ಪೀಕೂ (ಚಲನಚಿತ್ರ)

ಪೀಕೂ 2015ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ ಮತ್ತು ಎನ್.ಪಿ.ಸಿಂಗ್, ರೋನಿ ಲಹಿರಿ ಹಾಗೂ ಸ್ನೇಹಾ ರಜನಿ ನಿರ್ಮಿಸಿದ್ದಾರೆ. ಇದರಲ್ಲಿ ನಾಮಮಾತ್ರದ ನಾಯಕಿಯಾಗಿ ದೀಪಿಕಾ ಪಡುಕೋಣೆ , ಅಮಿತಾಭ್ ಬಚ್ಚನ್ ಮತ್ತು ಇರ್ಫಾನ್ ಖಾನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೌಶುಮಿ ಚ್ಯಾಟರ್ಜಿ ಮತ್ತು ಜೀಶು ಸೇನ್‌ಗುಪ್ತಾ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಪೀಕೂ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಶೂಜಿತ್ ಸರ್ಕಾರ್
ನಿರ್ಮಾಪಕ
  • ಎನ್. ಪಿ. ಸಿಂಗ್
  • ರಾನಿ ಲಹಿರಿ
  • ಸ್ನೇಹ ರಜನಿ
ಲೇಖಕಜೂಹಿ ಚತುರ್ವೇದಿ
ಪಾತ್ರವರ್ಗ
  • ಅಮಿತಾಭ್ ಬಚ್ಚನ್
  • ದೀಪಿಕಾ ಪಡುಕೋಣೆ
  • ಇರ್ಫ಼ಾನ್ ಖಾನ್
ಸಂಗೀತಅನುಪಮ್ ರಾಯ್
ಛಾಯಾಗ್ರಹಣಕಮಲ್‍ಜೀತ್ ನೇಗಿ
ಸಂಕಲನಚಂದ್ರಶೇಖರ್ ಪ್ರಜಾಪತಿ
ಸ್ಟುಡಿಯೋ
  • ಮಲ್ಟಿ ಸ್ಕ್ರೀನ್ ಮೀಡಿಯಾ
  • ಎಂಎಸ್‍ಎಂ ಮೋಷನ್ ಪಿಕ್ಚರ್ಸ್
  • ಸರಸ್ವತಿ ಎಂಟರ್‌ಟೇನ್‍ಮಂಟ್ ಕ್ರಿಯೇಷನ್ಸ್
  • ರೈಜ಼ಿಂಗ್ ಸನ್ ಫ಼ಿಲ್ಮ್ಸ್
ವಿತರಕರುಯಶ್ ರಾಜ್ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 8 ಮೇ 2015 (2015-05-08)
ಅವಧಿ122 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ25 ಕೋಟಿ[೨]
ಬಾಕ್ಸ್ ಆಫೀಸ್141 ಕೋಟಿ[೨]

ಈ ಚಿತ್ರವು ಸತ್ಯಜಿತ್ ರೇ ಅವರ 1980 ರ ಬಂಗಾಳಿ ಭಾಷೆಯ ಕಿರುಚಿತ್ರ ಪೀಕೂವನ್ನು ಸಡಿಲವಾಗಿ ಆಧರಿಸಿದೆ.[೩] ಇದರ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದಾರೆ. ಪ್ರಧಾನ ಛಾಯಾಗ್ರಹಣವು ಆಗಸ್ಟ್ 2014 ರಲ್ಲಿ ಪ್ರಾರಂಭವಾಯಿತು ಮತ್ತು ಡಿಸೆಂಬರ್‌ನಲ್ಲಿ ಮುಗಿಯಿತು. ಅನುಪಮ್ ರಾಯ್ ಧ್ವನಿವಾಹಿನಿ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು.

ಪೀಕೂ 8 ಮೇ 2015 ರಂದು ಬಿಡುಗಡೆಯಾಯಿತು.[೪] ಇದು ಬಿಡುಗಡೆಯಾದ ನಂತರ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಇದರ ಚಿತ್ರಕಥೆ, ಅಭಿನಯಗಳು, ಹಾಸ್ಯ ಮತ್ತು ಒಟ್ಟಾರೆ ಸರಳತೆಯನ್ನು ವಿಮರ್ಶಕರು ಶ್ಲಾಘಿಸಿದರು.[೫] ಇದು ವಿಶ್ವದಾದ್ಯಂತ ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ₹ 25 ಕೋಟಿಯಷ್ಟು ಬಂಡವಾಳದಲ್ಲಿ ತಯಾರಾದ ಪೀಕೂ ವಿಶ್ವಾದ್ಯಂತ ₹141 ಕೋಟಿಯಷ್ಟು ಗಳಿಸಿತು.

ಜನವರಿ 11, 2016 ರಂದು, ಈ ಚಿತ್ರವು 61 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ಜೊತೆಗೆ ಇತರ ವಿಭಾಗಗಳಲ್ಲಿಯೂ ನಾಮನಿರ್ದೇಶನಗೊಂಡಿತು. ದೀಪಿಕಾ ಪಡುಕೋಣೆ ತಮ್ಮ ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು, ಮತ್ತು ಬಚ್ಚನ್ 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನಾಲ್ಕನೇ ಬಾರಿಗೆ ಪಡೆದು ದಾಖಲೆ ಸ್ಥಾಪಿಸಿದರು ಮತ್ತು ತಮ್ಮ ಅಭಿನಯಕ್ಕಾಗಿ ಮೂರನೇ ಫಿಲ್ಮ್‌ಫೇರ್ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದು ದಾಖಲೆ ಸ್ಥಾಪಿಸಿದರು.

ಕಥಾವಸ್ತು

ಪೀಕೂ ಬ್ಯಾನರ್ಜಿ (ದೀಪಿಕಾ ಪಡುಕೋಣೆ) ತನ್ನ 70 ವರ್ಷದ ವಿಧುರ ತಂದೆ ಭಾಷ್ಕೋರ್‌ನೊಂದಿಗೆ (ಅಮಿತಾಬ್ ಬಚ್ಚನ್) ದೆಹಲಿಯಲ್ಲಿ ವಾಸಿಸುತ್ತಿರುವ ಬಂಗಾಳಿ ವಾಸ್ತುಶಿಲ್ಪಿಯಾಗಿರುತ್ತಾಳೆ. ಭಾಷ್ಕೋರ್‌ಗೆ ದೀರ್ಘಕಾಲದ ಮಲಬದ್ಧತೆಯ ಸಮಸ್ಯೆಗಳಿರುತ್ತವೆ ಮತ್ತು ಪ್ರತಿಯೊಂದು ಸಮಸ್ಯೆಯನ್ನು ತನ್ನ ಮಲವಿಸರ್ಜನಾ ಕ್ರಿಯೆಯೊಂದಿಗೆ ಗುರುತಿಸಿಕೊಳ್ಳುತ್ತಾನೆ. ಅವನ ಅಭ್ಯಾಸಗಳು ಹಲವು ವೇಳೆ ಆಳುಗಳೊಂದಿಗೆ ಜಗಳಗಳಿಗೆ ಕಾರಣವಾಗುತ್ತವೆ ಮತ್ತು ಅವರನ್ನು ಆಗಾಗ ಭೇಟಿಯಾಗಲು ಬರುವ ಪೀಕೂವಿನ ತಾಯಿಯ ಸೋದರಿಯಾದ ಛೋಬಿ ಮಾಶಿಯನ್ನು (ಮೌಶುಮಿ ಚ್ಯಾಟರ್ಜಿ) ಕಿರಿಕಿರಿಗೊಳಿಸುತ್ತವೆ. ಪೀಕೂ ತನ್ನ ತಂದೆಯನ್ನು ಪ್ರೀತಿಸುತ್ತಾಳೆ ಮತ್ತು ಅವಳ ತಾಯಿ ಈಗಿಲ್ಲದ ಕಾರಣ, ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ, ಆದರೆ ಅವನ ವಿಕೇಂದ್ರೀಯತೆಗಳಿಂದಾಗಿ ಕೆಲವೊಮ್ಮೆ ಅವನಿಂದ ವಿಪರೀತವಾಗಿ ಕಿರಿಕಿರಿಗೊಳ್ಳುತ್ತಾಳೆ. ಆಕೆಯ ಸಹೋದ್ಯೋಗಿಯಾದ ಸೈಯದ್ ಅಫ್ರೋಜ್ (ಜೀಶು ಸೇನ್‌ಗುಪ್ತಾ) ಉತ್ತಮ ಸ್ನೇಹಿತ, ಮತ್ತು ಅವಳು ರಾಣಾ ಚೌಧುರಿಯ (ಇರ್ಫಾನ್ ಖಾನ್) ಟ್ಯಾಕ್ಸಿಯ ನಿಯತ ಗ್ರಾಹಕಿಯಾಗಿರುತ್ತಾಳೆ. ರಾಣಾ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಕೌಟುಂಬಿಕ ಸಮಸ್ಯೆಗಳನ್ನು ಹೊಂದಿರುತ್ತಾನೆ.

ಪೀಕೂ ಕೋಲ್ಕತ್ತಾದ ಚಂಪಾಕುಂಜ್‍ನಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಮಾರಾಟ ಮಾಡಲು ಬಯಸುತ್ತಾಳೆ, ಆದರೆ ಭಾಷ್ಕೋರ್ ತೀವ್ರವಾಗಿ ಆಕ್ಷೇಪಿಸಿ ಕೋಲ್ಕತ್ತಾಗೆ ಹೋಗಲು ನಿರ್ಧರಿಸುತ್ತಾನೆ. ಅವನು ಏಕಾಂಗಿಯಾಗಿ ಪ್ರಯಾಣಿಸಲು ಬಿಡದ ಕಾರಣ ಪೀಕೂ ಅವನೊಂದಿಗೆ ಹೋಗಬೇಕಾಗುತ್ತದೆ. ಭಾಷ್ಕೋರ್ ತನ್ನ ಮಲಬದ್ಧತೆಯ ಸಮಸ್ಯೆಯ ಕಾರಣದಿಂದಾಗಿ ರಸ್ತೆಯ ಮೂಲಕ ಪ್ರಯಾಣಿಸಲು ನಿರ್ಧರಿಸುತ್ತಾನೆ. ರಾಣಾನ ಇತರ ಚಾಲಕರೊಂದಿಗಿನ ಪೀಕೂಳ ಸಮಸ್ಯೆಯಿಂದಾಗಿ, ಅವರು ಪೀಕೂಳ ಪ್ರವಾಸದ ಮೊದಲು ಹಿಂದೆ ಸರಿಯುತ್ತಾರೆ. ಏಜೆನ್ಸಿಯಿಂದ ನಿರಾಶೆಗೊಂಡ ಪೀಕೂ, ವಿಮಾನದಲ್ಲಿ ಜಾಗಗಳನ್ನು ಕಾಯ್ದಿರಿಸಲು ಪ್ರಯತ್ನಿಸುತ್ತಾಳೆ, ಆದರೆ ಶೀಘ್ರದಲ್ಲೇ, ರಾಣಾ ಆ ಕುಟುಂಬವನ್ನು ಕೋಲ್ಕತ್ತಾಗೆ ಕರೆದೊಯ್ಯಲು ತಾನೇ ಅವರ ಮನೆಗೆ ಆಗಮಿಸುತ್ತಾನೆ. ಆದರೆ ಆ ಪ್ರವಾಸದ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿರುವುದಿಲ್ಲ.

ದಾರಿಯಲ್ಲಿ, ಭಾಷ್ಕೋರ್‌ನ ರಂಪಮಾಡುವ ನಡವಳಿಕೆ ಮತ್ತು ಮಲಬದ್ಧತೆಯಿಂದಾಗಿ ರಾಣಾ ತಾಳ್ಮೆ ಕಳೆದುಕೊಳ್ಳುವ ಅಂಚಿನಲ್ಲಿರುವುದು ಸೇರಿದಂತೆ ಅನೇಕ ಘಟನೆಗಳನ್ನು ಗುಂಪು ಎದುರಿಸುತ್ತದೆ. ಅವರು ಅಂತಿಮವಾಗಿ ಕೋಲ್ಕತ್ತಾಗೆ ತಲುಪುತ್ತಾರೆ. ಅಲ್ಲಿ ಪೀಕೂವಿನ ಸಂಬಂಧಿಕರು ಹಳೆಯ ಮನೆಯಲ್ಲಿ ವಾಸಿಸುತ್ತಾರೆ ಮತ್ತು ಭಾಷ್ಕೋರ್ ರಾಣಾನನ್ನು ಸ್ವಲ್ಪ ಸಮಯ ಉಳಿದುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಪೀಕೂ ಮತ್ತು ರಾಣಾ ನಗರದಲ್ಲಿ ಓಡಾಡಿ ಕ್ರಮೇಣ ಹತ್ತಿರವಾಗುತ್ತಾರೆ. ಒಂದು ಚರ್ಚೆಯ ಸಮಯದಲ್ಲಿ ಮನೆಯನ್ನು ಮಾರಾಟ ಮಾಡದಿರುವಂತೆ ರಾಣಾ ಕೂಡ ಸೂಕ್ಷ್ಮವಾಗಿ ಸುಳಿವು ನೀಡುತ್ತಾನೆ.

ರಾಣಾ ಮರುದಿನ ಕೋಲ್ಕತ್ತಾದಿಂದ ಹೊರಟು ಭಾಷ್ಕೋರ್‌ಗೆ ಅವನ ವಿಕೇಂದ್ರೀಯತೆಗಳನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತಾನೆ. ಅವನು ಅಂತಿಮವಾಗಿ ಆ ಮಾತು ಕೇಳುತ್ತಾನೆ. ಪೀಕೂ ಮನಸ್ಸು ಬದಲಾಯಿಸಿ ಮನೆ ಮಾರಾಟ ಮಾಡದಿರಲು ನಿರ್ಧರಿಸುತ್ತಾಳೆ. ಏತನ್ಮಧ್ಯೆ, ಭಾಷ್ಕೋರ್‌ನ ಹಠಾತ್ ಸೈಕಲ್ ಓಡಿಸುವ ಬಯಕೆ ಹೆಚ್ಚಾಗುತ್ತದೆ. ಅವನು ನಗರದ ಒಂದು ಭಾಗದ ಮೂಲಕ ಏಕಾಂಗಿಯಾಗಿ ಸೈಕಲ್ ಚಲಾಯಿಸುವಾಗ, ಈ ಬಗ್ಗೆ ಮನೆಯವರಿಗೆ ತಿಳಿಸದ ಕಾರಣ ಎಲ್ಲರೂ ಉದ್ವಿಗ್ನರಾಗುತ್ತಾರೆ. ಭಾಷ್ಕೋರ್ ಹಿಂತಿರುಗಿದಾಗ, ಪೀಕೂ ಬೀದಿ ಆಹಾರವನ್ನು ತಿಂದಿದ್ದಕ್ಕಾಗಿ ಮತ್ತು ಬೇಜವಾಬ್ದಾರಿಯಿಂದ ಇದ್ದಿದ್ದಕ್ಕಾಗಿ ಅವನಿಗೆ ಬಯ್ಯುತ್ತಾಳೆ. ಆದರೆ ಅವನು ತನ್ನ ಮಲಬದ್ಧತೆಯು ನಿಂತಿದೆ ಮತ್ತು ತಾನು ಪ್ರತಿದಿನ ಸೈಕಲ್ ಓಡಿಸಬೇಕು ಎಂದು ಮಾತ್ರ ಹೇಳುತ್ತಾನೆ. ಎಲ್ಲವನ್ನೂ ತಿನ್ನಲು ಮತ್ತು ಆಹಾರದ ಬಗ್ಗೆ ಬಹಳ ನಾಜೂಕಾಗಿರುವುದು ಮತ್ತು ಬೇಸರಗೊಳ್ಳದಿರುವ ಬಗ್ಗೆ ಹೇಳಿದ್ದ ರಾಣಾನನ್ನು ಅವನು ನೆನಪಿಸಿಕೊಳ್ಳುತ್ತಾನೆ. ಪೀಕೂ ರಹಸ್ಯವಾಗಿ ಸಂತೋಷವಾಗಿದ್ದರೂ ಹೆಚ್ಚು ಭಾವನೆ ತೋರಿಸುವುದಿಲ್ಲ.

ಮರುದಿನ, ಭಾಷ್ಕೋರ್ ತನ್ನ ನಿದ್ರೆಯಲ್ಲಿ ಮರಣಹೊಂದಿದ್ದಾನೆಂದು ಎಲ್ಲರಿಗೂ ಗೊತ್ತಾಗುತ್ತದೆ, ಬಹುಶಃ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಅಥವಾ ಹೃದಯದ ಅಲಯಬದ್ಧತೆಯೊಂದಾಗಿ. ಅವನು ಯಾವಾಗಲೂ ಶಾಂತಿಯುತ ಮರಣವನ್ನು ಬಯಸಿದ್ದನು ಎಂದು ಹೇಳುತ್ತಾಳೆ. ಅವಳು ದೆಹಲಿಗೆ ಹಿಂದಿರುಗುತ್ತಾಳೆ. ಅಲ್ಲಿ ಅವಳು ಅವನ ಅಂತ್ಯಕ್ರಿಯೆಯನ್ನು ಏರ್ಪಡಿಸುತ್ತಾಳೆ. ಅಲ್ಲಿ, ಸೈಯದ್‍ಗೂ ಮಲಬದ್ಧತೆ ಇದೆ ಮತ್ತು ಭಾಷ್ಕೋರ್‌ಗೆ ಬಹಳ ಸಮಯದಿಂದ ತಿಳಿದಿತ್ತು ಎಂದು ಭಾಷ್ಕೋರ್‌ನ ವೈದ್ಯರಾದ ಡಾ. ಶ್ರೀವಾಸ್ತವ (ರಘುಬೀರ್ ಯಾದವ್) ಅವಳಿಗೆ ಬಹಿರಂಗಪಡಿಸುತ್ತಾರೆ. ಕೆಲವು ದಿನಗಳ ನಂತರ, ಅವಳು ರಾಣಾನಿಗೆ ಪಾವತಿಸಬೇಕಾಗಿರುವುದನ್ನು ಪಾವತಿಸುತ್ತಾಳೆ. ಅವಳು ತನ್ನ ತಂದೆಯ ನೆನಪಿನಲ್ಲಿ ದೆಹಲಿಯ ಮನೆಗೆ "ಭಾಷ್ಕೋರ್ ವಿಲಾ" ಎಂದು ಮರುನಾಮಕರಣ ಮಾಡುತ್ತಾಳೆ ಮತ್ತು ಭಾಷ್ಕೋರ್‌ನ ಸಿಡಿಮಿಡಿಯಿಂದಾಗಿ ಬಿಟ್ಟುಹೋಗಿದ್ದ ಸೇವಕಿ ಕೆಲಸಕ್ಕೆ ಮರಳುತ್ತಾಳೆ. ಪೀಕೂ ತನ್ನ ಮನೆಯ ಮುಂಭಾಗದ ಅಂಗಳದಲ್ಲಿ ರಾಣಾಳೊಂದಿಗೆ ಬ್ಯಾಡ್ಮಿಂಟನ್ ಆಡುವ ದೃಶ್ಯದೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.

ಪಾತ್ರವರ್ಗ

  • ಭಾಷ್ಕೋರ್ ಬ್ಯಾನರ್ಜಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್
  • ಪೀಕೂ ಬ್ಯಾನರ್ಜಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ
  • ರಾಣಾ ಚೌಧರಿ ಪಾತ್ರದಲ್ಲಿ ಇರ್ಫಾನ್ ಖಾನ್
  • ಸೈಯದ್ ಅಫ್ರೋಜ್ ಪಾತ್ರದಲ್ಲಿ ಜೀಶೂ ಸೇನ್‌ಗುಪ್ತಾ
  • ಬೋಡೋ ಮೇಶೋ ಪಾತ್ರದಲ್ಲಿ ಅವಿಜೀತ್ ದತ್
  • ಛೋಬಿ ಮಾಶಿ ಪಾತ್ರದಲ್ಲಿ ಮೌಶುಮಿ ಚ್ಯಾಟರ್ಜಿ
  • ಬುಧನ್ ಪಾತ್ರದಲ್ಲಿ ಬಲೇಂದ್ರ ಸಿಂಗ್
  • ಮೋನಿ ಕಾಕಿ ಪಾತ್ರದಲ್ಲಿ ಸ್ವರೂಪಾ ಘೋಷ್
  • ಡಾ. ಶ್ರೀವಾಸ್ತವ ಪಾತ್ರದಲ್ಲಿ ರಘುವೀರ್ ಯಾದವ್
  • ನಬೇಂದು ಪಾತ್ರದಲ್ಲಿ ಅನಿರುದ್ಧ ರಾಯ್ ಚೌಧರಿ
  • ಅನಿಕೆತ್ ಪಾತ್ರದಲ್ಲಿ ಅಕ್ಷಯ್ ಒಬೆರಾಯ್
  • ಈಶಾ ಪಾತ್ರದಲ್ಲಿ ರೂಪ್ಸಾ ಬ್ಯಾನರ್ಜಿ

ತಯಾರಿಕೆ

ಬರವಣಿಗೆ

ಶೂಜಿತ್ ಸರ್ಕಾರ್, ಪೀಕೂದ ನಿರ್ದೇಶಕ

ಆರಂಭದಲ್ಲಿ ವಿರಾಮವನ್ನು ಮನಸ್ಸಿನಲ್ಲಿಟ್ಟುಕೊಂಡು ಪೀಕೂವನ್ನು ಬರೆಯಲಾಗಿರಲಿಲ್ಲ ಎಂದು ಶೂಜಿತ್ ಸಿರ್ಕಾರ್ ಹೇಳಿದರು. ಆದರೆ ಪ್ರದರ್ಶನಗಳ ಸಮಯದಲ್ಲಿ ವಿರಾಮಗಳನ್ನು ಚಲನಚಿತ್ರಗಳಲ್ಲಿ ತುರುಕುವ ಭಾರತೀಯ ಚಿತ್ರಮಂದಿರ ನಿರ್ವಾಹಕರ ಪ್ರವೃತ್ತಿಯ ಕಾರಣ, ಸರ್ಕಾರ್ ವಿರಾಮಕ್ಕೆ ಸ್ಥಳಮಾಡಿಕೊಡುವಂತೆ ಕಥೆಯನ್ನು ಪುನಃ ಬರೆಯಬೇಕಾಯಿತು.[೬][೭]

