ಗಂಟಲು

ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರು ಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ. ಕಿರುನಾಲಿಗೆಯು ಅನ್ನನಾಳ ಮತ್ತು ಶ್ವಾಸನಾಳವನ್ನು ಪ್ರತ್ಯೇಕಿಸುವ ಒಂದು ಕವಾಟ ಮತ್ತು ಆಹಾರ ಹಾಗೂ ಪಾನೀಯಗಳು ಶ್ವಾಸಕೋಶಗಳಲ್ಲಿ ಒಳಸೇರದಂತೆ ತಡೆಯುತ್ತದೆ. ಗಂಟಲು ವಿವಿಧ ರಕ್ತನಾಳಗಳು, ಗ್ರಸನಕೂಪ ಸ್ನಾಯುಗಳು, ಗಲಗ್ರಂಥಿಗಳು, ಕಿರಿನಾಲಿಗೆ, ಶ್ವಾಸನಾಳ, ಅನ್ನನಾಳ ಮತ್ತು ಧ್ವನಿ ತಂತುಗಳುಗಳನ್ನು ಹೊಂದಿರುತ್ತದೆ.[೧] ಸಸ್ತನಿಗಳ ಗಂಟಲುಗಳು ಎರಡು ಮೂಳೆಗಳನ್ನು ಹೊಂದಿರುತ್ತವೆ, ಜಿಹ್ವಾಸ್ಥಿ ಮತ್ತು ಕೊರಳೆಲುಬು. ಕೆಲವೊಮ್ಮೆ "ಗಂಟಲು" ಗಳಕುಹರ ಸಂಧಿಗೆ ಸಮಾನಾರ್ಥಕವಾಗಿದೆ ಎಂದು ಭಾವಿಸಲಾಗುತ್ತದೆ.[೨]

ಗಂಟಲಿನ ರಚನೆ

ಇದು ಬಾಯಿ, ಕಿವಿಗಳು ಮತ್ತು ಮೂಗಿನೊಂದಿಗೆ, ಜೊತೆಗೆ ಶರೀರದ ಇತರ ಅನೇಕ ಭಾಗಗಳೊಂದಿಗೆ ಕೆಲಸಮಾಡುತ್ತದೆ. ಇದರ ಗ್ರಸನಕೂಪವು ಬಾಯಿಗೆ ಸಂಪರ್ಕ ಹೊಂದಿರುತ್ತದೆ ಮತ್ತು ಮಾತು ಹೊರಡುವುದಕ್ಕೆ, ಆಹಾರ ಹಾಗೂ ದ್ರವ ಗಂಟಲ ಮೂಲಕ ಕೆಳಗಿಳಿಯುವುದಕ್ಕೆ ಅನುಮತಿಸುತ್ತದೆ. ಇದು ಗಂಟಲಿನ ಅಗ್ರದಲ್ಲಿರುವ ಗ್ರಸನಕೂಪದ ಮೇಲ್ಭಾಗದಿಂದ ಮೂಗಿಗೆ ಕೂಡಿರುತ್ತದೆ, ಮತ್ತು ಯೂಸ್ಟೇಕಿಯನ್ ನಾಳದಿಂದ ಕಿವಿಗೆ ಕೂಡಿರುತ್ತದೆ. ಶ್ವಾಸನಾಳವು ಉಚ್ಛ್ವಾಸಮಾಡಿದ ಗಾಳಿಯನ್ನು ಶ್ವಾಸಕೋಶಗಳ ಶ್ವಾಸನಾಳಿಕೆಗಳಿಗೆ ಸಾಗಿಸುತ್ತದೆ.[೩] ಅನ್ನನಾಳವು ಗಂಟಲಿನ ಮೂಲಕ ಆಹಾರವನ್ನು ಹೊಟ್ಟೆಗೆ ಸಾಗಿಸುತ್ತದೆ. ಗಲಗ್ರಂಥಿಗಳು ಸೋಂಕು ತಡೆಯಲು ನೆರವಾಗುತ್ತವೆ ಮತ್ತು ದುಗ್ಧರಸ ಅಂಗಾಂಶಗಳಿಂದ ರಚನೆಯಾಗಿರುತ್ತವೆ. ಗಂಟಲಗೂಡು ಧ್ವನಿ ತಂತುಗಳು,[೪] (ಆಹಾರ/ದ್ರವ ಒಳಹೋಗದಂತೆ ತಡೆಯುವ) ಕಿರುನಾಲಿಗೆ, ಮತ್ತು ಗಂಟಲಿನ ಮೇಲ್ಭಾಗದ ಅತ್ಯಂತ ಕಿರಿದಾದ ವಿಭಾಗವಾದ ಒಂದು ಪ್ರದೇಶವನ್ನು ಹೊಂದಿರುತ್ತದೆ.[೫] ಗಂಟಲಗೂಡಿನಲ್ಲಿ, ಧ್ವನಿ ತಂತುಗಳು ಗಾಳಿಯ ಒತ್ತಡದ ಪ್ರಕಾರ ಕಾರ್ಯನಿರ್ವಹಿಸುವ ಎರಡು ಪದರಗಳನ್ನು ಹೊಂದಿರುತ್ತವೆ.[೬]

ಉಲ್ಲೇಖಗಳು