ಗಾಂಡ


ಗಾಂಡ : ಪೂರ್ವ ಆಫ್ರಿಕದ ಬುಗಾಂಡ ಪ್ರಾಂತ್ಯದಲ್ಲಿರುವ, ಬಂಟೂ ಭಾಷೆಯನ್ನಾಡುವ ಜನ. ಬಗಾಂಡ, ವಗಾಂಡ ಎಂಬ ಪರ್ಯಾಯ ಹೆಸರುಗಳೂ ಉಂಟು.

ಬಗಾಂಡ
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಉಗಾಂಡ
ಭಾಷೆಗಳು
Luganda
ಧರ್ಮ
Christianity, African Traditional Religion, Islam
ಸಂಬಂಧಿತ ಜನಾಂಗೀಯ ಗುಂಪುಗಳು
Other Bantu peoples

ಲಕ್ಷಣಗಳು

ನೆಗ್ರಾಯಿಡ್ ವರ್ಗಕ್ಕೆ ಸೇರಿದ ಈ ಜನ ಮಧ್ಯಮ ನಿಲುವಿನವರು; ಗಾಢವಾದ ಚಾಕೊಲೇಟ್ ವರ್ಣದವರು. ಮೊದಲಿಗೆ ಇವರ ಸಂಖ್ಯೆ 30 ಲಕ್ಷಕ್ಕೂ ಮಿಕ್ಕಿತ್ತಾದರೂ 1ನೆಯ ಮಹಾಯುದ್ಧ ಕಾಲದಲ್ಲಿ ಕಾಣಿಸಿಕೊಂಡ ನಿದ್ರಾರೋಗ ಬಹುಮಂದಿಯನ್ನು ಬಲಿ ತೆಗೆದುಕೊಂಡಿದ್ದರಿಂದ ಇಂದು ಇವರ ಸಂಖ್ಯೆ ಸು. 10 ಲಕ್ಷ. ಆದರೆ ಇವರು ನೆಲೆಸಿರುವ ನಾಡಿನ ಸಮೃದ್ಧಿ ಆಫ್ರಿಕದ ಇತರ ಭಾಗಗಳ ಜನರನ್ನು ಆಕರ್ಷಿಸಿರುವುದರಿಂದ ಆ ನೆಲೆಸಿಗರ ಸಂಖ್ಯೆ ಈ ಮೂಲನಿವಾಸಿಗಳ ಸಂಖ್ಯೆಯೊಡನೆ ಸ್ಪರ್ಧಿಸುತ್ತದೆ. ಆಫ್ರಿಕದ ಇತರ ಭಾಗಗಳಲ್ಲಿರುವ ಜನತೆಗೆ ಹೋಲಿಸಿದರೆ ಇಲ್ಲಿಯ ಜನರಲ್ಲಿ ಸಾಕ್ಷರತೆಯ ಪ್ರಮಾಣ ತುಂಬ ಹೆಚ್ಚು. ಇತರ ಬುಡಕಟ್ಟುಗಳಿಗಿಂತಲೂ ಇವರು ಹೆಚ್ಚು ಬುದ್ಧಿವಂತರೂ ರಾಜಕೀಯವಾಗಿ ಮುಂದುವರಿದವರೂ ಆದವರು. ಇವರದು ಪಿತೃಪ್ರಧಾನ ವ್ಯವಸ್ಥೆ. ವಂಶದ ಹಿರಿಯ ಉತ್ತರಾಧಿಕಾರವೇ ಮೊದಲಾದ ವಿಚಾರಗಳನ್ನು ನಿಯಂತ್ರಿಸುತ್ತಾರೆ. ಇವರಲ್ಲಿ ಕೆಲವರು ರಾಜಕೀಯ ಅಧಿಕಾರಗಳನ್ನು ನಿರ್ವಹಿಸುತ್ತಾರೆ. ಆದರೆ ಇವರೆಲ್ಲ ಕಬಕನ (ರಾಜ) ಅಧೀನಕ್ಕೆ ಒಳಪಟ್ಟಂತವರು. ವಾಸ್ತವವಾಗಿ, ಬೇರೆ ಬೇರೆ ವಂಶದವರು ಅರಮನೆಯ ಸೇವೆಗೆಂದು ನಿಯೋಜಿಸಿದ ವ್ಯಕ್ತಿಗಳಲ್ಲಿ ಕೆಲವರನ್ನು ಆಯ್ದುಕೊಂಡಿದ್ದರು, ಕಬಕ ಅವರಿಗೆ ರಾಜಕೀಯ ಕರ್ತವ್ಯಗಳನ್ನು ವಹಿಸಿಕೊಟ್ಟಿರುತ್ತಾನೆ. ಇದೇ ರೀತಿ ನಿಯೋಜಿಸಲ್ಪಟ್ಟ ಹುಡುಗಿಯರು ಕಬಕನ ಪತ್ನಿಯರೂ ಆಗಬಹುದು. ಇವರಲ್ಲಿ ಬಹುಪತ್ನಿತ್ವ ರೂಢಿಯಲ್ಲುಂಟು. ಸಾಂಪ್ರದಾಯಿಕ ಗಾಂಡ ಧರ್ಮದಲ್ಲಿ ಪುರ್ವಜರು, ಹಿಂದಿನ ರಾಜರು, ಪ್ರಾಕೃತಿಕ ಶಕ್ತಿಗಳು ಮತ್ತು ದೇವದೇವತೆಗಳನ್ನು ಉಪಾಸಿಸುವ ಪದ್ಧತಿ ಬಳಕೆಯಲ್ಲಿತ್ತು. ಇಂದು ಇವರಲ್ಲಿ ಬಹುಮಂದಿ ಕ್ರೈಸ್ತಧರ್ಮೀಯರಾಗಿದ್ದರೂ ಮಾಟಮಂತ್ರಗಳ ಪ್ರಾಬಲ್ಯ ಇದ್ದೇ ಇದೆ. ಸುನ್ನಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಆಡಳಿತ ವ್ಯವಸ್ಥೆ

ಬುಗಾಂಡಕ್ಕೆ ಭೇಟಿಕೊಟ್ಟ ವಿದೇಶೀಯರೆಲ್ಲ ಇಲ್ಲಿಯ ಅತ್ಯುತ್ಕೃಷ್ಟ ರೂಪದ ಪ್ರಭುತ್ವವ್ಯವಸ್ಥೆಯನ್ನು ಕಂಡು ಮೆಚ್ಚಿದ್ದಾರೆ. ಕಬಕ ಇಲ್ಲಿಯ ಪರಮಪ್ರಭು. ಈತನಿಗೆ ಎಲ್ಲ ಸಾಂಪ್ರದಾಯಿಕ ಮತ್ತು ರಾಜಕೀಯ ಅಧಿಕಾರಗಳಿರುತ್ತವೆ. ಹಿಂದೆ ಈತ ಮೂವರು ಮಂತ್ರಿಗಳ ಸಹಾಯದಿಂದ ರಾಜ್ಯವಾಳುತ್ತಿದ್ದ. ಕಾಲಾನುಕ್ರಮದಲ್ಲಿ ಮಂತ್ರಿಗಳ ಸಂಖ್ಯೆ ಆರಕ್ಕೆ ಏರಿತು. ಇವರಲ್ಲಿ ಒಬ್ಬ ಪ್ರಧಾನ ಮಂತ್ರಿ, ಚುನಾಯಿತ ಹಾಗೂ ನಾಮಕರಣಗೊಂಡ ಪ್ರತಿನಿಧಿಗಳನ್ನೊಳಗೊಂಡ ಲುಕಿಕೋ ಅಥವಾ ಸಂಸತ್ತು ಉಂಟು. ಪ್ರಾಂತ್ಯವನ್ನು ಜಿಲ್ಲೆಗಳಾಗಿ ವಿಭಾಗಿಸಿ ಅವುಗಳ ಆಡಳಿತಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ. ರೈತರ ಮೇಲ್ವಿಚಾರಣೆಗಾಗಿ ಸಾಚಾ ಮತ್ತು ಗೊಂಬೊಲೋಲಾ ಎಂಬ ಅಧಿಕಾರಗಳುಂಟು. ಪೌರ ಅಥವಾ ಸೈನಿಕ ಕಾರ್ಯಗಳನ್ನು ನಿರ್ವಹಿಸುವ ಎಲ್ಲ ಅಧಿಕಾರಗಳಿಗೂ ಜಹಗೀರುಗಳನ್ನು ಕೊಡಲಾಗುತ್ತಿತ್ತು. ಇವರು ಆಡಳಿತಗಾರರಾಗಿ, ನ್ಯಾಯಾಧೀಶರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಆದರೆ ಸೈನಿಕ ಕಾರ್ಯಾಚರಣೆಯೇ ಇವರ ಮುಖ್ಯ ಕರ್ತವ್ಯವಾಗಿತ್ತು. ತಂತಮ್ಮ ವಿಭಾಗಗಳಲ್ಲಿ ಸಜ್ಜುಗೊಂಡಿದ್ದ ಪಡೆಗಳ ನೆರವನ್ನು ಪಡೆದು ಇವರು ಯುದ್ಧಕಾರ್ಯದಲ್ಲಿ ಭಾಗವಹಿಸುತ್ತಿದ್ದರು.

