ದೃಗ್ಗೋಚರ ರೋಹಿತ

ವಿದ್ಯುತ್ಕಾಂತೀಯ ರೋಹಿತದಲ್ಲಿನ ಮಾನವನಿಗೆ ಕಾಣುವ ಭಾಗವನ್ನು ದೃಗ್ಗೋಚರ ರೋಹಿತ ಎನ್ನುತ್ತಾರೆ. ಈ ತರಂಗಾಂತರದ ಶ್ರೇಣಿಯಲ್ಲಿರುವ ವಿದ್ಯುತ್ಕಾಂತೀಯ ರೋಹಿತವನ್ನು ದೃಗ್ಗೋಚರ ಬೆಳಕು ಅಥವಾ ಕೇವಲ ಬೆಳಕು ಎನ್ನುತ್ತಾರೆ. ಮಾನವನ ಕಣ್ಣು ೩೯೦ರಿಂದ ೭೦೦nm ವರೆಗಿನ ತರಂಗಾಂತರದ ಕಿರಣಗಳಿಗೆ ಸ್ಪಂದಿಸುತ್ತದೆ.[೧] ಇದು ೪೩೦-೭೭೦THz (ಟೆರಾಹರ್ಟ್ಸ್) ವ್ಯಾಪ್ತಿಯಲ್ಲಿನ ಕಂಪನಾಂಕಗಳಿಗೆ ಸಮಾನ.
ಆದಾಗ್ಯೂ, ಇದು ಮಾನವನ ಕಣ್ಣಿಗೆ ಗೋಚರವಾಗುವ ಎಲ್ಲಾ ಬಣ್ಣಗಳನ್ನು ಒಳಗೊಂಡಿಲ್ಲ. ಉದಾ: ನಸುಗೆಂಪು ಅಥವಾ ನೇರಳೆಯ ಭೇದವಾದ ಕೆನ್ನೇರಿಳೆ ಬಣ್ಣಗಳನ್ನು ವಿವಿಧ ತರಂಗಾಂತರಗಳನ್ನು ಮಿಶ್ರಮಾಡುವುದರಿಂದ ಮಾಡಬೇಕು. ಆದ್ದರಿಂದ ಅವು ದೃಗ್ಗೋಚರ ರೋಹಿತದಲ್ಲಿ ಇಲ್ಲ. ಕೇವಲ ಒಂದೇ ತರಂಗಾಂತರ ಹೊಂದಿರುವ ಬಣ್ಣಗಳನ್ನು "ಶುದ್ಧ ಬಣ್ಣ" ಎಂದು ಕರೆಯುತ್ತಾರೆ.

ಪಟ್ಟಕವು ಬಿಳಿಯ ಬೆಳಕನ್ನು ರೋಹಿತದ ವಿವಿಧ ಬಣ್ಣಗಳಾಗಿ ಚದುರಿಸಿದೆ.

ಇತಿಹಾಸ

ಗಾಜು ಅಥವಾ ಹರಳಿನ ಮೂಲಕ ಬೆಳಕು ಪ್ರವೇಶಿಸುವಂತಹದ್ದೇ ಪ್ರಕ್ರಿಯೆಯಿಂದ ಕಾಮನಬಿಲ್ಲು ಕೂಡ ಉಂಟಾಗುತ್ತದೆ ಎಂದು ರೋಜರ್ ಬೇಕನ್‍ನು ೧೩ನೇ ಶತಮಾನದಲ್ಲಿ ಸಿದ್ಧಾಂತವನ್ನು ಮಂಡಿಸಿದನು.[೨]ಪಟ್ಟಕವು ಬೆಳಕನ್ನು ಸಂಯೋಜಿಸಬಲ್ಲದು ಹಾಗೂ ಬೇರ್ಪಡಿಸಬಲ್ಲದು ಎಂದು ಐಸಾಕ್ ನ್ಯೂಟನ್‍ನನು ೧೭ನೇ ಶತಮಾನದಲ್ಲಿ ಕಂಡುಹಿಡಿದನು. ಇದನ್ನು ತನ್ನ ಪುಸ್ತಕ ಆಪ್ಟಿಕ್ಸ್‌ನಲ್ಲಿ (Optiks) ವಿವರಿಸಿದ್ದಾನೆ. ತೆಳುವಾದ ಸೂರ್ಯ ರಶ್ಮಿಯು ಒಂದು ಗಾಜಿನ ಪಟ್ಟಕದ ಮೆಲ್ಮೈಗೆ ಬಿದ್ದಾಗ ಸ್ವಲ್ಪ ಭಾಗವು ಪ್ರತಿಫಲನಗೊಳ್ಳುತ್ತದೆ ಹಾಗೂ ಸ್ವಲ್ಪ ಭಾಗ ಗಾಜಿನ ಮೂಲಕ ಹಾಯ್ದುಹೋಗುತ್ತದೆ. ಹೀಗೆ ಹಾಯ್ದುಹೋದ ಬೆಳಕು ವಿವಿಧ ಬಣ್ಣದ ಪಟ್ಟಿಯನ್ನುಂಟುಮಾಡುತ್ತದೆ ಎಂದು ನ್ಯೂಟನ್‍ನನು ಕಂಡನು. ಬೆಳಕು ಬೇರೆ ಬೇರೆ ಬಣ್ಣದ ಕಣಗಳಿಂದ ಉಂಟಾಗಿದೆ ಎಂದು ನ್ಯೂಟನ್‍ನನು ಊಹಿಸಿದನು. ಮತ್ತು ಒಂದು ಪಾರದರ್ಶಕ ವಸ್ತುವಿನ ಮೂಲಕ ಚಲಿಸುವಾಗ ಬೇರೆ ಬೇರೆ ಬಣ್ದದ ಬೆಳಕು ಬೇರೆ ಬೇರೆ ವೇಗವನ್ನು ಹೊಂದಿರುತ್ತದೆ ಎಂದೂ ಊಹಿಸಿದನು. ಗಾಜಿನಲ್ಲಿ ಕೆಂಪು ಬೆಳಕು ನೇರಳೆ ಬೆಳಕಿಗಿಂತ ಕ್ಷಿಪ್ರವಾಗಿ ಚಲಿಸುತ್ತದೆ. ತತ್‍ಪರಿಣಾಮವಾಗಿ ಕೆಂಪು ಬೆಳಕು ನೇರಳೆ ಬಣ್ಣಕ್ಕಿಂತ ಕಡಿಮೆ ಬಾಗುತ್ತದೆ ಮತ್ತು ಒಂದು ವರ್ಣಪಂಕ್ತಿಯು ಸೃಷ್ಟಿಸಲ್ಪಡುತ್ತದೆ.

ನ್ಯೂಟನ್‍ನನು ರೋಹಿತವನ್ನು ಏಳು ಬಣ್ಣದ ವಿಭಾಗಗಳಾಗಿ ಹೆಸರಿಸಿದನು - ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಇಂಡಿಗೋ ಮತ್ತು ನೇರಳೆ. ಇಂಡಿಗೊದ ಕಂಪನಾಂಕಗಳಿಗೆ ಮಾನವನ ಕಣ್ಣು ಬಹುಮಟ್ಟಿಗೆ ಸ್ಪಂದಿಸುವುದಿಲ್ಲ. ಕೆಲವು ಜನರಿಗೆ ನೀಲಿ, ನೇರಳೆಯಿಂದ ಇಂಡಿಗೊವನ್ನು ಪ್ರತ್ಯೇಕಿಸಿ ಹೇಳಲು ಕಷ್ಟ. ಈ ಕಾರಣದಿಂದ, ನಂತರದ ದಿನಗಳಲ್ಲಿ ಇಂಡಿಗೊವನ್ನು ಒಂದು ಪ್ರತ್ಯೇಕ ಬಣ್ಣವೆಂದು ಗಣಿಸಬಾರದೆಂದು ಕೆಲವು ವಿವರಣೆಕಾರರು ಸಲಹೆಮಾಡಿದರು. ಆದರೆ, ಇಂಡಿಗೊ ಮತ್ತು ನೀಲಿ ಹೆಸರುಗಳನ್ನು ನ್ಯೂಟನ್‍ನನು ಯಾವ ಅರ್ಥದಲ್ಲಿ ಉಪಯೋಗಿಸಿದನೋ ಅದು ಈ ಪದಗಳ ಆಧುನಿಕ ಅರ್ಥಗಳಿಗೆ ತಾಳೆಯಾಗುವುದಿಲ್ಲವೆಂದು ಸಾಕ್ಷ್ಯಾಧಾರಗಳಿಂದ ಹೇಳಬಹುದು. ನ್ಯೂಟನ್‍ನನು ಕಂಡ ಪಟ್ಟಕದ ಬಣ್ಣಗಳನ್ನು ದೃಗ್ಗೋಚರ ರೋಹಿತದ ವರ್ಣಚಿತ್ರಕ್ಕೆ ಹೋಲಿಸಿನೋಡಿದಾಗ "ಇಂಡಿಗೊ" ಬಣ್ಣವು ಇಂದಿನ ನೀಲಿಗೆ ಹಾಗೂ "ನೀಲಿ" ಬಣ್ಣವು ಇಂದಿನ ಸಿಯಾನ್ (cyan) ಬಣ್ಣಕ್ಕೆ ಹೊಂದುತ್ತವೆ.[೩][೪][೫]

ನ್ಯೂಟನ್ ಕಂಡ ಪಟ್ಟಕದ ಬಣ್ಣಗಳು (David Brewster 1855)

ಬೆಳಕಿನ ರೋಹಿತದ ಪರಿಕಲ್ಪನೆಯು ೧೯ನೇ ಶತಮಾನದ ಆದಿಯಲ್ಲಿ ಮತ್ತಷ್ಟು ನಿಖರವಾಯಿತು. ಕಾರಣ, ವಿಲಿಯಂ ಹರ್ಷೆಲ್ (ಅವಗೆಂಪು), ಯೋಹಾನ್ ವಿಲ್‍ಹೆಲ್ಮ್ ರಿಟ್ಟರ್ (ಅತಿನೇರಳೆ), ಥಾಮಸ್ ಯಂಗ್, ಥಾಮಸ್ ಯೋಹಾನ್ ಸೀಬೆಕ್ ಮುಂತಾದವರು ದೃಗ್ಗೋಚರ ಬೆಳಕಿನ ವ್ಯಾಪ್ತಿಯ ಹೊರಗಿನ "ಬೆಳಕನ್ನು" ಕಂಡುಹಿಡಿದು ಅದರ ಲಕ್ಷಣಗಳನ್ನು ವಿವರಿಸಿದರು.[೬] ಬೆಳಕಿನ ಬೇರೆ ಬೇರೆ ಬಣ್ಣಗಳ ತರಂಗಾಂತರವನ್ನು ಥಾಮಸ್ ಯಂಗನು ೧೮೦೨ರಲ್ಲಿ ಮೊದಲಬಾರಿಗೆ ಅಳೆದನು.[೭]
೧೯ನೇ ಶತಮಾನದ ಆದಿಯಲ್ಲಿ, ದೃಗ್ಗೋಚರ ರೋಹಿತ ಮತ್ತು ಬಣ್ಣದ ದೃಷ್ಟಿಸಾಮರ್ಥ್ಯದ ನಡುವಿನ ಸಂಬಂಧವನ್ನು ಥಾಮಸ್ ಯಂಗ್ ಮತ್ತು ಹರ್ಮನ್ ಫಾನ್ ಹೆಲ್ಮ್‌ಹೋ‍ಲ್ಟ್ಸ್ ಅನ್ವೇಷಿಸಿದರು. ಕಣ್ಣು ಬಣ್ಣವನ್ನು ಗ್ರಹಿಸಲು ಮೂರು ಪ್ರತ್ಯೇಕ ಗ್ರಾಹಕಗಳನ್ನು ಬಳಸುತ್ತದೆ ಎಂದು ಅವರ ಬಣ್ಣದ ದೃಷ್ಟಿಸಾಮರ್ಥ್ಯದ ಸಿದ್ಧಾಂತವು ನಿಖರವಾಗಿ ಪ್ರಸ್ತಾಪಿಸಿತು.

