ಬೇಲಿಹಂದಿ

ಬೇಲಿಹಂದಿಯು ಮ್ಯಾಮೇಲಿಯ ವರ್ಗ, ಇನ್ಸೆಕ್ಟಿವೊರ ಗಣದ ಎರಿನೇಸೈಯಿಡೀ ಕುಟುಂಬಕ್ಕೆ ಸೇರಿದ ಎರಿನೇಸಿಯಸ್, ಹೆಮಿಎಕೈನಸ್ ಮತ್ತು ಪ್ಯಾರಎಕೈನಸ್ ಜಾತಿಯ ಸಸ್ತನಿ ಪ್ರಾಣಿ. ಮುಳ್ಳುಹಂದಿ ಪರ್ಯಾಯ ನಾಮ. ಈ ಗುಂಪಿನ ಪ್ರಾಣಿಗಳು ಕೀಟಭಕ್ಷಿಗಳು. ಇವನ್ನು ಇಂಗ್ಲಿಷಿನಲ್ಲಿ ಹೆಜ್‌ಹಾಗ್ಸ್ ಎಂದು ಕರೆಯಲಾಗುತ್ತದೆ. ಈ ಪ್ರಾಣಿಗಳ ಲಕ್ಷಣವೆಂದರೆ ಮೈಮೇಲೆ ಬಿರುಸಾದ ಮುಳ್ಳುಗಳಿರುವುದು.[೨]

ಬೇಲಿಹಂದಿಗಳು[೧]
Temporal range: Late Eocene – Recent
PreꞒ
O
S
D
C
P
T
J
K
Pg
N
ಯೂರೋಪಿಯನ್ ಬೇಲಿಹಂದಿ
Scientific classification e
ಕ್ಷೇತ್ರ:ಯೂಕ್ಯಾರ್ಯೋಟಾ
ಸಾಮ್ರಾಜ್ಯ:ಅನಿಮೇಲಿಯ
ವಿಭಾಗ:ಕಾರ್ಡೇಟಾ
ವರ್ಗ:ಮ್ಯಾಮೇಲಿಯಾ
ಗಣ:ಯೂಲಿಪೊಟೈಫ಼್ಲಾ
ಕುಟುಂಬ:ಎರಿನೇಸೈಯಿಡೀ
ಉಪಕುಟುಂಬ:ಎರಿನೇಸೈಯಿನೀ
G. Fischer, 1814
Type genus
ಎರಿನೇಸಿಯಸ್
Linnaeus, 1758
ಜಾತಿಗಳು
  • ಅಟೆಲೆರಿಕ್ಸ್
  • ಎರಿನೇಸಿಯಸ್
  • ಹೆಮಿಎಕೈನಸ್
  • ಮೀಸೆಕೈನಸ್
  • ಪ್ಯಾರಾಎಕೈನಸ್

ಎರಿನೇಸಿಯಸ್ ಜಾತಿಯ ವ್ಯಾಪ್ತಿ

ಎರಿನೇಸಿಯಸ್ ಜಾತಿ ಬಲು ವಿಶಾಲ ವ್ಯಾಪ್ತಿಯುಳ್ಳದ್ದು. ಬ್ರಿಟಿಷ್ ದ್ವೀಪಗಳಿಂದ ಹಿಡಿದು ಯೂರೊಪಿನಾದ್ಯಂತವೂ, ರಷ್ಯ, ಕೊರಿಯ, ಉತ್ತರ ಹಾಗೂ ಪೂರ್ವ ಚೀನಗಳಲ್ಲೂ, ಏಷ್ಯ ಮೈನರ್, ಕಾಕಸಸ್ ಪ್ರದೇಶ, ಆಫ್ರಿಕದ ಮೊರಾಕೊ, ಲಿಬ್ಯ, ಅಂಗೋಲಗಳಲ್ಲೂ ಇದರ 6 ಪ್ರಭೇದಗಳನ್ನು ಕಾಣಬಹುದು.

ಯೂರೇಷ್ಯದ ಹೆಜ್‍ಹಾಗ್‍ನ ದೇಹರಚನೆ

ಬಲು ಮುಖ್ಯ ಪ್ರಭೇದ ಎ. ಯೂರೊಪಿಯಸ್ (ಯೂರೇಷ್ಯದ ಹೆಜ್‌ಹಾಗ್). ಇದು 135-270 ಮಿಮೀ ಉದ್ದದ ಪ್ರಾಣಿ. 10-50 ಮಿಮೀ ಉದ್ದದ ಬಾಲವುಂಟು. ವಯಸ್ಕ ಪ್ರಾಣಿಯ ತೂಕ 400-1100 ಗ್ರಾಮ್. ಮುಸುಡು, ಕಾಲು, ಉದರಭಾಗಗಳನ್ನು ಬಿಟ್ಟರೆ ಮೈಮೇಲೆಲ್ಲ ದಟ್ಟ ಮತ್ತು ಬಿರುಸು ಮುಳ್ಳುಗಳಿವೆ. ಮೈಬಣ್ಣ ಚಾಕಲೇಟ್ ಕಂದು. ಉದ್ದನೆಯ ಚೂಪುಮೂತಿ, ಕಿರಿಯಗಲದ ಕಿವಿಗಳು ಇದರ ಇನ್ನುಳಿದ ಲಕ್ಷಣಗಳು.

