ದ್ವಿಪದ ಹೆಸರು

ಒಂದು ಜೀವಿಯ ಕುಲ ಮತ್ತು ಪ್ರಭೇದದ ಲ್ಯಾಟಿನ್ ಭಾಷೆಯ ಹೆಸರುಗಳು ಇರುವ ಕಾರ್ಲ್ ಲಿನ್ನೇಯಸ್ ನ ವೈಜ್ಞಾನಿಕ ನಾಮಾಂಕ

ದ್ವಿಪದ ಹೆಸರು ಅಥವಾ ದ್ವಿಪದ ನಾಮಕರಣ (ವೈಜ್ಞಾನಿಕ ನಾಮಕರಣ) ಜೀವಶಾಸ್ತ್ರದಲ್ಲಿ ಜೀವಿಗಳ ಪ್ರಭೇದಗಳನ್ನು ಗುರುತಿಸಲು ಎರಡು ಪದಗಳನ್ನು ಬಳಸುವ ನಾಮಕರಣ ಪದ್ಧತಿಯಾಗಿದೆ. ದ್ವಿಪದ ನಾಮಕರಣದ ಪ್ರಥಮ ಪದವು ಜೀವಿಯ ಕುಲ ವನ್ನು ಸೂಚಿಸಿದರೆ, ದ್ವಿತೀಯ ಪದವು ಪ್ರಭೇದ ವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಎರಡೂ ಪದಗಳನ್ನು ಲ್ಯಾಟಿನ್ ವ್ಯಾಕರಣದಲ್ಲಿ ರೂಪಿಸಲಾಗುತ್ತದೆ. ದ್ವಿಪದ ನಾಮಕರಣದ ಪ್ರಥಮ ಪದದ ಮೊದಲನೇಯ ಅಕ್ಷರವು ಕ್ಯಾಪಿಟಲ್ ಅಕ್ಷರದಲ್ಲಿದ್ದು (ಇದು ರೋಮನ್ ಲಿಪಿಗೆ ಅನ್ವಯವಾಗುತ್ತದೆ), ಇನ್ನಿತರ ಅಕ್ಷರಗಳು/ಪದಗಳು ಸಣ್ಣಕ್ಷರದಲ್ಲಿರುತ್ತವೆ[೧]. ದ್ವಿಪದ ಹೆಸರುಗಳನ್ನು ಬರೆದಾಗ ಅಡಿಗೆರೆಯೊಂದಿಗೆ, ಹಾಗು ಮುದ್ರಿಸಿದಾಗ ಇಟ್ಯಾಲಿಕ್ ರೂಪದಲ್ಲಿರಬೇಕು. ಉದಾಹರಣೆಗೆ, ಸಾಮಾನ್ಯ ನೆಲಗಪ್ಪೆಯು ದತ್ತಾಫ್ರಿನಸ್ ಕುಲದ ದತ್ತಾಫ್ರಿನಸ್ ಮೆಲಾನೊಸ್ಟಿಕ್ಟಸ್ ಪ್ರಭೇದಕ್ಕೆ ಸೇರಿದೆ. ತಮ್ಮ ಕೃತಿ ಸ್ಪೀಷೀಸ್ ಪ್ಲಾಂಟೇರಮ್ ನಲ್ಲಿ ಈ ಪದ್ಧತಿಯನ್ನು ಮೊದಲ ಬಾರಿಗೆ ಪರಿಚಯಿಸಿದ ಕರೋಲಸ್ ಲಿನ್ನಾಯೆಸ್ ರವರನ್ಜು ಈ ವೈಜ್ಞಾನಿಕ ನಾಮಕರಣ ಪದ್ಧತಿಯ ಹರಿಕಾರ ಎನ್ನಲಾಗಿದೆ[೨].

ಪ್ರಸ್ತುತ ದ್ವಿಪದ ನಾಮಕರಣ ಪದ್ಧತಿಯನ್ನು ಹಲವಾರು ಅಂತಾರಾಷ್ಟ್ರೀಯವಾಗಿ ಒಪ್ಪಿಗೆಯಾದ ನಿಯಮಾವಳಿಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಪ್ರಾಣಿಗಳಿಗೆ ಅಂತಾರಾಷ್ಟ್ರೀಯ ಪ್ರಾಣಿಶಾಸ್ತ್ರೀಯ ನಾಮಕರಣ ನಿಯಮಗಳು, ಪಾಚಿ, ಶಿಲೀಂಧ್ರ ಮತ್ತು ಸಸ್ಯಗಳಿಗೆ ಅಂತಾರಾಷ್ಟ್ರೀಯ ಪಾಚಿ, ಶಿಲೀಂಧ್ರ ಮತ್ತು ಸಸ್ಯ ನಾಮಕರಣ ನಿಯಮಗಳು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ[೩][೪].

ಉಲ್ಲೇಖಗಳು