ಪ್ರಾಣಿಗಳ ಬಣ್ಣದ ದೃಷ್ಟಿ

ಮಾನವನ ದೃಗ್ಗೋಚರ ರೋಹಿತದ ಹೊರಗಿನ ಕಂಪನಾಂಕಗಳನ್ನು ಹೊಂದಿದ ಬೆಳಕನ್ನು ಇತರ ಹಲವು ಜಾತಿಯ ಜೀವಿಗಳು ನೋಡಬಲ್ಲವು. ದುಂಬಿಗಳು ಮತ್ತು ಇತರೆ ಕೆಲವು ಕೀಟಗಳು ಅತಿನೇರಳೆ ಬೆಳಕನ್ನು ಗುರುತಿಸಬಲ್ಲವು. ಇದು ಅವುಗಳಿಗೆ ಹೂವಿನಲ್ಲಿಯ ಮಕರಂದವನ್ನು ಪಡೆಯಲು ಸಹಾಯವಾಗುತ್ತದೆ. ತಮ್ಮ ಪರಾಗಸ್ಪರ್ಶಕ್ಕೆ ಕೀಟಗಳನ್ನು ಅವಲಂಬಿಸುವ ಕೆಲವು ಸಸ್ಯಜಾತಿಗಳ ಸಂತಾನೋತ್ಪತ್ತಿಯು ಅವು ಮಾನವನಿಗೆ ಎಷ್ಟು ವರ್ಣರಂಜಿತವಾಗಿ ಕಾಣುವುವು ಎಂಬುದಕ್ಕಿಂತಲೂ ಅತಿನೇರಳೆ ಬೆಳಕಿನಲ್ಲಿಯ ಅವುಗಳ ನೋಟದಿಂದಾಗಿ ಯಶಸ್ವಿಯಾಗಿದೆ. ಹಕ್ಕಿಗಳೂ ಅತಿನೇರಳೆಯನ್ನು ನೋಡಬಲ್ಲವು. ಕೆಲವು ಹಕ್ಕಿಗಳ ತುಪ್ಪಳದ ಮೇಲೆ ಅವುಗಳ ಲಿಂಗದ ಚಿಹ್ನೆಯು ಕೇವಲ ಅತಿನೇರಳೆ ಬೆಳಕಿನಲ್ಲಿ ಮಾತ್ರ ಕಾಣಿಸುತ್ತದೆ.[೮][೯] ಅತಿನೇರಳೆ ವ್ಯಾಪ್ತಿಯಲ್ಲಿ ನೋಡುವ ಬಹಳ ಪ್ರಾಣಿಗಳು ಕೆಂಪು ಬೆಳಕು ಅಥವಾ ಬೇರೆ ಕೆಂಪು ಛಾಯೆಯ ತರಂಗಾಂತರಗಳನ್ನು ಕಾಣಲಾರವು. ದುಂಬಿಯ ದೃಗ್ಗೋಚರ ರೋಹಿತವು ಕಿತ್ತಳೆಯ ತರಂಗಾಂತರದ ಸ್ವಲ್ಪ ಮುಂಚೆ ೫೯೦nm ಗೆ ಮುಗಿಯುತ್ತದೆ.[೧೦] ಹಕ್ಕಿಗಳು ಕೆಂಪು ಛಾಯೆಯ ತರಂಗಾಂತರಗಳನ್ನು ನೋಡಬಲ್ಲವಾದರೂ ಮಾನವನಿಗೆ ದೃಗ್ಗೋಚರವಾದ ರೋಹಿತವನ್ನು ಕಾಣಲಾರವು.[೧೧] ನಾಯಿಗಳು ಸಾಮಾನ್ಯವಾಗಿ ವರ್ಣಾಂಧ ಎಂದು ತಿಳಿಯಲಾಗಿದೆ. ಆದರೂ ಮನುಷ್ಯನಷ್ಟಲ್ಲದಿದ್ದರೂ ಅವು ಬಣ್ಣಗಳಿಗೆ ಸ್ಪಂದಿಸುವುದನ್ನು ನೋಡಲಾಗಿದೆ.[೧೨]

ರೋಹಿತದ ಬಣ್ಣಗಳು

ಕಿರಿದಾದ ವ್ಯಾಪ್ತಿಯ ತರಂಗಾಂತರಗಳಿಂದಾದ ಬೆಳಕಿನಿಂದ ಉತ್ಪತ್ತಿಯಾದ ಬಣ್ಣಗಳನ್ನು "ಶುದ್ಧ ರೋಹಿತ ಬಣ್ಣಗಳು" ಎನ್ನುತ್ತಾರೆ. ಈ ನಿದರ್ಶನದಲ್ಲಿ ಅಂದಾಜಿನಮೇರೆಗೆ ವಿವಿಧ ಬಣ್ಣದ ಶ್ರೇಣಿಗಳನ್ನು ತೋರಿಸಿದೆ. ಇದು ಒಂದು ಬಣ್ಣ ಮತ್ತು ಇನ್ನೊಂದರ ನಡುವೆ ಯಾವುದೇ ಎಲ್ಲೆಯಿರದ ನಿರಂತರ ರೋಹಿತ.[೧೩]

sRGB rendering of the spectrum of visible light
ಬಣ್ಣತರಂಗಾಂತರಕಂಪನಾಂಕಫೋಟಾನ್ ಶಕ್ತಿ
ನೇರಳೆ೩೮೦-೪೫೦ nm೬೬೮-೭೮೯ THz೨.೭೫-೩.೨೬ eV
ನೀಲಿ೪೫೦-೪೯೫ nm೬೦೬-೬೬೮ THz೨.೫೦-೨.೭೫ eV
ಹಸಿರು೪೯೫-೫೭೦ nm೫೨೬-೬೦೬ THz೨.೧೭-೨.೫೦ eV
ಹಳದಿ೫೭೦-೫೯೦ nm೫೦೮-೫೨೬ THz೨.೧೦-೨.೧೭ eV
ಕಿತ್ತಳೆ೫೯೦-೬೨೦ nm೪೮೪-೫೦೮ THz೨.೦೦-೨.೧೦ eV
ಕೆಂಪು೬೨೦-೭೫೦ nm೪೦೦-೪೮೪ THz೧.೬೫-೨.೦೦ eV

ಸ್ಪೆಕ್ಟ್ರೋಸ್ಕೊಪಿ

ವಸ್ತುಗಳು ಹೊರಸೂಸುವ, ಹೀರುವ ಅಥವಾ ಪ್ರತಿಫಲಿಸುವ ಬಣ್ಣದಿಂದುಂಟಾಗುವ ರೋಹಿತದ ಮುಖಾಂತರ ಆಯಾ ವಸ್ತುಗಳನ್ನು ಅಧ್ಯಯನ ಮಾಡುವ ವಿಜ್ಞಾನದ ವಿಭಾಗಕ್ಕೆ ಸ್ಪೆಕ್ಟ್ರೋಸ್ಕೊಪಿ ಎನ್ನುತ್ತಾರೆ. ಖಗೋಳಶಾಸ್ತ್ರದಲ್ಲಿ ಸ್ಪೆಕ್ಟ್ರೋಸ್ಕೊಪಿಯು ಒಂದು ಅತಿಮುಖ್ಯ ಪರೀಕ್ಷಣಾ ಸಾಧನ. ಇದರಿಂದ ವಿಜ್ಞಾನಿಗಳು ಅತಿದೂರದ ಆಕಾಶಕಾಯಗಳನ್ನು ಅಭ್ಯಸಿಸುತ್ತಾರೆ. ಹೀಲಿಯಂ ಧಾತುವನ್ನು ಸೂರ್ಯನ ರೋಹಿತದ ವಿಶ್ಲೇಷಣೆಯಿಂದ ಪತ್ತೆಮಾಡಲಾಯಿತು. ಆಕಾಶಕಾಯಗಳಲ್ಲಿನ ರಾಸಾಯನಿಕ ವಸ್ತುಗಳನ್ನು ಅವುಗಳ ಉತ್ಸರ್ಜನಾ ರೇಖೆಗಳು ಮತ್ತು ಹೀರುಕೆ ರೇಖೆಗಳಿಂದ ಪತ್ತೆಮಾಡಬಹುದು.

ಉಲ್ಲೇಖಗಳು