19ನೆಯ ಶತಮಾನದ ಕೊನೆಯ ಚರಣದಿಂದ ಈ ಪ್ರಾಂತ್ಯದ ಮೇಲೆ ಬ್ರಿಟಿಷರ ಪ್ರಭಾವ ಬೀಳತೊಡಗಿತು. ತನ್ನ ಪ್ರಾಂತ್ಯದ ಜನರಿಗೆ ಶಿಕ್ಷಣ ಕೊಡುವುದಕ್ಕಾಗಿ ಧರ್ಮ ಪ್ರಚಾರಕರನ್ನು ಕಳುಹಿಸಿಕೊಡಬೇಕೆಂದು ಕಬಕ ಮುತೇಸ ಸ್ಟ್ಯಾನ್ಲೆಯನ್ನು ಕೇಳಿಕೊಂಡಿದ್ದ ನೆಂದು ತಿಳಿದುಬಂದಿದೆ. 1884 ಮತ್ತು 1900ರಲ್ಲಿ ಸಹಿ ಹಾಕಲಾದ ಒಪ್ಪಂದಗಳ ಮೇರೆಗೆ ಇದು ಬ್ರಿಟಿಷ್ ಆರಕ್ಷಿತ ಪ್ರದೇಶವಾಯಿತು. ಈ ಒಪ್ಪಂದ ಕಬಕ ಮತ್ತು ಲುಕಿಕೋಗಳ ಕರ್ತವ್ಯಾಧಿಕಾರಗಳನ್ನೂ ಬ್ರಿಟಿಷರೊಂದಿಗಿನ ಸಂಬಂಧ ಗಳನ್ನೂ ನಿಯಂತ್ರಣ ಕ್ಕೊಳಪಡಿಸಿತು. 1953ರಲ್ಲಿ 2ನೆಯ ಕಬಕ ಮುತೇಸ ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸಲಿಲ್ಲವೆಂಬ ಆರೋಪದ ಮೇಲೆ ಆತನನ್ನು ಗಡೀಪಾರು ಮಾಡಲಾಗಿತ್ತು. ಮೊದಲಿಗೆ ಎಂದರೆ 1954ರಲ್ಲಿ, ಲುಕಿಕೋನಲ್ಲಿ ಒಟ್ಟು 89 ಮಂದಿ ಪ್ರತಿನಿಧಿಗಳಿದ್ದರು. ಅವರಲ್ಲಿ 31 ಮಂದಿ ಮಾತ್ರ ಚುನಾಯಿತ ಪ್ರತಿನಿಧಿಗಳು. 1953ರ ಹೊತ್ತಿಗೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆಯನ್ನು 60ಕ್ಕೂ ಮಂತ್ರಿಗಳ ಸಂಖ್ಯೆಯನ್ನು 6ಕ್ಕೂ ಏರಿಸಲಾಯಿತು. 1953ರ ಅನಂತರದ ರಾಜಕೀಯ ಬೆಳವಣಿಗೆಗಳ ಫಲವಾಗಿ 1962ರಲ್ಲಿ ಈ ಪ್ರಾಂತ್ಯ ಸ್ವತಂತ್ರವಾಯಿತು.

ಜನಜೀವನ

ಗಾಂಡ ಜನ ಬುದ್ಧಿವಂತರು, ಸಾಹಸಿಗಳು, ಅವರು ಅಡಕವಾದ ಗ್ರಾಮಗಳಲ್ಲಿ ವಾಸಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ಕುಟುಂಬವೂ ಬಾಳೆಯ ತೋಟದಲ್ಲಿಯೇ ವಾಸಿಸುತ್ತದೆ. ಬಾಳೆಯ ಹಣ್ಣು ಇವರ ಮುಖ್ಯ ಆಹಾರ. ಅದನ್ನು ಆವಿಯಲ್ಲಿ ಬೇಯಿಸಿ ತಿನ್ನುತ್ತಾರೆ. ಹತ್ತಿ ಮತ್ತು ಕಾಫಿಯಂಥ ವಾಣಿಜ್ಯ ಬೆಳೆಗಳನ್ನು ಪ್ರಾರಂಭಿಸಿದ ಮೇಲೆ ಇಲ್ಲಿಯ ರೈತರ ಜೀವನಮಟ್ಟ ಬಹಳಮಟ್ಟಿಗೆ ಸುಧಾರಿಸಿದೆ. ಇವರು ಕುರಿ, ಮೇಕೆ, ಕೋಳಿ ಮತ್ತು ದನಗಳನ್ನು ಸಾಕುವುದೂ ಉಂಟು. ದೆಬ್ಬೆ ಹುಲ್ಲುಗಳಿಂದ ಮನೆಗಳನ್ನು ಕಟ್ಟುವುದೂ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸುವುದೂ ಸಾಂಪ್ರದಾಯಿಕ ಉದ್ಯೋಗಗಳು. ಈಚೆಗೆ ಇತರ ಉದ್ಯೋಗಗಳೂ ಬೆಳೆದಿವೆ. ಮರದ ತೊಗಟೆಯಿಂದ ಬಟ್ಟೆಗಳ ತಯಾರಿಕೆ, ಬುಟ್ಟಿ ಹೆಣೆಯುವುದು, ಕುಂಬಾರಿಕೆ, ಮೀನುಗಾರಿಕೆ ಮೊದಲಾದ ಉದ್ಯೋಗಗಳೂ ಉಂಟು.

ಉಲ್ಲೇಖಗಳು