ಜೋಸೆಫ್ ಫೋರ್ಯೇ

ಗಣಿತಜ್ಞ

ಜೀನ್ ಬ್ಯಾಪ್ಟಿಸ್ಟ್ ಜೋಸೆಫ್ ಫೋರ್ಯೇ (1768-1830) ಒಬ್ಬ ಫ್ರೆಂಚ್ ಗಣಿತವಿದ. ಜನನ 21-3-1768, ಮರಣ 16-5-1830. ಹಸಿರುಮನೆ ಪರಿಣಾಮದ ಪರಿಶೋಧನೆಗಾಗಿ ಕೂಡ ಫೋರ್ಯೇನನ್ನು ಸಾಮಾನ್ಯವಾಗಿ ಹೊಣೆಮಾಡಲಾಗುತ್ತದೆ.[೧]

ಸು. ೧೮೨೦ರಲ್ಲಿ ಜೋಸೆಫ್ ಫೋರ್ಯೇ

ಜನನ, ವಿದ್ಯಾಭ್ಯಾಸ

ಬಡಕುಟುಂಬದಲ್ಲಿ ಜನಿಸಿದ ಫೋರ್ಯೇ ಎಂಟನೆಯ ವಯಸ್ಸಿನಲ್ಲಿ ಹೆತ್ತವರ ವಿಯೋಗದಿಂದ ತಬ್ಬಲಿಯಾದ. ಧರ್ಮಗುರುಗಳ ಕೃಪೆಯಿಂದ ಶಾಲೆ ಸೇರುವುದು ಸಾಧ್ಯವಾಯಿತು. ವಿದ್ಯಾಭ್ಯಾಸದಲ್ಲಿ ಈತ ಅಶಿಸ್ತು, ದುರಹಂಕಾರ ಪ್ರದರ್ಶಿಸುತ್ತಿದ್ದನಾದರೂ ಗಣಿತದ ಬಗ್ಗೆ ಅಸಾಧಾರಣ ಆಸಕ್ತಿ ಉಳ್ಳವನಾಗಿದ್ದ. ಮಿಲಿಟರಿ ಸೇರಬೇಕೆನ್ನುವ ಈತನ ಆಶೆ ಈಡೇರದೆ ಹೋಯಿತು.

ನಂತರದ ಜೀವನ, ಸಾಧನೆಗಳು

ಫೋರ್ಯೇ ತನ್ನ ಪ್ರಥಮ ಸಂಶೋಧನಾತ್ಮಕ ಪ್ರಬಂಧವನ್ನು ಫ್ರಾನ್ಸ್ ವಿಜ್ಞಾನ ಅಕಾಡೆಮಿಯಲ್ಲಿ ಮಂಡಿಸಿದ (1789). ಇದು ಬೀಜಗಣಿತ ಸಮೀಕರಣಗಳ ಮತ್ತು ಅವನ್ನು ಬಿಡಿಸುವುದರ ಬಗೆಗಿನ ಸಿದ್ಧಾಂತವಾಗಿತ್ತು. ಫೋರ್ಯೇಯನ್ನು ನೆಪೋಲಿಯನ್ ಫ್ರಾನ್ಸಿನ ಇಕೊಲೆ ನಾರ್ಮಲೆಯಲ್ಲಿ ಅಧ್ಯಾಪಕನಾಗಿ ನೇಮಿಸಿದ (1895). ಇದರಿಂದ ಈತನ ಸಂಶೋಧನೆಗಳಿಗೆ ವಿಶೇಷ ಚಾಲನೆ ದೊರಕಿದಂತಾಯಿತು. ಈತ ತನ್ನ ಸಂಶೋಧನೆಯಲ್ಲಿ ಸೈದ್ಧಾಂತಿಕ ಹಿನ್ನೆಲೆ ಹಾಗೂ ಪ್ರಾಯೋಗಿಕ ಅನ್ವಯಗಳು ನಿಕಟವರ್ತಿಗಳಾಗಿರುವಂತೆ ಜಾಗ್ರತೆ ವಹಿಸಿದ್ದ.

1798ರಲ್ಲಿ ನೆಪೋಲಿಯನ್ ಈಜಿಪ್ಟಿಗೆ ದಂಡಯಾತ್ರೆ ಹೋದಾಗ ತನ್ನೊಂದಿಗೆ ಬುದ್ಧಿಜೀವಿಗಳ ಒಂದು ತಂಡವನ್ನೇ ಒಯ್ದಿದ್ದ. ಅದರಲ್ಲಿ ಫೋರ್ಯೇಯೂ ಇದ್ದ. ಈಜಿಪ್ತಿನ ವಿಜ್ಞಾನ ಸಂಸ್ಥೆಯಲ್ಲಿ ಇವರೆಲ್ಲರೂ ಅಲ್ಲಿಯ ಜನರನ್ನು ಸುಂಸಂಸ್ಕೃತರಾಗಿ ಮಾಡುವ ಕಾರ್ಯ ಕೈಗೊಂಡರು. ಇದಲ್ಲದೆ ಫೋರ್ಯೇ ಮೂರು ವರ್ಷಕಾಲ ಈಜಿಪ್ತಿನ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿದ.

ಫ್ರಾನ್ಸಿಗೆ ತೆರಳಿದ ಬಳಿಕ 1804ರಲ್ಲಿ ಸಂಖ್ಯಾ ಸಮೀಕರಣಗಳ ಒಂದು ಬೃಹತ್ ಹೊತ್ತಗೆಯನ್ನೇ ಹೊರತಂದ. 1822ರಲ್ಲಿ ಈತ ಪ್ರಕಟಿಸಿದ ಗಣಿತ ಭೌತವಿಜ್ಞಾನದ ಸಿದ್ಧಾಂತದ ನೆರವಿನಿಂದ ಉಷ್ಣವಹನವನ್ನು ವಿವರಿಸಬಹುದು.[೨] ಯಾವುದೇ ಒಂದು ಅನವಧಿಯುತ (ಏಪೀರಿಯಾಡಿಕ್) ದೃಶ್ಯಮಾನವನ್ನು ಅವಧಿಯುತ ದೃಶ್ಯಮಾನಗಳಾಗಿ ಪರಿವರ್ತಿಸಬಲ್ಲಂಥ ಸಾಮರ್ಥ್ಯ ಈ ಸಿದ್ಧಾಂತಕ್ಕೆ ಇತ್ತು. ಆದ್ದರಿಂದಲೇ ಇಂದು ಫೋರ್ಯೇಯ ಸಿದ್ಧಾಂತವನ್ನು ಭೌತವಿಜ್ಞಾನ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ಶಬ್ದಪ್ರಕರಣ ಮುಂತಾಗಿ ಕಂಪನಗಳನ್ನು ಒಳಗೊಂಡಿರುವ ಯಾವುದೇ ಸಮಸ್ಯೆಗೂ ಅನ್ವಯಿಸಬಹುದಾಗಿದೆ. ಇದನ್ನು ಬಳಸಿ ಪ್ರತಿಯೊಂದು ಜಟಿಲ ಶಬ್ದ ತರಂಗವನ್ನೂ ವಿಶ್ಲೇಷಿಸಿ ಅದರ ಮೂಲ (ಫಂಡಮೆಂಟಲ್) ಹಾಗೂ ಸಂಗತ (ಹಾರ್ಮಾನಿಕ್ಸ್) ಪಡೆಯಬಹುದಾಗಿದೆ.

ನೆಪೋಲಿಯನ್ನನ ಅವಸಾನದೊಂದಿಗೇ ಫೋರ್ಯೇಯದೂ ಕೂಡಿತ್ತೆಂದರೆ ಅತಿಶಯೋಕ್ತಿ ಆಗದು. ಆರ್ಥಿಕವಾಗಿ ಜೀವನ ನಿರ್ವಹಿಸುವುದೇ ದುಸ್ತರವಾಗಿದ್ದ ವೇಳೆ ಮಿತ್ರರ ನೆರವಿನಿಂದಾಗಿ ಫೋರ್ಯೇ ಸಂಖ್ಯಾಶಾಸ್ತ್ರ ಸಂಸ್ಥೆಯ ನಿರ್ದೇಶಕ ಹುದ್ದೆ ಪಡೆದ. ಆದರೆ ಬದುಕಿನ ಕೊನೆಯ ಎಂಟು ವರ್ಷಗಳಲ್ಲಿ ಯಾವುದೇ ಆವಿಷ್ಕಾರವನ್ನೂ ನಡೆಸಲಾಗಲಿಲ್ಲ.

ಉಲ್ಲೇಖಗಳು

ಹೊರಗಿನ ಕೊಂಡಿಗಳು