ಹಿಮೋಗ್ಲಾಬಿನ್

ಹಿಮೋಗ್ಲಾಬಿನ್ ಕಬ್ಬಿಣವನ್ನು ಹೊಂದಿರುವ ಒಂದು ಪ್ರೋಟೀನ್. ಬಹುತೇಕ ಎಲ್ಲ ಕಶೇರುಕಗಳು ಹಿಮೋಗ್ಲಾಬಿನ್‍ನ್ನು ಹೊಂದಿರುತ್ತವೆ.[೧] ಇದು ಕೆಂಪು ರಕ್ತ ಕಣಗಳಲ್ಲಿ ಆಮ್ಲಜನಕದ ಸಾಗಣೆಯನ್ನು ಸುಗಮವಾಗಿಸುತ್ತದೆ. ರಕ್ತದ ಕೆಂಪುಕಣಗಳ ಬಣ್ಣಕ್ಕೂ ಒಟ್ಟು ರಕ್ತ ಕೆಂಪಾಗಿರುವುದಕ್ಕೂ ಕಾರಣ ಹೀಮೋಗ್ಲಾಬಿನ್. ರಕ್ತ ಸಮರ್ಥವಾಗಿ ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್‌ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹೊತ್ತು ಮತ್ತು ಬಿಡುಗಡೆ ಮಾಡುವುದು ಹೀಮೋಗ್ಲಾಬಿನ್ನಿನ ಸ್ವಭಾವದಿಂದಲೇ. 100 ಮಿಲೀಗಳಷ್ಟು ರಕ್ತದಲ್ಲಿ ಅಂದರೆ, ಸುಮಾರು 45 ಮಿಲೀಗಳ ಕಣಗಳಲ್ಲಿ ಸುಮಾರು 14 ಗ್ರಾಮ್‌ಗಳಷ್ಟು ಹೀಮೋಗ್ಲಾಬಿನ್ ಇರುತ್ತದೆ.[೨] ಇಷ್ಟೂ ಕೆಂಪುರಕ್ತ ಕಣಗಳ ಒಳಗೆ ಇರುತ್ತದೆ. 100 ಮಿಲೀಗಳಷ್ಟು ರಕ್ತದ್ರವದಲ್ಲಿರುವ ಒಟ್ಟು ಪ್ರೋಟೀನುಗಳು ಸುಮಾರು 8 ಗ್ರಾಮ್‌ಗಳು ಮಾತ್ರ. ರಕ್ತದ್ರವದಲ್ಲಿ ಇದಕ್ಕಿಂತ ಹೆಚ್ಚು ಪ್ರೊಟೀನ್ ಇರುವುದು ಸಾಧ್ಯವಿಲ್ಲ. ಹಾಗೆ ಹೆಚ್ಚಾಗಿದ್ದರೆ ರಕ್ತದ ಒತ್ತಡ ಹೆಚ್ಚು ಆಗುತ್ತದೆ. ಅಲ್ಲದೆ ನೀರು ಹಾಗೂ ಅದರಲ್ಲಿ ಲೀನವಾಗಿರುವ ಪದಾರ್ಥಗಳು ಅಂಗಾಂಶದ್ರವದೊಡನೆ (ಟಿಷ್ಯೂ ಫ್ಲೂಯಿಡ್) ವಿನಿಮಯವಾಗುವುದರಲ್ಲಿ ಏರುಪೇರು ಉಂಟಾಗುತ್ತದೆ. ಹೀಗಾಗದಿರಲೆಂದೇ ಕಶೇರುಕಗಳಲ್ಲಿ ಹೀಮೋಗ್ಲಾಬಿನ್ ಕೆಂಪುಕಣಗಳ ಒಳಗೇ ಅರ್ಥಾತ್ ವಿನಿಮಯ ಪ್ರಭಾವಬಾಹಿರವಾಗಿ ಇರುತ್ತದೆ. ಅಕಶೇರುಕಗಳಲ್ಲಿ ಹೀಮೋಗ್ಲಾಬಿನ್ ರಕ್ತದ್ರವದಲ್ಲಿ ಇರುವುದು ನಿಜ. ಆದರೆ ವಿನಿಮಯಕ್ಕೆ ಧಕ್ಕೆ ಆಗದಿರುವಷ್ಟು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ಮಾನವ ಹಿಮೋಗ್ಲಾಬಿನ್‍ನ ರಚನೆ. α ಮತ್ತು β ಗ್ಲಾಬಿನ್ ಉಪಘಟಕಗಳು ಅನುಕ್ರಮವಾಗಿ ಕೆಂಪು ಮತ್ತು ನೀಲಿ ಬಣ್ಣದಲ್ಲಿವೆ. ಕಬ್ಬಿಣವನ್ನು ಹೊಂದಿರುವ ಹೀಮ್ ಗುಂಪುಗಳು ಹಸಿರು ಬಣ್ಣದಲ್ಲಿವೆ.

ಕೆಲವು ಹುಳುಗಳಲ್ಲಿ ರಕ್ತ ತಿಳಿಹಸುರು ಬಣ್ಣ ಇರುವುದಕ್ಕೆ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಗ್ಲಾಬಿನ್ನಿನ ಬದಲು ಕ್ಲೋರೋಕ್ರುಯೋರಿನ್ ಎಂಬ ಹಸರು ಬಣ್ಣ ಪ್ರೋಟೀನ್ ಇರುವುದು. ಕ್ಲೋರೋಕ್ರುಯೋರಿನ್ ಅಣುವಿನಲ್ಲೂ ಹೀಮೋಗ್ಲಾಬಿನ್ನಿನಲ್ಲಿಯಂತೆಯೇ ಕಿಂಚಿತ್ತಾಗಿ ಕಬ್ಬಿಣ ಸಂಯೋಜಿತವಾಗಿರುತ್ತದೆ. ಕೆಲವು ಚಿಪ್ಪುಪ್ರಾಣಿಗಳು ಮತ್ತು ನಳ್ಳಿಜಾತಿಯ ಪ್ರಾಣಿಗಳ ರಕ್ತ ತಿಳಿನೀರಿನ ಬಣ್ಣಕ್ಕೆ ಇರುವುದರ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಸೈಯನಿನ್ ಎಂಬ (ಕಬ್ಬಿಣದ ಬದಲು ಕಿಂಚಿತ್ತಾಗಿ ತಾಮ್ರ ಸಂಯೋಗಿ ಆದ) ಪ್ರೋಟೀನು ಇರುವುದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: