ರುಕ್ಮಿಣಿ ದೇವಿ ದೇವಾಲಯ

ರುಕ್ಮಿಣಿ ದೇವಿ ದೇವಾಲಯ ದ್ವಾರಕಾದಲ್ಲಿರುವ ಒಂದು ದೇವಾಲಯವಾಗಿದ್ದು, ದ್ವಾರಕಾ ನಗರದಿಂದ ೨ ಕಿಲೊಮೀಟರ್ (೧.೨ ಮೈಲಿ) ದೂರವಿದೆ. ಇದು ರುಕ್ಮಿಣಿಗೆ (ಕೃಷ್ಣನ ಮುಖ್ಯ ರಾಣಿ) ಸಮರ್ಪಿತವಾಗಿದೆ. ಈ ದೇವಾಲಯವು ೨,೫೦೦ ವರ್ಷ ಹಳೆಯದೆಂದು ಹೇಳಲಾಗಿದೆ. ಆದರೆ ಇದರ ಪ್ರಸಕ್ತ ರೂಪದಲ್ಲಿ ಇದು ೧೨ನೇ ಶತಮಾನಕ್ಕೆ ಸೇರಿದ್ದೆಂದು ನಿರ್ಣಯಿಸಲಾಗಿದೆ.

ರುಕ್ಮಿಣಿ ದೇವಿ ದೇವಾಲಯ

ವಿವರ

ಇದು ಸಮೃದ್ಧವಾಗಿ ಕೆತ್ತಲ್ಪಟ್ಟ ದೇವಾಲಯವಾಗಿದ್ದು ಹೊರಭಾಗದಲ್ಲಿ ದೇವ ದೇವತೆಗಳ ಶಿಲ್ಪಗಳಿಂದ ಅಲಂಕೃತವಾಗಿದೆ. ಗರ್ಭಗುಡಿಯು ರುಕ್ಮಿಣಿಯ ಮುಖ್ಯ ವಿಗ್ರಹಕ್ಕೆ ಸ್ಥಳ ಒದಗಿಸಿದೆ. ಕೆತ್ತಲ್ಪಟ್ಟ ನರತರಗಳು (ಮನುಷ್ಯಾಕೃತಿಗಳು) ಮತ್ತು ಕೆತ್ತಲ್ಪಟ್ಟ ಗಜತರಗಳು (ಆನೆಗಳು) ಗೋಪುರದ ಆಧಾರಭಾಗದಲ್ಲಿನ ಫಲಕಗಳಲ್ಲಿ ಚಿತ್ರಿಸಲ್ಪಟ್ಟಿವೆ.

ಪುರಾಣ ಕಥೆ

ಕೃಷ್ಣ ಮತ್ತು ರುಕ್ಮಿಣಿಯರಿಗೆ ಪ್ರತ್ಯೇಕ ದೇವಾಲಯಗಳಿರುವ ಬಗ್ಗೆ ಒಂದು ಪುರಾಣ ಕಥೆಯಿದೆ. ಒಮ್ಮೆ ದೂರ್ವಾಸ ಋಷಿಯನ್ನು ಊಟಕ್ಕೆಂದು ತಮ್ಮ ಮನೆಗೆ ಕೃಷ್ಣ ಮತ್ತು ರುಕ್ಮಿಣಿಯರು ರಥದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ, ರುಕ್ಮಿಣಿಗೆ ಬಾಯಾರಿಕೆಯಾದಾಗ ಕೃಷ್ಣನು ತನ್ನ ಹೆಬ್ಬೆರಳಿನಿಂದ ನೆಲವನ್ನು ತಿವಿದಾಗ ಗಂಗಾಜಲವು ಬಂದು ಅವಳ ಬಾಯಾರಿಕೆ ತಣಿಯಿತು. ಆದರೆ ತನಗೆ ಕುಡಿಯಲು ನೀರು ಕೊಡುವ ಸೌಜನ್ಯ ರುಕ್ಮಿಣಿಗೆ ಬರಲಿಲ್ಲವೆಂದು ದೂರ್ವಾಸರಿಗೆ ಅಪಮಾನವಾಯಿತು. ಹಾಗಾಗಿ ಅವಳು ತನ್ನ ಗಂಡನಿಂದ ಬೇರೆಯಾಗಿ ಇರುವಳು ಎಂದು ಅವರು ಶಾಪ ಕೊಟ್ಟರು.[೧]

ಉಲ್ಲೇಖಗಳು