ಫಾಸ್‍ಫಾರಿಕ್ ಆಮ್ಲ

ಫಾಸ್‍ಫಾರಿಕ್ ಆಮ್ಲವು ಬಣ್ಣರಹಿತ, ವಾಸನೆ ಇಲ್ಲದ, ರಂಜಕವನ್ನು ಹೊಂದಿರುವ ಒಂದು ಘನಪದಾರ್ಥ. ಇದರ ಅಣುಸೂತ್ರ H3PO4. ಇದು ಒಂದು ಆಮ್ಲ.

ಫಾಸ್‍ಫಾರಿಕ್ ಆಮ್ಲದ ರಚನಾ ಸೂತ್ರ

ತಯಾರಿಕೆ

ಪ್ರಕೃತಿಯಲ್ಲಿ ದೊರಕುವ ಫಾಸ್‌ಫೇಟ್ ಕಲ್ಲಿನ ನಿಕ್ಷೇಪಗಳು ರಾಸಾಯನಿಕವಾಗಿ ಕ್ಯಾಲ್ಸಿಯಂ ಫಾಸ್‌ಫೇಟ್. ಪ್ರಾಣಿಗಳ ಮೂಳೆಗಳಲ್ಲಿಯೂ ಇದೇ ಪ್ರಧಾನಾಂಶ. ಕ್ಯಾಲ್ಸಿಯಂ ಪಾಸ್‌ಫೇಟಿನಿಂದ ಫಾಸ್‌ಫಾರಿಕ್ ಆಮ್ಲವನ್ನು ಎರಡು ವಿಧಾನಗಳಿಂದ ತಯಾರಿಸಬಹುದು.

ಮೊದಲನೆಯದರಲ್ಲಿ ಪುಡಿ ಮಾಡಿದ ಫಾಸ್‌ಫೇಟ್ ಕಲ್ಲು ಅಥವಾ ಒಣ ಮೂಳೆ ಪುಡಿಯನ್ನು ಹೆಚ್ಚಿನ ಪ್ರಮಾಣದ ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಮಿಶ್ರಣಮಾಡಿ ರಾಸಾಯನಿಕ ಕ್ರಿಯೆ ಜರುಗಲು ಸಾಕಷ್ಟು ಕಾಲಾವಕಾಶ ಕೊಟ್ಟರೆ ಅಂತಿಮವಾಗಿ ಫಾಸ್‌ಫಾರಿಕ್ ಆಮ್ಲ ದೊರೆಯುವುದು.[೧] ದ್ರಾವಣವನ್ನು ಸೋಸಿ ಕ್ಯಾಲ್ಸಿಯಂ ಸಲ್ಪೇಟ್ ಘನ ವಸ್ತುವನ್ನು ಪ್ರತ್ಯೇಕಿಸಿ ತಿಳಿ ಆಮ್ಲ ದ್ರಾವಣವನ್ನು ಪಡೆಯಬಹುದು. ಹೀಗೆ ಪಡೆದ ಆಮ್ಲವನ್ನು ಕಾಯಿಸಿ ಜಲಾಂಶವನ್ನು ಕಡಿಮೆ ಮಾಡಿ ಶುದ್ಧೀಕರಣಕ್ಕೊಳಪಡಿಸಿ ಪ್ರಬಲ ಆಮ್ಲವನ್ನು ಹೊಂದಬಹುದು.

Ca3(PO4)2 + 3H2SO4 + 6H2O → 2H3PO4 + 3(CaSO4.2H2O)

ಮೇಲಿನ ರಾಸಾಯನಿಕಕ್ರಿಯೆ ನಡೆಸುವಾಗ ಸಲ್ಫ್ಯೂರಿಕ್ ಆಮ್ಲದ ಪ್ರಮಾಣ ಕಡಿಮೆ ಮಾಡಿ ನಿಯಂತ್ರಿಸಿದರೆ ಕೃತಕ ರಾಸಾಯನಿಕ ಗೊಬ್ಬರಗಳಾದ ಸೂಪರ್ ಫ಼ಾಸ್‍ಫ಼ೇಟ್‌ಗಳು ದೊರೆಯುವುವು.

ಫ಼ಾಸ್ಫರಸ್‌ನಿಂದ (ರಂಜಕ) ಫ಼ಾಸ್‌ಫ಼ಾರಿಕ್ ಆಮ್ಲವನ್ನು ತಯಾರಿಸುವುದು ಎರಡನೆಯ ವಿಧಾನ. ಫಾಸ್ಫೇಟ್ ಕಲ್ಲು ಅಥವಾ ಮೂಳೆಗಳ ಪುಡಿ, ಮರಳು ಮತ್ತು ಕಲ್ಲಿದ್ದಲುಗಳ ಮಿಶ್ರಣವೊಂದನ್ನು ವಿದ್ಯುತ್ ಕುಲುಮೆಯೊಂದರೊಳಗೆ ಕಾಯಿಸಿದರೆ ಹೆಚ್ಚು ಉಷ್ಣದಿಂದ ಕೂಡಿದ ಅನಿಲಗಳು ಕುಲುಮೆಯಿಂದ ಹೊರ ಬೀಳುವುವು.

Ca3(PO4)2 + 3SiO2 + 5C → 3CaSiO3 + P2 + 5CO

ಈ ಬಿಸಿ ಅನಿಲವನ್ನು ಆರಲು ಬಿಟ್ಟರೆ ರಂಜಕ ಘನೀಭೂತವಾಗಿ ಶೇಖರವಾಗುವುದು. ದ್ರವರೂಪದಲ್ಲಿರುವ ಪಂಪುಗಳ ಮೂಲಕ ಹೊರ ಸೆಳೆದು ಶೇಖರಿಸಬಹುದು. ಈ ಫಾಸ್‌ಫರಸ್ಸನ್ನು ಒಂದು ಕುಲುಮೆಯೊಳಗೆ ಯಥೇಚ್ಛವಾಗಿ ಗಾಳಿಯಲ್ಲಿ ಉರಿಸಿದರೆ ಫಾಸ್‌ಫರಿಸಿನ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವುದು. ಅನಂತರ ಇದನ್ನು ನೀರೊಡನೆ ಮಿಶ್ರಗೊಳ್ಳುವಂತೆ ಮಾಡಿದರೆ ಫಾಸ್‌ಫಾರಿಕ್ ಆಮ್ಲ ದೊರೆಯುವುದು.[೨]

4P + 5O2 → 2P2O5

P2O5 + 3H2O → 2H3PO4

ಇತ್ತೀಚೆಗೆ ಬಳಕೆಯಲ್ಲಿರುವ ಮತ್ತೊಂದು ಬಗೆಯ ಈ ವಿಧಾನದಲ್ಲಿ ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೊರಿಕ್ ಆಮ್ಲವನ್ನು ಫಾಸ್‌ಫೇಟ್ ಕಲ್ಲಿನ ಜೊತೆ ರಾಸಾಯನಿಕ ಕ್ರಿಯೆಗೊಳಪಡಿಸಿ ಫಲಿತ ಫಾಸ್‌ಫಾರಿಕ್ ಆಮ್ಲವನ್ನು ಸೂಕ್ತ ಲೀನಕಾರಿಗಳಿಂದ ಬೇರೆ ಮಾಡಲಾಗುವುದು.

ಭಾರತದಲ್ಲಿ ತಯಾರಿಕೆ

ಭಾರತದಲ್ಲಿ ಫಾಸ್‌ಫಾರಿಕ್ ಆಮ್ಲತಯಾರಿಕೆ ೧೯೨೩ - ೨೪ ರಿಂದಲೇ ಬೊಂಬಾಯಿನಲ್ಲಿ ಆರಂಭವಾಯಿತು. ಮೊದಮೊದಲು ಮೂಳೆಗಳಿಂದ ಆಮ್ಲವನ್ನು ಉತ್ಪಾದಿಸಲಾಯಿತು. ಏಕೆಂದರೆ ಭಾರತದಲ್ಲಿ ಫಾಸ್‌ಫೇಟ್ ಕಲ್ಲಿನ ನಿಕ್ಷೇಪಗಳಿಲ್ಲ.  ಆದರೆ ಮೂಳೆಗಳಿಗೆ ರಫ್ತು ಮೌಲ್ಯವಿರಲಾಗಿ ಈಗ ಫಾಸ್‌ಫೇಟ್ ಕಲ್ಲನ್ನು ಆಲ್ಜಿರೀಯ, ಮೊರಾಕೊ ಮುಂತಾದ ದೇಶಗಳಿಂದ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಆಮ್ಲವನ್ನು ತಯಾರಿಸಲಾಗುತ್ತದೆ.  ೧೯೨೩-೧೯೨೮ ರ ಅವಧಿಯಲ್ಲಿ ಕೇವಲ ೧೬ ಟನ್ ಆಮ್ಲವನ್ನು ಉತ್ಪಾದಿಸುವ ಸಾಮರ್ಥ್ಯದ ಕೈಗಾರಿಕೆ ಬೆಳೆದಿತ್ತು. ಫಾಸ್‌ಫರಸನ್ನು ಉರಿಸಿ ಆಮ್ಲವನ್ನು ಅಂತಿಮವಾಗಿ ಪಡೆಯುವ ವಿಧಾನವೂ ಆಚರಣೆಯಲ್ಲಿದೆ. ಮಂಗಳೂರಿನಲ್ಲಿ ೬೦೦೦ ಟನ್ ರಂಜಕದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವುಳ್ಳ  ಕೈಗಾರಿಕೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಉಪಯೋಗಗಳು

ಫಾಸ್‌ಫರಸ್ ಅಂಶ ಕೂಡಿರುವ ಕೃತಕ ರಾಸಾಯನಿಕಗೊಬ್ಬರಗಳ ತಯಾರಿಕೆ ಫಾಸ್‌ಫಾರಿಕ್ ಆಮ್ಲಕ್ಕಿರುವ ಪ್ರಮುಖ ಉಪಯೋಗ.[೩] ಅಲ್ಲದೆ ಸಾಬೂನು, ಸ್ವಚ್ಛಕಾರಿಗಳು, ಲೋಹಗಳನ್ನು ತುಕ್ಕಿನಿಂದ ರಕ್ಷಿಸುವುದು, ಔಷಧಿಗಳು, ಪೆಟ್ರೋಲಿಯಂ ಕೈಗಾರಿಕೆ (ವೇಗವರ್ಧಕವಾಗಿ), ಸಕ್ಕರೆ ಶುದ್ಧೀಕರಣ, ಗಡಸು ನೀರನ್ನು ಕೈಗಾರಿಕಾ ಉಪಯೋಗಗಳಿಗೆ ಮೆದುಮಾಡುವುದು, ಅಪಾರದರ್ಶಕ ಗಾಜಿನ ತಯಾರಿಕೆ, ಮೇಣ, ಪಾಲಿಷ್‌ಗಳ ತಯಾರಿಕೆ, ಬಟ್ಟೆಗಳಿಗೆ ಬಣ್ಣಹಾಕುವ ಕೈಗಾರಿಕೆ, ಆಹಾರ ಪಾನಿಯಗಳ ಕೈಗಾರಿಕೆ-ಇವೇ ಮುಂತಾದ ಅನೇಕ ಕೈಗಾರಿಕೆಗಳಲ್ಲಿ ಉಪಯೋಗಿಸುವರು.

ಉಲ್ಲೇಖಗಳು

ಹೊರಗಿನ ಕೊಂಡಿಗಳು