ಸಿಂಧಿಯಾ

ಸಿಂಧಿಯಾ ರಾಜವಂಶ (ಮಹಾರಾಷ್ಟ್ರದಲ್ಲಿ ಉಚ್ಚರಿಸಲಾಗುವ ಶಿಂಧೆ ಎಂಬ ಪದವು ಆಂಗ್ಲೀಕೃತಗೊಂಡು ಸಿಂಧಿಯಾ ಎಂದು ಕರೆಯಲ್ಪಟ್ಟಿದೆ.) ಇದು ಹಿಂದಿನ ಗ್ವಾಲಿಯರ್ ರಾಜ್ಯವನ್ನು ಆಳಿದ ಕುಂಬಿಮೂಲದ ಹಿಂದೂ ಮರಾಠ ರಾಜವಂಶವಾಗಿದೆ. ಇದು ವಾಯಿ ಕ್ಷೇತ್ರದ ಕುಂಬರಕೆರಾಬ್ ಎಂಬಲ್ಲಿ ಪಟೇಲ್ ಹುದ್ದೆಯನ್ನು ಹೊಂದಿತ್ತು. ಇದನ್ನು ರಾಣೋಜಿ ಸಿಂಧಿಯಾ ಸ್ಥಾಪಿಸಿದರು, ಅವರು ಪೇಶ್ವೆ ಬಾಜಿರಾವ್ I ರ ಖಾಸಗಿ ಸೇವಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. [೧] [೨] [೩] [೪] ರಾಣೋಜಿ ಮತ್ತು ಅವರ ವಂಶಸ್ಥರು ತಮ್ಮ ಪ್ರತಿಸ್ಪರ್ಧಿಗಳಾದ ಹೋಳ್ಕರ್‌ಗಳೊಂದಿಗೆ, ಸೇರಿಕೊಂಡು 18 ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಮರಾಠರು ಉಚ್ಛ್ರಾಯವಾಗುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ವಾಲಿಯರ್ ರಾಜ್ಯವು 19 ನೇ ಮತ್ತು 20 ನೇ ಶತಮಾನಗಳಲ್ಲಿ ಬ್ರಿಟಿಷ್ ರಾಜರ ಆಳ್ವಿಕೆಯಲ್ಲಿ ರಾಜಪ್ರಭುತ್ವದ ರಾಜ್ಯವಾಗಿತ್ತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಸಿಂಧಿಯಾ ಕುಟುಂಬದ ಹಲವಾರು ಸದಸ್ಯರು ಭಾರತೀಯ ರಾಜಕೀಯಕ್ಕೆ ಸೇರಿಕೊಂಡರು.

ತಳಹದಿ

ರಾಣೋಜಿ ಸಿಂಧಿಯಾ ಅವರು ಸಿಂಧಿಯಾ ರಾಜವಂಶದ ಸಂಸ್ಥಾಪಕರಾಗಿದ್ದಾರೆ. ಆ ಕಾಲದ ಕೆಲ ಅನುಕೂಲಕರ ಪರಿಸ್ಥಿತಿಗಳಿಂದಾಗಿ ಬಾಜಿರಾವ್ ಇಪ್ಪತ್ತರ ಹರೆಯದಲ್ಲೇ ಪೇಶ್ವೆಯಾಗಿ ನೇಮಕಗೊಂಡಿದ್ದರಿಂದ, ಬಾಜಿರಾವ್ ಆಸ್ಥಾನದಲ್ಲಿದ್ದ ರಾಣೋಜಿ ಬೇಗನೇ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು. ಇದು ಬಾಜಿರಾವ್ ಆಸ್ಥಾನದ ಹಿರಿಯ ಅಧಿಕಾರಿಗಳಾಗಿದ್ದ ಅನಂತ ರಾಂ ಸುಮಂತ, ಶ್ರೀಪತರಾವ್ ಪಂತ ಪ್ರತಿನಿಧಿ, ಖಂಡೇರಾವ್ ದಭಾಡೆ ಮತ್ತು ಕಾನ್ಹೋಜಿ ಭೋಸಲೆ ಮುಂತಾದವರಲ್ಲಿ ಅಸೂಯೆಗೆ ಕಾರಣವಾಗುತ್ತದೆ. ಇದರಿಂದಾಗಿ ಮಲ್ಹರ್ ರಾವ್ ಹೋಳ್ಕರ್, ಪವಾರ್ ಸಹೋದರರು, ಪಿಲಾಜಿ ಜಾಧವ್, ಫತೇಸಿಂಗ್ ಭೋಸಲೆ ಹಾಗೂ ರಾಣೋಜಿಯಂಥ ಪ್ರತಿಭಾನ್ವಿತ,ಹದಿಹರೆಯದ ಯುವಕರನ್ನು ಬಾಜಿರಾವ್ ತಮ್ಮ ಸೇನೆಯ ದಂಡಾಧಿಕಾರಿಗಳಾಗಿ ನೇಮಕ ಮಾಡುತ್ತಾರೆ. ಇವರಲ್ಲಿ ಯಾರೊಬ್ಬರೂ ಈ ಹಿಂದಿನ ಆಡಳಿತಗಾರರಾಗಿದ್ದ ದಖನಿ ಸುಲ್ತಾನರಿಂದ ವಂಶಪಾರಂಪರ್ಯವಾದ ದೇಶಮುಖಿ ಹಕ್ಕುಗಳನ್ನು ಪಡೆದಂಥ ಕುಟುಂಬಕ್ಕೆ ಸೇರಿದವರಾಗಿರಲಿಲ್ಲ. ಶಿಂಧೆಗಳು ಅಥವಾ ಸಿಂಧಿಯಾಗಳು ಬಹಮನಿ ಸುಲ್ತಾನರ ಆಳ್ವಿಕೆಯಡಿ ಶಿಲೆದಾರರಾಗಿ (ಅಶ್ವಾರೋಹಿಗಳು) ಸೇವೆ ಸಲ್ಲಿಸುತ್ತಿದ್ದು, ರಾಜ್ಯಾಡಳಿತದಲ್ಲಿ ಪ್ರಮುಖಪಾತ್ರ ವಹಿಸುತ್ತಿದ್ದರಲ್ಲದೆ ಕುಂಬರಕೆರ್ರಾಬ್ ಪ್ರದೇಶದ ಪಾಟೀಲಕಿ ಹಕ್ಕನ್ನು ಹೊಂದಿದ್ದರು.

