ಅನಿಲಮಾಪಕ

ಅನಿಲಮಾಪಕವು ಅನಿಲಗಳ ಗಾತ್ರವನ್ನು ಅಳೆಯಲು ಉಪಯೋಗಿಸುವ ಸಾಧನ (ಗ್ಯಾಸ್ ಮೀಟರ್).[೧][೨] ನಿತ್ಯಬಳಕೆಯಲ್ಲಿ (ಅಡಿಗೆ, ಕೊಠಡಿ ಬೆಚ್ಚಗಿಡುವುದು ಇತ್ಯಾದಿ) ಅನಿಲದ ಉಪಯೋಗ ಅಧಿಕವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಪ್ರತಿಮನೆಯಲ್ಲೂ ಇದರ ಉಪಯೋಗವಿದೆ. ಗಾತ್ರವನ್ನು ಅಳೆಯಲು ಬೇರೆ ಬೇರೆ ತತ್ತ್ವಗಳ ಆಧಾರದ ಮೇಲೆ ರಚಿತವಾಗಿರುವ ಮಾಪಕಗಳನ್ನು ಸಾಮಾನ್ಯವಾಗಿ ಈ ರೀತಿ ವಿಂಗಡಿಸಬಹುದು. 1 ಸ್ಥಾನಾಂತರ ಮಾಪಕ (ಡಿಸ್‍ಪ್ಲೇಸ್‍ಮೆಂಟ್ ಮೀಟರ್), 2 ತಿರುಗುಮಾಪಕ (ರೋಟರಿ ಮೀಟರ್), 3 ರಂಧ್ರಮಾಪಕ (ಆರಿಫ಼ಿಸ್ ಮೀಟರ್ ) ಮತ್ತು 4 ಉಷ್ಣಧಾರಣಮಾಪಕ (ಹೀಟ್ ಕೆಪ್ಯಾಸಿಟಿ ಮೀಟರ್).

ಅನಿಲಮಾಪಕ

ಸ್ಥಾನಾಂತರಮಾಪಕ

ಮನೆಗಳಲ್ಲಿ ಬಳಸುವ ಅನಿಲದ ಗಾತ್ರವನ್ನು ತಿಳಿಯಲು ಸ್ಥಾನಾಂತರಮಾಪಕ ಉಪಯೋಗದಲ್ಲಿದೆ. ಇದನ್ನು ಶುಷ್ಕಮಾಪಕವೆಂದೂ ಕರೆಯುವರು. ಇದರಲ್ಲಿ ಸಂಯೋಗವಸ್ತು ಅಥವಾ ಚರ್ಮದಿಂದ ಮಾಡಿದ ಜೋಡಿ ತಿದಿಯಿದೆ. ಇದರ ಎರಡು ಭಾಗಗಳ ಕ್ರಮಾನುಗತ ಹಿಗ್ಗು ಮತ್ತು ಕುಗ್ಗುವಿಕೆಯಿಂದ ಅನಿಲದ ಗಾತ್ರವನ್ನು ಅಳೆಯಬಹುದು. ಕಬ್ಬಿಣ, ತವರ ಅಥವಾ ಅಲ್ಯೂಮಿನಿಯಂ ಹೊದಿಕೆಯಿರುವ ಈ ಮಾಪಕದಲ್ಲಿ ನಿರ್ದಿಷ್ಟ ಗಾತ್ರವುಳ್ಳ ಎರಡು ಕಾರ್ಯವಿಭಾಗಗಳಿದ್ದು ಇವುಗಳಲ್ಲಿ ತಿದಿಯ ಜೋಡಣೆ ಇದೆ. ತಿದಿಯ ಮೇಲಿರುವ ಒಂದು ಸಮತಲ ವಿಭಾಗದಲ್ಲಿ ಕವಾಟ ಮತ್ತಿತರ ಸಲಕರಣೆಗಳಿವೆ. ಒಳದ್ವಾರದಿಂದ ಬಂದ ಅನಿಲ ತಿದಿಯನ್ನು ತುಂಬಿಕೊಂಡು ಹೊರದ್ವಾರದ ಮೂಲಕ ಹೊರಹೋದಾಗ, ಅದಕ್ಕೆ ಅಳವಡಿಸಿರುವ ಹಲ್ಲುಚಕ್ರಜೋಡಣೆಯ ಮತ್ತು ಚಲಿಸುವ ಮಾಪಕದ ದರ್ಶಿನಿಯಿಂದ ಹೊರಬಂದ ಅನಿಲದ ಗಾತ್ರವನ್ನು ಅಳೆಯಬಹುದು.

ಅನಿಲಮಾಪಕದ ಕಾರ್ಯವಿಧಾನ

ಮಾಪಕದ ಮೇಲ್ಭಾಗದಲ್ಲಿ ಅನೇಕ ಸೂಚೀಫಲಕಗಳಿದ್ದು ಅವುಗಳ ಸಂಖ್ಯೆ ಶುಷ್ಕ ಮಾಪಕದ ಅಳತೆಯ ಸಾಮರ್ಥ್ಯವನ್ನವಲಂಬಿಸುವುದು. A ಮತ್ತು B ಸೂಚೀಫಲಕಗಳನ್ನು ಪರೀಕ್ಷೆಗಾಗಿ ಉಪಯೋಗಿಸುವರು. ಅನಿಲದ ಕೊಳವೆಯಲ್ಲಿ ಬಿರುಕೇನಾದರೂ ಇದ್ದು ಅನಿಲ ಹೊರ ಹೋಗುತ್ತಿರುವುದೇ ಎಂಬುದನ್ನು A ಫಲಕವನ್ನುಪಯೋಗಿಸಿ ಪತ್ತೆ ಹಚ್ಚುವರು. B ಫಲಕವನ್ನುಪಯೋಗಿಸಿ ಮಾಪಕ ಸರಿಯಾಗಿರುವುದನ್ನು ಪರೀಕ್ಷಿಸುವರು. ಉಪಯೋಗಿಸಿದ ಅನಿಲದ ಒಟ್ಟು ಗಾತ್ರವನ್ನು ಕೆಳಗಿರುವ ಸೂಚೀಫಲಕಗಳು ತೋರಿಸುವುವು. ಬಲಗಡೆಯ ಫಲಕದ ದರ್ಶಿನಿ ಪ್ರದಕ್ಷಿಣವಾಗಿ ತಿರುಗಿದರೆ ಅದರ ಪಕ್ಕದಲ್ಲಿರುವುದು ಅಪ್ರದಕ್ಷಿಣವಾಗಿ ತಿರುಗುವುದು. ಹೀಗೆಯೇ ಇತರ ಫಲಕದ ದರ್ಶಿನಿಗಳು. ಬಳಸಿದ ಅನಿಲದ ಗಾತ್ರವನ್ನು ಎಡಗಡೆಯಿಂದ ಬಲಗಡೆ ಸೂಚೀಫಲಕಗಳಲ್ಲಿರುವ ದರ್ಶಿನಿಗಳು ತೋರಿಸುವ ಮಾಪನಗಳಿಂದ (ರೀಡಿಂಗ್ಸ್) ತಿಳಿಯಬಹುದು. ಅನಿಲದ ಗಾತ್ರವನ್ನು ದಶಲಕ್ಷ, ಲಕ್ಷ, ದಶಸಾವಿರ, ಸಾವಿರ ಹೀಗೆ ವಿವಿಧ ಘನಅಡಿಗಳಲ್ಲಿ ಅಳತೆಮಾಡಬಹುದು.

ತಿರುಗುಮಾಪಕ

ಅನಿಲ ಹೆಚ್ಚಿನ ವೇಗದಲ್ಲಿ ಸರಬರಾಜಾಗುವಾಗ ಅದರ ಗಾತ್ರವನ್ನು ಅಳೆಯಲು ತಿರುಗುಮಾಪಕಗಳನ್ನು ಉಪಯೋಗಿಸುತ್ತಾರೆ. ಇದರ ಹೊದಿಕೆ ಭಾಗಶಃ ಉರುಳೆಯಾಕಾರದಲ್ಲಿದ್ದು ಮಧ್ಯದಲ್ಲಿ ಎರಡು ಅಥವಾ ಮೂರು ತಿರುಗುವ ಚಿಮ್ಮು ಸಾಧನಗಳು (ಇಂಪೆಲರ್ಸ್) ಇರುತ್ತವೆ. ಪ್ರತಿ ಚಿಮ್ಮುಸಾಧನವೂ ಪಕ್ಕದ ಸಾಧನ ತಿರುಗುವ ದಿಕ್ಕಿಗೆ ವಿರುದ್ಧವಾಗಿ ತಿರುಗುವುದು. ಮಾಪಕದೊಳಗೆ ಬರುವ ಅನಿಲ ಮಧ್ಯದಲ್ಲಿ ಸಿಕ್ಕಿ ಹೊರಬರುವಾಗ ಈ ಚಿಮ್ಮು ಸಾಧನಗಳನ್ನು ಚಲಿಸುವಂತೆ ಮಾಡುತ್ತದೆ. ಮಧ್ಯದಲ್ಲಿ ಸಿಕ್ಕಿಕೊಳ್ಳುವ ಅನಿಲದ ಗಾತ್ರ ನಿಯತವಾಗಿದ್ದು ಇದನ್ನು ಹಲ್ಲುಚಕ್ರಜೋಡಣೆ ಸಹಾಯದಿಂದ ಸೂಚೀಫಲಕದ ದರ್ಶಿನಿ ಸೂಚಿಸುತ್ತದೆ. ಕೆಲವು ತಿರುಗುಮಾಪಕಗಳನ್ನುಪಯೋಗಿಸಿ ಚಿಕ್ಕ ಪಟ್ಟಣವೊಂದಕ್ಕೆ ಸರಬರಾಜು ಮಾಡುವ ಒಟ್ಟು ಅನಿಲಪ್ರಮಾಣವನ್ನು ಅಳತೆ ಮಾಡಬಹುದು.

ರಂಧ್ರ ಮಾಪಕ

ಅನಿಲದ ಗಾತ್ರ ಬಹಳ ಜಾಸ್ತಿಯಿದ್ದರೆ ಅದನ್ನು ಅಳತೆ ಮಾಡಲು ರಂಧ್ರ ಮಾಪಕಗಳನ್ನು ಉಪಯೋಗಿಸುವರು. ಇದರಲ್ಲಿ ಅನಿಲದ ಕೊಳವೆಯೊಳಗಡೆ ಮಧ್ಯದಲ್ಲಿ ರಂಧ್ರವಿರುವ ಒಂದು ಉಕ್ಕಿನ ತಟ್ಟೆಯನ್ನು ಜೋಡಿಸಿದೆ. ಈ ತಡೆಯಿಂದ ರಂಧ್ರದ ಮೂಲಕ ಅನಿಲ ಹೊರಚಿಮ್ಮಿ ಅದು ಹೊರಸೂಸುವ ಕಡೆ ಆಂಶಿಕ ನಿರ್ವಾತ (ಪಾರ್ಷಿಯಲ್ ವ್ಯಾಕ್ಯೂಮ್) ಉಂಟಾಗುತ್ತದೆ. ಇದರಿಂದ ತಟ್ಟೆಯ ಇಕ್ಕೆಡೆಗಳಲ್ಲಿ ಅನಿಲದ ಒತ್ತಡ ವ್ಯತ್ಯಾಸವಾಗುವುದು. ಎರಡು ಭಾಗಗಳನ್ನು ಒಂದು ಒತ್ತಡಮಾಪಕಕ್ಕೆ ಸೇರಿಸಿ ಆಗುವ ಒತ್ತಡವ್ಯತ್ಯಾಸ ಕಂಡುಹಿಡಿಯಬಹುದು. ಒತ್ತಡವ್ಯತ್ಯಾಸ ಅನಿಲದ ಪ್ರವಾಹವನ್ನು ಅಂದರೆ, ಚಲಿಸಿದ ಅನಿಲದ ಗಾತ್ರವನ್ನು ಅವಲಂಬಿಸುವುದು. ರಂಧ್ರಮಾಪಕಗಳು ರಚನೆಯಲ್ಲಿ ಸರಳವಾಗಿಯೂ ದೃಢವಾಗಿಯೂ ಅಳತೆಯಲ್ಲಿ ನಿಖರವಾಗಿಯೂ ಇರುವುವು. ಇವುಗಳಲ್ಲಿ ಕೆಲವು ಪ್ರತಿಕೂಲಗಳೂ ಉಂಟು. 1 ಹೊರಬರುವ ಅನಿಲದ ಒತ್ತಡ ಬಹುಪಾಲು ಕಡಿಮೆಯಾಗುವುದು; 2 ಹೊರಬರುವ ಅನಿಲದ ಗಾತ್ರಕ್ಕೂ ಅದರ ಒತ್ತಡ ವ್ಯತ್ಯಾಸಕ್ಕೂ ಸಂಬಂಧ ನಿರೂಪಿಸುವ ಗಣಿತಸೂತ್ರಗಳು ಬಹಳ ಜಟಿಲ. ಮೊದಲನೆಯ ಪ್ರತಿಕೂಲವನ್ನು ಪ್ರಕೃತಿಯೇ ವಿವರಿಸಿದೆ. ಹೇಗೆಂದರೆ ಪ್ರಕೃತಿಯಲ್ಲಿ ಸಿಗುವ ಅನಿಲದ ಒತ್ತಡ ಬಳಕೆದಾರರಿಗೆ ಬೇಕಾಗಿರುವ ಅನಿಲದ ಒತ್ತಡಕ್ಕಿಂತ ಬಹುಪಾಲು ಹೆಚ್ಚಾಗಿರುತ್ತದೆ. ಗಣಿತ ಸೂತ್ರಗಳನ್ನು ಬಲು ಜಾಗರೂಕತೆಯಿಂದ ವಿಶ್ಲೇಷಿಸಿ ಬೇರೆ ಬೇರೆ ಒತ್ತಡವ್ಯತ್ಯಾಸಗಳಿಗೆ ಸರಿದೂಗುವ ಗಾತ್ರಗಳನ್ನು ಪಟ್ಟಿ ಮಾಡಿರುವುದರಿಂದ ಈ ಮಾಪಕದ ಮಾಪನಗಳಿಂದ ಅನಿಲದ ಗಾತ್ರ ತಿಳಿಯುವುದು ಸುಲಭ.