ಪಾತ್ರಹಂಚಿಕೆ

ಶೀರ್ಷಿಕೆ ಪಾತ್ರದಲ್ಲಿ ಪರಿಣೀತಿ ಚೋಪ್ರಾ, ಅಮಿತಾಭ್ ಬಚ್ಚನ್ ಮತ್ತು ಇರ್ಫಾನ್ ಖಾನ್ ಶೂಜಿತ್ ಸರ್ಕಾರ್‌ರ ಮುಖ್ಯ ಪಾತ್ರಧಾರಿಗಳ ಮೂಲ ಆಯ್ಕೆಗಳಾಗಿದ್ದರು. ಈ ಮೂವರು ನಟರಿಗೆ ಚಿತ್ರಕಥೆಯನ್ನು ನೀಡಲಾಯಿತು. ಆದರೆ, ಚೋಪ್ರಾ ಪಾತ್ರವನ್ನು ತಿರಸ್ಕರಿಸಿದರು.[೮][೯] ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ಖಾನ್‍ರ ಪಾತ್ರವರ್ಗವನ್ನು 2014 ರ ಮಧ್ಯದಲ್ಲಿ ಅಂತಿಮಗೊಳಿಸಲಾಯಿತು.[೧೦] ಪೀಕೂ ಪಾತ್ರದ ತಯಾರಿಯಲ್ಲಿ, ತಮ್ಮ ಪಾತ್ರ ಬಂಗಾಳದಿಂದ ಬರುವುದರಿಂದ ಪಡುಕೋಣೆ ಬಂಗಾಳಿ ಕಲಿತರು.[೧೧] ಜೀಶು ಸೇನ್‌ಗುಪ್ತಾ ದೀಪಿಕಾ ಪಡುಕೋಣೆಯ ಪಾತ್ರದ ಅತ್ಯುತ್ತಮ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದಾರೆ.[೧೨][೧೩] ದೀಪಿಕಾ ಪಡುಕೋಣೆ ಎದುರು ಇರ್ಫಾನ್ ಖಾನ್ ಪ್ರಣಯ ನಾಯಕನಾಗಿ ನಟಿಸಿದ್ದಾರೆ.[೧೪][೧೫] ಪೀಕೂಳ ತಂದೆಯ ಪಾತ್ರವನ್ನು ಬಚ್ಚನ್ ವಹಿಸಿದರೆ, ಮೌಶುಮಿ ಚ್ಯಾಟರ್ಜಿ ಪೀಕೂಳ ಚಿಕ್ಕಮ್ಮನ ಪಾತ್ರವನ್ನು ನಿರ್ವಹಿಸಿದ್ದಾರೆ.[೧೬] ಅಕ್ಷಯ್ ಒಬೆರಾಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.[೧೭]

ಚಿತ್ರೀಕರಣ

ಆಗಸ್ಟ್ 2014 ರಲ್ಲಿ ಪೀಕೂದ ಪ್ರಧಾನ ಛಾಯಾಗ್ರಹಣ ಪ್ರಾರಂಭವಾಯಿತು.[೧೮] ಪೀಕೂವಿನ ಮೊದಲ ವೇಳಾಪಟ್ಟಿಯ ಚಿತ್ರೀಕರಣ ಕೊಲ್ಕತ್ತ, ದೆಹಲಿ ಮತ್ತು ಮುಂಬೈಯಲ್ಲಿ ನಡೆಯಿತು ಮತ್ತು ಒಳಾಂಗಣ ದೃಶ್ಯಗಳನ್ನು ಒಳಗೊಂಡಿತ್ತು.[೧೯][೨೦][೨೧] ಸ್ವಲ್ಪ ಚಿತ್ರೀಕರಣ ಗುಜರಾತ್‍ನ ಸುರೇಂದ್ರನಗರ್‌ನಲ್ಲಿ ನಡೆಯಿತು.[೨೨][೨೩]

ಚಿತ್ರೀಕರಣದ ಕೊನೆಯ ಭಾಗ ವಾರಾಣಸಿಯಲ್ಲಿ ನಡೆಯಿತು.

ಧ್ವನಿವಾಹಿನಿ

ಚಿತ್ರದ ಸಂಗೀತವನ್ನು ಅನುಪಮ್ ರಾಯ್ ಸಂಯೋಜಿಸಿದರೆ, ಹಾಡುಗಳಿಗೆ ಸಾಹಿತ್ಯವನ್ನು ಅನುಪಮ್ ರಾಯ್ ಹಾಗೂ ಮನೋಜ್ ಯಾದವ್ ಬರೆದಿದ್ದಾರೆ. ಅಧಿಕೃತ ಸಂಗೀತ ಧ್ವನಿಸುರುಳಿ ಸಂಗ್ರಹವನ್ನು ಏಪ್ರಿಲ್ 21, 2015 ರಂದು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಬೇಜ಼ುಬಾನ್"ಮನೋಜ್ ಯಾದವ್, ಅನುಪಮ್ ರಾಯ್ಅನುಪಮ್ ರಾಯ್05:41
2."ಜರ್ನಿ ಸಾಂಗ್"ಅನುಪಮ್ ರಾಯ್ಅನುಪಮ್ ರಾಯ್, ಶ್ರೇಯಾ ಘೋಶಾಲ್04:12
3."ಲಮ್ಹೆ ಗುಜ಼ರ್ ಗಯೆ"ಅನುಪಮ್ ರಾಯ್ಅನುಪಮ್ ರಾಯ್04:18
4."ಪೀಕೂ"ಮನೋಜ್ ಯಾದವ್ಸುನಿಧಿ ಚೌಹಾನ್03:26
5."ತೇರಿ ಮೇರಿ ಬಾತ್ಞೇ"ಅನುಪಮ್ ರಾಯ್ಅನುಪಮ್ ರಾಯ್05:28
ಒಟ್ಟು ಸಮಯ:23:05

ವಿಮರ್ಶಾತ್ಮಕ ಪ್ರತಿಕ್ರಿಯೆ

The three main actors, Padukone (top), Bachchan (centre) and Khan (bottom) received widespread praise for their performances.

ಈ ಚಿತ್ರವು ಬಿಡುಗಡೆಯಾದ ನಂತರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಫಿಲ್ಮ್‌ಫೇರ್ ಪ್ರಶಸ್ತಿಗಳು - ೧೫ ಜನೆವರಿ ೨೦೧೬

  • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶನ
  • ಅತ್ಯುತ್ತಮ ನಿರ್ದೇಶಕ - ನಾಮನಿರ್ದೇಶನ
  • ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ನಾಮನಿರ್ದೇಶನ
  • ಅತ್ಯುತ್ತಮ ನಟಿ - ದೀಪಿಕಾ ಪಡುಕೋಣೆ - ಗೆಲುವು
  • ವಿಮರ್ಶಕರ ಅತ್ಯುತ್ತಮ ಚಲನಚಿತ್ರ - ಗೆಲುವು
  • ವಿಮರ್ಶಕರ ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ಗೆಲುವು
  • ಅತ್ಯುತ್ತಮ ಚಿತ್ರಕಥೆ - ಜೂಹಿ ಚತುರ್ವೇದಿ - ಗೆಲುವು
  • ಅತ್ಯುತ್ತಮ ಸಂಗೀತ ನಿರ್ದೇಶಕ - ಅನುಪಮ್ ರಾಯ್ - ನಾಮನಿರ್ದೇಶನ
  • ಅತ್ಯುತ್ತಮ ಹಿನ್ನೆಲೆ ಸಂಗೀತ - ಅನುಪಮ್ ರಾಯ್ - ಗೆಲುವು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ೩ ಮೇ ೨೦೧೬

  • ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ಗೆಲುವು
  • ಅತ್ಯುತ್ತಮ ಮೂಲ ಚಿತ್ರಕಥೆ - ಜೂಹಿ ಚತುರ್ವೇದಿ - ಗೆಲುವು
  • ಅತ್ಯುತ್ತಮ ಸಂಭಾಷಣೆ - ಜೂಹಿ ಚತುರ್ವೇದಿ - ಗೆಲುವು

ಉಲ್ಲೇಖಗಳು

ಹೊರಗಿನ ಕೊಂಡಿಗಳು