ಗಾಯದ ಕಲೆ

ಗಾಯದ ಕಲೆಯು ಗಾಯದ ನಂತರ ಸಾಮಾನ್ಯ ಚರ್ಮದ ಬದಲಿಗೆ ಹುಟ್ಟುವ ನಾರಿನಿಂದ ಕೂಡಿದ ಅಂಗಾಂಶದ ಪ್ರದೇಶ. ಚರ್ಮದಲ್ಲಿ, ಜೊತೆಗೆ ದೇಹದ ಇತರ ಅಂಗಗಳು ಮತ್ತು ಅಂಗಾಂಶಗಳಲ್ಲಿ, ಗಾಯದ ದುರಸ್ತಿಯ ಜೈವಿಕ ಪ್ರಕ್ರಿಯೆಯಿಂದ ಗಾಯದ ಕಲೆಗಳು ಉಂಟಾಗುತ್ತವೆ. ಹಾಗಾಗಿ, ಕಲೆಗಟ್ಟುವಿಕೆಯು ಗುಣವಾಗುವ ಪ್ರಕ್ರಿಯೆಯ ಸಹಜ ಭಾಗವಾಗಿದೆ. ಬಹಳ ಚಿಕ್ಕ ಗಾಯಗಳನ್ನು ಹೊರತುಪಡಿಸಿ, ಪ್ರತಿ ಗಾಯದಿಂದ (ಉದಾಹರಣೆಗೆ ಅಪಘಾತ, ರೋಗ, ಅಥವಾ ಶಸ್ತ್ರಕ್ರಿಯೆಯ ನಂತರ) ಸ್ವಲ್ಪ ಪ್ರಮಾಣದ ಕಲೆಗಟ್ಟುವಿಕೆಯು ಉಂಟಾಗುತ್ತದೆ. ಸಂಪೂರ್ಣ ಪುನರುತ್ಪಾದನೆ ಪ್ರಕ್ರಿಯೆ ಹೊಂದಿರುವ ಪ್ರಾಣಿಗಳು ಇದಕ್ಕೆ ಅಪವಾದವಾಗಿವೆ. ಕಲೆ ರಚನೆಯಿಲ್ಲದೆಯೇ ಊತಕವನ್ನು ಇವು ಮತ್ತೆ ಬೆಳೆಸಿಕೊಳ್ಳುತ್ತವೆ.

ಕೈಯ ಮೇಲೆ ಗಾಯದ ಕಲೆ

ಗಾಯದ ಕಲೆಯ ಅಂಗಾಂಶವು ಅದು ಯಾವ ಅಂಗಾಂಶದ ಬದಲಿಯಾಗಿ ಬರುತ್ತದೊ ಅದರ ಪ್ರೋಟೀನ್‍ನಿಂದಲೆ (ಕಾಲಜನ್) ರಚಿತವಾಗಿದೆ, ಆದರೆ ಪ್ರೋಟೀನಿನ ನಾರು ಸಂಯೋಜನೆಯು ಭಿನ್ನವಾಗಿದೆ; ಸಾಮಾನ್ಯ ಅಂಗಾಂಶದಲ್ಲಿ ಕಂಡುಬರುವ ಕಾಲಜನ್ ನಾರುಗಳ ಯಾದೃಚ್ಛಿಕ ಬುಟ್ಟಿ ನೇಯ್ಗೆಯ ರಚನೆಯ ಬದಲಾಗಿ, ತಂತೂತಕವೃದ್ಧಿಯಲ್ಲಿ ಕಾಲಜನ್ ಅಡ್ಡವಾಗಿ ಕೂಡಿಕೊಂಡು ಒಂದೇ ದಿಕ್ಕಿನಲ್ಲಿ ಸ್ಪಷ್ಟವಾದ ಜೋಡಣೆಯನ್ನು ರಚಿಸುತ್ತದೆ.[೧] ಈ ಕಾಲಜನ್ ಗಾಯದ ಕಲೆಯ ಅಂಗಾಂಶದ ಜೋಡಣೆಯು ಸಾಮಾನ್ಯ ಕಾಲಜನ್ ಯಾದೃಚ್ಛೀಕೃತ ಜೋಡಣೆಗೆ ಹೋಲಿಸಿದರೆ ಸಾಮಾನ್ಯವಾಗಿ ಕಳಪೆ ಕ್ರಿಯಾತ್ಮಕ ಗುಣಮಟ್ಟದ್ದಾಗಿರುತ್ತದೆ. ಉದಾಹರಣೆಗೆ, ಚರ್ಮದಲ್ಲಿನ ಗಾಯದ ಕಲೆಗಳು ಅತಿನೇರಳೆ ವಿಕಿರಣಕ್ಕೆ ಕಡಿಮೆ ಪ್ರತಿರೋಧಕವಾಗಿರುತ್ತವೆ, ಮತ್ತು ಗಾಯದ ಕಲೆಯ ಅಂಗಾಂಶಗಳಲ್ಲಿ ಬೆವರು ಗ್ರಂಥಿಗಳು ಮತ್ತು ಕೂದಲು ಕೋಶಕಗಳು ಮರಳಿ ಬೆಳೆಯುವುದಿಲ್ಲ. ಸಾಮಾನ್ಯವಾಗಿ ಹೃದಯಾಘಾತವೆಂದು ಕರೆಯಲ್ಪಡುವ, ಹೃದಯದ ಸ್ನಾಯುವಿನ ಊತಕ ಮರಣವು ಹೃದಯದ ಸ್ನಾಯುವಿನಲ್ಲಿ ಗಾಯದ ಕಲೆಯ ರಚನೆಯಾಗುವಂತೆ ಮಾಡುತ್ತದೆ. ಇದರಿಂದ ಸ್ನಾಯು ಶಕ್ತಿ ಕುಗ್ಗುತ್ತದೆ ಅಥವಾ ನಾಶವಾಗುತ್ತದೆ ಮತ್ತು ಸಂಭಾವ್ಯವಾಗಿ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಆದರೆ ಯಾವುದೇ ರಾಚನಿಕ ಅಥವಾ ಕ್ರಿಯಾತ್ಮಕ ಕೆಡುವಿಕೆ ಆಗದೆಯೇ ಗುಣವಾಗುವ ಕೆಲವು ಅಂಗಾಂಶಗಳಿವೆ (ಉದಾ. ಮೂಳೆ).

ಗಾಯದ ಕಲೆಯು ಅಂಗಾಂಶದ ಗಾಯದ ನಂತರದ ದೇಹದ ದುರಸ್ತಿ ಪ್ರಕ್ರಿಯೆಯ ಪರಿಣಾಮವಾಗಿರುತ್ತದೆ. ಗಾಯವು ಹೊಸ ಚರ್ಮದ ರಚನೆಯೊಂದಿಗೆ ಎರಡು ವಾರದೊಳಗೆ ಕ್ಷಿಪ್ರವಾಗಿ ಗುಣವಾದರೆ, ಕನಿಷ್ಠ ಪ್ರಮಾಣದ ಕಾಲಜನ್ ಸಂಗ್ರಹವಾಗುತ್ತದೆ ಮತ್ತು ಗಾಯದ ಕಲೆಯು ರೂಪಗೊಳ್ಳುವುದಿಲ್ಲ. ಕೋಶದ ಹೊರಗಿನ ಮಾತೃಕೆಯು ಹೆಚ್ಚಿದ ಯಾಂತ್ರಿಕ ಒತ್ತಡದ ಭಾರವನ್ನು ಗ್ರಹಿಸಿದಾಗ, ಅಂಗಾಂಶದಲ್ಲಿ ಕಲೆಯುಂಟಾಗುತ್ತದೆ, ಮತ್ತು ಗಾಯಗಳಿಗೆ ಒತ್ತಡ ಆಗದಂತೆ ನೋಡಿಕೊಂಡರೆ ಗಾಯದ ಕಲೆಗಳನ್ನು ಸೀಮಿತಗೊಳಿಸಬಹುದು.

ಉಲ್ಲೇಖಗಳು