ಸ್ವಭಾವ

ಸಾಧಾರಣವಾಗಿ ಮೆಲುಗತಿಯಲ್ಲಿ ಓಲುತ್ತ ನಡೆಯುವ ಇದು ಅಗತ್ಯವಿದ್ದಲ್ಲಿ ವೇಗವಾಗಿ ಕೂಡ ಓಡಬಲ್ಲದು. ಮರ ಹತ್ತುವುದರಲ್ಲೂ ನೀರಿನಲ್ಲಿ ಈಜುವುದರಲ್ಲೂ ನಿಷ್ಣಾತ. ಮೈಮೇಲಿನ ಮುಳ್ಳುಗಳು ಶತ್ರುಗಳ ವಿರುದ್ಧ ರಕ್ಷಣೆಯೊದಗಿಸುವುದಲ್ಲದೆ, ಮರಗಿಡಗಳಿಂದ ಅಕಸ್ಮಾತ್ ಬಿದ್ದಾಗ ಮೆತ್ತೆಯಂತೆ ವರ್ತಿಸಿ ಪೆಟ್ಟಾಗುವುದನ್ನು ಕೂಡ ತಡೆಯುತ್ತದೆ. ಇದು ನಿಶಾಚರಿ.[೩] ಹಗಲಿನಲ್ಲಿ ಬಿಲಗಳಲ್ಲೊ ಕಲ್ಲು ಸಂದುಗಳಲ್ಲೊ ಅವಿತಿದ್ದು ರಾತ್ರಿ ವೇಳೆ ತನ್ನ ಎರೆಪ್ರಾಣಿಗಳಾದ ಹಲವು ವಿಧದ ಅಕಶೇರುಕಗಳನ್ನೂ ಕಪ್ಪೆ, ಹಾವು, ಓತಿ, ಸಣ್ಣಪುಟ್ಟ ಹಕ್ಕಿಗಳು, ಇಲಿ ಮುಂತಾದವನ್ನೂ ಹುಡುಕುತ್ತ ಅಲೆಯುತ್ತದೆ.

ಅಕ್ಟೋಬರಿನಿಂದ ಏಪ್ರಿಲ್ ತನಕ ಇದು ಶಿಶಿರಸ್ವಾಪದಲ್ಲಿ ತೊಡಗಿರುವುದುಂಟು. ಮೈಯನ್ನು ತನ್ನ ಜೊಲ್ಲಿನಿಂದ ಪೂಸಿಕೊಳ್ಳುವ ವಿಚಿತ್ರ ಪರಿಪಾಟಿಯನ್ನು ಇದು ಪ್ರದರ್ಶಿಸುತ್ತದೆ.[೪] ಯಾವುದೇ ವಸ್ತು ಸಿಕ್ಕಿದರೂ ಅದನ್ನು ನೆಕ್ಕುತ್ತ ನೆಕ್ಕುತ್ತ ಜೊಲ್ಲಿನ ನೊರೆಯನ್ನು ಉತ್ಪಾದಿಸಿಕೊಂಡು ಈ ನೊರೆಯಿಂದ ಮುಳ್ಳುಗಳ ಮೇಲೆ ಸವರಿಕೊಳ್ಳುತ್ತದೆ. ಶತ್ರುಗಳಿಂದ ರಕ್ಷಿಸಿಕೊಳ್ಳುವ ಮಾರ್ಗ ಎಂದರೆ ಚಂಡಿನಂತೆ ಸುತ್ತಿಕೊಳ್ಳುವುದು.

ಸಂತಾನವೃದ್ಧಿ

ಇದು ವರ್ಷದ ಯಾವ ಕಾಲದಲ್ಲಾದರೂ ಸಂತಾನವೃದ್ಧಿ ಮಾಡಬಲ್ಲುದಾದರೂ ಚಳಿಪ್ರದೇಶಗಳಲ್ಲಿ ವರ್ಷಕ್ಕೆರಡು ಬಾರಿ ಮಾತ್ರ ಮರಿ ಹಾಕುತ್ತದೆ. ಗರ್ಭಾವಧಿಯ ಕಾಲ 34-49 ದಿನಗಳು, ಒಂದು ಸೂಲಿಗೆ ಸುಧಾರಣವಾಗಿ 4 ಮರಿಗಳು. ಹುಟ್ಟಿದಾಗ ಮರಿಗಳು ಕಣ್ಣು ತೆರೆದಿರುವುದಿಲ್ಲ;[೫] ಹುಟ್ಟಿದ 14-18 ದಿನಗಳ ತರುವಾಯ ಕಣ್ಣು ತೆರೆಯುತ್ತವೆ. ಏರಿನೇಸಿಯಸ್ ಮುಳ್ಳುಹಂದಿಗಳನ್ನು ಸಾಕಬಹುದು. ಇವುಗಳ ಆಯುಷ್ಯ ಸುಮಾರು 6 ವರ್ಷಗಳು.

ಇತರ ಜಾತಿಗಳು

ಹೆಮಿಎಕೈನಸ್ ಮತ್ತು ಪ್ಯಾರಎಕೈನಸ್ ಜಾತಿಯ ಮುಳ್ಳುಹಂದಿಗಳು ಭಾರತದಲ್ಲಿ ರಾಜಸ್ಥಾನದ ಮರುಭೂಮಿಯಲ್ಲಿ ಕಾಣದೊರೆಯುವುವು. ಇವುಗಳ ಜೀವನ ಕ್ರಮ ಎರಿನೇಸಿಯಸ್ ಜಾತಿಯದರಂತೆಯೇ ಇದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: