ಕುರ್ತಿಗೆ

kurthige

ಕುರ್ತಿಗೆ ಕ್ರೂಸಿಫೆರಿ ಕುಟುಂಬಕ್ಕೆ ಸೇರಿದ ಲೆಪಿಡಿಯಮ್ ಸೇಟಿವಂ ಎಂಬ ಶಾಸ್ತ್ರೀಯ ಹೆಸರಿನ ಮೂಲಿಕೆ ಸಸ್ಯ (ಗಾರ್ಡನ್ ಕ್ರೆಸ್). ಇದನ್ನೇ ಹೋಲುವ ಹಲವಾರು ಏಕವಾರ್ಷಿಕ ಮತ್ತು ಬಹುವಾರ್ಷಿಕ ಮೂಲಿಕೆ ಸಸ್ಯ ಅಥವಾ ಪೊದೆರೂಪದ ಪ್ರಭೇದಗಳೂ ಇದ್ದು ಭಾರತದಲ್ಲಿ ಲೆ. ಡ್ರಾಬ ಮತ್ತು ಲೆ. ಲ್ಯಾಟಿಫೋಲಿಯಮ್ ಎಂಬೆರಡು ಪ್ರಭೇದಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇದನ್ನು ಹಸಿ ತರಕಾರಿಯ ಅಥವಾ ಕೋಸಂಬರಿ ಸಸ್ಯವನ್ನಾಗಿ (ಸ್ಯಾಲಡ್) ಭಾರತದಾದ್ಯಂತ ಬೆಳೆಸುತ್ತಾರೆ. ಇದರ ಅಂದವಾದ ಎಲೆಗಳಿಗಾಗಿ ಇದನ್ನು ತೋಟಗಳಲ್ಲಿ ಅಲಂಕಾರ ಸಸ್ಯವನ್ನಾಗಿ ಬೆಳೆಸುವುದೂ ಉಂಟು. ಸೈಬೀರಿಯದಲ್ಲಿ ಲೆಪಿಡಿಯಮ್ ಐಬೆರಿಸ್ ಎಂಬುದೂ ಭೂತಾನ್, ಸಿಕ್ಕಿಂಗಳಲ್ಲಿ ಲೆ. ರುಡರೇಲ್ ಎಂಬುದೂ ಬೆಳೆಯುತ್ತವೆ. ಕುರ್ತಿಗೆಯನ್ನು ಬಹುರೂಪಿ ಪ್ರಭೇದವೆಂದೂ ಇದರ ಉಗಮಸ್ಥಾನದ ಪ್ರಥಮ ಕೇಂದ್ರ ಇಥಿಯೋಪಿಯ ಎಂದೂ ಯೂರೋಪ್ ಮತ್ತು ಪಶ್ಚಿಮ ಏಷ್ಯಗಳು ದ್ವಿತೀಯ ಕೇಂದ್ರಗಳೆಂದೂ ಪರಿಗಣಿಸಲಾಗಿದೆ.

ಎಳೆ ಸಸ್ಯಗಳು

ರಚನೆ

ಕುರ್ತಿಗೆ ಸುಮಾರು 15-45 ಸೆಂಮೀ. ಎತ್ತರದವರೆಗೆ ಬೆಳೆಯುವ ಒಂದು ವಾರ್ಷಿಕ ಸಸ್ಯ. ಇದರ ಎಲೆಗಳು ವಿವಿಧ ರೀತಿಯವುಗಳು. ಇವು ಸರಳವಾಗಿರಬಹುದು ಇಲ್ಲವೆ ಸಂಯುಕ್ತ ಮಾದರಿಯವಾಗಿರಬಹುದು. ಇವುಗಳ ಅಂಚು ಅಖಂಡವಾಗಿಯೊ ಇಲ್ಲವೆ ಅನೇಕ ಭಾಗಗಳಾಗಿ ವಿಂಗಡಣೆಯಾಗಿಯೊ ಇವೆ. ಕುರ್ತಿಗೆಯಲ್ಲಿ ಸಾಮಾನ್ಯವಾಗಿ ಬೇರಿನಿಂದಲೇ ಹೊರಡುವವು ಮತ್ತು ಕಾಂಡದ ಮೇಲಿನವು ಎಂಬ ಎರಡು ಬಗೆಯ ಎಲೆಗಳಿವೆ. ಬೇರಿನಿಂದ ಹುಟ್ಟುವ ಎಲೆಗಳಿಗೆ ಉದ್ದವಾದ ತೊಟ್ಟಿದೆ. ಕಾಂಡದ ಮೇಲಿನ ಎಲೆಗಳಿಗೆ ತೊಟ್ಟಿಲ್ಲ. ಹೂಗಳು ಚಿಕ್ಕವು ಮತ್ತು ದ್ವಿಲಿಂಗಿಗಳು. ಅವುಗಳ ಬಣ್ಣ ಬಿಳಿ, ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದರಲ್ಲಿ 4 ಪತ್ರಪುಷ್ಪಗಳೂ 4 ದಳಗಳೂ 6 ಕೇಸರಗಳೂ ಎರಡು ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ಇರುವ 6 ಕೇಸರಗಳಲ್ಲಿ ನಾಲ್ಕರ ಕೇಸರದಂಡಗಳು ಹೆಚ್ಚು ಉದ್ದವಾಗಿವೆ. ಈ ಸ್ಥಿತಿಯನ್ನು ಟೆಟ್ರಡೈನಮಸ್ ಸ್ಥಿತಿ ಎನ್ನುತ್ತಾರೆ. ಅಂಡಕೋಶದಲ್ಲಿ ಎರಡು ಕೋಣೆಗಳಿದ್ದು ಒಂದೊಂದರಲ್ಲೂ ಒಂದು ಅಂಡಕ ಇದೆ. ಕಾಯಿ ಒಣಗಿದಾಗ ಒಡೆದು ಹೋಗುವ ಪಾಡ್ ಮಾದರಿಯದು.[೧][೨]

ಬೇಸಾಯ

ಕುರ್ತಿಗೆ ಯಾವುದೇ ಲಘುವಾದ ಹಾಗೂ ಫಲವತ್ತಾದ ಮಣ್ಣಿನಲ್ಲಿ ಬೆಳೆಯುವುದಾದರೂ ತೇವಪೂರಿತವಾದ ಗೋಡು ಮಣ್ಣಿನಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ. ಇದನ್ನು ಎಲ್ಲ ಭೂಮಟ್ಟಗಳಲ್ಲಿಯೂ ಬೆಳೆಸಬಹುದು. ಇದನ್ನು ವರ್ಷಪೂರ್ತಿ ಬೆಳೆಸಬಹುದಾದರೂ ಚಳಿಗಾಲದ ಬೆಳೆ ಉತ್ಕøಷ್ಟ ಬಗೆಯದು. ಬಯಲು ಪ್ರದೇಶಗಳಲ್ಲಿ ಸೆಪ್ಟೆಂಬರಿನಿಂದ ಫೆಬ್ರವರಿಯ ವರೆಗೂ ಬೆಟ್ಟ ಪ್ರದೇಶಗಳಲ್ಲಿ ಮಾರ್ಚಿಯಿಂದ ಸೆಪ್ಟೆಂಬರ್ ತಿಂಗಳ ವರೆಗೂ ಬೀಜ ಬಿತ್ತಿ ಬೆಳೆಸಲಾಗುತ್ತದೆ. ಬೀಜಗಳನ್ನು ದಟ್ಟವಾಗಿ ಬಿತ್ತಿ ಮೊಳಕೆ ಬರುವ ತನಕ ಮುಚ್ಚಿಡಬೇಕು. ಬಿತ್ತನೆಯಾದ 4-6 ವಾರಗಳಲ್ಲಿ ಸಸಿಗಳು ಬೆಳೆದು ಎಲೆಗಳು ಕಟಾವಿಗೆ ಸಿದ್ಧವಾಗುತ್ತವೆ. ನಿರಂತರವಾಗಿ ಇದರ ಎಲೆಗಳನ್ನು ಪಡೆಯಲೆಂದು 8 ದಿನಗಳ ಅಂತರಕ್ಕೊಮ್ಮೆ ಬೀಜಬಿತ್ತನೆಯ ಕೆಲಸ ನಡೆಯಬೇಕು. ವಾರಕ್ಕೊಮ್ಮೆ ಕಳೆ ಕಿತ್ತು ನೀರು ಹಾಯಿಸಬೇಕು. ಬೀಜಗಳನ್ನು ಪಡೆಯುವುದಕ್ಕೆ ಗಿಡಗಳನ್ನು ಕತ್ತರಿಸದೆ ಹಾಗೆಯೇ ಬಿಟ್ಟು ಅವು ಬಲಿತ ಮೇಲೆಕಿತ್ತು ತೆಗೆದು ಒಣಗಿಸಿ ಆಮೇಲೆ ಬಡಿದು ಬೀಜಗಳನ್ನು ಬೇರ್ಪಡಿಸಬಹುದು.