ಉಷ್ಣ ಧಾರಣಮಾಪಕ

ಯಾವುದಾದರೂ ಅನಿಲದಲ್ಲಿ ಮೂಲಮಾನಗಾತ್ರದ ಗ್ರಾಹ್ಯೋಷ್ಣ ತಿಳಿದಿದ್ದರೆ ಹೊರಬರುವ ಅನಿಲದ ಒಟ್ಟು ಉಷ್ಣಸಾಮರ್ಥ್ಯದ ಅಳತೆಯಿಂದ ಗಾತ್ರ ಅಳತೆಮಾಡಬಹುದು. ಈ ತತ್ತ್ವವನ್ನು ಅನುಸರಿಸಿ ರಚಿಸಿರುವ ಅನಿಲಮಾಪಕಗಳಿಗೆ ಉಷ್ಣ ಧಾರಣಮಾಪಕಗಳೆಂದು ಹೆಸರು. ಅನಿಲದ ಕೊಳವೆಯೊಳಗೆ ಸ್ವಲ್ಪದೂರದ ಅಂತರದಲ್ಲಿ ಎರಡು ವಿದ್ಯದುಷ್ಣತಾಮಾಪಕಗಳಿದ್ದು ಇವೆರಡರ ನಡುವೆ ಶಾಖೋತ್ಪತ್ತಿ ಮಾಡು, ವಿದ್ಯುದ್ವಾಹಕದ ಸುರುಳಿಯೊಂದನ್ನು ಇಟ್ಟಿರುತ್ತಾರೆ. ಅನಿಲ ವಿದ್ಯುತ್‍ಸುರುಳಿಯನ್ನು ಹಾದು ಹೋದರೆ ಹೊರಬರುವ ಅನಿಲದ ಉಷ್ಣತೆ ಒಳಹೊಕ್ಕ ಅನಿಲದ ಉಷ್ಣತೆಗಿಂತ ಹೆಚ್ಚಿರುವುದು. ಈ ಉಷ್ಣತೆಯ ಅಂತರವನ್ನು ಉಷ್ಣತಾಮಾಪಿಗಳು ತಿಳಿಸುತ್ತವೆ. ಉಷ್ಣತೆಯ ಅಂತರ ಕಡಿಮೆಯಾಗುವುದು ಮತ್ತು ವೇಗ ಕಡಿಮೆಯಾದರೆ ಅಂತರ ಹೆಚ್ಚುವುದು. ವೇಗವೆಷ್ಟಿದ್ದರೂ ಉಷ್ಣತೆಯ ಅಂತರ ಒಂದೇ ಇರುವಂತೆ ಇತರ ವಿದ್ಯುತ್ ಸಲಕರಣೆಗಳಿಂದ ವಿದ್ಯುತ್ ಸುರುಳಿಯಲ್ಲಿ ಉಷ್ಣತಾಮಾಪಿಗಳು ವಿದ್ಯುತ್‍ಪ್ರವಾಹವನ್ನು ನಿಯಂತ್ರಿಸುವುವು. ಹೀಗಾಗಿ ಸುರುಳಿಯಲ್ಲಿ ಹರಿಯುವ ವಿದ್ಯುತ್ತಿನ ವ್ಯತ್ಯಾಸ ವೇಗವ್ಯತ್ಯಾಸಕ್ಕೆ ಅನುಗುಣವಾಗಿರುತ್ತದೆ. ಆದ್ದರಿಂದ ಸುರುಳಿಗೆ ವಿದ್ಯುತ್ ಸರಬರಾಜನ್ನು ಅಳತೆಮಾಡುವ ವಿದ್ಯುತ್ ವ್ಯಾಟ್ ಮಾಪಕದ ಮಾಪನಗಳು ಹೊರಬರುತ್ತಿರುವ ಅನಿಲದ ಗಾತ್ರವನ್ನು ತಿಳಿಸುವುವು. ಹೆಚ್ಚು ಕಲ್ಮಷವಿರುವ ಅನಿಲಗಳ ಗಾತ್ರದ ಅಳತೆಗೆ ಇಂಥ ಮಾಪಕವನ್ನು ಉಪಯೋಗಿಸುವುದಿಲ್ಲ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