ಜಾನ್ ಆಡಮ್ಸ್

ಆಡಮ್ಸ್ ಜಾನ್ (1735-1826). - ಅಮೆರಿಕ ಸಂಯುಕ್ತ ಸಂಸ್ಥಾನದ ಎರಡನೆಯ ಅಧ್ಯಕ್ಷ{ರಾಷ್ಟ್ರಪತಿ).

ಬದುಕು

ಅಮೆರಿಕದ ಪ್ರಸಿದ್ಧ ಆಡಮ್ಸ್ ಮನೆತನದವ. ಪ್ರಖ್ಯಾತ ವಕೀಲನಾಗಿದ್ದು ಅಮೆರಿಕದ ಕ್ರಾಂತಿಯಲ್ಲಿ (1775) ಬಹುಮುಖ್ಯ ಪಾತ್ರವನ್ನು ವಹಿಸಿದ. ಅಮೆರಿಕದ ಸ್ವಾತಂತ್ರ್ಯಕ್ಕಾಗಿ ಹೋರಾಡಿದನಲ್ಲದೆ ಸ್ವಾತಂತ್ರ್ಯ ಪ್ರಣಾಳಿಕೆಗಾಗಿ (ಡಿಕ್ಲೆರೇಷನ್ ಆಫ್ ಇಂಡೆಪೆಂಡೆನ್ಸ್) ಉಗ್ರವಾಗಿ ವಾದಿಸಿದ್ದಲ್ಲದೆ ಅದಕ್ಕೆ ಅನಂತರ ಸಹಿ ಮಾಡಿದ. ಸಂಧಿಸಂಬಂಧಗಳ ಕಾಲದಲ್ಲಿ ಈತ ರಾಯಭಾರಿಯಾಗಿ ಇಂಗ್ಲೆಂಡಿಗೆ ಹೋದ; ಆದರೆ ಸರಹದ್ದು, ಗಡಿನಾಡು ಭಾಗಗಳ ವಾಣಿಜ್ಯಸಮಸ್ಯೆಯನ್ನು ಪರಿಹರಿಸಬೇಕೆಂಬ ತನ್ನ ಉದ್ದಿಷ್ಟ ಕಾರ್ಯದಲ್ಲಿ ಯಶಸ್ವಿಯಾಗಲಿಲ್ಲ. ಕ್ರಾಂತಿಯುದ್ಧದ ಸಂಬಂಧದಲ್ಲಿ ಆಮೂಲಾಗ್ರ ಸುಧಾರಣೆ ಆಗಬೇಕೆಂದು ಒತ್ತಿ ಹೇಳುತ್ತಿದ್ದರೂ ಶ್ರೀಮಂತವರ್ಗಕ್ಕೆ ಸೇರಿದವನಾಗಿಯೇ ಇದ್ದ. ವಾಷಿಂಗ್‍ಟನ್ ಮತ್ತು ಹ್ಯಾಮಿಲ್‍ಟನ್‍ರವರ ಕಾರ್ಯನೀತಿಗೆ ಮನಃಪೂರ್ವಕವಾಗಿ ಬೆಂಬಲ ನೀಡಿದ. ಆದರೂ ಯಾರ ಅಧೀನದಲ್ಲೂ ಇರಲೊಪ್ಪದೆ ಸ್ವೇಚ್ಛಾವಾದಿಯಾಗಿದ್ದ. ಅಧ್ಯಕ್ಷ ವಾಷಿಂಗ್‍ಟನ್ನನ ಆಡಳಿತದಲ್ಲಿ ಉಪಾಧ್ಯಕ್ಷನಾಗಿ (1789-97) ಕೆಲಸ ಮಾಡಿದ. ಅಮೆರಿಕ ಸಂಸ್ಥಾನದ ಎರಡನೆಯ ಅಧ್ಯಕ್ಷನಾಗಿ ಚುನಾಯಿತನಾದ (1797-1801). ಫ್ರಾನ್ಸ್‍ನೊಡನೆ ಯುದ್ಧ ಮಾಡಬೇಕೆಂಬ ನೀತಿಯನ್ನು ವಿರೋಧಿಸಿ ಶಾಂತಿಯನ್ನು ಕಾಪಾಡಿದ (1800). ಅಮೆರಿಕ ಪಾಲಿಸುತ್ತಿದ್ದ ಕಾಯಂ ತಟಸ್ಥರೀತಿ ನೀತಿಗಳಿಗೆ ಬೆಂಬಲವಿತ್ತ.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: