ಉತ್ಕರ್ಷಣ - ಅಪಕರ್ಷಣ

ಉತ್ಕರ್ಷಣ - ಅಪಕರ್ಷಣ ರಾಸಾಯನಿಕ ಕ್ರಿಯೆಗಳಲ್ಲಿ ಒಂದು ಪ್ರಮುಖ ಭಾವನೆ (ಆಕ್ಸಿಡೇಷನ್-ರಿಡಕ್ಷನ್). ಹಲವಾರು ವಸ್ತುಗಳ ರಸಾಯನ ವಿಜ್ಞಾನವನ್ನು ವ್ಯವಸ್ಥೆಗೊಳಿಸಲು ಇದು ಬಲು ಸಹಾಯಕಾರಿ. ಈ ಪದಗಳನ್ನು ಬಳಸಲು ಆರಂಭಿಸಿದ ದಿವಸಗಳಲ್ಲಿ ಇವು ಪ್ರತಿನಿಧಿಸಿದ ಭಾವನೆ ಇಷ್ಟು: ವಸ್ತುವಿಗೆ ಆಕ್ಸಿಜನ್ ಅಥವಾ ತತ್ಸಮವಾದ ಮೂಲವಸ್ತುವನ್ನು ಅಥವಾ ರ್‍ಯಾಡಿಕಲ್ಲನ್ನು ಸೇರಿಸುವುದು; ಅಥವಾ ವಸ್ತುವಿನಿಂದ ಹೈಡ್ರೋಜನ್ ಅಥವಾ ತತ್ಸಮವಾದ ವಿದ್ಯುದ್ಧನ ಮೂಲವಸ್ತುವನ್ನು ಅಥವಾ ರ್‍ಯಾಡಿಕಲ್ಲನ್ನು ತೆಗೆಯುವುದು-ಈ ರಾಸಾಯನಿಕ ಕ್ರಿಯೆ ಉತ್ಕರ್ಷಣ (ಆಕ್ಸಿಡೇಷನ್). ಇದರ ವಿರುದ್ಧಕ್ರಿಯೆ ಅಪಕರ್ಷಣ (ರಿಡಕ್ಷನ್).[೧] ಆದರೆ ಇಂದು ಉತ್ಕರ್ಷಣ-ಅಪಕರ್ಷಣ ಪದಗಳ ಅರ್ಥವ್ಯಾಪ್ತಿ ವಿಶಾಲವಾಗಿದೆ. ಎಲೆಕ್ಟ್ರಾನುಗಳು ವಿನಿಮಯವಾಗುವ ಎಲ್ಲ ಕ್ರಿಯೆಗಳನ್ನೂ ಉತ್ಕರ್ಷಣ-ಅಪಕರ್ಷಣವೆಂದು ಕರೆಯುತ್ತೇವೆ.

ಸೋಡಿಯಂ ಒಂದು ಹೊರಗಿನ ಎಲೆಕ್ಟ್ರಾನ್‍ನ್ನು ಫ಼್ಲೂರೀನ್‍ಗೆ ಕೊಡುತ್ತದೆ, ಹೀಗೆ ಇವುಗಳ ಬಂಧ ಏರ್ಪಟ್ಟು ಸೋಡಿಯಂ ಫ಼್ಲೂರೈಡ್ ರಚನೆಯಾಗುತ್ತದೆ. ಸೋಡಿಯಂ ಅಣುವು ಉತ್ಕರ್ಷಿತವಾಗುತ್ತದೆ, ಮತ್ತು ಫ್ಲೂರೀನ್ ಅಪಕರ್ಷಿತವಾಗುತ್ತದೆ.

ಹಿನ್ನೆಲೆ

ಏಕಕಾಲದಲ್ಲಿ ನಡೆಯುವ ಈ ಕ್ರಿಯೆಗಳು ಪರಸ್ಪರ ಪೂರಕಗಳು.[೨] ಯಾವುದೇ ಒಂದು ರಾಸಾಯನಿಕ ಕ್ರಿಯೆಯಲ್ಲಿ ಎಲೆಕ್ಟ್ರಾನುಗಳನ್ನು ಸ್ವೀಕರಿಸಬಲ್ಲ ವಸ್ತುವನ್ನು ಉತ್ಕರ್ಷಣಕಾರಿ ಎಂದೂ, ಅವನ್ನು ಕಳೆದುಕೊಳ್ಳಬಲ್ಲ ವಸ್ತುವನ್ನು ಅಪಕರ್ಷಣಕಾರಿ ಎಂದೂ ಕರೆಯುತ್ತೇವೆ. ಕ್ಲೋರೀನ್, ಬ್ರೋಮೀನ್, ಅಯೊಡೀನ್ ಮತ್ತು ಆಕ್ಸಿಜನ್ ಮೂಲವಸ್ತುಗಳನ್ನು ಮತ್ತು ನೈಟ್ರಿಕ್ ಆಮ್ಲ, ಪೊಟ್ಯಾಸಿಯಂ ಪರ್ಮಾಂಗನೇಟ್, ಡೈಕ್ರೊಮೇಟ್ ಮತ್ತು ಕ್ಲೋರೇಟ್ ಮುಂತಾದ ಸಂಯುಕ್ತ ವಸ್ತುಗಳನ್ನು ಉತ್ಕರ್ಷಣಕಾರಿಗಳೆಂದು ಪರಿಗಣಿಸಲಾಗಿದೆ. ಜಲಜನಕ, ಇಂಗಾಲ, ಸೋಡಿಯಂ, ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಮೂಲವಸ್ತುಗಳನ್ನು ಮತ್ತು ಹೈಡ್ರೊಜನ್ ಸಲ್ಫೇಟ್, ಹೈಡ್ರೊಜನ್ ಅಯೊಡೈಡ್, ಕಾರ್ಬನ್ ಮಾನಾಕ್ಸೈಡ್, ಸ್ಟ್ಯಾನಸ್ ಕ್ಲೋರೈಡ್ ಮತ್ತು ಫೆರಸ್ ಸಲ್ಫೇಟ್ ಸಂಯುಕ್ತಗಳನ್ನು ಅಪಕರ್ಷಣಕಾರಿಗಳೆಂದು ಪರಿಗಣಿಸಲಾಗಿದೆ. ಕಬ್ಬಿಣಕ್ಕೆ ತುಕ್ಕುಹಿಡಿಯುವುದು, ಗಾಳಿಯಲ್ಲಿ ಮೆಗ್ನೀಸಿಯಂ ತಂತಿ ಪ್ರಕಾಶಮಾನವಾಗಿ ಉರಿದು ಬೂದಿಯಾಗುವುದು, ಹೈಡ್ರೊಕಾರ್ಬನ್ನುಗಳ ದಹನ ಮತ್ತು ಜೀವಕೋಶಗಳಲ್ಲಿ ಶರ್ಕರಪಿಷ್ಟಾದಿಗಳು ಆಕ್ಸಿಜನ್ನಿನೊಡನೆ ಸಂಯೋಜಿಸುವುದು-ಇವು ಉತ್ಕರ್ಷಣ ಕ್ರಿಯೆಗಳು. ದ್ಯುತಿಸಂಶ್ಲೇಷಣ ಕ್ರಿಯೆಯಲ್ಲಿ ಇಂಗಾಲಾಮ್ಲ ಶರ್ಕರಪಿಷ್ಟಾದಿಗಳಿಗೆ ಪರಿವರ್ತಿತವಾಗುವಿಕೆ, ಆಕ್ಸೈಡ್, ಸಲ್ಫೈಡ್ ಮತ್ತು ಹ್ಯಾಲೈಡ್ ಅದುರುಗಳಿಂದ ಆಯಾ ಲೋಹಗಳನ್ನು ಪಡೆಯುವುದು, ಲೋಹಗಳ ವಿದ್ಯುಲ್ಲೇಪನ ಮತ್ತು ಸೂಕ್ಷ್ಮಕಣಗಳ ರೂಪದಲ್ಲಿರುವ ನಿಕಲ್ ವೇಗವರ್ಧಕದ ಸಂಪರ್ಕದಲ್ಲಿ ವನಸ್ಪತಿ ತೈಲಗಳು ಹೈಡ್ರೊಜನ್ ಹೀರಿಕೊಂಡು ವನಸ್ಪತಿ ತುಪ್ಪವಾಗುವುದು-ಇವೆಲ್ಲ ಅಪಕರ್ಷಣ ಕ್ರಿಯೆಗಳು.[೩]

ಮೈಲುತುತ್ತದ (ತಾಮ್ರದ ಸಲ್ಫೇಟ್) ದ್ರಾವಣದಲ್ಲಿ ಕ್ಯುಪ್ರಿಕ್ (Cu++) ಅಯಾನುಗಳಿವೆ. ದ್ರಾವಣಕ್ಕೆ ಕಬ್ಬಿಣದ ತುರಿಯನ್ನು ಸೇರಿಸಿದರೆ ಅದು ವಿಲೀನವಾಗಿ ತಾಮ್ರ ಒತ್ತರಿಸುವುದು. ಈ ರಾಸಾಯನಿಕ ಕ್ರಿಯೆಯನ್ನು ಕೆಳಕಂಡ ಸಮೀಕರಣದಿಂದ ಸೂಚಿಸಬಹುದು.

             Cu++   + Fe →   Fe++   + Cu      (ಲೋಹ)         (ಲೋಹ)

ಮೇಲಿನ ಸಂದರ್ಭದಲ್ಲಿ ಕ್ಯುಪ್ರಿಕ್ ಅಯಾನುಗಳು ಕಬ್ಬಿಣದ ಪರಮಾಣುವಿನಿಂದ ತಲಾ ಎರಡು ಎಲೆಕ್ಟ್ರಾನುಗಳನ್ನು ಸ್ವೀಕರಿಸಿ ತಾಮ್ರದ ಪರಮಾಣುಗಳಾಗಿ ಪರಿವರ್ತಿತವಾಗಿವೆ. ಆದ್ದರಿಂದ ಕ್ಯುಪ್ರಿಕ್ ಅಯಾನು ಉತ್ಕರ್ಷಣಕಾರಿ ಎಂದಾಯಿತು. ಹಾಗೆಯೇ ಕಬ್ಬಿಣದ ಪರಮಾಣು ತನ್ನಲ್ಲಿದ್ದ ಎರಡು ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುವುದರಿಂದ ಅದು ಅಪಕರ್ಷಣಕಾರಿ ಎನಿಸಿಕೊಳ್ಳುವುದು. ಒಂದು ವಸ್ತು ಉತ್ಕರ್ಷಿತವಾದರೆ ಏಕಕಾಲದಲ್ಲಿ ಮತ್ತೊಂದು ಅಪಕರ್ಷಿತವಾಗಿರಲೇಬೇಕೆಂಬ ನಿಯಮವು ಈ ಉದಾಹರಣೆಯಿಂದ ವ್ಯಕ್ತವಾಗುವುದು.

ಸ್ವಯಂ ಉತ್ಕರ್ಷಣ (ಆಟೋ ಆಕ್ಸಿಡೇಷನ್)

ಏಕಕಾಲದಲ್ಲಿ ಒಂದೇ ವಸ್ತು ಉತ್ಕರ್ಷಣ ಮತ್ತು ಅಪಕರ್ಷಣ ಹೊಂದಬಹುದು. ಅಂಥ ವಿಶಿಷ್ಟ ಕ್ರಿಯೆಗಳಲ್ಲಿ ಕೆಲವನ್ನು ಮಾತ್ರ ಮುಂದೆ ಸೂಚಿಸಲಾಗಿದೆ: 1. ಹೈಪೊ ಕ್ಲೋರೈಟ್ ದ್ರಾವಣಗಳನ್ನು ಕುದಿಸಿದಾಗ ಕ್ಲೋರೇಟು ಮತ್ತು ಕ್ಲೋರೈಡುಗಳಾಗುವಿಕೆ.

3NaCIO → NaCIO3 + 2NaCI

2. ನೈಟ್ರಸ್ ಆಮ್ಲ ಕ್ರಮೇಣ ನೈಟ್ರಿಕ್ ಆಮ್ಲ ಮತ್ತು ನೈಟ್ರಿಕ್ ಆಕ್ಸೈಡ್ ಆಗುವುದು.

3HNO2 → HNO3 + 2NO + H2O

3. ಆರ್ಥೋಫಾಸ್ಫರಸ್ ಆಮ್ಲವನ್ನು ಕಾಯಿಸಿದಾಗ ಉತ್ಕರ್ಷಿತವಾಗಿ ಆರ್ಥೋಫಾಸ್ಫಾರಿಕ್ ಆಮ್ಲ ಮತ್ತು ಅಪಕರ್ಷಿತವಾಗಿ ಫಾಸ್ಫೀನ್ ಆಗುವುದು.

4H3PO3 → 3H3PO4 + PH3

4. ಎಚ್ಚರಿಕೆಯಿಂದ ಕಾಯಿಸಿದಾಗ ಪೊಟ್ಯಾಸಿಯಂ ಕ್ಲೋರೇಟ್ ಉತ್ಕರ್ಷಿತವಾಗಿ ಪೊಟ್ಯಾಸಿಯಂ ಪರ್ಕ್ಲೋರೇಟನ್ನೂ ಅಪಕರ್ಷಿತವಾಗಿ ಪೊಟ್ಯಾಸಿಯಂ ಕ್ಲೋರೈಡನ್ನೂ ಕೊಡುವುದು.

4KCIO3 → 3KCIO4 + KCI

ಜೈವಿಕ ಕ್ರಿಯೆಗಳಲ್ಲಿ ಸ್ವಯಂ ಉತ್ಕರ್ಷಣದ ಪಾತ್ರ ಹಿರಿದು.

ಪರಸ್ಪರ ಅಪಕರ್ಷಣ

ಇದೊಂದು ವಿಚಿತ್ರ ಸನ್ನಿವೇಶ. ಕೆಲವು ಉತ್ಕರ್ಷಣಕಾರಿಗಳು ಪರಸ್ಪರ ಸಂಪರ್ಕದಲ್ಲಿ ಹೀಗಾಗುವುದುಂಟು. ಕೆಳಕಂಡ ಉದಾಹರಣೆಗಳಿಂದ ಇದು ವೇದ್ಯವಾಗುತ್ತದೆ. 1. ಹೈಡ್ರೋಜನ್ ಪರಾಕ್ಸೈಡ್ ಮತ್ತು ಬೆಳ್ಳಿಯ ಆಕ್ಸೈಡುಗಳು ಪರಸ್ಪರ ಅಪಕರ್ಷಿತವಾಗಿ ಬೆಳ್ಳಿ, ನೀರು ಮತ್ತು ಆಕ್ಸಿಜನ್ ಉತ್ಪತ್ತಿಯಾಗುವುವು.

Ag2O + H2O2 → 2Ag + H2O + O2

2. ಆಮ್ಲ ಮಿಶ್ರಿತ ಪೊಟ್ಯಾಸಿಯಂ ಪರ್ಮ್ಯಾಂಗನೇಟು ದ್ರಾವಣ ಹೈಡ್ರೋಜನ್ ಪರಾಕ್ಸೈಡಿನ ಸಂಪರ್ಕದಲ್ಲಿ ತನ್ನ ಊದಾಬಣ್ಣವನ್ನು ಕಳೆದುಕೊಂಡು ನಿರ್ವರ್ಣ ವಸ್ತುಗಳಿಗೆ ಅಪಕರ್ಷಿತವಾಗುವುದು. ಹೈಡ್ರೋಜನ್ ಪರಾಕ್ಸೈಡ್ ಸಹ ಅಪಕರ್ಷಿತವಾಗಿ ನೀರು ಮತ್ತು ಆಕ್ಸಿಜನ್ ಕೊಡುವುದು.

2KMnO4 + 3H2SO4 + 5H2O2 → K2SO4 + 2MnSO2 + 8H2O + 5O2

3. ಓಜ಼ೋನ್ ಅನಿಲ ಬೇರಿಯಂ ಪರಾಕ್ಸೈಡನ್ನು ಮಾನಾಕ್ಸೈಡಿಗೆ ಅಪಕರ್ಷಿಸುವುದು. ತಾನು ಆಕ್ಸಿಜನ್ನಾಗಿ ಅಪಕರ್ಷಣ ಹೊಂದುವುದು.

BaO2 + O3 → BaO + 2O2

ಉತ್ಕರ್ಷಣಾಂಕ (ಆಕ್ಸಿಡೇಷನ್ ನಂಬರ್)

ಎಲ್ಲ ಮೂಲವಸ್ತುಗಳ ಪರಮಾಣುಗಳು ಸ್ವತಂತ್ರ ಸ್ಥಿತಿಯಲ್ಲಿದ್ದಾಗ ವಿದ್ಯುದ್ರಹಿತವಾಗಿರುತ್ತವೆ (ನ್ಯೂಟ್ರಲ್). ರಾಸಾಯನಿಕ ಸಂಯೋಜನೆಯಾದಾಗ ಪರಸ್ಪರ ಎಲೆಕ್ಟ್ರಾನುಗಳ ವಿನಿಮಯವಾಗುತ್ತದೆ. ಫಲಿತ ಸಂಯುಕ್ತಗಳು ಕೆಲವು ಸಂದರ್ಭಗಳಲ್ಲಿ ವಿದ್ಯುತ್‍ಪೂರಿತವಾಗುವುವು. ಇಂಥ ಕಣಗಳಿಗೆ ಅಯಾನುಗಳೆಂದೂ, ಈ ರೀತಿಯ ಸಂಯೋಜನೆಗೆ ಅಯಾನುಬಂಧ (ಅಯಾನಿಕ್ ಬಾಂಡ್) ಎಂದೂ ಹೆಸರು. ಆದ್ದರಿಂದ ಸಂಯುಕ್ತ ಸ್ಥಿತಿಯಲ್ಲಿರುವ ಪರಮಾಣುವೊಂದನ್ನು ಅದರ ಮೂಲಸ್ಥಿತಿಗೆ ತರಬೇಕಾದರೆ ಅದಕ್ಕೆ ಕೂಡಿಸಬೇಕಾದ ಅಥವಾ ಅದರಿಂದ ಕಳೆಯಬೇಕಾದ ಎಲೆಕ್ಟ್ರಾನುಗಳ ಸಂಖ್ಯೆಗೆ ಆ ಮೂಲವಸ್ತುವಿನ ಉತ್ಕರ್ಷಣಾಂಕ ಎಂದು ಹೆಸರು. ಉದಾಹರಣೆಗೆ, ಬೇರಿಯಂ ಕ್ಲೋರೈಡಿನಲ್ಲಿ (BaCI2) ಬೇರಿಯಂ ಅಯಾನಿಗೆ (Ba++) ಎರಡು ಎಲೆಕ್ಟ್ರಾನುಗಳನ್ನು ಸೇರಿಸಿದರೆ ಮಾತ್ರ (Ba) ಮೂಲ ಪರಮಾಣುವಾಗುವುದು. ಆದ್ದರಿಂದ ಅದರ ಉತ್ಕರ್ಷಣಾಂಕ +2. ಕ್ಲೊರೀನ್ ಅಯಾನಿನಿಂದ (CI-) ತಲಾ ಒಂದು ಎಲೆಕ್ಟ್ರಾನ್ ತೆಗೆದರೆ ಮಾತ್ರ ಅದು (CI) ಮೂಲ ಪರಮಾಣುವಾಗುವುದು. ಆದ್ದರಿಂದ ಅದರ ಉತ್ಕರ್ಷಣಾಂಕ -1. ಫ್ಲೂರಿನ್ ಹೊರತು ಉಳಿದ ಎಲ್ಲ ಮೂಲವಸ್ತುಗಳ ಬಗ್ಗೆ ಆಕ್ಸಿಜನ್ ವಿದ್ಯುದೃಣವಾಗಿ (ಎಲಕ್ಟ್ರೋನೆಗೆಟಿವ್) ವರ್ತಿಸುತ್ತದೆ. ಅಂದರೆ ಇತರ ಮೂಲವಸ್ತುಗಳೊಡನೆ ಕ್ರಿಯೆಗೆ ಒಳಗಾಗುವ ಆಕ್ಸಿಜನ್ನಿನ ಪ್ರತಿ ಒಂದು ಪರಮಾಣವೂ ಅದರ ಎಲೆಕ್ಟ್ರಾನುಗಳೊಂದಿಗೆ ಮತ್ತೆ ಎರಡು ಎಲೆಕ್ಟ್ರಾನುಗಳನ್ನು ಹೊಂದಿ ಎಂಟು ಎಲೆಕ್ಟ್ರಾನುಗಳಿರುವ ಒಂದು ಸ್ಥಿರ ವೇಲೆನ್ಸ್‌ ಹೊರಕವಚವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತದೆ. ಇದನ್ನು ತನ್ನಲ್ಲಿರುವ ಎಲೆಕ್ಟ್ರಾನುಗಳನ್ನು ಪಾಲುಮಾಡಿಕೊಳ್ಳುವುದರ ಮೂಲಕ ಅಥವಾ ಅವುಗಳ ವರ್ಗಾವಣೆಯಿಂದ ಸಾಧಿಸಿಕೊಳ್ಳುವುದು. ಆದ್ದರಿಂದ ತಾತ್ತ್ವಿಕವಾಗಿ ಇತರ ಮೂಲವಸ್ತುಗಳ ಜೊತೆಯಲ್ಲಿನ ಸಂಯೋಜಿತ ಸ್ಥಿತಿಯಲ್ಲಿ ಆಕ್ಸಿಜನ್ನಿನ ಉತ್ಕರ್ಷಣಾಂಕ -2 ಎಂದು ಪರಿಗಣಿಸಲಾಗಿದೆ. (ಸೂಪರ್ ಆಕ್ಸೈಡುಗಳು ಮತ್ತು ಪರಾಕ್ಸಿ ಸಂಯುಕ್ತಗಳಿಗೆ ಇದು ಅನ್ವಯಿಸುವುದಿಲ್ಲ). ಒಂದು ಸಂಯುಕ್ತ ವಸ್ತುವಿನಲ್ಲಿರುವ ಪರಮಾಣುಗಳ ಉತ್ಕರ್ಷಣಾಂಕಗಳ ಮೊತ್ತ ಸೊನ್ನೆಯಾಗಿರಬೇಕು. ಉದಾಹರಣೆಗೆ, ಪೊಟ್ಯಾಸಿಯಂ ಪರ್ಮಾಂಗನೇಟಿನಲ್ಲಿ (KMNO4) ಮ್ಯಾಂಗನೀಸ್ ಪರಮಾಣುವಿಗೆ +7, ಪೊಟ್ಯಾಸಿಯಂ ಪರಮಾಣುವಿಗೆ+1 ಮತ್ತು ನಾಲ್ಕು ಆಕ್ಸಿಜನ್ ಪರಮಾಣುಗಳಿಗೆ ತಲಾ -2 ರಂತೆ ಒಟ್ಟು -8 ಅಂಕಗಳಾಗುವುದರಿಂದ ಇವುಗಳ ಬೀಜಮೊತ್ತ (ಆಲ್ಜಿಬ್ರೇಯಿಕ್ ಸಮ್) ಸೊನ್ನೆಯಾಗುತ್ತದೆ. ರಾಸಾಯನಿಕ ಸಮೀಕರಣವನ್ನು ಸರಿದೂಗಿಸುವಾಗ ಈ ತತ್ತ್ವವನ್ನು ಗಮನಿಸಬೇಕು. ಉತ್ಕರ್ಷಣಕಾರಿ ಅಪಕರ್ಷಣಕಾರಿ ಎಂಬುವು ಸಾಪೇಕ್ಷ ಪದಗಳು. ಒಂದು ವಸ್ತು ಹೇಗೆ ವರ್ತಿಸುವುದೆಂಬುದು ಅದು ಸಂಪರ್ಕಹೊಂದುವ ವಸ್ತುವಿನ ಗುಣ, ಪ್ರಾಬಲ್ಯಗಳನ್ನು ಅವಲಂಬಿಸಿದೆ. ಆದ್ದರಿಂದ ಸಾರ (ಕಾನ್ಸನ್ಟ್ರೇಷನ್) ವ್ಯತ್ಯಾಸದಿಂದ ಒಂದು ವಸ್ತು ಉತ್ಕರ್ಷಣಕಾರಿಯಾಗಿಯೋ ಅಪಕರ್ಷಣಕಾರಿಯಾಗಿಯೋ ವರ್ತಿಸುವಂತೆ ನಿರ್ದೇಶಿಸಬಹುದು.

ಉತ್ಕರ್ಷಣಕಾರಿಯಾಗಿ ಆಮ್ಲಜನಕ

ಉದ್ಯಮ ರಸಾಯನವಿಜ್ಞಾನದಲ್ಲಿ ಗಾಳಿ ಅಥವಾ ಆಕ್ಸಿಜನ್ನನ್ನೇ ಉತ್ಕರ್ಷಣಕಾರಿಯಾಗಿ ಬಳಸುವುದು ಹೆಚ್ಚು. ಇದಕ್ಕೆ ಹಲವು ನಿದರ್ಶನಗಳಿವೆ.[೪] ಪರಿಶುದ್ಧಗೊಳಿಸಿದ ಸಲ್ಫರ್ ಡೈಆಕ್ಸೈಡ್ ಮತ್ತು ಗಾಳಿಯ ಮಿಶ್ರಣವನ್ನು 4500-5500 ಸೆ. ಉಷ್ಣತಾಮಿತಿಯಲ್ಲಿರುವ ಪ್ಲಾಟಿನಂ ವೆನೇಡಿಯಂ ಪೆಂಟಾಕ್ಸೈಡ್ ವೇಗವರ್ಧಕದ ಮೇಲೆ ಹಾಯಿಸಿದರೆ ಸಲ್ಫರ್ ಟ್ರೈಆಕ್ಸೈಡಾಗಿ ಉತ್ಕರ್ಷಿತವಾಗುವುದು. ಇದನ್ನು 98% ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನ ಮಾಡುವರು. ಇದೇ ಸಂಪರ್ಕ ವಿಧಾನ. 1:9 ಪ್ರಮಾಣದ ಅಮೋನಿಯ ಮತ್ತು ಗಾಳಿಗೆ ಮಿಶ್ರಣವನ್ನು 7000 ಸೆ. ನಲ್ಲಿರುವ ಪ್ಲಾಟಿನಂ ಬಲೆಯ ಮೂಲಕ ವೇಗವಾಗಿ ಹಾಯಿಸಿದರೆ ನೈಟ್ರಿಕ್ ಆಕ್ಸೈಡಾಗಿ ಉತ್ಕರ್ಷಿತವಾಗುವುದು. ಇದು ಗಾಳಿಯಲ್ಲಿರುವ ಆಕ್ಸಿಜನ್ನಿನೊಡನೆ ಸಂಯೋಜಿಸಿ ನೈಟ್ರೋಜನ್ ಡೈಆಕ್ಸೈಡನ್ನು ಕೊಡುವುದು. ಇದನ್ನು ನೀರಿನಲ್ಲಿ ವಿಲೀನ ಮಾಡಿದರೆ ನೈಟ್ರಿಕ್ ಆಮ್ಲವಾಗುವುದು. ಇದೇ ಆಸ್‍ಟ್ವಾಲ್ಟ್‌ ವಿಧಾನ.

ದ್ರವಿತ ಕಬ್ಬಿಣದ ಮೂಲಕ ಗಾಳಿಯನ್ನು ಹಾಯಿಸಿದರೆ ಆಕ್ಸಿಜನ್ ಕಬ್ಬಿಣದಲ್ಲಿರುವ ಇಂಗಾಲ, ಸಲ್ಫರ್ ಮತ್ತು ಫಾಸ್ಫರಸ್ಸನ್ನು ಆಕ್ಸೈಡುಗಳ ರೂಪಕ್ಕೆ ತಂದು ನಿವಾರಿಸುವುದು. ಅನಂತರ ಅಪೇಕ್ಷಿತ ಇಂಗಾಲವನ್ನು ಸೇರಿಸಿದರೆ ಉಕ್ಕಾಗುವುದು. ಕುಲುಮೆಯಲ್ಲಿ ಪೊಟ್ಯಸಿಯಂ ಹೈಡ್ರಾಕ್ಸೈಡ್ ಮತ್ತು ಮ್ಯಾಂಗನೀಸ್ ಡೈಆಕ್ಸೈಡ್ ಮಿಶ್ರಣವನ್ನು ಅಥವಾ ಕ್ರೋಮೈಟ್ ಅದಿರು ಮತ್ತು ಸೋಡಿಯಂ ಕಾರ್ಬೊನೇಟಿನ ಮಿಶ್ರಣವನ್ನು ಗಾಳಿಯ ಸಂಪರ್ಕದಲ್ಲಿ ಹುರಿಯುವುದರಿಂದ ಕ್ರಮವಾಗಿ ಪೊಟ್ಯಾಸಿಯಂ ಪರ್ಮಾಂಗನೇಟ್ ಮತ್ತು ಪೊಟಾಸಿಯಂ ಡೆಕ್ರೊಮೇಟುಗಳನ್ನು ತಯಾರಿಸಬಹುದು. ಸೂಕ್ತವೇಗವರ್ಧಕಗಳ ನೆರವಿದ್ದರೆ ಗಾಳಿಯಲ್ಲಿರುವ ಆಕ್ಸಿಜನ್ ನ್ಯಾಪ್ತಲೀನನ್ನು ಥ್ಯಾಲಿಕ್ ಅನ್ಹೈಡ್ರೈಡಿಗೂ, ಐಸೊಪ್ರೋಪೈಲ್ ಆಲ್ಕೊಹಾಲನ್ನು ಅಸಿಟೋನಿಗೂ, ಟಾಲೀನನ್ನು ಬೆಂಜ಼ಾಲ್ಡಿಹೈಡಿಗೂ ಮತ್ತು ಅಸಿಟಾಲ್ಡಿಹೈಡನ್ನು ಅಸಿಟಿಕ್ ಆಮ್ಲಕ್ಕೂ ಉತ್ಕರ್ಷಿಸುವುದು.

ಜೀವರಸಾಯನಶಾಸ್ತ್ರದಲ್ಲಿ

ಪ್ರಾಣಿಗಳ ಕೋಶಗಳಲ್ಲಿ ನಿರಂತರವಾಗಿ ಉತ್ಕರ್ಷಣ-ಅಪಕರ್ಷಣ ಕ್ರಿಯೆಗಳು ನಡೆಯುತ್ತವೆ. ಗ್ಲೂಕೋಸ್ ಮತ್ತು ತೈಲಾಮ್ಲಗಳು ಆಕ್ಸಿಜನ್ನಿನ ನೆರವಿನಿಂದ ಉತ್ಕರ್ಷಣೆಗೊಂಡು ಇಂಗಾಲದ ಡೈಆಕ್ಸೈಡಿಗೆ ಪರಿವರ್ತನೆ ಆಗುವುವು. ಆಗ ಅವುಗಳಲ್ಲಿ ಅಡಕವಾಗಿರುವ ಶಕ್ತಿ ಬಿಡುಗಡೆಯಾಗಿ ಕೋಶಗಳಲ್ಲೆ ಅಡಿನೋಸಿನ್ ಟ್ರೈಫಾಸ್ಫೇಟ್ ರೂಪದಲ್ಲಿ (ATP) ಶೇಖರಗೊಳ್ಳುತ್ತದೆ. ಕೋಶಗಳಲ್ಲಿ ನಡೆಯುವ ಉತ್ಕರ್ಷಣ ಮೈಟೋಕಾಂಡ್ರಿಯ ಕಣದಲ್ಲಿ ಜರಗುವುದು. ಇದು ಅನೇಕ ಕಿಣ್ವಗಳ ಮತ್ತು ಸಹವರ್ತಿಗಳ ಸಮುದಾಯ. ಇವು ಉತ್ಕರ್ಷಣಗೊಳ್ಳುವ ವಸ್ತುವಿಗೂ (ಎಂದರೆ ಅಪಕರ್ಷಣಕಾರಿಗೂ) ಆಕ್ಸಿಜನ್ನಿಗೂ ಮಧ್ಯವರ್ತಿಗಳಾಗಿ ಮೊದಲನೆಯ ವಸ್ತುವಿನಿಂದ ಪ್ರೋಟಾನ್ ಮತ್ತು ಎಲೆಕ್ಟ್ರಾನುಗಳನ್ನು ಆಕ್ಸಿಜನ್ನಿಗೆ ವರ್ಗಾಯಿಸುತ್ತವೆ. ವರ್ಗಾವಣೆ ಮೈಟೋಕಾಂಡ್ರಿಯದ ವಸ್ತುಗಳ ಮೂಲಕ ಹಂತಹಂತವಾಗಿ ನಡೆಯುವುದೆಂದು ಗೊತ್ತಾಗಿದೆ. ಇದನ್ನು ಉಚ್ಛ್ವಾಸನಿಶ್ವಾಸ ಶ್ರೇಣಿಯೆಂದು ಕರೆಯಬಹುದು. ಈ ಶ್ರೇಣಿಯಲ್ಲಿ ಮುಂದೆ ತೋರಿಸಿರುವ ವಸ್ತುಗಳಿವೆಯೆಂದು ತಿಳಿದಿದೆ: 1 ನಿಕೊಟೀನ್ ಅಡಿನೈನ್ ಮಾನೋಫಾಸ್ಫೇಟ್ ಮತ್ತು ಡೈಫಾಸ್ಫೇಟ್ (NAD or NADP). 2 ಫ್ಲೇವಿನ್ ಮಾನೋ ನ್ಯೂಕ್ಲಿಯೋಟೈಡ್ ಮತ್ತು ಡೈನ್ಯೂಕ್ಲಿಯೋಟೈಡ್ (FMN, FAD) 3 ಸಹ ಕಿಣ್ವ Q, ಜೀವಾತು K. 4 ಸೈಟೋಕ್ರೋ B, C, ಮತ್ತು A. ಉತ್ಕರ್ಷಿತ ವಸ್ತುವಿನಿಂದ (ಎಂದರೆ ಅಪಕರ್ಷಣಕಾರಿಯಿಂದ) ಹೈಡ್ರೊಜನ್ನಿನ ಅಂಶಗಳು ಮೇಲಿನ ವಸ್ತುಗಳ ಮೂಲಕ ಅನುಕ್ರಮವಾಗಿ ವರ್ಗಾವಣೆಗೊಂಡು ಅಂತಿಮವಾಗಿ ಆಕ್ಸಿಜನ್ನಿನೊಡನೆ ಸಂಯೋಗವಾಗಿ ನೀರನ್ನು ಉತ್ಪತ್ತಿ ಮಾಡುತ್ತವೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: