ಉಚ್ಚೈಶ್ರವಸ್ಸು

ಉಚ್ಚೈಶ್ರವಸ್ಸು ದೇವಾಸುರರು ಅಮೃತ ಪ್ರಾಪ್ತಿಗಾಗಿ ಕ್ಷೀರ ಸಮುದ್ರವನ್ನು ಕಡೆದಾಗ ಉದ್ಭವಿಸಿದ ಕುದುರೆ[೧]. ಇಂದ್ರನಿಗೆ ಇದು ಪಟ್ಟದ ಕುದುರೆ. ಭಗವಂತನ ವಿಭೂತಿಗಳಲ್ಲಿ ಇದೂ ಒಂದು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಈ ಕುದುರೆಗೆ ಏಳು ಮುಖಗಳೆಂದು ಶ್ರೀಮದ್ಭಾಗವತ ತಿಳಿಸುತ್ತದೆ. ಕಿವಿಗಳು ನೆಟ್ಟಗೆ ನಿಂತು ಉದ್ದವಾಗಿವೆಯಾದ್ದರಿಂದ ಈ ಹೆಸರು. ಬಣ್ಣ ಬಿಳುಪು. ಒಮ್ಮೆ ಕದ್ರು, ವಿನತೆಯರೆಂಬ ಸವತಿಯರಲ್ಲಿ ಕುದುರೆಯ ಬಾಲದ ಬಣ್ಣದ ವಿಚಾರವಾಗಿ ಚರ್ಚೆ ಸಂಭವಿಸಿತು. ಅದು ಕಪ್ಪಾಗಿದೆ ಎಂದು ಕದ್ರುವೂ ಬೆಳ್ಳಗಿದೆ ಎಂದು ವಿನತೆಯೂ ಸಾಧಿಸ ಹೊರಟರು. ಕೊನೆಗೆ ಸಾಕ್ಷಾತ್ತಾಗಿ ಈ ಕುದುರೆಯನ್ನು ನೋಡಿಯೇ ಬಣ್ಣವನ್ನು ನಿಷ್ಕರ್ಷಿಸ ಬೇಕೆಂದೂ ಸೋತವರು ಮತ್ತೊಬ್ಬರ ತೊತ್ತಾಗಬೇಕೆಂದೂ ಪಂಥ ಕಟ್ಟಿದರು. ಕೂಡಲೇ ಕದ್ರು ತನ್ನ ಮಗನಾದ ಕರ್ಕೋಟಕನನ್ನು ಬಾಲದಲ್ಲಿ ಸೇರಿಕೊಂಡು ಬಾಲ ಕಪ್ಪಾಗಿ ಕಾಣುವಂತೆ ಮಾಡಲು ತಿಳಿಸಿದರು. ಕರ್ಕೋಟಕ ಬಾಲದಲ್ಲಿ ಕೂಡಿಕೊಂಡಿದ್ದುದರಿಂದ ದೂರಕ್ಕೆ ಅದು ಕಪ್ಪಾಗಿ ಕಾಣುತ್ತಿತ್ತು. ಕದ್ರು ಉಚ್ಚೈಶ್ರವಸ್ಸಿನ ಬಾಲ ಕಪ್ಪಾಗಿರುವುದನ್ನು ವಿನತೆಗೆ ತೋರಿಸಿ ಮೋಸದಿಂದ ಆಕೆಯನ್ನು ತನ್ನ ತೊತ್ತನ್ನಾಗಿ ಮಾಡಿಕೊಂಡಳು[೨][೩]. ಕದ್ರುವಿನ ಮಕ್ಕಳಾದ ಸರ್ಪಗಳಿಗೂ ವಿನತೆಯ ಮಗನಾದ ಗರುಡನಿಗೂ ಬದ್ಧದ್ವೇಷ ಉಂಟಾಗಲು ಇದೇ ಕಾರಣವಾಯಿತು.

ಉಚ್ಚೈಶ್ರವಸ್ಸು
Uchchaihshravas
ಉಚ್ಚೈಶ್ರವಸ್ಸು
ಸಮುದ್ರ ಮಥನದಿಂದ ಉದಿಸಿಬಂದ ಏಳುತಲೆಯ ಉಚ್ಚೈಶ್ರವಸ್ಸು

ಉಲ್ಲೇಖಗಳು