮ ಸಮಾಜ ಸೇವೆಗಾಗಿ 'ರಾಜೀವ್ ಗಾಂಧಿ ಪ್ರಶಸ್ತಿ' ಮತ್ತು 'ಯುನೆಸ್ಕೋ ಜಾನ್ ಅಮೋಸ್ ಕೊಮೆನಿಯಸ್ ಅಂತರರಾಷ್ಟ್ರೀಯ ಪ್ರಶಸ್ತಿ' ಮತ್ತು ೨೦೦೨ ರಲ್ಲಿ ಅವರು ಜಮ್ನಾಲಾಲ್ ಬಜಾಜ್ ಫೌಂಡೇಶನ್‌ನಿಂದ 'ಜಮ್ನಾಲಾಲ್ ಬಜಾಜ್ ಪ್ರಶಸ್ತಿ' ಯನ್ನು ಪಡೆದರು. [೬] [೧೭]

ಗ್ರಂಥಸೂಚಿ

  • Chitra Naik (1975). "Shikshan ani Samaj". Indian Institute of Education. Archived from the original on 4 March 2016. Retrieved 21 July 2015.
  • Chitra Naik (1974). Educational innovation in India. UNESCO Press. ASIN B007ESYZWK.
  • Chitra Naik (2004). "Lokmanya Tilak as Educational Thinker". Indian Institute of Education. Archived from the original on 4 March 2016. Retrieved 21 July 2015.  

ಉಲ್ಲೇಖಗಳು