ಮೂಲ ಮತ್ತು ಇತಿಹಾಸ

ವಂಶಾವಳಿ

ಬ್ರಿಟಿಷ್ ಕಾಲದ ದಾಖಲೆಗಳ ಪ್ರಕಾರ ಸಿಂಧಿಯಾಗಳ ಮೂಲದ ಬಗ್ಗೆ ಹಲವಾರು ಉಪಾಖ್ಯಾನಗಳಿವೆ, ವಿಶೇಷವಾಗಿ ಸರ್ ಜಾನ್ ಮಾಲ್ಕಮ್ ಅವರ ದಾಖಲೆಗಳಲ್ಲಿ ಇದರ ಚಿತ್ರಣವಿದೆ.

ಧನಗರ್ ಮೂಲದ ಹೋಳ್ಕರ್^ಗಳಂತೆ ಸಿಂಧಿಯಾ ಅವರೂ ಕೂಡ ಕುಂಬಿ ಕೃಷಿಕ ಜಾತಿಗೆ ಸೇರಿದವರಾಗಿದ್ದರು. ಧಾರ್ಮಿಕ ಅಂತಸ್ತಿಗೆ ಸಂಬಂಧಿಸಿದಂತೆ ಇವರನ್ನು ಶೂದ್ರರೆಂದು ಪರಿಗಣಿಸಲಾಗುತ್ತಿತ್ತು.ಸಿಂಧಿಯಾ ರಾಜವಂಶದ ಸಂಸ್ಥಾಪಕರಾದ ""ರಾಣೋಜಿ"" ಬಾಜಿರಾವ್ ಪೇಶ್ವೆಯ ಆಸ್ಥಾನದಲ್ಲಿದ್ದರು. ಒಮ್ಮೆ ಬಾಜಿರಾವ್ ತಮ್ಮ ಶಿಬಿರದಿಂದ ಹೊರಗೆ ಬಂದಾಗ ಅವರ ಸೇವಕ ರಾಣೋಜಿ ಪಾದರಕ್ಷೆಗಳನ್ನು ಧರಿಸಿಯೇ ನಿದ್ರಿಸುತ್ತಿದ್ದುದನ್ನು ಕಂಡು ರಾಣೋಜಿಯ ಕರ್ತವ್ಯನಿಷ್ಠೆಯನ್ನು ಮೆಚ್ಚಿ,ರಾಣೋಜಿಯನ್ನು ತಮ್ಮ ಅಂಗರಕ್ಷಕನೆಂದು ನೇಮಕ ಮಾಡಿದರು.

ಮರಾಠರು ಕೃಷಿಕ ಮೂಲದವರೆಂಬುದನ್ನು ಸ್ಟೀವರ್ಟ್ ಗೋರ್ಡನ್ ಕೂಡ ಒಪ್ಪಿದ್ದಾರೆ.

