ಸಾಲ್ಮನ್‌

ಸಾಲ್ಮನ್‌ ಎಂಬುದು ಸಾಲ್ಮನಿಡೆ ವರ್ಗದ ಅನೇಕ ಜಾತಿಗಳ ಮೀನುಗಳಿಗಿರುವ ಸಾಮಾನ್ಯ ಹೆಸರು. ಈ ವರ್ಗದ ಇತರ ಮೀನುಗಳನ್ನು ಟ್ರೌಟ್‌ ಎಂದು ಕರೆಯಲಾಗುತ್ತದೆ; ಇವುಗಳ ನಡುವಿನ ವ್ಯತ್ಯಾಸವೆಂದರೆ ಸಾಲ್ಮನ್‌ ವಲಸೆ ಹೋಗುತ್ತವೆ ಆದರೆ ಟ್ರೌಟ್‌ ವಲಸೆ ಹೋಗದೆ ಇದ್ದ ಸ್ಥಳದಲ್ಲೇ ಇರುತ್ತವೆ. ಇದೇ ಸಾಲ್ಮೊ ಕುಲದ ವಿಶಿಷ್ಟತೆಯಾಗಿದೆ. ಸಾಲ್ಮನ್‌ ಅಟ್ಲಾಂಟಿಕ್‌ (ಒಂದು ವಲಸೆ ಹೋಗುವ ಜಾತಿ ಸಾಲ್ಮೊ ಸಲಾರ್ ) ಮತ್ತು ಪೆಸಿಫಿಕ್ ಸಾಗರ ಎರಡರಲ್ಲೂ ಜೀವಿಸುತ್ತದೆ. ಮಾತ್ರವಲ್ಲದೆ ಇದು ಗ್ರೇಟ್ ಲೇಕ್ಸ್‌ನಲ್ಲೂ (ಓಂಕೊರಿಂಕಸ್‌ ಕುಲದ ಸುಮಾರು ಒಂದು ಡಜನ್ ಜಾತಿಗಳು) ಇರುತ್ತದೆ.

ಪ್ರಮುಖ ಪೆಸಿಫಿಕ್ ಸಾಲ್ಮನ್‌ ಜಾತಿಗಳು: ಸಾಕೆಯ್‌, ಚುಮ್‌, ಕರಾವಳಿಯ ಕಟ್‌ತ್ರೋಟ್ ಟ್ರೌಟ್‌, ಚಿನುಕ್‌, ಕೋಹೊ, ಸ್ಟೀಲ್‌ಹೆಡ್‌ ಮತ್ತು ಪಿಂಕ್

ವಿಶೇಷವಾಗಿ ಸಾಲ್ಮನ್‌ ಮೊಟ್ಟೆಯಿಡಲು ಕಡಲಿನಿಂದ ನದಿಗೆ ಬರುವವು: ಅವು ಸಿಹಿ ನೀರಿನಲ್ಲಿ ಹುಟ್ಟಿ, ಸಾಗರಕ್ಕೆ ವಲಸೆ ಹೋಗಿ ನಂತರ ಸಂತಾನೋತ್ಪತ್ತಿಗಾಗಿ ಮತ್ತೆ ಸಿಹಿ ನೀರಿಗೆ ಹಿಂದಿರುಗುತ್ತವೆ. ಸಿಹಿ ನೀರಿನಲ್ಲಿ ಜೀವಿಸುವ ಕೆಲವು ಜಾತಿಗಳೂ ಇವೆ. ಈ ಮೀನುಗಳು ಮೊಟ್ಟೆಯಿಂದ ಹೊರಬಂದ ಸ್ಥಳಕ್ಕೇ ಹಿಂದಿರುಗುತ್ತವೆ ಎಂಬ ಜನಪದ ನಂಬಿಕೆ ಇದೆ; ಸಂಶೋಧನಾ ಅಧ್ಯಯನಗಳು ಇದು ನಿಜವೆಂದು ತೋರಿಸಿವೆ. ಆದರೆ ಈ ನೆನೆಪಿಟ್ಟುಕೊಳ್ಳುವ ಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬುದು ಇನ್ನೂ ವಿವಾದಲ್ಲಿದೆ.

ಜೀವನ ಚಕ್ರ

ವಿವಿಧ ಬೆಳವಣಿಗೆ ಹಂತದ ಮೊಟ್ಟೆಗಳು.ಕೆಲವು ಮೊಟ್ಟೆಗಳಲ್ಲಿ ಹಳದಿ ಲೋಳೆಯ ಮೇಲೆ ಕೆಲವು ಜೀವಕೋಶಗಳು ಮಾತ್ರ ಬೆಳೆದಿವೆ, ಕೆಳಗಿನ ಬಲಗಡೆಯಲ್ಲಿರುವುದರಲ್ಲಿ ರಕ್ತ ನಾಳಗಳು ಹಳದಿ ಲೋಳೆಯನ್ನು ಸುತ್ತುವರಿದಿವೆ. ಅದಲ್ಲದೇ ಮೇಲ್ಭಾಗದ ಎಡಗಡೆಯಲ್ಲಿರುವುದರಲ್ಲಿ ಕಪ್ಪು ಕಣ್ಣುಗಳು, ಸಣ್ಣ ಲೆನ್ಸು ಸಹ ಗೋಚರವಾಗುತ್ತಿದೆ
ಸಾಲ್ಮನ್‌ ಮರಿಯು ಮೊಟ್ಟೆಯಿಂದ ಹೊರಬರುತ್ತಿರುವುದು — ಬೆಳೆದಿರುವ ಮರಿಯ ಸುತ್ತ ಉಳಿದ ಹಳದಿ ಲೋಳೆ ಇದೆ — ಹಳದಿ ಲೋಳೆಯ ಮತ್ತು ಸ್ವಲ್ಪ ಎಣ್ಣೆಯುಕ್ತ ಪದಾರ್ಥಗಳ ಸುತ್ತ ಇರುವ ರಕ್ತನಾಳಗಳು, ಕರುಳು, ಬೆನ್ನುಮ‌ೂಳೆ, ಬಾಲದ ಮುಖ್ಯ ರಕ್ತನಾಳ, ಚೀಲದಂಥ ಕೋಶ ಮತ್ತು ಕಿವಿರಿನ ಬಿಲ್ಲಿನಾಕಾರದ ರಚನೆ ಮೊದಲಾದವುಗಳು ಕಾಣಿಸುತ್ತವೆ.

ಸಾಲ್ಮನ್‌ ಮೊಟ್ಟೆಗಳನ್ನು ಸಿಹಿ ನೀರಿನ ಹಳ್ಳಗಳಲ್ಲಿ ವಿಶೇಷವಾಗಿ ಹೆಚ್ಚಿನ ಅಕ್ಷಾಂಶ ಪ್ರದೇಶಗಳಲ್ಲಿ ಇಡುತ್ತವೆ. ಮೊಟ್ಟೆಯೊಡೆದುಕೊಂಡು ಅಲೆವಿನ್‌ ಅಥವಾ ಸ್ಯಾಕ್ ಮರಿ ಗಳು ಹೊರಬರುತ್ತವೆ. ಈ ಮರಿಗಳು ಮರೆಮಾಡುವ ಲಂಬವಾಗಿರುವ ಪಟ್ಟೆಯೊಂದಿಗೆ ಅತಿ ಶೀಘ್ರದಲ್ಲಿ ಪಾರ್ ಆಗಿ ಬೆಳೆಯುತ್ತವೆ. ಪಾರ್‌ ಸ್ಮೋಲ್ಟ್‌ ‌ಗಳಾಗುವ ಮೊದಲು ಅವು ಹುಟ್ಟಿದ ಹಳ್ಳದಲ್ಲೇ 6 ತಿಂಗಳಿಂದ ಮ‌ೂರು ವರ್ಷಗಳ ಕಾಲ ಇರುತ್ತವೆ. ಈ ಸ್ಮೋಲ್ಟ್‌ಗಳು ಸುಲಭವಾಗಿ ಉಜ್ಜಿ ತೆಗೆಯಬಹುದಾದ ಪೊರೆಯೊಂದಿಗೆ ಗಾಢ ಬೆಳ್ಳಿಯ ಬಣ್ಣದಿಂದ ಭಿನ್ನವಾಗಿರುತ್ತವೆ. ಎಲ್ಲಾ ಸಾಲ್ಮನ್‌ ಮೊಟ್ಟೆಗಳಲ್ಲಿ ಕೇವಲ 10% ಮಾತ್ರ ಈ ಹಂತದವರೆಗೆ ಬದುಕುತ್ತವೆ ಎಂದು ಅಂದಾಜಿಸಲಾಗಿದೆ.[೧] ಸ್ಮೋಲ್ಟ್‌ಗಳ ದೇಹ ರಚನೆಯು ಬದಲಾಗಿ, ಅವುಗಳಿಗೆ ಉಪ್ಪು ನೀರಿನಲ್ಲಿ ಜೀವಿಸಲು ಅವಕಾಶ ಮಾಡಿಕೊಡುತ್ತದೆ. ಸ್ಮೋಲ್ಟ್‌ಗಳು ವಲಸೆ ಹೋಗುವುದಕ್ಕಿಂತ ಮೊದಲು ಸ್ವಲ್ಪ ಕಾಲವನ್ನು ಸ್ವಲ್ಪ ಉಪ್ಪಾದ ನೀರಿನಲ್ಲಿ ಕಳೆಯುತ್ತವೆ. ಅಲ್ಲಿ ಅವುಗಳ ದೇಹ ರಚನೆಯು ಸಾಗರದ ಆಸ್ಮೊ-ನಿಯಂತ್ರಣಕ್ಕೆ ಒಗ್ಗಿಸಿಕೊಳ್ಳುತ್ತದೆ.

ಸಾಲ್ಮನ್‌ ಒಂದರಿಂದ ಐದು ವರ್ಷಗಳ (ಜಾತಿಗಳ ಆಧಾರದಲ್ಲಿ) ಕಾಲ ತೆರೆದ ಸಾಗರದಲ್ಲಿ ಕಳೆಯುತ್ತವೆ. ಅಲ್ಲಿ ಅವು ಲೈಂಗಿಕವಾಗಿ ಪ್ರಬುದ್ಧವಾಗುತ್ತವೆ. ವಯಸ್ಕ ಸಾಲ್ಮನ್‌ ಮೊಟ್ಟೆ ಇಡುವುದಕ್ಕಾಗಿ ಅವುಗಳು ಹುಟ್ಟಿದ ಹಳ್ಳಕ್ಕೆ ಹಿಂದಿರುಗುತ್ತವೆ. ಅಲಸ್ಕಾದಲ್ಲಿ ಸಾಲ್ಮನ್‌ ಮತ್ತೊಂದು ಹಳ್ಳಕ್ಕೆ ಸಾಗುವಾಗ ಹೊಸ ಹಳ್ಳಗಳಿಗೆ ಹೋಗುವ ಸಾಧ್ಯತೆ ಇರುತ್ತದೆ. ಅಂದರೆ ಹಿಮನದಿಗಳಿಗೆ ಹೋಗಬಹುದು. ಸಾಲ್ಮನ್‌ ನೀರಿನಲ್ಲಿ ಚಲಿಸುವುದಕ್ಕೆ ಬಳಸುವ ನಿಖರವಾದ ವಿಧಾನವು ದೃಢಪಟ್ಟಿಲ್ಲ. ಆದರೆ ಅವು ವಾಸನೆ ಗ್ರಹಿಸುವ ಚುರುಕಾದ ಶಕ್ತಿಯನ್ನು ಹೊಂದಿರುತ್ತವೆ. ಅಟ್ಲಾಂಟಿಕ್‌ ಸಾಲ್ಮನ್‌ ಒಂದರಿಂದ ನಾಲ್ಕು ವರ್ಷಗಳ ಕಾಲ ಸಮುದ್ರದಲ್ಲಿ ಕಳೆಯುತ್ತವೆ. (ಕೇವಲ ಒಂದು ವರ್ಷವನ್ನು ಸಮುದ್ರದಲ್ಲಿ ಕಳೆದು ಹಿಂದಿರುಗುವ ಮೀನನ್ನು UK ಮತ್ತು ಐರ್ಲ್ಯಾಂಡ್‌ನಲ್ಲಿ ಗ್ರಿಲ್ಸ್‌ ಎಂದು ಕರೆಯುತ್ತಾರೆ.) ಮೊಟ್ಟೆಯಿಡಲು ಆರಂಭಿಸುವುದಕ್ಕಿಂತ ಮೊದಲು ಜಾತಿಗಳ ಆಧಾರದಲ್ಲಿ ಸಾಲ್ಮನ್‌ ಬದಲಾವಣೆಗೊಳಗಾಗುತ್ತದೆ. ಅವುಗಳಲ್ಲಿ ಒಂದು ಡುಬ್ಬದಂತಹ ರಚನೆಯಾಗಬಹುದು, ಕೋರೆ ಹಲ್ಲು ಬೆಳೆಯಬಹುದು ಮತ್ತು ಒಂದು ಕೈಪ್‌ (ಗಂಡು ಸಾಲ್ಮನ್‌ನಲ್ಲಿ ಕಂಡುಬರುವ ದವಡೆಯ ಎದ್ದುಕಾಣುವ ಒಂದು ಬಾಗು‌) ಹುಟ್ಟಿಕೊಳ್ಳಬಹುದು. ಸಮುದ್ರದಿಂದ ಹೊಸದಾಗಿ ಹಳ್ಳದೆಡೆಗೆ ಹೋಗುವ ಎಲ್ಲಾ ಮೀನುಗಳ ಬೆಳ್ಳಿಯಂಥ ನೀಲಿ ಬಣ್ಣವು ಗಾಢ ಬಣ್ಣಕ್ಕೆ ತಿರುಗುತ್ತದೆ. ಸಾಲ್ಮನ್‌ ವಿಸ್ಮಯಕರ ರೀತಿಯಲ್ಲಿ ಪ್ರಯಾಣಿಸುತ್ತದೆ. ಅವು ಕೆಲವೊಮ್ಮೆ ನೀರಿನ ಪ್ರವಾಹ ಮತ್ತು ವೇಗಕ್ಕೆ ವಿರುದ್ಧವಾಗಿ ಸಂತಾನೋತ್ಪತ್ತಿಗಾಗಿ ನೂರಾರು ಮೈಲುಗಳಷ್ಟು ದೂರ ಸಾಗುತ್ತವೆ. ಉದಾಹರಣೆಗಾಗಿ, ಕೇಂದ್ರ ಇದಾಹೊದ ಚಿನುಕ್ ಮತ್ತು ಸಾಕ್‌ಯೆ ಸಾಲ್ಮನ್‌ ಸುಮಾರು 900 miles (1,400 km) ದೂರಕ್ಕೆ ಸಾಗುತ್ತದೆ. ಅಲ್ಲದೇ ಮೊಟ್ಟೆಯಿಡುವುದಕ್ಕಾಗಿ ಪೆಸಿಫಿಕ್ ಸಾಗರದಿಂದ ಹೆಚ್ಚುಕಡಿಮೆ 7,000 feet (2,100 m) ಎತ್ತರಕ್ಕೆ ಏರುತ್ತವೆ. ಮೀನು ಸಿಹಿ ನೀರಿನಲ್ಲಿ ಹೆಚ್ಚು ಕಾಲ ಇದ್ದಷ್ಟು ಪರಿಸ್ಥಿತಿ ಕೆಡುತ್ತದೆ. ಅವು ಮೊಟ್ಟೆ ಇಟ್ಟ ನಂತರ ಮತ್ತಷ್ಟು ಕೆಡುತ್ತವೆ, ಆ ಸಂದರ್ಭದಲ್ಲಿ ಅವನ್ನು ಕೆಲ್ಟ್‌ ಗಳೆಂದು ಕರೆಯಲಾಗುತ್ತದೆ. ಪೆಸಿಫಿಕ್ ಸಾಲ್ಮನ್‌ನ ಎಲ್ಲಾ ಜಾತಿಗಳಲ್ಲಿ, ಬೆಳೆದ ಮೀನುಗಳು ಮೊಟ್ಟೆ ಇಟ್ಟ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ಸಾಯುತ್ತವೆ. ಈ ವಿಶಿಷ್ಟ ಲಕ್ಷಣವನ್ನು ಸೆಮೆಲ್‌ಪ್ಯಾರಿಟಿ ಎನ್ನುತ್ತಾರೆ. 2%ರಿಂದ 4%ನಷ್ಟು ಅಟ್ಲಾಂಟಿಕ್‌ ಸಾಲ್ಮನ್‌ ಕೆಲ್ಟ್‌ಗಳು ಮತ್ತೆ ಮೊಟ್ಟೆಯಿಡಲು ಬದುಕುಳಿಯುತ್ತವೆ. ಅವುಗಳೆಲ್ಲವೂ ಹೆಣ್ಣು ಮೀನುಗಳಾಗಿವೆ. ಆದರೂ, ಒಂದಕ್ಕಿಂತ ಹೆಚ್ಚು ಬಾರಿ ಮೊಟ್ಟೆಯಿಡಲು ಬದುಕುಳಿಯುವ (ಇಟೆರೊಪ್ಯಾರಿಟಿ) ಸಾಲ್ಮನ್‌‌ನ ಈ ಜಾತಿಗಳಲ್ಲಿ ಮೊಟ್ಟೆಯಿಟ್ಟ ನಂತರದ ಸಾವಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ (ಬಹುಶಃ 40ರಿಂದ 50%ನಷ್ಟು).

ಮೀನಾಂಡಗಳನ್ನು ಇಡಲು ಹೆಣ್ಣು ಸಾಲ್ಮನ್‌ ಅದರ ಬಾಲವನ್ನು (ಕಾಡಲ್ ಫಿನ್) ಬಳಸಿಕೊಳ್ಳುತ್ತದೆ. ಕಡಿಮೆ-ಒತ್ತಡದ ಜಾಗವನ್ನು ರಚಿಸಲು ಗ್ರ್ಯಾವಲ್ಅನ್ನು ಪ್ರವಾಹದ ದಿಕ್ಕಿಗೆ ತಳ್ಳಿ ರೆಡ್ಡ್ ಎನ್ನುವ ಅಷ್ಟೊಂದು ಆಳವಿಲ್ಲದ ಗುಂಡಿಯನ್ನು ತೋಡುತ್ತವೆ. ಕೆಲವೊಮ್ಮೆ 30 square feet (2.8 m2) ಆಳದ ರೆಡ್ಡ್ ಸುಮಾರು 5,000 ಮೊಟ್ಟೆಗಳನ್ನು ಹೊಂದಿರುತ್ತದೆ.[೨] ಮೊಟ್ಟೆಗಳು ಸಾಮಾನ್ಯವಾಗಿ ಕಿತ್ತಳೆ ಬಣ್ಣ ಅಥವಾ ಕೆಂಪು ಬಣ್ಣಗಳಲ್ಲಿರುತ್ತವೆ. ಒಂದು ಅಥವಾ ಅದಕ್ಕಿಂತ ಹೆಚ್ಚು ಗಂಡು ಮೀನುಗಳು ಮೀನಾಂಡಗಳಲ್ಲಿ ಅವುಗಳ ವೀರ್ಯ ಅಥವಾ ಶುಕ್ಲವನ್ನು ಹಾಕುವುದಕ್ಕಾಗಿ ಹೆಣ್ಣು ಮೀನಿನ ರೆಡ್ಡ್‌ನಲ್ಲಿ ಅವುಗಳನ್ನು ಸಂಧಿಸುತ್ತವೆ.[೩] ನಂತರ ಹೆಣ್ಣು ಮೀನು ಮತ್ತೊಂದು ರೆಡ್ಡ್ಅನ್ನು ಮಾಡುವುದಕ್ಕಾಗಿ ಹೋಗುವ ಮೊದಲು ಆ ಗುಂಡಿಯ ಪ್ರವಾಹದ ವಿರುದ್ಧ ದಿಕ್ಕಿನ ತುದಿಯಲ್ಲಿರುವ ಗ್ರ್ಯಾವಲ್ಅನ್ನು ಕದಡಿ ಮೊಟ್ಟೆಗಳನ್ನು ಮುಚ್ಚುತ್ತದೆ. ಹೆಣ್ಣು ಮೀನು ಮೊಟ್ಟೆಗಳನ್ನು ಇಡುವುದನ್ನು ಮುಗಿಸುವ ಮೊದಲು ಸುಮಾರು 7 ರೆಡ್ಡ್‌ಗಳನ್ನು ಮಾಡುತ್ತದೆ.[೩]

ಸಾಗರ ಹಂತದ ಗಂಡು ಚಿನುಕ್‌
ಸಿಹಿನೀರಿನ ಹಂತದ ಗಂಡು ಚಿನುಕ್‌

ಪ್ರತಿ ವರ್ಷ ಈ ಮೀನುಗಳು ಹೆಚ್ಚಾಗಿ ಬೇಸಿಗೆಯಲ್ಲಿ ವೇಗದ ಬೆಳವಣಿಗೆಯನ್ನು ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ಚಳಿಗಾಲದಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ. ಇದರಿಂದ ಮರದ ಕಾಂಡದಲ್ಲಿ ಕಂಡುಬರುವ ಬೆಳವಣಿಗೆಯ-ಸುರುಳಿಗಳನ್ನು ಹೋಲುವ ವರ್ತುಲಗಲ (ಆನ್ಯುಲಿ) ರಚನೆಯಾಗುತ್ತದೆ. ಸಿಹಿ ನೀರಿನ ಬೆಳವಣಿಗೆಯು ಒತ್ತಾಗಿರುವ ಸುರುಳಿಗಳನ್ನು ತೋರಿಸಿದರೆ, ಸಮುದ್ರ ನೀರಿನ ಬೆಳವಣಿಗೆಯಲ್ಲಿ ಈ ಮೀನುಗಳು ವ್ಯಾಪಕವಾಗಿ ಹರಡಿಕೊಂಡಿರುವ ಸುರುಳಿಗಳನ್ನು ಹೊಂದಿರುತ್ತವೆ. ಮೀನಿನ ದೇಹದ ದ್ರವ್ಯರಾಶಿಯು ಮೊಟ್ಟೆ ಮತ್ತು ಶುಕ್ಲವಾಗಿ ಪರಿವರ್ತಿತವಾಗುವುದರಿಂದ, ಮೊಟ್ಟೆಯಿಡುವುದನ್ನು ಕ್ಷೀಣಿಸುವಿಕೆ ಎಂದು ಹೇಳಬಹುದು.

ಸಿಹಿ ನೀರಿನ ಪ್ರವಾಹ ಮತ್ತು ಅಳಿವೆಗಳು ಹೆಚ್ಚಿನ ಸಾಲ್ಮನ್‌ ಜಾತಿಗಳಿಗೆ ಪ್ರಮುಖ ಆವಾಸವನ್ನು ಒದಗಿಸುತ್ತವೆ. ಅವು ಸಣ್ಣದಿರುವಾಗ ನೆಲದ ಮೇಲಿರುವ ಮತ್ತು ನೀರಿನಲ್ಲಿ ವಾಸಿಸುವ ಕೀಟಗಳು, ಆಂಫಿಪಾಡ್‌ಗಳು ಮತ್ತು ಇತರ ಕಠಿಣಚರ್ಮಿ(ಕ್ರಸ್ಟೇಷನ್)‌ಗಳನ್ನು ತಿನ್ನುತ್ತವೆ. ದೊಡ್ಡದಾದ ನಂತರ ಇತರ ಮೀನುಗಳನ್ನೂ ಸೇವಿಸುತ್ತವೆ. ಅವು ಮೊಟ್ಟೆಗಳನ್ನು ದೊಡ್ಡ ಗ್ರ್ಯಾವಲ್‌ನೊಂದಿಗೆ ನೀರಿನ ಹೆಚ್ಚು ಆಳದಲ್ಲಿ ಇಡುತ್ತವೆ. ಆ ಮೊಟ್ಟೆಗಳೊಳಗಿನ ಭ್ರೂಣಗಳು ಬೆಳವಣಿಗೆ ಹೊಂದಲು ತಣ್ಣಗಿನ ಮತ್ತು ಉತ್ತಮ ನೀರಿನ ಅವಶ್ಯಕತೆ ಇರುತ್ತದೆ. ನೈಸರ್ಗಿಕ ಪರಭಕ್ಷಣಗಳಿಂದಾಗಿ ಹಾಗೂ ಹೂಳು ತುಂಬುವಿಕೆ, ನೀರಿನ ತಾಪಮಾನ ಹೆಚ್ಚಾಗುವುದು, ಆಮ್ಲಜನಕದ ಸಾಂದ್ರೀಕರಣ ಕಡಿಮೆಯಾಗುವುದು, ಹಳ್ಳಗಳ ಸಂರಕ್ಷಣೆಯ ಕ್ಷೀಣಿಸುವಿಕೆ ಮತ್ತು ನದಿಗಳಲ್ಲಿ ನೀರಿನ ಪ್ರವಾಹದ ಇಳಿಕೆ ಮೊದಲಾದ ಆವಾಸಗಳಲ್ಲಿ ಮಾನವ-ಮಾಡಿದ ಬದಲಾವಣೆಗಳಿಂದಾಗಿ ಸಾಲ್ಮನ್‌‌ ಅದರ ಜೀವಿತಾವಧಿಗಿಂತ ಅತಿ ಶೀಘ್ರದಲ್ಲಿ ಸಾಯುವ ಪ್ರಮಾಣವು ಹೆಚ್ಚಾಗಿದೆ. ಅಳಿವೆಗಳು ಮತ್ತು ಅವುಗಳ ಜತೆಯ ಜೌಗು ಭೂಮಿಯು ಸಾಲ್ಮನ್‌ ತೆರೆದ ಸಾಗರಕ್ಕೆ ಹೋಗುವುದಕ್ಕಿಂತ ಮೊದಲು ಅವುಗಳಿಗೆ ಜೀವಧಾರಕ ಪೋಷಣ ಸ್ಥಾನವನ್ನು ನೀಡುತ್ತವೆ. ಜೌಗು ಭೂಮಿಯು ಹೂಳು ತುಂಬಿಕೊಳ್ಳುವುದರಿಂದ ಮತ್ತು ಮಾಲಿನ್ಯದಿಂದ ಅಳಿವೆಗಳನ್ನು ರಕ್ಷಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ಪ್ರಮುಖ ಆಹಾರ ಒದಗಿಸುವ ಮತ್ತು ಬಚ್ಚಿಟ್ಟುಕೊಳ್ಳುವ ಪ್ರದೇಶಗಳನ್ನೂ ಒದಗಿಸುತ್ತದೆ.

ಜಾತಿ

ವಿವಿಧ ಜಾತಿಯ ಸಾಲ್ಮನ್‌ ಅನೇಕ ಹೆಸರುಗಳನ್ನು ಮತ್ತು ಭಿನ್ನ ಗುಣಲಕ್ಷಣಗಳನ್ನು ಹೊಂದಿವೆ.

ಅಟ್ಲಾಂಟಿಕ್‌ ಸಾಗರ ಜಾತಿ

ಅಟ್ಲಾಂಟಿಕ್‌ ಸಾಲ್ಮನ್‌

ಅಟ್ಲಾಂಟಿಕ್‌ ಸಾಗರ ಜಾತಿಯು ಸಾಲ್ಮೊ ಎಂಬ ಕುಲಕ್ಕೆ ಸೇರಿದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿವೆ -

  • ಅಟ್ಲಾಂಟಿಕ್‌ ಸಾಲ್ಮನ್‌ ಅಥವಾ ಸಾಲ್ಮನ್‌ (ಸಾಲ್ಮೊ ಸಲಾರ್ ) - ಇದು ವರ್ಗೀಕರಣಗೊಂಡ ಮೊದಲ ಸಾಲ್ಮನ್‌.

ಪೆಸಿಫಿಕ್ ಸಾಗರ ಜಾತಿ

ಪೆಸಿಫಿಕ್ ಜಾತಿಯು ಓಂಕೊರಿಂಕಸ್‌ ಕುಲಕ್ಕೆ ಸೇರಿದೆ. ಕೆಲವು ಉದಾಹರಣೆಗಳು ಹೀಗಿವೆ;

  • ಚೆರ್ರಿ ಸಾಲ್ಮನ್‌ (ಓಂಕೊರಿಂಕಸ್‌ ಮಾಸು ಅಥವಾ O. ಮಾಸೊಯ್ ) ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಜಪಾನ್, ಕೊರಿಯಾ ಮತ್ತು ರಷ್ಯಾಗಳಲ್ಲಿ ಮಾತ್ರ ಕಂಡುಬರುತ್ತದೆ. ಅಲ್ಲದೆ ಕೇಂದ್ರ ತೈವಾನ್‌ನ ಚಿ ಚಿಯಾ ವ್ಯಾನ್ ಸ್ಟ್ರೀಮ್‌ನಲ್ಲಿ ನೆಲಾವೃತವಾಗಿದೆ.[೪]
  • ಚಿನುಕ್‌ ಸಾಲ್ಮನ್‌ (ಓಂಕೊರಿಂಕಸ್‌ ತ್ಶ್ಯಾವಿಟ್ಸ್ಚಾ ) - ಇದನ್ನು USAನಲ್ಲಿ ಕಿಂಗ್ ಅಥವಾ ಬ್ಲ್ಯಾಕ್‌ಮೌತ್‍‌ ಸಾಲ್ಮನ್‌ ಎಂದು ಹಾಗೂ ಬ್ರಿಟಿಷ್ ಕೊಲಂಬಿಯಾದಲ್ಲಿ ಸ್ಪ್ರಿಂಗ್ ಸಾಲ್ಮನ್‌ ಎಂದು ಕರೆಯಲಾಗುತ್ತದೆ. ಎಲ್ಲಾ ಪೆಸಿಫಿಕ್ ಸಾಲ್ಮನ್‌ಗಳಿಗಿಂತ ಚಿನುಕ್‌ ಅತಿ ದೊಡ್ಡದಾಗಿರುವವು. ಇವು ಸಾಮಾನ್ಯವಾಗಿ 30 lb (14 kg)ನಷ್ಟನ್ನು ಮೀರುತ್ತವೆ.[೫] ಸುಮಾರು 30 ಪೌಂಡ್‌ ತೂಕದ ಚಿನುಕ್‌ಅನ್ನು ಸೂಚಿಸಲು ಬ್ರಿಟಿಷ್ ಕೊಲಂಬಿಯಾದಲ್ಲಿ ಟೈಯೀ ಎಂಬ ಹೆಸರನ್ನು ಬಳಸಲಾಗುತ್ತದೆ. ಚಿನುಕ್‌ ಸಾಲ್ಮನ್‌ ಕೇಂದ್ರ ಕೆನಾಡಿಯನ್ ಆರ್ಕಟಿಕ್‌ನ ಮ್ಯಾಕೆಂಜೀ ನದಿ ಮತ್ತು ಕುಗ್ಲುಕ್ಟುಕ್‌ನಷ್ಟು ಉತ್ತರಕ್ಕೆ ಹರಡಿಕೊಂಡಿವೆ.[೬]
  • ಚುಮ್‌ ಸಾಲ್ಮನ್‌ಅನ್ನು (ಓಂಕೊರಿಂಕಸ್‌ ಕೇಟಾ ) USAಯ ಕೆಲವು ಭಾಗಗಳಲ್ಲಿ ಡಾಗ್, ಕೇಟಾ ಅಥವಾ ಕ್ಯಾಲಿಕೊ ಸಾಲ್ಮನ್‌ ಎಂದು ಕರೆಯುತ್ತಾರೆ. ಈ ಜಾತಿಯು ಪೆಸಿಫಿಕ್ ಜಾತಿಗಳಲ್ಲೇ ಅತಿ ವ್ಯಾಪಕವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ:[೭] ದಕ್ಷಿಣಕ್ಕೆ ಪೂರ್ವದ ಪೆಸಿಫಿಕ್‌ನ ಕ್ಯಾಲಿಫೋರ್ನಿಯಾದ 0}ಸ್ಯಾಕ್ರಮೆಂಟೊ ನದಿ ಮತ್ತು ಪಶ್ಚಿಮ ಪೆಸಿಫಿಕ್‌ನ ಸೀ ಆಫ್ ಜಪಾನ್‌‌ನ ಕ್ಯುಶು ದ್ವೀಪದವರೆಗೆ; ಉತ್ತರಕ್ಕೆ ಪೂರ್ವದ ಕೆನಡಾದ ಮ್ಯಾಕೆಂಜೀ ನದಿ‌ ಮತ್ತು ಪಶ್ಚಿಮದ ಸೈಬೀರಿಯಾದ ಲೇನಾ ನದಿಯವರೆಗೆ.
ಸಾಗರ ಹಂತದ ಗಂಡು ಕೋಹೊ ಸಾಲ್ಮನ್‌
  • ಕೋಹೊ ಸಾಲ್ಮನ್‌ಅನ್ನು (ಓಂಕೊರಿಂಕಸ್‌ ಕಿಸುಟ್ಚ್ ) USAಯಲ್ಲಿ ಸಿಲ್ವರ್‌ ಸಾಲ್ಮನ್‌ ಎಂದೂ ಕರೆಯುತ್ತಾರೆ. ಈ ಜಾತಿ ಅಲಸ್ಕಾ ಮತ್ತು ಬ್ರಿಟಿಷ್ ಕೊಲಂಬಿಯಾದ ಕರಾವಳಿ ಪ್ರದೇಶದ ನೀರಿನಲ್ಲಿ ಹಾಗೂ ಹರಿಯುವ ಹೊಳೆ ಮತ್ತು ನದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವು ಈಗ ಮ್ಯಾಕೆಂಜೀ ನದಿಯಲ್ಲೂ ಕಾಣಸಿಗುತ್ತವೆ.[೬]
  • ಪಿಂಕ್ ಸಾಲ್ಮನ್‌ಅನ್ನು (ಓಂಕೊರಿಂಕಸ್‌ ಗಾರ್ಬಸ್ಚ ) ಅಲಸ್ಕಾದ ಆಗ್ನೇಯ ಮತ್ತು ನೈಋತ್ಯ ಭಾಗಗಳಲ್ಲಿ ಹಂಪಿಗಳೆಂದು ಕರೆಯುತ್ತಾರೆ. ಇವು ಉತ್ತರ ಕ್ಯಾಲಿಫೋರ್ನಿಯಾ ಮತ್ತು ಕೊರಿಯಾದಿಂದ ಉತ್ತರ ಪೆಸಿಫಿಕ್‌ನಾದ್ಯಂತ ಹಾಗೂ ಕೆನಡಾದ ಮ್ಯಾಕೆಂಜೀ ನದಿ[೬] ಯಿಂದ ಸೈಬೀರಿಯಾದ ಲೇನಾ ನದಿಯವರೆಗೆ ಸಾಮಾನ್ಯವಾಗಿ ಕರಾವಳಿಯ ಸಣ್ಣ ಹೊಳೆಗಳಲ್ಲಿ ಕಂಡುಬರುತ್ತವೆ. ಇವು ಸುಮಾರು 3.5 lb (1.6 kg)ರಿಂದ 4 lb (1.8 kg)ರಷ್ಟು ತೂಕವನ್ನು ಹೊಂದಿರುವುದರೊಂದಿಗೆ ಪೆಸಿಫಿಕ್ ಜಾತಿಗಳಲ್ಲೇ ಅತಿ ಸಣ್ಣದಾಗಿರುವವು.[೮]
  • ಸಾಕೆಯ್‌ ಸಾಲ್ಮನ್‌ಅನ್ನು (ಓಂಕೊರಿಂಕಸ್‌ ನೆರ್ಕಾ ) USAಯಲ್ಲಿ ರೆಡ್ ಸಾಲ್ಮನ್ ಎನ್ನುತ್ತಾರೆ‌.[೯] ಈ ಸರೋವರಗಳಲ್ಲಿ-ವಾಸಿಸುವ ಜಾತಿಗಳು ಪೂರ್ವ ಪೆಸಿಫಿಕ್‌ನ ಕ್ಯಾಲಿಫೋರ್ನಿಯಾದ ಕ್ಲ್ಯಾಮತ್ ನದಿ ಮತ್ತು ಪಶ್ಚಿಮ ಪೆಸಿಫಿಕ್‌ನ ಜಪಾನ್‌ನ ಉತ್ತರದ ಹೊಕೈಡೊ ದ್ವೀಪದಷ್ಟು ದಕ್ಷಿಣಕ್ಕೆ ಹಾಗೂ ಪೂರ್ವದ ಕೆನಡಿಯನ್ ಆರ್ಕಟಿಕ್‌‌ನ ಬ್ಯಾಥರ್ಸ್ಟ್ ಇನ್ಲೆಟ್ ಮತ್ತು ಪಶ್ಚಿಮದ ಸೈಬೀರಿಯಾದ ಆನಡಿರ್‌ ನದಿಯಷ್ಟು ಉತ್ತರಕ್ಕೆ ಕಂಡುಬರುತ್ತದೆ. ಹೆಚ್ಚಿನ ದೊಡ್ಡ ಪೆಸಿಫಿಕ್ ಸಾಲ್ಮನ್‌ಗಳು ಸಣ್ಣ ಮೀನು, ಸಿಗಡಿ ಮತ್ತು ಸ್ಕ್ವಿಡ್‌ಗಳನ್ನು ತಿಂದರೂ, ಸಾಕೆಯ್‌‌ಗಳು ಅವುಗಳ ಕಿವಿರುಗಳ ಮ‌ೂಲಕ ಶೋಧಿಸಿ ಪ್ಲವಕ(ಪ್ಲ್ಯಾಂಕ್ಟನ್)ಗಳನ್ನು ತಿನ್ನುತ್ತವೆ.[೩]

ನಿಜವಾದ ಸಾಲ್ಮನ್‌

ರೈನ್‌ಬೊ ಟ್ರೌಟ್‌
ಸಾಗರ ಹಂತದ ಗಂಡು ಸ್ಟೀಲ್‌ಹೆಡ್‌ ಸಾಲ್ಮನ್‌

ಸ್ಟೀಲ್‌ಹೆಡ್‌ ನಿಜವಾದ ಸಾಲ್ಮನ್‌‌ಗಳಾಗಿವೆ. ಇವು ಜೀವಿ ವರ್ಗೀಕರಣದ ಸಾಲ್ಮನಿಡೆ ವಂಶಕ್ಕೆ ಸೇರಿವೆ; ಎಲ್ಲಾ ಆಧುನಿಕ ಮ‌ೂಲಗಳ ಪಟ್ಟಿಯು ಈ ಕೆಳಗಿನಂತಿದೆ. ಇದರಲ್ಲಿ ತುಂಬಾ ಗೊಂದಲವಿದೆ ಹಾಗೂ ಹೆಚ್ಚಿನ ಪುಸ್ತಕಗಳು ಇದರ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡುವುದಿಲ್ಲ.[೧೦]

  • ರೈನ್‌ಬೊ ಟ್ರೌಟ್‌ ಅಥವಾ ಸ್ಟೀಲ್‌ಹೆಡ್‌ ಟ್ರೌಟ್‌ (ಓಂಕೊರಿಂಕಸ್‌ ಮೈಕಿಸ್ ) ನದಿಗಳಲ್ಲಿ ಮೊಟ್ಟೆಯಿಡುವವು. ಇವು ಸಾಮಾನ್ಯವಾಗಿ ಚಿನುಕ್‌‌ಗಳಿರುವ ನದಿಗಳಲ್ಲೇ ಕಂಡುಬರುತ್ತವೆ. ವಿಶೇಷವಾಗಿ ಕೊಲಂಬಿಯಾ, ಸ್ನೇಕ್, ಸ್ಕೀನಾ ಮತ್ತು ಉತ್ತರ ಅಮೆರಿಕಾದ ಪೆಸಿಫಿಕ್ ಕರಾವಳಿಯ ಇತರ ದೊಡ್ಡ ನದಿಗಳಲ್ಲಿ ಕಾಣಸಿಗುತ್ತವೆ. ಸ್ಟೀಲ್‌ಹೆಡ್‌ ಲಾರೆಂಟಿಯನ್ ಗ್ರೇಟ್ ಲೇಕ್ಸ್‌ನ ಸುತ್ತಮುತ್ತಲಿನ ಇತರ ನದಿಗಳಲ್ಲೂ ಪ್ರವೇಶಿಸಿದೆ.

ಇತರ ಜಾತಿ

  • ಲ್ಯಾಂಡ್-ಲಾಕ್ಡ್ ಸಾಲ್ಮನ್‌ (ಸಾಲ್ಮೊ ಸಲಾರ್ ಸೆಬಾಗೊ ) ಉತ್ತರ ಅಮೆರಿಕಾದ ಪೂರ್ವದಲ್ಲಿರುವ ಅನೇಕ ಸರೋವರಗಳಲ್ಲಿ ಜೀವಿಸುತ್ತವೆ. ಅಟ್ಲಾಂಟಿಕ್‌ ಸಾಲ್ಮನ್‌‌ನ ಈ ಉಪಜಾತಿಯು ವಲಸೆ-ಹೋಗುವುದಿಲ್ಲ. ಆದರೂ ಸಮುದ್ರಕ್ಕೆ ಹೋಗುವ ನಿರ್ಬಂಧವನ್ನು ಹೊಂದಿರುವುದಿಲ್ಲ. ಕ್ವಿಜಿಯಾವನ್ ಹೊಳೆಯಲ್ಲಿರುವ ಮತ್ತೊಂದು ರೀತಿಯ ಲ್ಯಾಂಡ್‌ಲಾಕ್ಡ್ ಸಾಲ್ಮನ್‌ ಎಂದರೆ ತೈವಾನ್.
  • ಕೊಕ್ಯಾನೀ ಸಾಲ್ಮನ್‌ ಸಾಕೆಯ್‌ ಸಾಲ್ಮನ್‌ನ ನೆಲಾವೃತ(ಲ್ಯಾಂಡ್‌ಲಾಕ್ಡ್) ಪ್ರಕಾರವಾಗಿದೆ.
  • ಹಚೆನ್‌' ಅಥವಾ ಡ್ಯಾನ್ಯೂಬ್ ಸಾಲ್ಮನ್‌' (ಹುಚೊ ಹುಚೊ ) - ಇದು ಸಿಹಿ ನೀರಿನಲ್ಲಿ ಶಾಶ್ವತವಾಗಿರುವ ಅತಿದೊಡ್ಡ ಸಾಲ್ಮನಿಡ್.

ಸಾಲ್ಮನ್‌ ಮೀನುಗಾರಿಕೆ

ಅಲಸ್ಕಾದ ಬೆಚಾರಫ್ ವೈಲ್ಡರ್ನೆಸ್‌ನ ಬೆಚಾರಫ್ ಕ್ರೀಕ್‌ನಲ್ಲಿ ಮೊಟ್ಟೆಯಿಡುತ್ತಿರುವ ಸಾಕೆಯ್‌ ಸಾಲ್ಮನ್‌

ಸಾಲ್ಮನ್‌ ಬಹುಕಾಲದಿಂದಲೂ ಕರಾವಳಿ ನಿವಾಸಿಗರ ಕೃಷಿ ಮತ್ತು ಜೀವನೋಪಾಯದ ಕೇಂದ್ರ ಭಾಗವಾಗಿದೆ. ಉತ್ತರ ಪೆಸಿಫಿಕ್ ತೀರದ ಹೆಚ್ಚಿನ ಜನರು ಈ ಮೀನಿನಿಂದ ಬರುವ ವರ್ಷದ ಮೊದಲ ಆದಾಯದ ಗೌರವಸೂಚಕವಾಗಿ ಕಾರ್ಯಕ್ರಮವೊಂದನ್ನು ಮಾಡುತ್ತಾರೆ. ಅನೇಕ ಶತಮಾನಗಳಿಂದಲೂ ಜನರು ಸಾಲ್ಮನ್‌ಅನ್ನು ಅವು ಮೊಟ್ಟಯಿಡುವುದಕ್ಕಾಗಿ ಮೇಲಕ್ಕೆ ಈಜಿಕೊಂಡು ಹೋಗುವಾಗ ಹಿಡಿಯುತ್ತಿದ್ದಾರೆ. ಸೆಲಿಲೊ ಫಾಲ್ಸ್‌‌ನ ಕೊಲಂಬಿಯಾ ನದಿಯ ಒಂದು ಪ್ರಸಿದ್ಧ ಸ್ಪಾರ್‌ಫಿಶಿಂಗ್ ತಾಣವು ಆ ನದಿಗೆ ಭಾರಿ ಅಣೆಕಟ್ಟುಗಳನ್ನು ಕಟ್ಟಿದ ನಂತರ ಮುಳುಗಿಹೋಯಿತು. ಉತ್ತರ ಜಪಾನಿನ ಐನು, ನಾಯಿಗಳನ್ನು ತರಬೇತಿ ಮೈದಾನ ಎನ್ ಮ್ಯಾಸ್ಸೆ ಗೆ ಕರೆದುಕೊಂಡು ಬರುವಾಗ ಅವುಗಳಿಗೆ ಸಾಲ್ಮನ್‌ಅನ್ನು ಹಿಡಿಯುವು ಹೇಗೆ ಎಂಬುದನ್ನು ಕಲಿಸಿಕೊಡುತ್ತಿದ್ದರು. ಈಗ ಸಾಲ್ಮನ್‌ಗಳನ್ನು ಕೊಲ್ಲಿ ಮತ್ತು ತೀರ ಪ್ರದೇಶಗಳಲ್ಲಿ ಹಿಡಿಯುತ್ತಾರೆ.

ಸಾಲ್ಮನ್‌ ಸಂಖ್ಯಾ ಪ್ರಮಾಣವು ಅಟ್ಲಾಂಟಿಕ್‌ ಮತ್ತು ಪೆಸಿಫಿಕ್‌ನ ಇತರ ಭಾಗಗಳಲ್ಲಿ ಸಾಕಷ್ಟಿದೆ. ಆದರೆ ಇದು ಅಲಸ್ಕಾ ಶೇಖರಣೆಯಲ್ಲಿ ಇನ್ನೂ ಹೇರಳವಾಗಿದೆ. ಪೆಸಿಫಿಕ್ ಸಾಲ್ಮನ್‌ನ ಮೀನು ಕೃಷಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಎಕ್ಸ್‌ಕ್ಲ್ಯೂಸಿವ್ ಇಕಾನಮಿಕ್ ಜೋನ್‌ನಲ್ಲಿ[೧೧] ನಿಷೇಧಿಸಲಾಗಿದೆ. ಆದರೂ ಅಲ್ಲಿ ಸಾರ್ವಜನಿಕವಾಗಿ ಬಂಡವಾಳ ಹೂಡಿದ ಮೊಟ್ಟೆಕೇಂದ್ರದ[೧೨] ಭಾರಿ ಜಾಲವೊಂದಿದೆ. ಅಲಸ್ಕಾದ ಮೀನುಗಾರಿಕೆ ನಿರ್ವಹಣಾ ವ್ಯವಸ್ಥೆಯನ್ನು ನಿಸರ್ಗ ಸಹಜ ಸ್ಥಿತಿಯಲ್ಲಿರುವ ಮೀನುಗಳನ್ನು ಸಂಗ್ರಹಿಸುವ ಮುಖ್ಯ ಕೇಂದ್ರವೆಂದು ಹೇಳಲಾಗುತ್ತದೆ. ಕೆಲವು ಹೆಚ್ಚು ಪ್ರಮುಖ ಅಲಸ್ಕಾದ ಸಾಲ್ಮನ್ ನಿಸರ್ಗ ಸಹಜ ಸ್ಥಿತಿಯಲ್ಲಿನ ಮೀನುಗಾರಿಕೆಯು ಕೆನೈ ನದಿ, ಕಾಪರ್ ನದಿ ಮತ್ತು ಬ್ರಿಸ್ಟಾಲ್ ಕೊಲ್ಲಿಗಳ ಹತ್ತಿರದಲ್ಲಿದೆ. ಕೆನಡಾದ ಸ್ಕೀನಾ ನದಿಯಲ್ಲಿನ ಸಾಲ್ಮನ್‌ ಮೀನುಗಳು ವಾಣಿಜ್ಯ, ಜೀವನೋಪಾಯ ಮತ್ತು ಮನರಂಜನೆಯ ಮೀನುಗಾರಿಕೆಗೆ ಬೆಂಬಲ ನೀಡುತ್ತವೆ. ಅಲ್ಲದೆ ಜಲಾನಯನ ಪ್ರದೇಶದ ನೂರಾರು ಮೈಲು ಒಳಪ್ರದೇಶದ ಸಮುದಾಯಗಳಿಗೆ ಮತ್ತು ಕರಾವಳಿಯಲ್ಲಿರುವ ನಾನಾಬಗೆಯ ಜೀವಿಕುಲಗಳಿಗೂ ಸಹಾಯ ಮಾಡುತ್ತವೆ. ವಾಷಿಂಗ್ಟನ್‌ನಲ್ಲಿನ ನಿಸರ್ಗ ಸಹಜ ಸ್ಥಿತಿಯಲ್ಲಿರುವ ಸಾಲ್ಮನ್‌ಗಳ ಪ್ರಾಮುಖ್ಯತೆಯು ಮಿಶ್ರವಾಗಿದೆ. ಸಾಲ್ಮನ್‌ ಮತ್ತು ಸ್ಟೀಲ್‌ಹೆಡ್‌ಗಳ 435 ಕೃಷಿ ಮಾಡಿ ಬೆಳೆಸಿಲ್ಲದ ಸಂಗ್ರಹಗಳಲ್ಲಿ ಕೇವಲ 187 ಸಂಗ್ರಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ; 113 ಸಂಗ್ರಹಗಳ ಬಗ್ಗೆ ನಿಖರವಾಗಿ ತಿಳಿದಿಲ್ಲ, 1 ಸಂಗ್ರಹವು ನಾಶಗೊಂಡಿದೆ, 12 ಅಪಾಯದಂಚಿನಲ್ಲಿವೆ ಮತ್ತು 122 ಸಂಗ್ರಹಗಳಲ್ಲಿ ಅತಿ ಕಡಿಮೆ ಸಂಖ್ಯೆಯ ಮೀನುಗಳಿವೆ.[೧೩] ಕೊಲಂಬಿಯಾ ನದಿ ಸಾಲ್ಮನ್‌ ಸಂಖ್ಯೆಯು ಈಗ ಲೆವಿಸ್ ಮತ್ತು ಕ್ಲಾರ್ಕ್ ನದಿಯನ್ನು ತಲುಪಿದಾಗ ಇದ್ದುದಕ್ಕಿಂತ 3%ಗಿಂತಲೂ ಕಡಿಮೆಯಾಗಿವೆ.[೧೪] ಕ್ಲ್ಯಾಮತ್ ಅಥವಾ ಸ್ಯಾಕ್ರಮೆಂಟೊ ನದಿಗಳಲ್ಲಿ ಬರುವ ಆದಾಯವು ತುಂಬಾ ಕಡಿಮೆ ಇದ್ದು, ವ್ಯಾಪಾರಿ ಮೀನುಗಾರರಿಗೆ ಡಾಲರ್‌ಗಟ್ಟಲೆ ನಷ್ಟಕ್ಕೆ ಕಾರಣವಾಗಿರುವುದರಿಂದ, ಕ್ಯಾಲಿಫೋರ್ನಿಯಾದ ವಾಣಿಜ್ಯ ಸಾಲ್ಮನ್‌-ಮೀನುಗಾರಿಕೆಯು ತೀವ್ರವಾಗಿ ಕಡಿಮೆಯಾಗಿದೆ ಅಥವಾ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ನಿಂತೇ ಹೋಗಿದೆ.[೧೫] ಅಟ್ಲಾಂಟಿಕ್‌ ಮತ್ತು ಪೆಸಿಫಿಕ್ ಸಾಲ್ಮನ್‌‌ಗಳೆರಡೂ ಸ್ಪೋರ್ಟ್‌ಫಿಶ್‌ಗೆ ಜನಪ್ರಿಯವಾಗಿವೆ.

ಜಲಚರ ಸಾಕಣೆ

ಫಿನ್‌ಲ್ಯಾಂಡ್‌ನ ಅನೇಕ ದ್ವೀಪಗಳುಳ್ಳ ಸಮುದ್ರದಲ್ಲಿರುವ ಸಾಲ್ಮನ್‌ ಸಾಕಣೆ ಕೇಂದ್ರ.

ಸಾಲ್ಮನ್‌ ಸಾಕಣೆಯು ವಾರ್ಷಿಕವಾಗಿ ಸುಮಾರು U$1 ಶತಕೋಟಿಯಷ್ಟು ಲಾಭದೊಂದಿಗೆ ಪ್ರಪಂಚದ ಮೀನುಗಾರಿಕಾ ಉತ್ಪನಕ್ಕೆ ಪ್ರಮುಖ ಆರ್ಥಿಕ ಕೊಡುಗೆಯನ್ನು ನೀಡುತ್ತಿದೆ. ಸಾಮಾನ್ಯವಾಗಿ ಕೃಷಿ ಮಾಡುವ ಇತರ ಮೀನು ಜಾತಿಗಳೆಂದರೆ: ಟಿಲಪಿಯಾ, ಕ್ಯಾಟ್‌ಫಿಶ್, ಸೀ ಬ್ಯಾಸ್, ಕಾರ್ಪ್, ಬ್ರೀಮ್ ಮತ್ತು ಟ್ರೌಟ್‌. ಸಾಲ್ಮನ್‌ ಕೃಷಿಯನ್ನು ಚಿಲಿ, ನಾರ್ವೆ, ಸ್ಕಾಟ್‌ಲ್ಯಾಂಡ್, ಕೆನಡಾ ಮತ್ತು ಫೇರೊ ದ್ವೀಪಗಳಲ್ಲಿ ತುಂಬಾ ದೊಡ್ಡದಾಗಿ ಮಾಡುತ್ತಾರೆ ಹಾಗೂ ಇವು ಅಮೆರಿಕ ಮತ್ತು ಯುರೋಪ್‌ನಲ್ಲಿ ಬಳಸುವ ಹೆಚ್ಚಿನ ಸಾಲ್ಮನ್‌‌ಗಳಿಗೆ ಮ‌ೂಲವಾಗಿವೆ. ಅಟ್ಲಾಂಟಿಕ್‌ ಸಾಲ್ಮನ್‌‌ಗಳನ್ನು ರಷ್ಯಾದಲ್ಲಿ ಮತ್ತು ಆಸ್ಟ್ರೇಲಿಯಾದ ಟ್ಯಾಸ್ಮೇನಿಯಾ ದ್ವೀಪದಲ್ಲೂ ಕಡಿಮೆ ಪ್ರಮಾಣದಲ್ಲಿ ಕೃಷಿ ಮಾಡುತ್ತಾರೆ.

ಸಾಲ್ಮನ್‌‌ಗಳು ಮಾಂಸಾಹಾರಿಗಳು. ಇವು ಇತರ ಮೀನುಗಳನ್ನು ಮತ್ತು ಸಮುದ್ರದಲ್ಲಿನ ಇತರ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಸಾಲ್ಮನ್‌ ಕೃಷಿಯು ನಿಸರ್ಗ ಸ್ಥಿತಿಯಲ್ಲಿರುವ ಮೇವಿನ ಮೀನುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಸಾಲ್ಮನ್‌ಗಳಿಗೆ ಅತಿಹೆಚ್ಚು ಪ್ರಮಾಣದ ಪ್ರೋಟೀನ್‌ ಆಹಾರದ ಅವಶ್ಯಕತೆ ಇರುತ್ತದೆ. ಆದುದರಿಂದ ಸಾಕುವ ಸಾಲ್ಮನ್‌‌ಗಳು ಅಂತಿಮ ಉತ್ಪನ್ನವನ್ನು ಕೊಡುವುದಕ್ಕಿಂತ ಹೆಚ್ಚು ಮೀನುಗಳನ್ನು ಸೇವಿಸುತ್ತವೆ. ಒಂದು ಪೌಂಡ್ ಸಾಕಿದ ಸಾಲ್ಮನ್‌ಅನ್ನು ಉತ್ಪತ್ತಿ ಮಾಡಲು, ಅವುಗಳಿಗೆ ಅನೇಕ ಪೌಂಡ್ ಕೃಷಿ ಮಾಡದ ಮೀನುಗಳ ಉತ್ಪನ್ನಗಳನ್ನು ನೀಡಬೇಕಾಗುತ್ತದೆ. ಸಾಲ್ಮನ್‌ ಕೃಷಿ ಉದ್ಯಮವು ವಿಸ್ತರಿಸಿದಂತೆ, ಇದಕ್ಕೆ ಹೆಚ್ಚು ನಿಸರ್ಗ ಸಹಜ ಸ್ಥಿತಿಯ ಮೇವು ಮೀನುಗಳ ಅಗತ್ಯ ಇರುತ್ತದೆ. ಒಂದು ಬಾರಿ ಎಪ್ಪತ್ತೈದು ಪ್ರತಿಶತದಷ್ಟು ಪ್ರಪಂಚದ ಪ್ರಮುಖ ಮೀನುಗಾರಿಕೆಗಳು ಗರಿಷ್ಠ ಸಮರ್ಥನೀಯ ಉತ್ಪನ್ನವನ್ನು ತಲುಪಿವೆ ಅಥವಾ ಮೀರಿವೆ.[೧೬] ಸಾಲ್ಮನ್‌ ಕೃಷಿಗಾಗಿ ಮೇವು ಮೀನುಗಳ ಪಡೆಯುವಿಕೆಯು ನಂತರ ಆಹಾರಕ್ಕಾಗಿ ಅವುಗಳನ್ನು ಅವಲಂಬಿಸಿರುವ ಪರಭಕ್ಷಕ ಮೀನುಗಳ ಉಳಿವಿನ ಮೇಲೆ ಪರಿಣಾಮ ಬೀರುತ್ತದೆ.

ಸಾಲ್ಮನ್‌ ಆಹಾರದಲ್ಲಿ ಪ್ರಾಣಿಯ ಪ್ರೋಟೀನ್‌ಗಳ ಬದಲಿಗೆ ಸಸ್ಯದ ಪ್ರೋಟೀನ್‌‌‌ಗಳನ್ನು ಪರ್ಯಾಯವಾಗಿ ಬಳಸುವುದರಿಂದ ಇವುಗಳ ಸಾಕಣೆ ಕ್ರಿಯೆಯನ್ನು ಮುಂದುವರಿಸಬಹುದು. ಆದರೆ ದುರದೃಷ್ಟವಶಾತ್, ಈ ಪರ್ಯಾಯ ಬಳಕೆಯು ಸಾಕಿಬೆಳೆಸಿದ ಉತ್ಪನ್ನದಲ್ಲಿ ಒಮೇಗ-3 ಅಂಶವನ್ನು ಕಡಿಮೆ ಮಾಡುತ್ತದೆ.

ತೀವ್ರವಾದ ಸಾಲ್ಮನ್‌ ಕೃಷಿಯು ಈಗ ತೆರೆದ-ಬಲೆಯ ಗೂಡುಗಳನ್ನು ಬಳಸಿಕೊಳ್ಳುತ್ತಿದೆ. ಇದು ಕಡಿಮೆ ಉತ್ಪಾದನಾ ಖರ್ಚನ್ನು ಹೊಂದಿದೆ. ಆದರೆ ಇದರಿಂದ ಸ್ಥಳೀಯ ಸಾಲ್ಮನ್‌ ಶೇಖರಣೆಗೆ ಕಾಯಿಲೆ ಮತ್ತು ಸಮುದ್ರ ಪರೋಪಜೀವಿಗಳು ಹರಡಬಹುದಾದ ಸಂಭವಿರುತ್ತದೆ.[೧೭]

ಡ್ರೈ-ಡ್ರೈ ಆಧಾರದಲ್ಲಿ, ಒಂದು ಕೆಜಿ ಸಾಲ್ಮನ್ಅನ್ನು ತಯಾರಿಸಲು 2–4 ಕೆಜಿಯಷ್ಟು ನಿಸರ್ಗ ಸಹಜ ಸ್ಥಿತಿಯಲ್ಲಿ ಹಿಡಿದ ಮೀನುಗಳು ಬೇಕಾಗುತ್ತವೆ.[೧೮]

ಕೃತಕವಾಗಿ ಮೊಟ್ಟೆಯೊಡೆದು ಮರಿಯಾಗುತ್ತಿರುವ ಚುಮ್‌ ಸಾಲ್ಮನ್‌

ಸುರಕ್ಷಿತ ಆದರೆ ಕಡಿಮೆ ನಿಯಂತ್ರಿಸಬಹುದಾದ ಸಾಲ್ಮನ್‌ ಉತ್ಪಾದನೆಯ ಮತ್ತೊಂದು ವಿಧಾನವೆಂದರೆ ಮೊಟ್ಟೆಕೇಂದ್ರಗಳಲ್ಲಿ ಸಾಲ್ಮನ್‌ಗಳನ್ನು ಅವು ಸ್ವತಂತ್ರವಾಗುವಷ್ಟು ದೊಡ್ಡದಾಗುವವರೆಗೆ ಬೆಳೆಸುವುದು. ನಂತರ ಅವುಗಳನ್ನು ನದಿಗಳಿಗೆ ಬಿಟ್ಟುಬಿಡುವುದು. ಈ ರೀತಿಯಾಗಿ ಸಾಲ್ಮನ್‌ ಸಂಖ್ಯೆಯನ್ನು ಹೆಚ್ಚಿಸುವುದು. ಈ ವ್ಯವಸ್ಥೆಯನ್ನು ರ‌್ಯಾಂಚಿಂಗ್ ಎಂದು ಕರೆಯುತ್ತಾರೆ. ನಾರ್ವೆಯವರು ಸಾಲ್ಮನ್‌ ಕೃಷಿಯನ್ನು ಅಭಿವೃದ್ಧಿಪಡಿಸುವುದಕ್ಕಿಂತ ಮೊದಲು ಇದು ಸ್ವೀಡನ್‌‌ನಂತಹ ರಾಷ್ಟ್ರಗಳಲ್ಲಿ ರೂಢಿಯಲ್ಲಿತ್ತು. ಆದರೆ ಇದನ್ನು ವಿರಳವಾಗಿ ಖಾಸಗಿ ಕಂಪೆನಿಗಳು ಮಾಡುತ್ತಿದ್ದವು. ಸಾಲ್ಮನ್‌ಗಳು ಮೊಟ್ಟೆಯಿಡಲು ಹಿಂದಿರುವಾಗ ಯಾರೂ ಸಹ ಅವನ್ನು ಹಿಡಿಯಬಹುದಾದ್ದರಿಂದ, ಇದು ಕಂಪೆನಿಗಳು ಅವುಗಳ ಹೂಡಿಕೆಯಿಂದ ಆರ್ಥಿಕವಾಗಿ ಲಾಭಗಳಿಸುವ ಅವಕಾಶಗಳನ್ನು ಮಿತಿಗೊಳಿಸುತ್ತಿತ್ತು. ಇದರಿಂದಾಗಿ ಈ ವಿಧಾನವನ್ನು ಮುಖ್ಯವಾಗಿ ವಿವಿಧ ಸಾರ್ವಜನಿಕ ಸಂಸ್ಥೆಗಳು ಮತ್ತು ಕುಕ್ ಇನ್ಲೆಟ್ ಅಕ್ವಕಲ್ಚರ್ ಅಸೋಸಿಯೇಶನ್‌‌ನಂತಹ ಲಾಭೋದ್ದೇಶವಿಲ್ಲದ ಗುಂಪುಗಳು, ಮಿತಿಮೀರಿದ ಬಳಕೆ, ಅಣೆಕಟ್ಟುಗಳ ನಿರ್ಮಾಣ ಮತ್ತು ಆವಾಸಗಳ ನಾಶ ಮತ್ತು ಛಿದ್ರೀಕರಣದಿಂದಾಗಿ ಕ್ಷೀಣಿಸಿದ ಸಾಲ್ಮನ್‌ ಸಂಖ್ಯೆಗಳನ್ನು ಕೃತಕವಾಗಿ ಹೆಚ್ಚು ಮಾಡುವ ಉದ್ದೇಶದಿಂದ ಬಳಸಿದವು. ದುರದೃಷ್ಟವಶಾತ್ ಈ ರೀತಿಯ ಇವುಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಕ್ರಿಯೆಯಲ್ಲಿ, ಶೇಖರಿಸಿಟ್ಟವುಗಳ ಆನುವಂಶಿಕ "ಸಾರಗುಂದುವಿಕೆ"ಯನ್ನೂ ಒಳಗೊಂಡಂತೆ ಋಣಾತ್ಮಕ ಪರಿಣಾಮಗಳಿರುವ ಸಾಧ್ಯತೆ ಇವೆ. ಮೀನು ಹಿಡಿಯುವುದನ್ನು ನಿಯಂತ್ರಿಸುವ ಹಾಗೂ ಆವಾಸಗಳನ್ನು ಸುಧಾರಿಸುವ ಮತ್ತು ರಕ್ಷಿಸುವ ಸಲುವಾಗಿ ಈಗ ಅಧಿಕವಾದ ಮೀನುಗಾರಿಕೆಯನ್ನು ನಿರ್ಬಂಧಿಸುವ ಅನೇಕ ಕಾನೂನುಗಳು ಬಳಕೆಗೆ ಬಂದಿವೆ. ಸಾಗರ ರ‌್ಯಾಂಚಿಂಗ್ ಎನ್ನುವ ಮೀನು ಸಂಗ್ರಹದ ಭಿನ್ನ ವಿಧಾನವೊಂದು ಅಲಸ್ಕಾದಲ್ಲಿ ಅಭಿವೃದ್ಧಿಯಾಗುತ್ತಿದೆ. ಅದರಲ್ಲಿ ಎಳೆಯ ಸಾಲ್ಮನ್‌ಗಳನ್ನು ಯಾವುದೇ ನಿಸರ್ಗ ಸಹಜವಾಗಿ ಬೆಳೆಯುವ ಸಾಲ್ಮನ್‌‌ಗಳಿರುವ ಹೊಳೆಗಳಿಗಿಂತ ದೂರದಲ್ಲಿ ಸಾಗರಕ್ಕೆ ಬಿಡಲಾಗುತ್ತದೆ. ಮೊಟ್ಟೆಯಿಡುವ ಸಮಯಕ್ಕೆ ಅವನ್ನು ಬಿಟ್ಟ ಸ್ಥಳಕ್ಕೇ ಹಿಂದಿರುಗುತ್ತವೆ. ಆಗ ಮೀನುಗಾರರು ಅವುಗಳನ್ನು ಹಿಡಿಯಬಹುದು.

ಮೊಟ್ಟೆಕೇಂದ್ರಗಳು ಬಳಸಬಹುದಾದ ಒಂದು ಪರ್ಯಾಯ ವಿಧಾನವೆಂದರೆ ಮೊಟ್ಟೆಯಿಡಲು ಕಾಲುವೆಗಳನ್ನು ಉಪಯೋಗಿಸಿಕೊಳ್ಳುವುದು. ಇವು ಕೃತಕ ಹೊಳೆಗಳು. ಸಾಮಾನ್ಯವಾಗಿ ಇವು ಕಾಂಕ್ರೀಟ್ ಅಥವಾ ಒರಟಾದ ಬದಿಗಳನ್ನು ಮತ್ತು ಗ್ರ್ಯಾವಲ್ ತಳಗಳನ್ನು ಹೊಂದಿದ್ದು, ಮತ್ತೊಂದು ಹೊಳೆಗೆ ಸಮಾನಾಂತರವಾಗಿರುತ್ತವೆ. ಹತ್ತಿರದ ಹೊಳೆಯಿಂದ ನೀರನ್ನು ಈ ಕಾಲುವೆಯ ಮೇಲಕ್ಕೆ ಪೈಪುಗಳಿಂದ ಸಾಗಿಸಲಾಗುತ್ತದೆ. ಕೆಲವೊಮ್ಮೆ ಕೆಸರು ಬರದ ಹಾಗೆ ಮಾಡುವುದಕ್ಕಾಗಿ ನೀರಿನ ತೊಟ್ಟಿಯ ಮ‌ೂಲಕ ಹರಿಸಲಾಗುತ್ತದೆ. ಕೆಲವು ವರ್ಷಗಳಲ್ಲಿ ನೈಸರ್ಗಿಕ ರೆಡ್ಡ್‌ಗಳು ಕೊಚ್ಚಿಕೊಂಡು ಹೋಗಬಹುದಾದ ಪ್ರವಾಹದ ನಿಯಂತ್ರಣದಿಂದಾಗಿ, ಹತ್ತಿರದ ಹೊಳೆಗಿಂತ ಈ ಕಾಲುವೆಗಳಲ್ಲಿ ಮೊಟ್ಟೆಯಿಡುವುದು ಹೆಚ್ಚು ಯಶಸ್ಸಾಗುತ್ತದೆ. ಪ್ರವಾಹವಿಲ್ಲದಿರುವುದರಿಂದ, ಸಂಗ್ರಹವಾಗುವ ರಾಡಿಯನ್ನು ತೆಗೆದುಹಾಕಲು ಮೊಟ್ಟೆಯಿಡುವ ಕಾಲುವೆಗಳನ್ನು ಕೆಲವೊಮ್ಮೆ ಶುಚಿಗೊಳಿಸಬೇಕಾಗುತ್ತದೆ. ನೈಸರ್ಗಿಕ ರೆಡ್ಡ್‌ಗಳನ್ನು ನಾಶಮಾಡುವ ಪ್ರವಾಹವು ಇದೆಲ್ಲವನ್ನು ಸ್ವಚ್ಛವೂ ಮಾಡುತ್ತದೆ. ರೋಗಗಳನ್ನು ನಿಯಂತ್ರಿಸಲು ರೋಗನಿರೋಧಕ ರಾಸಾಯನಿಕಗಳನ್ನು ಬಳಸಲು ಮೊಟ್ಟೆಕೇಂದ್ರಗಳಲ್ಲಿರುವಂತೆ ಯಾವುದೇ ದುಷ್ಪ್ರೇರಣೆಗಳಿಲ್ಲದೆ ಇರುವುದರಿಂದ ಮೊಟ್ಟೆಯಿಡುವ ಕಾಲುವೆಗಳು ನೈಸರ್ಗಿಕ ಹೊಳೆಗಳ ನೈಸರ್ಗಿಕತೆಯನ್ನು ಕಾಪಾಡುತ್ತವೆ.

ಸಾಕಿಬೆಳೆಸುವ ಸಾಲ್ಮನ್‌ಗಳಿಗೆ ಆಹಾರವಾಗಿ ಕ್ಯಾರೊಟಿನಾಯ್ಡ್‌, ಆಸ್ತಕ್ಸ್ಯಾಂಥಿನ್‌ ಮತ್ತು ಕ್ಯಾಂಥಕ್ಸ್ಯಾಂಥಿನ್‌‌ಗಳನ್ನು ನೀಡಲಾಗುತ್ತದೆ. ಆದ್ದರಿಂದ ಅವುಗಳ ಮೈಯ ಬಣ್ಣ ನಿಸರ್ಗ ಸಹಜ ಸ್ಥಿತಿಯಲ್ಲಿರುವ ಸಾಲ್ಮನ್‌ಗಳನ್ನು ಹೋಲುತ್ತದೆ.[೧೯]

ರೋಗಗಳು ಮತ್ತು ಪರೋಪಜೀವಿಗಳು

ಹೆನ್ನೆಗ್ಯುಯ ಸಾಲ್ಮಿನಿಕೋಲ - ಕೆನಡಾದ ಪಶ್ಚಿಮ ಕರಾವಳಿಯ ಸಾಲ್ಮನಿಡ್‌ಗಳ ಮಾಂಸದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಮಿಕ್ಸೊಜೋವನ್ ಪರೋಪಜೀವಿ.ಕೋಹೊ ಸಾಲ್ಮನ್‌

ಕೆನಡಾದ ಜೀವಶಾಸ್ತ್ರಜ್ಞ ಡೊರೋತಿ ಕೈಸರ್ನ ಪ್ರಕಾರ, ಮಿಕ್ಸೊಜೋವ ಪರೋಪಜೀವಿ ಹೆನ್ನೆಗ್ಯುಯ ಸಾಲ್ಮಿನಿಕೋಲ ವು ಸಾಲ್ಮನಿಡ್‌ಗಳ ಶರೀರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಕ್ವೀನ್ ಕಾರ್ಲೊಟ್ಟೆ ದ್ವೀಪದಲ್ಲಿ ಹಿಡಿಯಲಾದ ಸಾಲ್ಮನ್‌‌ಗಳ ಮಾದರಿಗಳಲ್ಲಿ ದಾಖಲಾಗಿದೆ. ಈ ಮೀನು ಪರೋಪಜೀವಿಗಳ ಸೋಂಕಿನಿಂದ ಪೊರೆಯನ್ನು ಕಳೆದುಕೊಂಡು, ಮೃದುವಾದ ದ್ರವ ಪದಾರ್ಥವನ್ನು ಹೊಂದಿರುವ ಅನೇಕ ಚೀಲದಂಥ ರಚನೆಗಳಾಗುತ್ತವೆ. ಈ ದ್ರವ ಪದಾರ್ಥವು ಅತಿ ಹೆಚ್ಚಿನ ಸಂಖ್ಯೆಯ ಪರೋಪಜೀವಿಗಳ ಒಟ್ಟುಗೂಡುವಿಕೆಯಾಗಿದೆ.

