ಉತ್ಕೃಷ್ಟತೆ

(ಕ್ಯಾರಟ್ ಇಂದ ಪುನರ್ನಿರ್ದೇಶಿತ)
ಕ್ಯಾರಟ್ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕ್ಯಾರಟ್ ತರಕಾರಿ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಬೆಲೆಬಾಳುವ ಲೋಹ ವಸ್ತುವಿನ (ನಾಣ್ಯ, ಗಟ್ಟಿ, ಆಭರಣ ಇತ್ಯಾದಿ.) ಉತ್ಕೃಷ್ಟತೆ ಒಟ್ಟು ತೂಕಕ್ಕೆ ಅನುಪಾತದಲ್ಲಿ, ಒಳಗಿರುವ ಉತ್ಕೃಷ್ಟ ಲೋಹದ ತೂಕವನ್ನು ಪ್ರತಿನಿಧಿಸುತ್ತದೆ. ಒಟ್ಟು ತೂಕದಲ್ಲಿ ಮಿಶ್ರ ಕ್ಷುದ್ರಲೋಹಗಳು ಮತ್ತು ಯಾವುದೇ ಕಸರುಗಳು ಸೇರಿರುತ್ತವೆ. ನಾಣ್ಯಗಳು ಹಾಗೂ ಆಭರಣಗಳ ಗಡಸುತನ ಮತ್ತು ಬಾಳಿಕೆ ಹೆಚ್ಚಿಸಲು, ಬಣ್ಣ ಬದಲಾಯಿಸಲು, ಪ್ರತಿ ತೂಕಘಟಕದ ವೆಚ್ಚವನ್ನು ಇಳಿಸಲು, ಅಥವಾ ಉನ್ನತ ಪರಿಶುದ್ಧತೆಯ ಪರಿಷ್ಕರಣದ ವೆಚ್ಚವನ್ನು ತಪ್ಪಿಸಲು ಮಿಶ್ರಲೋಹಗಳನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, ನಾಣ್ಯಗಳು, ಮನೆಪಾತ್ರೆಗಳು ಮತ್ತು ಆಭರಣದಲ್ಲಿ ಬಳಕೆಗೆ ಹೆಚ್ಚು ಬಾಳಿಕೆಯ ಮಿಶ್ರಲೋಹ ಮಾಡಲು ಬೆಳ್ಳಿಗೆ ತಾಮ್ರವನ್ನು ಸೇರಿಸಲಾಗುತ್ತದೆ. ಹಿಂದೆ ಬೆಳ್ಳಿ ನಾಣ್ಯಗಳನ್ನು ತಯಾರಿಸಲು ಬಳಸಲಾಗುತ್ತಿದ್ದ ನಾಣ್ಯ ಬೆಳ್ಳಿಯು ದ್ರವ್ಯರಾಶಿಯ ಪ್ರಮಾಣದಲ್ಲಿ ಶೇಕಡ ೯೦ ಬೆಳ್ಳಿ ಮತ್ತು ಶೇಕಡ ೧೦ ತಾಮ್ರ ಹೊಂದಿರುತ್ತದೆ. ಸ್ಟರ್ಲಿಂಗ್ ಬೆಳ್ಳಿ ದ್ರವ್ಯರಾಶಿಯ ಪ್ರಮಾಣದಲ್ಲಿ ಶೇಕಡ ೯೨.೫ ಬೆಳ್ಳಿ ಮತ್ತು ಶೇಕಡ ೭.೫ ಇತರ ಲೋಹಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ತಾಮ್ರ.

ಉತ್ಕೃಷ್ಟತೆಯನ್ನು ಸೂಚಿಸುವ ವಿವಿಧ ಬಗೆಗಳನ್ನು ಬಳಸಲಾಗಿದೆ ಮತ್ತು ಸಾಮಾನ್ಯ ಬಳಕೆಯಲ್ಲಿ ಎರಡು ಉಳಿದಿವೆ: ಸಹಸ್ರಾಂಶದ ಉತ್ಕೃಷ್ಟತೆಯನ್ನು ೧,೦೦೦ ದಲ್ಲಿನ ಭಾಗಗಳ ಘಟಕಗಳಲ್ಲಿ ಸೂಚಿಸಲಾಗುತ್ತದೆ[೧] ಮತ್ತು ಕ್ಯಾರಟ್ ಅನ್ನು ಕೇವಲ ಚಿನ್ನಕ್ಕೆ ಬಳಸಲಾಗುತ್ತದೆ. ಕ್ಯಾರಟ್‍ಗಳು ೨೪ ರಲ್ಲಿ ಭಾಗಗಳನ್ನು ಅಳೆಯುತ್ತವೆ, ಹಾಗಾಗಿ 18 ಕ್ಯಾರಟ್ = 18/24 = ಶೇಕಡ 75 ಮತ್ತು 24 ಕ್ಯಾರಟ್ ಚಿನ್ನವನ್ನು (ಅಪರಂಜಿ) ಶೇಕಡ ೧೦೦ ಚಿನ್ನವೆಂದು ಪರಿಗಣಿಸಲಾಗುತ್ತದೆ.[೨]

ಹಾಗಾಗಿ, ೨೪ ಕ್ಯಾರಟ್ ಚಿನ್ನವು ಶುದ್ಧ ಚಿನ್ನ (ಶೇಕಡ ೧೦೦ ರಷ್ಟು ಶುದ್ಧತೆ ಸಾಧ್ಯವಿಲ್ಲ, ವಾಣಿಜ್ಯದಲ್ಲಿ ಶೇಕಡ ೯೯.೯೫ ಶುದ್ಧತೆಗೆ ಈ ಪದನಾಮವನ್ನು ಅನುಮತಿಸಲಾಗಿದೆ), 18 ಕ್ಯಾರಟ್ ಚಿನ್ನವೆಂದರೆ ೧೮ ಭಾಗ ಚಿನ್ನ, ೬ ಭಾಗ ಮತ್ತೊಂದು ಲೋಹ (ಹಾಗಾಗಿ ಶೇಕಡ ೭೫ ಚಿನ್ನವಿರುವ ಮಿಶ್ರಲೋಹವನ್ನು ರಚಿಸುತ್ತದೆ), ೧೨ ಕ್ಯಾರಟ್ ಚಿನ್ನವೆಂದರೆ ೧೨ ಭಾಗ ಚಿನ್ನ (೧೨ ಭಾಗ ಇನ್ನೊಂದು ಲೋಹ), ಇತ್ಯಾದಿ.

ಉಲ್ಲೇಖಗಳು