ಮರಾಠರ ಅವಧಿ

ಮಹಾರಾಷ್ಟ್ರ ರಾಜ್ಯದ,ಸತಾರಾ ಜಿಲ್ಲೆಗೆ ಸೇರಿದ ಕನ್ಹೇರ್^ಖೇಡ್ ಎಂಬ ಗ್ರಾಮದ ಪಾಟೀಲರಾದ ಜನಕೋಜಿರಾವ್ ಸಿಂಧಿಯಾ ಎಂಬವರ ಮಗನಾದ ರಾಣೋಜಿ ಸಿಂಧಿಯಾ ಅವರು ಸಿಂಧಿಯಾ ರಾಜವಂಶದ ಸಂಸ್ಥಾಪಕರಾಗಿದ್ದಾರೆ. ಬಾಜಿರಾವ್ ಪೇಶ್ವೆಆಳ್ವಿಕೆಯ ಕಾಲದಲ್ಲಿ ಮರಾಠಾ ಸಾಮ್ರಾಜ್ಯವು ಬಲಗೊಂಡಿತು. ರಾಣೋಜಿಯ ನೇತೃತ್ವದಲ್ಲಿ ೧೭೨೬ನೆಯ ಇಸವಿಯಲ್ಲಿ ಮಾಲ್ವಾ ಪ್ರದೇಶವನ್ನು ಗೆದ್ದುಕೊಳ್ಳಲಾಯಿತು. ೧೭೩೧ನೆಯ ಇಸವಿಯಲ್ಲಿ ರಾಣೋಜಿ ಉಜ್ಜಯನಿಯಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿದರು. ಜಯಾಜಿರಾವ್,ಜ್ಯೋತಿಬಾರಾವ್,ದತ್ತಾಜಿರಾವ್,ಜನಕೋಜಿರಾವ್, ಮಹಾಡ್ಜಿ ಶಿಂಧೆ ಮತ್ತು ದೌಲತ್ ರಾವ್ ಸಿಂಧಿಯಾ ರಾಣೋಜಿಯ ಉತ್ತರಾಧಿಕಾರಿಗಳಾಗಿದ್ದಾರೆ. ೧೮ನೆಯ ಶತಮಾನದ ಉತ್ತರಾರ್ಧದಲ್ಲಿ ಸಿಂಧಿಯಾಗಳು ಪ್ರಮುಖ ಪ್ರಾಂತೀಯ ಶಕ್ತಿಗಳಾಗಿ ಬೆಳೆದರು ಹಾಗೂ ಮೂರು ಬಾರಿ ನಡೆದ ಆಂಗ್ಲ-ಮರಾಠಾ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವಾರು ರಜಪೂತ ರಾಜ್ಯಗಳ ಮೇಲೆ ಅವರು ಹಿಡಿತ ಸಾಧಿಸಿದರಲ್ಲದೇ ೧೮೧೮ರಲ್ಲಿ ಉತ್ತರ ಭಾರತವನ್ನು ವಶಪಡಿಸಿಕೊಂಡರು. ಬ್ರಿಟಿಷರೊಂದಿಗೆ ಹೊಂದಾಣಿಕೆಯ ಒಪ್ಪಂದವೊಂದನ್ನು ಮಾಡಿಕೊಂಡ ನಂತರ ಅವರ ಕುಟುಂಬವು ಉಜ್ಜಯನಿಯಿಂದ ಗ್ವಾಲಿಯರಿಗೆ ಸ್ಥಳಾಂತರಗೊಂಡಿತು.

ಬ್ರಿಟಿಷರಡಿಯಲ್ಲಿ ಗ್ವಾಲಿಯರ್ ಆಡಳಿತಗಾರರು

೧೮೧೮ರಲ್ಲಿ ನಡೆದ ಆಂಗ್ಲ-ಮರಾಠರ ನಡುವಿನ ಮೂರನೆಯ ಯುದ್ಧದಲ್ಲಿ ಮರಾಠರ ಪರಾಭವದ ನಂತರ ದೌಲತ್ ರಾವ್ ಶಿಂಧೆ ಅಜಮೇರ್ ಪ್ರಾಂತವನ್ನು ಬ್ರಿಟಿಷರಿಗೊಪ್ಪಿಸಿ, ಬ್ರಿಟಿಷ್ ಆಕ್ರಮಿತ ಪ್ರದೇಶದಲ್ಲಿ ಸ್ಥಳೀಯ ಪ್ರಾಂತದ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾಯಿತು. ದೌಲತ್ ರಾವ್ ನಿಧನದ ನಂತರ ಮಹಾರಾಣಿ ಬೈಜಾ ಬಾಯಿ ಆ ಸಾಮ್ರಾಜ್ಯವನ್ನು ಬ್ರಿಟಿಷರಿಂದ ರಕ್ಷಿಸಿ ದತ್ತುಪುತ್ರ ಜನಕೋಜಿ ರಾವ್ ಪ್ರಬುದ್ಧನಾಗುವವರೆಗೂ ಆಡಳಿತ ನಡೆಸಿದರು. ಜನಕೋಜಿ ೧೮೪೩ರಲ್ಲಿ ನಿಧನರಾದ ನಂತರ ಅವರ ವಿಧವಾಪತ್ನಿ ತಾರಾಬಾಯಿ ರಾಜೇ ಸಿಂಧಿಯಾ ಯಶಸ್ವಿಯಾಗಿ ರಾಜ್ಯಭಾರ ಮಾಡಿ, ಹತ್ತಿರದ ಸಂಬಂಧಿಯಾದ ಜಯಾಜಿರಾವ್ ನನ್ನು ದತ್ತು ಪಡೆದರು.

ಸ್ವತಂತ್ರ ಭಾರತದಲ್ಲಿ ಗ್ವಾಲಿಯರ್ ಸಂಸ್ಥಾನದ ವಿಲೀನ

೧೯೪೭ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರಗೊಳ್ಳುವವರೆಗೂ ಸಿಂಧಿಯಾ ಕುಟುಂಬವು ಗ್ವಾಲಿಯರ್ ಸಂಸ್ಥಾನವನ್ನು ಆಳುತ್ತಿತ್ತು.ಗ್ವಾಲಿಯರ್ ಸಂಸ್ಥಾನದ ಮಹಾರಾಜರಾಗಿದ್ದ ಜೀವಾಜಿರಾವ್ ಸಿಂಧಿಯಾ ಅವರು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಾಗ ಇತರ ಸಂಸ್ಥಾನಗಳೊಂದಿಗೆ ಗ್ವಾಲಿಯರ್ ಸಂಸ್ಥಾನವೂ ಕೂಡ ಮಧ್ಯಭಾರತದ ನೂತನ ಭಾರತೀಯ ರಾಜ್ಯಕ್ಕೆ ಸೇರ್ಪಡೆಯಾಯಿತು. ಜೀವಾಜಿರಾವ್ ರಾಜ್ಯದ ರಾಜಪ್ರಮುಖರಾಗಿ ಅಥವಾ ರಾಜ್ಯಪಾಲರಾಗಿ ೧೯೪೮ರ ಮೇ ೨೮ರಿಂದ ೧೯೫೬ರ ಅಕ್ಟೋಬರ್ ೩೧ರ ವರೆಗೂ ಅಂದರೆ ಮಧ್ಯ ಭಾರತವು ಮಧ್ಯಪ್ರದೇಶದಲ್ಲಿ ವಿಲೀನಗೊಳ್ಳುವವರೆಗೂ ನೇಮಕಗೊಂಡರು. .

ಕುಟುಂಬ ಸದಸ್ಯರ ರಾಜಕೀಯ ಜೀವನ

ಮಹಾರಾಜ ಜೀವಾಜಿರಾವ್ ಅವರ ವಿಧವಾಪತ್ನಿ ವಿಜಯರಾಜೇ ಸಿಂಧಿಯಾ ಅವರು ೧೯೬೨ನೆಯ ಇಸವಿಯಲ್ಲಿ ಲೋಕಸಭೆಗೆ ಆಯ್ಕೆಯಾಗುವುದರೊಂದಿಗೆ ಕುಟುಂಬದ ಚುನಾವಣಾ ರಾಜಕೀಯ ಪ್ರವೇಶ ಪ್ರಾರಂಭವಾಯಿತು. ಇವರು ಮೊದಲು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು ನಂತರ ಭಾರತೀಯ ಜನತಾ ಪಕ್ಷದ ಪ್ರಭಾವಿ ಸದಸ್ಯರಾಗಿ ಬೆಳೆದರು. ಅವರ ಪುತ್ರ ಮಾಧವರಾವ್ ಸಿಂಧಿಯಾ ಅವರು ಜನಸಂಘ ಪಕ್ಷದಿಂದ ೧೯೭೧ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮುಂದೆ ೧೯೮೦ರಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ, ೨೦೦೧ರಲ್ಲಿ ಮರಣ ಹೊಂದುವವರೆಗೂ ರಾಜಕೀಯ ಸೇವೆಯಲ್ಲಿದ್ದರು. ಅವರ ಮಗ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ಸೇರಿ ಅವರ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ೨೦೦೪ರಲ್ಲಿ ಲೋಕಸಭೆಗೆ ಆಯ್ಕೆಯಾದರು. ೨೦೨೦ರ ಮಾರ್ಚ್ ಹನ್ನೊಂದರಂದು ಅವರು ಭಾರತೀಯ ಜನತಾ ಪಕ್ಷವನ್ನು ಸೇರಿದರು.

ವಿಜಯರಾಜೆ ಅವರ ಪುತ್ರಿಯರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ್ದಾರೆ. ವಸುಂಧರಾ ರಾಜೇ ಸಿಂಧಿಯಾ ಅವರು ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಂದ ಐದು ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ವಾಜಪೇಯಿ ನೇತೃತ್ವದ ಸರಕಾರದಲ್ಲಿ,೧೯೯೮ ರಿಂದ ಪ್ರಾರಂಭಿಸಿ ವಸುಂಧರಾ ರಾಜೇಯವರು ಹಲವಾರು ವಿಭಿನ್ನ ಸಚಿವ ಹುದ್ದೆಗಳನ್ನು ನಿಭಾಯಿಸಿದ್ದಾರೆ. ೨೦೦೩ರಲ್ಲಿ ಅವರು ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಮುನ್ನಡೆಯನ್ನು ತಂದುಕೊಟ್ಟರು. ಮತ್ತು ರಾಜ್ಯದ ಮುಖ್ಯಮಂತ್ರಿಗಳಾದರು. ಮುಂದೆ ೨೦೧೩ರಲ್ಲೂ ಕೂಡ ಅವರು ಮತ್ತೊಮ್ಮೆ ರಾಜಸ್ಥಾನದ ವಿಧಾನಸಭೆಯ ಚುನಾವಣೆಯಲ್ಲಿ ಒಟ್ಟು ೨೦೦ ಸ್ಥಾನಗಳಲ್ಲಿ ೧೬೦ ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟರು. ಅವರ ಪುತ್ರಿ ಯಶೋಧರಾ ರಾಜೇ ಸಿಂಧಿಯಾ ಮಧ್ಯಪ್ರದೇಶದ ಶಿವಪುರಿ ಕ್ಷೇತ್ರದಿಂದ ೧೯೯೮,೨೦೦೩ ಮತ್ತು ೨೦೧೩ನೆಯ ಇಸವಿಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ೨೦೦೪,೨೦೦೯ನೇ ಇಸವಿಗಳಲ್ಲಿ ಗ್ವಾಲಿಯರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದರು. ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದಾಗ ಅವರು ರಾಜ್ಯದ ಪ್ರವಾಸೋದ್ಯಮ,ಕ್ರೀಡೆ ಮತ್ತು ಯುವಖಾತೆಯ ಸಚಿವರಾದರು.

ಉಜ್ಜಯನಿ ಮತ್ತು ಗ್ವಾಲಿಯರ್ ಮಹಾರಾಜರು

೧೭೬೧ ರಲ್ಲಿ ಪಾಣಿಪತ್ ಕದನದ ನಂತರ ಉತ್ತರ ಭಾರತದಲ್ಲಿ ಮರಾಠರ ಶಕ್ತಿಯನ್ನು ಪುನರುತ್ಥಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾದಜಿ ಶಿಂಧೆ [೫]
  • ರಾಣೋಜಿ ರಾವ್ ಶಿಂಧೆ (೧೭೩೧-೧೯ ಜುಲಾಯಿ ೧೭೪೫). ೧೭ ಜುಲೈ ೧೭೪೫ ರಂದು ನಿಧನರಾದರು.
  • ಜಯಪ್ಪ ರಾವ್ ಶಿಂಧೆ (೧೭೪೫ - ೨೫ ಜುಲೈ ೧೨೫೫). ಜನನ ಕ್ರಿಶ ೧೭೨೦, ೨೫ ಜುಲೈ ೧೭೫೫ ರಂದು ನಿಧನರಾದರು.
  • ಜಾಂಕೋಜಿ ರಾವ್ ಸಿಂಧಿಯಾ I (೨೫ ಜುಲೈ ೧೭೫೫ - ೧೫ ಜನವರಿ ೧೭೬೧). ೧೭೪೫ ರಲ್ಲಿ ಜನಿಸಿದರು. ೧೭೬೧ ಜನವರಿ ೧೫ ರಂದು ನಿಧನರಾದರು.
  • ದತ್ತಾಜಿ ರಾವ್ ಸಿಂಧಿಯಾ (ರೀಜೆಂಟ್ ೧೭೫೫ - ೧೦ಜನವರಿ ೧೭೬೦). ೧೭೬೦ ಜನವರಿ ೧೦ ರಂದು ನಿಧನರಾದರು.
  • ಖಾಲಿ ೧೫ ಜನವರಿ ೧೭೬೧- ೨೫ನವೆಂಬರ್ ೧೭೬೩
  • ಕಾದರ್ಜಿ ರಾವ್ ಸಿಂಧಿಯಾ (೨೫ ನವೆಂಬರ್ ೧೭೬೩ - ೧೦ ಜುಲೈ ೧೭೬೪) ನಿಧನರಾದರು ? .
  • ಮನಾಜಿ ರಾವ್ ಸಿಂಧಿಯಾ (೧೦ ಜುಲೈ ೧೭೬೪ - ೧೮ ಜನವರಿ ೧೭೬೮) ನಿಧನರಾದರು ? .
  • ಮಹಾದಾಜಿ ಸಿಂಧಿಯಾ (೧೮ ಜನವರಿ ೧೭೬೮ - ೧೨ ಫೆಬ್ರವರಿ ೧೭೯೪). ಜನನ ೩ ಡಿಸೆಂಬರ್ ೧೭೩೦, ೧೨ ಫೆಬ್ರವರಿ ೧೭೯೪ ರಂದು ನಿಧನರಾದರು.
  • ದೌಲತ್ ರಾವ್ ಶಿಂಧೆ (೧೨ ಫೆಬ್ರವರಿ ೧೭೯೪ - ೨೧ ಮಾರ್ಚ್ ೧೮೨೭). ೧೭೭೯ ರಲ್ಲಿ ಜನಿಸಿದರು, ೨೧ ಮಾರ್ಚ್ ೧೮೨೭ ರಂದು ನಿಧನರಾದರು.
  • ಜಾಂಕೋಜಿ ರಾವ್ ಸಿಂಧಿಯಾ II (೧೮ ಜೂನ್ ೧೮೨೭ - ೭ ಫೆಬ್ರವರಿ ೧೮೪೩). ೧೮೦೫ ರಲ್ಲಿ ಜನಿಸಿದರು, ೭ ಫೆಬ್ರವರಿ ೧೮೪೩ ರಂದು ನಿಧನರಾದರು.
  • ಜಯಜಿ ರಾವ್ ಸಿಂಧಿಯಾ (೭ ಫೆಬ್ರವರಿ ೧೮೪೩ - ೨೦ಜೂನ್ ೧೮೮೬). ಜನನ ೧೯ ಜನವರಿ ೧೮೩೫, ಮರಣ ೨೦ ಜೂನ್ ೧೮೮೬
  • ಮಧೋ ರಾವ್ ಸಿಂಧಿಯಾ (೨೦ಜೂನ್ ೧೮೮೬ - ೫ ಜೂನ್ ೧೯೨೫). ೨೦ ಅಕ್ಟೋಬರ್ ೧೮೭೬ ರಲ್ಲಿ ಜನಿಸಿದರು, ೫ ಜೂನ್ ೧೯೨೫ ರಂದು ನಿಧನರಾದರು.
  • ಜೀವಾಜಿರಾವ್ ಸಿಂಧಿಯಾ (ಮಹಾರಾಜ ೫ ಜೂನ್ ೧೯೨೫ - ೧೫ ಆಗಸ್ಟ್ ೧೯೪೭, ರಾಜಪ್ರಮುಖ ೨೮ ಮೇ ೧೯೪೮ - ೩೧ ಅಕ್ಟೋಬರ್ ೧೯೫೬. ಕೊನೆಯ ಮಹಾರಾಜ, ನಂತರ ರಾಜಪ್ರಮುಖ) ಜನನ ೨೬ ಜೂನ್ ೧೯೧೬, ೧೬ ಜುಲೈ ೧೯೬೧ ರಂದು ನಿಧನರಾದರು.
  • ಮಾಧವರಾವ್ ಸಿಂಧಿಯಾ (೧೯೬೧-೧೯೭೧) ೧೯೭೧ ರಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸುವ ಮುಂಚಿನ ಅವಧಿಯ ಕೊನೆಯ ಮಹಾರಾಜ

ಆಕರಗಳು

  1. ಐನ್ಸಿಲ್ ಥಾಮಸ್ ಎಂಬ್ರೀ (೧೯೮೮) ಎನ್ ಸೈಕ್ಲೋಪಿಡಿಯಾ ಆಫ್ ಏಶಿಯನ್ ಹಿಸ್ಟರಿ ಸ್ಕ್ರಿಬ್ನರ್ ಪುಟ ೧೪, ಐಎಸ್^ಬಿಎನ್ ೯೭೮-೦-೬೮೪-೧೮೮೯೯-೭. "ರಾಣೋಜಿ ಸಿಂಧಿಯಾ (೧೭೫೦) ಗ್ವಾಲಿಯರ್ ರಾಜ್ಯದ ಸಂಸ್ಥಾಪಕರಾಗಿದ್ದು, ತಮ್ಮ ರಾಜಕೀಯ ವೃತ್ತಿಯನ್ನು ಪೇಶ್ವೆ ಅಥವಾ ಮರಾಠಾ ಪ್ರಧಾನಮಂತ್ರಿಯ ಆಸ್ಥಾನದಲ್ಲಿ ಪಾದರಕ್ಷೆ-ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದು, ಬಹಳ ಬೇಗನೇ ಉನ್ನತ ಸ್ಥಾನಕ್ಕೇರಿದರು.'
  2. ಕೆ ವಿ ಕೃಷ್ಣ ಅಯ್ಯರ್ (೧೯೯೯) ದಿ ಝಾಮೊರಿನ್ಸ್ ಆಫ್ ಕ್ಯಾಲಿಕಟ್:ಫ್ರಾಂ ದಿ ಅರ್ಲಿಯೆಸ್ಟ್ ಟೈಮ್ಸ್ ಡೌನ್ ಟು ಎಡಿ ೧೮೦೬ ಪ್ರಕಟಣಾ ವಿಭಾಗ,ಕ್ಯಾಲಿಕಟ್ ವಿಶ್ವವಿದ್ಯಾಲಯ,ಐಎಸ್^ಬಿಎನ್ ೯೭೮-೮೧-೭೭೪೮-೦೦೦-೯. " ಸಿಂಧಿಯಾ ಆಳ್ವಿಕೆಯ ಕಾಲದಲ್ಲಿ ಚಿನ್ನದ ಪಾದರಕ್ಷೆಗಳನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಹಿಡಿದುಕೊಂಡು ಹೋಗುವ ಕೈಂಕರ್ಯದ ಕಾರಣವೇ ಝಮೊರಿನ್ ಕಾಲದಲ್ಲಿ ಪಲ್ಲಿಮರಡಿಯನ್ನು ಹಿಡಿದುಕೊಂಡು ಹೋಗುವ ಕಾರಣವೂ ಆಗಿರಬಹುದು,-ತನ್ನ ಯಶಸ್ಸಿಗೆ ಮುನ್ನ ತಾನು ನಿರ್ವಹಿಸುತ್ತಿದ್ದ ಕಾರ್ಯಕ್ಕೆ ಗೌರವ ಸಲ್ಲಿಸುವ ಉದ್ದೇಶವಿರಬಹುದು."
  3. ಸತೀಶ ಚಂದ್ರ (೨೦೦೩) ಎಸ್ಸೇಸ್ ಆನ್ ಮಿಡೈವಲ್ ಇಂಡಿಯನ್ ಹಿಸ್ಟರಿ, ಆಕ್ಸ್^ಫರ್ಡ್ ಯುನಿವರ್ಸಿಟಿ ಪ್ರೆಸ್, ಪುಟ ೯೩, ಐಎಸ್^ಬಿಎನ್ ೯೭೮-೦-೧೯-೫೬೬೩೩೬ " ಸಿಂಧಿಯಾಗಳು ವಾಯಿ ಜಿಲ್ಲೆಯ ಕುಂಬರ್ ಕೆರ್ರಾಬ್ ಎಂಬಲ್ಲಿ ವಂಶಪಾರಂಪರ್ಯವಾದ ಪಟೇಲ ಹುದ್ದೆಯನ್ನು ಹೊಂದಿದ್ದ ಕುಂಬಿ ಕುಟುಂಬದವರಾಗಿದ್ದರು ಎಂಬುದು ಜನಜನಿತ ವಿಷಯವಾಗಿದೆ. ಹೋಳ್ಕರ್ ಕುಟುಂಬದ ಮೂಲವು ಇವರಿಗಿಂತಲೂ ಹೆಚ್ಚು ಸಾಮಾನ್ಯವಾದ ಹಿನ್ನೆಲೆ ಹೊಂದಿದೆ. ಅವರು ಕುರಿಗಾಹಿ (ಡುಂಗರ್) ಸಮುದಾಯಕ್ಕೆ ಸೇರಿದವರಾಗಿದ್ದು ಹಾಲ್ ಗ್ರಾಮದ ಜಮೀನುದಾರ ಹಕ್ಕುಗಳನ್ನು ಹೊಂದಿದ್ದರು."
  4. ರೋಮಿಲಾ ಥಾಪರ್ (೧೯೯೪) "ವಿಚಾರ ಸಂಕಿರಣ-ವಿಷಯಗಳು ೪೧೭-೪೨೪" ೫೯. " ಯೋಧರಾಗಿದ್ದ ಅಥವಾ ಆಡಳಿತಗಾರರ ಸೇವೆಯಲ್ಲಿದ್ದ ಹಲವಾರು ಜನರು ಮರಾಠಾಗಳಾದರು. ಮೊದಲ ಹೋಳ್ಕರ್ ಒಬ್ಬ ಕುರಿಗಾಹಿ ಹಾಗೂ ಕುಂಬಿಯಾಗಿದ್ದ ಮೊದಲ ಸಿಂಧಿಯಾ ಪೇಶ್ವೆಯ ಖಾಸಗಿ ಸೇವಕನಾಗಿದ್ದರು."
  5. ಗೋರ್ಡಾನ್,ಸ್ಟೀವರ್ಟ್ (೨೦೦೭) ದ ಮರಾಠಾಸ್ ೧೬೦೦-೧೮೧೮ ಕೆಂಬ್ರಿಜ್ [ಯು.ಎ]: ಕೆಂಬ್ರಿಜ್ ವಿಶ್ವವಿದ್ಯಾಲಯ ಪ್ರೆಸ್. ೧೧೭-೧೨೧. ಐಎಸ್^ಬಿಎನ್ ೯೭೮-೦೫೨೧೦೩೩೧೬೯
  6. ಸರದೇಸಾಯಿ ಗೋವಿಂದ ಸಖಾರಾಂ (೧೯೪೬) ನ್ಯೂ ಹಿಸ್ಟರಿ ಆಫ್ ಮರಾಠಾಸ್: ದಿ ಎಕ್ಸಪ್ಯಾನ್ಷನ್ ಆಫ್ ದ ಮರಾಠಾ ಪಾವರ್, ೧೭೦೭-೧೭೭೨ ಫಿನಿಕ್ಸ್ ಪಬ್ಲಿಕೇಶನ್ಸ್ ಪುಟ ೬೫,೬೯
  7. ರಿಚರ್ಡ್ ಎಂ ಈಟನ್ (೧೯ ಡಿಸೆಂಬರ್ ೨೦೦೫) ಎ ಸೊಶಿಯಲ್ ಹಿಸ್ಟರಿ ಆಫ್ ದ ಡೆಕ್ಕನ್, ೧೩೦೦-೧೭೬೧:ಏಟ್ ಇಂಡಿಯನ್ ಲೈವ್ಸ್,ಕೆಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಪುಟ ೧೮೮-ಐಎಸ್^ಬಿಎನ್ ೯೭೮-೦-೫೨೧-೨೫೪೪೮೪-೭. ೨೦೧೧ ೧೬ ಜುಲೈಯಲ್ಲಿ ಹಿಂಪಡೆಯಲಾಗಿದೆ.
  8. ರಮುಸಾಕ್ ಬಾರ್ಬರಾ ಎನ್ (೨೦೦೪). ದ ಇಂಡಿಯನ್ ಪ್ರಿನ್ಸಸ್ ಆಂಡ್ ದೇರ್ ಸ್ಟೇಟ್ಸ್. ದ ನ್ಯೂ ಕೆಂಬ್ರಿಜ್ ಹಿಸ್ಟರಿ ಆಫ್ ಇಂಡಿಯಾ.ಕೆಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಪುಟ. ೩೫-೩೬ ಐಎಸ್^ಬಿಎನ್ ೯೭೮೧೧೩೯೪೪೯೦೮೩
  9. ಸ್ಟೀವರ್ಟ್ ಗೋರ್ಡನ್ (೧೬ ಸೆಪ್ಟೆಂಬರ್ ೧೯೯೩) ದ ಮರಾಠಾಸ್ ೧೬೦೦-೧೮೧೮ ಕೆಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಪುಟ-೧೫ ಐಎಸ್^ಬಿಎನ್ ೯೭೮-೦-೫೨೧-೨೬೮೮೩-೭ " ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳನ್ನು ಕುರಿತು ದೊರಕಿರುವ ವಿಪುಲ ಸಾಹಿತ್ಯವನ್ನು ಗಮನಿಸಿದಲ್ಲಿ ಒಂದು ಪ್ರವರ್ಗವಾಗಿ ಮರಾಠಾ ಎಂಬುದು ಹಲವಾರು ಜಾತಿಗಳಿಗೆ ಸೇರಿದ ಕುಟುಂಬಗಳ ಸಮುಚ್ಚಯವಾಗಿದೆ.-ಕುಂಬಿ,ಲೋಹಾರ,ಸುತಾರ,ಭಂಡಾರಿ, ಠಾಕರ್ ಮತ್ತು ಧನಗಾರರು(ಕುರಿಗಾಹಿಗಳು)-ಈ ಸಮೂಹವು ಹದಿನೇಳನೇ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತಲ್ಲದೇ ಜಾತಿಗಳ ರೂಪದಲ್ಲಿ ಇಂದೂ ಕೂಡ ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದೆ. "ಕುಂಬಿ"ಯನ್ನು "ಮರಾಠಾ"ದಿಂದ ಪ್ರತ್ಯೇಕಿಸಿದ ಅಂಶ ಯಾವುದು? ಅವರಿಗೆ ಹೆಮ್ಮೆಯ ವಿಷಯವಾಗಿದ್ದ,ಅವರ ಯುದ್ಧಕಲೆ,ಮತ್ತು ಅವಅರು ತಮ್ಮ ಸೇನಾಸೇವೆಯ ಕಾರಣದಿಂದ ಪಡೆಯುತ್ತಿದ್ದ ಹಕ್ಕುಗಳು (ವತನುಗಳು ಮತ್ತು ಇನಾಮುಗಳು). ಅವರ ಈ ಹಕ್ಕುಗಳು ಅವರನ್ನು ಇತರ ಸಾಮಾನ್ಯ ಸೇವಾವರ್ಗಗಳಾದ ಕೃಷಿಕರು, ಕಮ್ಮಾರರು,ದರ್ಜಿಗಳು ಮುಂತಾದವರಿಂದ ವಿಶೇಷವಾಗಿ ಸ್ಥಳೀಯ ಹಂತದಲ್ಲಿ ಪ್ರತ್ಯೇಕಿಸುತ್ತಿದ್ದವು."
  10. ಎನ್ ಜಿ ರಾಠೋಡ್ (೧೯೯೪) ದ ಗ್ರೇಟೆಸ್ಟ್ ಮರಾಠಾ ಮಹಾಡ್ಜಿ ಸಿಂಧಿಯಾ ಸರೂಪ್ ಅಂಡ್ ಸನ್ನಸ್ ಪುಟ ೧ ಮೂಲ ಕೃತಿಯಿಂದ ೨೦೦೭ ಫೆಬ್ರವರಿ ೧೧ರಂದು ಪಡೆಯಲಾಗಿದ್ದು, ೨೦೦೬ ಡಿಸೆಂಬರ್ ೪ ರಂದು ಹಿಂಪಡೆಯಲಾಗಿದೆ.
  11. ವಿಜಯರಾಜೇ ಸಿಂಧಿಯಾ ಮೂಲಕೃತಿಯಿಂದ ೨೦೦೭ ಫೆಬ್ರವರಿ ೧೧ ರಂದು ಪಡೆಯಲಾಗಿದ್ದು, ೨೦೦೬ ಡಿಸೆಂಬರ್ ೪ರಂದು ಹಿಂಪಡೆಯಲಾಗಿದೆ.
  12. ಲೈಫ್ ಆಂಡ್ ಕರಿಯರ್-ವಸುಂಧರಾ ರಾಜೆ
  13. ದುಷ್ಯಂತ್ ಸಿಂಗ್ ವಿನ್ಸ್ ಎನ್^ಡಿ ಟಿವಿ
  14. ಎನ್ ಜಿ ರಾಠೋಡ್ (೧೯೯೪) ದ ಗ್ರೇಟ್ ಮರಾಠಾ ಮಹಾಡ್ಜಿ ಸಿಂಧಿಯಾ ಸರೂಪ್ ಆಂಡ್ ಸನ್ಸ್ ಪುಟ ೮ ಐಎಸ್^ಬಿಎನ್ ೯೭೮-೮೧-೮೫೩೧-೫೨-೯

 

ಮತ್ತಷ್ಟು ಓದುವಿಕೆ

  • Yule, Sir Henry; Burnell, Arthur Coke (1903), William Crooke (ed.), Hobson-Jobson: a Glossary of Colloquial Anglo-Indian Words and Phrases, and of Kindred Terms, Etymological, Historical, Geographical and Discursive, London: J. Murray, OCLC 4718658
  • Hope, John (1863). The House of Scindea — A Sketch by John Hope. Longman, Green, Longman, Roberts & Green, London.
  • Neelesh Ishwarchandra Karkare (2017). Tawaareekh-E-ShindeShahi. ISBN 978-93-5267-241-7.

ಉಲ್ಲೇಖ