ಉರಿ: ದ ಸರ್ಜಿಕಲ್ ಸ್ಟ್ರೈಕ್ (ಚಲನಚಿತ್ರ)

ಉರಿ: ದ ಸರ್ಜಿಕಲ್ ಸ್ಟ್ರೈಕ್ ಸೇನಾ ಹಿನ್ನೆಲೆಯ ೨೦೧೯ರ ಒಂದು ಹಿಂದಿ ಸಾಹಸಪ್ರಧಾನ ಚಲನಚಿತ್ರವಾಗಿದೆ.[೬] ಇದನ್ನು ಪ್ರಥಮ ಪ್ರವೇಶಿಯಾದ ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ.[೭] ರಾನಿ ಸ್ಕ್ರ್ಯೂವಾಲಾ ನಿರ್ಮಿಸಿದ ಈ ಚಿತ್ರದಲ್ಲಿ ವಿಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್, ಮೋಹಿತ್ ರೈನಾ ಮತ್ತು ಕೀರ್ತಿ ಕುಲ್ಹಾರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೮][೯] ಈ ಚಿತ್ರದ ಕಥಾವಸ್ತುವು ೨೦೧೬ರ ಉರಿ ದಾಳಿಯ ಪ್ರತೀಕಾರದ ನಾಟಕೀಕೃತ ವಿವರಣೆಯಾಗಿದೆ. ಕಥೆಯು ಘಟನೆಗಳಲ್ಲಿ ಮುಖ್ಯ ಪಾತ್ರ ವಹಿಸಿದ ಭಾರತೀಯ ಭೂಸೇನೆಯ ಮೇಜರ್ ವಿಹಾನ್ ಸಿಂಗ್ ಶೇರ್‌ಗಿಲ್‍ರನ್ನು ಅನುಸರಿಸುತ್ತದೆ.[೧೦][೧೧]

ಉರಿ: ದ ಸರ್ಜಿಕಲ್ ಸ್ಟ್ರೈಕ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಆದಿತ್ಯ ಧರ್
ನಿರ್ಮಾಪಕರಾನಿ ಸ್ಕ್ರ್ಯೂವಾಲಾ
ಚಿತ್ರಕಥೆಆದಿತ್ಯ ಧರ್
ಪಾತ್ರವರ್ಗವಿಕಿ ಕೌಶಲ್
ಪರೇಶ್ ರಾವಲ್
ಯಾಮಿ ಗೌತಮ್
ಮೋಹಿತ್ ರೈನಾ
ಕೀರ್ತಿ ಕುಲ್ಹಾರಿ
ಸಂಗೀತಶಾಶ್ವತ್ ಸಚ್‍ದೇವ್
ಛಾಯಾಗ್ರಹಣಮಿತೇಶ್ ಮೀರ್‌ಚಂದಾನಿ
ಸಂಕಲನಶಿವ್‍ಕುಮಾರ್ ವಿ. ಪಣಿಕ್ಕರ್
ಸ್ಟುಡಿಯೋಆರ್‌ಎಸ್‍ವಿಪಿ ಮೂವೀಸ್
ವಿತರಕರುಆರ್‌ಎಸ್‍ವಿಪಿ ಮೂವೀಸ್
ಬಿಡುಗಡೆಯಾಗಿದ್ದು
  • 11 ಜನವರಿ 2019 (2019-01-11)[೧]
ಅವಧಿ138 ನಿಮಿಷಗಳು[೨]
ದೇಶಭಾರತ
ಭಾಷೆಹಿಂದಿ
ಬಂಡವಾಳ25 ಕೋಟಿ[೩]
ಬಾಕ್ಸ್ ಆಫೀಸ್ಅಂದಾಜು 342.06 ಕೋಟಿ[೪][೫]

ಚಿತ್ರವು ೧೧ ಜನೆವರಿ ೨೦೧೯ರಂದು ಬಿಡುಗಡೆಯಾಗಿ[೧೨] ವಿಶ್ವಾದ್ಯಂತ ₹೩೪೨.೦೬ crore ಕೋಟಿ ಗಳಿಸಿತು.[೪][೫] ಇದು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಚಿತ್ರವು ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದೆ.[೧೩]

ಕಥಾವಸ್ತು

ಚಿತ್ರವನ್ನು ಅದು ಅಧ್ಯಾಯಗಳಾಗಿ ವಿಭಜಿಸಲಾಗಿದೆ.

ಏಳು ಸೋದರಿಯರು (ಈಶಾನ್ಯ ಭಾರತ)

ಮೊದಲ ಅಧ್ಯಾಯವು ಜೂನ್ ೨೦೧೫ರಲ್ಲಿ ಚಂಡೇಲ್, ಮಣಿಪುರದಲ್ಲಿ ಎನ್ಎಸ್‍ಸಿಎನ್(ಕೆ) ಭಯೋತ್ಪಾದಕರು ನಡೆಸಿದ ಭಾರತೀಯ ಭೂಸೇನೆಯ ಬೆಂಗಾವಲಿನ ಮೇಲಿನ ಒಂದು ಹೊಂಚುದಾಳಿಯಿಂದ ತೆರೆದುಕೊಳ್ಳುತ್ತದೆ. ಪ್ರತೀಕಾರವಾಗಿ, ಒಬ್ಬ ಪ್ಯಾರಾ ಎಸ್ಎಫ಼್ ಸೈನಿಕನಾದ ಮೇಜರ್ ವಿಹಾನ್ ಸಿಂಗ್ ಶೇರ್‌ಗಿಲ್ (ವಿಕಿ ಕೌಶಲ್) ಮತ್ತು ಅವನ ಭಾವ ಮೇಜರ್ ಕರಣ್ ಕಶ್ಯಪ್ (ಮೋಹಿತ್ ರೈನಾ) ಸೇರಿದಂತೆ ಅವನ ಘಟಕವು ಒಳನುಸುಳಿ ಈಶಾನ್ಯ ಭಾಗದ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಹೊಂಚುದಾಳಿಗೆ ಜವಾಬ್ದಾರನಾದ ಅದರ ಮುಖ್ಯ ನಾಯಕನನ್ನು ಕೂಡ ಕೊಲ್ಲುತ್ತದೆ. ಯಶಸ್ವಿ ದಾಳಿಯ ನಂತರ ಭಾರತದ ಪ್ರಧಾನ ಮಂತ್ರಿಗಳು (ರಜಿತ್ ಕಪೂರ್) ಔಪಚಾರಿಕ ಭೋಜನದಲ್ಲಿ ಅವನನ್ನು ಮತ್ತು ಇಡೀ ಘಟಕವನ್ನು ಅಭಿನಂದಿಸುತ್ತಾರೆ. ಆರನೇ ಹಂತದ ಆಲ್‌ಝೈಮರ್‌‌ನಿಂದ ನರಳುತ್ತಿರುವ ತನ್ನ ತಾಯಿಯ ಹತ್ತಿರ ಇರಲು ಬಯಸಿ ವಿಹಾನ್ ಮುಂಚಿತ ನಿವೃತ್ತಿಗಾಗಿ ವಿನಂತಿಸಿಕೊಳ್ಳುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನ ಮಂತ್ರಿಗಳು ಅವನಿಗೆ ನಿವೃತ್ತಿಯ ಬದಲಾಗಿ ನವದೆಹಲಿಯಲ್ಲಿ ಅವನ ಅಮ್ಮನ ಹತ್ತಿರ ಮೇಜಿನ ಕೆಲಸದ ಪ್ರಸ್ತಾಪ ಮಾಡುತ್ತಾರೆ. ಇದಕ್ಕೆ ಅವನು ಒಪ್ಪಿಕೊಳ್ಳುತ್ತಾನೆ.[೧೪]

ಗಲಿಬಿಲಿಗೊಳಿಸುವ ಶಾಂತಿ (ನವ ದೆಹಲಿ)

ಎರಡನೇ ಅಧ್ಯಾಯವು ವಿಹಾನ್ ನವ ದೆಹಲಿಯಲ್ಲಿನ ಏಕೀಕೃತ ರಕ್ಷಣಾ ಸಿಬ್ಬಂದಿಯ ಮುಖ್ಯ ಕಛೇರಿಯಲ್ಲಿ ಮೇಜಿನ ಕೆಲಸವನ್ನು ವಹಿಸಿಕೊಳ್ಳುವುದನ್ನು ಮತ್ತು ತನ್ನ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ತೋರಿಸುತ್ತದೆ. ಈ ಭಾಗವು ಪಠಾನ್ಕೋಟ್ ದಾಳಿಯ ಸಂಕ್ಷಿಪ್ತ ವಿವರವನ್ನು ಕೂಡ ತೋರಿಸುತ್ತದೆ. ವಿಹಾನ್‍ನ ತಾಯಿಯನ್ನು ನೋಡಿಕೊಳ್ಳಲು ಜ್ಯಾಸ್ಮಿನ್ ಡಿಆಲ್ಮೈಡಾ (ಯಾಮಿ ಗೌತಮ್) ಎಂಬ ದಾದಿಯನ್ನು ನೇಮಕ ಮಾಡಲಾಗುತ್ತದೆ. ವಿಹಾನ್ ಫ಼್ಲೈಟ್ ಲೆಫ಼್ಟಿನೆಂಟ್ ಸೀರತ್ ಕೌರ್ (ಕೀರ್ತಿ ಕುಲ್ಹಾರಿ) ಎಂಬ ಹೆಸರಿನ ಭಾರತೀಯ ವಾಯುಸೇನೆಯ ಪೈಲಟ್‌ಳನ್ನು ಭೇಟಿಯಾಗುತ್ತಾನೆ. ಇವಳು ತನ್ನ ದೇಶಭಕ್ತಿಯನ್ನು ಹುತಾತ್ಮನಾದ ತನ್ನ ಗಂಡನಿಗೆ ಸಾಬೀತುಪಡಿಸಲು ಪ್ರಯತ್ನಿಸುತ್ತಿರುತ್ತಾಳೆ. ಇವಳ ಗಂಡ ಸೇನಾ ಅಧಿಕಾರಿಯಾಗಿದ್ದು ಒಂದು ಹೊಂಚುದಾಳಿಯಲ್ಲಿ ಸತ್ತಿರುತ್ತಾನೆ. ಒಂದು ದಿನ ಅವನ ತಾಯಿಯು ಕಾಣೆಯಾಗುತ್ತಾಳೆ. ಅವನು ಅವಳಿಗಾಗಿ ಹುಡುಕುತ್ತಾನೆ ಮತ್ತು ನಿರ್ಲಕ್ಷ್ಯಕ್ಕಾಗಿ ಜ್ಯಾಸ್ಮಿನ್‍ಳನ್ನು ಹೊಣೆಯಾಗಿಸುತ್ತಾನೆ ಮತ್ತು ಅವಳ ಭದ್ರತೆಯ ಅಗತ್ಯವಿಲ್ಲ ಎಂದು ಅವಳಿಗೆ ಹೇಳುತ್ತಾನೆ. ವಿಹಾನ್‍ನ ತಾಯಿಯು ಒಂದು ಸೇತುವೆಯ ಕೆಳಗೆ ಸಿಗುತ್ತಾಳೆ ಮತ್ತು ತಾನು ಒಬ್ಬ ಗೂಢಚಾರಿಣಿ ಎಂದು ಬಹಿರಂಗಗೊಳಿಸುತ್ತಾಳೆ. ಚಿತ್ರವು ಈಶಾನ್ಯ ಭಯೋತ್ಪಾದಕರಿಂದ ಬೆದರಿಕೆಯ ಕಾರಣ ವಿಶೇಷ ಪಡೆಗಳ ಯೋಧರ ಕುಟುಂಬದವರಿಗೆ ಏಕೆ ಭದ್ರತೆಯನ್ನು ನೀಡಲಾಯಿತು ಎಂದು ಒಂದು ಟಿಪ್ಪಣಿಯನ್ನು ಬಹಿರಂಗಗೊಳಿಸುತ್ತದೆ.

ಸಾವಿರ ಗಾಯಗಳಿಂದ ಭಾರತದ ನೆತ್ತರು ಹರಿಸು (ಉರಿ, ಜಮ್ಮು ಮತ್ತು ಕಾಶ್ಮೀರ)

೧೮ ಸೆಪ್ಟೆಂಬರ್ ೨೦೧೬ ರಂದು, ನಾಲ್ಕು ಬಹಳವಾಗಿ ಶಸ್ತ್ರಸಜ್ಜಿತ ಭಯೋತ್ಪಾದಕರು ಪ್ರಾತಃಕಾಲದಲ್ಲಿ ಉರಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಸೇನಾ ಉಪವಿಭಾಗದ ಮುಖ್ಯ ಕಚೇರಿಯ ಮೇಲೆ ದಾಳಿ ಮಾಡಿ, ೧೯ ಸೈನಿಕರನ್ನು ನಿದ್ದೆ ಮಾಡುತ್ತಿರುವಾಗ ಕೊಲ್ಲುತ್ತಾರೆ. ಭಯೋತ್ಪಾದಕರನ್ನು ಕೊಲ್ಲಲಾಗುತ್ತದೆ ಆದರೆ ಪರೀಕ್ಷಿಸಲು ಕೈಗೆತ್ತಿಕೊಂಡ ಭಯೋತ್ಪಾದಕನ ಬಂದೂಕಿಗೆ ಲಗತ್ತಾಗಿದ್ದ ಪಿನ್ನನ್ನು ಆಕಸ್ಮಿಕವಾಗಿ ಎಳೆದ ಕಾರಣ ಕರನ್ ಗ್ರೆನೇಡ್ ಸ್ಫೋಟದಲ್ಲಿ ಸಾಯುತ್ತಾನೆ. ವಿಹಾನ್ ಸೇರಿದಂತೆ ಇಡೀ ಕುಟುಂಬವು ಆಘಾತಗೊಳ್ಳುತ್ತದೆ. ದಾಳಿಯ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲು ಸಚಿವಾಲಯವು ನಿರ್ಧರಿಸುತ್ತದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಗೋವಿಂದ್ ಭಾರದ್ವಾಜ್ (ಪರೇಶ್ ರಾವಲ್) ಸರ್ಜಿಕಲ್ ಸ್ಟ್ರೈಕ್‍ನ ವಿಚಾರವನ್ನು ಸೂಚಿಸುತ್ತಾರೆ. ಪ್ರಧಾನಮಂತ್ರಿಗಳು ಆ ಪ್ರಯತ್ನಕ್ಕೆ ಒಪ್ಪಿಗೆ ನೀಡಿ ದಾಳಿಗೆ ಹತ್ತು ದಿನಗಳನ್ನು ನೀಡುತ್ತಾರೆ. ವಿಹಾನ್ ತನ್ನ ಮೇಜಿನ ಕೆಲಸವನ್ನು ಬಿಟ್ಟು ಉಧಮ್‍ಪುರ್‌ದಲ್ಲಿನ ನಾರ್ದರ್ನ್ ಕಮಾಂಡ್ ನೆಲೆಗೆ ಹೊರಡುತ್ತಾನೆ. ಅವನು ತನ್ನನ್ನು ಆ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳುವಂತೆ ಭಾರತೀಯ ಭೂಸೇನೆಯ ಮುಖ್ಯಸ್ಥರಾದ ಜನರಲ್ ಅರ್ಜುನ್ ಸಿಂಗ್ ರಾಜಾವತ್‍ರನ್ನು (ಶಿಶಿರ್ ಶರ್ಮಾ) ವಿನಂತಿಸಿಕೊಂಡಾಗ ಅವರು ಒಪ್ಪಿಕೊಳ್ಳುತ್ತಾರೆ. ದಾಳಿಯಲ್ಲಿ ಕೊಲ್ಲಲ್ಪಟ್ಟ ಬಹುತೇಕ ಸೈನಿಕರು ಬಿಹಾರ್ ರೆಜಿಮೆಂಟ್ ಮತ್ತು ಡೋಗ್ರಾ ರೆಜಿಮೆಂಟ್‍ನವರಾಗಿದ್ದರಿಂದ ವಿಹಾನ್ ಈ ದಳಗಳ ಘಾತಕ್ ಫ಼ೋರ್ಸ್ ಕಮಾಂಡೋಗಳು ಮತ್ತು ಜೊತೆಗೆ ವಿಶೇಷ ಪಡೆಗಳನ್ನು ಆಯ್ಕೆಮಾಡುತ್ತಾನೆ. ಅವರು ಇನ್ನು ಮುಂದೆ ತಮ್ಮ ಫೋನುಗಳನ್ನು ಬಳಸುವುದು ಸಾಧ್ಯವಿಲ್ಲ ಎಂದು ವಿಹಾನ್ ಅವರಿಗೆ ತಿಳಿಸುತ್ತಾನೆ ಮತ್ತು ಕಾರ್ಯಾಚರಣೆಯನ್ನು ಕ್ರಮಬದ್ಧ ತರಬೇತಿ ಅಭ್ಯಾಸಗಳಾಗಿ ಮರೆಮಾಚುತ್ತಾನೆ. ಕಮಾಂಡೊಗಳು ತಮ್ಮ ತರಬೇತಿಯನ್ನು ಆರಂಭಿಸುತ್ತಾರೆ.[೧೪][೧೫][೧೬][೧೭]

ನಯಾ ಹಿಂದುಸ್ತಾನ್ (ಹೊಸ ಭಾರತ) (ನವ ದೆಹಲಿ)

ಯೋಜಿಸುವಿಕೆಯ ವೇಳೆ, ಗೋವಿಂದ್ (ಉಪಗ್ರಹ ಚಿತ್ರಗಳನ್ನು ನೀಡಲು) ಇಸ್ರೊ, (ಡ್ರೋನ್ ಕಣ್ಗಾವಲಿಗಾಗಿ) ಡಿಆರ್‌ಡಿಒ ಮತ್ತು (ಗುಪ್ತಮಾಹಿತಿಗಾಗಿ) ರಾವನ್ನು ಸೇರಿಸಿಕೊಳ್ಳುತ್ತಾರೆ. ಅವರು ಡಿಆರ್‌ಡಿಒ ಮುಖ್ಯಸ್ಥರಾದ ಬ್ರಾಯನ್ ಡಿಸೂಜ಼ಾರನ್ನು (ಇವಾನ್ ರಾಡ್ರಿಗೇಸ್) ಭೇಟಿಯಾಗಲು ಹೋದಾಗ, ಅವರು ಅಕಸ್ಮಾತ್ತಾಗಿ ಇಶಾನ್ ಎಂಬ ಹೆಸರಿನ ಇಂಟರ್ನ್‌ನನ್ನು ಭೇಟಿಯಾಗುತ್ತಾರೆ. ಇವನು ಗರುಡ ಪಕ್ಷಿಯಂತೆ ಕಾಣುವ ಮತ್ತು ಅದರಂತೆ ಆಕಾರ ಹೊಂದಿರುವ ಗರುಡ ಎಂಬ ಹೆಸರಿನ ಡ್ರೋನ್‌ನ್ನು ಅಭಿವೃದ್ಧಿಪಡಿಸಿರುತ್ತಾನೆ.[೧೮] ಡ್ರೋನ್‍ಗಳು ಮತ್ತು ಉಪಗ್ರಹ ಚಿತ್ರಗಳ ನೆರವಿನಿಂದ ಅವರು ಭಯೋತ್ಪಾದಕರ ಅಡಗುತಾಣಗಳು ಮತ್ತು ತರಬೇತಿ ಶಿಬಿರಗಳ ನಿಖರ ಸ್ಥಳವನ್ನು ಪಡೆಯಲು ಸಾಧ್ಯವಾಗುತ್ತದೆ. ಜ್ಯಾಸ್ಮಿನ್ ವಿಹಾನ್‍ಗೆ ತನ್ನ ನಿಜವಾದ ಹೆಸರು ಪಲ್ಲವಿ ಶರ್ಮಾ ಎಂದು ಬಹಿರಂಗಪಡಿಸುತ್ತಾಳೆ ಮತ್ತು ವಿಚಾರಣೆಯ ವೇಳೆ ಇಬ್ಬರೂ ದಾಳಿಯನ್ನು ಯಾರು ಯೋಜಿಸಿದರು ಎಂಬ ಮಾಹಿತಿಯನ್ನು ಹೊರಸೆಳೆಯಲು ಸಾಧ್ಯವಾಗುತ್ತದೆ. ಅವನು ಸೀರತ್‍ಳನ್ನು ತನ್ನ ಪೈಲಟ್ ಆಗಲು ಆಯ್ಕೆಮಾಡುತ್ತಾನೆ. ಅವಳು ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾಳೆ. ಗಡಿಯಲ್ಲಿ ಗಮನಭಂಗಕ್ಕಾಗಿ ಫಿರಂಗಿ ದಾಳಿಯನ್ನು ತೀವ್ರಗೊಳಿಸಬೇಕು ಮತ್ತು ತಮ್ಮ ದಾಳಿಯ ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನಿ ವಾಯುಪಡೆಯ ಗುರುತುಗಳಿಂದ ಬಣ್ಣ ಸವರಬೇಕು ಎಂದೂ ಗೋವಿಂದ್ ಸಲಹೆ ಮಾಡುತ್ತಾರೆ. ಕಮಾಂಡೊಗಳು ವಿಹಾನ್‍ನ ಕೆಳಗೆ ತರಬೇತಿ ಪಡೆಯಲೂ ಶುರುಮಾಡುತ್ತಾರೆ. ಪಾಕಿಸ್ತಾನಿ ಅಧಿಕಾರಿಗಳು ಭಾರತದ ಚಟುವಟಿಕೆಗಳನ್ನು ಸಂದೇಹಿಸುತ್ತಾರೆ ಆದರೆ ಕೀಳಂದಾಜು ಮಾಡಿದ ಕಾರಣದಿಂದ ಅವನ್ನು ತಳ್ಳಿಹಾಕುತ್ತಾರೆ.

ಸರ್ಜಿಕಲ್ ಸ್ಟ್ರೈಕ್ (ಪಾಕಿಸ್ತಾನ ನಿಯಂತ್ರಿತ ಕಾಶ್ಮೀರ)

೨೮ ಸೆಪ್ಟೆಂಬರ್‌ನ ರಾತ್ರಿಯಂದು, ಕಮಾಂಡೊಗಳು ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದಲ್ಲಿನ ದಾಳಿಗೆ ಎಮ್ಐ ಹೆಲಿಕಾಪ್ಟರ್‌ಗಳಲ್ಲಿ ಹೊರಡುತ್ತಾರೆ. ಕಾರ್ಯಾಚರಣೆಯ ವೇಳೆ ಪಾಕಿಸ್ತಾನದಲ್ಲಿನ ಗೂಢಚಾರರಿಂದ ಪಾಕಿಸ್ತಾನಿ ಸೇನೆಯು ಅವರ ಹೆಲಿಕಾಪ್ಟರ್‌ನ್ನು ಕೆಳಬೀಳಿಸಲು ಮುಜ಼ಫ್ಫರಾಬಾದ್ ವಲಯದಲ್ಲಿ "ಎಡಬ್ಲ್ಯುಎಸಿ" ಮುಂಚಿತ ಎಚ್ಚರಿಕೆಯ ರೇಡಾರ್ ಆಧಾರಿತ ನೆಲದಿಂದ ಆಕಾಶದ ಕ್ಷಿಪಣಿ ವ್ಯವಸ್ಥೆಯನ್ನು ಉಡ್ಡಯಿಸಿದೆ ಎಂಬ ಅತ್ಯಂತ ಇತ್ತೀಚಿನ ಗುಪ್ತಮಾಹಿತಿ ದೊರೆತ ಕಾರಣ ವಿಹಾನ್‍ನ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಒತ್ತಾಯಪಡಿಸಲಾಗುತ್ತದೆ. ಅವನು ಮತ್ತು ಅವನ ತಂಡವು ಸಿದ್ಧತೆ ಇಲ್ಲದೆಯೇ ಒಂದು ಗುಹೆಯ ಮೂಲಕ ನಡೆಯುವುದನ್ನು ಯೋಜಿಸುತ್ತದೆ (ಇದು ಕತ್ತಲೆ ಮತ್ತು ಇತರ ಭಯೋತ್ಪಾದಕರ ಗೊತ್ತಿಲ್ಲದ ಇರುವಿಕೆಯ ಕಾರಣ ಬಹಳ ಅಪಾಯಕಾರಿಯಾಗಿರುತ್ತದೆ). ಅವನ ತಂಡಯು ಯಶಸ್ವಿಯಾಗಿ ಒಳನುಸುಳಿ ಎರಡೂ ಉಡಾವಣೆಯ ಕಟ್ಟೆಗಳ ಮೇಲಿನ ಎಲ್ಲ ಭಯೋತ್ಪಾದಕರನ್ನು ಕೊಲ್ಲುತ್ತಾರೆ. ಅದೇ ರೀತಿ, ಇತರ ಕಮಾಂಡೊ ತಂಡಗಳು ಎಲ್ಲ ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಉರಿ ದಾಳಿಯ ಅಪರಾಧಿಗಳಾದ ಇದ್ರಿಸ್ ಮತ್ತು ಜಬ್ಬಾರ್‌ರನ್ನು ವಿಹಾನ್ ಕೊಲ್ಲುತ್ತಾನೆ. ಸ್ಥಳೀಯ ಪೋಲೀಸರನ್ನು ಜಾಗರೂಕಗೊಳಿಸಿದಾಗ ಕಡಿಮೆ ಪ್ರಮಾಣದಲ್ಲಿ ಮದ್ದುಗುಂಡು ಮತ್ತು ಸಮಯವಿದ್ದ ಕಮಾಂಡೊಗಳು ತಪ್ಪಿಸಿಕೊಳ್ಳುತ್ತಾರೆ. ವಾಪಸಾಗುತ್ತಿರುವಾಗ, ಅವರ ಮೇಲೆ ಹತ್ತಿರದ ಯಂತ್ರ ಫಿರಂಗಿ ಕಂದಕ ಹಾಗೂ ವಿಹಾನ್‍ನ ತಂಡವನ್ನು ಪ್ರತಿಬಂಧಿಸಲು ದಿಢೀರಾಗಿ ಹಾರಿಸಲಾದ ಒಂದು ಪಾಕಿಸ್ತಾನಿ ವಾಯುಪಡೆಯ ಎಮ್‌ಐ-೧೭ ಹೆಲಿಕಾಪ್ಟರ್ ಎರಡೂ ಮೂಲಗಳಿಂದ ಬಹಳವಾಗಿ ಗುಂಡುಗಳ ಸುರಿಮಳೆಯಾಗುತ್ತದೆ. ಫ಼್ಲೈಟ್ ಲೆಫ಼್ಟಿನೆಂಟ್ ಸೀರತ್ ಎರಡರ ಮೇಲೂ ಗುಂಡು ಹಾರಿಸುವ ಮೂಲಕ ಪಾಕಿಸ್ತಾನಿ ಗನ್‍ಶಿಪ್‍ನ್ನು ದೂರ ಓಡಿಸಿ ಮತ್ತು ಯಂತ್ರ ಫಿರಂಗಿ ಕಂದಕವನ್ನು ನಾಶಮಾಡಿ ಅವರನ್ನು ಕಾಪಾಡಲು ಬರುತ್ತಾಳೆ. ಅವರ ತಂಡವು ಯಾವುದೇ ಸಾವುನೋವುಗಳಿಲ್ಲದೇ ಭಾರತದ ಕಡೆಯ ಎಲ್‍ಒಸಿಯನ್ನು ಯಶಸ್ವಿಯಾಗಿ ದಾಟುತ್ತದೆ. ಉಳಿದ ನಿಯೋಜಿತ ತಂಡಗಳೂ ಯಶಸ್ವಿಯಾಗಿ ಯಾವುದೇ ಸಾವುನೋವುಗಳಿಲ್ಲದೆ ವಾಪಸಾಗುತ್ತವೆ. ವಿಹಾನ್ ಗಾಜ಼ಿಯಾಬಾದ್, ಉತ್ತರ ಪ್ರದೇಶದ ಹಿಂಡೋನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯುತ್ತಾನೆ. ಚಿತ್ರವು ಅವನು, ಪಲ್ಲವಿ, ಗೋವಿಂದ್ ಮತ್ತು ಕಮಾಂಡೊಗಳು ಪ್ರಧಾನಮಂತ್ರಿಗಳೊಂದಿಗೆ ಸಂತೋಷವಾಗಿ ಔಪಚಾರಿಕ ಭೋಜನವನ್ನು ಮಾಡುತ್ತಿರುವ ವೇಳೆ ಮುಗಿಯುತ್ತದೆ.

ನಾಮ ಉಲ್ಲೇಖಗಳ ನಂತರದ ದೃಶ್ಯದಲ್ಲಿ, ಒಬ್ಬ ಪಾಕಿಸ್ತಾನಿ ಸಚಿವನಾದ ಜ಼ಮೀರ್ ಎಚ್ಚರಗೊಂಡು ಭಾರತದ ಯಶಸ್ವಿ ಸರ್ಜಿಕಲ್ ಸ್ಟ್ರೈಕ್‌ನ ಸುದ್ದಿಯನ್ನು ನೋಡಿ ಹತಾಶೆಯಿಂದ ಚೀರುತ್ತಾನೆ ಮತ್ತು ದೃಶ್ಯವು ಹಠಾತ್ತಾಗಿ ಜೈ ಹಿಂದ್ ಎಂದು ತೋರಿಸುವ ಶೀರ್ಷಿಕೆ ಕಾರ್ಡ್‌ಗೆ ಪರಿವರ್ತನೆಯಾಗುತ್ತದೆ.

ಪಾತ್ರವರ್ಗ

  • ಮೇಜರ್ ವಿಹಾನ್ ಸಿಂಗ್ ಶೇರ್‌ಗಿಲ್ ಪಾತ್ರದಲ್ಲಿ ವಿಕಿ ಕೌಶಲ್
  • ಮೇಜರ್ ಕರನ್ ಕಶ್ಯಪ್ ಪಾತ್ರದಲ್ಲಿ ಮೋಹಿತ್ ರೈನಾ
  • ರಾಷ್ಟ್ರೀಯ ಭದ್ರತಾ ಸಲಹೆಗಾರ ಗೋವಿಂದ್ ಭಾರದ್ವಾಜ್ ಪಾತ್ರದಲ್ಲಿ ಪರೇಶ್ ರಾವಲ್
  • ಪಲ್ಲವಿ ಶರ್ಮಾ / ಜ್ಯಾಸ್ಮಿನ್ ಡಿ ಆಲ್ಮೈಡಾ ಪಾತ್ರದಲ್ಲಿ ಯಾಮಿ ಗೌತಮ್
  • ಫ಼್ಲೈಟ್ ಲೆಫ಼್ಟಿನೆಂಟ್ ಸೀರತ್ ಕೌರ್ ಪಾತ್ರದಲ್ಲಿ ಕೀರ್ತಿ ಕುಲ್ಹಾರಿ
  • ಭಾರತದ ಪ್ರಧಾನಿಯಾಗಿ ರಜಿತ್ ಕಪೂರ್
  • ಉದಯ್ ಸಿಂಗ್ ರಾಥೋಡ್ ಪಾತ್ರದಲ್ಲಿ ರಾಜ್‍ವೀರ್ ಚೌಹಾನ್
  • ಬ್ರಾಯನ್ ಡಿಸೂಜ಼ಾ ಪಾತ್ರದಲ್ಲಿ ಇವಾನ್ ರಾಡ್ರಿಗೇಸ್
  • ಭಾರತದ ರಕ್ಷಣಾ ಸಚಿವ ರವಿಂದರ್ ಅಗ್ನಿಹೋತ್ರಿ ಪಾತ್ರದಲ್ಲಿ ಯೋಗೇಶ್ ಸೋಮನ್
  • ನೇಹಾ ಶೇರ್‌ಗಿಲ್ ಕಶ್ಯಪ್ ಪಾತ್ರದಲ್ಲಿ ಮಾನಸಿ ಪಾರೇಖ್ ಗೋಹಿಲ್
  • ಸುಹಾಸಿನಿ ಶೇರ್‌ಗಿಲ್ ಪಾತ್ರದಲ್ಲಿ ಸ್ವರೂಪ್ ಸಂಪತ್
  • ಜನರಲ್ ಅರ್ಜುನ್ ಸಿಂಗ್ ರಾಜಾವತ್ ಪಾತ್ರದಲ್ಲಿ ಶಿಶಿರ್ ಶರ್ಮಾ
  • ಲೆ. ಜನರಲ್ ಅಜಯ್ ಗರೇವಾಲ್ ಪಾತ್ರದಲ್ಲಿ ಸತ್ಯಜೀತ್ ಶರ್ಮಾ
  • ಸುಹಾನಿ ಕಶ್ಯಪ್ ಪಾತ್ರದಲ್ಲಿ ರೀವಾ ಅರೋರಾ
  • ಕ್ಯಾಪ್ಟನ್ ಸರ್ತಾಜ್ ಸಿಂಗ್ ಚಂಧೋಕ್ ಪಾತ್ರದಲ್ಲಿ ಧೈರ್ಯ ಕರ್ವಾ
  • ವಿಕ್ರಮ್ ಡಬಾಸ್ ಪಾತ್ರದಲ್ಲಿ ಪದಮ್ ಭೋಲಾ
  • ಕೆ. ಎಸ್. ವೆಂಕಟೇಶ್ ಪಾತ್ರದಲ್ಲಿ ಅನುರಾಗ್ ಮಿಶ್ರಾ
  • ಭಾರತದ ಗೃಹಮಂತ್ರಿಯ ಪಾತ್ರದಲ್ಲಿ ನವ್‍ತೇಜ್ ಹುಂಡಾಲ್
  • ಪಾಕಿಸ್ತಾನದ ಆಂತರಿಕ ಮಂತ್ರಿಯ ಪಾತ್ರದಲ್ಲಿ ಕಮಲ್ ಮಲಿಕ್
  • ಪಿಒಕೆಯ ಪಾಕಿಸ್ತಾನಿ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಸುಖ್‍ವಿಂದರ್ ಚಹಾಲ್
  • ಇಶಾನ್ ಪಾತ್ರದಲ್ಲಿ ಆಕಾಶ್‍ದೀಪ್ ಅರೋರಾ
  • ಶಾಹಿಹ್ ಖಾನ್ ಪಾತ್ರದಲ್ಲಿ ಉಜ್ವಲ್ ಚೋಪ್ರಾ
  • ಆಸ್ಮಾ ಪಾತ್ರದಲ್ಲಿ ರುಖ್‍ಸಾರ್ ರೆಹಮಾನ್
  • ಇದ್ರಿಸ್ ಖಾನ್ ಪಾತ್ರದಲ್ಲಿ ಅಬ್ರಾರ್ ಜ಼ಹೂರ್
  • ಜಬ್ಬಾರ್ ಫ಼ಿರೋಜ಼ಿ ಪಾತ್ರದಲ್ಲಿ ಸುನಿಲ್ ಪಾಲ್ವಾಲ್
  • ಹಿರಿಯ ಪಾಕಿಸ್ತಾನಿ ಐಎಸ್‍ಐ ಅಧಿಕಾರಿ ಪಾತ್ರದಲ್ಲಿ ರಾಕೇಶ್ ಬೇದಿ
  • ರಾಹಿಲ್ ಹುಸೇನ್ ಪಾತ್ರದಲ್ಲಿ ನಿಶಾಂತ್ ಸಿಂಗ್
  • ಜ಼ುಬೇರ್ ಅಹಮದ್ ಪಾತ್ರದಲ್ಲಿ ಅಜೀತ್ ಶಿಢಾಯೆ
  • ಫ಼ಾಹೀಮ್ ಖಾನ್ ಪಾತ್ರದಲ್ಲಿ ಆಮಿರ್ ಯಾಸೀನ್
  • ಮೇಜರ್ ಲತೀಫ಼್ ಪಾತ್ರದಲ್ಲಿ ಆದರ್ಶ್ ಗೌತಮ್
  • ಜ಼ಮೀರ್ ಪಾತ್ರದಲ್ಲಿ ಅನಿಲ್ ಜಾರ್ಜ್

ತಯಾರಿಕೆ

ಸೆಪ್ಟೆಂಬರ್ ೨೦೧೭ರ ಸರ್ಜಿಕಲ್ ಸ್ಟ್ರೈಕ್‍ನ ಒಂದು ವರ್ಷದ ನಂತರ ನಿರ್ಮಾಪಕ ರಾನಿ ಸ್ಕ್ರ್ಯೂವಾಲಾ ಉರಿಯನ್ನು ಘೋಷಿಸಿದರು. ಪ್ರಧಾನ ಛಾಯಾಗ್ರಹಣವು ಜೂನ್ ೨೦೧೮ರಲ್ಲಿ ಆರಂಭವಾಗಿ ಸೆಪ್ಟೆಂಬರ್‌ನಲ್ಲಿ ಮುಗಿಯಿತು.[೧೯][೨೦] ಕೌಶಲ್ ಐದು ತಿಂಗಳು ವ್ಯಾಪಕವಾದ ಸೇನಾ ತರಬೇತಿಗೆ ಒಳಗಾಗಿ ತಮ್ಮ ತೂಕವನ್ನು ಹೆಚ್ಚಿಸಿಕೊಂಡರು. ಅವರು ದಿನಕ್ಕೆ ಐದು ಗಂಟೆ ತರಬೇತಿಗೊಳಗಾದರು ಮತ್ತು ದೇಹದಾರ್ಢ್ಯವನ್ನು ವರ್ಧಿಸಿಕೊಳ್ಳಲು ಮೂರು ನಾಲ್ಕು ಗಂಟೆಗಳ ಸೇನಾ ತರಬೇತಿಗೊಳಗಾದರು. ಅವರು ಮುಂಬಯಿಯ ಕಫ಼್ ಪರೇಡ್‍ನಲ್ಲಿನ ನೌಕಾ ನೆಲೆಯಲ್ಲಿ ಬಂದೂಕು ತರಬೇತಿಯನ್ನು ಕೂಡ ಪಡೆದರು.[೨೧] ಒಂದು ಸಾಹಸ ದೃಶ್ಯಭಾಗವನ್ನು ಚಿತ್ರೀಕರಿಸುವಾಗ ತಮ್ಮ ತೋಳಿಗೆ ಗಾಯ ಮಾಡಿಕೊಂಡರು.[೨೨]

ಕೌಶಲ್ ಮತ್ತು ಪೋಷಕ ಪಾತ್ರವರ್ಗವು ಮುಂಬಯಿಯ ನೇವಿ ನಗರದಲ್ಲಿ ತರಬೇತಿ ಪಡೆದರು. ಕ್ಯಾಪ್ಟನ್‍ಗಳು ಮತ್ತು ಮೇಜರ್‌ಗಳು ಅವರಿಗೆ ಸಶಸ್ತ್ರ ಪಡೆಗಳು ಬಳಸುವ ನೆಲದ ಮೇಲೆ ಹರಿದಾಡುವುದು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು ಮತ್ತು ಇತರ ಕವಾಯತುಗಳನ್ನು ಕಲಿಸಿದರು.[೨೩] ಉರಿಯನ್ನು ಬಹುತೇಕವಾಗಿ ಸರ್ಬಿಯದಲ್ಲಿ ಚಿತ್ರೀಕರಿಸಿ ಮುಂಬಯಿಯಲ್ಲಿ ಅಂತ್ಯಗೊಳಿಸಲಾಯಿತು.[೨೪] ಭಾರತ-ಪಾಕ್ ಗಡಿ, ಎಲ್ಒಸಿ ಮತ್ತು ಸೇನಾ ನೆಲೆಗಳು ಹಾಗೂ ಭಯೋತ್ಪಾದಕ ಶಿಬಿರಗಳನ್ನು ಹೋಲುವ ಇತರ ಪ್ರದೇಶಗಳನ್ನು ಸರ್ಬಿಯಾದಲ್ಲಿ ಪುನಸ್ಸೃಷ್ಟಿಸಲಾಯಿತು. ಯಾಮಿ ಗೌತಮ್ ಮಿಶ್ರ ಸಮರಕಲೆಗಳ ತರಬೇತಿಗೊಳಗಾದರು.[೨೫] ಚಿತ್ರದಲ್ಲಿ ಪರೇಶ್ ರಾವಲ್, ಮೋಹಿತ್ ರೈನಾ, ಇವಾನ್ ರಾಡ್ರಿಗೇಸ್ ಮತ್ತು ಕೀರ್ತಿ ಕುಲ್ಹಾರಿ ಕೂಡ ನಟಿಸಿದ್ದಾರೆ.[೨೬]

ಮಾರಾಟಗಾರಿಕೆ ಮತ್ತು ಬಿಡುಗಡೆ

ಟೀಜ಼ರ್‌ನ್ನು ೨೭ ಸೆಪ್ಟೆಂಬರ್ ೨೦೧೮ರಂದು ಬಿಡುಗಡೆ ಮಾಡಲಾಯಿತು.[೨೭] ಚಿತ್ರದ ಅಧಿಕೃತ ಟ್ರೇಲರ್‌ನ್ನು ೫ ಡಿಸೆಂಬರ್ ೨೦೧೮ರಂದು ಬಿಡುಗಡೆ ಮಾಡಲಾಯಿತು.[೨೮]

ಚಿತ್ರವು ೧೧ ಜನೆವರಿ ೨೦೧೯ರಂದು ಬಿಡುಗಡೆಯಾಯಿತು.[೧] ಚಿತ್ರವನ್ನು ಅಂಕೀಯವಾಗಿ ಜ಼ೀಫ಼ೈವ್ ವೇದಿಕೆಯಲ್ಲಿ ೧೯ ಮಾರ್ಚ್ ೨೦೧೯ರಂದು ಪ್ರಪ್ರಥಮವಾಗಿ ಪ್ರದರ್ಶಿಸಲಾಯಿತು.[೨೯] ಈ ಚಿತ್ರದ ತೆಲುಗು ಭಾಷೆಗೆ ಡಬ್ ಮಾಡಿದ ಆವೃತ್ತಿಯನ್ನು ಇದೇ ಹೆಸರಿನಲ್ಲಿ ೧೪ ಜೂನ್ ೨೦೧೯ರಂದು ಬಿಡುಗಡೆ ಮಾಡಲಾಯಿತು.[೩೦]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

ಬಾಕ್ಸ್ ಆಫ಼ಿಸ್

ಈ ಚಿತ್ರವು ಭಾರತದಲ್ಲಿ 289.68 ಕೋಟಿ ಮತ್ತು ವಿದೇಶದಲ್ಲಿ ₹52.38 ಕೋಟಿ ಹಣಗಳಿಸಿ, ಒಟ್ಟಾರೆ ವಿಶ್ವಾದ್ಯಂತ ₹೩೪೨.೦೬ crore ಕೋಟಿಯಷ್ಟು ಗಳಿಕೆ ಮಾಡಿತು.[೪][೫]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ನಿರ್ದೇಶಕ - ಆದಿತ್ಯ ಧರ್ - ಗೆಲುವು
  • ಅತ್ಯುತ್ತಮ ನಟ - ವಿಕಿ ಕೌಶಲ್ - ಗೆಲುವು
  • ಅತ್ಯುತ್ತಮ ಆಡಿಯೊಗ್ರಫ಼ಿ - ಬಿಶ್ವದೀಪ್ ಡಿ. ಚ್ಯಾಟರ್ಜಿ - ಗೆಲುವು
  • ಅತ್ಯುತ್ತಮ ಸಂಗೀತ ನಿರ್ದೇಶಕ (ಹಿನ್ನೆಲೆ ಸಂಗೀತ) - ಶಾಶ್ವತ್ ಸಚ್‍ದೇವ್ - ಗೆಲುವು

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಸಂಕಲನ - ಶಿವ್‍ಕುಮಾರ್ ವಿ ಪಾಣಿಕರ್ - ಗೆಲುವು
  • ಅತ್ಯುತ್ತಮ ಶಬ್ದ ವಿನ್ಯಾಸ - ಬಿಶ್ವದೀಪ್ ದೀಪಕ್ ಚ್ಯಾಟರ್ಜಿ ನಿಹಾರ್ ರಂಜನ್ ಸಾಮಲ್ - ಗೆಲುವು
  • ಅತ್ಯುತ್ತಮ ಚೊಚ್ಚಲ ನಿರ್ದೇಶಕ - ಆದಿತ್ಯ ಧರ್ - ಗೆಲುವು
  • ಮುಂಬರುತ್ತಿರುವ ಸಂಗೀತ ಪ್ರತಿಭೆಗೆ ಆರ್. ಡಿ. ಬರ್ಮನ್ ಪ್ರಶಸ್ತಿ - ಶಾಶ್ವತ್ ಸಚ್‍ದೇವ್ - ಗೆಲುವು
  • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
  • ಅತ್ಯುತ್ತಮ ನಟ - ವಿಕಿ ಕೌಶಲ್ - ನಾಮನಿರ್ದೇಶಿತ

ಪ್ರಭಾವ

ಚಿತ್ರದಲ್ಲಿ ನಾಯಕನು ತನ್ನ ತಂಡಕ್ಕೆ "ಹೌಸ್ ದ ಜೋಶ್" ಎಂದು ಕೇಳುತ್ತಾನೆ. "ಹೈ ಸರ್!" ಎಂದು ತಂಡವು ಉತ್ತರಿಸುತ್ತದೆ.[೩೧] ಅವರ ಉತ್ಸಾಹವನ್ನು ಪರೀಕ್ಷಿಸಲು ಭಾರತದಲ್ಲಿನ ಸೇನಾ ಅಕಾಡೆಮಿಗಳ ಸೈನಿಕ ವಿದ್ಯಾರ್ಥಿಗಳಿಗೆ ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಸಂಭಾಷಣೆಯು ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು.[೩೨] ಈ ಸಂಭಾಷಣೆಯನ್ನು ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳು ಉಲ್ಲೇಖಿಸಿದರು/ವು.

ಧ್ವನಿವಾಹಿನಿ

ಚಿತ್ರದ ಹಾಡುಗಳನ್ನು ಶಾಶ್ವತ್ ಸಚ್‍ದೇವ್ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್, ರಾಜ್ ಶೇಖರ್ ಮತ್ತು ಅಭಿರುಚಿ ಚಾಂದ್ ಬರೆದಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಛಲ್ಲಾ (ಮೆ ಲಡ್ ಜಾನಾ)"ಕುಮಾರ್ರೋಮಿ, ವಿವೇಕ್ ಹರಿಹರನ್, ಶಾಶ್ವತ್ ಸಚ್‍ದೇವ್3:27
2."ಬೆಹ್ ಚಲಾ"ರಾಜ್ ಶೇಖರ್ಯಾಸರ್ ದೇಸಾಯಿ, ಶಾಶ್ವತ್ ಸಚ್‍ದೇವ್5:24
3."ಜಿಗ್ರಾ"ಕುಮಾರ್ಸಿದ್ಧಾರ್ಥ್ ಬಸ್ರೂರ್, ಶಾಶ್ವತ್ ಸಚ್‍ದೇವ್4:00
4."ಮಂಜ಼ರ್ ಹೇ ಯೆ ನಯಾ"ಅಭಿರುಚಿ ಚಾಂದ್ಶಾಂತನು ಸುದಾಮೆ, ಶಾಶ್ವತ್ ಸಚ್‍ದೇವ್4:03
5."ಜಗ್ಗಾ ಜೀತೇಯಾ"ಕುಮಾರ್ದಲೇರ್ ಮೆಹಂದಿ, ಶಾಶ್ವತ್ ಸಚ್‍ದೇವ್, ಡೀ ಎಮ್‍ಸಿ3:11
ಒಟ್ಟು ಸಮಯ:20:05

ಉಲ್ಲೇಖಗಳು

ಹೊರಗಿನ ಕೊಂಡಿಗಳು