ಆಂಟೆನಾ

ಆಂಟೆನಾ ವಿದ್ಯುತ್ ಕಾಂತೀಯ ಜಾಲದ ಒಂದು ಅಂಗ (ಗ್ರಾಹಕ ತಂತು). ಮುಖ್ಯವಾಗಿ ಇದು ವಿದ್ಯುತ್‍ ಕಾಂತೀಯ ತರಂಗ[೧]ಗಳನ್ನು ಪ್ರಸಾರ ಮಾಡುತ್ತದೆ. ಅಥವಾ ಪ್ರಸಾರವಾದ ತರಂಗಗಳನ್ನು ಗ್ರಹಿಸಿ ಗ್ರಾಹಕರಿಗೆ ತಲುಪಿಸುತ್ತದೆ. ಸಾಮಾನ್ಯವಾಗಿ ಪ್ರಸಾರ ಮಾಡುವ ಆಂಟೆನಾವೇ ತರಂಗಗಳನ್ನೂ ಸ್ವೀಕರಿಸಬಲ್ಲದು. ಆಂಟೆನಾಗಳ ಆಕಾರ ಶಕ್ತಿಗಳು ಅವು ಮಾಡಬೇಕಾದ ಕ್ರಿಯೆಯನ್ನು ಅವಲಂಬಿಸಿವೆ.

ಆಂಟೆನಾ

ಉದಾಹರಣೆ

ಟೆಲಿವಿಷನ್ ಪ್ರಸಾರ ಮಾಡುವ ಆಂಟೆನಾಗಳು ಸಾವಿರಾರು ವಾಟ್‍ಗಳಷ್ಟು ಶಕ್ತಿಯನ್ನು ಗ್ರಹಿಸುವ ಮತ್ತು ತರಂಗಗಳನ್ನು ಎಲ್ಲ ದಿಕ್ಕಿನಲ್ಲೂ ಪ್ರಸರಿಸುವ ಸಾಮಥ್ರ್ಯವನ್ನು ಹೊಂದಿರಬೇಕು. ಆದ್ದರಿಂದ ಟೆಲಿವಿಷನ್ ಆಂಟೆನಾಗಳನ್ನು ಎತ್ತರವಾದ ಗೋಪುರಗಳ ಮೇಲೆ ನಿರ್ಮಿಸುತ್ತಾರೆ.

ಟೆಲಿವಿಷನ್ ಆಂಟೆನಾ

ಬಹಳ ಹೆಚ್ಚು ತರಂಗಮಾನದ ರೇಡಿಯೊತರಂಗಗಳನ್ನು ಪ್ರಸರಿಸುವ ಆಂಟೆನಾಗಳು ಪ್ರಸರಿಸಬೇಕಾದ ತರಂಗಗಳ ಉದ್ದದ ನಾಲ್ಕನೆ ಒಂದು ಭಾಗದಷ್ಟು ಎತ್ತರವಾಗಿರುವ ಲೋಹದ ರಚನೆಗಳಿರುತ್ತವೆ. ಆಂಟೆನಾಗಳು ಸುರುಳಿಯಂತೆ. ಉಂಗುರದಂತೆ, ದ್ವಿಧ್ರುವದಂತೆ, ಕೆಲವೊಮ್ಮೆ ಉದ್ದನೆಯ ತಂತಿಯಂತೆ ಇರುತ್ತವೆ. ಕೆಲವು ವೇಳೆ ನಿರ್ದಿಷ್ಟ ದಿಕ್ಕಿನಲ್ಲಿ ಶಕ್ತಿಯುತವಾದ ತರಂಗಗಳನ್ನು ಕಳುಹಿಸಲು ಅವುಗಳ ಹಿನ್ನೆಲೆಯಲ್ಲಿ ಪ್ರತಿಫಲಕಗಳನ್ನಿಟ್ಟಿರುತ್ತಾರೆ. ಉದಾಹರಣೆಗೆ ವಿಮಾನದ ಅಗೋಚರ ಭೂಸ್ಪರ್ಶದಲ್ಲಿ ಬಳಸುವ ರಾಡಾರ್‍[೨]ಗಳಲ್ಲಿ, ಬೃಹದಾಕಾರದ ರೇಡಿಯೋದೂರದರ್ಶಿಗಳಲ್ಲಿ ಬಹಳ ದೂರದವರೆಗೆ ತರಂಗಗಳನ್ನು ಕಳುಹಿಸಲು ದೀರ್ಘತರ ವೃತ್ತಾಕಾರದ ಪ್ರತಿಫಲಕಗಳನ್ನು ಆಂಟೆನಾಗಳ ಹಿಂದೆ ಇಟ್ಟಿರುತ್ತಾರೆ. ಆಧುನಿಕ ಕಾಲದಲ್ಲಿ ಟೆಲಿವಿಷನ್, ರೇಡಿಯೋ ಪ್ರಸಾರ, ಶತ್ರು ವಿಮಾನಗಳ ಪತ್ತೆ ಹಚ್ಚುವಿಕೆ, ಮಾನವ ನಿರ್ಮಿತ ಆಕಾಶ ನೌಕೆ, ಜಲಾಂತರ ನೌಕೆಗಳ ನಿರ್ದೇಶನ ಮುಂತಾದ ಕಾರ್ಯಗಳಲ್ಲಿ ವಿದ್ಯುತ್ಕಾಂತೀಯ ಅಂಗವಾಗಿ ಆಂಟೆನಾ ಹಿರಿದಾದ ಪಾತ್ರವನ್ನು ವಹಿಸುತ್ತದೆ.

ಉಲ್ಲೇಖಗಳು