ಮುಳ್ಳುಹಂದಿ

ಮುಳ್ಳುಹಂದಿಯು ಹಂದಿಯಂತೆ ಮೈಮೇಲೆ ಮುಳ್ಳು ಇರುವ ಸಸ್ತನಿ ಪ್ರಾಣಿ. ಇದರಲ್ಲಿ ಹಲವಾರು ಪ್ರಭೇದಗಳಿವೆ.

ಮುಳ್ಳುಹಂದಿ
ಉತ್ತರ ಅಮೇರಿಕಾದ ಮುಳ್ಳುಹಂದಿ
ಉತ್ತರ ಅಮೇರಿಕಾದ ಮುಳ್ಳುಹಂದಿ
Scientific classification
Included groups
  • ಹಿಸ್ಟ್ರಿಸಿಡೀ (ಹಳೆ ಪ್ರಪಂಚದ ಮುಳ್ಳುಹಂದಿಗಳು)
  • ಎರೆತಿಜ಼ಾಂಟಿಡೀ (ಹೊಸ ಪ್ರಪಂಚದ ಮುಳ್ಳುಹಂದಿಗಳು)
Excluded groups
  • ಬಾತಿಎರ್ಗಾಯ್ಡಿಡೀ
  • ಬಾತಿಎರ್ಗಿಡೀ
  • ಮಯೋಫ಼ಯೋಮ್ಯಿಡೀ
  • ಡಯಾಮ್ಯಾಂಟೋಮ್ಯಿಡೀ
  • ಫ಼ಿಯೋಮ್ಯಿಡೀ
  • ಕೀನ್ಯಾಮ್ಯೀಡೀ
  • ಪೆಟ್ರೊಮ್ಯೂರಿಡೀ
  • ತ್ರೈಯೊನೋಮ್ಯಿಡೀ
  • ಚಿಂಚಿಲಿಡೀ
  • ನಿಯೊಎಪಿಬ್ಲೆಮಿಡೀ
  • ಡೈನೊಮ್ಯಿಡೀ
  • ಸೆಫ಼್ಯಾಲೊಮ್ಯಿಡೀ
  • ಈಯೊಕಾರ್ಡಿಯಿಡೀ
  • ಕಾವ್ಯಿಯಿಡೀ
  • ಡ್ಯಾಸಿಪ್ರಾಕ್ಟಿಡೀ
  • ಕ್ಯೂನಿಕ್ಯುಲಿಡೀ
  • ಟೆನೊಮ್ಯಿಡೀ
  • ಆಕ್ಟೊಡಾಂಟಿಡೀ
  • ಆಬ್ರೊಕೋಮಿಡೀ
  • ಎಕಿಮ್ಯಿಡೀ
  • ಮಯೋಕ್ಯಾಸ್ಟರಿಡೀ
  • ಕ್ಯಾಪ್ರೊಮ್ಯಿಡೀ
  • ಹೆಪ್ಟಾಕ್ಸೊಡಾಂಟಿಡೀ

ಮುಳ್ಳುಹಂದಿಗಳು ರಾಡೆಂಷಿಯ ಗಣದ ಹಿಸ್ಟ್ರಿಸಿಡೀ ಕುಟುಂಬಕ್ಕೆ ಸೇರಿದ ಹಿಸ್ಟ್ರಿಕ್ಸ್, ಅತಿರೂರಸ್, ಟ್ರೈಕಿಸ್ ಮುಂತಾದ ಜಾತಿಯ ಪ್ರಾಣಿಗಳು. ಈ ಗುಂಪಿನ ಪ್ರಾಣಿಗಳು ದಂಶಕಗಳು. ಇಲಿ, ಅಳಿಲು, ಮೊಲ ಮುಂತಾದವುಗಳ ಸಂಬಂಧಿಗಳು. ಪಾರ್ಕ್ಯುಪೈನ್ ಎಂಬ ಸಾಮಾನ್ಯ ಇಂಗ್ಲಿಷ್ ಹೆಸರುಳ್ಳ ಇವನ್ನು ಕನ್ನಡದಲ್ಲಿ ಕಣೆಹಂದಿಗಳೆಂದೂ ಕರೆಯಲಾಗುತ್ತದೆ.

ಮುಳ್ಳುಹಂದಿಗಳು ಮತ್ತು ಬೇಲಿಹಂದಿಗಳು, ಈ ಎರಡು ಗುಂಪಿನ ಪ್ರಾಣಿಗಳು ಪ್ರಾಣಿವೈಜ್ಞಾನಿಕವಾಗಿ ವಿಭಿನ್ನವಾಗಿದ್ದರೂ ಇವುಗಳಲ್ಲಿ ಕಾಣಬರುವ ಉಭಯಸಾಮಾನ್ಯ ಲಕ್ಷಣವೆಂದರೆ ಮೈಮೇಲೆ ಬಿರುಸಾದ ಮುಳ್ಳುಗಳಿರುವುದು.

ಹಿಸ್ಟ್ರಿಕ್ಸ್ ಜಾತಿಯ ವ್ಯಾಪ್ತಿ

ಹಿಸ್ಟ್ರಿಕ್ಸ್ ಜಾತಿಯ ಮುಳ್ಳುಹಂದಿಯಲ್ಲಿ ಸುಮಾರು 6 ಪ್ರಭೇದಗಳಿವೆ. ದಕ್ಷಿಣ ಯೂರೊಪ್, ಆಫ್ರಿಕ, ಭಾರತ, ಸುಮಾತ್ರ, ಜಾವ, ಬೋರ್ನಿಯೊಗಳ ಹಾಗೂ ಆಗ್ನೇಯ ಏಷ್ಯದ ಹಲಕೆಲವು ದ್ವೀಪಗಳ ಅರಣ್ಯಗಳು, ಬೆಟ್ಟಗಳು ಇವುಗಳ ಸ್ವಾಭಾವಿಕ ನೆಲೆಗಳು.

ದೇಹರಚನೆ

ಇವುಗಳ ದೇಹದ ಸರಾಸರಿ ಉದ್ದ 600-800 ಮಿಮೀ; ತೂಕ 18-30 ಕೆ.ಜಿ. ಸುಮಾರು 125-150 ಮಿಮೀ ಉದ್ದದ ಬಾಲ ಉಂಟು. ದೇಹದ ಮೇಲ್ಭಾಗ ದೃಢವೂ ಉದ್ದವೂ ಆದ ಟೊಳ್ಳು ಕಣೆಗಳ (ಮುಳ್ಳುಗಳ) ಕವಚದಿಂದ ಆವೃತವಾಗಿದೆ. ಇವುಗಳ ಬಣ್ಣ ಕಗ್ಗಂದು ಅಥವಾ ಕಪ್ಪು. ಪ್ರತಿಯೊಂದು ಮುಳ್ಳಿನುದ್ದಕ್ಕೂ ಬಿಳಿ ಇಲ್ಲವೆ ಹಳದಿ ಬಣ್ಣದ ಪಟ್ಟೆಗಳುಂಟು. ಅಲ್ಲಲ್ಲಿ ಪೂರ್ತಿ ಬಿಳಿಯ ಬಣ್ಣದ ಇನ್ನೂ ಹೆಚ್ಚು ಉದ್ದದ ಮುಳ್ಳುಗಳೂ ಇದೆ. ಕೆಲವು ಪ್ರಭೇದಗಳಲ್ಲಿ ಹೆಕ್ಕತ್ತಿನ ಮೇಲೂ ಮುಳ್ಳುಗಳಿವೆ. ಮೈಯಿಯ ತಳಭಾಗದಲ್ಲಿ ಒರಟಾದ, ನೆಟ್ಟನೆಯ ಬಿರುಗೂದಲುಗಳು ಮಾತ್ರ ಇವೆ. ಹುಟ್ಟುವ ಮರಿಗಳ ಮೈಮೇಲೂ ಮುಳ್ಳುಗಳಿರುವುವು. ಆದರೆ ಇವು ಮೃದುವಾಗಿದ್ದು ಸ್ವಲ್ಪಕಾಲದ ತರುವಾಯ ಬಿರುಸಾಗುವುವು.[೧] ಈ ಜಾತಿಯ ಮುಳ್ಳುಹಂದಿಗಳ ಮುಂಗಾಲುಗಳಲ್ಲಿ 4 ಬೆರಳುಗಳೂ ಹಿಂಗಾಲುಗಳಲ್ಲಿ 5 ಬೆರಳುಗಳೂ ಇವೆ.

ಆಹಾರ

ಇವು ನಿಶಾಚರಿಗಳು.[೨] ಇವುಗಳ ಆಹಾರ ಪ್ರಧಾನವಾಗಿ ತೊಗಟೆ, ಬೇರು, ಗೆಡ್ಡಗೆಣಸು, ಹಣ್ಣು ಇತ್ಯಾದಿ. ಸತ್ತಪ್ರಾಣಿಯ ದೇಹಗಳನ್ನೂ ಮೂಳೆ ದಂತಗಳನ್ನೂ ತಿನ್ನುವುದೆನ್ನಲಾಗಿದೆ.

ವೈರಿ ಎದುರಾದಾಗ

ವೈರಿಗಳೆದುರಾದಾಗ ಪಲಾಯನವೇ ರಕ್ಷಣೆಯ ಸಾಮಾನ್ಯ ಮಾರ್ಗ. ಆದರೆ ಹೀಗೆ ಓಡಿ ತಪ್ಪಿಸಿಕೊಳ್ಳುವುದು ಕಠಿಣ ಎನಿಸಿದಾಗ ಶತ್ರುವಿಗೆ ಬೆನ್ನಾಗಿ ನಿಂತು, ಕಣೆಗಳನ್ನು ನಿಮಿರಿಸಿಕೊಂಡು ಕಂಪಿಸುತ್ತದೆ.[೩] ಕಣೆಗಳು ಟೊಳ್ಳಾಗಿರುವುದರಿಂದ ಒಂದು ರೀತಿಯ ಕಟಕಟ ಸದ್ದು ಉಂಟಾಗುತ್ತದೆ.[೪] ವೈರಿ ಇನ್ನೂ ಹತ್ತಿರ ಬಂದರೆ ಕಣೆಗಳನ್ನು ಅದರತ್ತ ಎಸೆಯುವುದೂ ಉಂಟು.[೫]

ಸಂತಾನವೃದ್ಧಿ

ಇವುಗಳ ಸಂತಾನವೃದ್ಧಿ ಶ್ರಾಯ ವಸಂತ. ಒಂದು ಸೂಲಿಗೆ 1-4 ಮರಿಗಳು ಹುಟ್ಟುವುವು. ಗರ್ಭಾವಧಿ ಸುಮಾರು 112 ದಿನಗಳು. ಇವು ಸುಮಾರು 20 ವರ್ಷ ಬದುಕಿರುವುವು. ಇವುಗಳ ಮಾಂಸ ಬಲು ರುಚಿಕರವಾಗಿರುವುದೆನ್ನಲಾಗಿದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: