ವಾಯುಭಾರಮಾಪಕ

ವಾಯುಭಾರಮಾಪಕವು ಭೂಮಿಯನ್ನು ಆವರಿಸಿರುವ ವಾಯುಮಂಡಲ (ಅಟ್ಮಾಸ್ಫಿಯರ್) ಪ್ರಯುಕ್ತಿಸುವ ಸಂಮರ್ದವನ್ನು (ಪ್ರೆಷರ್) ಅಳೆಯುವ ನಿರಪೇಕ್ಷ ಮಾಪಕ (ಬ್ಯಾರೊಮೀಟರ್).[೧][೨] ವಾಯುವಿಗೆ ತೂಕ (ವೇಟ್) ಇರುವುದರಿಂದ ಈ ಸಂಮರ್ದ ಉದ್ಭವಿಸುತ್ತದೆ, ಇದನ್ನು ಮೊತ್ತಮೊದಲು ಪ್ರಾಯೋಗಿಕವಾಗಿ ಸ್ಥಿರೀಕರಿಸಿದಾತ (1643) ಇಟಲಿಯ ಭೌತವಿಜ್ಞಾನಿ ಇವ್ಯಾಂಜಲಿಸ್ಟ್ ಟೋರಿಚೆಲ್ಲಿ (1608-47).[೩][೪] ಜರ್ಮನಿಯ ಭೌತವಿಜ್ಞಾನಿ ಆಟೋ ಫಾನ್ ಗ್ಯುರೆಕ್ (1602-86) ಕೂಡ ಈ ಬಗ್ಗೆ ಪ್ರಯೋಗಗಳನ್ನು ನಡೆಸಿ (1650) ಟೋರಿಚೆಲ್ಲಿಯ ಅಭಿಪ್ರಾಯವನ್ನು ಪುಷ್ಟೀಕರಿಸಿದ. ಟೋರಿಚೆಲ್ಲಿ ಬಳಸಿದ ನಳಿಕೆಗೆ ಟೋರಿಚೆಲ್ಲಿ ನಳಿಕೆ ಎಂಬ ಹೆಸರೇ ಇದೆ.

ಪಾದರಸ ವಾಯುಭಾರಮಾಪಕ

ಸರಳವಾದ ಪಾದರಸ ವಾಯುಭಾರಮಾಪಕದ ಸ್ಥೂಲ ರೇಖಾಚಿತ್ರ. ಇದು ಲಂಬವಾದ ಪಾದರಸಸ್ತಂಭ ಮತ್ತು ಕೆಳಗೆ ದ್ರವಕೋಶವನ್ನು ಹೊಂದಿರುತ್ತದೆ

ಇದನ್ನು ಸಾಧಾರಣವಾಗಿ ವಾಯುಭಾರಮಾಪಕ ಎಂದೇ ಹೇಳಲಾಗುವುದು. ಸಲಕರಣೆಯ ವಿವರಗಳಿಷ್ಟು: ಸುಮಾರು 1 ಮೀಟರ್ ಉದ್ದ, ಸುಮಾರು 1/2 ಸೆಂಟಿಮೀಟರ್ ವ್ಯಾಸ, ಒಂದು ಬದಿ ಮುಚ್ಚಿರುವ ಗಾಜಿನ ಕೊಳವೆ. ಆಲಿಕೆಯನ್ನು ಬಳಸಿ ಪಾದರಸವನ್ನು ಈ ಕೊಳವೆಯ ತುಂಬ ತುಂಬಿರಲಾಗುತ್ತದೆ. ಬಳಸುವ ಪಾದರಸ ಶುದ್ಧರೂಪದ್ದೂ ಶುಷ್ಕವೂ ಆಗಿರುವುದು ಅವಶ್ಯ. ಕೊಳವೆಯ ತೆರೆದ ಬಾಯನ್ನು ಹೆಬ್ಬೆರಳಿನಿಂದ ಮುಚ್ಚಿ ತಲೆಕೆಳಗಾಗಿ ಹಿಡಿದು, ಆ ತುದಿಯನ್ನು ಪಿಂಗಾಣಿ ಬಟ್ಟಲಿನಲ್ಲಿರುವ ಪಾದರಸದಲ್ಲಿ ಮುಳುಗಿಸಿ ಹೆಬ್ಬೆಟ್ಟನ್ನು ಹೊರತೆಗೆದರೆ, ಕೊಳವೆಯಲ್ಲಿಯ ಪಾದರಸ ಸ್ವಲ್ಪ ಕೆಳಕ್ಕೆ ಇಳಿದು ಒಂದು ನಿರ್ದಿಷ್ಟ ಮಟ್ಟದಲ್ಲಿ ನಿಲ್ಲುವುದು.

ಕೊಳವೆಯನ್ನು ಲಂಬವಾಗಿ ನಿಲ್ಲಿಸಿ, ಬಟ್ಟಲಿನ ಪಾದರಸದ ಮೇಲ್ಮಟ್ಟದಿಂದ ಕೊಳವೆಯಲ್ಲಿಯ ಪಾದರಸದ ಮಟ್ಟಕ್ಕೆ ಇರುವ ಎತ್ತರ ಅಳೆದಾಗ, ಅದು ಸಮುದ್ರಮಟ್ಟದಲ್ಲಿ, 76 ಸೆಂಮೀ ಇರುತ್ತದೆ. ಬಟ್ಟಲಿನಲ್ಲಿ ಕೊಳವೆಯ ಹೊರಗಿರುವ ಪಾದರಸದ ಮೇಲೆ ವಾಯು ತನ್ನ ಸಂಮರ್ದ ಬೀರುವುದೇ ಇದರ ಕಾರಣ. ಸಮುದ್ರ ಮಟ್ಟದಲ್ಲಿ ವಾಯುಮಂಡಲದ ತೂಕ (ಒತ್ತಡ) ಅತ್ಯಧಿಕ. ಅಲ್ಲಿಂದ ಎತ್ತರ ಪ್ರದೇಶಗಳಿಗೆ ಹೋಗಿ-ಅಂದರೆ ಪೀಠಭೂಮಿ, ಬೆಟ್ಟ, ಪರ್ವತ ಇತ್ಯಾದಿ-ಇದೇ ಪ್ರಯೋಗ ಮಾಡಿದರೆ ವಾಯುಭಾರಮಾಪಕದಲ್ಲಿಯ ಪಾದರಸಸ್ತಂಭ ಕೆಳಕ್ಕೆ ಇಳಿದಿರುತ್ತದೆ. ಆ ಎತ್ತರಗಳಲ್ಲಿ ವಾಯು ಮಂಡಲದ ತೂಕ ಸಮುದ್ರ ಮಟ್ಟದಲ್ಲಿರುವುದಕ್ಕಿಂತ ಕಡಿಮೆ ಇರುವುದರಿಂದ ಹೀಗಾಗುತ್ತದೆ. ಹೀಗೆ ಸಮುದ್ರ ಮಟ್ಟದಿಂದ ಸ್ಥಳದ ಉನ್ನತಿಗೇ ಅಲ್ಲಿಯ ವಾಯುಭಾರಮಾಪಕ ತೋರಿಸುವ ಪಾದರಸಸ್ತಂಭದ ಎತ್ತರಕ್ಕೂ ನಡುವೆ ಒಂದು ಸರಳ ಸಂಬಂಧವಿರುವುದನ್ನು ಕಾಣುತ್ತೇವೆ. ಎಂದೇ ಯಾವುದೇ ಸ್ಥಳದ ಉನ್ನತಿಯನ್ನು ಅಳೆಯಲು ವಾಯುಭಾರ ಮಾಪಕ ಬಲು ಉಪಯುಕ್ತ ಉಪಕರಣವಾಗಿದೆ.

ಮಾಪಕವನ್ನು ಕೊಂಚ ಓರೆಮಾಡಿದರೆ ಪಾದರಸ ಕೊಳವೆಯೊಳಕ್ಕೆ ಏರುತ್ತ ಹೋಗಿ ಕೊಳವೆಯಲ್ಲಿ ಪೂರ್ತಿಯಾಗಿ ತುಂಬಿಕೊಂಡು ಬಿಡುತ್ತದೆ. ಆದ್ದರಿಂದ ಕೊಳವೆಯಲ್ಲಿಯ ಪಾದರಸಸ್ತಂಭದ ಮೇಲಿರುವ ಪ್ರದೇಶ ನಿರ್ದ್ರವ್ಯತೆ (ವ್ಯಾಕ್ಯೂಮ್). ಇಲ್ಲಿ ಅಲ್ಪಸ್ವಲ್ಪ ಪಾದರಸಬಾಷ್ಪ ಇರಬಹುದು. ಈ ನಿರ್ದ್ರವ್ಯತಾಪ್ರದೇಶಕ್ಕೆ ಟೋರಿಚೆಲ್ಲಿ ನಿರ್ದ್ರವ್ಯತೆ ಎಂದು ಹೆಸರು. ಇದೊಂದು ಸರಳಪ್ರಕಾರದ, ಪಾದರಸ ವಾಯುಭಾರ ಮಾಪಕ.

ಕೊಳವೆಯಲ್ಲಿಯ ಪಾದರಸ ಊರ್ಧ್ವಸ್ತಂಭದಿಂದ ಪ್ರಯುಕ್ತವಾಗುವ ಅಧೋಮುಖ ಸಂಮರ್ದ ಪಾದರಸದ ಎತ್ತರ, ಸಾಂದ್ರತೆ ಮತ್ತು ಗುರುತ್ವವೇಗೋತ್ಕರ್ಷಗಳ ಗುಣಲಬ್ಧಕ್ಕೆ ಸಮ. ಈ ಸಂಮರ್ದವನ್ನು ಸರಿದೂಗಿಸಲು ಅದೇ ಮೊತ್ತದ ಊರ್ಧ್ವಮುಖಸಂಮರ್ದ ಅಗತ್ಯ. ಬಟ್ಟಲಿನಲ್ಲಿಯ ಪಾದರಸದ ಮೇಲುಭಾಗದಲ್ಲಿ ಇರುವ ವಾಯುಮಂಡಲದಿಂದ ಈ ಸಂಮರ್ದ ಒದಗುತ್ತದೆ. ಈ ಸಂಮರ್ದ ದ್ರವರೂಪದ ಪಾದರಸದ ಮುಖಾಂತರ ಪ್ರವಹಿಸಿ ಕೊಳವೆಯಲ್ಲಿ ಊರ್ಧ್ವಮುಖ ಸಂಮರ್ದವಾಗಿ ಪ್ರಕಟವಾಗುತ್ತದೆ. ಹೀಗಾಗಿ ಪಾದರಸಸ್ತಂಭದ ಆಳವೇ ವಾಯುಸಂಮರ್ದ ಮಾಪನೆಯಾಗುತ್ತದೆ. ಇದು ಸು. 1.013x10 ಡೈನ್/ಚ. ಸೆಂಮೀ ಎಂದು ಹೇಳಿದಾಗ 76 ಸೆಂಮೀ ಎತ್ತರದ, ಸಾಂದ್ರತೆ 13.6 ಗ್ರಾಮ್ ಘನಸೆಂಮೀ ಇರುವ, ಪಾದರಸದ ಸ್ತಂಭ ಗುರುತ್ವವೇಗೋತ್ಕರ್ಷ 981 ಸೆಂಮೀ/ಸೆಕೆಂಡ್2 ಇರುವ ಸನ್ನಿವೇಶದಲ್ಲಿ ಪ್ರಯುಕ್ತಿಸುವ ಸಂಮರ್ದ ಎಂದು ತಿಳಿಯಬೇಕು.

ವಾಯುಭಾರದ ಏರಿಳಿತಗಳನ್ನು ತಂತಾನಾಗಿ ಚಿತ್ರಿಸಿಕೊಂಡುಹೋಗುವ ನಿರಾರ್ದ್ರ ವಾಯುಭಾರಲೇಖಕ್ಕೆ ಬ್ಯಾರೊಗ್ರಾಫ್ ಎಂದು ಹೆಸರು. ಇದು ಅನಿರಾಯ್ಡ್ ವಾಯುಭಾರಮಾಪಕದ ತತ್ತ್ವದ ಪ್ರಕಾರ ಕೆಲಸ ನಿರ್ವಹಿಸುವುದು. ಏರಿಳಿತಗಳ ಲಿಖಿತದಾಖಲೆ ಇಲ್ಲಿ ಲಭಿಸುತ್ತದೆ.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: