ನ್ಯೂಕ್ಲಿಯಿಕ್ ಆಮ್ಲ


ನ್ಯೂಕ್ಲಿಯಿಕ್ ಆಮ್ಲಗಳು[ಟಿಪ್ಪಣಿ ೧] ಜೈವಿಕಪಾಲಿಮರ್‌ಗಳು ಅಥವಾ ದೊಡ್ಡ ಜೈವಿಕಅಣುಗಳು ಮತ್ತು ಇಂದು ತಿಳಿದ ಎಲ್ಲಾ ಜೀವಿಗಳಿಗೂ ಅಗತ್ಯವಾದವು. ನ್ಯೂಕ್ಲಿಯಿಕ್ ಆಮ್ಲಗಳು ಡಿಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ ಅಥವಾ ಡಿಎನ್ಎ ಮತ್ತು ರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಆರ್‌ಎನ್‌ಎಗಳನ್ನು ಒಳಗೊಂಡಿದ್ದು ನ್ಯೂಕ್ಲಿಯೊಟೈಡ್ ಎಂದು ಕರೆಯಲಾದ ಮೊನೊಮರ್‌ಗಳಿಂದ [ಟಿಪ್ಪಣಿ ೨] ತಯಾರಾಗಿವೆ. ಪ್ರತಿ ನ್ಯೂಕ್ಲಿಯೋಟೈಡ್‌ ಮೂರು ಭಾಗಗಳನ್ನು ಒಳಗೊಂಡಿದ್ದು ಅವು ಒಂದು ೫-ಇಂಗಾಲ ಸಕ್ಕರೆ, ಒಂದು ಪಾಸ್ಪೇಟ್‌ ಗುಂಪು ಮತ್ತು ಒಂದು ಸಾರಜನಕದ ಬೇಸ್‌ ಅಥವಾ ಪ್ರತ್ಯಾಮ್ಲ. ಸಕ್ಕರೆಯು ಡಿಆಕ್ಸಿರೈಬೊಸ್ ಆದರೆ ಪಾಲಿಮರ್‌ನ್ನು ಡಿಎನ್ಎ ಎಂದು ಮತ್ತು ಸಕ್ಕರೆ ರೈಬೊಸ್ ಆದರೆ ಪಾಲಿಮರ್‌ನ್ನು ಆರ್‌ಎನ್ಎ ಎಂದು ಕರೆಯಲಾಗುತ್ತದೆ. ಈ ಮೂರು ಗುಂಪುಗಳು ಜೊತೆಗೂಡಿದಾಗ ನ್ಯೂಕ್ಲಿಯೊಟೈಡ್‌ ಆಗುತ್ತದೆ. ನ್ಯೂಕ್ಲಿಯಿಕ್ ಆಮ್ಲ ಈ ನ್ಯೂಕ್ಲಿಯೊಟೈಡ್‌ಗಳ ಸರಣಿ. ನ್ಯೂಕ್ಲಿಯೊಟೈಡ್‌ಗಳನ್ನು ಪಾಸ್ಟೇಟ್ ನ್ಯೂಕ್ಲಿಯೊಟೈಡ್‌ಗಳು ಎಂದು ಸಹ ಕರೆಯಲಾಗುತ್ತದೆ.
ನ್ಯೂಕ್ಲಿಯಿಕ್ ಆಮ್ಲಗಳು ಬಹಳ ಮುಖ್ಯವಾದ ಜೈವಿಕ ಬೃಹತ್‌ಅಣುಗಳಲ್ಲಿ ಒಂದು ಮತ್ತು ಎಲ್ಲಾ ಜೀವವುಳ್ಳ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೊರಕುತ್ತವೆ. ಅಲ್ಲಿ ಅವು ಅನುವಂಶಿಕ ಮಾಹಿತಿಯನ್ನು ಸಂಕೇತಿಸುವ, ವರ್ಗಾಯಿಸುವ ಮತ್ತು ಅಭಿವ್ಯಕ್ತಿಸುವ ಕೆಲಸ ಮಾಡುತ್ತವೆ. ಮಾಹಿತಿಯನ್ನು ಡಿಎನ್ಎ ಅಥವಾ ಆರ್‌ಎನ್ಎ ಅಣುಗಳಲ್ಲಿ ನ್ಯೂಕ್ಲಿಯೊಟೈಡ್‌ನ ಅನುಕ್ರಮದ ಮೂಲಕ ರವಾನಿಸಲಾಗುತ್ತದೆ. ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿದ ನ್ಯೂಕ್ಲಿಯೋಟೈಡ್‌ನ ತಂತುಗಳು ಅನುವಂಶಿಕ ಮಾಹಿತಿಯನ್ನು ಪ್ರೋಟೀನ್ ಸಂಯೋಜನೆಯ ಮೂಲಕ ದಾಸ್ತಾನು ಮಾಡುವ ಮತ್ತು ವರ್ಗಾಯಿಸುವ ಯಂತ್ರಾಂಗ.
ನ್ಯೂಕ್ಲಿಯಿಕ್ ಆಮ್ಲವನ್ನು ಪ್ರಿಢ್ರಿಕ್ ಮೆಸ್ಕರ್‌ ೧೮೬೯ರಲ್ಲಿ ಕಂಡುಹಿಡಿದ.[೩] ನ್ಯೂಕ್ಲಿಯಿಕ್ ಆಮ್ಲದ ಮೇಲಿನ ಅಧ್ಯಯನವು ಜೀವಶಾಸ್ತ್ರ ಮತ್ತು ವೈದ್ಯಕೀಯ ಸಂಶೋದನೆಯ ಪ್ರಮುಖ ಭಾಗ ಮತ್ತು ಜೀನೋಮ್ ವಿಜ್ಞಾನ, ಫೊರ್ಸೆನಿಕ್ ವಿಜ್ಞಾನ, ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಮತ್ತು ಔಷದ ಕೈಗಾರಿಕೆಗಳಿಗೆ ಆಧಾರವಾಗಿದೆ.[೪][೫][೬]

ಎರಡು ಪ್ರಮುಖ ನ್ಯೂಕ್ಲಿಯಿಕ್ ಆಮ್ಲಗಳ ನಡುವೆ ಹೋಲಿಕೆ: ಆರ್‌ಎನ್ಎ (ಎಡ) ಮತ್ತು ಡಿಎನ್ಎ (ಬಲ), ಎರಡೂ ಬಳಸುವ ಎಳೆ ಮತ್ತು ನ್ಯೂಕ್ಲಿಯೊಬೇಸ್‌ಗಳು
ಸ್ವಿಸ್ ವಿಜ್ಞಾನಿ ಪ್ರಿಢ್ರಿಕ್ ಮೆಸ್ಕರ್‌ ನ್ಯೂಕ್ಲಿಯಿಕ್ ಆಮ್ಲವನ್ನು (ಡಿಎನ್ಎ) ೧೮೬೯ರಲ್ಲಿ ಕಂಡುಹಿಡಿದ[೧]. ನಂತರ ಅದಕ್ಕೆ ಅನುವಂಶಿಕತೆಯೊಂದಿಗೆ ಸಂಬಂಧ ಇರಬಹುದೆಂದು ಸೂಚಿಸಿದ.[೨]

ಹೆಸರು ಮತ್ತು ಆಸ್ತಿತ್ವದ ರೂಪ[೭]


ನ್ಯೂಕ್ಲಿಯಿಕ್ ಆಮ್ಲ ಹೆಸರನ್ನು ಜೈವಿಕ ಪಾಲಿಮರ್‌ನ ಕುಂಟುಬದ ಸದಸ್ಯರುಗಳಾದ ಡಿಎನ್ಎ ಮತ್ತು ಆರ್‌ಎನ್‌ಎಗಳಿಗೆ ಕೊಡಲಾಗಿದೆ[೮] ಮತ್ತು ಪಾಲಿನ್ಯೂಕ್ಲಿಯೊಟೈಡ್ ಇದರ ಇನ್ನೊಂದು ಹೆಸರು. ಇದು ಮೊದಲು ಬೀಜಕಣ ಅಥವಾ ನ್ಯೂಕ್ಲಿಯಸ್ ಒಳಗೆ ದೊರೆತ ಕಾರಣಕ್ಕೂ ಮತ್ತು ಅವುಗಳಲ್ಲಿ ಪಾಸ್ಟೇಟ್ ಇರುವ ಕಾರಣಕ್ಕೂ ನ್ಯೂಕ್ಲಿಯಿಕ್ ಯಾಸಿಡ್ (ನ್ಯೂಕ್ಲಿಯಿಕ್‌ ಆಮ್ಲಗಳ ಇಂಗ್ಲೀಶ್ ಸಂವಾದಿ ಪದ) ಎನ್ನುವ ಹೆಸರು ಕೊಡಲಾಯಿತು[೯]. ಇದನ್ನು ಮೊದಲು ಯೂಕ್ಯಾರಿಯೋಟ್‌ ಜೀವಕೋಶಗಳಲ್ಲಿ ಗುರುತಿಸಲಾಯಿತಾದರೂ ಇದು ಬ್ಯಾಕ್ಟೀರಿಯ, ಆರ್ಕಿಯ, ವೈರಾಣು ಮತ್ತು ವೈರಾಯ್ಡ್‌ಗಳಲ್ಲದೆ ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯ ಮತ್ತು ಹರಿದ್ರೇಣುಗಳಲ್ಲಿಯೂ (ಕ್ಲೋರೋಪ್ಲಾಸ್ಟ್) ಸಹ ಇರುತ್ತದೆ[೧೦] (ನೆನಪಿರಲಿ: ವೈರಾಣುಗಳು ಜೀವಂತ ಪದಾರ್ಥಗಳೊ ಅಥವಾ ನಿರ್ಜೀವ ಪದಾರ್ಥಗಳೊ ಎಂಬುದರ ಬಗೆಗೆ ಚರ್ಚೆ ಇದೆ). ನ್ಯೂಕ್ಲಿಯಿಕ್ ಆಮ್ಲಗಳನ್ನು ಪ್ರಯೋಗಾಲಯದಲ್ಲಿ ಕೆಲವು ಕಿಣ್ವಗಳನ್ನು ಬಳಸಿ ತಯಾರಿಸಲಾಗಿದೆ.[೧೧] ರಾಸಾಯನಿಕ ಪದ್ಧತಿಗಳ ಮೂಲಕ ಪ್ರಕೃತಿಯಲ್ಲಿ ಕಂಡುಬರದ ಬದಲಾದ ನ್ಯೂಕ್ಲಿಯಿಕ್‌ ಆಮ್ಲಗಳನ್ನು ತಯಾರಿಸ ಬಹುದು,[೧೨] ಉದಾ. ಪೆಪ್‌ಟೈಡ್ ನ್ಯೂಕ್ಲಿಯಿಕ್ ಆಮ್ಲ.

ಅಣು ಸ್ವರೂಪ ಮತ್ತು ಗಾತ್ರ[೧೩]

ಆರ್‌ಎನ್ಎ ರಸಾಯನಿಕ ರಚನೆ: ಸಕ್ಕರೆಯ ಅಣು ಭಾಗಕ್ಕೆ ಸಂಖ್ಯೆ ಕೊಟ್ಟಿದ್ದು, ದಿಕ್ಕನ್ನು ಸಹ ಸೂಚಿಸಲಾಗಿದೆ.[ಟಿಪ್ಪಣಿ ೩]


ನ್ಯೂಕ್ಲಿಯಿಕ್ ಆಮ್ಲಗಳು ಸಾಮಾನ್ಯವಾಗಿ ದೊಡ್ಡ ಅಣುಗಳು. ವಾಸ್ತವದಲ್ಲಿ ಡಿಎನ್ಎ ಅಣು ಬಹುಶಹ ತಿಳಿದ ಅಣುಗಳಲೆಲ್ಲಾ ಅತ್ಯಂತ ದೊಡ್ಡದು. ಚೆನ್ನಾಗಿ ಅಧ್ಯಯನ ಮಾಡಿದ ಡಿಎನ್ಎ ಅಣುವಿನ ಗಾತ್ರದ ವಾಪ್ತಿ ೨೧ ನ್ಯೂಕ್ಲಿಯೊಟೈಡ್‌ಗಳಿಂದ ದೊಡ್ಡ ವರ್ಣತಂತುಗಳವರೆಗೆ ಇದೆ ( ಮಾನವನ ವರ್ಣತಂತು I ಒಂದೇ ಅಣು ಮತ್ತು ಇದರಲ್ಲಿ ೨೪.೭ ಕೋಟಿ ಬೇಸ್ ಜೋಡಿಗಳಿವೆ[೧೪])
ಬಹಳಷ್ಟು ಸಂದರ್ಭಗಳಲ್ಲಿ ಪ್ರಕೃತಿಯಲ್ಲಿ ಕಾಣಬರುವ ಡಿಎನ್ಎ ಅಣು ಎರಡು ಎಳೆಯಗಳದು ಮತ್ತು ಆರ್‌ಎನ್ಎ ಅಣು ಒಂದೇ ಎಳೆಯದು.[೧೫] ಇದಕ್ಕೆ ಸಾಕಷ್ಟು ಅಪವಾದಗಳಿವೆ, ಆದರೆ ಕೆಲವು ವೈರಾಣುಗಳ ಜೀನೋಮ್ ಎರಡು ಎಳೆಯ ಆರ್‌ಎನ್‌ಎಯಿಂದ ಆಗಿದೆ ಮತ್ತು ಇನ್ನು ಕೆಲವು ವೈರಾಣುಗಳಲ್ಲಿ ಒಂದು ಎಳೆಯ ಡಿಎನ್ಎ ಜೀನೋಮ್ ಇದೆ[೧೬]. ಕೆಲವು ಸಂದರ್ಭಗಳಲ್ಲಿ ಮೂರು ಅಥವಾ ನಾಲ್ಕು ಎಳೆಗಳ ನ್ಯೂಕ್ಲಿಯಿಕ್ ಆಮ್ಲದ ರಚನೆಯಾಗ ಬಹುದು.[೧೭]
ನ್ಯೂಕ್ಲಿಯಿಕ್‌ ಆಮ್ಲ ರೇಖೆರೀತಿಯ ನ್ಯೂಕ್ಲಿಯೊಟೈಡ್‌ಗಳ ಸರಪಣಿ. ಪ್ರತಿ ನ್ಯೂಕ್ಲಿಯೊಟೈಡ್‌ನಲ್ಲಿ ಒಂದು ಪೆಂಟೋಸ್‌ ಸಕ್ಕರೆ, ಒಂದು ಫಾಸ್ಪೇಟ್‌ ಗುಂಪು ಮತ್ತು ಒಂದು ನ್ಯೂಕ್ಲಿಯೊಬೇಸ್ ಇರುತ್ತದೆ. ನ್ಯೂಕ್ಲಿಯೊಬೇಸ್ ಪುರಿನ್ ಆಗಿರಬಹುದು ಅಥವಾ ಪಿರಿಮಿಡಿನ್ (ವಾಸ್ತವದಲ್ಲಿ ಅದು ಸಾರಜನಕದ ಬೇಸ್ ಅಥವಾ ಪ್ರತ್ಯಾಮ್ಲ. ಆದರೆ ಸಾಮಾನ್ಯವಾಗಿ ಬೇಸ್ ಎಂದೇ ಕರೆಯಲಾಗುತ್ತದೆ). ನ್ಯೂಕ್ಲಿಯೊಬೇಸ್ ಮತ್ತು ಸಕ್ಕರೆ ಸೇರಿದರೆ ಅದಕ್ಕೆ ನ್ಯೂಕ್ಲಿಯೊಸೈಡ್‌ ಎಂದು ಹೆಸರು. ಡಿಎನ್ಎ ಮತ್ತು ಆರ್‌ಎನ್ಎ ಎರಡರಲ್ಲೂ ಇರುವ ನ್ಯೂಕ್ಲಿಯೊಬೇಸ್‌ಗಳು ಅಡೆನಿನ್ (A), ಸೈಟೊಸಿನ್ (C), ಗ್ವಾನಿನ್ (G). ತೈಮಿನ್ (T) ಡಿಎನ್ಎಯಲ್ಲಿ ಮಾತ್ರ ಇರುತ್ತದೆ ಮತ್ತು ಆರ್‌ಎನ್ಎಯಲ್ಲಿ ಯುರಾಸಿಲ್ (U) ಮಾತ್ರ. ಅಡೆನಿನ್‌ ಮತ್ತು ಗ್ವಾನಿನ್‌ಗಳು ಪುರಿನ್‌ಗಳು ಮತ್ತು ಸಿಸ್ಟೊಸಿನ್, ತೈಮಿನ್ ಹಾಗೂ ಯರಾಸಿಲ್‌ಗಳು ಪಿರಿಮಿಡಿನ್‌ಗಳು.
ನ್ಯೂಕ್ಲಿಯಿಕ್ ಆಮ್ಲದ ಸಕ್ಕರೆಗಳು ಮತ್ತು ಫಾಸ್ಪೇಟ್‌ಗಳು ಒಂದರ ನಂತರ ಒಂದು ಬದಲಿ ಸರಪಳಿಯಾಗಿ (ಇದು ಎಳೆಯ ಸಕ್ಕರೆ-ಫಾಸ್ಪೇಟ್ ಬೆನ್ನೆಲುಬು) ಫಾಸ್ಪೊಡಯಿಸ್ಟರ್‌ ಬಾಂಡ್‌ನಿಂದ ಬಂಧಿತವಾಗಿವೆ.[೧೩] ಸಂಪ್ರದಾಯಿಕ ಹೆಸರಿಸುವಿಕೆಯ ಪ್ರಕಾರ ಫಾಸ್ಪೇಟ್ ಗುಂಪು ಅಂಟಿಕೊಳ್ಳುವುದು ಕಾರ್ಬನ್ (ಇಂಗಾಲ) ೩’ (೩ ಪ್ರೈಮ್)-ಕೊನೆ ಮತ್ತು ೫’ ಕೊನೆಗಳಿಗೆ. ಇದು ನ್ಯೂಕ್ಲಿಯಿಕ್ ಆಮ್ಲಕ್ಕೆ ದಿಕ್ಕನ್ನು ಕೊಡುತ್ತದೆ (ಚಿತ್ರ ನೋಡಿ). ನ್ಯೂಕ್ಲಿಯೊಬೇಸ್‌ಗಳ ಸಾರಜನಕ ಬಳೆಯು (ಪಿರಿಡಿನ್‌ಗಳಲ್ಲಿ N-೧ ಮತ್ತು ಪಿರಿನ್‌ಗಳಲ್ಲಿ N-೯) ಸಾರಜನಕ-ಗೈಕೊಸಿಡಿಕ್ ಬಾಂಡ್ ಮೂಲಕ ಸಕ್ಕರೆಯ ಐದು ಸಕ್ಕರೆಯ ಬಳೆಯ ೧’ ಕಾರ್ಬನ್‌ನೊಂದಿಗೆ ಬಂಧನ ಏರ್ಪಡುತ್ತದೆ.
ಪ್ರಮಾಣಕವಲ್ಲದ ನ್ಯೂಕ್ಲಿಯೊಸೈಡ್‌ಗಳು ಆರ್‌ಎನ್ಎ ಮತ್ತು ಡಿಎನ್ಎ ಎರಡರಲ್ಲೂ ಕಂಡುಬಂದಿದ್ದು ಸಾಮಾನ್ಯವಾಗಿ ಡಿಎನ್ಎ ಅಣು ಒಳಗಿನ ಪ್ರಮಾಣಕ ನ್ಯೂಕ್ಲಿಯೊಸೈಡ್‌ಗಳ ಮಾರ್ಪಡಿನಿಂದ ಅಥವಾ ಪ್ರಾಥಮಿಕ (ಆರಂಭಿಕ) ಆರ್‌ಎನ್ಎ ಲಿಪ್ಯಂತರದಿಂದ ಬರುತ್ತವೆ. ಟ್ರಾನ್ಸ್‌ಫರ್ ಆರ್‌ಎನ್ಎ ಅಣುಗಳಲ್ಲಿ ವಿಶೇಷವಾಗಿ ದೊಡ್ಡ ಸಂಖ್ಯೆಯ ಮಾರ್ಪಡಿಸಿದ ನ್ಯೂಕ್ಲಿಯೊಸೈಡ್‌ಗಳು ಕಂಡುಬರುತ್ತವೆ.[೧೮]

ಅಣು ಸಂಘಟಿತವಾದ ರೀತಿ


ಎರಡು ಎಳೆಯ ನ್ಯೂಕ್ಲಿಯಿಕ್ ಆಮ್ಲವು ಪೂರಕ ಸರಣಿಗಳನ್ನು ಹೊಂದಿದ್ದು ಅವು ವ್ಯಾಪಕ ವ್ಯಾಟ್ಸನ್-ಕ್ರೀಕ್ ಬೇಸ್ ಜೋಡಿಯ ಮೂಲಕ ಬಂಧಿತವಾಗುತ್ತವೆ. ಈ ಮಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ಪುನರಾವರ್ತನೆ ಮತ್ತು ಒಂದೇ ರೀತಿಯ ಎರಡು ಎಳೆಗಳ ಮೂರು ಆಯಾಮಗಳ ರಚನೆ ದೊರೆಯುತ್ತದೆ.[೧೯] ಇದಕ್ಕೆ ಭಿನ್ನವಾಗಿ ಒಂದು ಎಳೆಯ ಆರ್‌ಎನ್ಎ ಮತ್ತು ಡಿಎನ್ಎ ಅಣುಗಳು ಎರಡು ಎಳೆಗಳ ರಚನೆಗೇ ಸೀಮಿತವಾಗಿಲ್ಲ. ಎಳೆಯ ಸಣ್ಣ ಭಾಗವು ಅಣುವಿನ ನಡುವೆ (ಜೊಡಣೆಯು ವ್ಯಾಟ್ಸಣ್-ಕ್ರೀಕ್ ರೀತಿಯದು ಅಥವಾ ಇತರ ಅಧಿಕೃತವಲ್ಲದ ಜೋಡಣೆಯೂ ಆಗಿರ ಬಹುದು) ಬೇಸ್-ಜೋಡಿಯಾದ ಭಾಗವು ತೀರ ಸಂಕೀರ್ಣವಾದ ಮೂರು ಆಯಾಮಗಳ ರಚನೆ ಪಡೆಯ ಬಹುದು. ಅಲ್ಲದೆ ಇದು ಮೂರನೆಯ ರೀತಿಯ ಸಂಕೀರ್ಣ ಅಂತರಕ್ರಿಯೆಗೂ ಒಳಗಾಗಬಹುದು.[೨೦]
ನ್ಯೂಕ್ಲಿಯಿಕ್ ಆಮ್ಲದ ಅಣುಗಳಿಗೆ ಸಾಮಾನ್ಯವಾಗಿ ಕವಲುಗಳಿರುವುದಿಲ್ಲ ಮತ್ತು ರೇಖೆರೀತಿಯ ಅಥವಾ ಚಕ್ರಾಕಾರದ ಅಣುಗಳಾಗಿ ಕಾಣಿಸಿ ಕೊಳ್ಳಬಹುದು. ಉದಾಹರಣೆಗೆ ಬ್ಯಾಕ್ಟೀರಿಯ ವರ್ಣತಂತುಗಳು ಹಾಗೂ ಪ್ಲಾಸ್ಮಿಡ್‌, ಮೈಟೋಕಾಂಡ್ರಿಯ ಮತ್ತು ಹರಿದ್ರೇಣುವಿಗಳಲ್ಲಿ ಸಾಮಾನ್ಯವಾಗಿ ಎರಡು ಎಳೆಗಳ ಚಕ್ರಾಕಾರದ ಡಿಎನ್ಎ ಇರುತ್ತದೆ. ಆದರೆ ಯೂಕ್ಯಾರಿಯೋಟ್‌ ಬೀಜಕಣದಲ್ಲಿರುವ ವರ್ಣತಂತುಗಳ ಡಿಎನ್ಎ ಅಣುಗಳು ಸಾಮಾನ್ಯವಾಗಿ ರೇಖೆರೀತಿಯವು ಮತ್ತು ಎರಡು ಎಳೆಗಳಿರುವವು ಆಗಿರುತ್ತವೆ.[೨೧] ಬಹಳಷ್ಟು ಆರ್‌ಎನ್ಎ ಅಣುಗಳು ರೇಖೆ ರೀತಿಯವು ಮತ್ತು ಒಂದೇ ಎಳೆಯುವು ಆಗಿರುತ್ತವೆ. ಆದರೆ ಆರ್‌ಎನ್ಎ ಜೋಡಣೆಯ ಕ್ರಿಯೆಯಲ್ಲಿ ಚಕ್ರಾಕಾರದ ಮತ್ತು ಕವಲಿರುವ ಆರ್‌ಎನ್ಎ ಅಣುಗಳು ರೂಪಗೊಳ್ಳ ಬಹುದು.[೭]

ನ್ಯೂಕ್ಲಿಯಿಕ್ ಆಮ್ಲ ಅನುಕ್ರಮ


ಒಂದು ಡಿಎನ್ಎ ಅಥವಾ ಆರ್‌ಎನ್ಎ ಅಣು ಇನ್ನೊಂದರಿಂದ ಮೂಲಭೂತವಾಗಿ ನ್ಯೂಕ್ಲಿಯೊಟೈಡ್ ಅನುಕ್ರಮದಲ್ಲಿ ಭಿನ್ನವಾಗುತ್ತವೆ. ನ್ಯೂಕ್ಲಿಯೊಟೈಡ್ ಅನುಕ್ರಮಗಳು ಜೀವಶಾಸ್ತ್ರದಲ್ಲಿ ಬಹಳ ಮಹತ್ವ ಪಡೆದಿವೆ. ಏಕೆಂದರೆ ಅವು ಎಲ್ಲಾ ಜೈವಿಕ ಅಣುಗಳು, ಅಣು ಜೋಡಣೆಗಳು, ಜೀವಕೋಶದೊಳಗಿನ ಮತ್ತು ಜೀವಕೋಶದ ರಚನೆ, ಅಂಗಗಳು ಮತ್ತು ಒಟ್ಟಾರೆ ಜೀವಿಗಳ ಬಗೆಗಿನ ಕಟ್ಟಕಡೆಯ ಸೂಚನೆಗಳು. ಅಲ್ಲದೆ ಅವು ನೇರವಾಗಿ ಅರಿವು, ನೆನಪು ಮತ್ತು ವರ್ತನೆಯನ್ನು ಸಾಧ್ಯವಾಗುವಂತೆ ಮಾಡುತ್ತವೆ. ಡಿಎನ್ಎ ಮತ್ತು ಆರ್‌ಎನ್ಎ ಅಣುಗಳ ನ್ಯೂಕ್ಲಿಯೊಟೈಡ್ ಅನುಕ್ರಮವನ್ನು ನಿರ್ಣಯಿಸುವ ಪ್ರಾಯೋಗಿಕ ಪದ್ಧತಿಗಳನ್ನು ಅಭಿವೃದ್ಧಿ ಪಡಿಸಲು ಅಪಾರ ಶ್ರಮವಹಿಸಲಾಗಿದೆ.[೨೨][೨೩] ಇಂದು ಜಗತ್ತಿನಾದ್ಯಂತ ಜೀನೋಮ್ ಕೇಂದ್ರಗಳು ಮತ್ತು ಸಣ್ಣ ಪ್ರಯೋಗಾಲಯಗಳಲ್ಲಿ ದಿನವೂ ನೂರಾರು ದಶಲಕ್ಷ ನ್ಯೂಕ್ಲಿಯೊಟೈಡ್‌ಗಳ ಅನುಕ್ರಮವನ್ನು ನಿರ್ಣಯಿಸಲಾಗುತ್ತಿದೆ. ಇದಲ್ಲದೆ ರಾಷ್ಟ್ರೀಯ ಬಯೊಟೆಕ್ನಾಲಜಿ ಮಾಹಿತಿ ಕೇಂದ್ರವು (NCBI-ಯುನೈಟೆಡ್ ಸ್ಟೇಟ್ಸ್ ಅಫ್ ಅಮೆರಿಕದ ಸಂಸ್ಥೆ) ನ್ಯೂಕ್ಲಿಯಿಕ್ ಆಮ್ಲಗಳ ಸರಣಿಯ ದತ್ತಾಂಶ ಇರುವ ಜೆನ್‌ಬ್ಯಾಂಕ್ ಪೋಷಿಸುತ್ತಿದೆ, ಅಲ್ಲದೆ ಎನ್‌ಸಿಬಿಐ ವೆಬ್‌ ಸೈಟ್‌ ಮೂಲಕ ಜೆನ್‌ಬ್ಯಾಂಕ್‌ನ ದತ್ತಾಂಶದ ಆಕರಗಳ ವಿಶ್ಲೇಷಣೆ ಮತ್ತು ಮರಳಿ ಪಡಿಯುವಿಕೆಯ ಅನುಕೂಲ ಒದಗಿಸಿದೆ.[೨೪]

ನ್ಯೂಕ್ಲಿಯಿಕ್ ಆಮ್ಲಗಳ ನಮೂನೆಗಳು

ಡೈಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ

ಡಿಎನ್ಎ ಅಣು ರಚನೆ: ಡಿಎನ್‌ಎ ಎರಡು ಎಳೆಗಳು ಪ್ರತಿ-ಸಮಾಂತರವಾಗಿ (೫’ ಕೊನೆಯೊಂದಿಗೆ ೩’ಕೊನೆ ಮತ್ತು ೩’ ಕೊನೆಯೊಂದಿಗೆ ೫’) ಸೇರುವುದನ್ನು ತೋರಿಸುತ್ತದೆ.[ಟಿಪ್ಪಣಿ ೪]

ಪ್ರಮುಖ ಲೇಖನ: ಡಿಎನ್ಎ
ಡೈಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ ಇಂದು ತಿಳಿದ ಎಲ್ಲಾ ಜೀವಿಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯ ಅನುವಂಶಿಕತೆಯ ಮಾಹಿತಿಯನ್ನು ಹೊಂದಿದ ಒಂದು ನ್ಯೂಕ್ಲಿಯಿಕ್ ಆಮ್ಲ. ಈ ಅನುವಂಶಿಕ ಮಾಹಿತಿ ಇರುವ ಡಿಎನ್‌ಎ ಭಾಗಕ್ಕೆ ವಂಶವಾಹಿ ಎಂದು ಕರೆಯಲಾಗಿದೆ. ಹಾಗೆಯೇ ಇತರ ಡಿಎನ್ಎ ಸರಣಿಗಳಿಗೆ ರಾಚನಿಕ ಕೆಲಸಗಳಿವೆ ಅಥವಾ ಅವು ಅನುವಂಶಿಕ ಮಾಹಿತಿ ಬಳಸುವುದನ್ನು ನಿಯಂತ್ರಿಸುತ್ತವೆ. ಡಿಎನ್ಎ ನ್ಯೂಕ್ಲಿಯೊಟೈಡ್‌ಗಳೆಂಬ ಸರಳ ಘಟಕಗಳಿರುವ ಎರಡು ಉದ್ದನೆಯ ಪಾಲಿಮರ್‌ಗಳನ್ನು [ಟಿಪ್ಪಣಿ ೫] ಒಳಗೊಂಡಿದೆ. ಇದರ ಬೆನ್ನೆಲುಬಾಗಿ ಈಸ್ಟರ್ ಬಾಂಡ್‌ನಿಂದ ಬಂಧಿತವಾದ ಸಕ್ಕರೆ ಮತ್ತು ಪಾಸ್ಪೇಟ್ ಗುಂಪು ಇವೆ. ಎರಡು ಎಳೆಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ ಹೀಗಾಗಿ ಇವನ್ನು ಪ್ರತಿ-ಸಮಾಂತರ ಎಂದು ಕರೆಯಲಾಗಿದೆ (ಪ್ರತಿ-ಸಮಾಂತರ ಜೋಡಣೆಗೆ ಚಿತ್ರ ನೋಡಿ). ಬೆನ್ನಲಿಬಿನೊಂದಿಗೆ ನಾಲ್ಕು ನ್ಯೂಕ್ಲಿಯೋಬೇಸ್‌ಗಳ ಸರಣಿ ಮಾಹಿತಿಯನ್ನು ಸಂಕೇತಿಸುತ್ತದೆ. ಡಿಎನ್ಎ ಭಾಗವು ಓದುವುದರೊಂದಿಗೆ, ಸಂಬಂಧಿತ ನ್ಯೂಕ್ಲಿಯಿಕ್ ಆಮ್ಲ, ಆರ್‌ಎನ್ಎ ಲಿಪ್ಯಂತರ (ಮತ್ತು ಅನುವಾದ) ಎಂದು ಕರೆಯಲಾದ ಪ್ರಕ್ರಿಯೆಯಲ್ಲಿ ತಯಾರಾಗುತ್ತದೆ. ಜೀವಕೋಶದೊಳಗೆ ಡಿಎನ್ಎ ವರ್ಣತಂತು ಎಂದು ಕರೆಯಲಾದ ಉದ್ದನೆಯ ರಚನೆಗಳಲ್ಲಿ ವ್ಯವಸ್ಥಿತಗೊಂಡಿದೆ. ಕೋಶ ವಿಭಜನೆಯ ಸಮಯದಲ್ಲಿ ಈ ವರ್ಣತಂತುಗಳು ಡಿಎನ್ಎ ನಕಲಾಗುವ ಪ್ರಕ್ರಿಯೆ ಭಾಗವಾಗಿ ನಕಲಾಗಿ ಪ್ರತಿ ಜೀವಕೋಶಕ್ಕೂ ಪೂರ್ಣ ಸಂಖ್ಯೆಯ ವರ್ಣತಂತುಗಳನ್ನು ಕೊಡುತ್ತವೆ. ಯೂಕ್ಯಾರಿಯೋಟ್ ಜೀವಿಗಳು (ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರ ಮತ್ತು ಪ್ರೊಟಿಸ್ಟ್‌ಗಳು) ಬಹುತೇಕ ಡಿಎನ್ಎಯನ್ನು ಜೀವಕೋಶದ ಬೀಜಕಣದಲ್ಲಿ ದಾಸ್ತಾನು ಮಾಡುತ್ತವೆ ಮತ್ತು ಅಲ್ಪ ಪ್ರಮಾಣದ ಡಿಎನ್ಎ ಮೈಟೋಕಾಂಡ್ರಿಯ ಅಥವಾ ಹರಿದ್ರೇಣುಗಳಂತಹ ಅಂಗಕಗಳಲ್ಲಿ ಇದೆ. ಇದಕ್ಕೆ ಭಿನ್ನವಾಗಿ ಪ್ರೋಕ್ಯಾರಿಯೋಟ್‌ಗಳಲ್ಲಿ (ಬ್ಯಾಕ್ಟೀರಿಯ ಮತ್ತು ಅರ್ಕಿಯ) ಡಿಎನ್ಎ ಜೀವರಸದಲ್ಲಿ ಇರುತ್ತದೆ. ವರ್ಣತಂತುಗಳ ಒಳಗೆ ಹಿಸ್ಟೋನ್‌ಗಳಂತ ಕ್ರೊಮಾಟಿನ್ ಪ್ರೋಟೀನ್‌ಗಳು ಡಿಎನ್ಎಯನ್ನು ಒತ್ತಾಗಿ ಸೇರಿಸುತ್ತವೆ ಮತ್ತು ವ್ಯವಸ್ಥಿತಗೊಳಿಸುತ್ತವೆ. ಈ ಒತ್ತಾದ ರಚನೆ ಡಿಎನ್ಎ ಯಾವ ಭಾಗ ಲಿಪ್ಯಂತರಗೊಳ್ಳುತ್ತದೆ ಎಂಬುದನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ಡಿಎನ್ಎ ಮತ್ತು ಇತರ ಪ್ರೋಟೀನ್‌ಗಳ ನಡುವಿನ ಅಂತರ್‌ಕ್ರಿಯೆಯ ಮಾರ್ಗದರ್ಶನ ಮಾಡುತ್ತದೆ,

ರೈಬೊನ್ಯೂಕ್ಲಿಯಿಕ್ ಆಮ್ಲ

ಪ್ರಮುಖ ಲೇಖನ: ಆರ್‌ಎನ್ಎ
ರೈಬೊನ್ಯೂಕ್ಲಿಯಿಕ್ ಆಮ್ಲ ವಂಶವಾಹಿಗಳಲ್ಲಿರುವ ಅನುವಂಶಿಕ ಮಾಹಿತಿಯನ್ನು ಅಮಿನೊ ಆಮ್ಲಗಳ ಸರಣಿಗಳಾಗಿ (ಪ್ರೋಟೀನ್) ಪರಿವರ್ತಿಸುವ ಕೆಲಸ ಮಾಡುತ್ತವೆ. ಮೂರು ಸಾರ್ವತ್ರಿಕ ನಮೂನೆಯ ಆರ್‌ಎನ್ಎಗಳು ಟ್ರಾನ್ಸ್‌ಫರ್ ಆರ್‌ಎನ್ಎ (ಟಿಆರ್‌ಎನ್ಎ), ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ) ಮತ್ತು ರೈಬೋಸೋಮ್‌ ಆರ್‌ಎನ್ಎಗಳನ್ನು (ಆರ್‌ಆರ್‌ಎನ್ಎ) ಒಳಗೊಂಡಿವೆ. ಮೆಸೆಂಜರ್ ಆರ್‌ಎನ್ಎ: ಇದು ಅನುವಂಶಿಕತೆ ಸರಣಿಯ ಮಾಹಿತಿಯನ್ನು ಡಿಎನ್ಎ ಮತ್ತು ರೈಬೋಸೋಮ್‌ಗಳ ನಡುವೆ ರವಾನಿಸುತ್ತದೆ. ರೈಬೋಸೋಮ್ ಆರ್‌ಎನ್ಎ: ರೈಬೋಸೋಮ್‌ನ ಪ್ರಮುಖ ಅಂಗ ಮತ್ತು ಪೆಪ್‌ಟೈಡ್ ಬಾಂಡ್ ರೂಪಗೊಳ್ಳುವಲ್ಲಿ ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಟ್ರಾನ್ಸ್‌ಫರ್ ಆರ್‌ಎನ್ಎ: ಪ್ರೋಟಿನ್ ಸಂಯೋಜನೆಯಲ್ಲಿ ಅಮಿನೊ ಆಮ್ಲಗಳನ್ನು ಸಾಗಿಸುವ ಕೆಲಸ ಮಾಡುತ್ತದೆ ಮತ್ತು ಎಂಆರ್‌ಎನ್ಎ ಸಂಕೇತವನ್ನು ಬಿಡಿಸುವ ಹೊಣೆ ಹೊತ್ತಿದೆ. ಇವಲ್ಲದೆ ಇತರ ಆರ್‌ಎನ್ಎ ವರ್ಗಗಳೂ ಇವೆ.

ನ್ಯೂಕ್ಲಿಯಿಕ್ ಆಮ್ಲ ಹೋಲಿಕೆಗಳು


ಕೃತ್ರಿಮ ನ್ಯೂಕ್ಲಿಯಿಕ್ ಆಮ್ಲ ಹೋಲಿಕೆಗಳನ್ನು ರಸಾಯನಶಾಸ್ತ್ರಜ್ಞರು ರಚಿಸಿದ್ದಾರೆ ಮತ್ತು ಸಂಯೋಜಿಸಿದ್ದಾರೆ. ಇವು ಪೆಪ್‌ಟೈಡ್ ನ್ಯೂಕ್ಲಿಯಿಕ್ ಆಮ್ಲ, ಮೊರ್ಫೊಲಿನೊ, ಲಾಕ್ಡ್ ನ್ಯೂಕ್ಲಿಯಿಕ್ ಆಮ್ಲ, ಗೈಸೊಲ್ ನ್ಯೂಕ್ಲಿಯಿಕ್ ಆಮ್ಲ ಮತ್ತು ಥ್ರೆಯೊಸ್ ನ್ಯೂಕ್ಲಿಯಿಕ್ ಆಮ್ಲಗಳನ್ನು ಒಳಗೊಂಡಿದೆ. ಈ ಪ್ರತಿಯೊಂದು ಆಮ್ಲಗಳೂ ನೈಸರ್ಗಿಕವಾಗಿ ಕಾಣಬರುವ ಡಿಎನ್ಎ ಮತ್ತು ಆರ್‌ಎನ್ಎಗಳಿಂದ ಬೆನ್ನಲಿಬಿನ ಅಣುಗಳಲ್ಲಿನ ಬದಲಾವಣೆಯಿಂದ ಭಿನ್ನವಾಗಿವೆ.

ಟಿಪ್ಪಣಿಗಳು

ಉಲ್ಲೇಖಗಳು

ಗ್ರಂಥಸೂಚಿ

  • Wolfram Saenger, Principles of Nucleic Acid Structure, 1984, Springer-Verlag New York Inc.
  • Bruce Alberts, Alexander Johnson, Julian Lewis, Martin Raff, Keith Roberts, and Peter Walter Molecular Biology of the Cell, 2007, ISBN 978-0-8153-4105-5. Fourth edition is available online through the NCBI Bookshelf: link
  • Jeremy M Berg, John L Tymoczko, and Lubert Stryer, Biochemistry 5th edition, 2002, W H Freeman. Available online through the NCBI Bookshelf: link
  • Astrid Sigel, Helmut Sigel and Roland K. O. Sigel, eds. (2012). Interplay between Metal Ions and Nucleic Acids. Metal Ions in Life Sciences 10. Springer. doi:10.1007/978-94-007-2172-2. ISBN 978-94-007-2171-5.