ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ (ಚಲನಚಿತ್ರ)

ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ (ಇಟಾಲಿಯನ್:Il buono, il brutto, il cattivo) ೧೯೬೬ರ ಇಟ್ಯಾಲಿಯನ್ ಭವ್ಯ ಪ್ರಮಾಣದ ಸ್ಪಗೆಟಿ ವೆಸ್ಟರ್ನ್ ಚಲನಚಿತ್ರವಾಗಿದೆ. ಇದನ್ನು ಸರ್ಜಿಯೊ ಲಿಯೋನೆ ನಿರ್ದೇಶಿಸಿದರು. "ದ ಗುಡ್" ಆಗಿ ಕ್ಲಿಂಟ್ ಈಸ್ಟ್‌ವುಡ್, "ದ ಬ್ಯಾಡ್" ಆಗಿ ಲೀ ವ್ಯಾನ್ ಕ್ಲೀಫ಼್ ಮತ್ತು "ದಿ ಅಗ್ಲಿ" ಆಗಿ ಈಲೈ ವಾಲಕ್ ನಟಿಸಿದ್ದಾರೆ.[೬] ವಿಂಚೆಂಜ಼ೋನಿ ಹಾಗೂ ಲಿಯೋನೆ ಬರೆದ ಒಂದು ಕಥೆಯನ್ನು ಆಧರಿಸಿ ಇದರ ಚಿತ್ರಕಥೆಯನ್ನು ಏಜ್ ಅಂಡ್ ಸ್ಕಾರ್ಪೆಲಿ, ಲೂಸಿಯಾನೊ ವಿಂಚೆಂಜ಼ೋನಿ ಮತ್ತು ಲಿಯೊನೆ ಬರೆದರು (ಹೆಚ್ಚುವರಿ ಚಿತ್ರಕಥೆ ವಸ್ತು ಹಾಗೂ ಸಂಭಾಷಣೆಯನ್ನು ಹೆಸರಿಸದ ಸರ್ಜಿಯೊ ಡೊನಾಟಿ ನೀಡಿದ್ದಾರೆ).[೭] ಛಾಯಾಗ್ರಹಣ ನಿರ್ದೇಶಕ ಟೋನೀನೊ ಡೆಲ್ಲಿ ಕೊಲ್ಲಿ ಚಿತ್ರದ ವ್ಯಾಪಕ ವೈಡ್‍ಸ್ಕ್ರೀನ್ ಛಾಯಾಗ್ರಹಣಕ್ಕೆ ಜವಾಬ್ದಾರರಾಗಿದ್ದರು. ಎನ್ನಿಯೊ ಮೊರ್ರಿಕೋನೆ ಚಿತ್ರದ ಮುಖ್ಯ ತುಣುಕು ಸೇರಿದಂತೆ ಚಿತ್ರದ ಸಂಗೀತವನ್ನು ಸಂಯೋಜಿಸಿದರು. ಇದು ಇಟ್ಯಾಲಿಯನ್ ನೇತೃತ್ವದ ತಯಾರಿಕೆಯಾಗಿದ್ದು ಸ್ಪೇನ್, ಪಶ್ಚಿಮ ಜರ್ಮನಿ ಮತ್ತು ಅಮೇರಿಕದ ಸಹ ನಿರ್ಮಾಪಕರಿದ್ದಾರೆ.

ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ
ಇಟ್ಯಾಲಿಯನ್ ಭಾಷೆಯಲ್ಲಿನ ಚಿತ್ರಮಂದಿರ ಬಿಡುಗಡೆಯ ಪೋಸ್ಟರ್, ರೆನಾಟೊ ಕಸಾರೊ ಅವರಿಂದ[೧]
ನಿರ್ದೇಶನಸರ್ಜಿಯೊ ಲಿಯೋನೆ
ನಿರ್ಮಾಪಕಆಲ್ಬೆರ್ಟೊ ಗ್ರಿಮಾಲ್ಡಿ
ಚಿತ್ರಕಥೆ
  • ಏಜ್ ಅಂಡ್ ಸ್ಕಾರ್ಪೆಲಿ
  • ಲೂಸಿಯಾನೊ ವಿಂಚೆಂಜ಼ೋನಿ
  • ಸರ್ಜಿಯೊ ಲಿಯೋನೆ
ಕಥೆ
  • ಲೂಸಿಯಾನೊ ವಿಂಚೆಂಜ಼ೋನಿ
  • ಸರ್ಜಿಯೊ ಲಿಯೋನೆ
ಪಾತ್ರವರ್ಗ
  • ಕ್ಲಿಂಟ್ ಈಸ್ಟ್‌ವುಡ್
  • ಈಲೈ ವಾಲಕ್
  • ಲೀ ವ್ಯಾನ್ ಕ್ಲೀಫ಼್
  • ಆಲ್ಡೊ ಜಿಯುಫ಼್ರೆ
  • ಆಂಟೋನಿಯೊ ಕಾಸಾಸ್
  • ರಾಡಾ ರಾಸಿಮೋವ್
  • ಆಲ್ಡೊ ಸಾಂಬ್ರೆಲ್
  • ಎಂಜ಼ೊ ಪೆಟೀಟೊ
  • ಲುಯೀಗಿ ಪಿಸ್ಟಿಲಿ
  • ಲಿವಿಯೊ ಲೊರೆಂಜ಼ಾನ್
  • ಆಲ್ ಮುಲಾಕ್
  • ಸರ್ಜಿಯೊ ಮೆಂಡಿಜ಼ಬಾಲ್
  • ಆಂಟೋನಿಯೊ ಮೋಲಿನೊ ರೋಜೊ
  • ಲೊರೆಂಜ಼ೊ ರೊಬ್ಲೆಡೊ
  • ಮಾರಿಯೊ ಬ್ರೆಗಾ
ಸಂಗೀತಎನ್ನಿಯೊ ಮೊರ್ರಿಕೋನೆ
ಛಾಯಾಗ್ರಹಣಟೊನೀನೊ ಡೆಲಿ ಕೋಲಿ
ಸಂಕಲನ
  • ನೀನೊ ಬರಾಗ್ಲಿ
  • ಯೂಜೀನಿಯೊ ಆಲಾಬೀಸೊ
ವಿತರಕರುಪ್ರೊಡೂಜ಼ಿಯೂನಿ ಯೂರೋಪಿ ಅಸೋಸಿಯೇಟ್
ಬಿಡುಗಡೆಯಾಗಿದ್ದು
  • 23 ಡಿಸೆಂಬರ್ 1966 (1966-12-23)
ಅವಧಿ177 ನಿಮಿಷಗಳು
ದೇಶಇಟಲಿ[೨][೩]
ಭಾಷೆ
  • ಇಂಗ್ಲಿಷ್
  • ಇಟ್ಯಾಲಿಯನ್
ಬಂಡವಾಳ$1.2 ಮಿಲಿಯನ್[೪]
ಬಾಕ್ಸ್ ಆಫೀಸ್$25.1 ಮಿಲಿಯನ್
(North America)[೫]

ಈ ಚಲನಚಿತ್ರವು ಲಿಯೋನೆಯವರ ದೂರದ ಛಾಯಾಚಿತ್ರಗಳು ಮತ್ತು ನಿಕಟ ಛಾಯಾಗ್ರಹಣದ ಬಳಕೆಗೆ, ಜೊತೆಗೆ ಹಿಂಸಾಚಾರ, ಉದ್ವೇಗ ಮತ್ತು ಶೈಲಿಯುತ ಕೋವಿ ಕಾಳಗಗಳ ಅವರ ವಿಶಿಷ್ಟ ಬಳಕೆಗೆ ಪರಿಚಿತವಾಗಿದೆ. ಕಥೆಯು ಅಮೇರಿಕಾದ ಅಂತಃಕಲಹದ (ನಿರ್ದಿಷ್ಟವಾಗಿ ೧೮೬೨ರಲ್ಲಿನ ನ್ಯೂ ಮೆಕ್ಸಿಕೊ ದಂಡಯಾತ್ರೆ) ಹಿಂಸಾತ್ಮಕ ಅವ್ಯವಸ್ಥೆಯ ಮಧ್ಯೆ, ದಾರಿಯುದ್ದಕ್ಕೆ ಅನೇಕ ಕಾಳಗಗಳು ಮತ್ತು ದ್ವಂದ್ವಯುದ್ಧಗಳಲ್ಲಿ ಭಾಗವಹಿಸುತ್ತಾ ಹೂತಿರುವ ಒಕ್ಕೂಟದ ಚಿನ್ನದ ರಹಸ್ಯ ಸಂಗ್ರಹದಲ್ಲಿನ ಐಶ್ವರ್ಯವನ್ನು ಕಂಡುಹಿಡಿಯಲು ಸ್ಪರ್ಧಿಸುತ್ತಿರುವ ಮೂರು ಬಂದೂಕುಗಾರರೊಂದಿಗೆ ಸಂಬಂಧಿಸಿದೆ.[೮] ಈ ಚಲನಚಿತ್ರವು ಲಿಯೋನೆ ಮತ್ತು ಕ್ಲಿಂಟ್ ಈಸ್ಟ್‌ವುಡ್ ನಡುವೆ ಮೂರನೇ ಸಹಯೋಗವಾಗಿತ್ತು, ಮತ್ತು ಲೀ ವ್ಯಾನ್ ಕ್ಲೀಫ಼್‍ರೊಂದಿಗೆ ಎರಡನೇ ಸಹಯೋಗವಾಗಿತ್ತು.

ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿಯನ್ನು ಡಾಲರ್ ಚಿತ್ರತ್ರಯದಲ್ಲಿ ಅ ಫ಼ಿಸ್ಟ್‌ಫ಼ುಲ್ ಆಫ಼್ ಡಾಲರ್ಸ್ ಮತ್ತು ಫ಼ಾರ್ ಅ ಫ಼್ಯೂ ಡಾಲರ್ಸ್ ಮೋರ್ ನಂತರ ಮೂರನೇ ಹಾಗೂ ಅಂತಿಮ ಭಾಗವಾಗಿ ಪ್ರಚಾರಮಾಡಲಾಯಿತು. ಈ ಚಿತ್ರವು ಆರ್ಥಿಕ ಯಶಸ್ಸೆನಿಸಿಕೊಂಡಿತು, ಮತ್ತು ಬಾಕ್ಸ್ ಆಫ಼ಿಸ್‍ನಲ್ಲಿ $25 ಮಿಲಿಯನ್‍ಗಿಂತ ಹೆಚ್ಚು ಗಳಿಸಿತು, ಮತ್ತು ಈಸ್ಟ್‌ವುಡ್‍ರನ್ನು ತಾರಾಪಟ್ಟಕ್ಕೇರಿಸುವುದಕ್ಕೆ ಈ ಚಿತ್ರವನ್ನು ಗುರುತಿಸಲಾಗಿದೆ.[೯] ಆ ಕಾಲದಲ್ಲಿ ಸ್ಪಗೆಟಿ ವೆಸ್ಟರ್ನ್ ಪ್ರಕಾರದ ಸಾಮಾನ್ಯ ಅಸಮ್ಮತಿಯ ಕಾರಣ, ಬಿಡುಗಡೆಯ ನಂತರ ಈ ಚಿತ್ರಕ್ಕೆ ಸಿಕ್ಕ ವಿಮರ್ಶಾತ್ಮಕ ಪ್ರತಿಕ್ರಿಯೆಯು ಮಿಶ್ರವಾಗಿತ್ತು, ಆದರೆ ನಂತರದ ವರ್ಷಗಳಲ್ಲಿ ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇಂದು ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿಯನ್ನು ಅತ್ಯಂತ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಿ ವೆಸ್ಟರ್ನ್ ಚಲನಚಿತ್ರಗಳಲ್ಲಿ ಒಂದಾಗಿ ಕಾಣಲಾಗುತ್ತದೆ.

ಕಥಾವಸ್ತು

೧೮೬೨ರಲ್ಲಿ, ಅಮೇರಿಕದ ಅಂತಃಕಲಹದ ವೇಳೆ, ಮೂವರು ಬೌಂಟಿ ಬೇಟೆಗಾರರು ತಪ್ಪಿಸಿಕೊಂಡಿರುವ ಒಬ್ಬ ಮೆಕ್ಸಿಕನ್ ಡಕಾಯತ ಟೂಕೊ ರಮೀರೇಜ಼್‌ನನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಟೂಕೊ ಆ ಮೂವರಿಗೆ ಗುಂಡು ಹೊಡೆದು ಕುದುರೆ ಮೇಲೆ ಪರಾರಿಯಾಗುತ್ತಾನೆ. ಮತ್ತೊಂದೆಡೆ, ಹಣದಾಸೆಗಾಗಿ ಕೆಲಸ ಮಾಡುವ ಏಂಜಲ್ ಆಯ್ಸ್, ಒಕ್ಕೂಟದ ಚಿನ್ನದ ಒಂದು ಸಂಗ್ರಹವನ್ನು ಕಳುವುಮಾಡಿ ತಪ್ಪಿಸಿಕೊಂಡಿರುವ ಜ್ಯಾಕ್ಸನ್ ಬಗ್ಗೆ ಒಕ್ಕೂಟದ ಮಾಜಿ ಸೈನಿಕ ಸ್ಟೀವನ್ಸ್‌ನನ್ನು ಪ್ರಶ್ನಿಸುತ್ತಾನೆ. ಅವನನ್ನು ಸಾಯಿಸಲು ಏಂಜಲ್ ಆಯ್ಸ್ ಕರಾರು ಮಾಡಿಕೊಂಡಿರುತ್ತಾನೆ. ಜ್ಯಾಕ್ಸನ್ ಬಳಸುತ್ತಿರುವ ಹೊಸ ಹೆಸರಾದ ಬಿಲ್ ಕಾರ್ಸನ್‍ನ್ನು ಸ್ಟೀವನ್ಸ್ ಹೇಳುವಂತೆ ಏಂಜಲ್ ಆಯ್ಸ್ ಮಾಡುತ್ತಾನೆ. ಏಂಜಲ್ ಆಯ್ಸ್‌ನ ಉದ್ಯೋಗದಾತನಾದ ಬೇಕರ್‌ನನ್ನು ಸಾಯಿಸಲು ಸ್ಟೀವನ್ಸ್ ಏಂಜಲ್ ಆಯ್ಸ್‌ಗೆ $೧,೦೦೦ ನ ಪ್ರಸ್ತಾಪವಿಡುತ್ತಾನೆ. ಏಂಜಲ್ ಆಯ್ಸ್ ಹೊಸ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಹೊರಡುವಾಗ ಸ್ಟೀವನ್ಸ್‌ನನ್ನು ಸಾಯಿಸಿ, ಬೇಕರ್‌ನೊಂದಿಗಿನ ತನ್ನ ಒಪ್ಪಂದವನ್ನು ಪೂರೈಸುತ್ತಾನೆ. ನಂತರ ಬೇಕರ್ ಬಳಿ ಹಿಂತಿರುಗಿ ಸ್ಟೀವನ್ಸ್‌ನನ್ನು ಕೊಂದಿದ್ದಕ್ಕಾಗಿ ತನ್ನ ಶುಲ್ಕವನ್ನು ಪಡೆದ ಮೇಲೆ ಬೇಕರ್‌ನನ್ನು ಗುಂಡಿಕ್ಕಿ ಸಾಯಿಸಿ ಸ್ಟೀವನ್ಸ್‌ನಿಂದ ಪಡೆದ ಕೆಲಸವನ್ನು ಮುಗಿಸುತ್ತಾನೆ. ಅದೇ ವೇಳೆ, ಆ ಮೂರು ಬೌಂಟಿ ಬೇಟೆಗಾರರಿಂದ, ಟೂಕೊನಿಂದ "ಬ್ಲಾಂಡಿ" ಎಂದು ಕರೆಯಲ್ಪಡುವ ಒಬ್ಬ ಹೆಸರಿಲ್ಲದ ಅಲೆಮಾರಿ ಟೂಕೊನನ್ನು ಪಾರುಮಾಡಿ ಸ್ಥಳೀಯ ಶೆರಿಫ಼್‍ಗೆ ಒಪ್ಪಿಸಿ ತನ್ನ $2,000 ಬಹುಮಾನವನ್ನು ಪಡೆಯುತ್ತಾನೆ. ಇನ್ನೇನು ಟೂಕೊಗೆ ನೇಣು ಹಾಕುತ್ತಿರುವಾಗ, ಬ್ಲಾಂಡಿ ಅವನ ಕುತ್ತಿಗೆಯ ಹಗ್ಗವನ್ನು ಗುಂಡು ಹೊಡೆದು ವಿಚ್ಛೇದಿಸಿ ಅವನನ್ನು ಮುಕ್ತಗೊಳಿಸುತ್ತಾನೆ. ಇಬ್ಬರೂ ಕುದುರೆ ಮೇಲೆ ಪರಾರಿಯಾಗಿ ಲಾಭದಾಯಕ ಹಣಗಳಿಸುವ ಯೋಜನೆಯಲ್ಲಿ ಬಹುಮಾನವನ್ನು ಹಂಚಿಕೊಳ್ಳುತ್ತಾರೆ. ಅವರು ಮತ್ತಷ್ಟು ಬಹುಮಾನ ಹಣಕ್ಕಾಗಿ ಈ ಪ್ರಕ್ರಿಯೆಯನ್ನು ಇನ್ನೊಂದು ಪಟ್ಟಣದಲ್ಲಿ ಪುನರಾವರ್ತಿಸುತ್ತಾರೆ. ಬ್ಲಾಂಡಿ ಟೂಕೊನ ದೂರುಗಳಿಂದ ಕಿರಿಕಿರಿಗೊಂಡು ಅವನನ್ನು ಮರುಭೂಮಿಯಲ್ಲಿ ಕುದುರೆ ಮತ್ತು ನೀರಿಲ್ಲದೆ ಬಿಟ್ಟುಬಿಡುತ್ತಾನೆ. ಟೂಕೊ ಒಂದು ಹಳ್ಳಿಗೆ ನಡೆದು ಹೋಗುವಲ್ಲಿ ಸಫಲನಾಗುತ್ತಾನೆ ಮತ್ತು ಒಕ್ಕೂಟದ ಪಡೆಗಳು ಆಕ್ರಮಿಸಿರುವ ಒಂದು ಪಟ್ಟಣದಲ್ಲಿ ಬ್ಲಾಂಡಿಯನ್ನು ಪತ್ತೆಹಚ್ಚುತ್ತಾನೆ. ಟೂಕೊ ಬ್ಲಾಂಡಿಯನ್ನು ಬಂದೂಕಿನಿಂದ ಬೆದರಿಸಿ ನೇಣು ಹಾಕಿಕೊಳ್ಳುವಂತೆ ಒತ್ತಾಯಮಾಡಲು ಯೋಜಿಸುತ್ತಾನೆ. ಆದರೆ ಯೂನಿಯನ್ ಪಡೆಗಳು ಪಟ್ಟಣದ ಮೇಲೆ ಗುಂಡಿನ ದಾಳಿಮಾಡಿದಾಗ, ಬ್ಲಾಂಡಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ.

ಪ್ರಯಾಸದ ಹುಡುಕಾಟದ ನಂತರ, ಟೂಕೊ ಬ್ಲಾಂಡಿಯನ್ನು ಮತ್ತೆ ಸೆರೆಹಿಡಿದು ಒಂದು ಮರುಭೂಮಿಯಲ್ಲಿ ಅವನನ್ನು ಬಲವಂತದಿಂದ ನಡೆಸಿಕೊಂಡು ಹೋಗುವಾಗ ಬ್ಲಾಂಡಿ ನಿರ್ಜಲೀಕರಣದಿಂದ ಕುಸಿದು ಬೀಳುತ್ತಾನೆ. ಟೂಕೊ ಅವನಿಗೆ ಗುಂಡು ಹೊಡೆಯಲು ಸಿದ್ಧನಾಗುತ್ತಿರುವಾಗ, ಅವನು ನಿಯಂತ್ರಣವಿಲ್ಲದ ಒಂದು ಸವಾರಿಬಂಡಿಯನ್ನು ನೋಡುತ್ತಾನೆ. ಒಳಗೆ ಹಲವಾರು ಮೃತ ಕಾನ್‍ಫ಼ೆಡರೇಟ್ ಸೈನಿಕರು ಮತ್ತು ಸಾವಿನ ಸಮೀಪವಿರುವ ಬಿಲ್ ಕಾರ್ಸನ್‍ನನ್ನು ಕಾಣುತ್ತಾನೆ. ಬಿಲ್ ಕಾರ್ಸನ್ ಟೂಕೊಗೆ ಸ್ಯಾಡ್ ಹಿಲ್ ಸಮಾಧಿ ಭೂಮಿಯ ಒಂದು ಗೋರಿಯಲ್ಲಿ ಹೂತಿಟ್ಟಿರುವ $200,000 ಕಾನ್‍ಫ಼ೆಡರೇಟ್ ಚಿನ್ನವನ್ನು ಕೊಡುವುದಾಗಿ ವಾಗ್ದಾನ ನೀಡುತ್ತಾನೆ. ಟೂಕೊ ಆ ಗೋರಿಯ ಮೇಲಿನ ಹೆಸರನ್ನು ಹೇಳುವಂತೆ ಕೇಳುತ್ತಾನೆ, ಆದರೆ ಉತ್ತರಿಸುವ ಮೊದಲೇ ಬಾಯಾರಿಕೆಯಿಂದ ಕಾರ್ಸನ್ ಕುಸಿದು ಬೀಳುತ್ತಾನೆ. ಟೂಕೊ ನೀರಿನೊಂದಿಗೆ ಮರಳಿದಾಗ, ಕಾರ್ಸನ್ ಸತ್ತಿರುತ್ತಾನೆ ಮತ್ತು ಅವನ ಪಕ್ಕದಲ್ಲಿ ಕುಸಿದು ಬಿದ್ದಿರುವ ಬ್ಲಾಂಡಿ, ಸಾಯುವ ಮುನ್ನ ಕಾರ್ಸನ್ ಚೇತರಿಸಿಕೊಂಡು ಆ ಗೋರಿಯ ಮೇಲಿನ ಹೆಸರನ್ನು ತನಗೆ ಹೇಳಿದನೆಂದು ಬಹಿರಂಗಗೊಳಿಸುತ್ತಾನೆ. ಈಗ ಬ್ಲಾಂಡಿಯನ್ನು ಜೀವಂತವಾಗಿರಿಸಲು ಬಲವಾದ ಪ್ರೇರಣೆ ಹೊಂದಿದ ಟೂಕೊ ಅವನಿಗೆ ನೀರು ಕೊಟ್ಟು ತನ್ನ ಸೋದರನು ಆ್ಯಬಟ್ ಆಗಿರುವ, ಹತ್ತಿರದ ಒಂದು ಗಡಿನಾಡು ಧರ್ಮಪ್ರಚಾರ ಸಂಸ್ಥೆಗೆ ಚೇತರಿಸಿಕೊಳ್ಳಲು ಕರೆದೊಯ್ಯುತ್ತಾನೆ.

ಬ್ಲಾಂಡಿ ಚೇತರಿಸಿಕೊಂಡ ಮೇಲೆ, ಇಬ್ಬರೂ ಕಾರ್ಸನ್‍ನ ಬಂಡಿಯಲ್ಲಿದ್ದ ಕಾನ್‍ಫ಼ೆಡರೇಟ್ ಸಮವಸ್ತ್ರಗಳಲ್ಲಿ ಹೊರಡುತ್ತಾರೆ. ಆದರೆ ಯೂನಿಯನ್‍ನ ಸೈನಿಕರು ಅವರನ್ನು ಸೆರೆಹಿಡಿದು ಬ್ಯಾಟರ್‌ವಿಲ್‍ನ ಯುದ್ಧಕೈದಿಗಳ ಶಿಬಿರಕ್ಕೆ ಕರೆದೊಯ್ಯುತ್ತಾರೆ. ಹಾಜರಿ ಕೂಗಿನಲ್ಲಿ, ಟೂಕೊ ಬಿಲ್ ಕಾರ್ಸನ್‍ಗಾಗಿ ಉತ್ತರಿಸಿದಾಗ, ಶಿಬಿರದಲ್ಲಿ ಈಗ ಯೂನಿಯನ್‍ನ ಸಾರ್ಜಂಟ್‍ನ ಮಾರುವೇಷದಲ್ಲಿರುವ ಏಂಜಲ್ ಆಯ್ಸ್‌ನ ಗಮನ ಸೆಳೆಯುತ್ತಾನೆ. ಏಂಜಲ್ ಆಯ್ಸ್ ಟೂಕೊಗೆ ಚಿತ್ರಹಿಂಸೆ ನೀಡಿದಾಗ, ಟೂಕೊ ಸಮಾಧಿ ಭೂಮಿಯ ಹೆಸರನ್ನು ಬಹಿರಂಗಗೊಳಿಸುತ್ತಾನೆ. ಆದರೆ ಗೋರಿಯ ಮೇಲಿನ ಹೆಸರು ಬ್ಲಾಂಡಿಗೆ ಮಾತ್ರ ಗೊತ್ತಿದೆ ಎಂದು ಹೇಳುತ್ತಾನೆ. ಬ್ಲಾಂಡಿ ಚಿತ್ರಹಿಂಸೆಗೆ ಮಣಿಯುವುದಿಲ್ಲ ಎಂದು ಅರಿವಾಗಿ, ಏಂಜಲ್ ಆಯ್ಸ್ ಅವನಿಗೆ ಚಿನ್ನದ ಸಮಾನ ಪಾಲು ಮತ್ತು ಪಾಲುದಾರಿಕೆಯ ಪ್ರಸ್ತಾಪವಿಡುತ್ತಾನೆ. ಬ್ಲಾಂಡಿ ಒಪ್ಪಿ ಏಂಜಲ್ ಆಯ್ಸ್ ಮತ್ತು ಅವನ ತಂಡದೊಂದಿಗೆ ಸವಾರಿ ಹೊರಡುತ್ತಾನೆ. ಸಾಯಿಸಲು ಟೂಕೊನನ್ನು ಟ್ರೇನ್‍ನಲ್ಲಿ ಸಾಗುಹಾಕಲಾಗುತ್ತದೆ, ಆದರೆ ಅವನು ತಪ್ಪಿಸಿಕೊಳ್ಳುತ್ತಾನೆ.

ಬ್ಲಾಂಡಿ, ಏಂಜಲ್ ಆಯ್ಸ್ ಮತ್ತು ಅವನ ಸಹಯೋಗಿಗಳು ಒಂದು ಖಾಲಿಮಾಡಿಸಿದ ಪಟ್ಟಣಕ್ಕೆ ಆಗಮಿಸುತ್ತಾರೆ. ಅದೇ ಪಟ್ಟಣಕ್ಕೆ ಪರಾರಿಯಾಗಿ ಬಂದ ಟೂಕೊ ಒಂದು ಕುಸಿದುಬೀಳುವಂತಿರುವ ಹೋಟೆಲ್‍ನಲ್ಲಿ ಸ್ನಾನಮಾಡುತ್ತಿರುತ್ತಾನೆ. ಅವನನ್ನು ಸಾಯಿಸಲು ಪ್ರಯತ್ನಿಸಿದ ಮೂರು ಬಹುಮಾನ ಬೇಟೆಗಾರರಲ್ಲಿ ಒಬ್ಬನಾದ ಏಲಮ್ ಅವನನ್ನು ಚಕಿತಗೊಳಿಸುತ್ತಾನೆ. ಟೂಕೊ ಏಲಮ್‍ಗೆ ಗುಂಡು ಹೊಡೆಯುತ್ತಾನೆ. ಗುಂಡಿನ ಸದ್ದು ಕೇಳಿಸಿ ಬ್ಲಾಂಡಿ ತನಿಖೆ ಮಾಡುತ್ತಾನೆ. ಅವನಿಗೆ ಟೂಕೊ ಕಂಡು ಅವರಿಬ್ಬರು ತಮ್ಮ ಹಳೆ ಪಾಲುದಾರಿಕೆಯನ್ನು ಪುನರಾರಂಭಿಸಲು ಒಪ್ಪಿಕೊಳ್ಳುತ್ತಾರೆ. ಈ ಜೋಡಿಯು ಏಂಜಲ್ ಆಯ್ಸ್‌ನ ಸಹಯೋಗಿಗಳನ್ನು ಸಾಯಿಸುತ್ತಾರೆ, ಆದರೆ ಸ್ವತಃ ಏಂಜಲ್ ಆಯ್ಸ್ ತಪ್ಪಿಸಿಕೊಂಡಿದ್ದಾನೆಂದು ಕಂಡುಕೊಳ್ಳುತ್ತಾರೆ.

ಟೂಕೊ ಮತ್ತು ಬ್ಲಾಂಡಿ ಸ್ಯಾಡ್ ಹಿಲ ಕಡೆಗೆ ಪ್ರಯಾಣಿಸುತ್ತಿರುವಾಗ, ಆದರೆ ಅವರನ್ನು ಯೂನಿಯನ್ ಪಡೆಗಳು ಒಂದು ಆಯಕಟ್ಟಿನ ಸೇತುವೆಯ ಒಂದು ಬದಿಯಲ್ಲಿ ತಡೆಯುತ್ತಾರೆ. ಮತ್ತೊಂದು ಬದಿಯಲ್ಲಿ ಕಾನ್‍ಫ಼ೆಡರೇಟ್‍ಗಳು ಇರುತ್ತಾರೆ. ಸಮಾಧಿ ಭೂಮಿಗೆ ಪ್ರವೇಶ ದೊರೆಯಲು ಎರಡೂ ಸೇನೆಗಳನ್ನು ಚದುರಿಸುವ ಸಲುವಾಗಿ ಸೇತುವೆಯನ್ನು ಧ್ವಂಸಮಾಡಲು ಬ್ಲಾಂಡಿ ನಿರ್ಧರಿಸುತ್ತಾನೆ. ಸೇತುವೆಯನ್ನು ಸ್ಫೋಟಕಗಳಿಂದ ಕಟ್ಟುತ್ತಿರುವಾಗ, ಮತ್ತೊಬ್ಬರಿಗೆ ಸಹಾಯ ಮಾಡುವ ಮೊದಲು ಒಬ್ಬರು ಸತ್ತ ಸಂದರ್ಭ ಬರಬಹುದಾದ್ದರಿಂದ, ತಾವು ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಟೂಕೊ ಸೂಚಿಸುತ್ತಾನೆ. ಟೂಕೊ ಸಮಾಧಿ ಭೂಮಿಯ ಹೆಸರನ್ನು ಹೇಳುತ್ತಾನೆ, ಮತ್ತು ಬ್ಲಾಂಡಿ ಗೋರಿಯ ಮೇಲಿನ ಹೆಸರು "ಆರ್ಚ್ ಸ್ಟ್ಯಾಂಟನ್" ಎಂದು ಹೇಳುತ್ತಾನೆ. ಸೇತುವೆಯ ಸ್ಫೋಟಗೊಂಡ ನಂತರ ಸೇನೆಗಳು ಚದುರುತ್ತವೆ ಮತ್ತು ಟೂಕೊ ಒಂದು ಕುದುರೆಯನ್ನು ಕದ್ದು ತನಗಾಗಿ ಚಿನ್ನವನ್ನು ಪಡೆಯಲು ಸ್ಯಾಡ್ ಹಿಲ್‍ಗೆ ಪ್ರಯಾಣಿಸುತ್ತಾನೆ. ಅವನು ಆರ್ಚ್ ಸ್ಟ್ಯಾಂಟನ್‍ನ ಗೋರಿಯನ್ನು ಪತ್ತೆಹಚ್ಚಿ ಅಗೆಯಲು ಪ್ರಾರಂಭಿಸುತ್ತಾನೆ. ಬ್ಲಾಂಡಿ ಆಗಮಿಸಿ ಅವನಿಗೆ ಬಂದೂಕನ್ನು ಗುರಿಯಿಟ್ಟು ಮುಂದುವರೆಸುವಂತೆ ಪ್ರೋತ್ಸಾಹಿಸುತ್ತಾನೆ. ಒಂದು ಕ್ಷಣದ ನಂತರ, ಏಂಜಲ್ ಆಯ್ಸ್ ಅವರಿಬ್ಬರನ್ನೂ ಚಕಿತಗೊಳಿಸುತ್ತಾನೆ. ಬ್ಲಾಂಡಿ ಸ್ಟ್ಯಾಂಟನ್‍ನ ಗೋರಿಯನ್ನು ತೆರೆದಾಗ, ಬರಿ ಒಂದು ಅಸ್ಥಿಪಂಜರ ಸಿಗುತ್ತದೆ, ಚಿನ್ನವಲ್ಲ. ತಾನು ಗೋರಿಯ ಮೇಲಿನ ಹೆಸರಿನ ಬಗ್ಗೆ ಸುಳ್ಳು ಹೇಳಿದೆನೆಂದು ಬ್ಲಾಂಡಿ ಹೇಳುತ್ತಾನೆ, ಮತ್ತು ಗೋರಿಯ ನಿಜವಾದ ಹೆಸರನ್ನು ಒಂದು ಬಂಡೆಯ ಮೇಲೆ ಬರೆಯುವುದಾಗಿ ಪ್ರಸ್ತಾಪಿಸುತ್ತಾನೆ. ಸಮಾಧಿ ಭೂಮಿಯ ಪ್ರಾಂಗಣದಲ್ಲಿ ಅದರ ಮೇಲ್ಮೈಯು ಕೆಳಮುಖವಾಗಿರುವಂತೆ ಇಟ್ಟು, ಅವನು ಟೂಕೊ ಮತ್ತು ಏಂಜಲ್ ಆಯ್ಸ್‌ಗೆ ಮೂರು ಜನರ ಸ್ಪರ್ಧೆಯ ಸವಾಲಿಡುತ್ತಾನೆ.

ಮೂವರೂ ಒಬ್ಬರನ್ನೊಬ್ಬರು ದಿಟ್ಟಿಸ ತೊಡಗುತ್ತಾರೆ. ಪ್ರತಿಯೊಬ್ಬರು ಬಂದೂಕನ್ನು ಸೆಳೆಯುತ್ತಾರೆ, ಮತ್ತು ಬ್ಲಾಂಡಿ ಏಂಜಲ್ ಆಯ್ಸ್‌ನನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಹಿಂದಿನ ದಿನದ ರಾತ್ರಿ ತನ್ನ ಸ್ವಂತ ಬಂದೂಕನ್ನು ಬ್ಲಾಂಡಿ ಖಾಲಿ ಮಾಡಿದ್ದಾನೆ ಎಂದು ಟೂಕೊ ಕಂಡುಕೊಳ್ಳುತ್ತಾನೆ. ವಾಸ್ತವವಾಗಿ ಚಿನ್ನವು ಆರ್ಚ್ ಸ್ಟ್ಯಾಂಟನ್‍ನ ಪಕ್ಕದಲ್ಲಿರುವ "ಅಪರಿಚಿತ" ಎಂಬ ಗುರುತಿರುವ ಗೊರಿಯಲ್ಲಿದೆ ಎಂದು ಬ್ಲಾಂಡಿ ಹೇಳುತ್ತಾನೆ. ಚಿನ್ನದ ಚೀಲಗಳು ಸಿಕ್ಕಾಗ ಆರಂಭದಲ್ಲಿ ಟೂಕೊ ಹಿಗ್ಗಿಹೋಗುತ್ತಾನೆ ಆದರೆ ಬ್ಲಾಂಡಿ ಅವನಿಗೆ ಬಂದೂಕನ್ನು ಗುರಿಯಿಟ್ಟು ಒಂದು ಮರದ ಕೆಳಗೆ ಗಲ್ಲಿನ ಕುಣಿಕೆ ಹಾಕಿಕೊಳ್ಳುವಂತೆ ಆದೇಶಿಸುತ್ತಾನೆ. ಬ್ಲಾಂಡಿ ಟೂಕೊನ ಕೈಗಳನ್ನು ಕಟ್ಟಿ ಒಂದು ಸ್ಥಿರವಿಲ್ಲದ ಗೋರಿ ಕಲ್ಲಿನ ಮೇಲೆ ಸರಿತೂಗಿ ಬೀಳದ ಹಾಗೆ ನಿಂತುಕೊಳ್ಳುವಂತೆ ಒತ್ತಾಯಿಸುತ್ತಾನೆ. ಅವನು ಚಿನ್ನದ ಅರ್ಧಪಾಲನ್ನು ತೆಗೆದುಕೊಂಡು ಹೊರಟುಹೋಗುತ್ತಾನೆ. ಟೂಕೊ ದಯೆ ತೋರಿಸುವಂತೆ ಕಿರುಚಿದಾಗ, ಬ್ಲಾಂಡಿ ಮತ್ತೆ ಕಾಣಿಸಿಕೊಳ್ಳುತ್ತಾನೆ. ಬ್ಲಾಂಡಿ ಬಂದೂಕು ಹೊಡೆತದಿಂದ ಹಗ್ಗವನ್ನು ಕತ್ತರಿಸಿದಾಗ, ಟೂಕೊನ ಕೈಕಟ್ಟಿದ್ದು ಹಾಗೆ ಉಳಿದು ಅವನು ತನ್ನ ಪಾಲಿನ ಚಿನ್ನದ ಮೇಲೆ ಬೀಳುತ್ತಾನೆ. ಟೂಕೊ ಜೋರಾಗಿ ಶಪಿಸುತ್ತಾನೆ ಮತ್ತು ಬ್ಲಾಂಡಿ ದಿಗಂತದಲ್ಲಿ ಹೊರಟು ಹೋಗುತ್ತಾನೆ.

ಪಾತ್ರವರ್ಗ

ಮುಖ್ಯ ಮೂವರು

  • "ಬ್ಲಾಂಡಿ" (ಉರುಫ್ ಹೆಸರಿಲ್ಲದ ವ್ಯಕ್ತಿ) ಆಗಿ ಕ್ಲಿಂಟ್ ಈಸ್ಟ್‌ವುಡ್
  • ಏಂಜಲ್ ಆಯ್ಸ್ ಆಗಿ ಲೀ ವ್ಯಾನ್ ಕ್ಲೀಫ಼್
  • ಟೂಕೊ ಬೆನೆಡಿಕ್ಟೊ ಪಸಿಫ಼ಿಕೊ ಯುವಾನ್ ಮರಿಯಾ ರಮಿರೇಜ಼್ ಆಗಿ ಈಲೈ ವಾಲಕ್

ಪೋಷಕ ಪಾತ್ರವರ್ಗ

  • ಕ್ಯಾಪ್ಟನ್ ಕ್ಲಿಂಟನ್ ಆಗಿ ಆಲ್ಡೊ ಜಿಯುಫ಼್ರೆ
  • ಕೊರ್ಪೊರಲ್ ವಾಲೇಸ್ ಆಗಿ ಮಾರಿಯೊ ಬ್ರೇಗಾ
  • ಫ಼ಾದರ್ ಪಾಬ್ಲೊ ರಮೀರೇಜ಼್ ಆಗಿ ಲುಯೀಜಿ ಪಿಸ್ಟೀಲಿ
  • ಎಲಾಮ್ ಆಗಿ ಆಲ್ ಮುಲಾಕ್
  • ಸ್ಟೀವನ್ಸ್ ಆಗಿ ಆಂಟೋನಿಯೊ ಕಾಸಾಸ್
  • ಬಿಲ್ ಕಾರ್ಸನ್/ಜ್ಯಾಕ್ಸನ್ ಆಗಿ ಆಂಟೋನಿಯೊ ಕಾಸಾಲೆ
  • ಕ್ಯಾಪ್ಟನ್ ಹಾರ್ಪರ್ ಆಗಿ ಆಂಟೋನಿಯೊ ಮೊಲೀನೊ ರೋಜೊ
  • ಮಾರಿಯಾ ಆಗಿ ರಾಡಾ ರಸೀಮೋವ್
  • ಅಂಗಡಿಯವನಾಗಿ ಎಂಜ಼ೊ ಪೆಟೀಟೊ
  • ಸ್ಟೀವನ್ಸ್‌ನ ಹೆಂಡತಿಯಾಗಿ ಚೇಲೊ ಅಲೋನ್ಸೊ
  • ಮೆಕ್ಸಿಕನ್ ಜವಾನನಾಗಿ ಕ್ಲಾಡಿಯೋ ಸ್ಕಾರ್ಚೀಲಿ
  • ಶೆರಿಫ಼್ ಆಗಿ ಜಾನ್ ಬಾರ್ಥಾ
  • ಬೇಕರ್ ಆಗಿ ಲಿವಿಯೊ ಲೊರೆಂಜ಼ೊನ್
  • ಮೆಕ್ಸಿಕನ್ ಜವಾನನಾಗಿ ಸಾಂಡ್ರೊ ಸ್ಕಾರ್ಚೀಲಿ
  • ಏಂಜಲ್ ಆಯ್ಸ್‌ನ ತಂಡದ ಸದಸ್ಯನಾಗಿ ಬೆನಿಟೊ ಸ್ಟೆಫ಼ಾನೆಲಿ
  • ಸನ್ಯಾಸಿ ಆಗಿ ಏಂಜೆಲೊ ನೋವಿ
  • ಏಂಜಲ್ ಆಯ್ಸ್‌ನ ತಂಡದ ಸದಸ್ಯನಾಗಿ ಆಲ್ಡೊ ಸಾಂಬ್ರೆಲ್
  • ಹೊಂಬಣ್ಣದ ಕೂದಲ ಬೌಂಟಿ ಬೇಟೆಗಾರನಾಗಿ ಸರ್ಜಿಯೊ ಮೆಂಡಿಜ಼ಾಬಾಲ್
  • ಕ್ಲೆಮ್ ಆಗಿ ಲೊರೆಂಜ಼ೊ ರೊಬ್ಲೆಡೊ
  • ಸೊಲ್ಡಾಟೊ ಯೂನಿಯೋನ್ ಆಲ್ ಅರೆಸ್ಟೊ ಆಗಿ ರಿಚರ್ಡ್ ಆಲಾಗಿಚ್
  • ನೋಡುಗನಾಗಿ ಫ಼ೊರ್ಚುನಾಟೊ ಅರೀನಾ
  • ಬೌಂಟಿ ಬೇಟೆಗಾರನಾಗಿ ರೋಮನ್ ಅರಿಜ಼್ನಾವರೇಟಾ
  • ಮೆಸಿಕಾನ್ ಕಾನ್ ಬಿಯೋಂಡೊ ಆಗಿ ಸಿಲ್ವಾನಾ ಬಾಚಿ
  • ವೃದ್ಧ ಸೈನಿಕನಾಗಿ ಜೋಸಫ಼್ ಬ್ರ್ಯಾಡ್ಲಿ
  • ಬೌಂಟಿ ಬೇಟೆಗಾರ #2 ನಾಗಿ ಫ಼್ರ್ಯಾಂಕ್ ಬ್ರಾನ್ಯಾ
  • ನೋಡುಗನಾಗಿ ಅಮೇರಿಗೊ ಕಾಸ್ಟ್ರಿಘೆಲಾ
  • ಬೌಂಟಿ ಬೇಟೆಗಾರನಾಗಿ ಸ್ಯಾಟರ್ನೊ ಚೆರಾ
  • ಏಂಜಲ್ ಆಯ್ಸ್‌ನ ತಂಡದ ಸದಸ್ಯನಾಗಿ ಲುಯೀಜಿ ಸಿಯವಾರೊ
  • ಕಾನ್ಫೆಡರೇಟ್ ಸಿಪಾಯಿಯಾಗಿ ವಿಲಿಯಂ ಕಾನ್ರಾಯ್
  • ವಯೊಲಿನಿಸ್ಟಾ ಆಲ್ ಕಾಂಪೊ ಆಗಿ ಆಂಟೋನಿಯೊ ಕೊಂಟ್ರೆರಾಸ್
  • ಸೊಲ್ಡಾಟೊ ಕೊನ್ಫೆಡೆರಾಟೊ ಮೊರೆಂಟೆ ಆಕ್ಸೆಲ್ ಡಾರ್ನಾ
  • ಉಪ ಅಧಿಕಾರಿಯಾಗಿ ಟೋನಿ ಡಿ ಮಿಟ್ರಿ
  • ಸ್ಪೆಟಾಟೋರೆ ಪ್ರೈಮಾ ಇಂಪಿಚಾಜಿಯೋನೆ ಆಗಿ ಆಲ್ಬೆರಿಗೊ ಡೊನಾಡೆಯೊ
  • ನೋಡುಗನಾಗಿ ಅಟೀಲಿಯೊ ಡೊಟೇಸಿಯೊ
  • ಸಿಯಾಪಿ ಕೋಟ್ ಆಗಿ ಲೂಯಿಸ್ ಫ಼ರ್ನಾಂಡೇಜ಼್ ಡೆ ಎರೀಬೆ
  • ಬೋಳುತಲೆಯ ನೋಡುಗನಾಗಿ ವೆರಿಯಾನೊ ಜಿನೇಸಿ
  • ಮಾರಿಯಾ (ಧ್ವನಿ) ಆಗಿ ಜಾಯ್ಸ್ ಗಾರ್ಡನ್
  • ಮದ್ಯವಸನಿ ಒಕ್ಕೂಟದ ಕ್ಯಾಪ್ಟನ್ (ಧ್ವನಿ) ಆಗಿ ಬರ್ನಿ ಗ್ರ್ಯಾಂಟ್
  • ಹೋಟೆಲ್ ಮಾಲೀಕನಾಗಿ ಜೀಸಸ್ ಗಜ಼್ಮನ್
  • ಸಾರ್ಜೆಂಟ್ ಆಗಿ ವಿಕ್ಟರ್ ಇಸ್ರೇಲ್
  • ಮೆಕ್ಸಿಕನ್ ಬೌಂಟಿ ಬೇಟೆಗಾರನಾಗಿ ನಾಜ಼ರೇನೊ ನಟಾಲೆ
  • ಬರಿಸ್ಟಾ ಆ ಸೊಕೋರೊ ಆಗಿ ರಿಕಾರ್ಡೊ ಪಲಾಸಿಯೋಸ್
  • ವೇಚಿಯೊ ಸರ್ಜೆಂಟೆ ಆಗಿ ಆಂಟೋನಿಯೊ ಪಲೋಂಬಿ
  • ಕೊರಿಸ್ಟಾ ಆಲ್ ಕ್ಯಾಂಪೊ ಆಗಿ ಜೂಲಿಯೊ ಮಾರ್ಟಿನೇಜ಼್ ಪಿಯೆರ್ನಾವಿಯೇಜಾ[೧೦]
  • ಸುವೊನಟೋರೆ ಆರ್ಮೋನಿಕಾ ಆಲ್ ಕ್ಯಾಂಪೊ ಆಗಿ ಜೀಸಸ್ ಪೋರಾಸ್
  • ಏಂಜಲ್ ಆಯ್ಸ್‌ನ ತಂಡದ ಸದಸ್ಯನಾಗಿ ರೊಮಾನೊ ಪೂಪೊ
  • ಸ್ಟೀವನ್ಸ್ ಮಗನಾಗಿ ಆಂಟೊನ್ಯೀಟೊ ರೂಯಿಜ಼್
  • ಪಿಸ್ಟೊಲೆರೊ ಆಗಿ ಆಯ್ಸಾನೊವಾ ರೂನಾಚಾಗುವಾ
  • ಮೆಕ್ಸಿಕನ್ ಬೌಂಟಿ ಬೇಟೆಗಾರನಾಗಿ ಆನ್ರೀಕೆ ಸಾಂಟಿಯಾಗೊ
  • ಥಾಮಸ್ 'ಶಾರ್ಟಿ' ಲಾರ್ಸನ್ ಆಗಿ ಹೋಸೆ ಟೆರಾನ್
  • ಸೊಲ್ಡಾಟೊ ಯೂನಿಯೋನ್ ಕಾನ್ ಸಿಗಾರೊ ಆಗಿ ಫ಼್ರ್ಯಾಂಕೊ ಟೋಚಿ

ತಯಾರಿಕೆ

ಪೂರ್ವ ನಿರ್ಮಾಣ

ಫ಼ಾರ್ ಅ ಫ಼್ಯೂ ಡಾಲರ್ಸ್ ಮೋರ್ ಚಿತ್ರದ ಯಶಸ್ಸಿನ ನಂತರ, ಯುನೈಟಡ್ ಆರ್ಟಿಸ್ಟ್ಸ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು ಆ ಚಿತ್ರದ ಚಿತ್ರಕಥೆಗಾರನೊಂದಿಗೆ ಆ ಚಿತ್ರದ ಮತ್ತು ಮುಂದಿನ ಚಿತ್ರದ ಹಕ್ಕುಗಳಿಗಾಗಿ ಒಪ್ಪಂದಕ್ಕೆ ಸಹಿಹಾಕುವ ಬಗ್ಗೆ ಮಾತಾಡಿದರು. ಅವರಿಗೆ, ನಿರ್ಮಾಪಕರಿಗೆ ಮತ್ತು ಸರ್ಜಿಯೊ ಲಿಯೋನೆಗೆ ಯಾವುದೇ ಯೋಜನೆಗಳಿರಲಿಲ್ಲ, ಆದರೆ ಅವರ ಆಶೀರ್ವಾದದೊಂದಿಗೆ ಚಿತ್ರಕಥೆಗಾರರು "ಅಮೇರಿಕದ ಅಂತಃಕಲಹದ ಸಮಯದಲ್ಲಿ ಯಾವುದೋ ನಿಧಿಯನ್ನು ಹುಡುಕುತ್ತಿರುವ ಮೂರು ಫಟಿಂಗರ ಬಗೆಗಿನ ಚಿತ್ರದ" ಬಗ್ಗೆ ತಮ್ಮ ಕಲ್ಪನೆಯನ್ನು ನಿರೂಪಿಸಿದರು.[೧೧] ಈ ಚಿತ್ರಕ್ಕೆ ಮಿಲಿಯನ್ ಡಾಲರ್‌ನ ಬಂಡವಾಳ ಒದಗುವದೆಂದು ಒಪ್ಪಂದವಾಯಿತು. ಅಂತಿಮವಾಗಿ ಒಟ್ಟು ಬಂಡವಾಳವು $1.2 ಮಿಲಿಯನ್ ಆಯಿತು.

ಚಿತ್ರದಲ್ಲಿ ಬ್ಲಾಂಡಿ ಮತ್ತು ಟೂಕೊ ಸೆರೆಯಾಗುವ ಶಿಬಿರವು ಆ್ಯಂಡರ್ಸನ್‍ವಿಲ್‍ನ ಉಕ್ಕಿನ ಕೆತ್ತನೆಗಳ ಮೇಲೆ ಆಧಾರಿತವಾಗಿತ್ತು. ಚಿತ್ರದಲ್ಲಿನ ಅನೇಕ ದೃಶ್ಯಗಳು ಬಖೈರು ಛಾಯಾಚಿತ್ರಗಳಿಂದ ಪ್ರಭಾವಿತವಾಗಿದ್ದವು. ಈ ಚಲನಚಿತ್ರವು ಅಂತಃಕಲಹದ ವೇಳೆ ನಡೆದಿದ್ದುದರಿಂದ, ಇದು ಯುದ್ಧದ ನಂತರ ನಡೆದ ಚಿತ್ರತ್ರಯದಲ್ಲಿನ ಇತರ ಎರಡು ಚಲನಚಿತ್ರಗಳಿಗೆ ಪೂರ್ವಭಾಗವಾಗಿ ಕಾರ್ಯನಿರ್ವಹಿಸಿತು.[೧೨]

ಲಿಯೊನಿ ವಿಂಚೆಂಜ಼ೋನಿಯವರ ಕಲ್ಪನೆಯನ್ನು ಕಥೆಯಾಗಿ ಅಭಿವೃದ್ಧಿಪಡಿಸಿದರು. ವಿಂಚೆಂಜ಼ೋನಿ ಮತ್ತು ಲಿಯೊನೆ ನಡುವಿನ ಸಂಬಂಧ ಹಾಳಾದ ನಂತರ ಅವರು ಬೇಗನೇ ಯೋಜನೆಯಿಂದ ಹೊರಬಂದರು. ಮೂರು ಮುಖ್ಯ ಪಾತ್ರಗಳೆಲ್ಲವೂ ಲಿಯೊನೆಯವರ ಆತ್ಮಚರಿತ್ರಾತ್ಮಕ ಅಂಶಗಳನ್ನು ಹೊಂದಿವೆ.

ಈಸ್ಟ್‌ವುಡ್ ಪ್ರತಿಶತ ಆಧಾರಿತ ಸಂಬಳವನ್ನು ಪಡೆದರು.

ನಿರ್ಮಾಣ

ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿಯ ಸೆಟ್, ಹಿನ್ನೆಲೆಯಲ್ಲಿ ವಿಶಿಷ್ಟ ಒರಟು ಭೂಪ್ರದೇಶವನ್ನು ಕಾಣಬಹುದು.
ಸ್ಯಾಡ್ ಹಿಲ್ ಸಮಾಧಿ ಭೂಮಿ, ೨೦೧೬.

ಚಿತ್ರೀಕರಣವು ರೋಮ್‍ನಲ್ಲಿನ ಸಿನೆಸಿಟ್ಟಾ ನಿರ್ಮಾಣಶಾಲೆಯಲ್ಲಿ ಮೇ ೧೯೬೬ರ ಮಧ್ಯದಲ್ಲಿ ಆರಂಭವಾಯಿತು. ನಂತರ ತಯಾರಿಕೆಯು ಸ್ಪೇನ್‍ನ ಉತ್ತರದಲ್ಲಿನ ಪ್ರಸ್ಥಭೂಮಿ ಪ್ರದೇಶಕ್ಕೆ ಸ್ಥಳಾಂತರವಾಯಿತು. ಇದು ನೈಋತ್ಯ ಅಮೇರಿಕದ ಕಾರ್ಯನಿರ್ವಹಿಸಿತು. ವೆಸ್ಟರ್ನ್ ದೃಶ್ಯಗಳನ್ನು ದಕ್ಷಿಣ ಸ್ಪೇನ್‍ನಲ್ಲಿ ಚಿತ್ರೀಕರಿಸಲಾಯಿತು. ತಯಾರಿಕೆಗೆ ಹೆಚ್ಚು ಸಂಕೀರ್ಣ ಸೆಟ್‌ಗಳು ಬೇಕಾಗಿದ್ದವು; ಹಲವು ಸಾವಿರ ಗೋರಿಕಲ್ಲುಗಳಿರುವ ಸಮಾಧಿ ಭೂಮಿಯನ್ನು ನಿರ್ಮಿಸಲು ಹಲವು ನೂರು ಸ್ಪ್ಯಾನಿಶ್ ಸೈನಿಕರನ್ನು ಬಳಸಿಕೊಳ್ಳಲಾಯಿತು.[೧೩] ಚಿತ್ರೀಕರಣವು ಜುಲೈ ೧೯೬೬ರಲ್ಲಿ ಮುಗಿಯಿತು.

ಆರಂಭದಲ್ಲಿ ಈಸ್ಟ್‌ವುಡ್ ಕಥೆಯಿಂದ ತೃಪ್ತಿಪಡಲಿಲ್ಲ ಮತ್ತು ವಾಲಕ್‍ರ ಪಾತ್ರ ಹೆಚ್ಚು ಉತ್ತಮವಾಗಿದೆಯೆಂದು ಅವರಿಗೆ ಅನಿಸಿತು. ಈಸ್ಟ್‌ವುಡ್ ಪಾತ್ರವನ್ನು ಒಪ್ಪಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದರು ಆದರೆ ನಂತರ ಒಪ್ಪಿಕೊಂಡರು.

ಚಿತ್ರದಲ್ಲಿ ಅಂತರರಾಷ್ಟ್ರೀಯ ಪಾತ್ರವರ್ಗವನ್ನು ಬಳಸಿದ್ದರಿಂದ, ನಟರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಅಭಿನಯಿಸಿದರು. ಈಸ್ಟ್‌ವುಡ್, ವ್ಯಾನ್ ಕ್ಲೀಫ಼್ ಹಾಗೂ ವಾಲಕ್ ಇಂಗ್ಲಿಷ್ ಮಾತಾಡಿದರು ಮತ್ತು ರೋಮ್‍ನಲ್ಲಿ ಪ್ರಥಮ ಪ್ರದರ್ಶನಕ್ಕಾಗಿ ಅವರ ಸಂಭಾಷಣೆಗಳನ್ನು ಇಟ್ಯಾಲಿಯನ್‍ನಲ್ಲಿ ಡಬ್ ಮಾಡಲಾಯಿತು. ಅಮೇರಿಕನ್ ಆವೃತ್ತಿಗಾಗಿ, ಮುಖ್ಯಪಾತ್ರಗಳ ಧ್ವನಿಗಳನ್ನು ಬಳಸಲಾಯಿತು, ಆದರೆ ಪೋಷಕ ಪಾತ್ರವರ್ಗದ ಸದಸ್ಯರ ಧ್ವನಿಗಳನ್ನು ಇಂಗ್ಲಿಷ್‍ಗೆ ಡಬ್ ಮಾಡಲಾಯಿತು.[೧೪] ತೆರೆಯ ಮೇಲೆ ಧ್ವನಿಗಳು ಮತ್ತು ತುಟಿ ಚಲನೆಗಳ ನಡುವಿನ ಕಳಪೆ ಹೊಂದಾಣಿಕೆಯಲ್ಲಿ ಇದರ ಫಲಿತಾಂಶವನ್ನು ಗಮನಿಸಬಹುದು; ಯಾವುದೇ ಸಂಭಾಷಣೆಯು ಸಂಪೂರ್ಣವಾಗಿ ಹೊಂದಾಣಿಕೆಯಿಂದಿಲ್ಲ ಏಕೆಂದರೆ ಲಿಯೊನೆ ದೃಶ್ಯಗಳನ್ನು ಹೊಂದಾಣಿಕೆಯ ಧ್ವನಿಯಿಂದ ಅಪರೂಪವಾಗಿ ಚಿತ್ರೀಕರಿಸುತ್ತಿದ್ದರು.[೧೫] ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳನ್ನು ನಿರ್ಮಾಣದ ನಂತರ ಮುದ್ರಣ ಮಾಡಲಾಯಿತು.[೧೬]

ಲಿಯೊನೆಗೆ ಚಿತ್ರದ ಕೋವಿ ಕದನದ ದೃಶ್ಯಕ್ಕೆ ನೈಜ ಸಮಾಧಿ ಭೂಮಿ ಸಿಗದಿದ್ದರಿಂದ, ಸ್ಪ್ಯಾನಿಶ್ ಸೈನಿಕರನ್ನು ಬಾಡಿಗೆ ಪಡೆದು ಒಂದು ಸಮಾಧಿ ಭೂಮಿಯನ್ನು ಎರಡು ದಿನಗಳಲ್ಲಿ ನಿರ್ಮಿಸಲಾಯಿತು.[೧೭]

ಲಿಯೊನೆ ಪರಿಪೂರ್ಣತಾವಾದಿ ನಿರ್ದೇಶನದ ಲಕ್ಷಣಗಳನ್ನು ಹೊಂದಿದ್ದರು. ಹಲವುವೇಳೆ ಲಿಯೊನೆ ಬಲವಂತದಿಂದ ದೃಶ್ಯಗಳನ್ನು ಅನೇಕ ವಿಭಿನ್ನ ಕೋನಗಳಿಂದ ಚಿತ್ರೀಕರಿಸಲು ಆಗ್ರಹಿಸುತ್ತಿದ್ದರು, ಮತ್ತು ಅತ್ಯಂತ ಸೂಕ್ಷ್ಮ ವಿವರಗಳಿಗೆ ಗಮನ ಕೊಡುತ್ತಿದ್ದರಿಂದ ಹಲವುವೇಳೆ ನಟರು ತೀವ್ರವಾಗಿ ಬಳಲುತ್ತಿದ್ದರು.[೧೮] ಈ ಚಿತ್ರ ಮುಗಿದ ನಂತರ, ಈಸ್ಟ್‌ವುಡ್ ಲಿಯೊನೆಯೊಂದಿಗೆ ಮತ್ತೆ ಎಂದೂ ಕೆಲಸಮಾಡಲಿಲ್ಲ.

ವಿಷಯಗಳು ಮತ್ತು ಛಾಯಾಗ್ರಹಣ

ಹಿಂಸಾಚಾರ ಮತ್ತು ಹಳೆ ಪಶ್ಚಿಮ ರೊಮ್ಯಾಂಟಿಸಿಸಂನ ವಿಸಂಕೇತಿಸುವಿಕೆ ಮೇಲಿನ ಒತ್ತು ಚಿತ್ರದ ಮುಖ್ಯ ವಿಷಯವೆಂದು ಲಿಯೊನೆ ಗಮನಿಸಿದರು. ಕ್ರೌರ್ಯ ಮತ್ತು ದುರಾಸೆಯಂತಹ ನಕಾರಾತ್ಮಕ ವಿಷಯಗಳಿಗೂ ಗಮನ ನೀಡಲಾಯಿತು, ಮತ್ತು ಇವು ಕಥೆಯಲ್ಲಿನ ಮೂರು ಮುಖ್ಯಪಾತ್ರಗಳು ಹಂಚಿಕೊಂಡ ಲಕ್ಷಣಗಳಾಗಿದ್ದವು. ಅನೇಕ ವಿಮರ್ಶಕರು ಈ ಚಿತ್ರದ ಯುದ್ಧವಿರೋಧಿ ವಿಷಯವನ್ನೂ ಗಮನಿಸಿದ್ದಾರೆ.[೧೯][೨೦] ಅಮೇರಿಕದ ಅಂತಃಕಲಹದಲ್ಲಿ ನಡೆಯುವ ಈ ಚಿತ್ರವು ನಾಗರಿಕರು, ಡಕಾಯಿತರು ಮತ್ತು ಅತ್ಯಂತ ಗಮನಾರ್ಹವಾಗಿ ಸೈನಿಕರಂತಹ ಜನರ ದೃಷ್ಟಿಕೋನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಯುದ್ಧದ ಅವಧಿಯಲ್ಲಿ ಅವರ ದೈನಂದಿನ ಕಷ್ಟಗಳನ್ನು ತೋರಿಸುತ್ತದೆ.

ಹಿಂಸಾಚಾರದ ಚಿತ್ರಣದಲ್ಲಿ, ಲಿಯೊನೆ ತಮ್ಮ ವಿಶಿಷ್ಟ ದೀರ್ಘಸಮಯದ ಮತ್ತು ನಿಕಟ ದೂರದ ಚಿತ್ರೀಕರಣ ಶೈಲಿಯನ್ನು ಬಳಸಿದರು. ಇದು ಪ್ರೇಕ್ಷಕರಿಗೆ ಅಭಿನಯಗಳು ಮತ್ತು ಪಾತ್ರಗಳ ಪ್ರತಿಕ್ರಿಯೆಗಳನ್ನು ಆಸ್ವಾದಿಸುವ ಅವಕಾಶ ನೀಡುವ ಮೂಲಕ ಉದ್ವೇಗ ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ, ಉದ್ರೆಕದ ಅನಿಸಿಕೆಯನ್ನು ಸೃಷ್ಟಿಸುತ್ತದೆ, ಜೊತೆಗೆ ಸುಂದರ ಭೂದೃಶ್ಯಗಳನ್ನು ಚಿತ್ರೀಕರಿಸುವ ಸ್ವಾತಂತ್ರ್ಯವನ್ನು ಲಿಯೊನೆಗೆ ನೀಡುತ್ತಿತ್ತು. ಚಿತ್ರದ ಅನೇಕ ಕೋವಿ ಕದನಗಳ ಮೊದಲು ಮತ್ತು ಅವುಗಳ ಅವಧಿಯಲ್ಲಿ ಉದ್ವೇಗ ಮತ್ತು ಒತ್ತಡವನ್ನು ಹೆಚ್ಚಿಸಲು ಲಿಯೊನೆ ಸಂಗೀತವನ್ನೂ ಸೇರಿಸಿಕೊಂಡರು.

ಪ್ರಮುಖ ಕೋವಿ ಕದನಗಳನ್ನು ಚಿತ್ರೀಕರಿಸುವಾಗ, ಪಾತ್ರಗಳ ಕ್ರಿಯೆಗಳ ಮೇಲೆ ಹೆಚ್ಚು ಕೇಂದ್ರೀಕರಿಸಲು ಲಿಯೊನೆ ಬಹುತೇಕವಾಗಿ ಸಂಭಾಷಣೆಯನ್ನು ತೆಗೆದಿದ್ದಾರೆ. ಇದು ಚಿತ್ರದ ಸುಪರಿಚಿತ ಮೆಕ್ಸಿಕನ್ ಬಿಕ್ಕಟ್ಟು ಸನ್ನಿವೇಶದ ವೇಳೆಯಲ್ಲಿ ಮುಖ್ಯವಾಗಿತ್ತು. ಈ ಶೈಲಿಯನ್ನು ಚಿತ್ರದ ನಾಯಕರಲ್ಲಿ ಒಬ್ಬನಾದ ಬ್ಲಾಂಡಿಯಲ್ಲಿ ಕಾಣಬಹುದು. ಈ ಪಾತ್ರವನ್ನು ವಿಮರ್ಶಕರು ತನ್ನ ಮಾತುಗಳಿಗಿಂತ ತನ್ನ ಕ್ರಿಯೆಗಳಿಂದ ಹೆಚ್ಚು ವ್ಯಾಖ್ಯಾನಿತನಾದವನು ಎಂದು ವಿವರಿಸಿದ್ದಾರೆ.[೨೧] ಎಲ್ಲ ಮೂರು ಪಾತ್ರಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೊಲ್ಲುವ ನಿರ್ಗುಣನಾಯಕರಾಗಿದ್ದಾರೆಂದು ಕಾಣಬಹುದು. ಲಿಯೊನೆ ಶೈಲಿಯುತ ಕೈಚಳಕದ ಬಂದೂಕುಗಾರಿಕೆಯನ್ನು ಕೂಡ ಬಳಸಿದರು.

ಬಿಡುಗಡೆ

ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ ಚಿತ್ರವು ಇಟಲಿಯಲ್ಲಿ ೨೩ ಡಿಸೆಂಬರ್ ೧೯೬೬ರಲ್ಲಿ ಬಿಡುಗಡೆಯಾಯಿತು,[೨೨][೨೩] ಮತ್ತು ಆ ಕಾಲದಲ್ಲಿ $6.3 ಮಿಲಿಯನ್‍ನಷ್ಟು ಗಳಿಸಿತು.[೨೪]

ಅಮೇರಿಕದಲ್ಲಿ, ಈ ಚಿತ್ರತ್ರಯದ ಮೂರೂ ಚಿತ್ರಗಳು ಒಂದೇ ವರ್ಷ ೧೯೬೭ರಲ್ಲಿ ಬಿಡುಗಡೆಗೊಂಡವು. ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ ೨೯ ಡಿಸೆಂಬರ್ ೧೯೬೭ರಲ್ಲಿ ಬಿಡುಗಡೆಯಾಯಿತು.

ವಿಮರ್ಶಾತ್ಮಕ ಪ್ರತಿಕ್ರಿಯೆ

ಬಿಡುಗಡೆಯಾದ ಮೇಲೆ, ದ ಗುಡ್ ದ ಬ್ಯಾಡ್ ಆ್ಯಂಡ್ ದಿ ಅಗ್ಲಿ ಚಿತ್ರವು ಹಿಂಸಾಚಾರದ ಅದರ ಚಿತ್ರಣಕ್ಕಾಗಿ ಟೀಕೆಗೊಳಗಾಯಿತು.[೨೫] ಇಂದಿನವರೆಗೂ, ಚರ್ವಿತ ಚರ್ವಣ ವೆಸ್ಟರ್ನ್‌ನ್ನು ಪುನಶ್ಚೈತನ್ಯಗೊಳಿಸುವ ಲಿಯೊನೆಯವರ ಪ್ರಯತ್ನವನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ.[೨೬]

ಮರುಮೌಲ್ಯಮಾಪನ ಮತ್ತು ಚಿತ್ರದ ಕೊಡುಗೆ

ಕೆಲವು ವಿಮರ್ಶಕರ ಆರಂಭಿಕ ನಕಾರಾತ್ಮಕ ಪ್ರತಿಕ್ರಿಯೆಯ ಹೊರತಾಗಿಯೂ, ಅನಂತರ ಈ ಚಿತ್ರವು ಬಹಳ ಸಕಾರಾತ್ಮಕ ಪ್ರತ್ಯಾದಾನವನ್ನು ಸಂಗ್ರಹಿಸಿದೆ.

ಗೃಹ ಮಾಧ್ಯಮ

ಈ ಚಲನಚಿತ್ರವನ್ನು ಮೊದಲು ವಿಎಚ್ಎಸ್‍ನಲ್ಲಿ ೧೯೮೦ರಲ್ಲಿ ಬಿಡುಗಡೆ ಮಾಡಲಾಯಿತು.

ಡಿವಿಡಿಯಲ್ಲಿ ಮೊದಲ ಬಾರಿಗೆ ಈ ಚಿತ್ರವನ್ನು ೧೯೯೮ರಲ್ಲಿ ಬಿಡುಗಡೆ ಮಾಡಲಾಯಿತು.

೨೦೦೨ರಲ್ಲಿ, ಅಮೇರಿಕದ ಬಿಡುಗಡೆಯಿಂದ ಕತ್ತರಿಸಲಾದ ೧೪ ನಿಮಿಷಗಳ ದೃಶ್ಯಗಳನ್ನು ಚಲನಚಿತ್ರದಲ್ಲಿ ಮತ್ತೆ ಸೇರಿಸಿ ಚಿತ್ರವನ್ನು ಪೂರ್ವಸ್ಥಿತಿಗೆ ತರಲಾಯಿತು.

ಸಂಗೀತ

ಸಂಗೀತವನ್ನು ಲಿಯೊನೆಯ ಮಾಮೂಲಿನ ಸಹಯೋಗಿ ಎನ್ನಿಯೊ ಮೊರ್ರಿಕೋನೆ ಸಂಯೋಜಿಸಿದ್ದಾರೆ. ಬಂದೂಕು ಹಾರಿಸುವಿಕೆ, ಸೀಟಿ ಹೊಡೆಯುವಿಕೆ ಮತ್ತು ಧ್ವನಿ ಬದಲಾವಣೆ ಮಾಡಿ ತ್ವರಿತ ಗಾನ ಸೇರಿದಂತೆ ಇವರ ವಿಶಿಷ್ಟ ಸ್ವಂತಿಕೆಯುಳ್ಳ ಕೃತಿಗಳು ಚಿತ್ರವನ್ನು ವ್ಯಾಪಿಸುತ್ತವೆ. ಇಂದು ಇದರ ಸುಪರಿಚಿತ ಮುಖ್ಯ ಸ್ವರಸಂಗತಿಯನ್ನು ಸಾರ್ವಕಾಲಿಕವಾಗಿ ಅತ್ಯಂತ ಶ್ರೇಷ್ಠ ಚಿತ್ರ ಸಂಗೀತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.[೨೭]

ಜನಪ್ರಿಯ ಸಂಸ್ಕೃತಿಯಲ್ಲಿ

ಚಿತ್ರದ ಶೀರ್ಷಿಕೆಯು ನುಡಿಗಟ್ಟಾಗಿ ಇಂಗ್ಲಿಷ್ ಭಾಷೆಯನ್ನು ಪ್ರವೇಶಿಸಿದೆ. ಸಾಮಾನ್ಯವಾಗಿ ಯಾವುದನ್ನಾದರು ಸಂಪೂರ್ಣವಾಗಿ ವರ್ಣಿಸುವಾಗ ಬಳಸಲ್ಪಡುವ ಇದರ ಅನುಕ್ರಮದ ಪದಸಮುಚ್ಚಯಗಳು ಮೇಲ್ಭಾಗ, ಕೆಳಭಾಗ ಮತ್ತು ಹೆಚ್ಚು ಉತ್ತಮವಾಗಿ ಆಗಬೇಕಾಗಿದ್ದ ಅಥವಾ ಆಗಬಹುದಾಗಿದ್ದ, ಆದರೆ ಆಗಿಲ್ಲದಿರದ ಭಾಗಗಳನ್ನು ಸೂಚಿಸುತ್ತವೆ.[೨೮]

ಈ ಚಿತ್ರವನ್ನು "ಡಾಲರ್ಸ್ ವೆಸ್ಟರ್ನ್" ಸರಣಿಯ ಭಾಗವಾಗಿ ೧೯೬೭ರಲ್ಲಿ ಜೋ ಮಿಲರ್ಡ್ ಕಾದಂಬರಿಯಾಗಿ ಮಾಡಿದರು. ದಕ್ಷಿಣ ಕೋರಿಯಾದ ವೆಸ್ಟರ್ನ್ ಚಲನಚಿತ್ರ ದ ಗುಡ್ ದ ಬ್ಯಾಡ್ ದ ವಿಯರ್ಡ್ (೨೦೦೮) ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ.[೨೯]

ಉಲ್ಲೇಖಗಳು

ಗ್ರಂಥಸೂಚಿ

ಹೆಚ್ಚಿನ ಓದಿಗೆ

  • Charles Leinberger, Ennio Morricone's The Good, The Bad And The Ugly: A Film Score Guide. Scarecrow Press, 2004.

ಬಾಹ್ಯ ಸಂಪರ್ಕಗಳು