ರಾಜ್‌ಕುಮಾರ್

ಭಾರತೀಯ ಕನ್ನಡ ನಟ
(ಡಾ.ರಾಜ್‍ಕುಮಾರ್ ಇಂದ ಪುನರ್ನಿರ್ದೇಶಿತ)

ಡಾ. ರಾಜ್‌ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ. ವರನಟ,ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ ಇವರು.[೭][೮] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.[೯]

ರಾಜ್‌ಕುಮಾರ್
Born
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು

೨೪ ಏಪ್ರಿಲ್, ೧೯೨೯
Died12 ಏಪ್ರಿಲ್ 2006 (ವಯಸ್ಸು - 76)
Monumentsಕಂಠೀರವ ಸ್ಟುಡಿಯೋಸ್[೪]
Other namesರಾಜ್‌ಕುಮಾರ್, ಅಣ್ಣಾವ್ರು
Occupation(s)ನಟ, ಗಾಯಕ
Years active1954–2005
Titleನಟಸಾರ್ವಭೌಮ, ಕರ್ನಾಟಕ ರತ್ನ, ವರನಟ,ಅಣ್ಣಾವ್ರು
Movementಗೋಕಾಕ್ ಚಳುವಳಿ[೫]
Spouseಪಾರ್ವತಮ್ಮ ರಾಜ್‌ಕುಮಾರ್
Childrenಶಿವರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್
ರಾಘವೇಂದ್ರ ರಾಜ್‍ಕುಮಾರ್
ಪೂರ್ಣಿಮ
ಲಕ್ಷ್ಮಿ[೬]

ಜೀವನ

  • ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ೧೯೫೪-೨೦೦೫ರವರೆಗೆ ೫ ದಶಕದಗಳ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಹೆಗ್ಗಳಿಕೆ ಡಾ. ರಾಜ್ ರದ್ದು.
  • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು, ೧೯೭೩ರಲ್ಲಿಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
  • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪಡೆದ ಎರಡನೆಯ ವ್ಯಕ್ತಿ ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.

ಹಿನ್ನೆಲೆ

ಡಾ. ರಾಜ್‌ಕುಮಾರ್

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ೧೯೨೯ಏಪ್ರಿಲ್ ೨೪ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).
ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‌ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.

ಅಪಹರಣ

  • ೩೦ ಜುಲೈ ೨೦೦೦ರಂದು, ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಡಾ. ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾದರು.
  • ಅಪಹರಣದ ನಂತರದ ದಿನಗಳಲ್ಲಿ, ಕ್ಯಾಸೆಟ್ಟುಗಳ ಮೂಲಕ, ಪತ್ರಗಳ ಮೂಲಕ ಕರ್ನಾಟಕ ಹಾಗು ತಮಿಳುನಾಡು ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ವೀರಪ್ಪನ್ ಡಾ. ರಾಜ್ ಅವರನ್ನು ಒತ್ತೆಯಾಳಗಿಟ್ಟುಕೊಂಡು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದನು. ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರಣ್ಯವಾಸ ಅನುಭವಿಸಿದ್ದ ಡಾ. ರಾಜ್, ೧೫ ನವೆಂಬರ್ ೨೦೦೦ರಂದು ಬಿಡುಗಡೆಗೊಂಡರು.
  • ಅಪಹರಣದ ಅವಧಿಯಲ್ಲಿ ಕರ್ನಾಟಕದ ಪೋಲಿಸ್ ಮಹಾನಿರ್ದೇಶಕರಾದ(ಡಿಜಿಪಿ) ಪಿ. ದಿನಕರ್ ಅವರು ಅಪಹರಣದ ಬಗ್ಗೆ "Veerappan's Prize Catch: Dr.Rajkumar" ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ರವಿ ಬೆಳಗೆರೆ ಯವರು "ರಾಜ ರಹಸ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಿಧನ

ಮಾಧ್ಯಮಗಳಿಂದ "ಅಂತಿಮ ನಮನ, ಅಣ್ಣಾವ್ರೆ"
  • ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, ೧೨ ಏಪ್ರಿಲ್, ೨೦೦೬ ಬುಧವಾರದಂದು ಮಧ್ಯಾಹ್ನ ೧:೪೫ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು.
  • ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು.
  • ೧೩ ಏಪ್ರಿಲ್ ೨೦೦೬ರಂದು, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ. ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ ೧೨ ಮತ್ತು ೧೩), ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.

ಬಣ್ಣದ ಬದುಕು

ರಂಗಭೂಮಿ ಮತ್ತು ತಂದೆಯ ಪ್ರಭಾವ

  • ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ. ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ[೧೦] ರವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯರವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು.
  • ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಡಾ. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ.ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ:"ಇಂತಹ ಸಾಧನೆ ನಿನ್ನಿಂದ ಸಾಧ್ಯ" ಎಂದು ಪುಟ್ಟಸ್ವಾಮಯ್ಯ ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು.
  • "ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು" ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲುಪ್ರಿಯ. "ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ" ಎಂದು ಹೇಳಿದ್ದಾರೆ.
  • ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ "ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ "ಅಂಬರೀಷ" ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು.
  • ಅನಂತರ "ಕುರುಕ್ಷೇತ್ರ" ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗ ತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ "ಭೂ ಕೈಲಾಸ" ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ

  • ೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟನಾಗಿಯೂ, ೧೯೫೨ರಲ್ಲಿ ಬಿಡುಗಡೆಯಾದ ಶಂಕರ್‌ಸಿಂಗ್ ನಿರ್ದೇಶನದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
  • ೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್‌ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು.
  • ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್‌ರವರನ್ನು ಕಂಡ ತಕ್ಷಣ "ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು" ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು. ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್‌ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. * ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್‌ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು.
  • ನಂತರ ಮುತ್ತುರಾಜ್ ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್ ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ-ರಾಜ‌ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು.
  • ಚಿತ್ರವು ೧೯೫೪ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರು ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ " ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್.ಸಿಂಹ ಅವರು ನಿರ್ಮಾಪಕರಿಗೆ ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.

ಬಣ್ಣದ ಬದುಕಿನ ಪಕ್ಷಿನೋಟ

  • ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು.
  • ೧೯೬೦ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು.
  • ೧೯೬೬ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ.
  • ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‌ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ ಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
  • ೧೯೬೮ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.
  • ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು. ಈ ಚಿತ್ರವು ರಾಜ್‌ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ.
  • ೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.
  • ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು.
  • ರಾಜ್‌ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ.
  • ಇದೇ ವರ್ಷ ಬಿಡುಗಡೆ ಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು.
  • ೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು.
  • ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.
  • ೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ. ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ. ರಾಜ್ ಅಭಿನಯಿಸಿದ್ದಾರೆ.
  • ೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ ಡಾ. ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು.
  • ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ. ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ. ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.
  • ೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ. ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವ ತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ. ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ.
  • ಡಾ. ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿ ಯವರು ಡಾ. ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ. ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು.
  • ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದರು. ಡಾ. ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ ೨೦೦೦ರಲ್ಲಿ ತೆರೆಕಂಡ ಶಬ್ದವೇದಿ.
  • ಭಕ್ತ ಅಂಬರೀಶ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ.
  • ಬೆಳ್ಳಿತೆರೆಯ ಮೇಲೆ ಡಾ. ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.
  • ಸುಮಾರು ೨೦೬ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿರುವ ರಾಜ್ ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆಂದರೆ "ಅಣ್ಣ ತಂಗಿ","ಮುರಿಯದ ಮನೆ" ,"ವಾತ್ಸಲ್ಯ", "ಮನಸಾಕ್ಷಿ", "ಬಾಳ ಬಂಧನ" ,"ನನ್ನ ತಮ್ಮ", "ಭಾಗ್ಯವಂತರು", "ಅಪೂರ್ವ ಸಂಗಮ" ಮುಂತಾದವುಗಳು. ಅಲ್ಲಿಯೂ ಅವರು ಮೂಲ ನಟರನ್ನು ಅನುಕರಿಸದೆ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. "ಬೇಡರ ಕಣ್ಣಪ್ಪ" ತೆಲುಗಿನಲ್ಲಿ ‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ ಡಾ. ರಾಜ್ ಕುಮಾರ್ ಹೀರೊ ಆಗಿ ನಟಿಸಿದರು. ಇದು ಬೇರೆ ಭಾಷೆಯಲ್ಲಿ ರಾಜ್ ಕುಮಾರ್ ನಟಿಸಿದ ಏಕೈಕ ಚಿತ್ರ.
  • ಡಾ. ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ , ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ,ಆದವಾನಿ ಲಕ್ಷ್ಮಿ ದೇವಿ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಗಾಯತ್ರಿ, ಸರಿತಾ, ಜಯಚಿತ್ರಾ, ಕಾಂಚನಾ, ವಾಣಿಶ್ರೀ, ಜಿ.ವಿ.ಲತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ. ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ, ರಾಜ್-ಕಲ್ಪನಾ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು.

ಅವರ ನಟನೆಯ ಐತಿಹಾಸಿಕ ಚಿತ್ರಗಳು

  1. ಮಯೂರ
  2. ಶ್ರೀ ಕೃಷ್ಣದೇವರಾಯ
  3. ರಣಧೀರ ಕಂಠೀರವ
  4. ಇಮ್ಮಡಿ ಪುಲಿಕೇಶಿ
  5. ಕಿತ್ತೂರು ಚೆನ್ನಮ್ಮ
  6. ಕವಿರತ್ನ ಕಾಳಿದಾಸ
  7. ಬಭ್ರುವಾಹನ
  8. ವೀರ ಕೇಸರಿ

ಭಕ್ತಿ ಪ್ರಧಾನ ಚಿತ್ರಗಳು

ಭಕ್ತನ ಪಾತ್ರದಲ್ಲಿ

  1. ಭಕ್ತ ಕನಕದಾಸ
  2. ನವಕೋಟಿ ನಾರಾಯಣ (ಭಕ್ತ ಪುರಂದರದಾಸ)
  3. ಸರ್ವಜ್ಞಮೂರ್ತಿ
  4. ಮಹಾತ್ಮ ಕಬೀರ್
  5. ಸಂತ ತುಕಾರಾಮ
  6. ವಾಲ್ಮೀಕಿ
  7. ಭೂಕೈಲಾಸ
  8. ಹರಿಭಕ್ತ
  9. ಭಕ್ತ ವಿಜಯ
  10. ಭಕ್ತ ಚೇತ
  11. ಭಕ್ತ ಕುಂಬಾರ
  12. ಮಂತ್ರಾಲಯ ಮಹಾತ್ಮೆ

ದೇವರ ಪಾತ್ರದಲ್ಲಿ

  1. ಶ್ರೀ ಶ್ರೀನಿವಾಸ ಕಲ್ಯಾಣ
  2. ಶ್ರೀ ರಾಮಾಂಜನೇಯ ಯುದ್ಧ
  3. ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
  4. ಶಿವ ಮೆಚ್ಚಿದ ಕಣ್ಣಪ್ಪ
  5. ಮೂರೂವರೆ ವಜ್ರಗಳು
  6. ಕೃಷ್ಣ ಗಾರುಡಿ

ಪತ್ತೇದಾರ/ಗೂಢಚಾರಿ ಪಾತ್ರದಲ್ಲಿ

  1. ಜೇಡರ ಬಲೆ
  2. ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
  3. ಗೋವಾದಲ್ಲಿ ಸಿ.ಐ.ಡಿ. ೯೯೯
  4. ಸಿ.ಐ.ಡಿ. ರಾಜಣ್ಣ
  5. ಬೆಂಗಳೂರು ಮೈಲ್
  6. ಆಪರೇಷನ್ ಡೈಮಂಡ್ ರಾಕೆಟ್
  7. ಭಲೇ ಹುಚ್ಚ
  8. ಚೂರಿಚಿಕ್ಕಣ್ಣ
  9. ಜೇಡರ ಬಲೆ,
  10. ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯,
  11. ಗೋವಾದಲ್ಲಿ ಸಿ.ಐ.ಡಿ. ೯೯೯ ಮತ್ತು
  12. ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳು ಜೇಮ್ಸ್‌ಬಾಂಡ್ ಮಾದರಿಯಲ್ಲಿ ಬಂದಂತಹ ಸರಣಿ ಚಲನಚಿತ್ರಗಳು. ಈ ನಾಲ್ಕೂ ಚಿತ್ರಗಳಲ್ಲಿ 'ಪ್ರಕಾಶ್' ಎಂಬ ಹೆಸರಿನ ಸಿ.ಐ.ಡಿ ೯೯೯ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದ್ದಾರೆ.

ಖಳ/ಪ್ರತಿನಾಯಕನ ಪಾತ್ರದಲ್ಲಿ

  1. ಮಹಿಷಾಸುರ ಮರ್ದಿನಿ - ಮಹಿಷಾಸುರ
  2. ಕರುಣೆಯೇ ಕುಟುಂಬದ ಕಣ್ಣು
  3. ಸಾಕು ಮಗಳು
  4. ಸತಿ ಶಕ್ತಿ - ರಕ್ತಾಕ್ಷ
  5. ದಾರಿ ತಪ್ಪಿದ ಮಗ - ಪ್ರಕಾಶ್
  6. ದಶಾವತಾರ
  7. ಭಕ್ತ ಪ್ರಹ್ಲಾದ - ಹಿರಣ್ಯಕಶ್ಯಪು
  8. ತುಂಬಿದ ಕೊಡ
  9. ಶ್ರೀ ಕೃಷ್ಣಗಾರುಡಿ - ಅರ್ಜುನ
  10. ಶ್ರೀ ಕನ್ನಿಕಾಪರಮೇಶ್ವರಿ ಕಥೆ - ರಾಜಾ ವಿಷ್ಣು ವರ್ಧನ

ಡಾ. ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು

ರಾಜ್ ನಾಯಕನಾಗಿ ಅಭಿನಯಿಸಿದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ)

#ವರ್ಷಚಿತ್ರಪಾತ್ರನಾಯಕಿ(ನಾಯಕಿಯರು)
೧೯೫೪ಬೇಡರ ಕಣ್ಣಪ್ಪಕಣ್ಣಪ್ಪಪಂಢರೀಬಾಯಿ
೧೯೫೫ಸೋದರಿವಿಜಯಪಂಢರೀಬಾಯಿ
೧೯೫೬ಭಕ್ತ ವಿಜಯಪಂಢರೀಬಾಯಿ, ಮೈನಾವತಿ
೧೯೫೬ಹರಿಭಕ್ತಪಂಢರೀಬಾಯಿ, ಮೈನಾವತಿ
೧೯೫೬ಓಹಿಲೇಶ್ವರ_(ಚಲನಚಿತ್ರ)ಓಹಿಲೇಶ್ವರಶ್ರೀರಂಜಿನಿ
೧೯೫೭ಸತಿ ನಳಾಯಿನಿಪಂಢರೀಬಾಯಿ
೧೯೫೭ರಾಯರ ಸೊಸೆಪಂಢರೀಬಾಯಿ
೧೯೫೮ಭೂಕೈಲಾಸರಾವಣಜಮುನಾ
೧೯೫೮ಶ್ರೀ ಕೃಷ್ಣಗಾರುಡಿಅರ್ಜುನರೇವತಿ, ಸಂಧ್ಯಾ
೧೦೧೯೫೮ಅಣ್ಣ ತಂಗಿಬಿ.ಸರೋಜಾ ದೇವಿ
೧೧೧೯೫೯ಜಗಜ್ಯೋತಿ ಬಸವೇಶ್ವರಕಳಚೂರಿ ಚಾಲುಕ್ಯ ಅರಸ ಬಿಜ್ಜಳಸಂಧ್ಯಾ
೧೨೧೯೫೯ಧರ್ಮ ವಿಜಯಹರಿಣಿ, ಲೀಲಾವತಿ
೧೩೧೯೫೯ಮಹಿಷಾಸುರ ಮರ್ಧಿನಿದಾನವ ದೊರೆ ಮಹಿಷಾಸುರಸಾಹುಕಾರ್ ಜಾನಕಿ
೧೪೧೯೫೯ಅಬ್ಬಾ ಆ ಹುಡುಗಿಮೈನಾವತಿ, ಲೀಲಾವತಿ
೧೫೧೯೬೦ರಣಧೀರ ಕಂಠೀರವಮೈಸೂರು ದೊರೆ ಕಂಠೀರವ ನರಸರಾಜ ಒಡೆಯರ್ಲೀಲಾವತಿ, ಸಂಧ್ಯಾ
೧೬೧೯೬೦ರಾಣಿ ಹೊನ್ನಮ್ಮಲೀಲಾವತಿ
೧೭೧೯೬೦ಆಶಾಸುಂದರಿಕೃಷ್ಣಕುಮಾರಿ, ಹರಿಣಿ
೧೮೧೯೬೦ದಶಾವತಾರಲೀಲಾವತಿ
೧೯೧೯೬೦ಭಕ್ತ ಕನಕದಾಸತಿಮ್ಮಪ್ಪ ನಾಯಕ/ಕನಕದಾಸಕೃಷ್ಣಕುಮಾರಿ
೨೦೧೯೬೧ಶ್ರೀಶೈಲ ಮಹಾತ್ಮೆಕೃಷ್ಣಕುಮಾರಿ, ಸಂಧ್ಯಾ
೨೧೧೯೬೧ಕಿತ್ತೂರು ಚೆನ್ನಮ್ಮಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜ ದೇಸಾಯಿಬಿ.ಸರೋಜಾ ದೇವಿ
೨೨೧೯೬೧ಕಣ್ತೆರೆದು ನೋಡುಅಂಧ ಗಾಯಕ ಗೋಪಿಲೀಲಾವತಿ
೨೩೧೯೬೧ಕೈವಾರ ಮಹಾತ್ಮೆಕೈವಾರ ನಾರಾಯಣಪ್ಪಲೀಲಾವತಿ
೨೪೧೯೬೧ಭಕ್ತ ಚೇತಚೇತಪ್ರತಿಮಾದೇವಿ
೨೫೧೯೬೧ನಾಗಾರ್ಜುನಜಿ.ವರಲಕ್ಷ್ಮಿ, ಹರಿಣಿ
೨೬೧೯೬೨ಗಾಳಿಗೋಪುರಲೀಲಾವತಿ
೨೭೧೯೬೨ಭೂದಾನಲೀಲಾವತಿ
೨೮೧೯೬೨ಸ್ವರ್ಣಗೌರಿಕೃಷ್ಣಕುಮಾರಿ, ರಾಜಶ್ರೀ
೨೯೧೯೬೨ದೇವಸುಂದರಿಬಿ.ಸರೋಜಾ ದೇವಿ
೩೦೧೯೬೨ಕರುಣೆಯೇ ಕುಟುಂಬದ ಕಣ್ಣುಲೀಲಾವತಿ
೩೧೧೯೬೨ಮಹಾತ್ಮ ಕಬೀರ್ಸಂತ ಕಬೀರಕೃಷ್ಣಕುಮಾರಿ
೩೨೧೯೬೨ವಿಧಿವಿಲಾಸಲೀಲಾವತಿ, ಹರಿಣಿ
೩೩೧೯೬೨ತೇಜಸ್ವಿನಿಪಂಢರೀಬಾಯಿ
೩೪೧೯೬೩ವಾಲ್ಮೀಕಿವಾಲ್ಮೀಕಿಲೀಲಾವತಿ, ರಾಜಸುಲೋಚನಾ
೩೫೧೯೬೩ನಂದಾದೀಪಹರಿಣಿ
೩೬೧೯೬೩ಸಾಕು ಮಗಳುಸಾಹುಕಾರ್ ಜಾನಕಿ
೩೭೧೯೬೩ಕನ್ಯಾರತ್ನಲೀಲಾವತಿ, ಸಾಹುಕಾರ್ ಜಾನಕಿ
೩೮೧೯೬೩ಗೌರಿಸಾಹುಕಾರ್ ಜಾನಕಿ
೩೯೧೯೬೩ಜೀವನ ತರಂಗಲೀಲಾವತಿ
೪೦೧೯೬೩ಮಲ್ಲಿ ಮದುವೆಸಾಹುಕಾರ್ ಜಾನಕಿ
೪೧೧೯೬೩ಕುಲವಧುಲೀಲಾವತಿ
೪೨೧೯೬೩ಕಲಿತರೂ ಹೆಣ್ಣೇಲೀಲಾವತಿ
೪೩೧೯೬೩ವೀರಕೇಸರಿನರಸಿಂಹಲೀಲಾವತಿ
೪೪೧೯೬೩ಮನ ಮೆಚ್ಚಿದ ಮಡದಿಲೀಲಾವತಿ
೪೫೧೯೬೩ಸತಿ ಶಕ್ತಿದ್ವಿಪಾತ್ರ: ರಾಜ ವಿರೂಪಾಕ್ಷ ಮತ್ತು ಆತನ ತಮ್ಮ ದುಷ್ಟ ರಕ್ತಾಕ್ಷಸಾಹುಕಾರ್ ಜಾನಕಿ
೪೬೧೯೬೩ಚಂದ್ರಕುಮಾರಕೃಷ್ಣಕುಮಾರಿ
೪೭೧೯೬೩ಸಂತ ತುಕಾರಾಮತುಕಾರಾಮ್ಲೀಲಾವತಿ
೪೮೧೯೬೩ಶ್ರೀರಾಮಾಂಜನೇಯ ಯುದ್ಧರಾಮಆದವಾನಿ ಲಕ್ಷ್ಮಿ ದೇವಿ
೪೯೧೯೬೪ನವಕೋಟಿ ನಾರಾಯಣಪುರಂದರದಾಸಸಾಹುಕಾರ್ ಜಾನಕಿ
೫೦೧೯೬೪ಚಂದವಳ್ಳಿಯ ತೋಟಜಯಂತಿ
೫೧೧೯೬೪ಶಿವರಾತ್ರಿ ಮಹಾತ್ಮೆಲೀಲಾವತಿ
೫೨೧೯೬೪ಅನ್ನಪೂರ್ಣಪಂಢರೀಬಾಯಿ, ಮೈನಾವತಿ
೫೩೧೯೬೪ತುಂಬಿದ ಕೊಡಲೀಲಾವತಿ
೫೪೧೯೬೪ಶಿವಗಂಗೆ ಮಹಾತ್ಮೆಲೀಲಾವತಿ
೫೫೧೯೬೪ಮುರಿಯದ ಮನೆಜಯಂತಿ
೫೬೧೯೬೪ಪ್ರತಿಜ್ಞೆವೈದ್ಯಜಯಂತಿ
೫೭೧೯೬೪ನಾಂದಿಶಾಲಾ ಮೇಷ್ಟ್ರು ಮೂರ್ತಿಹರಿಣಿ, ಕಲ್ಪನಾ
೫೮೧೯೬೫ನಾಗಪೂಜಲೀಲಾವತಿ
೫೯೧೯೬೫ಚಂದ್ರಹಾಸಚಂದ್ರಹಾಸಲೀಲಾವತಿ
೬೦೧೯೬೫ಸರ್ವಜ್ಞಮೂರ್ತಿಸರ್ವಜ್ಞಹರಿಣಿ, ಮೈನಾವತಿ
೬೧೧೯೬೫ವಾತ್ಸಲ್ಯಲೀಲಾವತಿ, ಜಯಂತಿ
೬೨೧೯೬೫ಸತ್ಯ ಹರಿಶ್ಚಂದ್ರಸತ್ಯ ಹರಿಶ್ಚಂದ್ರಪಂಢರೀಬಾಯಿ
೬೩೧೯೬೫ಮಹಾಸತಿ ಅನುಸೂಯಮಹರ್ಷಿ ಅತ್ರಿಪಂಢರೀಬಾಯಿ
೬೪೧೯೬೫ಇದೇ ಮಹಾ ಸುದಿನಲೀಲಾವತಿ
೬೫೧೯೬೫ಬೆಟ್ಟದ ಹುಲಿಡಕಾಯತ ರಾಜಜಯಂತಿ
೬೬೧೯೬೫ಸತಿ ಸಾವಿತ್ರಿಕೃಷ್ಣಕುಮಾರಿ
೬೭೧೯೬೫ಮದುವೆ ಮಾಡಿ ನೋಡುಲೀಲಾವತಿ
೬೮೧೯೬೫ಪತಿವ್ರತಾಹರಿಣಿ
೬೯೧೯೬೬ಮಂತ್ರಾಲಯ ಮಹಾತ್ಮೆರಾಘವೇಂದ್ರ ಸ್ವಾಮಿಜಯಂತಿ
೭೦೧೯೬೬ಕಠಾರಿವೀರಉದಯಚಂದ್ರಿಕಾ
೭೧೧೯೬೬ಬಾಲನಾಗಮ್ಮರಾಜಶ್ರೀ
೭೨೧೯೬೬ತೂಗುದೀಪಲೀಲಾವತಿ
೭೩೧೯೬೬ಪ್ರೇಮಮಯಿಲೀಲಾವತಿ
೭೪೧೯೬೬ಕಿಲಾಡಿ ರಂಗಜಯಂತಿ
೭೫೧೯೬೬ಮಧುಮಾಲತಿಭಾರತಿ
೭೬೧೯೬೬ಎಮ್ಮೆ ತಮ್ಮಣ್ಣಭಾರತಿ, ಜಿ.ವಿ.ಲತಾ
೭೭೧೯೬೬ಮೋಹಿನಿ ಭಸ್ಮಾಸುರಲೀಲಾವತಿ
೭೮೧೯೬೬ಶ್ರೀ ಕನ್ನಿಕಾಪರಮೇಶ್ವರಿ ಕಥೆಕಲ್ಪನಾ, ಪಂಢರೀಬಾಯಿ
೭೯೧೯೬೬ಸಂಧ್ಯಾರಾಗಭಾರತಿ
೮೦೧೯೬೭ಪಾರ್ವತಿ_ಕಲ್ಯಾಣ_(ಚಲನಚಿತ್ರ)ಚಂದ್ರಕಲಾ
೮೧೧೯೬೭ಸತಿಸುಕನ್ಯಹರಿಣಿ
೮೨೧೯೬೭ಗಂಗೆ ಗೌರಿಲೀಲಾವತಿ
೮೩೧೯೬೭ರಾಜಶೇಖರಭಾರತಿ, ವಂದನಾ
೮೪೧೯೬೭ಲಗ್ನಪತ್ರಿಕೆಜಯಂತಿ
೮೫೧೯೬೭ರಾಜದುರ್ಗದ ರಹಸ್ಯಭಾರತಿ
೮೬೧೯೬೭ದೇವರ ಗೆದ್ದ ಮಾನವಜಯಂತಿ
೮೭೧೯೬೭ಬೀದಿ ಬಸವಣ್ಣಭಾರತಿ
೮೮೧೯೬೭ಮನಸ್ಸಿದ್ದರೆ ಮಾರ್ಗಜಯಂತಿ
೮೯೧೯೬೭ಬಂಗಾರದ ಹೂವುಕಲ್ಪನಾ, ಶೈಲಶ್ರೀ
೯೦೧೯೬೭ಚಕ್ರತೀರ್ಥಜಯಂತಿ
೯೧೧೯೬೭ ಇಮ್ಮಡಿ ಪುಲಿಕೇಶಿಇಮ್ಮಡಿ ಪುಲಿಕೇಶಿಜಯಂತಿ
೯೨೧೯೬೮ಜೇಡರ ಬಲೆಜಯಂತಿ, ಶೈಲಶ್ರೀ
೯೩೧೯೬೮ಗಾಂಧಿನಗರಕಲ್ಪನಾ, ಬಿ.ವಿ.ರಾಧ
೯೪೧೯೬೮ಮಹಾಸತಿ ಅರುಂಧತಿಕಲ್ಪನಾ
೯೫೧೯೬೮ಮನಸ್ಸಾಕ್ಷಿಭಾರತಿ
೯೬೧೯೬೮ಸರ್ವಮಂಗಳಕಲ್ಪನಾ
೯೭೧೯೬೮ಭಾಗ್ಯದೇವತೆಲೀಲಾವತಿ, ಬಿ.ವಿ.ರಾಧ, ಉದಯಚಂದ್ರಿಕಾ
೯೮೧೯೬೮ಬೆಂಗಳೂರು ಮೈಲ್ಜಯಂತಿ
೯೯೧೯೬೮ಹಣ್ಣೆಲೆ ಚಿಗುರಿದಾಗಕಲ್ಪನಾ
೧೦೦೧೯೬೮ಭಾಗ್ಯದ ಬಾಗಿಲುವಂದನಾ, ಬಿ.ವಿ.ರಾಧ
೧೦೧೧೯೬೮ನಟಸಾರ್ವಭೌಮ
೧೦೨೧೯೬೮ರೌಡಿ ರಂಗಣ್ಣಜಯಂತಿ. ಚಂದ್ರಕಲಾ
೧೦೩೧೯೬೮ಧೂಮಕೇತು (ಚಲನಚಿತ್ರ)ಉದಯಚಂದ್ರಿಕಾ
೧೦೪೧೯೬೮ಅಮ್ಮಭಾರತಿ
೧೦೫೧೯೬೮ಸಿಂಹಸ್ವಪ್ನಜಯಂತಿ
೧೦೬೧೯೬೮ಗೋವಾದಲ್ಲಿ ಸಿ.ಐ.ಡಿ. ೯೯೯ಲಕ್ಷ್ಮಿ
೧೦೭೧೯೬೮ಮಣ್ಣಿನ ಮಗಕಲ್ಪನಾ
೧೦೮೧೯೬೯ಮಾರ್ಗದರ್ಶಿಚಂದ್ರಕಲಾ
೧೦೯೧೯೬೯ಗಂಡೊಂದು ಹೆಣ್ಣಾರುಭಾರತಿ
೧೧೦೧೯೬೯ಮಲ್ಲಮ್ಮನ ಪವಾಡಬಿ.ಸರೋಜಾ ದೇವಿ
೧೧೧೧೯೬೯ಚೂರಿ ಚಿಕ್ಕಣ್ಣಜಯಂತಿ
೧೧೨೧೯೬೯ಪುನರ್ಜನ್ಮಜಯಂತಿ, ಚಂದ್ರಕಲಾ
೧೧೩೧೯೬೯ಭಲೇ ರಾಜಜಯಂತಿ
೧೧೪೧೯೬೯ಉಯ್ಯಾಲೆಕಲ್ಪನಾ
೧೧೫೧೯೬೯ಚಿಕ್ಕಮ್ಮಜಯಂತಿ
೧೧೬೧೯೬೯ಮೇಯರ್ ಮುತ್ತಣ್ಣಮುತ್ತಣ್ಣಭಾರತಿ
೧೧೭೧೯೬೯ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯ರೇಖಾ, ಸುರೇಖಾ
೧೧೮೧೯೭೦ಶ್ರೀ ಕೃಷ್ಣದೇವರಾಯರಾಜ ಕೃಷ್ಣದೇವರಾಯಭಾರತಿ, ಜಯಂತಿ
೧೧೯೧೯೭೦ಕರುಳಿನ ಕರೆಕಲ್ಪನಾ
೧೨೦೧೯೭೦ಹಸಿರು ತೋರಣಭಾರತಿ
೧೨೧೧೯೭೦ಭೂಪತಿ ರಂಗರಂಗಾಉದಯಚಂದ್ರಿಕಾ
೧೨೨೧೯೭೦ಮಿಸ್ಟರ್ ರಾಜ್‍ಕುಮಾರ್ರಾಜ್ ಕುಮಾರ್ರಾಜಶ್ರೀ
೧೨೩೧೯೭೦ಭಲೇ ಜೋಡಿಭಾರತಿ, ಬಿ.ವಿ.ರಾಧ
೧೨೪೧೯೭೦ಸಿ.ಐ.ಡಿ. ರಾಜಣ್ಣರಾಜಣ್ಣರಾಜಶ್ರೀ
೧೨೫೧೯೭೦ನನ್ನ ತಮ್ಮಜಯಂತಿ
೧೨೬೧೯೭೦ಬಾಳು ಬೆಳಗಿತುಭಾರತಿ, ಜಯಂತಿ
೧೨೭೧೯೭೦ದೇವರ ಮಕ್ಕಳುಜಯಂತಿ
೧೨೮೧೯೭೦ಪರೋಪಕಾರಿಜಯಂತಿ
೧೨೯೧೯೭೧ಕಸ್ತೂರಿ ನಿವಾಸಉದ್ಯಮಿ ರವಿವರ್ಮಜಯಂತಿ, ಆರತಿ
೧೩೦೧೯೭೧ಬಾಳ ಬಂಧನಜಯಂತಿ
೧೩೧೧೯೭೧ಕುಲಗೌರವಜಯಂತಿ, ಭಾರತಿ
೧೩೨೧೯೭೧ನಮ್ಮ ಸಂಸಾರಭಾರತಿ
೧೩೩೧೯೭೧ಕಾಸಿದ್ರೆ ಕೈಲಾಸವಾಣಿಶ್ರೀ
೧೩೪೧೯೭೧ತಾಯಿದೇವರುಭಾರತಿ
೧೩೫೧೯೭೧ಪ್ರತಿಧ್ವನಿ (ಚಲನಚಿತ್ರ)ಆರತಿ
೧೩೬೧೯೭೧ಸಾಕ್ಷಾತ್ಕಾರಜಮುನಾ
೧೩೭೧೯೭೧ನ್ಯಾಯವೇ ದೇವರುಬಿ.ಸರೋಜಾ ದೇವಿ
೧೩೮೧೯೭೧ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಕೃಷ್ಣಬಿ.ಸರೋಜಾ ದೇವಿ, ಭಾರತಿ
೧೩೯೧೯೭೨ಜನ್ಮರಹಸ್ಯಭಾರತಿ
೧೪೦೧೯೭೨ಸಿಪಾಯಿರಾಮುರಾಮುಲೀಲಾವತಿ, ಆರತಿ
೧೪೧೧೯೭೨ಬಂಗಾರದ ಮನುಷ್ಯರಾಜೀವಭಾರತಿ
೧೪೨೧೯೭೨ಹೃದಯ ಸಂಗಮದ್ವಿಪಾತ್ರಭಾರತಿ
೧೪೩೧೯೭೨ಕ್ರಾಂತಿವೀರದೊರೆ ಚಂದ್ರಕುಮಾರ್ಜಯಂತಿ
೧೪೪೧೯೭೨ಭಲೇ_ಹುಚ್ಚ_(ಚಲನಚಿತ್ರ)ಆರತಿ
೧೪೫೧೯೭೨ನಂದಗೋಕುಲಜಯಂತಿ
೧೪೬೧೯೭೨ಜಗಮೆಚ್ಚಿದ ಮಗಭಾರತಿ
೧೪೭೧೯೭೩ದೇವರು ಕೊಟ್ಟ ತಂಗಿಜಯಂತಿ, ಬಿ.ವಿ.ರಾಧ
೧೪೮೧೯೭೩ಬಿಡುಗಡೆ (ಚಲನಚಿತ್ರ)ಪತ್ರಕರ್ತಭಾರತಿ
೧೪೯೧೯೭೩ಸ್ವಯಂವರ (ಚಲನಚಿತ್ರ)ಗಣಿ ಕಾರ್ಮಿಕ ನಟರಾಜಭಾರತಿ
೧೫೦೧೯೭೩ಗಂಧದ ಗುಡಿರೇಂಜ್ ಅರಣ್ಯ ಅಧಿಕಾರಿ ಕುಮಾರ್ಕಲ್ಪನಾ
೧೫೧೧೯೭೩ದೂರದ ಬೆಟ್ಟಭಾರತಿ
೧೫೨೧೯೭೩ಮೂರೂವರೆ ವಜ್ರಗಳುದ್ವಿಪಾತ್ರ ನಾರದ, ಶ್ರೀ ಕೃಷ್ಣಆರತಿ, ಮಂಜುಳಾ
೧೫೩೧೯೭೪ಬಂಗಾರದ ಪಂಜರಆರತಿ
೧೫೪೧೯೭೪ಎರಡು ಕನಸುಇಂಗ್ಲೀಷ್ ಪ್ರೊಫೆಸರ್ ರಾಮಚಂದ್ರರಾವ್ಮಂಜುಳಾ, ಕಲ್ಪನಾ
೧೫೫೧೯೭೪ಸಂಪತ್ತಿಗೆ ಸವಾಲ್ವೀರಭದ್ರಮಂಜುಳಾ
೧೫೬೧೯೭೪ಭಕ್ತ ಕುಂಬಾರಗೋರಾ ಕುಂಬಾರಲೀಲಾವತಿ, ಮಂಜುಳಾ
೧೫೭೧೯೭೪ಶ್ರೀ ಶ್ರೀನಿವಾಸ ಕಲ್ಯಾಣವೆಂಕಟೇಶ್ವರಬಿ.ಸರೋಜಾ ದೇವಿ, ಮಂಜುಳಾ
೧೫೮೧೯೭೪ದಾರಿ ತಪ್ಪಿದ ಮಗದ್ವಿಪಾತ್ರ ಇಂಗ್ಲೀಷ್ ಪ್ರೊಫೆಸರ್ ಪ್ರಸಾದ್, ಕಳ್ಳಸಾಗಣೆದಾರ ಪ್ರಶಾಂತ್,ಕಲ್ಪನಾ, ಆರತಿ, ಮಂಜುಳಾ, ಜಯಮಾಲ
೧೫೯೧೯೭೫ಮಯೂರಕದಂಬ ವಂಶದ ದೊರೆ ಮಯೂರ ಶರ್ಮಮಂಜುಳಾ
೧೬೦೧೯೭೫ತ್ರಿಮೂರ್ತಿವಿಜಯ್, ಕುಮಾರ್, ನರಹರಿ, ಶ್ರೀಧರಜಯಮಾಲ
೧೬೧೧೯೭೬ಪ್ರೇಮದ ಕಾಣಿಕೆಮನೋಹರ್ಆರತಿ
೧೬೨೧೯೭೬ಬಹದ್ದೂರ್ ಗಂಡುಬಂಕಾಪುರದ ಪಂಜುಜಯಂತಿ, ಆರತಿ
೧೬೩೧೯೭೬ರಾಜ ನನ್ನ ರಾಜಅರಸುಮಗ ಚಂದ್ರವರ್ಮ, ಬ್ಯಾಂಕ್ ಅಧಿಕಾರಿ ರಾಜುಆರತಿ
೧೬೪೧೯೭೬ನಾ ನಿನ್ನ ಮರೆಯಲಾರೆಬ್ಯಾಂಕ್ ಅಧಿಕಾರಿ ಆನಂದ್ಲಕ್ಷ್ಮಿ
೧೬೫೧೯೭೬ಬಡವರ ಬಂಧುಹೋಟೆಲ್ ಮಾಣಿ ರಂಗನಾಥ್ಜಯಮಾಲ
೧೬೬೧೯೭೭ಬಬ್ರುವಾಹನ (ಚಲನಚಿತ್ರ) • ಅರ್ಜುನ
 • ಬಬ್ರುವಾಹನ
ಬಿ.ಸರೋಜಾ ದೇವಿ, ಕಾಂಚನಾ, ಜಯಮಾಲ
೧೬೭೧೯೭೭ಭಾಗ್ಯವಂತರುಬಿ.ಸರೋಜಾ ದೇವಿ
೧೬೮೧೯೭೭ಗಿರಿಕನ್ಯೆ_(ಚಲನಚಿತ್ರ)ಜಯಮಾಲ
೧೬೯೧೯೭೭ಸನಾದಿ ಅಪ್ಪಣ್ಣಸನಾದಿ ಅಪ್ಪಣ್ಣಜಯಪ್ರದಾ
೧೭೦೧೯೭೭ಒಲವು ಗೆಲವುಲಕ್ಷ್ಮಿ
೧೭೧೧೯೭೮ಶಂಕರ್ ಗುರುತ್ರಿಪಾತ್ರ

ಉದ್ಯಮಿ ರಾಜಶೇಖರ್

ಪೋಲಿಸ್ ಸಿ.ಐ.ಡಿ. ಅಧಿಕಾರಿ ಶಂಕರ್

ವಿದ್ಯಾರ್ಥಿ ಗುರುಮೂರ್ತಿ

ಕಾಂಚನಾ, ಜಯಮಾಲ, ಪದ್ಮಪ್ರಿಯ
೧೭೨೧೯೭೮ಆಪರೇಷನ್ ಡೈಮಂಡ್ ರ್ಯಾಕೆಟ್ಸಿ.ಐ.ಡಿ ಏಜೆಂಟ್ 999 ಪ್ರಕಾಶ್ಪದ್ಮಪ್ರಿಯ
೧೭೩೧೯೭೮ತಾಯಿಗೆ ತಕ್ಕ ಮಗಪದ್ಮಪ್ರಿಯ
೧೭೪೧೯೭೯ಹುಲಿಯ ಹಾಲಿನ ಮೇವುಕೊಡಗು ಸಂಸ್ಥಾನದ ರಾಜರ ಅಂಗರಕ್ಷಕ ಚಂಗುಮಣಿಜಯಪ್ರದಾ, ಜಯಚಿತ್ರಾ
೧೭೫೧೯೭೯ನಾನೊಬ್ಬ ಕಳ್ಳಪೋಲಿಸ್ ಸೂಪರಿಂಟೆಂಡೆಂಟ್ ಮುತ್ತುರಾಜು

ಕಳ್ಳ ರಾಜ

ಲಕ್ಷ್ಮಿ, ಕಾಂಚನಾ
೧೭೬೧೯೮೦ರವಿಚಂದ್ರ • ರವಿ
 • ಚಂದ್ರ
ಲಕ್ಷ್ಮಿ
೧೭೭೧೯೮೦ವಸಂತಗೀತಇನ್ಷೂರೆನ್ಸ್ ಏಜೆಂಟ್ ವಸಂತ್ ಕುಮಾರ್ಗಾಯತ್ರಿ
೧೭೮೧೯೮೧ಹಾವಿನ ಹೆಡೆಸುಲಕ್ಷಣಾ
೧೭೯೧೯೮೧ನೀ ನನ್ನ ಗೆಲ್ಲಲಾರೆಮಂಜುಳಾ
೧೮೦೧೯೮೧ಕೆರಳಿದ ಸಿಂಹಪೋಲಿಸ್ ಇನ್ಸ್ಪೆಕ್ಟರ್ ಶಂಕರ್ಸರಿತಾ
೧೮೧೧೯೮೨ಹೊಸಬೆಳಕುರವಿಸರಿತಾ
೧೮೨೧೯೮೨ಹಾಲು ಜೇನುರಂಗಮಾಧವಿ, ರೂಪಾದೇವಿ
೧೮೩೧೯೮೨ಚಲಿಸುವ ಮೋಡಗಳುವಕೀಲ ಮೋಹನ್ಸರಿತಾ, ಅಂಬಿಕಾ
೧೮೪೧೯೮೩ಕವಿರತ್ನ ಕಾಳಿದಾಸಕಾಳಿದಾಸಜಯಪ್ರದಾ
೧೮೫೧೯೮೩ಕಾಮನಬಿಲ್ಲುಅರ್ಚಕ ಮತ್ತು ರೈತ ಸೂರ್ಯನಾರಾಯಣ ಶಾಸ್ತ್ರಿಸರಿತಾ
೧೮೬೧೯೮೩ಭಕ್ತ ಪ್ರಹ್ಲಾದಹಿರಣ್ಯಕಶಿಪುಸರಿತಾ
೧೮೭೧೯೮೩ಎರಡು ನಕ್ಷತ್ರಗಳುಸೇನಾಧಿಕಾರಿಯ ಮಗ ರಾಜಅಂಬಿಕಾ
೧೮೮೧೯೮೪ಸಮಯದ ಗೊಂಬೆಅನಿಲ್/ಚಾಲಕ ಗುರುಮೂರ್ತಿರೂಪಾದೇವಿ, ಮೇನಕಾ
೧೮೯೧೯೮೪ಶ್ರಾವಣ ಬಂತುಪಾಪ್ ಗಾಯಕ ಕುಮಾರ್/ಪೀಟರ್ ಫ್ರಂ ಪೀಟರ್ಸ್ ಬರ್ಗ್/ಆಶುಕವಿಊರ್ವಶಿ
೧೯೦೧೯೮೪ಯಾರಿವನುಇನ್ಸ್ ಪೆಕ್ಟರ್ರೂಪಾದೇವಿ
೧೯೧೧೯೮೪ಅಪೂರ್ವ ಸಂಗಮಗೋಪಿ/ಪೋಲಿಸ್ ಸೂಪರಿಂಟೆಂಡೆಂಟ್ ಸಂತೋಷ್ ಕುಮಾರ್ಅಂಬಿಕಾ
೧೯೨೧೯೮೫ಅದೇ ಕಣ್ಣುದ್ವಿಪಾತ್ರದಲ್ಲಿಗಾಯತ್ರಿ, ವಿಜಯರಂಜಿನಿ
೧೯೩೧೯೮೫ಜ್ವಾಲಾಮುಖಿಪ್ರೊಫೆಸರ್ ಮತ್ತು ಪತ್ರಕರ್ತ ಜಯಸಿಂಹಗಾಯತ್ರಿ
೧೯೪೧೯೮೫ಧ್ರುವತಾರೆವಕೀಲ ಸಾಗರ್ಗೀತಾ_(ನಟಿ)
೧೯೫೧೯೮೬ಭಾಗ್ಯದ ಲಕ್ಷ್ಮಿ ಬಾರಮ್ಮಪಾಂಡುರಂಗಮಾಧವಿ
೧೯೬೧೯೮೬ಅನುರಾಗ ಅರಳಿತುಮೆಕ್ಯಾನಿಕ್ ಶಂಕರ್ಮಾಧವಿ, ಗೀತಾ_(ನಟಿ)
೧೯೭೧೯೮೬ಗುರಿಕಸ್ಟಂಸ್ ಅಧಿಕಾರಿ ಕಾಳೀಪ್ರಸಾದ್ಅರ್ಚನಾ
೧೯೮೧೯೮೭ಒಂದು ಮುತ್ತಿನ ಕಥೆಮೀನುಗಾರ ಐತುಅರ್ಚನಾ
೧೯೯೧೯೮೭ಶ್ರುತಿ ಸೇರಿದಾಗವೈದ್ಯ ಮತ್ತು ಗಾಯಕ ಡಾ. ಮೂರ್ತಿಗೀತಾ_(ನಟಿ), ಮಾಧವಿ
೨೦೦೧೯೮೮ದೇವತಾ ಮನುಷ್ಯಚಾಲಕ ಮೂರ್ತಿಗೀತಾ_(ನಟಿ)
೨೦೧೧೯೮೯ಪರಶುರಾಮ್ಭಾರತೀಯ ಭೂಸೇನೆ ಮೇಜರ್ ಪರಶುರಾಮ್ವಾಣಿ ವಿಶ್ವನಾಥ್, ಮಹಾಲಕ್ಷ್ಮಿ
೨೦೨೧೯೯೨ಜೀವನ ಚೈತ್ರಸಿಂಹಾದ್ರಿ ಜೋಡಿದಾರ್ ವಿಶ್ವನಾಥ ರಾವ್ಮಾಧವಿ
೨೦೩೧೯೯೩ಆಕಸ್ಮಿಕಇನ್ಸ್ಪೆಕ್ಟರ್ ನರಸಿಂಹ ಮೂರ್ತಿಮಾಧವಿ. ಗೀತಾ_(ನಟಿ)
೨೦೪೧೯೯೪ಒಡಹುಟ್ಟಿದವರುರಾಮಣ್ಣಮಾಧವಿ
೨೦೫೨೦೦೦ಶಬ್ದವೇಧಿಇನ್ಸ್ಪೆಕ್ಟರ್ ಸಂದೀಪ್ಜಯಪ್ರದಾ

ಅತಿಥಿ ನಟನಾಗಿ ಅಭಿನಯಿಸಿದ ಚಿತ್ರಗಳು

  1. ಶ್ರೀನಿವಾಸ ಕಲ್ಯಾಣ ೧೯೫೧
  2. ಗಂಧದ ಗುಡಿ ಭಾಗ ೨
  3. ಜೋಗಿ

ಗಾಯಕರಾಗಿ ಡಾ. ರಾಜ್

೧೯೬೨ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಡಾ. ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆ ಗಾಯನ ಮಾಡಿದ ಮೊದಲ ಚಿತ್ರಗೀತೆಯಿದು.
೧೯೬೪ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆ ಗಳನ್ನು ಹಾಡಿದ್ದಾರೆ.

  • ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು.

೨೦೦೩ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ "ವಿಧಿ ಬರಹ ಎಂಥ ಘೋರ" ಹಾಗು ಅದೇ ವರ್ಷದ ಚಿಗುರಿದ ಕನಸು ಚಿತ್ರದ "ಬಂಧುವೇ ಓ ಬಂಧುವೇ" ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ.

  • ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ - ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು.
  • ರಾಜ್ ಕುಮಾರ್ ಅವರು ತಮ್ಮ ಹೆಚ್ಚಿನ ಹಾಡುಗಳನ್ನು ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರೊಂದಿಗೆ ಹಾಡಿದ್ದಾರೆ. ಅಲ್ಲದೆ, ಪಿ. ಸುಶೀಲ, ಬೆಂಗಳೂರು ಲತಾ, ರತ್ನಮಾಲ ಪ್ರಕಾಶ್, ಮಂಜುಳಾ ಗುರುರಾಜ್, ಬಿ. ಆರ್. ಛಾಯಾ, ಕಸ್ತೂರಿ ಶಂಕರ್, ಚಿತ್ರಾ, ಸುಲೋಚನಾ ಅವರೊಂದಿಗೂ ಯುಗಳಗೀತೆಗಳನ್ನು ಹಾಡಿದ್ದಾರೆ.
  • ಹುಟ್ಟಿದರೇ ಕನ್ನಡನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ, ಕನ್ನಡ ಮಣ್ಣನ್ ಮೆಟ್ಟಬೇಕು ಗೀತೆಯನ್ನು ಸಾಮಾನ್ಯವಾಗಿ ಹೋದೆಡೆಯಲ್ಲೆಲ್ಲಾ ಹಾಡುತ್ತಿದ್ದರು. ತಮ್ಮ 'ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ', ವನ್ನು ದೆಹಲಿಯಲ್ಲಿ ಪಡೆದ ಬಳಿಕ, ಮುಂಬಯಿ ಗೆ ಭೇಟಿಕೊಟ್ಟಾಗ, 'ಕರ್ನಾಟಕ ಸಂಘ' ದ ರಂಗಮಂಚದ ಮೇಲೆ, ಮೇಲಿನ ಗೀತೆಯನ್ನು ಅವರ ಮಕ್ಕಳ ಸಮೇತ ಕುಣಿದು-ಕುಪ್ಪಳಿಸಿ ಹಾಡಿದ ಸಡಗರ ಇನ್ನೂ ಮುಂಬಯಿ ನಗರದ, ಕನ್ನಡ ರಸಿಕರ ಮನದಲ್ಲಿ ಹಸಿರಾಗಿ ಉಳಿದಿದೆ.
  • ರಾಷ್ಟ್ರಕವಿ ಕುವೆಂಪು ರಚಿಸಿದ 'ಕನ್ನಡವೇ ಸತ್ಯ' ಹಾಡನ್ನು ಡಾ. ರಾಜಕುಮಾರ್‌ ಭಾವಗೀತೆಯ ಮೇರು ಕಲಾವಿದ ಡಾ. ಸಿ.ಅಶ್ವತ್ಥ್‌ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು.

ಕನ್ನಡಪರ ಚಳುವಳಿಗಳಲ್ಲಿ ಡಾ. ರಾಜ್

ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್
  • ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. ೧೯೮೧ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು.
  • ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು.
  • ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು. ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು.
  • ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ. ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು. ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು.

ಪ್ರಶಸ್ತಿ/ ಪುರಸ್ಕಾರಗಳು/ಬಿರುದುಗಳು

ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್

ಪ್ರಶಸ್ತಿಗಳು

  1. ಪದ್ಮಭೂಷಣ (ಭಾರತ ಸರ್ಕಾರದಿಂದ)
  2. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ)
  3. ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ)
  4. ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ)
  5. ಅತ್ಯುತ್ತಮ ನಟ - ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ)
  6. ಅತ್ಯುತ್ತಮ ನಟ - ರಾಜ್ಯಪ್ರಶಸ್ತಿ (ಒಂಭತ್ತು ಬಾರಿ)
  7. ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು)
  8. ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ)
  9. ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ)
  10. ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ)

ಪದವಿಗಳು

  1. ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ)

ಬಿರುದುಗಳು

  1. ಅಭಿನಯ ಕಲಾಶ್ರೀ
  2. ಅಭಿನಯ ಕೇಸರಿ
  3. ಅಭಿನಯ ಚಕ್ರೇಶ್ವರ
  4. ಅಭಿನಯ ನೃಪತುಂಗ
  5. ಅಭಿನಯ ಬ್ರಹ್ಮ
  6. ಅಭಿನಯ ಭಗೀರಥ
  7. ಅಭಿನಯ ಭಾರ್ಗವ
  8. ಅಭಿನಯ ರತ್ನ
  9. ಅಭಿನಯ ವಾಲ್ಮೀಕಿ
  10. ಅಭಿನಯ ಶಿರೋಮಣಿ
  11. ಅಭಿನಯ ಸಂಜಾತ
  12. ಅಭಿನಯ ಸವ್ಯಸಾಚಿ
  13. ಅಭಿನಯ ಸಿಂಹ
  14. ಅಭಿನಯ ಸೃಷ್ಟಿಕರ್ತ
  15. ಅಮರ ಜೀವಿ
  16. ಅಮರ ಜ್ಯೋತಿ
  17. ಕನ್ನಡ ಕಂಠೀರವ
  18. ಕನ್ನಡ ಕಲಾ ಕಿರೀಟ
  19. ಕನ್ನಡ ಕಲಾ ಕುಸುಮ
  20. ಕನ್ನಡ ಕಲಾ ತಿಲಕ
  21. ಕನ್ನಡ ಕುಲ ರತ್ನ
  22. ಕನ್ನಡ ಕೇಸರಿ
  23. ಕನ್ನಡ ಗಾನ ಕೌಸ್ತುಭ
  24. ಕನ್ನಡ ಜನಕೋಟಿಯ ಪ್ರೀತಿಯ ಪುತ್ಥಳಿ
  25. ಕನ್ನಡ ತಾಯಿಯ ಹೆಮ್ಮೆಯ ಮಗ
  26. ಕನ್ನಡದ ರಕ್ಷಕ
  27. ಕನ್ನಡದ ಕಣ್ಮಣಿ
  28. ಕನ್ನಡದ ಕಂದ
  29. ಕನ್ನಡದ ಕಲಿ
  30. ಕನ್ನಡದ ಕಳಶ
  31. ಕನ್ನಡದ ಕುಲ ದೇವ
  32. ಕನ್ನಡದ ಚೇತನ
  33. ಕನ್ನಡದ ಜೀವ
  34. ಕನ್ನಡದ ಧ್ರುವತಾರೆ
  35. ಕನ್ನಡದ ನಂದಾ ದೀಪ
  36. ಕನ್ನಡದ ಬಂಧು
  37. ಕನ್ನಡದ ಭೂ ಪಟ
  38. ಕನ್ನಡದ ಮಾಣಿಕ್ಯ
  39. ಕನ್ನಡದ ಮೇಷ್ಟ್ರು
  40. ಕನ್ನಡದ ವಿಧಾತ
  41. ಕನ್ನಡಿಗರ ಆರಾಧ್ಯ ದೈವ
  42. ಕನ್ನಡಿಗರ ಕಣ್ಮಣಿ
  43. ಕನ್ನಡಿಗರ ಹೃದಯ ಸಿಂಹಾಸಾನಾಧೀಶ್ವರ
  44. ಕರುನಾಡ ಅಧಿಪತಿ
  45. ಕರುನಾಡ ಕಲಾ ನಿಧಿ
  46. ಕರುನಾಡ ಹುಲಿ
  47. ಕರ್ನಾಟಕ ಕೀರ್ತಿವರ್ಮ
  48. ಕರ್ನಾಟಕ ರತ್ನ
  49. ಕರ್ನಾಟಕ ಸಾಂಸ್ಕೃತಿಕ ರಾಯಭಾರಿ
  50. ಕಲಾ ಆರಾಧಕ
  51. ಕಲಾ ಕಮಲ ರಾಜಹಂಸ
  52. ಕಲಾ ಕರ್ಮಯೋಗಿ
  53. ಕಲಾ ಕುಸುಮ
  54. ಕಲಾ ಕೌಸ್ತುಭ
  55. ಕಲಾ ಜ್ಯೋತಿ
  56. ಕಲಾ ತಪಸ್ವಿ
  57. ಕಲಾ ತೇಜ
  58. ಕಲಾ ದಾಹಿ
  59. ಕಲಾ ದೀವಿಗೆ
  60. ಕಲಾ ಪುಂಗವ
  61. ಕಲಾ ಪುರುಷೋತ್ತಮ
  62. ಕಲಾ ಪೋಷಕ
  63. ಕಲಾ ಭಕ್ತ
  64. ಕಲಾ ಭೂಷಣ
  65. ಕಲಾ ಯೋಗಿ
  66. ಕಲಾ ವಿನೀತ
  67. ಕಲಾ ಶ್ರೇಷ್ಠ
  68. ಕಲಾ ಸಿರಿ ರತ್ನ
  69. ಕಾಯಕ ಯೋಗಿ
  70. ಕಾಯಕ ರತ್ನ
  71. ಕೃಷ್ಣಾನುಗ್ರಹಿ
  72. ಕೆಂಟಕಿ ಕರ್ನಲ್
  73. ಗಾಜನೂರು ಗಂಡು
  74. ಗಾನ ಕಲಾಶ್ರೀ
  75. ಗಾನ ಕೋಗಿಲೆ
  76. ಗಾನ ಗಂಗೆ
  77. ಗಾನ ಗಂಧರ್ವ
  78. ಗಾನ ಗಾರುಡಿಗ
  79. ಗಾನ ಜ್ಯೋತಿ
  80. ಗಾನ ತರಂಗ
  81. ಗಾನ ಯೋಗಿ
  82. ಗಾನ ರಸಿಕ
  83. ಗಾನ ಲಹರಿ
  84. ಗಾನ ವಾರಿಧಿ
  85. ಗಾನ ವಿಭೂಷಣ
  86. ಗಾನ ಸಿಂಧು
  87. ಗಿರಿ ನಟ
  88. ಗೆಲುವಿನ ಹಮ್ಮೀರ
  89. ಗೌರವ ಡಾಕ್ಟರಟ್ ಪುರಸ್ಕೃತ
  90. ಚಿತ್ರರಂಗದ ಧ್ರುವತಾರೆ
  91. ಜಗ ಮೆಚ್ಚಿದ ಮಗ
  92. ಜ್ಞಾನದಾಹಿ
  93. ದಾದ ಸಾಹೇಬ್ ಪಾಲ್ಕೇ ಪುರಸ್ಕ್ರುತ
  94. ದೇವತಾ ಮನುಷ್ಯ
  95. ದೇವರ ದೇವ ಕಲಾ ದೇವ
  96. ನಕ್ಷತ್ರಗಳ ರಾಜ
  97. ನಗುವಿನ ಸರದಾರ
  98. ನಟ ಭಯಂಕರ
  99. ನಟ ರತ್ನಾಕರ
  100. ನಟ ವೈಭವೇಶ್ವರ
  101. ನಟ ಶೇಖರ
  102. ನಟ ಸಾರ್ವಭೌಮ
  103. ನವರಸ ಮಂಜೂಷ
  104. ನಾಡೋಜ
  105. ನೇತ್ರದಾನದ ಸ್ಪೂರ್ತಿ ರತ್ನ
  106. ಪದ್ಮ ಭೂಷಣ
  107. ಪದ್ಮ ವಿಭೂಷಣ
  108. ಪ್ರಾತಃ ಸ್ಮರಣಿಯ
  109. ಬೆಳ್ಳಿ ತೆರೆಯ ಬಂಗಾರ
  110. ಭಕ್ತ ಕಲಾ ರತ್ನ
  111. ಭಾಗ್ಯವಂತ
  112. ಮಧುರ ಕಂಠಶ್ರೀ
  113. ಮಹಾ ತಪಸ್ವಿ
  114. ಮಹಾ ಪುರುಷ
  115. ಮಹಾ ಮಹಿಮ
  116. ಮಹಾ ಯೋಗಿ
  117. ಮೇರು ನಟ
  118. ಯೋಗ ಕಲಾ ರತ್ನ
  119. ರತ್ನ ದೀಪ
  120. ರಸಿಕರ ರಾಜ
  121. ರಾಜಕೀರ್ತಿ ಮೆರೆದ ಗಂಡುಗಲಿ
  122. ಲೋಕ ಪೂಜಿತ
  123. ವರ ನಟ
  124. ವಿನಯ ಶೀಲ
  125. ವಿಶ್ವ ಮಾನವ
  126. ವಿಶ್ವ ಶಾಂತಿ ಪ್ರಿಯ
  127. ವೀರಾಧಿ ವೀರ
  128. ಶತಮಾನದ ಯುಗ ಪುರುಷ
  129. ಶುದ್ಧ ಮನಸ್ಸಿನ ಹಿಮಶಿಖರ
  130. ಸಂಗೀತ ರತ್ನ
  131. ಸಮಾಜ ಭೂಷಣ
  132. ಸರಸ್ವತಿ ಪುತ್ರ
  133. ಸರಳತೆಯ ಸಂತ
  134. ಸರಳತೆಯ ಸಾಕಾರಮೂರ್ತಿ
  135. ಸೋಲಿಲ್ಲದ ಸರದಾರ

ಡಾ. ರಾಜ್‌ಕುಮಾರ್ ರಸ್ತೆ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಎಂದು ಹೆಸರಿಸಲಾಗಿದೆ.

ಗೂಗಲ್‌ ಡೂಡಲ್‌ ಗೌರವ

ಗೂಗಲ್‌ ಸರ್ಚ್‌‌ನ ಡೂಡಲ್‌ ವಿಭಾಗದವರು ಡಾ. ರಾಜ್‌ಕುಮಾರ್‌ ಅವರ ೮೮ನೇ ಹುಟ್ಟು ಹಬ್ಬದ ದಿನ ( ೨೪ ಏಪ್ರಿಲ್‌ ೨೦೧೭ ) ರಾಜ್‌ ಅವರ ಡೂಡಲ್‌ ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದರು. ಈ ಡೂಡಲ್‌ ದೇಶಾದ್ಯಂತ ( google.co.in ) ಎಲ್ಲಾ ರಾಜ್ಯಗಳಲ್ಲೂ ಪ್ರದರ್ಶಿತಗೊಂಡು ಪರ ರಾಜ್ಯದವರಿಗೂ ರಾಜ್‌ ಅವರ ಬಗ್ಗೆ ಕುತೂಹಲ ಮೂಡುವಂತೆ ಮಾಡಿತು. ತೆಂಕಣ ಭಾರತದ ನಟರಿಗೆ ಗೂಗಲ್‌ ಈ ರೀತಿಯ ಗೌರವ ಸಲ್ಲಿಸಿರುವುದು ಇದೇ ಮೊದಲು. ಇದಕ್ಕಾಗಿ ಕನ್ನಡಿಗರು ಗೂಗಲ್‌ನವರಿಗೂ ಅಭಿನಂದನೆ ಸಲ್ಲಿಸಿದರು.

ಪುಸ್ತಕಗಳು

ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ (ಪಿ.ಹೆಚ್.ಡಿ ನಿಬಂಧ)

  • ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಿ. ಗುರುಮೂರ್ತಿ ಹಾರೋಹಳ್ಳಿ ಅವರು "ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ" ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ, ಡಾ. ರಾಜ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದಾರೆ.
  • ೧೯೯೭ರಲ್ಲಿ ಪ್ರಾರಂಭಿಸಿದ ಸಂಶೋಧನೆಯನ್ನು ನಾಲ್ಕುವರ್ಷಗಳ ಕಾಲ ಡಾ. ಮಳಲಿ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಗುರುಮೂರ್ತಿ ೨೦೦೧ರಲ್ಲಿ ಪಿ.ಹೆಚ್.ಡಿ ಪದವಿ ಪಡೆದರು.

ಪ್ರಾಣಪದಕ

  • ಪ್ರಾಣಪದಕ ಡಾ. ರಾಜಕುಮಾರ್ ಅವರನ್ನು ಕುರಿತ 2013ರ ಅಕ್ಟೋಬರ್ ತಿಂಗಳಿನಲ್ಲಿ ಅ. ನಾ. ಪ್ರಹ್ಲಾದರಾವ್ ಬರೆದ ಸ್ವಾರಸ್ಯಕರ ಸಂಗತಿಗಳ ಮತ್ತೊಂದು ಪುಸ್ತಕ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನಾಳದಲ್ಲಿನ ಡಾ. ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ವಸಂತ ಪ್ರಕಾಶನ ಪ್ರಕಾಶನಗೊಳಿಸಿರುವ ಅ. ನಾ. ಪ್ರಹ್ಲಾದರಾವ್ ಬರೆದ ವಿಶಿಷ್ಟ ಪುಸ್ತಕ 'ಪ್ರಾಣಪದಕ'. ಸುಮಾರು 120 ಪುಟಗಳ ಈ ಪುಸ್ತಕದ ಲೇಖನಗಳು `ಮಂಗಳ` ವಾರಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದವು.
  • ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕ ರೊಂದಿಗೆ ಹಲವು ವಿಷಯ ಗಳನ್ನು ನೆನಪು ಮಾಡಿಕೊಂಡರು. 'ಪ್ರಾಣಪದಕ' ಹೆಸರಿನಲ್ಲಿ 'ಮಂಗಳ' ವಾರಪತ್ರಿಕೆ ಈ ಲೇಖನಗಳನ್ನು ಪ್ರಕಟಿಸಿತ್ತು.

ಬಂಗಾರದ ಮನುಷ್ಯ

ಕನ್ನಡದ ವರನಟ ಡಾ. ರಾಜಕುಮಾರ್ ಅವರ ಜೀವನ ಹಾಗೂ ಸಾಧನೆ ಕುರಿತು ಕರ್ನಾಟಕ ಸರ್ಕಾರಕ್ಕಾಗಿ ಅ. ನಾ. ಪ್ರಹ್ಲಾದರಾವ್ ಬರೆದ ಬಂಗಾರದ ಮನುಷ್ಯ ಅತ್ಯಂತ ಜನಪ್ರಿಯ ಪುಸ್ತಕ.

  • ಈ ಪುಸ್ತಕ ಇಂಗ್ಲಿಷ್ ಭಾಷೆಗೆ `ಡಾ. ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್` ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಬಿಡುಗಡೆಗೊಂಡಿತು.[೧೧] ಕನ್ನಡದ ನಟರೊಬ್ಬರನ್ನು ಕುರಿತ ಇಂಗ್ಲಿಷ್ ಪುಸ್ತಕವೊಂದು ಭಾರತದ ಹೊರಗಡೆ ಬಿಡುಗಡೆಗೊಂಡ ಮೊದಲ ಪುಸ್ತಕ ಇದೆಂಬ ದಾಖಲೆಯನ್ನೂ ಮಾಡಿತು. ಕನ್ನಡ ಪುಸ್ತಕ ಬಿಡುಗಡೆ ಗೊಂಡ ಸಂದರ್ಭದಲ್ಲಿ ಡಾ. ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಮನೆಗೆ ಲೇಖಕರ ಕುಟುಂಬವನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು.
  • ೨೨೦ ಪುಟಗಳ ಈ ಪುಸ್ತಕ ಡಾ. ರಾಜಕುಮಾರ್ ಅವರಿಂದಲೇ ಪ್ರಶಂಸೆಗೆ ಒಳಗಾಯಿತು.
  • ಇದು ಡಾ. ರಾಜಕುಮಾರ್ ಅವರನ್ನು ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವೇ ಅಲ್ಲದೆ, ದೇಶದ ಹೊರಗಡೆ ಬಿಡುಗಡೆ ಆದ ಡಾ. ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು. ಈ ಪುಸ್ತಕದಲ್ಲಿ ಡಾ. ರಾಜಕುಮಾರ್ ಚಲನಚಿತ್ರಗಳ ಬಗ್ಗೆ ವಿವರಗಳಷ್ಟೆ ಅಲ್ಲದೆ, ಅವರ ಸಾಮಾಜಿಕ ಬದುಕು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ವಿವರಗಳನ್ನು ದಾಖಲಿಸಲಾಗಿದೆ.
  • ಕನ್ನಡ ಪುಸ್ತಕ ೨೦೦೬ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ೨೦೦೬ರಲ್ಲಿ ಕುವ್ಯೆತ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಇಂಗ್ಲಿಷ್ ಪುಸ್ತಕ ಬೆಂಗಳೂರಿನಲ್ಲಿ ಶ್ರೀಮತಿ ಪಾವ೯ತಮ್ಮ ರಾಜಕುಮಾರ್ ಅವರಿಂದ ಬಿಡುಗಡೆಗೊಂಡಿತಲ್ಲದೆ, ಲಂಡನ್ ನಗರದಲ್ಲಿ ೨೦೦೮ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು.

ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಡಾ. ರಾಜ್‌ಕುಮಾರ್

ಹೊರಗಿನ ಸಂಪರ್ಕಗಳು

ರಾಜ್‌ಕುಮಾರ್ ಐ ಎಮ್ ಡಿ ಬಿನಲ್ಲಿ

ಉಲ್ಲೇಖಗಳು

‌‌