ಮಿಕ್ಸೋಸ್ಪೊರಿಯನ್ ಗುಂಪಿನ ಹೆನ್ನೆಗ್ಯುಯ ಮತ್ತು ಇತರ ಪರೋಪಜೀವಿಗಳು ಸಂಕೀರ್ಣ ಜೀವನಚಕ್ರವನ್ನು ಹೊಂದಿದೆ. ಆ ಎರಡು ಪರಪೋಷಿಗಳಲ್ಲಿ ಸಾಲ್ಮನ್‌ ಒಂದಾಗಿದೆ. ಮೀನುಗಳು ಮೊಟ್ಟೆಯಿಟ್ಟ ನಂತರ ಬೀಜಕಗಳನ್ನು ಬಿಡುಗಡೆ ಮಾಡುತ್ತವೆ. ಹೆನ್ನೆಗ್ಯುಯ ಉದಾಹರಣೆಯಲ್ಲಿ, ಬೀಜಕಗಳು ಅಕಶೇರುಕಗಳಂತೆ ಮೊಟ್ಟೆಯಿಡುವ ಹೊಳೆಗಳಲ್ಲಿ ಎರಡನೆ ಪರಪೋಷಿಯನ್ನು ಪ್ರವೇಶಿಸುತ್ತವೆ. ಜ್ಯುವೆನಿಲ್‌ ಸಾಲ್ಮನ್‌ ಪೆಸಿಫಿಕ್ ಸಾಗರಕ್ಕೆ ವಲಸೆ ಹೋಗುವಾಗ, ಎರಡನೇ ಪರಪೋಷಿಯು ಸಾಲ್ಮನ್‌‌ಗೆ ಸಾಂಕ್ರಾಮಿಕ ರೋಗವನ್ನು ಹರಡುತ್ತದೆ. ನಂತರ ಈ ಪರೋಪಜೀವಿಯು ಸಾಲ್ಮನ್‌ನ ಮುಂದಿನ ಬಾರಿಯ ಮೊಟ್ಟೆಯಿಡುವ ಹಂತದವರೆಗೆ ಅವುಗಳಲ್ಲಿ ಹಾಗೆಯೇ ಉಳಿಯುತ್ತದೆ. ಟ್ರೌಟ್‌ಗಳಲ್ಲಿ ವೈರ್ಲಿಂಗ್ ಕಾಯಿಲೆಯನ್ನು ತರುವ ಮಿಕ್ಸೋಸ್ಪೊರಿಯನ್ ಪರೋಪಜೀವಿಗಳೂ ಸಹ ಇದೇ ರೀತಿಯ ಜೀವನಚಕ್ರವನ್ನು ಹೊಂದಿವೆ.[೨೦] ವೈರ್ಲಿಂಗ್ ಕಾಯಿಲೆಗೆ ವಿರುದ್ಧವಾಗಿ, ಹೆನ್ನೆಗ್ಯುಯ ಗಳ ಮುತ್ತಿಕೊಳ್ಳುವಿಕೆಯು ಪರಪೋಷಿ ಸಾಲ್ಮನ್‌ಗಳಲ್ಲಿ ಕಾಯಿಲೆಗೆ ಕಾರಣವಾಗುವುದಿಲ್ಲ. ಇವುಗಳಿಂದ ತೀವ್ರವಾಗಿ ಸೋಂಕಿಗೊಳಗಾದ ಮೀನುಗಳು ಯಶಸ್ವಿಯಾಗಿ ಮೊಟ್ಟೆಯಿಡಲು ಹಿಂದಿರುಗುತ್ತವೆ.

ಡಾ. ಕೀಸರ್‌ನ ಪ್ರಕಾರ, ನನೈಮೊದ ಪೆಸಿಫಿಕ್ ಬಯೋಲಾಜಿಕಲ್ ಸ್ಟೇಷನ್‌ನ ವಿಜ್ಞಾನಿಗಳು 1980ರ ಮಧ್ಯಂತರದಲ್ಲಿ ಹೆನ್ನೆಗ್ಯುಯ ಸಾಲ್ಮಿನಿಕೋಲ ದ ಬಗ್ಗೆ ಮಾಡಿದ ಅನೇಕ ಕೆಲಸಗಳಲ್ಲಿ ನಿರ್ದಿಷ್ಟವಾಗಿ ಒಂದು ಸ್ಥೂಲ ಸಮೀಕ್ಷೆ ವರದಿಯು[೨೧] ಹೀಗೆ ಸೂಚಿಸುತ್ತದೆ - "ಜ್ಯುವೆನಿಲ್‌ಗಳಂತೆ ಸಿಹಿ ನೀರಿನಲ್ಲಿ ಹೆಚ್ಚು ಕಾಲ ವಾಸಿಸುವ ಮೀನುಗಳು ಸುಲಭವಾಗಿ ಸೋಂಕಿಗೊಳಗಾಗುತ್ತವೆ. ಕಾಯಿಲೆ ಹರಡಿಕೆಯ ಆಧಾರದಲ್ಲಿ ಕೋಹೊಗಳು ಅತಿಹೆಚ್ಚು ಸೋಂಕಿಗೊಳಗಾಗುತ್ತವೆ, ನಂತರ ಸಾಕೆಯ್‌, ಚಿನುಕ್‌, ಚುಮ್‌ ಮತ್ತು ಪಿಂಕ್." ಅಲ್ಲದೆ ಈ ವರದಿಯು ಹೀಗೆಂದೂ ಹೇಳುತ್ತದೆ - ಅಧ್ಯಯನಗಳನ್ನು ಮಾಡಿದ ಸಂದರ್ಭದಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಫ್ರೇಸರ್, ಸ್ಕೀನಾ, ನ್ಯಾಸ್‌ನಂತಹ ದೊಡ್ಡ ನದಿಗಳ ಮಧ್ಯ ಮತ್ತು ಮೇಲಿನ ಹರವಿನ ಮತ್ತು B.C.ಯ ದಕ್ಷಿಣಾರ್ಧದ ಪ್ರಧಾನ ಭೂಭಾಗದ ಕರಾವಳಿ ಹೊಳೆಗಳ ಶೇಖರಣೆಗಳು "ಕಡಿಮೆ ಸೋಂಕಿನ ವ್ಯಾಪನೆಯನ್ನು ಹೊಂದಿದ್ದವು". ಈ ವರದಿಯು ಹೇಳಿಕೆ ನೀಡಿದೆ - "ಹೆನ್ನೆಗ್ಯುಯ ವು ಆರ್ಥಿಕವಾಗಿ ಹೆಚ್ಚು ದುಬಾರಿಯಾದರೂ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹಾನಿಕರವಲ್ಲ ಎಂಬುದನ್ನು ಗಮನಿಸಬೇಕು. ಇದು ಸಂಪೂರ್ಣವಾಗಿ ಮೀನು ಪರೋಪಜೀವಿಯಾಗಿದೆ. ಇದು ಮಾನವನನ್ನೂ ಒಳಗೊಂಡಂತೆ ಬಿಸಿ ರಕ್ತ ಪ್ರಾಣಿಗಳಲ್ಲಿ ವಾಸಿಸುವುದಿಲ್ಲ ಅಥವಾ ಅವುಗಳ ಮೇಲೆ ಪ್ರಭಾವ ಬೀರುವುದಿಲ್ಲ".

ಕೆನಡಿಯನ್ ಫುಡ್ ಇನ್ಸ್‌ಪೆಕ್ಷನ್ ಏಜೆನ್ಸಿಯೊಂದಿಗಿನ ಮೊಲ್ಲುಸ್ಕ್ಯಾನ್ ಶೆಲ್‌ಫಿಶ್ ಪ್ರೊಗ್ರ್ಯಾಂ ತಜ್ಞ ಕ್ಲಾಸ್ ಸ್ಕ್ಯಾಲಿಯ ಪ್ರಕಾರ, "ಹೆನ್ನೆಗ್ಯುಯ ಸಾಲ್ಮಿನಿಕೋಲ ವು ದಕ್ಷಿಣ B.C.ಯಲ್ಲೂ ಮತ್ತು ಎಲ್ಲಾ ಜಾತಿಯ ಸಾಲ್ಮನ್‌‌ಗಳಲ್ಲೂ ಕಂಡುಬಂದಿದೆ. ಸಣ್ಣ ಚೀಲದಂಥ ರಚನೆಯ ಸಮಸ್ಯೆಗೊಳಗಾದ ಚುಮ್‌ ಸಾಲ್ಮನ್‌ಗಳು ಮತ್ತು ಬಾರ್ಕ್ಲೆ ಸೌಂಡ್‌ನಲ್ಲಿರುವ (ದಕ್ಷಿಣ B.C.ಯ ವ್ಯಾಂಕವರ್ ದ್ವೀಪದ ಪಶ್ಚಿಮ ಕರಾವಳಿ) ಕೆಲವು ಸಾಕೆಯ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಪರೋಪಜೀವಿಗಳ ಮುತ್ತಿಕೊಳ್ಳುವಿಕೆಗೆ ಒಳಗಾಗುತ್ತವೆ ಎಂಬುದನ್ನು ನಾನು ಪರಿಶೀಲಿಸಿದ್ದೇನೆ."

ಸಮುದ್ರ ಪರೋಪಜೀವಿ ನಿರ್ದಿಷ್ಟವಾಗಿ ಲೆಪಿಯೋಫ್ಥೈರಸ್ ಸಾಲ್ಮೋನಿಸ್ ಹಾಗೂ ಕ್ಯಾಲಿಗಸ್‌ ಕ್ಲೆಮೆನ್ಸಿ ಮತ್ತು ಕ್ಯಾಲಿಗಸ್‌ ರಾಗರ್‌ಕ್ರೆಸ್ಸೆಯಿ ಗಳನ್ನೂ ಒಳಗೊಂಡಂತೆ ವಿವಿಧ ಕ್ಯಾಲಿಗಸ್‌ ಜಾತಿಗಳು, ಸಾಕಿಬೆಳೆಸುವ ಮತ್ತು ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳೆರಡರಲ್ಲೂ ತೀವ್ರವಾಗಿ ಮುತ್ತಿಕೊಳ್ಳುತ್ತವೆ‌.[೨೨][೨೩] ಸಮುದ್ರ ಪರೋಪಜೀವಿಗಳು ಬಾಹ್ಯಪರೋಪಜೀವಿಗಳಾಗಿವೆ. ಇವು ಲೋಳೆಯ ಪದಾರ್ಥ, ರಕ್ತ, ಚರ್ಮ ಮತ್ತು ಸ್ನಾಯು ಅಂಗಾಂಶಗಳನ್ನು ಸೇವಿಸುತ್ತವೆ. ಸಾಮಾನ್ಯವಾಗಿ ತೆರೆದ ಸಾಗರದಲ್ಲಿ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌‌ಗಳ ಮೈಯ ಮೇಲೆ ಸ್ವತಂತ್ರವಾಗಿ ಈಜಾಡುವ ಪ್ಲ್ಯಾಂಕ್ಟೋನಿಕ್ ನಾಪ್ಲಿ ಮತ್ತು ಕೊಪೆಪಾಡಿಡ್ ಲಾರ್ವಾದ ಹಂತದಲ್ಲಿ ಅಂಟಿಕೊಳ್ಳುತ್ತವೆ. ಅತಿಹೆಚ್ಚಿನ ಸಂಖ್ಯೆಯಲ್ಲಿರುವ ತೆರೆದ-ಬಲೆಯ ಸಾಲ್ಮನ್‌ ಸಾಕಣೆ-ಕೇಂದ್ರಗಳು ವಿಶೇಷವಾಗಿ ಅಧಿಕ ಪ್ರಮಾಣದ ಸಮುದ್ರ ಪರೋಪಜೀವಿಗಳನ್ನು ಉತ್ಪಾದಿಸುತ್ತವೆ; ತೆರೆದ-ಬಲೆಯ ಸಾಲ್ಮನ್‌ ಸಾಕಣೆ-ಕೇಂದ್ರಗಳನ್ನು ಒಳಗೊಂಡಿರುವ ನದಿ ಅಳಿವೆಗಳಲ್ಲಿ, ನಿಸರ್ಗ-ಸಹಜ ಸ್ಥಿತಿಯಲ್ಲಿರುವ ಹೆಚ್ಚಿನ ಎಳೆಯ ಸಾಲ್ಮನ್‌ಗಳು ಸೋಂಕಿಗೊಳಗಾಗಿ ಸಾಯುತ್ತವೆ. ಎಳೆಯ ಸಾಲ್ಮನ್‌ಗಳಿಗೆ ಹಾನಿಕರವಾಗಿರುವ ಕಡಿಮೆ ಸಂಖ್ಯೆಯ ಸಮುದ್ರ ಪರೋಪಜೀವಿಗಳಿದ್ದರೂ ಬೆಳೆದ ಸಾಲ್ಮನ್‌ಗಳು ಬದುಕಬಹುದು. ಆದರೆ ಸಣ್ಣ, ತೆಳ್ಳಗಿನ-ಪೊರೆಯ ಜ್ಯುವೆನಿಲ್‌ ಸಾಲ್ಮನ್‌‌ಗಳು ಸಮುದ್ರಕ್ಕೆ ವಲಸೆ ಹೋಗುವುದು ಹೆಚ್ಚು ಅಪಾಯಕಾರಿ. ಕೆನಡಾದ ಪೆಸಿಫಿಕ್ ಕರಾವಳಿಯಲ್ಲಿ, ಪರೋಪಜೀವಿಯ ಸೋಂಕಿಗೊಳಗಾದ ಪಿಂಕ್ ಸಾಲ್ಮನ್‌ನ ಸಾವಿನ ಪ್ರಮಾಣವು ಅಂತಹ ಪರಿಣಾಮಕ್ಕೊಳಗಾದ ಪ್ರದೇಶಗಳಲ್ಲಿ ಸುಮಾರು 80%ನಷ್ಟಿದೆ.[೨೪]

ನೈಸರ್ಗಿಕ ಒತ್ತಡಗಳು

ಎಲ್ಲಾ ಜಾತಿಯ ಪೆಸಿಫಿಕ್ ಸಾಲ್ಮನ್‌‌ಗಳು ಮೊಟ್ಟೆಯಿಟ್ಟ ಸ್ವಲ್ಪದರಲ್ಲೇ ಸಾಯುತ್ತವೆ.ಇದು ಒರೆಗಾನ್‌ನ ಈಗಲ್ ಕ್ರೀಕ್‌ನಲ್ಲಿನ ಮೊಟ್ಟೆಯಿಡುವ ಸ್ಥಳದಲ್ಲಿ ತೆಗೆದ ಚಿತ್ರ.

ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌‌ಗಳ ಸಂಖ್ಯೆಯು ಇತ್ತೀಚಿನ ದಶಕಗಳಲ್ಲಿ ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ವಿಶೇಷವಾಗಿ ಪಶ್ಚಿಮ ಯುರೋಪ್ ಮತ್ತು ಪೂರ್ವ ಕೆನಡಾದ ನೀರಿನಲ್ಲಿ ಮೊಟ್ಟೆಯಿಡುವ ಉತ್ತರ ಅಟ್ಲಾಂಟಿಕ್‌‌ನ ಸಾಲ್ಮನ್‌‌ಗಳು ಹಾಗೂ ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ನೇಕ್ ಮತ್ತು ಕೊಲಂಬಿಯಾ ನದಿಯಲ್ಲಿನ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳು. ಈ ಕ್ಷೀಣಿಸುವಿಕೆಗೆ ಕಾರಣವಾದ ಅಂಶಗಳು ಈ ಕೆಳಗಿನಂತಿವೆ:

  • ತೆರೆದ-ಬಲೆಯ ಸಾಲ್ಮನ್‌ ಸಾಕಣೆಯಿಂದಾಗುವ ರೋಗಗಳ, ವಿಶೇಷವಾಗಿ ಸಮುದ್ರ ಪರೋಪಜೀವಿಗಳ, ವರ್ಗಾವಣೆ. ಯುರೋಪಿಯನ್ ಕಮಿಷನ್ (2002) ಹೀಗೆಂದು ದೃಢಪಡಿಸಿದೆ - “ನಿಸರ್ಗ ಸಹಜ ಸ್ಥಿತಿಯ ಸಾಲ್ಮನಿಡ್ ಸಂಪತ್ತಿನ ಇಳಿಕೆಯು ಇತರ ಅಂಶಗಳೊಂದಿಗೂ ಸಂಬಂಧವನ್ನು ಹೊಂದಿದೆ. ಆದರೆ ಹೆಚ್ಚಿನ ವೈಜ್ಞಾನಿಕ ಸಾಕ್ಷ್ಯಗಳು, ನಿಸರ್ಗ ಸಹಜ ಸ್ಥಿತಿಯ ಮೀನುಗಳನ್ನು ಮುತ್ತಿಕೊಂಡಿರುವ ಪರೋಪಜೀವಿಗಳ ಸಂಖ್ಯೆ ಮತ್ತು ಅದೇ ಅಳಿವೆಯಲ್ಲಿರುವ ಮೀನು ಸಾಕಣೆ ಕೇಂದ್ರಗಳ ನಡುವೆ ಇರುವ ನೇರ ಸಂಬಂಧವನ್ನು ದೃಢಪಡಿಸಿವೆ.”[೨೫] ಕೆನಡಾದ ಪಶ್ಚಿಮ ಕರಾವಳಿಯಲ್ಲಿರುವ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳು ಹತ್ತಿರದ ಸಾಲ್ಮನ್‌ ಸಾಕಣೆ ಕೇಂದ್ರಗಳಿಂದಾಗಿ ಸಮುದ್ರ ಪರೋಪಜೀವಿಗಳಿಂದ ನಾಶಗೊಳ್ಳುತ್ತಿವೆ ಎಂದು ವರದಿಯಾಗಿದೆ.[೨೬]
  • ಅಟ್ಲಾಂಟಿಕ್‌ ಸಾಲ್ಮನ್‌ ಸ್ಮೋಲ್ಟ್‌‌ಗಳಿಗೆ, ಮೀನುಗಳನ್ನು ಸಾಯಿಸಲು ಕೇವಲ ಎಂಟು ಸಮುದ್ರ ಪರೋಪಜೀವಿಗಳೂ ಸಾಕಾಗುತ್ತದೆ. ಸ್ಮೋಲ್ಟ್‌ಗಳು ಅತಿ ಸಣ್ಣದಾಗಿರುವ ಪೆಸಿಫಿಕ್ ಕರಾವಳಿಯಲ್ಲಿ ಕೇವಲ ಒಂದು ಅಥವಾ ಎರಡು ಸಹ ತೀವ್ರ ಪರಿಣಾಮವನ್ನು ಬೀರಿ ಅವುಗಳ ಸಾವಿಗೆ ಕಾರಣವಾಗುತ್ತದೆ. ಅಟ್ಲಾಂಟಿಕ್‌‌ನಲ್ಲಿ, ನಾರ್ವೆ ಮತ್ತು ಸ್ಕಾಟಿಶ್ ಸಾಲ್ಮನ್‌ ಕ್ಷೀಣಿಸುವಿಕೆಗಳೆರಡಕ್ಕೂ ಸಮುದ್ರ ಪರೋಪಜೀವಿಗಳೇ ಕಾರಣವೆಂದು ಸಾಬೀತಾಗಿದೆ. ಪಶ್ಚಿಮ ಅಟ್ಲಾಂಟಿಕ್‌‌ನಲ್ಲಿ ಸಮುದ್ರ-ಶೋಧನೆ ಮಾಡಿ, 2000ರ ನಂತರದ ಅವಧಿಯ ಸಮುದ್ರ ಪರೋಪಜೀವಿಗಳ ಸಂಖ್ಯೆಯು ಅಪಾಯದ ಸ್ಥಿತಿಯಲ್ಲಿರುವ ಬೇ ಆಫ್ ಫಂಡಿ ಸಾಲ್ಮನ್‌ಗಳ ತೀವ್ರ ಕ್ಷೀಣಿಸುವಿಕೆಯಲ್ಲಿ ಪ್ರಮುಖ ಅಂಶವಾಗಿ ಕಂಡುಬರುವುದಿಲ್ಲ ಎಂಬುದನ್ನು ಕಂಡುಹಿಡಿದಿದೆ. 1980ರ ಮತ್ತು 1990ರ ದಶಕಗಳಲ್ಲಿ ಪರಿಸ್ಥಿತಿಯು ಭಿನ್ನವಾಗಿರಬಹುದು. ಆದರೆ ಅದರ ಬಗೆಗಿನ ನಿಜವಾದ ಇತಿಹಾಸವನ್ನು ತಿಳಿಯುವಲ್ಲಿ ನಾವು ವಿಫಲವಾಗಿದ್ದೇವೆ.
  • ಫೇರೋ ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಮಿತಿಮೀರಿದ ಮೀನುಗಾರಿಕೆ, ವಿಶೇಷವಾಗಿ ವ್ಯಾಪಾರದ ದೃಷ್ಟಿಯಿಂದ ಮಿತಿಮೀರಿ ಮೀನುಗಳನ್ನು ಹಿಡಿಯುವುದು. ಅನೇಕ ಸಮುದ್ರ-ಆಹಾರ ಊರ್ಜಿತಗೊಳಿಸುವ ಮಾರ್ಗದರ್ಶಗಳು, ಸಮರ್ಥನೀಯ ಸಾಲ್ಮನ್‌ ಮೀನುಗಾರಿಕೆಗಳಿಗೆ ಮತ್ತು ಸಾಲ್ಮನ್‌ ಸಂಖ್ಯೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವವುಗಳಿಗೆ ಸೂಚನೆಗಳನ್ನು ನೀಡುತ್ತದೆ.
  • ಸಾಗರ ಮತ್ತು ನದಿಗಳು ಬಿಸಿಯಾಗುವುದು. ಇದು ಮೊಟ್ಟೆಯಿಡುವುದನ್ನು ತಡಮಾಡಬಹುದು ಮತ್ತು ಸ್ಮೋಲ್ಟ್‌‌ಗಳಾಗುವುದನ್ನು ವೇಗಗೊಳಿಸಬಹುದು.
  • 1970 ಮತ್ತು 1980ರ ದಶಕದ ‌ಅಲ್ಸರೇಟಿವ್ ಡರ್ಮಲ್ ನೆಕ್ರೋಸಿಸ್ (UDN) ಸೋಂಕುಗಳು. ಅವು ಸಿಹಿ ನೀರಿನ ನದಿಗಳ ಬೆಳೆದ-ಸಾಲ್ಮನ್‌‌ಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರಿದವು.
  • ಸೂಕ್ತವಾದ ಸಿಹಿ ನೀರಿನ ಆವಾಸಗಳ ನಾಶ. ವಿಶೇಷವಾಗಿ ಹೊಳೆ-ಹಳ್ಳಗಳ ಅವನತಿ ಮತ್ತು ರೆಡ್ಡ್‌ಗಳನ್ನು ತೋಡಲು ಬೇಕಾಗುವ ಯೋಗ್ಯವಾದ ಅಂಶಗಳ ಇಳಿಕೆ. ಬಹುಹಿಂದಿನಿಂದಲೂ ಹೊಳೆಗಳು ಬೀವರ್‌ಗಳಿಂದ ರೂಪಿಸಲ್ಪಡುತ್ತಿದ್ದವು (ಕೆಳಗಿನ ವಿಭಾಗವನ್ನು ಗಮನಿಸಿ). ಬೀವರ್‌‌ಗಳು ನಾಶ ಹೊಂದಿದುರಿಂದಾಗಿ, ಈ ಹೊಳೆಗಳ ಪೋಷಣೆ ಕಾರ್ಯವು ನಿಂತುಹೋಯಿತು.
  • ಹೊಳೆಗಳಿಗೆ ಹಿಂದಿರುವ ಬೆಳೆದ ಸಾಲ್ಮನ್‌‌ಗಳ ಆಹಾರಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಇಳಿಕೆ. ಹೊಳೆಗಳಿಲ್ಲದೆ ಸತ್ತ ಬೆಳೆದ-ಸಾಲ್ಮನ್‌‌ಗಳು ನೇರವಾಗಿ ಹೊಳೆ ಮತ್ತು ನದಿಗಳಿಗೆ ಹಿಂದಕ್ಕೆ ಕಳುಹಿಸಲ್ಪಡುತ್ತವೆ.
  • ಅಣೆಕಟ್ಟು, ತಡೆಗಟ್ಟು, ಒಡ್ಡು ಮತ್ತು ಇತರ "ಪ್ರವಾಹ ತಡೆಗಟ್ಟುವ" ರಚನೆಗಳ ನಿರ್ಮಾಣಗಳು ನದಿ ಆವಾಸಗಳ ಮೇಲೆ ಮತ್ತು ಸಾಲ್ಮನ್‌‌ಗಳು ಆ ಆವಾಸಗಳನ್ನು ಪ್ರವೇಶಿಸುವುದರ ಮೇಲೆ ತೀವ್ರ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಇದು ನಿರ್ದಿಷ್ಟವಾಗಿ ಅನೇಕ ನದಿಗಳಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ ವಾಯುವ್ಯ USAಯಲ್ಲಿ ನಿಜವಾಗಿದೆ. ಕೊಲಂಬಿಯಾ ನದಿ ಬೇಸಿನ್‌ಗೆ ಸುಮಾರು 400 ಅಣೆಕಟ್ಟುಗಳನ್ನು ಕಟ್ಟಲಾಗಿದೆ.[೨೭]
  • ಬೆಳಕು, ಪ್ರಖರತೆ, ನೀರಿನ ಪ್ರವಾಹ ಅಥವಾ ತಾಪಮಾನದಲ್ಲಿನ ಬದಲಾವಣೆಯಂತಹ ಇತರ ನೈಸರ್ಗಿಕ ಅಂಶಗಳು ಸಾಲ್ಮನ್‌‌ಗಳ ವಲಸೆ ಹೋಗುವ ಅವಧಿಯಲ್ಲಿ ಅವುಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ.[೨೮]
  • ಆಧುನಿಕ ಮೀನು ಸಾಕಣೆ ವಿಧಾನಗಳಿಂದಾಗಿ ಮತ್ತು ವಿವಿಧ ರೀತಿಯ ಮಾಲಿನ್ಯಗಳಿಂದಾಗಿ ಅಕಶೇರುಕಗಳ ವೈವಿಧ್ಯತೆ ಮತ್ತು ಸಾಂದ್ರತೆಯ ಇಳಿಕೆ. ಇದರಿಂದಾಗಿ ಆಹಾರ ಲಭ್ಯತೆಯು ಕಡಿಮೆಯಾಗುತ್ತಿದೆ.
  • ಸಾಲ್ಮನ್‌ಗಳ ಸಾಮಾನ್ಯವಾಗಿ ವಲಸೆ ಹೋಗುವ ಕ್ರಿಯೆಯನ್ನು ಪ್ರತಿರೋಧಿಸುವ ಮತ್ತು ಪರಭಕ್ಷಣಗಳನ್ನು ಹೆಚ್ಚಿಸುವ ಜಲವಿದ್ಯುತ್ ಉತ್ಪಾದನೆ, ನೀರಾವರಿ ಯೋಜನೆಗಳು, ಸಾಮಾನು-ಸರಕುಗಳ ಸಾಗಣೆ ಮತ್ತು ಪ್ರವಾಹದ ಏರಿಳಿತಗಳಿಲ್ಲದ ನೀರಿನ ಜಲಾಶಯಗಳು ಮೊದಲಾದುವುಗಳಿಂದಾಗಿ ನದಿಗಳಲ್ಲಿನ ಸಿಹಿ ನೀರಿನ ಪ್ರವಾಹದ ಇಳಿಕೆ ಮತ್ತು ಕಾಲೋಚಿತ ಪ್ರವಾಹಗಳಲ್ಲಿನ ಅಡ್ಡಿ.[೨೯]
  • ನದೀತೀರದ ಸಸ್ಯಗಳನ್ನು ತೆಗೆದುಹಾಕುವುದು, ಜಾನುವಾರುಗಳಿಂದಾಗಿ ಹೊಳೆ ದಂಡೆಗಳ ಅಭದ್ರತೆ ಮತ್ತು ನೀರಾವರಿ ಕ್ರಿಯೆಗಳಂತಹ ಕೃಷಿ ಚಟುವಟಿಕೆಗಳಿಂದಾಗಿ ಸೂಕ್ತವಾದ ಕಡಿಮೆ-ಇಳಿಜಾರಿನ ಹೊಳೆ ಆವಾಸಗಳ ಇಳಿಕೆ.[೩೦][೩೧]

ಈ ಪರಿಸ್ಥಿತಿಗಳನ್ನು ಕಡಿಮೆ ಮಾಡುವ ವಿಶೇಷ ಚಟುವಟಿಕೆಗಳಿವೆ. ಅನೇಕ ಸರಕಾರಗಳು ಮತ್ತು NGOಗಳು ಆವಾಸ ಪುನಃಸ್ಥಾಪಿಸುವ ಕಾರ್ಯಗಳನ್ನು ಮತ್ತು ಸಂಶೋಧನೆಗಳನ್ನು ಮಾಡುತ್ತಿವೆ.

  • ಪಶ್ಚಿಮ ಅಟ್ಲಾಂಟಿಕ್‌‌ನಲ್ಲಿ ಅಟ್ಲಾಂಟಿಕ್‌ ಸಾಲ್ಮನ್‌ ಫೆಡೆರೇಶನ್ 1990ರ ಆರಂಭದಿಂದ, ಸಮುದ್ರದಲ್ಲಿನ ಸಾವಿನ ಪ್ರಮಾಣವನ್ನು ತಿಳಿಯಲು ಶಬ್ಧ ತರಂಗಗಳಿಂದ ಪತ್ತೆಹಚ್ಚುವ ಒಂದು ಪ್ರಮುಖ ತಾಂತ್ರಿಕ ಯೋಜನೆಯನ್ನು ಅಭಿವೃದ್ಧಿಪಡಿಸಿತು. ಸಾಗರ ಸೇನಾವ್ಯೂಹಗಳನ್ನು ಬೈ ಡೆಸ್ ಚಾಲಿಯರ್ಸ್‌ ಹಾಗೂ ಸ್ಟ್ರೈಟ್ ಆಫ್ ಬೆಲ್ಲೆ ಇಸ್ಲೆಯ ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರೇಡರ್‌‌ನಾದ್ಯಂತ ಪರಿಣಾಮಕಾರಿಯಾಗಿ ಕಾರ್ಯಾಚರಣೆಗೆ ತರಲಾಗಿದೆ. ರೆಸ್ಟಿಗೌಚ್‍‌ನಂತಹ ನದಿಗಳಿಂದ ಗ್ರೀನ್‌ಲ್ಯಾಂಡ್‌ನ ಆಹಾರ ಒದಗಿಸುವ ಭೂಪ್ರದೇಶಕ್ಕೆ ಬರುವ ಸಾಲ್ಮನ್‌‌ಗಳನ್ನು ಈಗ ಅರ್ಧದಾರಿಯಲ್ಲೇ ಪತ್ತೆಹಚ್ಚಿ ಕೈವಶ ಮಾಡಿಕೊಳ್ಳಲಾಗುತ್ತದೆ. ಇತ್ತೀಚಿಗೆ ಓಶನ್ ಟ್ರ್ಯಾಕಿಂಗ್ ನೆಟ್ವರ್ಕ್‌ನ ಮೊದಲ ಕಾರ್ಯನೀತಿಯನ್ನು ಖಂಡದ ಅಂಚಿನಲ್ಲಿರುವ ಆಳವಿಲ್ಲದ ಸಮುದ್ರದ ತಳಭಾಗದ ತುದಿಗೆ DFO ಮತ್ತು ಹ್ಯಾಲಿಫ್ಯಾಕ್ಸ್‌ನ ಡಾಲ್‌ಹೌಸಿ ಯ‌ೂನಿವರ್ಸಿಟಿ ಆಫ್ ಹ್ಯಾಲಿಫ್ಯಾಕ್ಸ್ ಸ್ಥಾಪಿಸಿದವು. ಮೊದಲ ಫಲಿತಾಂಶವು, US ಅಟ್ಲಾಂಟಿಕ್‌ ಸಾಲ್ಮನ್‌ಗಳಿಗೆ "ಆಧಾರ ನದಿ"ಯಾಗಿರುವ ಮೈನೆಯ ಪೆನೋಬ್‌ಸ್ಕಾಟ್ ನದಿಯಿಂದ ಸಾಗಣೆಯಾಗುತ್ತಿದ್ದ ಅಟ್ಲಾಂಟಿಕ್‌ ಸಾಲ್ಮನ್‌ಗಳನ್ನು ಒಳಗೊಂಡಿದೆ.

ಅಳಿವೆ ಸಮಸ್ಯೆಗಳು ಕೆಲವು ನದಿಗಳಲ್ಲಿ ಕಂಡುಬರುತ್ತವೆ ಆದರೆ ಸಮುದ್ರದ ಆಹಾರ ಒದಗಿಸುವ ಪ್ರದೇಶಗಳ ತೊಂದರೆಗಳು ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಒಟ್ಟು ಫಲಿತಾಂಶಗಳು ತೋರಿಸಿಕೊಡುತ್ತವೆ. 2008ರಲ್ಲಿ ಅಟ್ಲಾಂಟಿಕ್‌ ಸಾಗರದ ಎರಡೂ ಬದಿಗಳಲ್ಲಿ ಅಟ್ಲಾಂಟಿಕ್‌ ಸಾಲ್ಮನ್‌ನಿಂದ ಪಡೆದ ಲಾಭವು ಗಮನಾರ್ಹವಾಗಿ ಹೆಚ್ಚಾಯಿತು. ಆದರೆ ಇದು ತಾತ್ಕಾಲಿಕ ಸುಧಾರಣೆಯೇ ಅಥವಾ ಆ ದಿಕ್ಕಿಗೆ ತಿರುಗಿದುದರ ಚಿಹ್ನೆಯೇ ಎಂಬುದು ಯಾರಿಗೂ ತಿಳಿದಿಲ್ಲ.

  • NOAAನ ಆಫೀಸ್ ಆಫ್ ಪ್ರೊಟೆಕ್ಡೆಡ್ ರಿಸೋರ್ಸಸ್ ಅಪಾಯದಂಚಿನಲ್ಲಿರುವ ಜಾತಿಗಳ ಪಟ್ಟಿ ಯನ್ನು ನಿರ್ವಹಿಸುತ್ತದೆ, ಎಂಡೇಂಜರ್ಡ್ ಸ್ಪೀಸೀಸ್ ಆಕ್ಟ್.
  • ಸ್ವೀಡನ್‌ ಅದರ ಬಯೋಡೈವರ್ಸಿಟಿ ಆಕ್ಷನ್ ಪ್ಲ್ಯಾನ್‌ನ ಭಾಗವಾಗಿ ಒಂದು ಸಂರಕ್ಷಣಾ ಯೋಜನೆಯನ್ನು ಮಾಡಿದೆ.
  • ಸ್ಟೇಟ್ ಆಫ್ ಸಾಲ್ಮನ್‌ ಅಪಾಯದಂಚಿನಲ್ಲಿರುವ ಸಾಲ್ಮನ್‌‌‌ಗಳ ಒಂದು IUCN ರೆಡ್‌ಲಿಸ್ಟ್ಅನ್ನು ನಿರ್ವಹಿಸುತ್ತದೆ.
  • ರಷ್ಯಿಯನ್ ಫಾರ್ ಈಸ್ಟ್‌ನ ಕಾಂಚಟ್ಕ ಪೆನಿನ್ಸುಲವು ಪ್ರಪಂಚದ ಅತಿದೊಡ್ಡ ಸಾಲ್ಮನ್‌ ರಕ್ಷಣಾ ಸ್ಥಳವನ್ನು ಹೊಂದಿದೆ.
  • ಅಲಸ್ಕಾದ ಬಿಯರ್ ಲೇಕ್ 1962ರಿಂದ ಸಾಲ್ಮನ್‌ಗಳ ಸಂಖ್ಯೆಯನ್ನು ವರ್ಧಿಸುವ ಚಟುವಟಿಕೆಗಳ ತಾಣವಾಗಿದೆ.[೩೨]

ಸಾಲ್ಮನ್‌ ಮತ್ತು ಬೀವರ್‌ಗಳು

‌ಬೀವರ್ಗಳು ಮ‌ೂಲಮಾದರಿಯ ಪರಿಸರ ವ್ಯವಸ್ಥೆಯ ಮೇಲ್ವಿಚಾರಕಗಳಾಗಿವೆ; ಮರಗಳನ್ನು ಕಡಿಯುವ ಮತ್ತು ಅಣೆಕಟ್ಟುಗಳನ್ನು ಕಟ್ಟುವ ಕ್ರಿಯೆಗಳಲ್ಲಿ, ಬೀವರ್‌ಗಳು ಅವುಗಳ ಪರಿಸರ ವ್ಯವಸ್ಥೆಯನ್ನು ವ್ಯಾಪಕವಾಗಿ ಬದಲಾಯಿಸಿಕೊಳ್ಳುತ್ತವೆ. ಬೀವರ್‌ ಕೊಳಗಳು ಜ್ಯುವೆನಿಲ್‌ ಸಾಲ್ಮನ್‌‌ಗಳಿಗೆ ಉತ್ತಮ ಆವಾಸವನ್ನು ನೀಡಬಹುದು. ಇದರ ಒಂದು ಉದಾಹರಣೆಯು 1818ರ ನಂತರದ ವರ್ಷಗಳಲ್ಲಿ ಕೊಲಂಬಿಯಾ ನದಿ ಬೇಸಿನ್‌ನಲ್ಲಿ ಕಂಡುಬಂದಿದೆ‌. 1818ರಲ್ಲಿ ಬ್ರಿಟಿಷ್ ಸರಕಾರವು U.S. ಸರಕಾರದೊಂದಿಗೆ, U.S. ನಾಗರಿಕರಿಗೆ ಕೊಲಂಬಿಯಾ ಜಲಾಶಯಗಳಿಗೆ ಪ್ರವೇಶಿಸಲು ಅವಕಾಶ ಕೊಡುವ ಒಪ್ಪಂದವೊಂದನ್ನು ಮಾಡಿಕೊಂಡಿತು (1818ರ ಒಪ್ಪಂದವನ್ನು ಗಮನಿಸಿ). ಆ ಸಂದರ್ಭದಲ್ಲಿ ಹಡ್ಸನ್ಸ್ ಬೇ ಕಂಪೆನಿಯು, U.S.ನ ತುಪ್ಪುಳ ವ್ಯಾಪಾರಿಗಳಿಗೆ ಕಡಿಮೆ ಆಕರ್ಷಣೆಯ ಸ್ಥಳವಾಗಿ ಮಾಡಬೇಕೆಂಬ ಪ್ರಯತ್ನದಲ್ಲಿ ಆ ಪ್ರದೇಶದ ಎಲ್ಲಾ ತುಪ್ಪುಳ-ನೀಡುವವುಗಳನ್ನು ನಾಶಗೊಳಿಸುವಂತೆ ಕಾಡುಪ್ರಾಣಿಗಳನ್ನು-ಹಿಡಿಯುವವರಿಗೆ ಆದೇಶ ನೀಡಿತು. ನದಿಯ ಹೆಚ್ಚಿನ ಭಾಗದಿಂದ ಬೀವರ್‌ಗಳನ್ನು ತೆಗೆದುಹಾಕಿದರೆ, ಸಾಲ್ಮನ್‌ ಚಲನೆಗೆ ಅಡ್ಡಿಯಾಗುವ ಅನೇಕ ಅಂಶಗಳಿಲ್ಲದಿದ್ದರೂ, ಸಾಲ್ಮನ್‌ಗಳ ಚಲನೆಯು ಏಕಾಏಕಿ ಕುಸಿಯುತ್ತದೆ. ಸಾಲ್ಮನ್‌ಗಳ ಬಲಪಡಿಸುವಿಕೆಯು ಬೀವರ್‌ಗಳ ಅಣೆಕಟ್ಟುಗಳಿಂದ ಪರಿಣಾಮಕ್ಕೊಳಗಾಗುತ್ತವೆ ಏಕೆಂದರೆ ಅಣೆಕಟ್ಟುಗಳು:[೩೩][೩೪][೩೫]

  • ಈ ವ್ಯವಸ್ಥೆಯಿಂದ ಪುಷ್ಟಿಗೊಳಿಸುವ ಪದಾರ್ಥಗಳು ಹೊರಕ್ಕೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡುತ್ತವೆ; ಮಳೆಗಾಲ ಮತ್ತು ಚಳಿಗಾಲದಾದ್ಯಂತ ಸಾಯುವ ಬೆಳೆದ-ಸಾಲ್ಮನ್‌ಗಳಿಂದ ಒದಗಿಸಲ್ಪಡುವ ಆಹಾರಗಳು ಹೊಸದಾಗಿ-ಹುಟ್ಟಿಕೊಂಡ ಜ್ಯುವೆನಿಲ್‌‌ಗಳಿಗೆ ಉಳಿಯುತ್ತವೆ.
  • ಆಳವಾದ ನೀರಿನ ಕೊಳಗಳನ್ನು ಒದಗಿಸುತ್ತವೆ. ಇದರಿಂದ ಎಳೆಯ ಸಾಲ್ಮನ್‌ಗಳು ಹಕ್ಕಿಗಳಂತಹ ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಬಹುದು.
  • ದ್ಯುತಿಸಂಶ್ಲೇಷಣೆಯ ಮ‌ೂಲಕ ಮತ್ತು ಸೆಲ್ಯುಲೋಸ್-ನಿಯಂತ್ರಿತ ಅವಶೇಷ ಚಕ್ರದ ಪರಿವರ್ತನೆ ಪರಿಣಾಮಕಾರಿತ್ವವನ್ನು ವರ್ಧಿಸುವುದರ ಮ‌ೂಲಕ ಉತ್ಪನ್ನವನ್ನು ಹೆಚ್ಚಿಸುತ್ತದೆ.
  • ಕಡಿಮೆ-ಶಕ್ತಿಯ ಪರಿಸರವನ್ನು ಸೃಷ್ಟಿಸುತ್ತವೆ. ಅಲ್ಲಿ ಜ್ಯುವೆನಿಲ್‌ ಸಾಲ್ಮನ್‌ಗಳು ಪ್ರವಾಹದ ವಿರುದ್ಧ ಹೋರಾಡುವುದಕ್ಕಿಂತ ಬೆಳೆವಣಿಗೆಗಾಗಿ ಸೇವಿಸುವ ಆಹಾರವನ್ನು ಇಡುತ್ತವೆ.
  • ಅನೇಕ ಭೌತಿಕ ನೆಲೆಗಳೊಂದಿಗೆ ರಚನಾತ್ಮಕ ಸಂಕೀರ್ಣತೆಯನ್ನು ಹೆಚ್ಚಿಸುತ್ತವೆ. ಇದರಿಂದ ಸಾಲ್ಮನ್‌ಗಳು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಬಹುದು.

ಬೀವರ್‌ನ ಅಣೆಕಟ್ಟುಗಳು ಲವಣತ್ವವು 10ppmಗಿಂತ ಕಡಿಮೆ ಇರುವ ಅಳಿವೆಯ ಉಬ್ಬರವಿಳಿತದಿಂದ ಪ್ರಭಾವಿತವಾದ ಜವುಗುಭೂಮಿಗಳಲ್ಲಿನ ಸಾಲ್ಮನ್‌ ಜ್ಯುವೆನಿಲ್‌ಗಳನ್ನು ಪೋಷಿಸುತ್ತವೆ. ಬೀವರ್‌ಗಳು ಮರ್ಟಲ್ ವಲಯದ ಕಾಲುವೆಗಳಿಗೆ ಸಾಮಾನ್ಯವಾಗಿ 2 feet (0.61 m)ಗಿಂತಲೂ ಕಡಿಮೆ ಎತ್ತರದ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುತ್ತವೆ. ಈ ಅಣೆಕಟ್ಟುಗಳು ಹೆಚ್ಚು ಉಬ್ಬವಿಳಿತದಲ್ಲಿ ಮೇಲಿರುತ್ತವೆ ಮತ್ತು ಕಡಿಮೆ ಉಬ್ಬರವಿಳಿತದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಇದು ಜ್ಯುವೆನಿಲ್‌ ಸಾಲ್ಮನ್‌ಗಳಿಗೆ ಆಶ್ರಯವನ್ನು ಒದಗಿಸುತ್ತದೆ. ಇದರಿಂದಾಗಿ ಅವು ಪರಭಕ್ಷಕಗಳಿಗೆ ತುತ್ತಾಗಬಹುದಾದ ಸಂಭವಗಳಿರುವ ದೊಡ್ಡ ಕಾಲುವೆಗಳಿಗೆ ಹೋಗಬೇಕಾಗಿರುವುದಿಲ್ಲ.[೩೬]

ಆಹಾರವಾಗಿ ಸಾಲ್ಮನ್‌

ಎಡ್ವಾರ್ಡ್ ಮ್ಯಾನೆಟ್: ಸ್ಟಿಲ್ ಲೈಫ್ ವಿದ್ ಸಾಲ್ಮನ್‌

ಸಾಲ್ಮನ್‌ ಒಂದು ಜನಪ್ರಿಯ ಆಹಾರ. "ಎಣ್ಣೆಯುಕ್ತ ಮೀನು"[೩೭] ಎಂದು ವಿಂಗಡಿಸಲಾದ ಸಾಲ್ಮನ್‌‌ಅನ್ನು ಆರೋಗ್ಯಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಈ ಮೀನು ಹೆಚ್ಚು ಪ್ರೋಟೀನ್‌, ಹೆಚ್ಚು ಒಮೆಗ-3 ಕೊಬ್ಬಿನಾಮ್ಲ ಮತ್ತು ಹೆಚ್ಚು D ಜೀವಸತ್ವ[೩೮] ಅಂಶಗಳನ್ನು ಹೊಂದಿದೆ. ಸಾಲ್ಮನ್‌ ಕೊಲೆಸ್ಟರಾಲ್‌‌ನ ಮ‌ೂಲವೂ ಆಗಿದೆ. ಇದರಲ್ಲಿ ಜಾತಿಗಳ ಆಧಾರದಲ್ಲಿ 23–214 ಮಿಗ್ರಾಂ/100ಗ್ರಾಂನಷ್ಟು ಪ್ರಮಾಣದಲ್ಲಿ ಕೊಲೆಸ್ಟರಾಲ್‌ ಇರುತ್ತದೆ.[೩೯] ಸೈನ್ಸ್ ಪತ್ರಿಕೆಯಲ್ಲಿನ ವರದಿಗಳ ಪ್ರಕಾರ, ಬೆಳೆಸಿದ ಸಾಲ್ಮನ್‌‌ಗಳು ಹೆಚ್ಚಿನ ಪ್ರಮಾಣದ ಡೈಯಾಕ್ಸಿನ್‌ಗಳನ್ನು ಹೊಂದಿರುತ್ತವೆ. PCB (ಪಾಲಿಕ್ಲೋರಿನೇಟೆಡ್ ಬೈಫೀನೈಲ್) ಮಟ್ಟವು ನಿಸರ್ಗ ಸಹಜ ಸ್ಥಿತಿಯಲ್ಲಿರುವ ಸಾಲ್ಮನ್‌ಗಳಿಗಿಂತ ಸಾಕಿಬೆಳೆಸುವ ‌ಸಾಲ್ಮನ್‌ಗಳಲ್ಲಿ ಎಂಟು ಪಟ್ಟು ಹೆಚ್ಚಿರುತ್ತದೆ.[೪೦] ಒಮೆಗ-3 ಅಂಶವೂ ಸಹ ಸಹಜ ಸ್ಥಿತಿಯಲ್ಲಿರುವ ಮೀನುಗಳಲ್ಲಿ ಕಡಿಮೆ ಇರುತ್ತದೆ ಹಾಗೂ ವಿವಿಧ ಪ್ರಮಾಣಗಳಲ್ಲಿರುತ್ತದೆ. ಒಮೆಗ-3ರಲ್ಲಿ ಮ‌ೂರು ಪ್ರಕಾರಗಳಿವೆ - ALA, DHA ಮತ್ತು EPA; ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳು ಮಿದುಳಿನ ಕಾರ್ಯ ಮತ್ತು ರಚನೆಗೆ ಇತರ ಅಂಶಗಳಿಗಿಂತ ಹೆಚ್ಚು ಪ್ರಮುಖವಾದ DHA ಮತ್ತು EPAಯ ಮುಖ್ಯ ಮ‌ೂಲಗಳಾಗಿವೆ. ಬೆಳೆಸಿದ ಸಾಲ್ಮನ್‌ಅನ್ನು ಆಹಾರದಲ್ಲಿ ಸೇವಿಸಿದರೆ, ಅದು ಹೊಂದಿರುವ ಒಮೆಗ-3 ಪ್ರಮಾಣವು ALA (ಆಲ್ಫಾ-ಲಿನೋಲೆನಿಕ್ ಆಸಿಡ್) ರೂಪದಲ್ಲಿರುತ್ತದೆ. ದೇಹವು ALA ಒಮೆಗ-3ಅನ್ನು DHA ಮತ್ತು EPA ಆಗಿ ಪರಿವರ್ತಿಸುತ್ತದೆ. ಆದರೆ ಅಷ್ಟೊಂದು ಪರಿಣಾಮಕಾರಿಯಲ್ಲದ ದರದಲ್ಲಿ (2–15%) ಮಾಡುತ್ತದೆ. ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್‌ನಲ್ಲಿ 2006ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳೆಸಿದ ಸಾಲ್ಮನ್‌ಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು ಸೋಂಕುಕಾರಕಗಳಿಂದ ಆಗುವ ಯಾವುದೇ ಅಪಾಯಗಳನ್ನು ಮೀರಿಸುತ್ತವೆ.[೪೧] ಅಸ್ತಿತ್ವದಲ್ಲಿರುವ ಒಮೆಗ-3 ಪ್ರಕಾರವು ಇತರ ಪ್ರಮುಖ ಆರೋಗ್ಯ ಚಟುವಟಿಕೆಗಳಿಗೆ ಒಂದು ಮುಖ್ಯ ಅಂಶವಾಗಿರಲಿಕ್ಕಿಲ್ಲ.

ಸರಳ ಸ್ಥೂಲ ವ್ಯವಹಾರಿಕ ಸೂತ್ರದ ಪ್ರಕಾರ, ಪ್ರಪಂಚ ಮಾರುಕಟ್ಟೆಯಲ್ಲಿ ಲಭ್ಯಯಿರುವ ಹೆಚ್ಚಿನ ಪ್ರಮಾಣದ ಅಟ್ಲಾಂಟಿಕ್‌ ಸಾಲ್ಮನ್‌‌ಗಳು ಸಾಕಿಬೆಳೆಸಿದವುಗಳು (99%ಗಿಂತಲೂ ಹೆಚ್ಚು) ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಲಭ್ಯಯಿರುವ ಪೆಸಿಫಿಕ್ ಸಾಲ್ಮನ್‌‌ಗಳು ನಿಸರ್ಗ ಸಹಜ ಸ್ಥಿತಿಯಲ್ಲಿರುವವು (80%ಗಿಂತಲೂ ಹೆಚ್ಚು). ಬೆಳೆಸಿದ ಅಟ್ಲಾಂಟಿಕ್‌ ಸಾಲ್ಮನ್‌ಗಳು ಅಟ್ಲಾಂಟಿಕ್‌ ಸಾಲ್ಮನ್‌ಗಳನ್ನು 85-ರಿಂದ-1ನಷ್ಟು ಸಂಖ್ಯೆಯಲ್ಲಿ ಮೀರಿಸುತ್ತವೆ.[೪೨]

ಹಸಿ ಸಾಲ್ಮನ್‌ ಸ್ಯಾಶಿಮಿ

ಸಾಲ್ಮನ್‌ ಮಾಂಸವು ಸಾಮಾನ್ಯವಾಗಿ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಆದರೂ ಬಿಳಿ ಮಾಂಸದ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳ ಕೆಲವು ಉದಾಹರಣೆಗಳೂ ಇವೆ. ಸಾಲ್ಮನ್‌ಗಳ ನೈಸರ್ಗಿಕ ಬಣ್ಣವು ಮಾಂಸದಲ್ಲಿರುವ ಕ್ಯಾರೊಟಿನಾಯ್ಡ್‌ ಬಣ್ಣಗಳಿಂದ ಹೆಚ್ಚಾಗಿ ಆಸ್ತಕ್ಸ್ಯಾಂಥಿನ್‌‌ನಿಂದ ಮತ್ತು ಸ್ವಲ್ಪ ಪ್ರಮಾಣದಲ್ಲಿ ಕ್ಯಾಂಥಕ್ಸ್ಯಾಂಥಿನ್‌‌ನಿಂದ ಬರುತ್ತದೆ.[೪೩] ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳು ಈ ಕ್ಯಾರೊಟಿನಾಯ್ಡ್‌ಗಳನ್ನು ಕ್ರಿಲ್(ಪುಟ್ಟ ಕಡಲಕಳೆ ಚಿಪ್ಪುಜೀವಿಗಳು) ಮತ್ತು ಇತರ ಸಣ್ಣ ಚಿಪ್ಪುಮೀನುಗಳನ್ನು ತಿನ್ನುವುದರಿಂದ ಪಡೆಯುತ್ತವೆ. ಗ್ರಾಹಕರು ಬಿಳಿ-ಮಾಂಸದ ಸಾಲ್ಮನ್‌ಗಳನ್ನು ಖರೀದಿಸಲು ಇಷ್ಟಪಡದಿರುವುದು ಏಕೆಂದರೆ ಆಸ್ತಕ್ಸ್ಯಾಂಥಿನ್‌ (E161j) ಮತ್ತು ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಂಥಕ್ಸ್ಯಾಂಥಿನ್‌ (E161g)ಅನ್ನು ಬೆಳೆಸುವ-ಸಾಲ್ಮನ್‌ಗಳಿಗೆ ನೀಡುವ ಆಹಾರಕ್ಕೆ, ತಯಾರಿಸಿದ ಆಹಾರವು ನೈಸರ್ಗಿಕವಾಗಿ ಈ ಬಣ್ಣಗಳನ್ನು ಹೊಂದಿರದೆ ಇರುವುದರಿಂದ, ಕೃತಕ ಬಣ್ಣಗಳಾಗಿ ಸೇರಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಆಸ್ತಕ್ಸ್ಯಾಂಥಿನ್‌ಅನ್ನು ರಾಸಾಯನಿಕವಾಗಿ ತಯಾರಿಸಲಾಗುತ್ತದೆ; ಪರ್ಯಾಯವಾಗಿ ಇದನ್ನು ಸಿಗಡಿ ಪುಡಿಯಿಂದ ಪಡೆಯಲಾಗುತ್ತದೆ. ಮತ್ತೊಂದು ಸಾಧ್ಯತೆಯೆಂದರೆ ಒಣಗಿಸಿದ ಕೆಂಪು ಯೀಸ್ಟ್‌ನ ಬಳಕೆ. ಇದೂ ಸಹ ಅದೇ ಬಣ್ಣವನ್ನು ನೀಡುತ್ತದೆ. ಸಂಶ್ಲೇಷಿತ ಮಿಶ್ರಣಗಳನ್ನಾದರೆ ಕನಿಷ್ಠ ಖರ್ಚಿನಲ್ಲಿ ಬಳಸಬಹುದು. ಆಸ್ತಕ್ಸ್ಯಾಂಥಿನ್‌ ಒಂದು ಪ್ರಬಲವಾದ ಆಕ್ಸಿಡೀಕಾರಕ-ವಿರೋಧಿಯಾಗಿದೆ. ಇದು ಮೀನಿನ ಆರೋಗ್ಯಪೂರ್ಣ ಮರ ಮಂಡಲದ ಬೆಳವಣಿಗೆಯನ್ನು ಉದ್ದೀಪನಗೊಳಿಸುತ್ತದೆ ಮತ್ತು ಮೀನಿನ ಫಲೀಕರಣ ಮತ್ತು ಬೆಳವಣಿಗೆ ದರವನ್ನು ಹೆಚ್ಚಿಸುತ್ತದೆ. ಅತಿಹೆಚ್ಚಿನ ಪ್ರಮಾಣದ ಬಳಕೆಯಿಂದ ಕ್ಯಾಂಥಕ್ಸ್ಯಾಂಥಿನ್‌ ಅಕ್ಷಿಪಟದ ಮೇಲೆ ಸಂಗ್ರಹವಾಗುವುದರೊಂದಿಗೆ ಮಾನವನ ಕಣ್ಣಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.[೪೩] ಇಂದು ಕ್ಯಾರೊಟಿನಾಯ್ಡ್‌ಗಳ (ಮುಖ್ಯವಾಗಿ ಕ್ಯಾಂಥಕ್ಸ್ಯಾಂಥಿನ್‌ ಮತ್ತು ಆಸ್ತಕ್ಸ್ಯಾಂಥಿನ್‌) ಪ್ರಮಾಣವು ಪ್ರತಿ ಕೆಜಿ ಮಾಂಸದಲ್ಲಿ 8 ಮಿಗ್ರಾಂನ್ನು ಮೀರುತ್ತಿದೆ. ಎಲ್ಲಾ ಮೀನು ಉತ್ಪಾದಕರು "ರೋಚ್ ಕಲರ್ ಕಾರ್ಡ್"‌ನಲ್ಲಿ 16 ಮೌಲ್ಯವನ್ನು ಸೂಚಿಸುವ ಮಟ್ಟವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಇದು ಮೀನು ನಿರ್ದಿಷ್ಟ ಪ್ರಮಾಣದಲ್ಲಿ ಎಷ್ಟು ಪಿಂಕ್ ಆಗಿ ಕಾಣಿಸುತ್ತವೆ, ಎಂಬುದನ್ನು ತೋರಿಸಲು ಬಳಸುವ ಒಂದು ಬಣ್ಣದ ಕಾರ್ಡ್ ಆಗಿದೆ. ಈ ಅಳತೆ ಮಾಪನವು ಆಸ್ತಕ್ಸ್ಯಾಂಥಿನ್‌‌ನಿಂದಾಗುವ ಪಿಂಕ್ ಬಣ್ಣವನ್ನು ಅಳೆಯಲು ನಿಗದಿತವಾಗಿದೆ, ಆದರೆ ಇಲ್ಲಿ ಕ್ಯಾಂಥಕ್ಸ್ಯಾಂಥಿನ್‌ನಿಂದ ಪಡೆಯುವ ಕಿತ್ತಳೆ ಬಣ್ಣವನ್ನಲ್ಲ‌. ಮಾಂಸದಲ್ಲಿನ ಕ್ಯಾಂಥಕ್ಸ್ಯಾಂಥಿನ್‌ ಪ್ರಮಾಣಕ್ಕೆ ಹಾನಿಕರವಾಗಿರುವ ಸಂಸ್ಕರಣೆ ಮತ್ತು ಸಂಗ್ರಹ ಕಾರ್ಯಗಳ ಅಭಿವೃದ್ಧಿಯು ಸಂಸ್ಕರಣ ಕ್ರಿಯೆಯ ಕೆಳಮಟ್ಟಕ್ಕೆ ತರುವ ಪರಿಣಾಮಗಳನ್ನು ಸರಿದೂಗಿಸಲು ಆಹಾರಕ್ಕೆ ಹೆಚ್ಚಿನ ಪ್ರಮಾಣದ ಬಣ್ಣವನ್ನು ಬಳಸುವಂತೆ ಮಾಡಿದೆ. ನಿಸರ್ಗ ಸಹಜ ಸ್ಥಿತಿಯ ಮೀನಿನಲ್ಲಿ ಕ್ಯಾರೊಟಿನಾಯ್ಡ್‌ ಮಟ್ಟವು 25 ಮಿಗ್ರಾಂನಷ್ಟಿರುತ್ತದೆ, ಆದರೆ ಕ್ಯಾಂಥಕ್ಸ್ಯಾಂಥಿನ್‌ ಮಟ್ಟವು ತದ್ವಿರುದ್ಧವಾಗಿ ಕಡಿಮೆ ಪ್ರಮಾಣದಲ್ಲಿರುತ್ತದೆ.[೪೩]

U.S.ನಲ್ಲಿನ ಡಬ್ಬಿಯಲ್ಲಿ ತುಂಬಿಟ್ಟ ಸಾಲ್ಮನ್‌ಗಳು ಸಾಮಾನ್ಯವಾಗಿ ನಿಸರ್ಗ ಸಹಜ ಸ್ಥಿತಿಯ ಪೆಸಿಫಿಕ್ ಮೀನುಗಳಾಗಿವೆ. ಆದರೂ ಕೆಲವು ಬೆಳೆಸಿದ ಸಾಲ್ಮನ್‌ಗಳೂ ಡಬ್ಬಿಯಲ್ಲಿ ತುಂಬಿಟ್ಟ ರೂಪದಲ್ಲಿ ಲಭ್ಯಯಿರುತ್ತವೆ. ಹೊಗೆಯಾಡಿಸಿದ ಸಾಲ್ಮನ್‌ ಮತ್ತೊಂದು ರೀತಿಯ ಜನಪ್ರಿಯ ತಯಾರಿಕಾ ವಿಧಾನವಾಗಿದೆ, ಇದು ಬಿಸಿ ಅಥವಾ ತಣ್ಣಗಿನ ಹೊಗೆಯಾಡಿಸಿದವುಗಳಾಗಿ ಲಭ್ಯ ಇರುತ್ತವೆ. ಲಾಕ್ಸ್ ಎಂಬುದು ತಣ್ಣಗಿನ ಹೊಗೆಯಾಡಿಸಿದ ಸಾಲ್ಮನ್‌ಅನ್ನು ಅಥವಾ ಉಪ್ಪುನೀರಿನಲ್ಲಿ ಅದ್ದಿದ ಸಾಲ್ಮನ್‌ (ಗ್ರೇವ್‌ಲ್ಯಾಕ್ಸ್ ಎಂದೂ ಕರೆಯುತ್ತಾರೆ)ಅನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ಡಬ್ಬಿಯಲ್ಲಿ ತುಂಬಿಟ್ಟ ಸಾಲ್ಮನ್‌‌ಗಳು ಕೆಲವು ಚರ್ಮ (ಹಾನಿಕಾರಕವಲ್ಲ) ಮತ್ತು ಮ‌ೂಳೆಗಳನ್ನು (ಕ್ಯಾಲ್ಸಿಯಂಅನ್ನು ಹೆಚ್ಚಿಸುತ್ತದೆ) ಒಳಗೊಂಡಿರುತ್ತವೆ. ಚರ್ಮವಿಲ್ಲದ ಮತ್ತು ಮ‌ೂಳೆಗಳಿಲ್ಲದ ಸಾಲ್ಮನ್‌ಗಳೂ ಸಹ ಲಭ್ಯಯಿರುತ್ತವೆ.

ಹಸಿ ಸಾಲ್ಮನ್‌ ಮಾಂಸವು ಆನಿಸ್ಯಾಕಿಸ್ ನೆಮಟೋಡ್‌ಗಳನ್ನು ಹೊಂದಿರುತ್ತದೆ. ಇವು ಆನಿಸ್ಯಾಕಿಯಾಸಿಸ್ಅನ್ನು ಉಂಟುಮಾಡುವ ಸಮುದ್ರದ ಪರೋಪಜೀವಿಗಳಾಗಿವೆ. ಶೈತ್ಯೀಕರಣವು ಲಭ್ಯವಾಗುವುದಕ್ಕಿಂತ ಮೊದಲು ಜಪಾನಿನವರು ಹಸಿ ಸಾಲ್ಮನ್‌ಅನ್ನು ಬಳಸುತ್ತಿರಲಿಲ್ಲ. ಸಾಲ್ಮನ್‌ ಮತ್ತು ಸಾಲ್ಮನ್‌ ಮೀನಾಂಡಗಳನ್ನು ಇತ್ತೀಚಿಗಷ್ಟೇ ಸ್ಯಾಶಿಮಿ (ಹಸಿ ಮೀನು) ಮತ್ತು ಶುಶಿ(ಚಿತ್ರಾನ್ನದ ಮಾದರಿ)ಯನ್ನು ತಯಾರಿಸಲು ಬಳಸಲಾಗುತ್ತಿದೆ.

ಪುರಾಣದಲ್ಲಿ ಸಾಲ್ಮನ್‌

ಸಾಲ್ಮನ್‌ ಸೆಲ್ಟಿಕ್ ಪುರಾಣ ಕಥೆ ಮತ್ತು ಕಾವ್ಯದ ಅನೇಕ ಅಂಗಗಳಲ್ಲಿನ ಒಂದು ಪ್ರಮುಖ ಜೀವಿಯಾಗಿದೆ. ಈ ಪುರಾಣ ಕಥೆಗಳು ಸಾಲ್ಮನ್‌ಗಳನ್ನು ಜ್ಞಾನ ಮತ್ತು ಪೂಜ್ಯತೆಯೊಂದಿಗೆ ಸಂಬಂಧ ಕಲ್ಪಿಸಿವೆ. ಐರಿಷ್ ಪುರಾಣದಲ್ಲಿ, ಸಾಲ್ಮನ್‌ ಆಫ್ ವಿಸಿಡಮ್ (ಅಥವಾ ಸಾಲ್ಮನ್‌ ಆಫ್ ನಾಲೆಡ್ಜ್)[೪೪] ಎಂಬ ಒಂದು ಜೀವಿಯು ದ ಬಾಯ್‌ಹುಡ್ ಡೀಡ್ಸ್ ಆಫ್ ಫಿಯಾನ್ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಲ್ಮನ್‌ ಅದನ್ನು ತಿನ್ನುವವರಿಗೆ ಜ್ಞಾನದ ಶಕ್ತಿ ನೀಡುತ್ತದೆ. ಅಲ್ಲದೇ ಅದಕ್ಕಾಗಿ ಫಿನ್ ಏಸಸ್ ಎಂಬ ಕವಿಯು ಏಳು ವರ್ಷಗಳ ಕಾಲ ಪ್ರಯತ್ನಿಸಿದ್ದನು. ಅಂತಿಮವಾಗಿ ಫಿನ್ ಏಸಸ್ ಆ ಮೀನನ್ನು ಹಿಡಿದು, ತನ್ನ ಶಿಷ್ಯ ಫಿಯಾನ್ ಮ್ಯಾಕ್ ಕಮ್‌ಹೈಲ್‌ಗೆ ತನಗಾಗಿ ತಯಾರಿಸುವುದಕ್ಕಾಗಿ ನೀಡುತ್ತಾನೆ. ಆದರೆ ತಯಾರಿಸುವಾಗ ಫಿಯಾನ್‌ನ ಹೆಬ್ಬೆರಳು ಸಾಲ್ಮನ್‌ನ ರಸದಲ್ಲಿ ಸುಟ್ಟಾಗ, ತನ್ನ ಹುಟ್ಟು ಗುಣ ಅಭ್ಯಾಸದಿಂದ ಬೆರಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುತ್ತಾನೆ. ಇದರಿಂದಾಗಿ ಅವನು ತಿಳಿಯದೆ ಸಾಲ್ಮನ್‌ನ ಜ್ಞಾನವನ್ನು ಪಡೆಯುತ್ತಾನೆ. ಐರಿಷ್ ಪುರಾಣ ಕಥೆಯ ಬೇರೊಂದು ಕಡೆ ಸಾಲ್ಮನ್‌ಅನ್ನು, ತ್ವಾನ್ ಮ್ಯಾಕ್ ಕೈರಿಲ್[೪೫] ಮತ್ತು ಫಿಂಟಾನ್ ಮ್ಯಾಕ್ ಬೊಚ್ರ ಇವರಿಬ್ಬರಲ್ಲಿ ಒಂದು ಅವತಾರವೆಂದು ಹೇಳಲಾಗಿದೆ.[೪೬]

ಸಾಲ್ಮನ್‌ ವೆಲ್ಶ್ ಪುರಾಣದಲ್ಲೂ ಕಾಣಿಸಿಕೊಳ್ಳುತ್ತದೆ. ಗದ್ಯ ಕಥೆ ಕುಲ್ವಿಚ್ ಆಂಡ್ ಓಲ್ವೆನ್ ‌ನಲ್ಲಿ, ಸಾಲ್ಮನ್‌ ಆಫ್ ಲಿನ್ ಲಿವ್‌ ಎಂಬುದು ಬ್ರಿಟನ್‌ನ ಅತ್ಯಂತ ಪುರಾತನ ಪ್ರಾಣಿ ಮತ್ತು ಮ್ಯಾಬನ್ ಏಪ್ ಮಾಡ್ರನ್ ಆ ಸ್ಥಳವನ್ನು ತಿಳಿದಿರುವ ಏಕೈಕ ಪ್ರಾಣಿಯಾಗಿದೆ. ಅವನ ಸ್ಥಾನ, ಸ್ಥಳದ ಬಗ್ಗೆ ತಿಳಿದಿರದ ಇತರ ಪುರಾತನ ಪ್ರಾಣಿಗಳೊಂದಿಗೆ ಮಾತನಾಡಿದ ನಂತರ, ರಾಜ ಆರ್ಥುರ್‌ನ ಆಳುಗಳು ಕೈ ಮತ್ತು ಬೆಡ್ವಿರ್ ಸಾಲ್ಮನ್‌ ಆಫ್ ಲಿನ್ ಲಿವ್‌‌ನಲ್ಲಿಗೆ ಬರುತ್ತಾರೆ. ಅದು ಅವರಿಗೆ ಗ್ಲೌಸೆಸ್ಟರ್‌ನಲ್ಲಿನ ಮ್ಯಾಬನ್‌ನ ಸೆರೆಮನೆಯ ಗೋಡೆಯವರೆಗೆ ಅದರ ಬೆನ್ನಿನ ಮೇಲೆ ಹೋಗಲು ಅವಕಾಶ ಮಾಡಿಕೊಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ನಾರ್ಸ್ ಪುರಾಣದಲ್ಲಿ, ಲೋಕಿಯು ಮೋಸ ಮಾಡಿ ಅಂಧ ದೇವರು ಹೂರ್ ತನ್ನ ಸಹೋದರ ಬಾಲ್ಡರ್‌ನನ್ನು ಸಾಯಿಸುವಂತೆ ಮಾಡಿದ ನಂತರ, ಲೋಕಿ ನದಿಗೆ ಹಾರಿ ಇತರ ದೇವರುಗಳಿಂದ ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಸಾಲ್ಮನ್‌ ಆಗಿ ರೂಪಾಂತರಿಸಿಕೊಳ್ಳುತ್ತಾನೆ. ಅವನನ್ನು ಸೆರೆಹಿಡಿಯಲು ಬಲೆಯನ್ನು ಬೀಸಿದಾಗ ಆತ ಅದರಿಂದ ತಪ್ಪಿಸಿಕೊಳ್ಳಲು ಜಿಗಿಯುತ್ತಾನೆ. ಆದರೆ ಥಾರ್ ಆತನ ಬಾಲದಿಂದ ಹಿಡಿದು ಬಂಧಿಸುತ್ತಾನೆ. ಆದ್ದರಿಂದ ಸಾಲ್ಮನ್‌ನ ಬಾಲದ ತುದಿಯು ದಪ್ಪ ಕಡಿಮೆಯಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸಾಲ್ಮನ್‌ಗಳು ಸ್ಥಳೀಯ ಅಮೆರಿಕಾದ ಪುರಾಣದಲ್ಲಿ, ಪೆಸಿಫಿಕ್ ಕರಾವಳಿಯಲ್ಲಿ ಹೈದಾದಿಂದ ನೂಟ್ಕಾದವರೆಗೆ ಕೇಂದ್ರ ಭಾಗಗಳಾಗಿವೆ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ

  • ಅಲಸ್ಕಾ ಸಾಲ್ಮನ್‌ ಮೀನುಗಾರಿಕೆ
  • ಸಾಲ್ಮನ್‌ ಸಾಕಣೆ
  • ಅಟ್ಲಾಂಟಿಕ್‌ ಸಾಲ್ಮನ್‌
  • ಪೆಸಿಫಿಕ್ ಸಾಲ್ಮನ್‌
  • ಸಾಲ್ಮನ್‌ ಓಟ

ಆಕರಗಳು

ಟಿಪ್ಪಣಿಗಳು

ಹೆಚ್ಚಿನ ಮಾಹಿತಿಗಾಗಿ

ಬಾಹ್ಯ ಕೊಂಡಿಗಳು