ಉಪಯೋಗಗಳು

ಕುರ್ತಿಗೆಯ ಎಲೆಗಳನ್ನು ಹಸಿಯಾಗಿಯೇ ಕೋಸುಂಬರಿಗಳಲ್ಲಿ ಉಪಯೋಗಿಸುತ್ತಾರೆ. ತರಕಾರಿಗಳ ಜೊತೆಯಲ್ಲಿ ಮೇಲೋಗರ ಪದಾರ್ಥವನ್ನಾಗಿಯೂ ಬಳಸುವುದುಂಟು. ಇದು ಕುದುರೆ ಮತ್ತು ಒಂಟೆಗಳ ಮೇವಾಗಿಯೂ ಉಪಯೋಗವಾಗುತ್ತದೆ. ಇದಕ್ಕೆ ಔಷಧೀಯ ಗುಣಗಳೂ ಉಂಟು. ಉಬ್ಬಸ, ಕೆಮ್ಮು ಮತ್ತು ಮೂಲವ್ಯಾಧಿ ಮುಂತಾದ ಕೆಲವು ರೋಗಗಳ ಚಿಕಿತ್ಸೆಗೆ ಇದನ್ನು ಉಪಯೋಗಿಸುತ್ತಾರೆ. ಎಲೆಗಳು ಸೌಮ್ಯ ಉತ್ತೇಜಕಗಳಾಗಿದ್ದು ರಕ್ತಪಿತ್ತರೋಗಗಳಿಗೆ ಮತ್ತು ಪಿತ್ತಕೋಶದ ಬೇನೆಗಳಿಗೆ ಮದ್ದು ಎನಿಸಿವೆ. ಇವು ಮೂತ್ರ ಉತ್ತೇಜಕಗಳೂ ಹೌದು. ಕುರ್ತಿಗೆಯ ಬೇರನ್ನು ಗುಹ್ಯರೋಗಗಳಲ್ಲಿ ಬಳಸಲಾಗುತ್ತದೆ. ಬೀಜಗಳಿಗೆ ಕರುಳನ್ನು ಸಡಿಲಗೊಳಿಸುವ, ಶಕ್ತಿವರ್ಧಕ, ವಿರೇಚಕ, ಕಾಮೋದ್ದೀಪಕ, ಮೂತ್ರೋತ್ತೇಜಕ ಗುಣಗಳಿವೆ. ಇವುಗಳನ್ನು ಹುಣ್ಣುಗಳಿಗೆ ಹಚ್ಚುವ ಬೆಚ್ಚಾರವಾಗಿಯೂ ಉಳುಕುಗಳಿಗೆ ಔಷಧವನ್ನಾಗಿಯೂ ಉಪಯೋಗಿಸುತ್ತಾರೆ.

ಕುರ್ತಿಗೆಯ ಎಲೆಗಳಲ್ಲಿ 82.3% ತೇವಾಂಶ, 5.8% ಪ್ರೋಟೀನು, 8.7% ಕಾರ್ಬೊಹೈಡ್ರೇಟ್. 1.0% ಕೊಬ್ಬು 2.2% ಲವಣಾಂಶ, 0.36% ಕ್ಯಾಲ್ಸಿಯಮ್, 0.11% ರಂಜಕ ಇವೆ. ಅಲ್ಲದೆ ಅಲ್ಪಪ್ರಮಾಣದಲ್ಲಿ ಕಬ್ಬಿಣ, ಸತು, ಕೋಬಾಲ್ಟ್, ಅಯೋಡಿನ್‍ಗಳೂ ಪ್ರತಿ 100 ಗ್ರಾಮಿಗೆ 2970 ಐಯು 'ಎ' ಜೀವಸತ್ತ್ವ, 0.11 ಮಿಗ್ರಾಂ, ತಯಮಿನ್, 0.17 ಮಿಗ್ರಾಂ, ರೈಬೋಫ್ಲೇಮಿನ್, 87 ಮಿಗ್ರಾಂ, 'ಸಿ ಜೀವಸತ್ತ್ವವೂ ಇವೆ. ಈ ಸಸ್ಯವನ್ನು ಆವಿ ಆಸವೀಕರಣಗೊಳಿಸಿ ಬಣ್ಣವಿಲ್ಲದ ಚಂಚಲತೈಲವೊಂದನ್ನು ಪಡೆಯಬಹುದು. ಇದಕ್ಕೆ ಅತಿಯಾದ ಘಾಟುವಾಸನೆಯೂ ಬ್ಯಾಕ್ಟೀರಿಯ ನಿರೋಧಕಗುಣವೂ ಇವೆ. ಕುರ್ತಿಗೆಯ ಬೀಜದಲ್ಲೂ ಈ ಎಣ್ಣೆಯಿದೆ. ಅಲ್ಲದೆ ಬೀಜಗಳಲ್ಲಿ 25.5%ರಷ್ಟು ಹಳದಿಮಿಶ್ರಿತಕಂದು ಬಣ್ಣದ ಇನ್ನೊಂದು ಬಗೆಯ ಎಣ್ಣೆಯಿದೆ. ಇದನ್ನು ದೀಪ ಉರಿಸಲಿಕ್ಕೂ ಸಾಬೂನು ತಯಾರಿಕೆಯಲ್ಲಿಯೂ ಬಳಸುವರು. ಇದಕ್ಕೆ ಉತ್ಕರ್ಷಣ ಪ್ರತಿರೋಧಕ ಗುಣವೂ ಇದೆ. ಬೀಜಗಳಲ್ಲಿ ಲೋಳೆಯಂಥ ವಸ್ತುವೊಂದಿದೆ. ಇದನ್ನು ಗೋಂದಿನಂತೆ ಉಪಯೋಗಿಸಬಹುದು. ಅಲ್ಲದೆ ಇದನ್ನು ಆಮಶಂಕೆ ಮತ್ತು ಅತಿಸಾರಗಳಲ್ಲಿ ಕರುಳಿನ ಪೊರೆಯ ಕೆರೆಯುವಿಕೆಯನ್ನು ಶಾಂತಗೊಳಿಸಲು ಬಳಸುವುದುಂಟು.

ಲೆಪಿಡಿಯಮ್ ಐಬೆರಿಸ್ ಪ್ರಭೇದದ ಬೀಜಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ತೌದ್ರಿ ಎಂಬ ಹೆಸರಿನಿಂದ ಮಾರಲಾಗುತ್ತದೆ. ಇವುಗಳನ್ನು ರಕ್ತಶುದ್ಧಿ ಕಾರಕಗಳಾಗಿಯೂ ಶ್ವಾಸಕೋಶ ಸಂಬಂಧಿ ರೋಗ ನಿವಾರಣೆಗೂ ಬಳಸುವುದುಂಟು.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