ಅಭಿನಂದನ್ ವರ್ಧಮಾನ್

ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್(೨೧ ಜೂನ್ ೧೯೮೩ರಂದು ಜನನ)(ತಮಿಳಿನಲ್ಲಿ ವರ್ತಮಾನ್ ಎಂದೂ ಉಚ್ಚರಿಸುತ್ತಾರೆ), ವೀರಚಕ್ರ ಪುರಸ್ಕೃತ ಭಾರತೀಯ ವಾಯುಸೇನೆಯ ಫೈಟರ್ ಜೆಟ್ ಮಿಗ್-೨೧ ಬೈಸನ್ ವಿಮಾನದ ಚಾಲಕರಾಗಿದ್ದಾರೆ. ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ[೧] ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.[೨]

ವಿಂಗ್ ಕಮಾಂಡರ್

ಅಭಿನಂದನ್ ವರ್ಧಮಾನ್

ವೀರ ಚಕ್ರ
ಜನನ (1983-06-21) ೨೧ ಜೂನ್ ೧೯೮೩ (ವಯಸ್ಸು ೪೦)
ಕಾಂಚೀಪುರಂ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ವಾಯುಸೇನೆ
ಸೇವಾವಧಿ೨೦೦೪ರಿಂದ
ಶ್ರೇಣಿ(ದರ್ಜೆ) ವಿಂಗ್ ಕಮಾಂಡರ್
ಪ್ರಶಸ್ತಿ(ಗಳು) ವೀರ ಚಕ್ರ
ಕಲಿತ ವಿದ್ಯಾಲಯಸೈನಿಕ ಕಲ್ಯಾಣ ಶಾಲೆ ಚೆನ್ನೈ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ
ಸಂಗಾತಿತನ್ವಿ ಮಾರ್ವಾ
ಮಿಗ್-೨೧ ಬೈಸನ್

ಚೆನ್ನೈನ ತಾಂಬರಂ ವಾಯುನೆಲೆಯಲ್ಲಿ ತರಬೇತಿ ಪಡೆದಿದ್ದ ಅವರು ಕಳೆದ 15 ವರ್ಷಗಳಿಂದ ಯುದ್ಧ ವಿಮಾನಗಳ ಚಾಲನೆ ಮಾಡುತ್ತಿದ್ದಾರೆ[೩]. ಖಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಅಭಿನಂದನ್‌, ಮಿಗ್-೨೧ ಬೈಸನ್‌ ಸ್ವಾಡ್ರನ್‌ಗೆ ನಿಯೋಜಿತರಾಗುವ ಮುನ್ನ ಸುಕೋಯ್‌ -30 ಯುದ್ಧ ವಿಮಾನದ ಪೈಲಟ್‌ ಆಗಿದ್ದರು. ಅಭಿನಂದನ್ ಅವರ ತಂದೆ, 1999ರ ಕಾರ್ಗಿಲ್‌ ಸಂಘರ್ಷದ ವೇಳೆ ಮಹತ್ವದ ಪಾತ್ರ ವಹಿಸಿದ್ದ ಸಿಂಹಕುಟ್ಟಿ ವರ್ಧಮಾನ್ ಅವರೂ ಸಹ ಯುದ್ಧವಿಮಾನದ ಪೈಲಟ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು[೪].

ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ, ಇನ್ನೊಂದು ಪಾಕ್ ಫೈಟರ್ ಜೆಟ್ ದಾಳಿಗೊಳಗಾದ ವರ್ಧಮಾನ್ ಅವರ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಯಿತು ಮತ್ತು ಪಾಕ್ ಸೈನಿಕರಿಂದ ಬಂಧಿಸಲ್ಪಟ್ಟರು. ಭಾರತದ ಒತ್ತಡ, ಪ್ರತಿದಾಳಿಯ ಭಯ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಸೆರೆ ಹಿಡಿದಿದ್ದ ವರ್ಧಮಾನ್ ಅವರನ್ನು ಮಾರ್ಚ್ ೧ ೨೦೧೯ರಂದು ಭಾರತಕ್ಕೆ ಹಸ್ತಾಂತರಿಸಿತು.

ಜನನ ಮತ್ತು ಕುಟುಂಬ

ಅಭಿನಂದನ್ ಅವರು ಜೂನ್ 21, 1983ರಂದು ತಮಿಳು ಜೈನ ಕುಟುಂಬದಲ್ಲಿ ಜನಿಸಿದರು[೫][೬]. ಅವರ ಕುಟುಂಬದ ಹಿರಿಯರು ಕಾಂಚೀಪುರಂನಿಂದ 19 ಕಿ.ಮೀ (12 ಮೈಲಿ) ದೂರದಲ್ಲಿರುವ ತಿರುಪನಮೂರ್ ಎಂಬ ಹಳ್ಳಿಯಿಂದ ಬಂದವರು[೭]. ತಂದೆ ಸಿಂಹಕುಟ್ಟಿ ವರ್ಧಮಾನ್ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಮತ್ತು ಶಿಲ್ಲಾಂಗ್‌ನಲ್ಲಿರುವ ಪೂರ್ವ ವಾಯು ಕಮಾಂಡ್‌ನಲ್ಲಿ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಅವರ ತಾಯಿ ವೈದ್ಯರಾಗಿದ್ದಾರೆ. ಅಭಿನಂದನ್‌ರವರ ಪತ್ನಿ ತಾನ್ವಿ ಕೂಡ ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿ ಕಾರ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ[೮].

ವಿದ್ಯಾಭ್ಯಾಸ

ಅಭಿನಂದನ್ ಅವರನ್ನು ಚೆನ್ನೈನ ಸೈನಿಕರ ಕಲ್ಯಾಣ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು[೯]. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದ ಅಭಿನಂದನ್, 19 ಜೂನ್ 2004 ರಂದು ಫ್ಲೈಯಿಂಗ್ ಆಫೀಸರ್ ಆಗಿ ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ತಂಡದಲ್ಲಿ ನಿಯೋಜಿಸಲ್ಪಟ್ಟರು[೧೦]. ಪಂಜಾಬಿನ ಬತಿಂಡಾ ಮತ್ತು ಹಲ್ವಾರಾದಲ್ಲಿನ ಭಾರತೀಯ ವಾಯುಪಡೆಯ ಕೇಂದ್ರಗಳಲ್ಲಿ ತರಬೇತಿ ಪಡೆದ ಅಭಿನಂದನ್, ಜೂನ್ 19, 2006 ರಂದು ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದರು[೧೧]. ಮತ್ತು ಜುಲೈ 8, 2010 ರಂದು ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದರು. ಮಿಗ್ -21 ಬೈಸನ್ ಸ್ಕ್ವಾಡ್ರನ್‌ಗೆ ಸೇರಿಕೊಳ್ಳುವ ಮೊದಲು ಅಭಿನಂದನ್ ಸುಖೋಯ್- ೩೦ ಎಂಕೆಐ ಫೈಟರ್ ಪೈಲಟ್ ಸೇವೆ ಸಲ್ಲಿಸಿ, 19 ಜೂನ್ 2017 ರಂದು ವಿಂಗ್ ಕಮಾಂಡರ್ ಆಗಿ ಬಡ್ತಿ ಪಡೆದರು[೧೨].

ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ನಂತರ

ಫೆಬ್ರವರಿ ೧೪, ೨೦೧೯ರ ಮಧ್ಯಾಹ್ನ ಸುಮಾರು ೩.೧೫ರ ಸುಮಾರಿಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಅವಾಂತಿಪೋರಾ ಬಳಿ, ಲೆಥ್ಪೊರದ ಹತ್ತಿರದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿರಿಸಿಕೊಂಡು ಅವರನ್ನು ಸಾಗಿಸುತ್ತಿದ್ದ ವಾಹನಕ್ಕೆ, ಸ್ಫೋಟಕಗಳನ್ನು ತುಂಬಿದ ಕಾರಿನ ಮೂಲಕ ಭಯೋತ್ಪಾದಕರು ದಾಳಿ ನಡೆಸಿದರು[೧೩]. ಈ ದಾಳಿಯಲ್ಲಿ, ಆರ್‌ಡಿಎಕ್ಸ್, ಮತ್ತು ಅಮೋನಿಯಮ್ ನೈಟ್ರೇಟ್ ಸೇರಿದಂತೆ ೩೦೦ ಕೆಜಿಯಷ್ಟು ಸ್ಫೋಟಕಗಳನ್ನು ಬಳಸಲಾಗಿತ್ತು[೧೪]. ಈ ದಾಳಿಯಿಂದಾಗಿ, ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಗೆ ಸೇರಿದ ೪೬ ಮಂದಿ ಸೈನಿಕರು ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿತ್ತು[೧೫].

ಸರ್ಜಿಕಲ್ ಸ್ಟ್ರೈಕ್ (ಮಿಂಚಿನ ನಿಖರ ದಾಳಿ)

ಸೈನಿಕರ ಮೇಲೆ ನಡೆದ ಅಮಾನುಷವಾದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಯೋತ್ಪಾದಕರ ಅಡಗುದಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್(ಮಿಂಚಿನ ನಿಖರ ದಾಳಿ) ನಡೆಸಲು ಭಾರತೀಯ ಸರ್ಕಾರ ಮತ್ತು ಸೇನೆಯು ಜಂಟಿಯಾಗಿ ತೀರ್ಮಾನಿಸಿದವು. ಫೆಬ್ರುವರಿ ೨೬ರಂದು, ಭಾರತೀಯ ವಾಯುಪಡೆಯ ೧೨ ಮಿರಾಜ್-೨೦೦೦ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಾರತ ಪಾಕ್ ಗಡಿನಿಯಂತ್ರಣ ರೇಖೆಯನ್ನು ದಾಟಿದವು ಮತ್ತು ಪಾಕಿಸ್ತಾನದ ಖೈಬರ್ ಪಖ್ತುನ್‍ಕ್ವಾ ಪ್ರಾಂತ್ಯದ ಬಾಲಕೋಟ್‌ನಲ್ಲಿನ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದವು[೧೬]. ಭಾರತೀಯ ವಾಯುಪಡೆಯು ನಡೆಸಿದ ಈ ದಾಳಿಯಿಂದಾಗಿ, ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದ ಸುಮಾರು ೩೦೦ಕ್ಕೂ ಹೆಚ್ಚು ಭಯೋತ್ಪಾದಕರು ಸಾವಿಗೀಡಾದರು.

ಪಾಕ್ ದಾಳಿ ವಿಫಲ ಯತ್ನ

ತನ್ನ ಗಡಿಯೊಳಗೆ ನುಗ್ಗಿಬಂದು, ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಪಡೆಗೆ ಪ್ರತ್ಯುತ್ತರದ ನೀಡುವ ರೂಪದಲ್ಲಿ, ಫೆಬ್ರುವರಿ ೨೭ರಂದು ಮುಂಜಾನೆ ೧೦.೨೦ರ ಸುಮಾರಿಗೆ ಪಾಕಿಸ್ತಾನದ ವಾಯುದಳದ ಸೈನಿಕರು ೩ ಯುದ್ಧವಿಮಾನಗಳ(ಅದರಲ್ಲಿ ಒಂದು ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನ) ಮೂಲಕ ನೌಶೇರಾ ಮತ್ತು ಜಮ್ಮು ಕಾಶ್ಮೀರದ ಮೂಲಕ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದರು[೧೭]. ನಾದಿಯಾನ್, ಲಾಮ್ ಝಂಗರ್ ಮತ್ತು ಖೇರಿ (ಕಾಶ್ಮೀರದ ರಜೌರಿ ಜಿಲ್ಲೆ) ಮತ್ತು ಭಿಂಬರ್ ಗಲ್ಲಿ, ಹಮೀರ್‌ಪುರ್(ಪೂಂಚ್ ಜಿಲ್ಲೆ)ನಲ್ಲಿ ಭಾರತೀಯ ಸೈನಿಕ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸುವ ವಿಫಲ ಯತ್ನ ನಡೆಸಿದರು[೧೮][೧೯]. ಕೂಡಲೇ ಎಚ್ಚೆತ್ತ ಭಾರತೀಯ ವಾಯುದಳದ ಸೈನಿಕರು ತಮ್ಮ ೬ ವಿಮಾನಗಳ ಮೂಲಕ ಪಾಕ್ ವಿಮಾನಗಳನ್ನು ಅಟ್ಟಿಸಿಕೊಂಡು ಹೋದರು[೨೦].

ಸೆರೆಯಾದುದು

ಪಾಕ್ ವಿಮಾನಗಳನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ, ಭಾರತೀಯ ವಾಯುದಳದ ಪೈಲೆಟ್ಟುಗಳಲ್ಲಿ ಒಬ್ಬರಾದ ಅಭಿನಂದನ್, ಭಾರತ ಪಾಕ್ ಗಡಿಯನ್ನು ದಾಟಿ ಪಾಕ್ ವಾಯುಪ್ರದೇಶದೊಳಗೆ ಪ್ರವೇಶಿಸಿದರು[೨೧]. ಮತ್ತು ತಾನು ಚಲಾಯಿಸುತ್ತಿದ್ದ ಮಿಗ್-೨೧ ಬೈಸನ್ ಮುಖಾಂತರ ಪಾಕ್ ವಾಯುಸೇನೆಯ ಅಮೇರಿಕಾ ನಿರ್ಮಿತ ಎಫ್-೧೬ ವಿಮಾನವನ್ನು ಹೊಡೆದು ಉರುಳಿಸಿದರು. ಆದರೆ ಅದೇ ಸಮಯದಲ್ಲಿ ಇನ್ನೊಂದು ಪಾಕ್ ವಿಮಾನವು ವರ್ಧಮಾನ್ ಅವರ ಮಿಗ್-೨೧ ಬೈಸನ್ ವಿಮಾನವನ್ನು ಹೊಡೆದುರುಳಿಸಿತು[೨೨][೨೩]. ಮಿಗ್ ನೆಲಕ್ಕೆ ಅಪ್ಪಳಿಸುವ ಮುನ್ನ ವರ್ಧಮಾನ್ ಅವರು ತನ್ನಲ್ಲಿದ್ದ ಧುಮುಕುಕೊಡೆಯ ಸಹಾಯದಿಂದ ಸುರಕ್ಷಿತವಾಗಿ, ನಿಯಂತ್ರಣ ರೇಖೆಯಿಂದ ಸುಮಾರು 7 ಕಿ.ಮೀ (4.3 ಮೈಲಿ) ದೂರದಲ್ಲಿರುವ ಪಾಕಿಸ್ತಾನದ ಆಡಳಿತದ ಕಾಶ್ಮೀರದ ಹೊರಾನ್ ಎಂಬ ಹಳ್ಳಿಯಲ್ಲಿ ಇಳಿಯಲ್ಪಟ್ಟರು[೨೪][೨೫].

  • ಸೆರೆ ಹಿಡಿದದ್ದು

ಧುಮುಕುಕೊಡೆಯ ಮೇಲೆ ಭಾರತೀಯ ಧ್ವಜವನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ವರ್ಧಮಾನ್ ಅವರನ್ನು ಭಾರತೀಯ ಪೈಲಟ್ ಎಂದು ಕಂಡುಕೊಂಡರು. ನಂತರ ವರ್ಧಮಾನ್, ತಾನು ಭಾರತದ ಗಡಿಯೊಳಗೆ ಇದ್ದೇನೆಯೇ ಎಂದು ಗ್ರಾಮಸ್ಥರನ್ನು ಕೇಳಿದಾಗ ಅವರಲ್ಲಿ ಒಬ್ಬ ಹುಡುಗ ಹೌದು ಎಂದು ಉತ್ತರಿಸಿದನು[೨೬]. ಆಗ ಖುಷಿಯಿಂದ ವರ್ಧಮಾನ್, ಭಾರತ ಪರ ಘೋಷಣೆ ಕೂಗಿದರು. ಆದರೆ ಸ್ಥಳೀಯ ಯುವಕರು ಪಾಕಿಸ್ತಾನ ಪರ ಘೋಷಣೆಗಳೊಂದಿಗೆ ಪ್ರತಿಕ್ರಿಯಿಸಿದರು. ಕೂಡಲೇ ಎಚ್ಚೆತ್ತ ವರ್ಧಮಾನ್ ತನ್ನಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳಿಯರನ್ನು ಚದುರಿಸಲು ಪ್ರಯತ್ನಿಸಿದರು[೨೭]. ಇದರಿಂದ ಉದ್ರಿಕ್ತರಾದ ಸ್ಥಳೀಯ ಮಂದಿ, ವರ್ಧಮಾನ್‌ರತ್ತ ಕಲ್ಲು ತೂರಲು ಪ್ರಾರಂಭಿಸಿದರು. ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ವರ್ಧಮಾನ್ ಅವರು ಓಡಲು ಪ್ರಾರಂಭಿಸಿದರು. ಓಡುತ್ತಾ ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದರು. ಸ್ವಲ್ಪ ದೂರ ಓಡಿದ ಮೇಲೆ ತೊರೆಯೊಂದಕ್ಕೆ ಧುಮುಕಿದ ವರ್ಧಮಾನ್, ತನ್ನಲ್ಲಿದ್ದ ಬಹು ಮುಖ್ಯ ಕಾಗದಪತ್ರಗಳನ್ನು ನುಂಗಿ ನಾಶಮಾಡಲು ಯತ್ನಿಸಿದರು. ಈ ದಾಖಲೆಗಳು ಶತ್ರುವಿನ ಕೈಸೇರಿದರೆ ಶತ್ರುಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಆತಂಕವಿತ್ತು[೨೮]. ಭಾರತೀಯ ವಾಯುದಳದ ವಿಮಾನ ಚಾಲಕ ತಮ್ಮ ಭೂಪ್ರದೇಶದಲ್ಲಿ ಇಳಿದ ಸಮಾಚಾರ ಆಗಲೇ ಪಾಕ್ ಸೈನ್ಯದ ಮುಖ್ಯಸ್ಥರಿಗೆ ತಲುಪಿತ್ತು ಮತ್ತು ಭಾರತೀಯ ವಾಯುದಳದ ವಿಮಾನ ಪತನವಾದ ಜಾಗಕ್ಕೆ ಪಾಕ್ ಸೈನಿಕರು ಧಾವಿಸಿ ಅಭಿನಂದನ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡರು[೨೯].

  • ಪತ್ರಿಕಾಗೋಷ್ಠಿ- ಪಾಕಿಸ್ತಾನ

ಘರ್ಷಣೆ ನಡೆದು ಕೆಲವೇ ಹೊತ್ತಿನಲ್ಲಿ(ಬೆಳಗ್ಗೆ ೧೧.೪೯ರ ಸಮಯ) ಪಾಕ್ ಸೈನ್ಯದ ಮುಖವಾಣಿಯಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಮಹಾನಿರ್ದೇಶಕ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತೀಯ ವಾಯುದಳದ ಎರಡು ಯುದ್ಧವಿಮಾನಗಳನ್ನು ತಮ್ಮ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದ ನೆಲದಲ್ಲಿ ಹೊಡೆದುರುಳಿಸಿದೆ, ಒಬ್ಬ ಪೈಲಟ್‌ನನ್ನು(ಅಭಿನಂದನ್) ತಮ್ಮ ಸೇನೆಯು ಬಂಧಿಸಿದೆ ಮತ್ತು ಇಬ್ಬರು ಭಾರತೀಯ ಪೈಲಟ್‌ಗಳು ಇನ್ನೂ ಆ ಪ್ರದೇಶದಲ್ಲಿದ್ದಾರೆ ಎಂದು ತಮ್ಮ ಅಧೀಕೃತ ಟ್ವಿಟರ್ ಖಾತೆಯಿಂದ ಟ್ವಿಟ್ ಮಾಡಿದರು[೩೦]. ಮಧ್ಯಾಹ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಸಿಫ್ ಗಫೂರ್ ಮತ್ತೊಬ್ಬ ಪೈಲಟ್‌ನನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು. ನಮ್ಮ ಸೈನಿಕಪಡೆಗಳು ಇಬ್ಬರು ಪೈಲಟ್‌ಗಳನ್ನು ಬಂಧಿಸಿವೆ, ಅವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಸಿಎಮ್‌ಹೆಚ್ (ಸಂಯೋಜಿತ ಮಿಲಿಟರಿ ಆಸ್ಪತ್ರೆ) ಗೆ ಸ್ಥಳಾಂತರಿಸಲಾಗಿದೆ ಎಂದರು[೩೧]. ಅಲ್ಲದೆ, ಭಾರತೀಯ ವಾಯುಪಡೆಯೊಂದಿಗೆ ನಡೆದ ಈ ಕಾದಾಟದಲ್ಲಿ ತಮ್ಮ ವಾಯುದಳದ ಎಫ್-೧೬ ವಿಮಾನವನ್ನು ಬಳಸಿಕೊಂಡಿಲ್ಲ ಎಂದು ಸ್ಪಷ್ಟೀಕರಿಸಿದರು[೩೨].

ಆದರೆ, ಆ ಪತ್ರಿಕಾಗೋಷ್ಠಿಯ ಸ್ವಲ್ಪಹೊತ್ತಿನ ನಂತರ, ಮಿಲಿಟರಿ ಆಸ್ಪತ್ರೆಯಲ್ಲಿ ತಮ್ಮ ವಶದಲ್ಲಿದ್ದ ಭಾರತೀಯ ವಾಯುದಳದ ಎರಡನೇ ಪೈಲಟ್ ಮೃತಪಟ್ಟಿದ್ದಾರೆ ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಮಾಹಿತಿ ನೀಡಿದರು.

  • ಪತ್ರಿಕಾಗೋಷ್ಠಿ- ಭಾರತ

ಇತ್ತಕಡೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು, ಭಾರತ ಮತ್ತು ಪಾಕ್ ವಾಯುದಳದ ವಿಮಾನಗಳ ನಡುವೆ ನಡೆದ ಕಾದಾಟದ ಸಂದರ್ಭದಲ್ಲಿ ತಮ್ಮ ಕಡೆಯ ಒಂದು ಮಿಗ್-೨೧ ಬೈಸನ್ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದ ನೆಲದಲ್ಲಿ ಪತನವಾಗಿದ್ದನ್ನು ಮತ್ತು ಒಬ್ಬ ವಿಮಾನ ಚಾಲಕ ನಾಪತ್ತೆಯಾಗಿದ್ದನ್ನು ಪತ್ರಿಕಾಗೋಷ್ಟಿಯಲ್ಲಿ ಖಾತ್ರಿಪಡಿಸಿದರು[೩೩]. ಜೊತೆಗೆ ಭಾರತೀಯ ವಾಯುಸೇನೆಯೂ ಸಹ ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಮಿಗ್ ಪತನವಾಗುವ ಮುನ್ನ ಅಭಿನಂದನ್ ಅವರು ಪಾಕ್ ವಾಯುದಳಕ್ಕೆ ಸೇರಿದ ಎಫ್-೧೬ ವಿಮಾನವನ್ನು ಹೊಡೆದುರುಳಿಸಿದರು ಎಂದು ತಿಳಿಸಿತು.

ಬಿಡುಗಡೆ

ಮಾರನೇಯ ದಿನ ಫೆಬ್ರವರಿ 28, 2019ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ಸಂಸತ್ತಿನ ಜಂಟಿ ಸಭೆಯಲ್ಲಿ, ಎರಡೂ ದೇಶಗಳ ನಡುವಿನ ಶಾಂತಿಯನ್ನು ಪಾಲಿಸುವ ಸಲುವಾಗಿ ಅಭಿನಂದನ್‌ರನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು[೩೪][೩೫]. ಈ ಮಧ್ಯೆ, ಅಭಿನಂದನ್‌ರನ್ನು ಬಿಡುಗಡೆ ಮಾಡುವ ಸರ್ಕಾರದ ನಿರ್ಣಯಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಲಾಯಿತು, ಆದರೆ ನ್ಯಾಯಾಲಯ ಅದೇ ದಿನ ಆ ಅರ್ಜಿಯನ್ನು ವಜಾಗೊಳಿಸಿತು[೩೬]. ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ, ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಎರಡು ನೆರೆಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ಉದ್ದೇಶದಿಂದ ತಮ್ಮ ಸರ್ಕಾರ ಅಭಿನಂದನ್‌ರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತೇ ಹೊರತು, ಯಾವುದೇ ಆಂತರಿಕ ಅಥವಾ ಬಾಹ್ಯ ಒತ್ತಡಗಳಿಗೆ ಒಳಗಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಹೇಳಿರುವಂತಹ ಯಾವುದೇ ರೀತಿಯ ಬಲವಂತ-ಒತ್ತಡಗಳು ಪಾಕಿಸ್ತಾನದ ಮೇಲೆ ಇಲ್ಲ ಎಂದು ತಿಳಿಸಿದರು[೩೭].

ಮಾರ್ಚ್ ೧ ೨೦೧೯ರಂದು ವರ್ಧಮಾನ್‌ರನ್ನು ಪಾಕ್ ಸೈನ್ಯವು ಭಾರತೀಯ ಸೈನ್ಯಕ್ಕೆ ಭಾರತ-ಪಾಕಿಸ್ತಾನ ಗಡಿಯಾದ ವಾಘಾ-ಅಟಾರಿಯಲ್ಲಿ ಹಸ್ತಾಂತರಿಸಿತು[೩೮].

ದೇಶದಾದ್ಯಂತ ಪ್ರಸಿದ್ಧವಾದ ಅಭಿನಂದನ್ ಅವರ ಮೀಸೆಯ ಶೈಲಿ

ವೈದ್ಯಕೀಯ ಪರೀಕ್ಷೆ

ಪಾಕಿಸ್ತಾನದ ಸೈನಿಕರಿಂದ ಹಸ್ತಾಂತರವಾದ ಅಭಿನಂದನ್ ಅವರನ್ನು ವಿವಿಧ ರೀತಿಯ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಸೈನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಅಭಿನಂದನ್ ಅವರ ಮೂಗು, ಪಕ್ಕೆಲುಬು, ಬಲಗಣ್ಣಿನ ಕೆಳಭಾಗ, ಮೀಸೆಯ ಭಾಗದಲ್ಲಿ ಊದಿಕೊಂಡಿದ್ದು ಪತ್ತೆಯಾಯಿತು[೩೯][೪೦].

ವೈದ್ಯಕೀಯ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆಗಳ ನಂತರ ಅಭಿನಂದನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತು ಅವರಿಂದ ಪಾಕ್‌ ವಶದಲ್ಲಿದ್ದಾಗಿನ ಅನುಭವಗಳ ಬಗ್ಗೆ ಹೇಳಿಕೆ (ಡಿ-ಬ್ರೀಫಿಂಗ್ ಸೆಷನ್) ಪಡೆದುಕೊಳ್ಳುವ ಸಲುವಾಗಿ ಸೈನ್ಯದ ಉನ್ನತ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡರು[೪೧].

ಚಿಕಿತ್ಸೆ ಪಡೆದು ಚೇತರಿಸಿಕೊಂಡು, ಸೈನ್ಯಾಧಿಕಾರಿಗಳ ತನಿಖೆಯನ್ನು ಪೂರ್ಣಗೊಳಿಸಿದ ನಂತರ ನಂತರ ಪುನಃ ಯುದ್ಧವಿಮಾನ ಚಾಲಕ ವೃತ್ತಿಗೆ ಮರಳಲು ಅಭಿನಂದನ್ ಅವರಿಗೆ ದೈಹಿಕ ದಾರ್ಢ್ಯತೆ ಪ್ರಮಾಣಪತ್ರದ ಅಗತ್ಯವಿತ್ತು. ಅದನ್ನು ಪಡೆಯಲು ಅಭಿನಂದನ್ ಅವರು ಬೆಂಗಳೂರಿನ ಹೆಚ್‍ಎಎಲ್(ಹಿಂದೂಸ್ತಾನ್ ಎರೋನಾಟಿಕಲ್ ಲಿಮಿಟೆಡ್)ನಲ್ಲಿರುವ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್‌ಗೆ ಆಗಮಿಸಿ, ಪರೀಕ್ಷೆಗಳಲ್ಲಿ ಭಾಗವಹಿಸಿ ಪ್ರಮಾಣಪತ್ರವನ್ನು ಪಡೆದುಕೊಂಡರು[೪೨][೪೩].

ಪುರಸ್ಕಾರ

ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿಯ ಅಧ್ಯಕ್ಷ ಮನಿದ್ರಾ ಜೈನ್, ಮಹಾವೀರ ಜಯಂತಿಯ ದಿನ (ಏಪ್ರಿಲ್ 17, 2019)ರಂದು ವರ್ಧಮಾನ್ ಅವರಿಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕರ್ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದರು[೪೪]. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಅವರಿಗೆ ವೀರ ಚಕ್ರ ಶೌರ್ಯ ಪ್ರಶಸ್ತಿಯನ್ನು ಸಹ ಭಾರತ ಸರಕಾರವು ನೀಡಿ ಸಮ್ಮಾನಿಸಿತು[೪೫].

ಎಫ್-೧೬ರ ದುರುಪಯೋಗ

ಎರಡು ದಿನಗಳ ನಂತರ, ಅಂದರೆ ಮಾರ್ಚ್ ೨ ೨೦೧೯ರಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಎಐಎಮ್-೧೨೦ ಅಮ್ರಾಮ್(AIM-120 AMRAAM) ಕ್ಷಿಪಣಿಯ ಭಾಗಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ ಭಾರತೀಯ ಸೈನ್ಯದ ವಕ್ತಾರರು, ಭಾರತೀಯ ಸೈನಿಕ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸುವ ವಿಫಲ ಯತ್ನ ನಡೆಸಿದ ಪಾಕ್ ವಾಯುಸೈನ್ಯವು ತನ್ನ ಎಫ್-೧೬ ವಿಮಾನದಲ್ಲಿ ಅಳವಡಿಸಲಾಗಿದ್ದ ಎಐಎಮ್-೧೨೦ ಅಮ್ರಾಮ್(AIM-120 AMRAAM) ಕ್ಷಿಪಣಿಯನ್ನು ಉಡಾಯಿಸಿತ್ತು ಎಂದು ಮಾಹಿತಿ ನೀಡಿದರು[೪೬]. ಇದಲ್ಲದೆ, ಭಾರತೀಯ ಸೈನ್ಯದ ರಾಡಾರ್‌ನಲ್ಲಿ ಸೆರೆಯಾದ ವಿದ್ಯುತ್ ಗುರುತು(Electronic Signatures), ದಾಳಿಯ ಸಂದರ್ಭದಲ್ಲಿ ಎಫ್-೧೬ ವಿಮಾನವನ್ನು ಬಳಸಲಾಗಿದೆ ಎಂಬುದಕ್ಕೆ ಪ್ರಬಲ ಪುರಾವೆ ಎಂದು ತಿಳಿಸಿದರು[೪೭][೪೮].

ಭಾರತೀಯ ಸೈನ್ಯದ ಈ ಹೇಳಿಕೆಯನ್ನು ಪಾಕ್ ಸೈನ್ಯದ ಮುಖವಾಣಿಯಾದ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ ಸಂಸ್ಥೆಯು ನಿರಾಕರಿಸಿತು. ಮಾತ್ರವಲ್ಲ, ಭಾರತ ಮತ್ತು ಪಾಕ್ ವಾಯುದಳದ ವಿಮಾನಗಳ ನಡುವೆ ನಡೆದ ಕಾದಾಟದ ಸಂದರ್ಭದಲ್ಲಿ ನಮ್ಮ ಯಾವುದೇ ವಿಮಾನವು ಪತನವಾಗಿಲ್ಲ ಎಂದು ವಾದಿಸಿತು[೪೯].

ಅಸಲಿಗೆ, ಈ ಎಫ್-೧೬ ವಿಮಾನವನ್ನು ಭಯೋತ್ಪಾದಕರ ವಿರುದ್ಧದ ದಾಳಿಗೆ ಮಾತ್ರ ಬಳಸಬೇಕು ಅಲ್ಲದೇ ಬೇರೆ ಯಾರ ವಿರುದ್ಧವೂ ಬಳಸಕೂಡದು ಎಂಬ ಶರತ್ತಿನ ಮೇಲೆ ಅಮೇರಿಕಾವು ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು[೫೦].

ಕ್ಯಾಪ್ಟನ್ ಶ್ರೇಣಿಗೆ ಬಡ್ತಿ

ಫೆಬ್ರವರಿ 2019 ರಲ್ಲಿ ಪಾಕಿಸ್ತಾನದೊಂದಿಗಿನ ವೈಮಾನಿಕ ಯುದ್ಧದಲ್ಲಿ ಶತ್ರು ಜೆಟ್ ಅನ್ನು ಹೊಡೆದುರುಳಿಸಿ ಮೂರು ದಿನಗಳ ಕಾಲ ಸೆರೆಯಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶ್ರೇಣಿಯನ್ನು ಅನುಮೋದಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ (03 11 2021) ತಿಳಿಸಿವೆ. ಶ್ರೇಣಿಯನ್ನು ಅನುಮೋದಿಸಲಾಗಿದೆ ಮತ್ತು ನಿಗದಿತ ಕಾರ್ಯವಿಧಾನ ಪೂರ್ಣಗೊಂಡ ನಂತರ ಅವರು ಅದನ್ನು ಪಡೆಯುತ್ತಾರೆ.[೫೧].[೫೨].

ಉಲ್ಲೇಖಗಳು