ಹಕ್ಕಿ ವಲಸೆ

ಋತುಗಳಿಗೆ ಅನುಗುಣವಾಗಿ ಹಲವು ಹಕ್ಕಿ ಪ್ರಭೇದಗಳು ನಿಯಮಿತವಾಗಿ ಹಾರಿ ಬೇರೆ ಪ್ರದೇಶಕ್ಕೆ ಪ್ರಯಾಣಮಾಡುವುದಕ್ಕೆ ಹಕ್ಕಿ ವಲಸೆ ಎನ್ನಲಾಗಿದೆ. ಹಕ್ಕಿ ಸ್ಥಳಾಂತರಗಳಿಗೆ ಆಹಾರ ಲಭ್ಯತೆ, ವಾಸಸ್ಥಾನ ಅಥವಾ ಹವಾಮಾನದಲ್ಲಿ ಬದಲಾವಣೆ ಸೇರಿರುತ್ತದೆ. ಆದರೆ ಇವು ಸಾಮಾನ್ಯವಾಗಿ ಕ್ರಮವಿಲ್ಲದ್ದು, ಅಥವಾ ಒಂದೇ ದಿಕ್ಕಿನಲ್ಲಿರುತ್ತವೆ. ಈ ಪ್ರವೃತ್ತಿಯನ್ನು ಅಲೆಮಾರಿತನ, ಆಕ್ರಮಣಗಳು, ಚದುರುವಿಕೆ ಅಥವಾ ಮುನ್ನುಗ್ಗುವಿಕೆ ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ಸಂಭವಿಸುವ ಋತುಗಳಿಗೆ ಅನುಗುಣವಾಗಿ ಹಕ್ಕಿಗಳು ವಲಸೆ ಹೋಗುತ್ತವೆ.[೧] ಇದಕ್ಕೆ ತದ್ವಿರುದ್ಧವಾಗಿ, ವಲಸೆ ಹೋಗದ ಹಕ್ಕಿಗಳು ನಿವಾಸಿ ಅಥವಾ 'ಒಂದೇ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳು' ಎನ್ನಲಾಗಿದೆ.

ಶರತ್ಕಾಲದ ವಲಸೆಯ ಸಮಯ ಶೀತಲವಲಯದ ವರಟೆಗಳ ಗುಂಪು

ವಲಸೆಯ ಸಾಮಾನ್ಯ ಪ್ರವೃತ್ತಿಗಳು

ವಲಸೆಯ ಕೆಲವು ಮಾರ್ಗಗಳು

ಹಲವು ಹಕ್ಕಿಗಳು ನಿರ್ದಿಷ್ಟ ವಲಸೆ ಮಾರ್ಗದಲ್ಲಿ ಬಹು ದೂರದ ತನಕ ವಲಸೆ ಹೋಗುತ್ತವೆ. ಬಹಳ ಸಾಮಾನ್ಯ ಪ್ರವೃತ್ತಿಯೇನೆಂದರೆ, ವಸಂತ ಋತುವಿನಲ್ಲಿ ಹಕ್ಕಿಗಳು ಸಮಶೀತೋಷ್ಣದ ಅಥವಾ ಆರ್ಕ್ಟಿಕ್‌ ಬೇಸಿಗೆಯಲ್ಲಿ ಸಂತಾನವೃದ್ಧಿಗೆ ಉತ್ತರ ದಿಕ್ಕಿನತ್ತ ವಲಸೆ ಹೋಗುತ್ತವೆ. ಶರತ್ಕಾಲದಲ್ಲಿ ಅವು ಪುನಃ ಬೆಚ್ಚನೆಯ ಉಷ್ಣಾಂಶವುಳ್ಳ ದಕ್ಷಿಣ ದಿಕ್ಕಿಗೆ ವಾಪಸಾಗುತ್ತವೆ.ವಲಸೆ ಹೋಗುವ ಮುಖ್ಯ ಅನುಕೂಲವೇನೆಂದರೆ ಶಕ್ತಿಯ ಸಂರಕ್ಷಣೆ. ಉತ್ತರದ ದೀರ್ಘಾವಧಿಯ ಹಗಲು, ಸಂತಾನವೃದ್ಧಿಯ ಹಕ್ಕಿಗಳಿಗೆ ತಮ್ಮ ಮರಿಗಳಿಗೆ ಆಹಾರ ನೀಡಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ವಿಸ್ತರಿತ ಹಗಲಿನ ಅವಧಿಯಿಂದಾಗಿ, ವಲಸೆ ಹೋಗದೆ ವರ್ಷಪೂರ್ತಿ ಒಂದೆಡೆ ವಾಸಿಸುವ ಹಕ್ಕಿಗಳಿಗೆ ಹೋಲಿಸಿದರೆ, ದಿವಾಚರ ಹಕ್ಕಿಗಳು ಹೆಚ್ಚಿನ ಪ್ರಮಾಣದ ಮೊಟ್ಟೆಉತ್ಪಾದಿಸಲು ಅವಕಾಶ ಕಲ್ಪಿಸುತ್ತದೆ. ಶರತ್ಕಾಲದಲ್ಲಿ ಹಗಲಿನ ಅವಧಿ ಕಡಿಮೆಯಾಗುತ್ತಾ ಹೋದಾಗ, ಋತು ಬದಲಾವಣೆಗಳ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆಹಾರ ಪೂರೈಕೆಯಲ್ಲಿ ವ್ಯತ್ಯಾಸವಾಗದ ಬೆಚ್ಚನೆಯ ವಲಯಗಳಿಗೆ ಹಕ್ಕಿಗಳು ವಾಪಸಾಗುತ್ತವೆ.ಹೆಚ್ಚಿನ ಒತ್ತಡ, ದೈಹಿಕ ಶ್ರಮ ಹಾಗು ವಲಸೆಯ ಇತರೆ ಅಪಾಯಗಳನ್ನು ಈ ಅನುಕೂಲಗಳು ಶಮನಗೊಳಿಸುತ್ತವೆ. ವಲಸೆ ನಡೆಯುವ ಸಮಯದಲ್ಲಿ ಬೇಟೆಯ ಸಾಧ್ಯತೆ ಹೆಚ್ಚು. ಮೆಡಿಟರೇನಿಯನ್‌ ದ್ವೀಪಗಳಲ್ಲಿ ಸಂತಾನವೃದ್ಧಿ ಮಾಡುವ ಇಲಿಯೊನೊರಾ ಡೇಗೆ, ವರ್ಷದಲ್ಲಿ ಬಹಳ ತಡವಾಗಿ ಸಂತಾನವೃದ್ಧಿ ಋತುವನ್ನು ಹೊಂದಿರುತ್ತದೆ. ಗುಬ್ಬಚ್ಚಿ ಗಾತ್ರದ ಪ್ಯಾಸರೀನ್‌ ಹಕ್ಕಿಯು ಶರತ್ಕಾಲದಲ್ಲಿ ವಲಸೆ ಹೋಗುವುದೂ ಇದೇ ಋತುವಿನಲ್ಲಿ. ಹಾಗಾಗಿ ಇಲಿಯೊನೊರಾ ಡೇಗೆ ಪ್ಯಾಸರೀನ್‌ ಹಕ್ಕಿಯನ್ನು ಬೇಟೆಯಾಡಿ ತನ್ನ ಮರಿಗಳಿಗೆ ಆಹಾರವಾಗಿ ನೀಡುತ್ತವೆ. ಇದೇ ರೀತಿ, ಗ್ರೇಟರ್‌ ನಾಕ್ಟೂಲ್‌ ಬಾವಲಿಯು ಇರುಳಿನ ಹೊತ್ತು ವಲಸೆ ಹೋಗುವ ಪ್ಯಾಸರೀನ್‌ ಹಕ್ಕಿಗಳನ್ನು ಬೇಟೆಯಾಡುತ್ತವೆ.[೨][೩][೪] ವಲಸೆ ಮಾರ್ಗ ಮಧ್ಯದಲ್ಲಿ ವಿಶ್ರಮಿಸುವ ಹಕ್ಕಿಗಳ ಸಾಂದ್ರತೆಗಳು ಬಹಳ ಹೆಚ್ಚಾದಲ್ಲಿ, ಪರಾವಲಂಬಿಗಳು ಮತ್ತು ರೋಗಕಾರಕಗಳಿಗೆ ಈಡಾಗಬಹುದು. ಇದರಿಂದಾಗಿ ಹಕ್ಕಿಗಳ ಶರೀರಗಳಲ್ಲಿ ಹೆಚ್ಚಿದ ಪ್ರತಿರಕ್ಷಣಾ ಪ್ರತಿಕ್ರಿಯೆಯ ಅವಶ್ಯಕತೆಯಿದೆ.[೫] ಒಂದು ಪ್ರಭೇದದೊಳಗೆ, ಎಲ್ಲಾ ಹಕ್ಕಿಗಳೂ ವಲಸೆ ಹೋಗುತ್ತವೆ ಎಂದು ಹೇಳಲಾಗದು. ಇದಕ್ಕೆ 'ಆಂಶಿಕ ವಲಸೆ' ಎನ್ನಲಾಗುತ್ತದೆ. ದಕ್ಷಿಣ ಭೂಖಂಡಗಳಲ್ಲಿ ಆಂಶಿಕ ವಲಸೆಯು ಬಹಳ ಸರ್ವೇಸಾಮಾನ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ, ಪ್ಯಾಸರೀನೇತರ ಹಕ್ಕಿಗಳಲ್ಲಿ 44%ರಷ್ಟು ಹಾಗು ಪ್ಯಾಸರೀನ್‌ ಪ್ರಭೇದಗಳಲ್ಲಿ 32%ರಷ್ಟು ಹಕ್ಕಿಗಳು ಆಂಶಿಕ ವಲಸೆಗಾರ ಹಕ್ಕಿಗಳಾಗಿವೆ.[೬] ಕೆಲವು ಪ್ರಭೇದಗಳಲ್ಲಿ, ಉನ್ನತ ಅಕ್ಷಾಂಶಗಳಲ್ಲಿರುವ ಹಕ್ಕಿಗಳು ವಲಸೆಯ ಪ್ರವೃತ್ತಿ ಹೊಂದಿರುತ್ತವೆ. ಚಳಿಗಾಲದಲ್ಲಿ ಇವು ಸಾಮಾನ್ಯವಾಗಿ ಕಡಿಮೆ ಅಕ್ಷಾಂಶದ ವಲಯಗಳತ್ತ ವಲಸೆ ಹೋಗುತ್ತವೆ. ಇತರೆ ಹಕ್ಕಿಗಳು ವರ್ಷಪೂರ್ತಿ ಕಾಯಂ ಆಗಿ ವಾಸಿಸುವ ಅಕ್ಷಾಂಶಗಳನ್ನು ವಲಸೆಹಕ್ಕಿಗಳು ದಾಟಿ ಹೋಗುತ್ತವೆ.ಅಲ್ಲಿ ಸೂಕ್ತ ಚಳಿಗಾಲದ ವಲಸೆ ಹಕ್ಕಿಗಳು ಈಗಾಗಲೇ ಆಕ್ರಮಿಸಿಕೊಂಡಿರಬಹುದು. ಈ ಪ್ರವೃತ್ತಿಗೆ ದಾಟಿ-ಹೋಗುವ ವಲಸೆ ಎನ್ನಲಾಗಿದೆ.[೭] ಹಕ್ಕಿಗಳ ಸಂಖ್ಯೆಯೊಳಗೇ, ವಯಸ್ಸಿನ ಶ್ರೇಣಿಗಳನ್ನು ಮತ್ತು ಲಿಂಗಗಳನ್ನು ಅವಲಂಬಿಸಿ ವಿಭಿನ್ನ ಕಾಲ ಮತ್ತು ವಲಸೆಯ ಪ್ರವೃತ್ತಿಗಳಿರಬಹುದು. ಉದಾಹರಣೆಗೆ, ಸ್ಕ್ಯಾಂಡಿನೇವಿಯಾದಲ್ಲಿ ಕೇವಲ ಹೆಣ್ಣು ಚ್ಯಾಫಿಂಚ್‌ (ಯುರೋಪಿಯನ್‌ ಫಿಂಚ್‌ ಹಕ್ಕಿ) ಹಕ್ಕಿ ಮಾತ್ರ ವಲಸೆ ಹೋಗುತ್ತವೆ; ಗಂಡು ಚ್ಯಾಫಿಂಚ್‌ ಹಕ್ಕಿಗಳು ಗೂಡಿನಲ್ಲೇ ಉಳಿಯುತ್ತವೆ. ಈ ಕಾರಣಕ್ಕಾಗಿಯೇ, ಗಂಡು ಚ್ಯಾಫಿಂಚ್‌ ಹಕ್ಕಿಗೆ ನಿರ್ದಿಷ್ಟವಾಗಿ ಕೊಯೆಲೆಬ್ ‌, ಅರ್ಥಾತ್‌ 'ಬ್ಯಾಚಲರ್‌ ಹಕ್ಕಿ' ಎನ್ನಲಾಗಿದೆ.

ಹಕ್ಕಿಗಳು ವಿಸ್ತಾರ ಪ್ರದೇಶಕ್ಕೆ ಹರಡಿಕೊಂಡು ಹಾರಲಾರಂಭಿಸುವ ಮೂಲಕ ಬಹುತೇಕ ವಲಸೆಗಳು ಆರಂಭವಾಗುತ್ತವೆ. ಕೆಲವು ನಿದರ್ಶನಗಳಲ್ಲಿ, ವಲಸೆಯು ಕಿರಿದಾದ ವಲಸಾ ವಲಯಗಳನ್ನು ಹೊಂದಿರುತ್ತದೆ. ಇವುಗಳನ್ನು ಸಾಂಪ್ರದಾಯಿಕ ಮಾರ್ಗಗಳು ಎಂದು ನಿರ್ಣಯಿಸಲಾಗಿದ್ದು, 'ವಲಸೆಯ ನಿರ್ದಿಷ್ಟ ಮಾರ್ಗಗಳು' ಎನ್ನಲಾಗಿದೆ. ಈ ಮಾರ್ಗಗಳು ಸಾಮಾನ್ಯವಾಗಿ ಪರ್ವತ-ಶ್ರೇಣಿಗಳು ಅಥವಾ ಸಮುದ್ರತೀರಗಳಾಗಿರುತ್ತವೆ. ಹಕ್ಕಿಗಳು ಮೇಲೇರುವ ಒತ್ತಡದ ಗಾಳಿ ಮತ್ತು ಇತರೆ ಗಾಳಿ ನಮೂನೆಗಳ ಅನುಕೂಲಗಳನ್ನು ಪಡೆಯುತ್ತವೆ ಅಥವಾ ತೆರೆದ ನೀರಿನ ವಿಸ್ತಾರವಾದ ಜಲಪ್ರದೇಶ ಮುಂತಾದ ಭೌಗೋಳಿಕ ಅಡೆತಡೆಗಳನ್ನು ತಪ್ಪಿಸಿ ತಮ್ಮ ವಲಸೆಯ ಮಾರ್ಗದಲ್ಲಿ ಸಾಗುತ್ತವೆ. ಇಂತಹ ವಿಶಿಷ್ಟ ಮಾರ್ಗಗಳನ್ನು ಅನುಸರಿಸುವುದು ಹಕ್ಕಿಗಳಲ್ಲಿ ಅನುವಂಶಿಕವಾಗಿ ಯೋಜಿತ ಅಥವಾ ಕಾಲಾನಂತರದಲ್ಲಿ ವಿವಿಧ ಮಟ್ಟದ ಕುಶಲತೆಯಲ್ಲಿ ಕಲಿತಿರುತ್ತವೆ. ಹಕ್ಕಿಗಳು ತಮ್ಮ ವಲಸೆಯ ಸ್ಥಳದತ್ತ ಸಾಗುವ ಮತ್ತು ಅಲ್ಲಿಂದ ವಾಪಸಾಗುವ ಮಾರ್ಗಗಳು ಸಾಮಾನ್ಯವಾಗಿ ಭಿನ್ನವಾಗಿರುತ್ತವೆ.[೫]

ದೊಡ್ಡ ಗಾತ್ರದ ಅನೇಕ ಹಕ್ಕಿಗಳು ಗುಂಪಿನಲ್ಲಿ ಹಾರುತ್ತವೆ. ಗುಂಪಿನಲ್ಲಿ ಹಾರುವುದರಿಂದ, ಹಾರಲು ಕಡಿಮೆ ಶಕ್ತಿಯ ಅಗತ್ಯವಿರುತ್ತದೆ. ಹಲವು ದೊಡ್ಡ ಹಕ್ಕಿಗಳು V ಆಕಾರದಲ್ಲಿ ಹಾರುತ್ತವೆ. ಇದರಿಂದ, ಪ್ರತಿಯೊಂದು ಹಕ್ಕಿಯೂ ತಾನು ಒಂಟಿಯಾಗಿ ಹಾರಲು ಬೇಕಾದ 12-20% ಹೆಚ್ಚುವರಿ ಶಕ್ತಿಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ.[೮][೯] ರೆಡಾರ್‌ ಅಧ್ಯಯನಗಳ ಪ್ರಕಾರ, ರೆಡ್‌ ನಾಟ್ ಹಕ್ಕಿಗಳು‌ ಕ್ಯಾಲಿಡ್ರಿಸ್‌ ಕ್ಯಾನುಟಸ್‌ (Calidris canutus) ಹಾಗು ಡನ್ಲಿನ್‌ ಹಕ್ಕಿಗಳು ಕ್ಯಾಲಿಡ್ರಿಸ್‌ ಅಲ್ಪಿನಾ (Calidris alpina) ಗುಂಪಿನಲ್ಲಿ ಹಾರಿದಾಗ, ಒಂಟಿಯಾಗಿ ಹಾರುವ ವೇಗಕ್ಕಿಂತಲೂ, ಗಂಟೆಗೆ ಐದು ಕಿಲೋಮೀಟರ್‌ಗಳಷ್ಟು ವೇಗವಾಗಿ ಹಾರುತ್ತಿದ್ದದ್ದು ಕಂಡುಬಂದಿದೆ.[೫]

ವಲಸೆಯ ಸಮಯ, ಹಕ್ಕಿಗಳು ವಿವಿಧ ಎತ್ತರಗಳಲ್ಲಿ ಹಾರುತ್ತವೆ. ಮೌಂಟ್‌ ಎವರೆಸ್ಟ್‌ ಪರ್ವತಾರೋಹಣ ಸಮಯದಲ್ಲಿ 5000 ಮೀಟರ್‌ (16,400 ಅಡಿ) ಎತ್ತರದ ಖುಂಬು ಹಿಮನದಿಯಲ್ಲಿ ಪಿನ್‌ಟೈಲ್ ಹಾಗೂ ಕಪ್ಪುಬಾಲದ ಗಾಡ್‌ವಿಟ್ ಗಳ ಆಸ್ಥಿಪಂಜರಗಳು ಪತ್ತೆಯಾಗಿದ್ದವು.[೧೦] ಸನಿಹದಲ್ಲಿ 3000 ಮೀಟರ್‌ (10000 ಅಡಿ) ಕಡಿಮೆ ಎತ್ತರದ ಹಾದಿಗಳು ಲಭ್ಯವಿದ್ದರೂ, ಬಾರ್-ಹೆಡೆಡ್ ಗೀಸ್ ಹಿಮಾಲಯ ಪರ್ವತಶ್ರೇಣಿಯ ಅತ್ಯಂತ ಎತ್ತರದ ಶಿಖರಗಳು - 8000 ಮೀಟರ್‌ (29000 ಅಡಿ) ಎತ್ತರದ ಶಿಖರಗಳ ಮೇಲೆ ಹಾರುವುದು ಕಂಡುಬಂದಿದೆ.[೧೧] ಕಡಲಹಕ್ಕಿಗಳು ನೀರ ಮೇಲೆ ಕಡಿಮೆ ಎತ್ತರದಲ್ಲಿ ಹಾದುಹೋಗುತ್ತವೆ, ಆದರೆ ನೆಲದ ಮೇಲೆ ಹಾರಿಹೋಗುವಾಗ ಎತ್ತರದಲ್ಲಿ ಹಾರುತ್ತವೆ. ಭೂಹಕ್ಕಿಗಳಲ್ಲಿ ಇದರ ವಿರುದ್ಧದ ಪ್ರವೃತ್ತಿ ಕಂಡುಬಂದಿದೆ.[೧೨][೧೩] ಆದರೂ, ಹಕ್ಕಿಯ ವಲಸೆ ಹಾರುವಿಕೆಯಲ್ಲಿ ಬಹಳಷ್ಟು ಸುಮಾರು 150 ಮೀಟರ್‌ (500 ಅಡಿ) ಇಂದ 600 ಮೀಟರ್‌ (2000 ಅಡಿ) ಎತ್ತರದ ಶ್ರೇಣಿಯಲ್ಲಿರುತ್ತವೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಮಾನಕ್ಕೆ ಹಕ್ಕಿಯು ಢಿಕ್ಕಿ ಹೊಡೆದ ದಾಖಲೆಗಳಲ್ಲಿ ಬಹಳಷ್ಟು 600 ಮೀಟರ್‌ (2000 ಅಡಿ) ಎತ್ತರಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಸಂಭವಿಸಿವೆ. 1800 ಮೀಟರ್‌ (6000 ಅಡಿ) ಎತ್ತರಕ್ಕಿಂತಲೂ ಎತ್ತರದ ಮಟ್ಟದಲ್ಲಿ ಯಾವುದೇ ಹಕ್ಕಿ-ಢಿಕ್ಕಿ ಹೊಡೆದ ಘಟನೆಗಳು ಸಂಭವಿಸಿಲ್ಲ.[೧೪] ಇದಕ್ಕೆ ತದ್ವಿರುದ್ಧವಾಗಿ, ಪೆಂಗ್ವಿನ್‌ ಹಕ್ಕಿಯ ಬಹಳಷ್ಟು ಪ್ರಭೇದಗಳು ಈಜಿ ವಲಸೆ ಹೋಗುತ್ತವೆ. ಈ ಮಾರ್ಗಗಳು ಸುಮಾರು 1000 ಕಿ.ಮೀ. ದೂರದವರೆಗೂ ವ್ಯಾಪಿಸಬಹುದು. ನೀಲಿ ಗ್ರೌಸ್‌ ಹಕ್ಕಿ (ಕೋಳಿ ಜಾತಿಗೆ ಸೇರಿದ ಹಕ್ಕಿ) ಡೆಂಡ್ರಾಗಾಪಸ್‌ ಆಬ್ಸ್ಕರಸ್‌ ಎತ್ತರದ ಪ್ರದೇಶಗಳಿಗೆ ತನ್ನ ವಲಸೆಯ ಬಹಳಷ್ಟು ಕಾಲದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತದೆ. ಆಸ್ಟ್ರೇಲಿಯಾ ದೇಶದಲ್ಲಿ ಎಮು ಹಕ್ಕಿಗಳು ಅನಾವೃಷ್ಟಿಯ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಬಹಳಷ್ಟು ದೂರ ಕ್ರಮಿಸುವುದು ಕಂಡುಬಂದಿದೆ.[೫]

ಐತಿಹಾಸಿಕ ದೃಷ್ಟಿಕೋನಗಳು

ಹೆಸಿಯೊಡ್‌, ಹೊಮರ್‌, ಹೆರೊಡೊಟಸ್‌, ಅರಿಸ್ಟಾಟಲ್‌ ಮತ್ತು ಇತರರು ಗಮನಿಸಿದಂತೆ, ಹಕ್ಕಿ ವಲಸೆಯ ಅತ್ಯಂತ ಹಳೆಯ ದಾಖಲಿತ ಅವಲೋಕನಗಳು ಸುಮಾರು 3000 ವರ್ಷ ಹಳೆಯದ್ದಾಗಿದ್ದವು. ಬೈಬಲ್‌ ಸಹ ಇಂತಹ ವಲಸೆಗಳನ್ನು ಗಮನಿಸಿದ್ದುಂಟು. ಬುಕ್‌ ಆಫ್‌ ಜಾಬ್‌ (39:26)ನಲ್ಲಿ ತಿಳಿಸಿದ ಪ್ರಕಾರ, ವಿಚಾರಣಾತ್ಮಕ ಪ್ರಶ್ನೆಯೊಂದನ್ನು ಕೇಳಲಾಗಿದೆ: 'ಹದ್ದು ತನ್ನ ರೆಕ್ಕೆಗಳನ್ನು ದಕ್ಷಿಣದತ್ತ ಹರಡಿ, ನಿನ್ನ ಬುದ್ಧಿವಂತಿಕೆಯಂತೆ ಹಾರುವುದೇ?' ಜೆರೆಮಿಯಾ (8:7) ಬರೆದದ್ದು ಹೀಗೆ: 'ಸ್ವರ್ಗದಲ್ಲಿರುವ ಬಕಪಕ್ಷಿಯು ತನ್ನ ನಿಗದಿತ ಸಮಯವನ್ನು ಗೊತ್ತುಮಾಡಿಕೊಂಡಿರುತ್ತದೆ; ಅಂತೆಯೇ, ಆಮೆಪಾರಿವಾಳ, ಕೊಕ್ಕರೆ, ಕವಲುತೋಕೆ ಹಕ್ಕಿ (ಸ್ವಾಲೋ), ಅವುಗಳ ಆಗಮನವನ್ನು ಗಮನಿಸುತ್ತದೆ.' ಕೊಕ್ಕರೆಗಳು ಸಿಥಿಯಾದ ಸ್ಟೆಪ್‌ಗಳಿಂದ (ಯುರೋಪ್‌ನ ಸಮತಟ್ಟಾದ ಹುಲ್ಲುಗಾವಲು ಬಯಲು ಪ್ರದೇಶ) ನೈಲ್‌ ನದಿಯ ಜೌಗು ಪ್ರದೇಶದ ವರೆಗೆ ವಲಸೆ ಹೋಗುತ್ತಿದ್ದನ್ನು ಅರಿಸ್ಟಾಟಲ್ ಗಮನಿಸಿದ್ದರು. ಪ್ಲಿನಿ ದಿ ಎಲ್ಡರ್ ತನ್ನ ಕೃತಿ ಹಿಸ್ಟರಿಕಾ ನ್ಯಾಚುರಲಿಸ್‌ ನಲ್ಲಿ ಅರಿಸ್ಟಾಟಲ್‌ನ ಅವಲೋಕನಗಳನ್ನು ಪುನರಾವರ್ತಿಸುತ್ತಾರೆ. ಆದರೆ, ಕವಲುತೋಕೆ ಹಕ್ಕಿ ಹಾಗೂ ಇತರೆ ಹಕ್ಕಿಗಳು ಚಳಿಗಾಲದಲ್ಲಿ ನಿದ್ದೆ ಮಾಡುತ್ತವೆ ಎಂದು ಅರಿಸ್ಟಾಟ್ಲ್‌ ಸೂಚಿಸಿದ್ದಾರೆ. ಈ ನಂಬಿಕೆಯು 1878ರ ತನಕವೂ ಉಳಿದುಕೊಂಡಿತ್ತು. ಆ ವರ್ಷ, ಎಲಿಯಟ್ ಕೂಸ್‌ ಸ್ವಾಲೋ ಹಕ್ಕಿಗಳ ಚಳಿಗಾಲದ ನಿದ್ದೆಯ ಕುರಿತು ಕನಿಷ್ಠ ಪಕ್ಷ 182 ಸಂಬಂಧಿತ ಪತ್ರಿಕೆಗಳು-ಪ್ರಕಟಣೆಗಳನ್ನು ಪಟ್ಟಿ ಮಾಡಿದರು. ಉತ್ತರ ವಾಯುಗುಣದಿಂದ ಚಳಿಗಾಲದಲ್ಲಿ ಹಕ್ಕಿಗಳ ಕಣ್ಮರೆಗೆ ಅವುಗಳ ವಲಸೆಯೇ ನಿಖರ ಕಾರಣ ಎಂಬ ವಿವರವನ್ನು ಹತ್ತೊಂಬತ್ತನೆಯ ಶತಮಾನದ ಆರಂಭದ ತನಕ ಸ್ವೀಕರಿಸಲಾಗಿರಲಿಲ್ಲ.[೧೫] ಆಫ್ರಿಕನ್‌ ಬುಡಕಟ್ಟು ಜನಾಂಗದವರ ಬಾಣಗಳು ನಾಟಿದ ಬಿಳಿಯ ಕೊಕ್ಕರೆಗಳು ಜರ್ಮನಿಯಲ್ಲಿ ಪತ್ತೆಯಾದದ್ದು ವಲಸೆಯ ಬಗ್ಗೆ ಆರಂಭಿಕ ಕುರುಹು ಒದಗಿಸಿತು. ಫೇಲ್‌ಸ್ಟಾರ್ಕ್ ‌ ಪ್ರಭೇದದ ಅತಿ ಹಳೆಯ ಕುರುಹು 1822ರಲ್ಲಿ ಜರ್ಮನಿ ದೇಶದ ಮೆಕ್ಲೆನ್ಬರ್ಗ್‌-ವೊರಪೊಮ್ಮರ್ನ್‌ ರಾಜ್ಯದ ಕ್ಲುಟ್ಜ್‌ ಗ್ರಾಮದಲ್ಲಿ ಪತ್ತೆಯಾಯಿತು.

ಹೆಚ್ಚು ದೂರದ ವಲಸೆ

ಸ್ವೇನ್ಸನ್‌ರ ಕೃಷ್ಣಪಕ್ಷಿ
ಉತ್ತರದ ಚೂಪುಬಾಲದ ಬಾತುಕೋಳಿ

ವಲಸೆಯ ಸಾಮಾನ್ಯ ಚಿತ್ರಣವೆಂದರೆ, ಸ್ವಾಲೋ ಹಕ್ಕಿಗಳು, ಬೇಟೆಯಾಡುವ ಹಕ್ಕಿಗಳು ಮುಂತಾದ ಉತ್ತರದ ನೆಲೆಹಕ್ಕಿಗಳು ಉಷ್ಣವಲಯದತ್ತ ಸಾವಿರಾರು ಕಿಲೋಮೀಟರ್‌ ದೂರ ಕ್ರಮಿಸುವುದು. ಉತ್ತರ ಗೋಲಾರ್ಧದಲ್ಲಿ ವಾಸಿಸಿ ಸಂತನಾವೃದ್ಧಿ ಮಾಡುವ ಬಾತುಕೋಳಿಗಳು, ಹೆಬ್ಬಾತುಗಳು ಹಾಗೂ ಹಂಸಗಳು ಸಹ ಅತಿ-ದೂರ ವಲಸೆ ಹೋಗುವ ಹಕ್ಕಿಗಳಾಗಿವೆ. ಆದರೆ, ಅವು ಹೆಪ್ಪುಗಟ್ಟುವ ನೀರಿನಿಂದ ಪಾರಾಗಲು, ಆರ್ಕ್ಟಿಕ್‌ನಲ್ಲಿರುವ ತಮ್ಮ ಸಂತಾನವೃದ್ಧಿ ತಾಣಗಳಿಂದ ಹೊರಟು, ದಕ್ಷಿಣ ದಿಕ್ಕಿನತ್ತ ಸಾಕಷ್ಟು ದೂರ ಪ್ರಯಾಣಿಸುತ್ತವೆ. ಆರ್ಕ್ಟಿಕ್‌ ಪ್ರದೇಶದ ಕಾಡುಕೋಳಿ ಪ್ರಭೇದಗಳು ಉತ್ತರ ಗೋಲಾರ್ಧದಲ್ಲಿಯೇ ವಾಸಿಸುತ್ತವೆ, ಆದರೆ ತೀವ್ರ ಚಳಿಯಿಲ್ಲದ ದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಉದಾಹರಣೆಗೆ, ನಸುಗೆಂಪು ಪಾದಗಳುಳ್ಳ ಹೆಬ್ಬಾತು ಐಸ್‌ಲೆಂಡ್‌ನಿಂದ ಬ್ರಿಟನ್‌ ಮತ್ತು ಸುತ್ತಮುತ್ತಲ ದೇಶಗಳಿಗೆ ವಲಸೆ ಹೋಗುತ್ತವೆ. ವಲಸೆಯ ಮಾರ್ಗಗಳು ಮತ್ತು ಚಳಿಗಾಲದ ತಾಣಗಳು ಸಾಂಪ್ರದಾಯಿಕವಾಗಿದ್ದು, ತಮ್ಮ ಹೆತ್ತ ಹಕ್ಕಿಗಳೊಂದಿಗೆ ಮೊದಲಿಗೆ ಹಾರುವಾಗ ಮರಿಗಳು ಕಲಿತುಕೊಳ್ಳುತ್ತವೆ. ಗಾರ್ಗನಿ ಬಾತುಕೋಳಿ ಸೇರಿದಂತೆ ಕೆಲವು ಬಾತುಕೋಳಿಗಳು ಉಷ್ಣವಲಯದೊಳಗೆ ಸಂಪೂರ್ಣವಾಗಿ ಅಥವಾ ಆಂಶಿವಾಗಿ ವಲಸೆ ಹೋಗುತ್ತವೆ.ನೆಲೆ ಹಕ್ಕಿಗಳ ಅತಿದೂರದ ವಲಸೆ ಕುರಿತು, ಅಡೆತಡೆಗಳು ಮತ್ತು ಬಳಸುದಾರಿಗಳ ಪ್ರವೃತ್ತಿಯು ಅನ್ವಯಿಸುವಂತೆ ನೀರಹಕ್ಕಿಗಳಿಗೂ ಸಹ ಅನ್ವಯಿಸುತ್ತದೆ, ಆದರೆ ತದ್ವಿರುದ್ಧವಾಗಿ. ಉದಾಹರಣೆಗೆ, ನೀರಿಲ್ಲದೆ, ಆಹಾರವೊದಗಿಸುವ ವಿಶಾಲವಾದ ಭೂಮಿಯು ನೀರ ಹಕ್ಕಿಗೆ ಅಡೆತಡೆಯಾಗಿರುತ್ತದೆ. ಕಡಲತೀರದ ನೀರಿನಲ್ಲಿ ಆಹಾರ ತೆಗೆದುಕೊಳ್ಳುವ ಹಕ್ಕಿಗೆ ತೆರೆದ ವಿಶಾಲ ಸಾಗರವು ಅಡೆತಡೆಯಾಗಿರುತ್ತದೆ. ಇಂತಹ ಅಡೆತಡೆಗಳನ್ನು ತಪ್ಪಿಸಲು ಹಕ್ಕಿಗಳು ಬಳಸುದಾರಿಗಳನ್ನು ಹಿಡಿಯುತ್ತವೆ: ಉದಾಹರಣೆಗೆ, ಟೇಮಿರ್‌ ಪರ್ಯಾಯದ್ವೀಪದಿಂದ ವಾಡ್ಡೆನ್‌ ಸಮುದ್ರಕ್ಕೆ ವಲಸೆ ಹೋಗುವ ಬ್ರೆಂಟ್‌ ಹೆಬ್ಬಾತುಗಳು, ಆರ್ಕ್ಟಿಕ್‌ ಸಾಗರ ಮತ್ತು ಉತ್ತರ ಸ್ಕಾಂಡಿನೇವಿಯಾ ಮೂಲಕ ನೇರವಾಗಿ ಹಾರಿಹೋಗುವ ಬದಲಿಗೆ, ವೈಟ್ ಸೀ ತೀರ ಹಾಗೂ ಬಾಲ್ಟಿಕ್‌ ಸಮುದ್ರ ಮಾರ್ಗವಾಗಿ ಹಾರಿ ವಲಸೆ ಹೋಗುತ್ತವೆ.

ದಿಂಡಿನ ಬಾಲವುಳ್ಳ ಗೋಡ್ವಿಟ್

ಉತ್ತರ ಅಮೆರಿಕಾದಲ್ಲಿ 'ಕಡಲತೀರದ ಹಕ್ಕಿಗಳು' ಎನ್ನಲಾದ ಕಾಲುನಡಿಗೆಯ ನೀರುಹಕ್ಕಿಗಳೂ ಸಹ ಈ ಬಳಸುದಾರಿ ಪ್ರವೃತ್ತಿಯನ್ನು ಹೊಂದಿವೆ. ಡನ್ಲಿನ್‌ (ಕೆಂಪು ಬೆನ್ನಿನ ಹಕ್ಕಿ) ಮತ್ತು ವೆಸ್ಟ್ರನ್ ಸ್ಯಾಂಡ್‌ಪೈಪರ್‌ ಹಕ್ಕಿಗಳು ತಮ್ಮ ಆರ್ಕ್ಟಿಕ್‌ ಸಂತಾನವೃದ್ಧಿ ತಾಣಗಳಿಂದ ಅದೇ ಗೋಲಾರ್ಧದಲ್ಲಿರುವ ಇನ್ನೂ ಬೆಚ್ಚನೆಯ ತಾಣಗಳತ್ತ ಬಹಳ ದೂರ ವಲಸೆ ಹೋಗುತ್ತವೆ. ಆದರೆ ಸೆಮಿಪಾಲ್ಮೇಟೆಡ್‌ ಸ್ಯಾಂಡ್‌ಪೈಪರ್‌ ಹಕ್ಕಿ ಸೇರಿದಂತೆ ಇತರೆ ಹಕ್ಕಿಗಳು ಇನ್ನೂ ಹೆಚ್ಚು ದೂರ, ಅಂದರೆ ದಕ್ಷಿಣ ಗೋಲಾರ್ಧದಲ್ಲಿನ ಉಷ್ಣವಲಯಗಳತ್ತ ವಲಸೆ ಹೋಗುತ್ತವೆ. ದೊಡ್ಡಗಾತ್ರದ, ಬಲಶಾಲಿ ಕಾಡುಕೋಳಿಗಳಂತೆ, ನಡೆದಾಡುವ ನೀರುಹಕ್ಕಿಗಳೂ ಸಹ ಬಲಶಾಲಿಯಾದ ಹಾರುವ ಹಕ್ಕಿಗಳಾಗಿವೆ. ಚಳಿಗಾಲದಲ್ಲಿ ಸಮಶೀತೋಷ್ಣ ವಲಯಗಳಿಗೆ ಬಂದ ಹಕ್ಕಿಗಳು, ಹವಾಮಾನ ಪ್ರತಿಕೂಲವಾಗಿದ್ದಲ್ಲಿ, ಇನ್ನಷ್ಟು ಲಘು ವಲಸೆ ಹೋಗುವ ಸಾಮರ್ಥ್ಯ ಹೊಂದಿವೆ.ನೀರಹಕ್ಕಿಗಳ ಕೆಲವು ಪ್ರಭೇದಗಳಲ್ಲಿ, ವಲಸೆಯ ಸಾಫಲ್ಯವು ವಲಸೆ ಮಾರ್ಗದ ಮಧ್ಯೆ ನಿಲುಗಡೆ ತಾಣಗಳಲ್ಲಿ ಪ್ರಮುಖ ಆಹಾರ ಮೂಲಗಳ ಲಭ್ಯತೆಗಳನ್ನು ಅವಲಂಬಿಸುತ್ತದೆ. ಇಂತಹ ನಿಲುಗಡೆ ತಾಣಗಳಲ್ಲಿ ದೊರೆಯುವ ಆಹಾರವು ವಲಸೆಯ ಮುಂದಿನ ಹಂತಕ್ಕೆ ಶಕ್ತಿತುಂಬಲು ವಲಸೆಹಕ್ಕಿಗಳಿಗೆ ಅವಕಾಶ ಒದಗಿಸುತ್ತದೆ. ಫಂಡಿ ಕೊಲ್ಲಿ ಹಾಗೂ ಡೆಲಾವೇರ್ ಕೊಲ್ಲಿ ಇಂತಹ ಪ್ರಮುಖ ನಿಲುಗಡೆ ತಾಣಗಳ ಉದಾಹರಣೆಗಳಾಗಿವೆ.ದಿಂಡಿನಾಕಾರದ ಬಾಲವುಳ್ಳ ಗಾಡ್‌ವಿಟ್ ಹಕ್ಕಿಗಳು ಎಲ್ಲಿಯೂ ನಿಲುಗಡೆಯಾಗದೇ ಅತಿ ದೂರ ಕ್ರಮಿಸುವ ವಲಸೆ ಹೋದ ಹಕ್ಕಿಯೆಂದು ಹೆಸರಾಗಿವೆ. ಇವು ಅಲಾಸ್ಕಾದಿಂದ 11,000 ಕಿ.ಮೀ. ದೂರ ವಲಸೆ ಹೋಗಿ, ನ್ಯೂ ಜೀಲ್ಯಾಂಡ್ನಲ್ಲಿರುವ ತಮ್ಮ ಸಂತಾನವೃದ್ಧಿ ಮಾಡದ ಸ್ಥಳಗಳನ್ನು ತಲುಪುತ್ತವೆ.[೧೬] ವಲಸೆಗೆ ಮುನ್ನ, ನಿಲುಗಡೆರಹಿತ ಪ್ರಯಾಣಕ್ಕೆ ಶಕ್ತಿ ಒದಗಿಸಲು ಈ ಹಕ್ಕಿಗಳು ತಮ್ಮ ಶರೀರ ತೂಕದ 55%ರಷ್ಟನ್ನು ಕೊಬ್ಬಿನ ರೂಪದಲ್ಲಿ ಶೇಖರಿಸುತ್ತವೆ.

ಆರ್ಕ್ಟಿಕ್‌ ಕಡಲ ಹಕ್ಕಿ

ನೀರಹಕ್ಕಿಗಳು ಮತ್ತು ನೀರುಕೋಳಿಗಳಂತೆ, ಸಮುದ್ರಹಕ್ಕಿಗಳ ವಲಸೆಯ ಪ್ರವೃತ್ತಿಯೂ ಅದೇ ರೀತಿಯದ್ದಾಗಿದೆ. ಕೆಲವು ಕಪ್ಪು ಗಿಲೆಮಾಟ್ ಗಳು, ಕೆಲವು ಗಲ್‌ ಕಡಲ ಹಕ್ಕಿಗಳು ಹಾಗೂ ಇತರೆ ಕೆಲವು ಹಕ್ಕಿಗಳು ಒಂದೇ ಸ್ಥಳದಲ್ಲಿ ವಾಸಿಸುತ್ತವೆ. ಕಡಲ ಕಾಗೆಗಳು ಹಾಗೂ ಕಡಲಬಾತುಗಳು ಉತ್ತರ ಗೋಲಾರ್ಧದ ಸಮಶೀತೋಷ್ಣ ವಲಯದಲ್ಲಿ ಸಂತಾನವೃದ್ಧಿ ಮಾಡಿ, ಚಳಿಗಾಲದಲ್ಲಿ ದಕ್ಷಿಣ ದಿಕ್ಕಿಗೆ ವಿವಿಧ ದೂರ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಹಕ್ಕಿಗಳಲ್ಲಿ ಆರ್ಕ್ಟಿಕ್‌ ಟರ್ನ್‌ ಅತ್ಯಂತ ದೂರ ವಲಸೆ ಹೋಗುವ ಹಕ್ಕಿ. ತನ್ನ ಆರ್ಕ್ಟಿಕ್‌ ಸಂತಾನವೃದ್ಧಿ ಸ್ಥಾನದಿಂದ ಅಂಟಾರ್ಕ್ಟಿಕ್‌ ಸಂತಾನವೃದ್ಧಿ ಮಾಡದ ವಲಯಕ್ಕೆ ವಲಸೆ ಹೋಗುವ ಈ ಹಕ್ಕಿ, ಇತರೆ ಹಕ್ಕಿಗಳಿಗಿಂತ ಅತಿ ಹೆಚ್ಚು ಹಗಲಿನ ಬೆಳಕನ್ನು ನೋಡುತ್ತದೆ. ಬ್ರಿಟಿಷ್‌ ಪೂರ್ವ ತೀರದಲ್ಲಿನ ಫಾರ್ನ್‌ ದ್ವೀಪಗಳಲ್ಲಿ ಪಟ್ಟಿ ತೊಡಿಸಲಾದ ಒಂದು ಆರ್ಕ್‌ಟಿಕ್ ಟೆರ್ನ್‌ ಮರಿಯು ಹಾರಿ, ಕೇವಲ ಮೂರು ತಿಂಗಳಲ್ಲಿ ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಗರ ತಲುಪಿತು. ಇದು 22,000 ಕಿ.ಮೀ. (14,000 ಮೈಲಿ) ಗಿಂತಲೂ ಹೆಚ್ಚು ದೂರದ ಸಮುದ್ರ ಪ್ರಯಾಣ ಮಾಡಿತ್ತು. ವಿಲ್ಸನ್‌ ಪೆಟ್ರೆಲ್‌ ಹಕ್ಕಿ ಹಾಗೂ ಗ್ರೇಟ್‌ ಷಿಯರ್ವಾಟರ್ ಸೇರಿದಂತೆ ಕೆಲವು ಸಮುದ್ರ ಹಕ್ಕಿಗಳು ದಕ್ಷಿಣ ಗೋಲಾರ್ಧದಲ್ಲಿ ಸಂತಾನವೃದ್ಧಿ ಮಾಡಿ, ದಕ್ಷಿಣದ ಚಳಿಗಾಲದಲ್ಲಿ ಉತ್ತರ ಗೋಲಾರ್ಧಕ್ಕೆ ವಲಸೆ ಹೋಗುತ್ತವೆ. ಸಮುದ್ರ ಹಕ್ಕಿಗಳು ವಿಶಾಲ ಸಾಗರಗಳ ಮೇಲೆ ಹಾರುವ ಸಮಯದಲ್ಲೂ, ಸಮುದ್ರದ ಮೀನುಗಳನ್ನು ಹಿಡಿದು ತಿನ್ನುವ ಸಾಮರ್ಥ್ಯವನ್ನು ಹೊಂದಿವೆ.ಬಹುತೇಕ ಸಮುದ್ರದ ಪ್ರಭೇದಗಳಾದ, ಮುಖ್ಯವಾಗಿ 'ಕೊಳವೆಮೂಗಿನ ಪ್ರಭೇದ' ಪ್ರೊಸೆಲಾರಿ‌ಪಾರ್ಮ್ಸ್ ಬಹಳಷ್ಟು ಅಲೆದಾಡುವ ಹಕ್ಕಿಗಳಾಗಿವೆ. ದಕ್ಷಿಣ ಸಾಗರಗಳ ಕಡಲುಕೋಳಿ (ಆಲ್ಬಟ್ರಾಸ್‌), ಸಂತಾನವೃದ್ಧಿ ಹೊರತಾದ ಋತುಗಳಲ್ಲಿ "40-50 ಡಿಗ್ರಿ ಅಕ್ಷಾಂಶದ ಅಬ್ಬರಿಸುವ ಗಾಳಿ"ಯಲ್ಲಿ, ಇಡೀ ಪ್ರಪಂಚದ ಸುತ್ತಲೂ ಸುತ್ತುವುದುಂಟು. ಕೊಳವೆಮೂಗಿನ ಹಕ್ಕಿಗಳು ವಿಶಾಲ ಸಾಗರದ ಹೆಚ್ಚು ವಿಸ್ತೀರ್ಣಗಳನ್ನು ಸುತ್ತುತ್ತವೆ, ಆಹಾರವು ಲಭ್ಯವಾದೊಡನೆ, ಈ ಹಕ್ಕಿಗಳು ಒಂದೆಡೆ ಸೇರುತ್ತವೆ. ಇವುಗಳಲ್ಲಿ ಹಲವು ಹಕ್ಕಿಗಳು ಹೆಚ್ಚು ದೂರ ವಲಸೆ ಹೋಗುವ ಹಕ್ಕಿಗಳಾಗಿವೆ; ದಕ್ಷಿಣ ಅಮೆರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ, ಬ್ರಿಟನ್‌ಗೆ ಸೇರಿರುವ ಫಾಕ್ಲೆಂಡ್‌ ದ್ವೀಪಗಳು ಗೂಡು ಕಟ್ಟುವ ಸೂಟಿ ಷಿಯರ್ವಾಟರ್‌ ಹಕ್ಕಿಯು,ಸಂತಾನವೃದ್ಧಿ ವಲಯ ಮತ್ತು ಉತ್ತರ ಅಟ್ಲ್ಯಾಂಟಿಕ್‌ ಸಾಗರದಾಚೆ ಇರುವ ನಾರ್ವೆ ಮಧ್ಯೆ 14,000 ಕಿ.ಮೀ. (9,000 ಮೈಲುಗಳು)ವಲಸೆ ಹೋಗುತ್ತವೆ. ಕೆಲವು ಮ್ಯಾಂಕ್ಸ್ ಷಿಯರ್ವಾಟರ್‌ ಹಕ್ಕಿಗಳು ಇದೇ ವಲಸೆಯನ್ನು ವಿರುದ್ಧ ದಿಕ್ಕಿನಲ್ಲಿ ಕೈಗೊಳ್ಳುತ್ತವೆ. ಅವು ಸುದೀರ್ಘಕಾಲ ಜೀವಿಸುವ ಹಕ್ಕಿಗಳಾಗಿರುವುದರಿಂದ, ಜೀವಿತಾವಧಿಯಲ್ಲಿ ಅಗಾಧ ದೂರಗಳನ್ನು ಕ್ರಮಿಸಬಲ್ಲವು. ತನ್ನ 50-ವರ್ಷ ಜೀವಿತಾವಧಿಯಲ್ಲಿ ಮ್ಯಾಂಕ್ಸ್ ಷಿಯರ್ವಾಟರ್‌ ಹಕ್ಕಿಯೊಂದು ಎಂಟು ದಶಲಕ್ಷ ಕಿಲೋಮೀಟರ್‌ (5 ದಶಲಕ್ಷ ಮೈಲುಗಳು) ಕ್ರಮಿಸಿ ದಾಖಲೆ ಮುರಿದಿದೆಯೆಂದು ಗಣಿಸಲಾಗಿದೆ.

ಮೇಲಕ್ಕೆ ಹಾರುತ್ತಿರುವ ಗ್ರಿಫನ್‌ ಗಿಡುಗ

ಅಗಲ ರೆಕ್ಕೆಗಳುಳ್ಳ ಕೆಲವು ದೊಡ್ಡ ಗಾತ್ರದ ಹಕ್ಕಿಗಳು ಮೇಲಕ್ಕೆ ಹಾರಲು ಏರುತ್ತಿರುವ ಬಿಸಿ ಗಾಳಿಥರ್ಮಲ್ ಕಾಲಂಗಳನ್ನು ಅವಲಂಬಿಸುತ್ತವೆ. ಇಂತಹ ಹಕ್ಕಿಗಳಲ್ಲಿ ರಣಹದ್ದುಗಳು, ಗರುಡಗಳು ಮತ್ತು ಕಡಲ ಡೇಗೆಗಳು, ಜೊತೆಗೆ ಬಕಪಕ್ಷಿಗಳು ಮುಂತಾದ ಬೇಟೆಯಾಡುವ ಹಕ್ಕಿಗಳು ಸೇರಿವೆ. ಇಂತಹ ಹಕ್ಕಿಗಳು ಹಗಲಿನ ಹೊತ್ತು ವಲಸೆ ಹೋಗುತ್ತವೆ. ಇಂತಹ ಗುಂಪುಗಳಲ್ಲಿನ ವಲಸೆ ಹೋಗುವ ಪ್ರಭೇದಗಳಿಗೆ ವಿಶಾಲ ಜಲಪ್ರದೇಶವನ್ನು ದಾಟಲು ದುಸ್ತರವಾಗಬಹುದು, ಏಕೆಂದರೆ ಈ ಬಿಸಿಗಾಳಿಗಳು ಕೇವಲ ನೆಲದ ಮೇಲೆ ರೂಪುಗೊಳ್ಳುವವು. ಜೊತೆಗೆ, ಈ ಹಕ್ಕಿಗಳು ಬಹಳ ದೂರದ ತನಕ ಸಕ್ರಿಯವಾಗಿ ಹಾರಲಾರವು. ಮೇಲೇರುವ ಹಕ್ಕಿಗಳಿಗೆ ಮೆಡಿಟರೇನಿಯನ್‌ ಮತ್ತು ಇತರೆ ಸಮುದ್ರಗಳು ದೊಡ್ಡ ಅಡೆತಡೆಯೊಡ್ಡುತ್ತವೆ, ಏಕೆಂದರೆ ಅವು ಅತಿ ಕಿರಿದಾದ ಹಂತಗಳ ಮೂಲಕ ಹಾದುಹೋಗಬೇಕಾಗುತ್ತವೆ. ದೊಡ್ಡ ಗಾತ್ರದ ಹಿಂಸ್ರಪಕ್ಷಿಗಳು ಮತ್ತು ಬಕಪಕ್ಷಿಗಳು, ವಲಸೆಯ ಸಮಯದಲ್ಲಿ ಜಿಬ್ರಾಲ್ಟಾರ್‌, ಫಾಲ್ಸ್ಟರ್ಬೊ ಹಾಗೂ ಬಾಸ್ಫೊರಸ್‌ ಮಾರ್ಗದಲ್ಲಿ ಅಪಾರ ಸಂಖ್ಯೆಗಳಲ್ಲಿ ಹಾರಿ ಹೋಗುತ್ತವೆ. ಹನಿ ಬುಜಾರ್ಡ್(ಜೇನು ಕಡಲುಡೇಗೆ)ಯಂತಹ ಸಾಮಾನ್ಯ ಪ್ರಭೇದಗಳು ಶರತ್ಕಾಲದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಪರ್ವತಶ್ರೇಣಿಯಂತಹ ಇತರೆ ಅಡೆತಡೆಗಳು ಸಹ ದೊಡ್ಡ ಗಾತ್ರದ ಹಗಲಿನ ಸಮಯ ವಲಸೆ ಹೋಗುವ ದಿವಾಚರ ಪಕ್ಷಿಗಳಿಗೆ ಇಕ್ಕಟ್ಟಾದ ಪ್ರದೇಶದಲ್ಲಿ ಹಾದುಹೋಗುವ ತೊಂದರೆಯೊಡ್ಡಬಹುದು. ಮಧ್ಯ ಅಮೆರಿಕಾದ ಇಕ್ಕಟ್ಟಾದ ವಲಸೆಯ ಮಾರ್ಗದಲ್ಲಿ ಇದು ಪ್ರಮುಖ ಕಾರಣವಾಗಿದೆ.

ಮಿರುಗೆಂಪು ಕೊರಳ ಝೇಂಕಾರದ ಹಕ್ಕಿ

ಇಂಚರಹಕ್ಕಿಗಳು, ಝೇಂಕರಿಸುವ ಹಕ್ಕಿಗಳು ಮತ್ತು ನೊಣಹಿಡುಕ ಪಕ್ಷಿಗಳು ಸೇರಿದಂತೆ, ಹಲವು ಸ್ವಲ್ಪ ಸಣ್ಣ ಗಾತ್ರದ, ಕೀಟಭಕ್ಷಕ ಹಕ್ಕಿಗಳು ರಾತ್ರಿಯ ವೇಳೆ ಬಹಳ ದೂರದ ತನಕ ವಲಸೆ ಹೋಗುತ್ತವೆ. ಬೆಳಕಾದಾಗ ಅವು ಒಂದೆಡೆ ನೆಲೆಗೆ ಬಂದು ಕೆಲವು ದಿನಗಳ ಕಾಲ ಆಹಾರ ಸೇವಿಸಿ, ಪುನಃ ತಮ್ಮ ವಲಸೆಯನ್ನು ಮುಂದುವರೆಸುತ್ತವೆ. ಮೂಲಸ್ಥಳದಿಂದ ಗುರಿಯ ಮಧ್ಯೆ ಅಲ್ಪಾವಧಿಗೆ ನೆಲೆನಿಲ್ಲುವ ಈ ಹಕ್ಕಿಗಳನ್ನು 'ಹಾದುಹೊಗುವ ವಲಸೆ ಹಕ್ಕಿಗಳು ' ಎಂದು ಉಲ್ಲೇಖಿಸಲಾಗುತ್ತದೆ.[೧೭] ರಾತ್ರಿಯ ವೇಳೆ ವಲಸೆ ಹೋಗುವುದರ ಮೂಲಕ, ರಾತ್ರಿಯ ವಲಸೆ ಹಕ್ಕಿಗಳು ತಾವು ಬೇಟೆಗೆ ಒಳಗಾಗುವ ಸಾಧ್ಯತೆಯನ್ನು ಕನಿಷ್ಠಗೊಳಿಸುತ್ತವೆ. ಇದಲ್ಲದೆ, ಹಗಲಿನ ಹೊತ್ತು ಬಹು-ದೂರದ ವರೆಗೆ ಹಾರುವುದರಿಂದ ತಮ್ಮ ಶಕ್ತಿ ಉಡುಗಿಹೋಗುವ ಫಲವಾಗಿ ಶರೀರದ ಅತ್ಯುಷ್ಣ ಸ್ಥಿತಿಯನ್ನು ತಪ್ಪಿಸಬಹುದಾಗಿದೆ. ರಾತ್ರಿಯ ವೇಳೆ ವಲಸೆ ಹೋಗುವ ಹಕ್ಕಿಗಳು ಹಗಲಿನ ವೇಳೆ ಆಹಾರ ಸೇವಿಸಿ ರಾತ್ರಿಯ ಪ್ರಯಾಣಕ್ಕಾಗಿ ಅಗತ್ಯ ಶಕ್ತಿಯನ್ನು ತಮ್ಮ ಸಂಗ್ರಹಿಸುತ್ತವೆ.[೧೫] ರಾತ್ರಿಯ ಹೊತ್ತು ವಲಸೆ ಹೋಗುವುದರಿಂದ ಹಕ್ಕಿಗಳು ನಿದ್ರಾಹೀನತೆಯ ಬೆಲೆ ತೆರಬೇಕಾಗುತ್ತದೆ. ನಿದ್ದೆಯ ನಷ್ಟವನ್ನು ಸರಿದೂಗಿಸಲು, ವಲಸೆ ಹಕ್ಕಿಗಳಿಗೆ ತಮ್ಮ ನಿದ್ರಾ ವ್ಯವಸ್ಥೆಯನ್ನು ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ.[೧೮]

ಕಡಿಮೆ ದೂರದ ವಲಸೆ

ಸಿಡರ್‌ ಅರಗುರೆಕ್ಕೆ ಹಕ್ಕಿ

ಹಗಲಿನ ಅವಧಿಯಲ್ಲಿ ಬದಲಾವಣೆಗಳಿಗೆ ಅನುಗುಣವಾಗಿ ಸ್ಪಂದಿಸಲು ಬಹು-ದೂರ ವಲಸೆ ಹೋಗುವ ಹಕ್ಕಿಗಳಿಗೆ ಪರಿಣಾಮಕಾರಿ ವಂಶವಾಹಿ ರೂಪಾಂತರಗಳು ಉಂಟಾಗುತ್ತವೆ. ಆದರೆ, ಹಲವು ಪ್ರಭೇದಗಳು ಬಹಳ ಪ್ರತಿಕೂಲಕರ ಹವಾಮಾನ ಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ, ಕಡಿಮೆ ದೂರದ ವರೆಗೆ ಕ್ರಮಿಸುತ್ತವೆ.ಹಾಗಾಗಿ, ಪರ್ವತ-ವಲಯ ಮತ್ತು ಕುರುಚಲು ಪ್ರದೇಶಗಳಲ್ಲಿ ವಾಸಿಸುವ ವಾಲ್‌ಕ್ರೀಪರ್ ಹಾಗೂ ವೈಟ್ ಥ್ರಾಟಡ್ ಡಿಪ್ಪರ್ನಂತಹ ಹಕ್ಕಿಗಳು, ನೆಲದ ಹೆಚ್ಚಿನ ಚಳಿಯಿಂದ ಪಾರಾಗಲು ಕೇವಲ ಎತ್ತರದ ಪ್ರದೇಶಗಳಿಗೆ ಹಾರಬಹುದು. ಮರ್ಲಿನ್‌ ಚಿಕ್ಕ ಡೇಗೆ ಮತ್ತು ಬಾನಾಡಿ ಸೇರಿದಂತೆಇತರೆ ಪ್ರಭೇದಗಳು ಕಡಲ ತೀರದತ್ತ ಅಥವಾ ಇನ್ನಷ್ಟು ದಕ್ಷಿಣದ ವಲಯಗಳಿಗೆ ವಲಸೆ ಹೋಗುತ್ತವೆ. ಚ್ಯಾಫಿಂಚ್‌ನಂತಹ ಪ್ರಭೇದಗಳು ಬ್ರಿಟನ್‌ನಲ್ಲಿ ವಲಸೆಯ ಪ್ರವೃತ್ತಿ ಹೊಂದಿರದ ಹಕ್ಕಿಗಳಾಗಿವೆ. ಆದರೆ, ಬಹಳ ಚಳಿಯ ವಾತಾವರಣದಲ್ಲಿ ಅವು ದಕ್ಷಿಣದತ್ತ ಅಥವಾ ಐರ್ಲೆಂಡ್‌ ಕಡೆಗೆ ವಲಸೆ ಹೋಗುತ್ತವೆ.ಅಲ್ಪದೂರ ವಲಸೆ ಹೋಗುವ ಪ್ಯಾಸೆರೀನ್‌ ಹಕ್ಕಿಗಳು ಎರಡು ವಿಕಸನೀಯ ಮೂಲಗಳನ್ನು ಹೊಂದಿವೆ. ಒಂದೇ ಕುಟುಂಬದಲ್ಲಿ ಬಹು-ದೂರ ವಲಸಿಗ ಹಕ್ಕಿಗಳನ್ನು ಹೊಂದಿರುವ ಚಿಫ್ಚಾಫ್‌ ಹಕ್ಕಿಯಂತಹ ಪ್ರಭೇದಗಳು ದಕ್ಷಿಣ ಗೋಲಾರ್ಧ ಮೂಲದ ಹಕ್ಕಿ ಪ್ರಭೇದಗಳಾಗಿವೆ. ಇವು ಇನ್ನು ಕೆಲ ಕಾಲ ಉತ್ತರ ಗೋಲಾರ್ಧದಲ್ಲಿಯೇ ವಾಸಿಸಲು ವಾಪಸ್‌ ವಲಸೆಯನ್ನು ಮೊಟಕುಗೊಳಿಸುತ್ತವೆ.

ವ್ಯಾಕ್ಸ್‌ವಿಂಗ್ನಂತಹ, ಬಹು-ದೂರ ವಲಸೆ ಹೋಗದ ಹಕ್ಕಿಗಳು,ಹೆಚ್ಚಿನ ಸಂತಾನಾಭಿವೃದ್ಧಿ ಅವಕಾಶಗಳಿಗಿಂತ,ಚಳಿಗಾಲದ ಹವಾಮಾನಕ್ಕೆ ಪ್ರತಿಕ್ರಿಯೆ ನೀಡುತ್ತವೆ.

ವುಡ್ಲೆಂಡ್‌ ಕಿಂಗ್‌ಫಿಷರ್

ಉಷ್ಣವಲಯದಲ್ಲಿ, ವರ್ಷದುದ್ದಕ್ಕೂ ಹಗಲಿನ ಅವಧಿಯಲ್ಲಿ ವ್ಯತ್ಯಾಸ ಕಡಿಮೆಯಿರುತ್ತದೆ. ಹವಾಗುಣವು ಆಹಾರ ಪೂರೈಕೆ ತಕ್ಕಮಟ್ಟಿಗೆ ಲಭಿಸುವಷ್ಟು ಬೆಚ್ಚಗೇ ಇರುತ್ತದೆ. ಉತ್ತರ ಗೋಲಾರ್ಧದಲ್ಲಿ ಚಳಿಗಾಲದ ಋತುವಿನಲ್ಲಿ ವಲಸೆ ಹೋಗುವ ಪ್ರಭೇದಗಳನ್ನು ಹೊರತುಪಡಿಸಿ, ಹಲವು ಪ್ರಭೇದಗಳು ಸ್ಥೂಲ ಅರ್ಥದಲ್ಲಿ ನಿವಾಸೀ ಹಕ್ಕಿಗಳಾಗಿರುತ್ತವೆ. ಮಳೆಯಾಗುವಿಕೆಯನ್ನು ಅವಲಂಬಿಸಿ, ಹಲವು ಹಕ್ಕಿ ಪ್ರಭೇದಗಳು ವಿಭಿನ್ನ ದೂರಗಳ ವರೆಗೆ ವಲಸೆಯಾಗುತ್ತವೆ.ಹಲವು ಉಷ್ಣವಲಯಗಳಲ್ಲಿ ಆರ್ದ್ರತೆಯ ಮತ್ತು ಶುಷ್ಕ ಋತುಗಳುಂಟಾಗುತ್ತವೆ. ಭಾರತ ದೇಶದ ಮುಂಗಾರು ಋತುಗಳು ಇದಕ್ಕೆ ಸೂಕ್ತ ಉದಾಹರಣೆಯಾಗಿವೆ. ಮಳೆಯ ಹವಾಗುಣಕ್ಕೆ ಸಂಬಂಧಿಸಿದಂತೆ ವಲಯಗಳಲ್ಲಿ ಕಂಡುಬರುವ ಹಕ್ಕಿಗಳಲ್ಲಿ, ಪಶ್ಚಿಮ ಆಫ್ರಿಕಾದ ವುಡ್ಲೆಂಡ್‌ ಕಿಂಗ್ಫಿಷರ್‌ ಸೂಕ್ತ ಉದಾಹರಣೆ.ಕೋಗಿಲೆಯಂತಹ ಕೆಲವು ಪ್ರಭೇದಗಳು ಉಷ್ಣವಲಯಗಳೊಳಗೇ ಬಹು-ದೂರದ ತನಕ ವಲಸೆ ಹೋಗಬಲ್ಲ ಹಕ್ಕಿಗಳಾಗಿವೆ. ಉದಾಹರಣೆಗೆ, ಲೆಸರ್‌ ಕುಕೂ ಭಾರತದಲ್ಲಿ ಸಂತಾನವೃದ್ಧಿ ಮಾಡಿ ಉಳಿದ ಋತುಗಳ ಕಾಲ ಆಫ್ರಿಕಾಲ್ಲಿಯೇ ಇರುತ್ತದೆ.ದಕ್ಷಿಣ ಏಷ್ಯಾ ವಲಯದಲ್ಲಿರುವ ಹಿಮಾಲಯ ಹಾಗೂ ದಕ್ಷಿಣ ಅಮೆರಿಕಾ ಖಂಡದಲ್ಲಿರುವ ಆಂಡೆಸ್ನಂತಹ ಎತ್ತರ ಪರ್ವತ ಶ್ರೇಣಿಗಳಲ್ಲಿ, ಹಲವು ಹಕ್ಕಿ ಪ್ರಭೇದಗಳು ಅತಿ ಎತ್ತರದ ಮತ್ತು ಕಡಿಮೆ ಎತ್ತರದ ಸ್ಥಳಗಳ ನಡುವೆ ವಲಸೆ ಹೋಗುತ್ತವೆ. ಇನ್ನೂ ಕೆಲವು ಹಕ್ಕಿಗಳು ಗಮನಾರ್ಹ ದೂರದ ವರೆಗೆ ವಲಸೆ ಪ್ರಯಾಣ ನಡೆಸುತ್ತವೆ. ಹಿಮಾಲಯದಲ್ಲಿ ವಾಸಿಸುವ ಕಾಶ್ಮೀರ ನೊಣಹಿಡುಕ ಹಕ್ಕಿ ಹಾಗೂ ಪೈಡ್‌ ಥ್ರಷ್‌ ಹಕ್ಕಿಗಳು ಶ್ರೀಲಂಕಾದಲ್ಲಿರುವ ಎತ್ತರದ ಪ್ರದೇಶದಷ್ಟು ದೂರದವರೆಗೂ ದಕ್ಷಿಣಕ್ಕೆ ವಲಸೆ ಹೋಗುತ್ತವೆ.

ಮುನ್ನುಗ್ಗುವಿಕೆಗಳು ಮತ್ತು ಚೆದುರುವಿಕೆ

ಕೆಲವೊಮ್ಮೆ, ಸಮರ್ಪಕ ಸಂತಾನವೃದ್ಧಿ ಋತುವಿನ ನಂತರ, ಮುಂದಿನ ವರ್ಷ ಆಹಾರ ಮೂಲಗಳ ಅಭಾವದಿಂದಾಗಿ, ಹಲವು ಪ್ರಭೇದಗಳಲ್ಲಿ ಮುನ್ನುಗ್ಗುವಿಕೆಯ ಪ್ರವೃತ್ತಿಯುಂಟಾಗುತ್ತದೆ. ಇದರ ಅರ್ಥ, ದೊಡ್ಡ ಸಂಖ್ಯೆಯ ಪ್ರಭೇದಗಳು ಸಾಮಾನ್ಯ ವ್ಯಾಪ್ತಿಯನ್ನು ಮೀರಿ ವಲಸೆ ಹೋಗುತ್ತವೆ. ಬೊಹೆಮಿಯನ್‌ ಅರಗುರೆಕ್ಕೆ ಹಕ್ಕಿ ಹಾಗೂ ಸಾಮಾನ್ಯ ಅಡ್ಡಕೊಕ್ಕಿನ ಹಕ್ಕಿಗಳು ಇಂತಹ ಅನಿರೀಕ್ಷಿತ ವ್ಯತ್ಯಾಸಗಳನ್ನು ವಾರ್ಷಿಕ ಸಂಖ್ಯೆಗಳಲ್ಲಿ ತೋರಿಸುತ್ತವೆ.ಆಸ್ಟ್ರೇಲಿಯಾ ಮತ್ತು ನೈಋತ್ಯ ಆಫ್ರಿಕಾದಂತಹ ದಕ್ಷಿಣ ಖಂಡಗಳ ಸಮಶೀತೋಷ್ಣ ವಲಯಗಳು ವಿಶಾಲವಾದ ನೀರಿನ ಕೊರತೆಯ ಪ್ರದೇಶಗಳನ್ನು ಹೊಂದಿವೆ. ಹವಾಗುಣದಿಂದ ಪ್ರೇರೇಪಿತ ವಲಸೆಗಳು ಸಾಮಾನ್ಯವಾಗಿದೆ, ಆದರೆ ಅವನ್ನು ಮುಂಗಾಣಲಾಗುವುದಿಲ್ಲ. ಉದಾಹರಣೆಗೆ,ಸಾಮಾನ್ಯವಾಗಿ ಆಸ್ಟ್ರೇಲಿಯಾದ ಮಧ್ಯಭಾಗದಲ್ಲಿ ಸಾಮಾನ್ಯವಾಗಿ ಒಣ ಕೇಂದ್ರವಾದ ಒಂದಲ್ಲ ಒಂದು ಭಾಗದಲ್ಲಿ ಒಂದೆರಡು ವಾರಗಳ ಕಾಲ ಭಾರಿ ಮಳೆಯಾದ ಕೂಡಲೆ ಗಿಡಗಳು ಮತ್ತು ಅಕಷೇರುಕಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇಂತಹ ಸ್ಥಳಗಳಿಗೆ ಹಕ್ಕಿಗಳನ್ನು ಎಲ್ಲಾ ದಿಕ್ಕುಗಳಿಂದಲೂ ಆಕರ್ಷಿಸುತ್ತವೆ. ಇದು ವರ್ಷದ ಯಾವುದೇ ಸಮಯದಲ್ಲಿ ಸಂಭವಿಸಬಹುದು. ನಿರ್ದಿಷ್ಟ ಸ್ಥಳದಲ್ಲಿ ಇದು ಪುನಃ ದಶಕದವರೆಗೆ ಅಥವಾ ಅದಕ್ಕಿಂತ ಹೆಚ್ಚು ಸಂಭವಿಸದೇ ಇರಬಹುದು.ಇದು ಎಲ್‌ ನಿನೊ ಮತ್ತು ಲಾ ನಿನಾಅವಧಿಗಳ ಆವರ್ತನವನ್ನು ಅವಲಂಬಿಸುತ್ತದೆ.

ರೇನ್ಬೊ ಜೇನುಭಕ್ಷಕ ಹಕ್ಕಿ

ಹಕ್ಕಿ ವಲಸೆಯು ಪ್ರಮುಖವಾಗಿ (ಆದರೆ ಇಡಿಯಾಗಿ ಅಲ್ಲ) ಉತ್ತರ ಗೋಲಾರ್ಧಕ್ಕೆ ಸಂಬಂಧಿತ ಘಟನೆಯಾಗಿದೆ. ದಕ್ಷಿಣ ಗೋಲಾರ್ಧದಲ್ಲಿ, ಋತುವಾರು ವಲಸೆಯು ಅಷ್ಟೇನೂ ಸ್ಪಷ್ಟವಾಗಿ ಕಂಡುಬರದ ಪ್ರವೃತ್ತಿ ಹೊಂದಿದೆ. ಇದಕ್ಕೆ ಹಲವು ಕಾರಣಗಳಿವೆ.ಮೊದಲಿಗೆ, ನೆಲದ ಅಥವಾ ಸಾಗರದ ಸತತ ವೈಶಾಲ್ಯದಿಂದ ಹಕ್ಕಿಗಳು ಇಕ್ಕಟ್ಟಾದ,ಕಣ್ಣಿಗೆ ಕಾಣುವ ವಲಸೆ ಮಾರ್ಗಗಳಲ್ಲಿ ಹಾರುವ ಪ್ರವೃತ್ತಿ ಹೊಂದಿರುವುದಿಲ್ಲ. ಹೀಗಾಗಿ ಇಂತಹ ಹಕ್ಕಿಯ ವಲಸೆಯು ವೀಕ್ಷಕರಿಗೆ ಗಮನಾರ್ಹವಾಗಿ ಕಾಣಸಿಗದು. ಎರಡನೆಯದಾಗಿ, ನೆಲದ ಹಕ್ಕಿಗಳಿಗೆ, ಹವಾಗುಣದ ವಲಯಗಳು, ಪ್ರತ್ಯೇಕವಾಗಿರುವ ಬದಲಿಗೆ, ಬಹು-ದೂರದ ನಂತರ ಒಂದರಲ್ಲೊಂದು ಮಾಸಿಹೋಗುವ ಪ್ರವೃತ್ತಿ ತೋರುತ್ತದೆ. ಇದರ ಅರ್ಥ, ಹಕ್ಕಿಗಳು ಅಸಮರ್ಪಕರ ಮಾರ್ಗಗಳ ಮೂಲಕ ಸುದೀರ್ಘ ಪ್ರಯಾಣ ಮಾಡಿ ನಿರ್ದಿಷ್ಟ ಗುರಿಯನ್ನು ತಲುಪುವ ಬದಲಿಗೆ, ಪ್ರಭೇದಗಳು ವಲಸೆಯ ಕಾಲದಲ್ಲಿ ಸಾಮಾನ್ಯವಾಗಿ ಆಹಾರ ಸೇವಿಸುತ್ತಾ, ಆರಾಮ ಗತಿಯಲ್ಲಿ ಪ್ರಯಾಣಿಸುತ್ತವೆ. ಬ್ಯಾಂಡಿಂಗ್ ಅಧ್ಯಯನಗಳ ಕೊರತೆಯಿಂದಾಗಿ, ಒಂದು ನಿರ್ದಿಷ್ಟ ಸ್ಥಳದಲ್ಲಿ ಋತುಗಳು ಬದಲಾದಾಗ ಕಂಡುಬರುವ ಹಕ್ಕಿಗಳು, ಉತ್ತರಕ್ಕೋ ದಕ್ಷಿಣಕ್ಕೋ ಹೋಗುವ ಮಾರ್ಗದಲ್ಲಿ ಅಲ್ಲಿ ಹಾದುಹೋಗುವ ಅದೇ ಪ್ರಭೇದದ ವಿವಿಧ ವರ್ಗದ ಹಕ್ಕಿಗಳಾಗಿವೆ ಎಂಬ ವಿಚಾರವು ಸ್ಪಷ್ಟವಾಗಿ ಕಾಣುವುದಿಲ್ಲ.ಹಲವು ಪ್ರಭೇದಗಳು ದಕ್ಷಿಣ ಗೋಲಾರ್ಧದಲ್ಲಿ ಸಂತಾನವೃದ್ಧಿ ಮಾಡಿ, ಚಳಿಗಾಲದಲ್ಲಿ ಉತ್ತರ ಗೋಲಾರ್ಧಕ್ಕೆ ಹಾರಿ ವಲಸೆ ಹೋಗುತ್ತವೆ. ಉದಾಹರಣೆಗೆ, ದಕ್ಷಿಣ ಆಫ್ರಿಕಾದ ಗ್ರೇಟರ್‌ ಸ್ವೈಪ್ಡ್‌ ಸ್ವಾಲೊ ಹಾಗೂ ಆಸ್ಟ್ರೇಲಿಯಾದ ಸ್ಯಾಟಿನ್‌ ನೊಣಹಿಡುಕ ಹಕ್ಕಿ ಡಾಲರ್‌ಬರ್ಡ್‌ ಹಾಗೂ ರೇನ್ಬೋ ಜೇನುಭಕ್ಷಕ ಹಕ್ಕಿ ಚಳಿಗಾಲದಲ್ಲಿ ತಮ್ಮ ಸಂತಾನವೃದ್ಧಿ ಸ್ಥಳದಿಂದ ಇನ್ನೂ ಉತ್ತರಕ್ಕೆ ವಲಸೆ ಹೋಗುತ್ತವೆ.

ಶರೀರವಿಜ್ಞಾನ ಮತ್ತು ನಿಯಂತ್ರಣ

ವಲಸೆಯ ನಿಯಂತ್ರಣ, ಅದರ ಸಮಯ ಮತ್ತು ಹವಾಗುಣಗಳಿಗೆ ಪ್ರತಿಕ್ರಿಯೆ-ಇವೆಲ್ಲವೂ ತಳೀಯವಾಗಿ ನಿಯಂತ್ರಿತವಾಗಿರುತ್ತದೆ. ಹಾಗಾಗಿ, ಇದು ವಲಸೆ ಹೋಗದ ಹಕ್ಕಿಗಳಲ್ಲಿಯೂ ಕಂಡುಬರುವ ಮೂಲಭೂತ ಲಕ್ಷಣಗಳಾಗಿವೆ. ವಲಸೆಯ ಸಮಯದಲ್ಲಿ ಹಕ್ಕಿಗಳು ಸಂಚರಿಸುವ ಮತ್ತು ನೆಲೆಯನ್ನು ಕಂಡುಕೊಳ್ಳುವ ಸಾಮರ್ಥ್ಯವು ಜಟಿಲವಾದ ವಿದ್ಯಮಾನವಾಗಿದೆ. ಇದು ಅಂತರ್ವರ್ಧಕ ಪ್ರವೃತ್ತಿಗಳು ಹಾಗು ಕಲಿಕೆ ಎರಡನ್ನೂ ಒಳಗೊಂಡಿರುತ್ತದೆ.[೧೯]

ವಲಸೆಯ ಸಮಯ

ಹಗಲ ಅವಧಿಯಲ್ಲಿ ಬದಲಾವಣೆಗಳು ವಲಸೆಗೆ ಮುಖ್ಯ ಬಾಹ್ಯಲಕ್ಷಣದ ಸೂಚನೆಯಾಗಿದೆ. ಈ ಬದಲಾವಣೆಗಳು ಹಕ್ಕಿಗಳ ಹಾರ್ಮೋನುಗಳ ಬದಲಾವಣೆಗಳೊಂದಿಗೆ ಕೂಡ ಸಂಬಂಧ ಹೊಂದಿದೆ.ವಲಸೆಯ ಮುಂಚಿನ ಅವಧಿಯಲ್ಲಿ, ಹಲವು ಹಕ್ಕಿಗಳು ಹೆಚ್ಚಿನ ಚಟುವಟಿಕೆ ಅಥವಾ ಝುಗುನ್ರುಹ್‌ (German: [migratory restlessness] Error: {{Lang}}: text has italic markup (help))(ಆತಂಕದ ವರ್ತನೆ), ಜೊತೆಗೆ ಹೆಚ್ಚಿದ ಕೊಬ್ಬು ಶೇಖರಣೆ ಸೇರಿದಂತೆ ಇತರೆ ಶಾರೀರಿಕ ಪರಿವರ್ತನೆಗಳೂ ಉಂಟಾಗುತ್ತವೆ. ಯಾವುದೇ ಪಂಜರದಲ್ಲಿ ಸಾಕಿದ ಹಕ್ಕಿಗಳಲ್ಲಿ ಪರಿಸರದ ಕುರುಹುಗಳು ಇಲ್ಲದೆಯೇ ಝುಗುನ್ರೂಹ್‌ ಸಂಭವಿಸುವುದು (ಉದಾಹರಣೆಗೆ, ಹಗಲ ಅವಧಿ ಕಡಿಮೆಯಾಗುವಿಕೆ ಮತ್ತು ಉಷ್ಣಾಂಶದಲ್ಲಿ ಇಳಿತ) ಇವು ಹಕ್ಕಿಗಳ ವಲಸೆಯನ್ನು ನಿಯಂತ್ರಿಸುವಲ್ಲಿ ವಾರ್ಷಿಕವಾಗಿ ಸಂಭವಿಸುವ ಅಂತರ್ವರ್ಧಕ ಪ್ರಕ್ರಿಯೆಗಳ ಪಾತ್ರಗಳತ್ತ ಬೆಳಕು ಚೆಲ್ಲಿದೆ. ಪಂಜರದಲ್ಲಿನ ಹಕ್ಕಿಗಳು, ತಾವು ಹೊರಗೆ ಪ್ರಕೃತಿಯಲ್ಲಿ ವಲಸೆಗಾಗಿ ಆಯ್ಕೆ ಮಾಡುವ ದಿಕ್ಕಿಗೆ ಹೊಂದಿಕೆಯಾಗಿ ಆದ್ಯತೆಯ ಹಾರುವ ಮಾರ್ಗವನ್ನು ಪ್ರದರ್ಶಿಸುತ್ತವೆ. ಅವುಗಳ ಸಮಾನಜಾತಿಯ ಹಕ್ಕಿಗಳು ಮಾರ್ಗ ಬದಲಿಸಿದ ವೇಳೆಯಲ್ಲಿ ಅವು ಆದ್ಯತಾ ಮಾರ್ಗವನ್ನು ಬದಲಿಸುತ್ತವೆ.ಹಲವು ಹಕ್ಕಿಗಳ ಸಂಪರ್ಕ ಹಾಗೂ ಗಮನಾರ್ಹ ಪ್ರಮಾಣದಲ್ಲಿ ಲೈಂಗಿಕ ದ್ವಿರೂಪತೆ ಇರುವ ಪ್ರಭೇದಗಳಲ್ಲಿ, ಹೆಣ್ಣು ಹಕ್ಕಿಗಳಿಗಿಂತಲೂ ಗಂಡು ಹಕ್ಕಿಗಳು ಬೇಗನೆ ಸಂತಾನವೃದ್ಧಿ ಸ್ಥಳಕ್ಕೆ ವಾಪಸಾಗುವ ಪ್ರವೃತ್ತಿ ತೋರುತ್ತವೆ. ಇದಕ್ಕೆ ಪ್ರೊಟಾಂಡ್ರಿ ಎನ್ನಲಾಗಿದೆ.[೨೦][೨೧]

ಸ್ಥಾನ-ನೆಲೆಗಳ ನಿರ್ಣಯ ಮತ್ತು ಮಾರ್ಗ-ನಿರ್ಧಾರ

ನ್ಯೂಜಿಲೆಂಡ್‌ ದೇಶದಿಂದ ಉತ್ತರ ದಿಕ್ಕಿನಲ್ಲಿ ವಲಸೆ ಹೋಗುತ್ತಿರುವ ದಿಂಡು-ಬಾಲದ ನೀರಹಕ್ಕಿ(ಗಾಡ್ವಿಟ್)ಗಳ ಉಪಗ್ರಹದಿಂದ ಜಾಡುಹಿಡಿಯಲಾದ ಮಾರ್ಗಗಳು.ಹಕ್ಕಿಗಳ ಈ ಪ್ರಭೇದವು ಯಾವುದೇ ಪ್ರಭೇದವು ನಿಲುಗಡೆಯಿಲ್ಲದೆ ಅತಿ-ದೀರ್ಘಾವಧಿ ವಲಸೆಯ ದಾಖಲೆ ಹೊಂದಿದೆ ([47] ವರೆಗೆ).

ಮಾರ್ಗ-ನಿರ್ಣಯವು ಹಲವು ಸಂವೇದನಗಳನ್ನು ಆಧರಿಸಿದೆ. ಹಲವು ಹಕ್ಕಿಗಳು ಸೂರ್ಯನ ದಿಕ್ಸೂಚಿಯನ್ನು ಬಳಸುತ್ತವೆಂಬುದನ್ನು ತೋರಿಸಿವೆ. ನಿರ್ದಿಷ್ಟ ದಿಕ್ಕಿನಲ್ಲಿ ಸಾಗಲು ಸೂರ್ಯನನ್ನು ಬಳಸುವುದು ಸಮಯವನ್ನಾಧರಿಸಿ ಪ್ರಯಾಣದ ವೇಳೆಯನ್ನು ಸರಿದೂಗಿಸುವ ಅಗತ್ಯವನ್ನು ಒಳಗೊಂಡಿರುತ್ತದೆ. ಕಾಂತಕ್ಷೇತ್ರಗಳನ್ನು ಗುರುತಿಸುವುದು(ಮ್ಯಾಗ್ನಟೊಸೆಪ್ಶನ್) ದೃಶ್ಯ ಹೆಗ್ಗುರುತುಗಳ ಬಳಕೆ ಹಾಗೂ ಘ್ರಾಣ-ಸಂಬಂಧಿ ಕುರುಹುಗಳು ಸೇರಿದಂತೆ, ಇತರೆ ಸಾಮರ್ಥ್ಯಗಳ ಸಂಯೋಗವನ್ನೂ ಸಹ ಮಾರ್ಗ-ನಿರ್ಣಯವು ಆಧರಿಸಿದೆಯೆಂದು ತೋರಿಸಿದೆ.[೨೨] ಬಹಳ ದೂರ ಪ್ರಯಾಣಿಸುವ ಹಕ್ಕಿಗಳಲ್ಲಿ, ಕಿರಿವಯಸ್ಸಿನ ಹಕ್ಕಿಗಳಾಗಿ ಚೆದುರಿಹೋಗಿ, ಸಂಭಾವ್ಯ ಸಂತಾನವೃದ್ಧಿ ಸ್ಥಳಗಳು ಹಾಗೂ ನೆಚ್ಚಿನ ಚಳಿಗಾಲದ ವಲಸೆಯ ಸ್ಥಳಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತವೆಂದು ನಂಬಲಾಗಿದೆ. ಒಮ್ಮೆ ಆ ಸ್ಥಳಗಳ ಜತೆ ನಂಟು ಬೆಳೆಸಿಕೊಂಡ ನಂತರ, ಹಕ್ಕಿಗಳು ಅಧಿಕ ಸ್ಥಳನಿಷ್ಠೆಯನ್ನು ತೋರಿಸುತ್ತವೆ ಮತ್ತು ಅದೇ ಚಳಿಗಾಲದ ವಲಸೆಯ ತಾಣಗಳನ್ನು ವರ್ಷಾನುವರ್ಷ ಭೇಟಿ ನೀಡುತ್ತಿರುತ್ತವೆ.[೨೩]

ವಲಸೆ ಹೋಗುವಾಗ ಹಕ್ಕಿಗಳ ಮಾರ್ಗನಿರ್ಣಯದ ಸಾಮರ್ಥ್ಯವನ್ನು ಅಂತರ್ವರ್ಧಕ ಕ್ರಿಯೆಯಿಂದ ಪೂರ್ಣವಾಗಿ ವಿವರಿಸಲು ಸಾಧ್ಯವಾಗುವುದಿಲ್ಲ.ಪರಿಸರ ಸೂಚನೆಗಳ ಪ್ರತಿಕ್ರಿಯೆಗಳ ಸಹಾಯದಿಂದ ಕೂಡ ವಿವರಣೆ ಸಾಧ್ಯವಿಲ್ಲ. ಹಕ್ಕಿಗಳಿಂದ ಸೂಕ್ತ ವಾಸಸ್ಥಾನವನ್ನು ಗುರುತಿಸುವಿಕೆ ಹಾಗೂ ಮಾನಸಿಕ ನಕ್ಷೆಗಳನ್ನು ರಚಿಸುವ ಸಾಮರ್ಥ್ಯವನ್ನು ಲೆಕ್ಕಹಾಕುವ ಮೂಲಕ, ಹಕ್ಕಿಗಳು ಬಹಳ ದೂರದ ವಲಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬಹುಶಃ ಪೂರ್ಣವಾಗಿ ವಿವರಿಸಬಹುದು. ಹಗಲ ವೇಳೆ ವಲಸೆ ಹೋಗುವ ಮೀನು ಡೇಗೆ, ಜೇನು ಕಡಲ ಡೇಗೆ ಮುಂತಾದ ಬೇಟೆಯಾಡುವ ಹಕ್ಕಿಗಳ ಉಪಗ್ರಹ ಜಾಡು ವಿಶ್ಲೇಷಣೆಯ ಪ್ರಕಾರ, ಗಾಳಿ ಬೀಸಿ ಹಾದಿ ತಪ್ಪಿದಲ್ಲಿ, ಹಿರಿಯ ಹಕ್ಕಿಗಳು ತಪ್ಪುತಿದ್ದಿಕೊಂಡು, ಸರಿಯಾದ ಮಾರ್ಗಕ್ಕೆ ಪುನಃ ಮರಳುವ ಸಾಮರ್ಥ್ಯ ತೋರುತ್ತವೆ.[೨೪]ವಾರ್ಷಿಕ ನಮೂನೆಗಳು ತೋರಿಸುವಂತೆ, ಸಮಯ ಮತ್ತು ಮಾರ್ಗದ ವಿಚಾರಗಳಲ್ಲಿ ವಲಸೆಗೆ ಪ್ರಬಲವಾದ ವಂಶವಾಹಿ ಅಂಶವೂ ಸಹ ಇದೆ. ಆದರೆ, ಪರಿಸರೀಯ ಪ್ರಭಾವಗಳ ಮೂಲಕ ಇವನ್ನು ಪರಿವರ್ತಿಸಬಹುದಾಗಿದೆ. ಇಂತಹ ಭೌಗೋಳಿಕ ಅಡೆತಡೆಯ ಕಾರಣ ವಲಸೆಯ ಮಾರ್ಗ ಬದಲಾವಣೆಗೆ, ಕೇಂದ್ರೀಯ ಯುರೋಪ್‌ನಲ್ಲಿರುವ ಕೆಲವು ಕೃಷ್ಣಶಿಖೆ ಹಕ್ಕಿಗಳು ಚಳಿಗಾಲದಲ್ಲಿ ಆಲ್ಪ್ಸ್‌ ಪರ್ವತಗಳನ್ನು ದಾಟುವ ಬದಲಿಗೆ, ಪಶ್ಚಿಮಕ್ಕೆ ವಲಸೆ ಹೋಗಿ ಬ್ರಿಟನ್‌ನಲ್ಲಿ ನೆಲೆಸುವ ಪ್ರವೃತ್ತಿಯು ಸೂಕ್ತ ಉದಾಹರಣೆಯಾಗಿದೆ.

ವಲಸೆ ಹೋಗುವ ಹಕ್ಕಿಗಳು ಎರಡು ವಿದ್ಯುತ್ಕಾಂತೀಯ ಸಾಧನಗಳನ್ನು ಬಳಸಿ ತಮ್ಮ ಗಮ್ಯಸ್ಥಳವನ್ನು ಗುರುತಿಸಬಹುದು: ಒಂದು ಸಂಪೂರ್ಣವಾಗಿ ಅಂತರ್ಗತ ಮತ್ತು ಇನ್ನೊಂದು ಅನುಭವವನ್ನು ಅವಲಂಬಿಸಿದೆ. ಚಿಕ್ಕ ಹಕ್ಕಿಯೊಂದು ತನ್ನ ಮೊದಲ ವಲಸೆಯಲ್ಲಿ, ಭೂಮಿಯ ಕಾಂತಕ್ಷೇತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಹಾರುತ್ತದೆ. ಆದರೆ ಪ್ರಯಾಣವು ಎಷ್ಟು ದೂರವಿರುತ್ತದೆ ಎಂಬುದು ಅದಕ್ಕೆ ತಿಳಿಯದು. ಇದನ್ನು ಹಕ್ಕಿಯು ರ‌್ಯಾಡಿಕಲ್ ಪೇರ್ ಮೆಕಾನಿಸಂ ಮೂಲಕ ಸಾಧಿಸುತ್ತವೆ. ಸುದೀರ್ಘತರಂಗಾಂತರಗಳಿಗೆ ಸಂವೇದನಾಶೀಲವಾದ ವಿಶೇಷ ಬೆಳಕಿನ ವರ್ಣದ್ರವ್ಯಗಳಲ್ಲಿ ರಾಸಾಯನಿಕ ಪ್ರತಿಕ್ರಿಯೆಗಳು ಈ ಕಾಂತಕ್ಷೇತ್ರದಿಂದ ಪ್ರಭಾವಿತವಾಗಿರುತ್ತದೆ. ಇದು ಹಗಲು ಬೆಳಕಿನ ಸಮಯ ಮಾತ್ರ ಕಾರ್ಯನಿರ್ವಹಿಸಿದರೂ ಅದು ಯಾವುದೇ ರೀತಿಯಲ್ಲೂ ಸೂರ್ಯನ ಸ್ಥಿತಿಯನ್ನು ಬಳಸುವುದಿಲ್ಲ. ಈ ಹಂತದಲ್ಲಿ, ಪ್ರಯಾಣಕ್ಕೆ ಒಗ್ಗಿಕೊಂಡು, ತನ್ನ ಇತರೆ ಸೌಲಭ್ಯಗಳನ್ನು ಬಳಸುವವರೆಗೂ, ಹಕ್ಕಿಯು ನಕ್ಷೆಯಿಲ್ಲದೆ, ದಿಕ್ಸೂಚಿ ಹಿಡಿದ ಒಬ್ಬ ಕಿರಿಯ ಸ್ಕೌಟ್‌ ಬಾಲಕನಂತಿರುತ್ತದೆ. ಅನುಭವ ಪಡೆದ ನಂತರ ಅವು ಅನೇಕ ಹೆಗ್ಗುರುತುಗಳನ್ನು ಕಲಿಯುತ್ತವೆ. ಕಪಾಲದ ನರ ವ್ಯವಸ್ಥೆಯಲ್ಲಿ ಕಾಂತೀಯ ಗುಣಗಳುಳ್ಳ ಅಂಶಗಳು ಈ ನಕ್ಷೆಯನ್ನು ಮಾಡಿ, ಕಾಂತಕ್ಷೇತ್ರವು ಎಷ್ಟು ಬಲವಾಗಿದೆ ಎಂದು ಹಕ್ಕಿಗೆ ತಿಳಿಸುತ್ತದೆ. ಹಕ್ಕಿಗಳು ಉತ್ತರ ಮತ್ತು ದಕ್ಷಿಣ ಗೋಲಾರ್ಧದ ವಲಯಗಳ ನಡುವೆ ವಲಸೆ ಹೋಗುವ ಕಾರಣ, ವಿವಿಧ ಅಕ್ಷಾಂಶಗಳಲ್ಲಿರುವ ಕಾಂತಕ್ಷೇತ್ರಗಳ ಬಲಗಳು ಹಕ್ಕಿಗಳಿಗೆ ರ‌್ಯಾಡಿಕಲ್ ಪೇರ್ ವ್ಯವಸ್ಥೆಯನ್ನು ನಿಖರವಾಗಿ ಅರ್ಥೈಸಿ, ಗಮ್ಯಸ್ಥಳವನ್ನು ಯಾವಾಗ ತಲುಪುತ್ತೆಂಬುದನ್ನು ತಿಳಿಸುತ್ತದೆ.[೨೫] ಇನ್ನೂ ಇತ್ತೀಚೆಗಿನ ಸಂಶೋಧನೆಯ ಪ್ರಕಾರ, ಕಣ್ಣು ಹಾಗೂ (ವಲಸೆಯ ಸಮಯ ಮಾರ್ಗನಿರ್ಣಯದಲ್ಲಿ ಸಕ್ರಿಯವಾಗಿರುವ) ಮೆದುಳಿನ ಮುಂಭಾಗದ ಭಾಗ ಕ್ಲಸ್ಟರ್‌ N ನಡುವಿನ ನರ-ಸಂಪರ್ಕವೊಂದು ಪತ್ತೆಯಾಗಿದ್ದು,ವಲಸೆ ಸ್ಥಾನನಿರ್ಣಯದಲ್ಲಿ ಅದು ಸಕ್ರಿಯವಾಗಿರುತ್ತದೆ. ಇದರರಿಂದಾಗಿ, ಹಕ್ಕಿಗಳು ಭೂಮಿಯ ಕಾಂತಕ್ಷೇತ್ರವನ್ನು ವಾಸ್ತವವಾಗಿ ತಮ್ಮ ಕಣ್ಣುಗಳಿಂದ ನೋಡಲು ಸಾಧ್ಯವಾಗುತ್ತದೆ ಎಂದು ನಿರ್ಣಯಿಸಬಹುದಾಗಿದೆ.[೨೬][೨೭]

ಅಲೆಮಾರಿತನ

ವಲಸೆ ಹೋಗುವ ಹಕ್ಕಿಗಳು ಹಾದಿ ತಪ್ಪಿ ತಮ್ಮ ಸಾಮಾನ್ಯ ವ್ಯಾಪ್ತಿಗಳಿಂದ ಹೊರಹೋಗಬಹುದು. ಹಕ್ಕಿಗಳು ತಮ್ಮ ಗುರಿಗಳನ್ನು ಮೀರಿ "ಸ್ಪ್ರಿಂಗ್ ಓವರ್‌ಶೂಟ್‌" ರೀತಿಯಲ್ಲಿ ಹಾರುತ್ತವೆ, ಇದರಲ್ಲಿ ಹಕ್ಕಿಗಳು ತಮ್ಮ ಸಂತಾನವೃದ್ಧಿ ಪ್ರದೇಶಗಳಿಗೆ ಮರಳುವಾಗ ಅವುಗಳನ್ನು ದಾಟಿ ಅಗತ್ಯಕ್ಕಿಂತ ಇನ್ನಷ್ಟು ಉತ್ತರ ದಿಕ್ಕಿಗೆ ಹೋಗುವುದು ಇದಕ್ಕೆ ಕಾರಣವಾಗಿದೆ. ಕಿರಿಯ ಹಕ್ಕಿಗಳಲ್ಲಿ ತಳಿಯ ರಚನೆಯು ಸೂಕ್ತ ಕಾರ್ಯನಿರ್ವಹಣೆಗೆ ವಿಫಲವಾದಲ್ಲಿ, ಹಕ್ಕಿಗಳು ಅಪರೂಪದ ಲಕ್ಷಣಗಳನ್ನು ತೋರಿಸುತ್ತವೆ. ದಾರಿತಪ್ಪಿ ಅಲೆಮಾರಿಗಳಂತೆ ವ್ಯಾಪ್ತಿಯಿಂದ ಹಲವಾರು ಕಿಲೋಮೀಟರ್‌ಗಳಷ್ಟು ದೂರ ಹೋಗಬಹುದು. ಇದಕ್ಕೆ ಹಿಮ್ಮೊಗ ವಲಸೆ ಎನ್ನಲಾಗಿದೆ. ಅವುಗಳ ಸ್ಥಳಗಳ ಕಾರಣ, ಕೆಲವು ನಿರ್ದಿಷ್ಟ ಪ್ರದೇಶಗಳು ವಲಸಿಗ ಹಕ್ಕಿಗಳ ವಾಚ್‌ಪಾಯಿಂಟ್‌ಗಳಾಗಿ ಪ್ರಸಿದ್ಧವಾಗಿವೆ. ಕೆನಡಾದ ಪಾಯಿಂಟ್‌ ಪಿಲೀ ನ್ಯಾಷನಲ್‌ ಪಾರ್ಕ್‌ ಹಾಗೂ ಇಂಗ್ಲೆಂಡ್‌ನ ಸ್ಪರ್ನ್‌ ಉದಾಹರಣೆಗಳಾಗಿವೆ. ಪಥಚ್ಯುತಿ ವಲಸೆಯಲ್ಲಿ ಗಾಳಿ ಜೋರಾಗಿ ಬೀಸಿದ ಕಾರಣ ಹಲವು ವಲಸಿಗ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಡಲ ತೀರಗಳಲ್ಲಿ ಬೀಳುವುದರಲ್ಲಿ ಫಲಿತಾಂಶ ನೀಡಬಹುದು.

ವಲಸೆಯ ತರಬೇತಿ

ಹಕ್ಕಿಗಳ ಗುಂಪಿಗೆ ವಲಸೆಯ ಮಾರ್ಗದ ಕುರಿತು ತರಬೇತಿ ನೀಡಬಹುದು, ಉದಾಹರಣೆಗೆ ಪುನರ್ಪರಿಚಯ ಯೋಜನೆಗಳಲ್ಲಿ ಈ ರೀತಿಯ ತರಬೇತಿ ನೀಡಬಹುದು. ಕೆನಡಾ ಹೆಬ್ಬಾತುವಿನೊಂದಿಗೆ ಪ್ರಯೋಗಗಳನ್ನು ನಡೆಸಿದ ನಂತರ, USನಲ್ಲಿ ಮೈಕ್ರೊಲೈಟ್‌ ವಿಮಾನವನ್ನು ಬಳಸಿ, ಪುನರ್ಪರಿಚಯಿಸಲಾದ ಹೂಪ್‌ ಕೊಕ್ಕರೆಗಳಿಗೆ ಸುರಕ್ಷಿತ ವಲಸೆ ಮಾರ್ಗಗಳಲ್ಲಿ ಸಾಗಲು ತರಬೇತಿ ನೀಡಲಾಯಿತು.[೨೮][೨೯]

ರೂಪಾಂತರಗಳು

ವಲಸೆಗಾಗಿ ಅಗತ್ಯವಾದ ಬೇಡಿಕೆಗಳನ್ನು ಪೂರೈಸಲು ಹಕ್ಕಿಗಳು ತಮ್ಮ ಜೀವರಾಸಾಯನಿಕ ಕ್ರಿಯೆಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಕೊಬ್ಬು ಶೇಖರಣೆಯ ಮೂಲಕ ಶಕ್ತಿಮೂಲದ ಶೇಖರಣೆ, ಹಾಗೂ, ರಾತ್ರಿಯ ವೇಳೆ ವಲಸೆ ಹೋಗುವ ಹಕ್ಕಿಗಳಲ್ಲಿ ನಿದ್ದೆಯ ನಿಯಂತ್ರಣಕ್ಕೆ ಸಹ ವಿಶೇಷ ಶಾರೀರವೈಜ್ಞಾನಿಕ ರೂಪಾಂತರಗಳ ಅಗತ್ಯವಿದೆ. ಇದರ ಜೊತೆಗೆ, ಹಕ್ಕಿಗಳ ಗರಿಗಳು ಸವೆದು, ಹರಿಯುವುದರಿಂದ ಅದನ್ನು ಉದುರಿಸಿಕೊಳ್ಳುವ ಅಗತ್ಯವಿದೆ. ಗರಿ ಉದುರುವಿಕೆ ವರ್ಷಕ್ಕೊಮ್ಮೆ ಸಂಭವಿಸುತ್ತದೆ, ಕೆಲವೊಮ್ಮೆ ಎರಡು ಬಾರಿ ಸಂಭವಿಸುತ್ತದೆ. ವಿವಿಧ ಪ್ರಭೇದಗಳಲ್ಲಿ ವಿಭಿನ್ನ ಸಮಯಗಳಲ್ಲಿ ಗರಿಯುದುರುವಿಕೆ ಸಂಭವಿಸುತ್ತದೆ. ಕೆಲವು ಹಕ್ಕಿಗಳು ತಮ್ಮ ಚಳಿಗಾಲ ವಾಸಸ್ಥಾನಕ್ಕೆ ವಲಸೆ ಹೋಗುವ ಮುನ್ನ ಗರಿ ಉದುರಿಸುತ್ತವೆ, ಇನ್ನು ಕೆಲವು ತಮ್ಮ ಸಂತಾನವೃದ್ಧಿ ಸ್ಥಾನಕ್ಕೆ ವಾಪಸಾಗುವ ಮುಂಚೆ ಗರಿ ಉದುರಿಸುತ್ತವೆ.[೩೦][೩೧] ಶಾರೀರಿಕ ರೂಪಾಂತರವಲ್ಲದೆ, ವಲಸೆಯಿಂದಾಗಿ ಕೆಲವೊಮ್ಮೆ ಹಕ್ಕಿಗಳ ವರ್ತನೆಯಲ್ಲಿ ಪರಿವರ್ತನೆಗಳಾಗುತ್ತವೆ. ಉದಾಹರಣೆಗೆ, ಹಕ್ಕಿಗಳು ವಲಸೆಯಲ್ಲಿ ಬಳಸಬೇಕಾದ ಶಕ್ತಿಯನ್ನು ಉಳಿಸಿಕೊಳ್ಳಲು ಹಾಗೂ ಬೇಟೆಯಾಗುವುದನ್ನು ಪಾರಾಗಲು, ಗುಂಪಿನಲ್ಲಿ ಹಾರುವ ಪ್ರವೃತ್ತಿ ತೊಡಗಿಸಿಕೊಳ್ಳುತ್ತವೆ.[೩೨]

ವಿಕಸನೀಯ ಮತ್ತು ಪರಿಸರೀಯ ಕಾರಣಗಳು

ಪ್ರಭೇದವೊಂದು ವಲಸೆ ಹೋಗುತ್ತದೋ ಇಲ್ಲವೋ ಎಂಬುದು ಹಲವು ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂತಾನವೃದ್ಧಿ ಪ್ರದೇಶದ ಹವಾಗುಣವು ಬಹಳ ಮುಖ್ಯ. ಕೆನಡಾ ದೇಶದ ಒಳನಾಡು ಅಥವಾ ಉತ್ತರ ಯುರೇಷ್ಯಾ ವಲಯದಲ್ಲಿನ ತೀವ್ರ ಚಳಿಯನ್ನು ಸಹಿಸಲು ಬಹಳಷ್ಟು ಪ್ರಭೇದಗಳಿಗೆ ಕಷ್ಟವಾಗಿದೆ. ಹಾಗಾಗಿ, ಆಂಶಿಕವಾಗಿ ವಲಸೆಯ ಪ್ರವೃತ್ತಿ ಹೊಂದಿರುವ ಕಪ್ಪುಹಕ್ಕಿ ಟುರ್ಡಸ್‌ ಮೆರುಲಾ ಸ್ಕ್ಯಾಂಡಿನಾವಿಯಾದಲ್ಲಿ ವಲಸೆಯ ಹಕ್ಕಿಯಾಗಿದ್ದು, ದಕ್ಷಿಣ ಯುರೋಪ್‌ನ ಮೃದು ಹವಾಗುಣದಲ್ಲಿ ನಿವಾಸಿ ಹಕ್ಕಿಯಾಗಿರುತ್ತದೆ. ಮೂಲಭೂತ ಆಹಾರದ ರೀತಿ ಸಹ ಬಹಳ ಮುಖ್ಯವಾಗಿದೆ. ಉಷ್ಣವಲಯದ ಹೊರಗೆ ವಾಸಿಸುವ ವಿಶಿಷ್ಟ ಕೀಟಭಕ್ಷಕ ಹಕ್ಕಿಗಳು ಬಹಳ ದೂರದ ತನಕ ಕ್ರಮಿಸಬಲ್ಲವು. ಚಳಿಗಾಲದಲ್ಲಿ ಅವು ದಕ್ಷಿಣಕ್ಕೆ ವಲಸೆ ಹೋಗುವುದು ಬಿಟ್ಟರೆ ಇನ್ಯಾವ ಪರ್ಯಾಯವೂ ಇಲ್ಲ.ಕೆಲವೊಮ್ಮೆ ಈ ಕಾರಣಗಳನ್ನು ಸೂಕ್ಷ್ಮವಾಗಿ ಸರಿತೂಗಿಸಲಾಗಿದೆ. ಯುರೋಪ್‌ನ ವಿನ್ಚಾಟ್‌ ಹಕ್ಕಿ (ಸ್ಯಾಕ್ಸಿಕೊಲಾ ರುಬೆಟ್ರಾ ) ಹಾಗೂ ಏಷ್ಯಾದ ಸೈಬೀರಿಯನ್‌ ಸ್ಟೋನ್ಚಾಟ್‌ (ಸ್ಯಾಕ್ಸಿಕೊಲಾ ಮೌರಾ ) ಬಹಳ ದೂರ ವಲಸೆಹೋಗುವ ಹಕ್ಕಿಗಳಾಗಿದ್ದು, ಚಳಿಗಾಲದಲ್ಲಿ ಉಷ್ಣವಲಯಗಳಿಗೆ ವಲಸೆ ಹೋಗುತ್ತವೆ. ಅವುಗಳ ನಿಕಟ ಸಂಬಂಧಿ ಯುರೋಪಿಯನ್‌ ಸ್ಟೋನ್ಚಾಟ್‌ ಸ್ಯಾಕ್ಸಿಕೊಲಾ ರುಬಿಕೊಲಾ ತನ್ನದೇ ಶ್ರೇಣಿಯಲ್ಲಿ ನಿವಾಸೀ ಹಕ್ಕಿಯಾಗಿದೆ. ತೀವ್ರ ತಣ್ಣಗಿರುವ ಉತ್ತರ ಮತ್ತು ಪೂರ್ವ ವಲಯಗಳಿಂದ ಸ್ವಲ್ಪ ದೂರದ ತನಕ ವಲಸೆ ಹೋಗುತ್ತವಷ್ಟೆ. ನಿವಾಸಿ ಹಕ್ಕಿಗಳು ಆಗಾಗ್ಗೆ ಹೆಚ್ಚುವರಿ ಮರಿಗಳನ್ನು ಪ್ರಸವಿಸಬಹುದು ಎಂಬುದು ಸಾಧ್ಯ ಕಾರಣವಾಗಬಹುದು.ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ, ದೂರ ವಲಸೆ ಹೋಗುವ ಪ್ಯಾಸರೀನ್‌ ವಲಸಿಗ ಹಕ್ಕಿಗಳು ಉತ್ತರ ಗೋಲಾರ್ಧದ, ವಿಕಸನೀಯ ಮೂಲಗಳ ಬದಲಿಗೆ, ದಕ್ಷಿಣ ಅಮೆರಿಕಾ ಹಾಗೂ ಆಫ್ರಿಕಾ ಮೂಲದ್ದಾಗಿವೆ. ಸಾಮಾನ್ಯವಾಗಿ ಉತ್ತರ ಗೋಲಾರ್ಧದಲ್ಲಿ ಕಂಡುಬಂದು, ಚಳಿಗಾಲದಲ್ಲಿ ದಕ್ಷಿಣಕ್ಕೆ ವಲಸೆ ಹೋಗುವ ಪ್ರಭೇದಗಳಿಗೆ ತದ್ವಿರುದ್ಧವಾಗಿ, ದಕ್ಷಿಣ ಗೋಲಾರ್ಧದಲ್ಲಿ ಕಂಡುಬಂದು, ಸಂತಾನವೃದ್ಧಿಗೆ ಉತ್ತರಕ್ಕೆ ವಲಸೆ ಹೋಗುವ ಪ್ರಭೇದಗಳಾಗಿವೆ.ಅಲೆರಸ್ಟಾಮ್‌ 2001ರಲ್ಲಿ ಸಂಗ್ರಹಿಸಿದ ಸೈದ್ಧಾಂತಿಕ ವಿಶ್ಲೇಷಣೆಗಳು, ಹಾರುವ ದೂರವನ್ನು ಸುಮಾರು 20%ರಷ್ಟು ವೃದ್ಧಿಸುವ ಬಳಸುದಾರಿಗಳು ವಾಯುಬಲವೈಜ್ಞಾನಿಕಆಧಾರದ ಮೇಲೆ ರೂಪಾಂತರಗೊಂಡಿದೆ - ಇದರಲ್ಲಿ ಹಕ್ಕಿಯೊಂದು ಹೆಚ್ಚುವರಿ ಆಹಾರವನ್ನು ತುಂಬಿಸಿಕೊಂಡು ವಿಶಾಲವಾದ ಅಡೆತಡೆಯನ್ನು ದಾಟಿ ಹಾರಲು ಯತ್ನಿಸಿದಲ್ಲಿ ಅದು ಅಷ್ಟು ದಕ್ಷತೆಯಿಂದ ಹಾರದು. ಕೆಲವು ಪ್ರಭೇದಗಳು ಸುತ್ತಿಬಳಸುವ ವಲಸೆ ಮಾರ್ಗಗಳನ್ನು ಅನುಸರಿಸುತ್ತವೆ. ಅವು ಐತಿಹಾಸಿಕ ಶ್ರೇಣಿ ವಿಸ್ತರಣೆಗಳನ್ನು ಬಿಂಬಿಸುತ್ತವೆ. ಜೊತೆಗೆ ಅವು ಪರಿಸರೀಯ ಪದಗಳಲ್ಲಿ ಅತ್ಯಂತ ಅನುಕೂಲ ಸ್ಥಿತಿಯಿಂದ ದೂರವಾಗಿದೆ. ಸ್ವೇನ್ಸನ್ಸ್‌ ಕೃಷ್ಣಪಕ್ಷಿಯ ಖಂಡೀಯ ಗುಂಪಿನ ವಲಸೆಯು ಇದಕ್ಕೆ ಉದಾಹರಣೆಯಾಗಿದೆ. ಇದು ಉತ್ತರ ಅಮೆರಿಕಾದ ಅಗಲಕ್ಕೆ ಹಾರಿ ಪೂರ್ವಕ್ಕೆ ಹೋಗಿ ಫ್ಲಾರಿಡಾ ಮೂಲಕ ದಕ್ಷಿಣಕ್ಕೆ ತಿರುವು ತೆಗೆದುಕೊಂಡು, ದಕ್ಷಿಣ ಅಮೆರಿಕಾದ ಉತ್ತರ ಭಾಗವನ್ನು ತಲುಪುತ್ತದೆ. ಸುಮಾರು 10,000 ವರ್ಷಗಳ ಹಿಂದೆ ಸಂಭವಿಸಿದ ಶ್ರೇಣಿ ವಿಸ್ತರಣೆಯ ಪರಿಣಾಮ ಎನ್ನಲಾಗಿದೆ. ಸುತ್ತಿಬಳಸಿ ಹೋಗುವ ದಾರಿಗಳಿಗೆ, ಗಾಳಿ ಬೀಸುವಿಕೆಯ ವಿವಿಧ ಸ್ಥಿತಿಗಳು, ಬೇಟೆಯಾಗುವ ಅಪಾಯ ಅಥವಾ ಇತರೆ ಕಾರಣಗಳಾಗಿವೆ.

ಹವಾಮಾನ ಬದಲಾವಣೆ

ಹಿಂದೆ ಅನುಭವಿಸಿದಂತಹ ದೊಡ್ಡ ಪ್ರಮಾಣದ ಹವಾಗುಣ ಬದಲಾವಣೆಗಳು ವಲಸೆಯ ಸಮಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ವಲಸೆಯಲ್ಲಿ ಸಮಯದ ಪರಿವರ್ತನೆಗಳು, ಸಂತನಾವೃದ್ಧಿ ಹಾಗೂ ಸಂಖ್ಯೆಯಲ್ಲಿ ಬದಲಾವಣೆಗಳು ಸೇರಿದಂತೆ ಇತರೆ ವಿಭಿನ್ನ ಪ್ರಭಾವಗಳಿರುತ್ತವೆಂದು ಅಧ್ಯಯನಗಳು ತೋರಿಸಿವೆ.[೩೩][೩೪]

ಪರಿಸರೀಯ ಪರಿಣಾಮಗಳು

ಹಕ್ಕಿಗಳ ವಲಸೆಯು, ಉಣ್ಣಿ ಹುಳು, ಹೇನಿನಂತಹ [೩೫] ಇತರೆ ಬಾಹ್ಯಪರೋಪಜೀವಿಗಳು ಇತರೆ ಪ್ರಭೇದಗಳ ವಲಸೆಗೂ ಸಹ ನೆರವಾಗುತ್ತದೆ. ಈ ಕೀಟಗಳು ಮಾನವ ಆರೋಗ್ಯಕ್ಕೆ ಸೋಂಕು ತಗುಲಿಸುವ ಸೂಕ್ಷ್ಮಜೀವಿಗಳನ್ನು ಒಯ್ಯಬಹುದು. ವಿಶ್ವಾದ್ಯಂತ ಹರಡಿದ್ದ ಹಕ್ಕಿ ಜ್ವರದ ಕಾರಣ ಈ ವಿಚಾರದಲ್ಲಿ ಸಾಕಷ್ಟು ಆಸಕ್ತಿ ವಹಿಸಲಾಗಿತ್ತು. ಆದರೆ, ವಲಸಿಗ ಹಕ್ಕಿಗಳು ಇಂತಹ ಅಪಾಯವನ್ನು ಹೊತ್ತಿದ್ದು ಕಂಡುಬಂದಿಲ್ಲ. ಸಾಕು ಪ್ರಾಣಿಗಳು ಮತ್ತು ದೇಶೀಯ ಹಕ್ಕಿಗಳ ಆಮದು ಇನ್ನೂ ಹೆಚ್ಚಿನ ಅಪಾಯವೊಡ್ಡಬಹುದು ಎನ್ನಲಾಗಿದೆ.[೩೬] ಯಾವುದೇ ಮಾರಣಾಂತಿಕ ಪರಿಣಾಮವಿಲ್ಲದ ಕೆಲವು ವೈರಸ್‌ಗಳು ಹಕ್ಕಿಯ ಶರೀರದಲ್ಲಿ ವಾಸಿಸುತ್ತವೆ, ಪಶ್ಚಿಮ ನೈಲ್‌ ವೈರಸ್‌ಮುಂತಾದ ವೈರಸ್ ವಲಸೆ ಹೋಗುವ ಹಕ್ಕಿಗಳ ಮೂಲಕ ಇತರೆಡೆ ಹರಡಬಹುದು.[೩೭] ಗಿಡಗಳು ಮತ್ತು ಪ್ಲವಕಗಳ ಪ್ರಪಗ್ಯೂಲ್ಸ್‌ಗಳ(ಸಸ್ಯ ಸಂತಾನೋತ್ಪತ್ತಿ ಭಾಗ) ಪ್ರಸರಣದಲ್ಲಿ ಹಕ್ಕಿಗಳ ಪಾತ್ರವೂ ಉಂಟು.[೩೮][೩೯]

ವಲಸೆಯ ಸಮಯ ಹಕ್ಕಿಗಳು ಹೆಚ್ಚು ಸಂಖ್ಯೆಯಲ್ಲಿ ಒಂದೆಡೆ ಸೇರುವುದನ್ನು ಕೆಲವು ಪರಭಕ್ಷಕಗಳು ತಮ್ಮ ಅನುಕೂಲಕ್ಕೆ ತೆಗೆದುಕೊಳ್ಳುತ್ತವೆ. ಬೃಹತ್‌ ನಾಕ್ಚೂಲ್‌‌ ಬಾವಲಿಗಳು ರಾತ್ರಿಯ ವೇಳೆ ವಲಸೆ ಹೋಗುವ ಪ್ಯಾಸರೀನ್‌ ಹಕ್ಕಿಗಳನ್ನು ಕೊಂದು ತಿನ್ನುತ್ತವೆ.[೩]

ಕೆಲವು ಬೇಟೆಯಾಡುವ (ಪರಭಕ್ಷಕ) ಹಕ್ಕಿಗಳು ವಲಸೆ ಹೋಗುವ ನಡೆದಾಡುವ ಬಾತುಕೋಳಿಗಳನ್ನು ಕೊಂದು ತಿನ್ನುತ್ತವೆ.[೪೦]

ಅಧ್ಯಯನ ರೀತಿಗಳು

ವಲಸೆಯ ಸಮಯ ಕುರಿತು ಆರಂಭಿಕ ಅಧ್ಯಯನಗಳು 1749ರಲ್ಲಿ ಫಿನ್ಲೆಂಡ್‌ ದೇಶದಲ್ಲಿ ಆರಂಭವಾಯಿತು. ಟುರ್ಕು ಸ್ಥಳದ ಜೊಹಾನ್ಸ್‌ ಲೆಚ್ ವಸಂತಕಾಲದಲ್ಲಿ ವಲಸೆ ಬಂದ ಹಕ್ಕಿಗಳ ದಿನಾಂಕಗಳನ್ನು ಮೊದಲ ಬಾರಿಗೆ ದಾಖಲಿಸಿಕೊಂಡರು.‌ [೪೧]

ಹಕ್ಕಿಗಳ ವಲಸೆಯ ಮಾರ್ಗಗಳನ್ನು ಹಲವು ರೀತಿಗಳ ಮೂಲಕ ಅಧ್ಯಯನ ಮಾಡಲಾಗಿದೆ. ಇದರಲ್ಲಿ ಹಕ್ಕಿಗಳ ಕಾಲಿಗೆ ಉಂಗುರ ಅಳವಡಿಸುವುದು ಅತಿ ಪ್ರಾಚೀನ ರೀತಿಯಾಗಿದೆ. ಹಕ್ಕಿಗಳನ್ನು ಬಣ್ಣದಿಂದ ಗುರುತಿಸುವುದು ಮತ್ತು ರೆಡಾರ್‌, ಉಪಗ್ರಹದ ಮೂಲಕ ಜಾಡು ಹಿಡಿಯುವುದು ಸೇರಿದಂತೆ ಇತರೆ ರೀತಿಗಳಾಗಿವೆ.

ಚಳಿಗಾಲದ ವಲಸಿಗ ಸ್ಥಾನಗಳು ಮತ್ತು ಸಂತಾನವೃದ್ಧಿಯ ಸ್ಥಳಗಳ ನಡುವೆ ಹಕ್ಕಿ ವಲಸೆಯ ಸಂಪರ್ಕ ಕೊಂಡಿಯನ್ನು ಗುರುತಿಸಲು ಜಲಜನಕ, ಆಮ್ಲಜನಕ, ಇಂಗಾಲ, ಸಾರಜನಕ ಮತ್ತು ಗಂಧಕಗಳ ಸ್ಥಿರ ಐಸೋಟೋಪ್‌ಗಳನ್ನು ಬಳಸಲಾಗಿದೆ. ವಲಸೆ ಸಂಪರ್ಕ ದೃಢಪಡಿಸುವ ಸ್ಥಿರವಾದ ಐಸೊಟೋಪಿಕ್ ವಿಧಾನಗಳು ಹಕ್ಕಿ ಪಥ್ಯಾಹಾರದಲ್ಲಿರುವ ಐಸೋಟೋಪಿಕ್ ವ್ಯತ್ಯಾಸಗಳ ಮೇಲೆ ಅವಲಂಬಿಸಿದೆ. ಜಡ ಅಂಗಾಂಶಗಳಾದ ರೆಕ್ಕೆಗಳು,ಬೆಳೆಯುವ ಅಂಗಾಂಶಗಳಾದ ಉಗುರುಗಳು ಮತ್ತು ಸ್ನಾಯು ಅಥವಾ ರಕ್ತದಲ್ಲಿ ಅದನ್ನು ಸೇರಿಸಲಾಗುತ್ತದೆ.[೪೨][೪೩]

ಮೇಲೆ ಹಾರುತ್ತಿರುವ ಹಕ್ಕಿಗಳ ಗುಂಪುಗಳು ಸಂಪರ್ಕಕ್ಕಾಗಿ ಕೂಗುವ ಧ್ವನಿಯನ್ನು ದಾಖಲಿಸಲು ಮೇಲುಮುಖವಾದ ಧ್ವನಿಗ್ರಾಹಕಗಳನ್ನು ಬಳಸಿಕೊಂಡು ವಲಸೆ ತೀವ್ರತೆಯನ್ನು ಗುರುತಿಸುವ ಕಾರ್ಯ ನಡೆದಿದೆ. ನಂತರ, ಇವನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ, ಸಮಯ, ಆವರ್ತನ ಮತ್ತು ಪ್ರಭೇದಗಳನ್ನು ಗುರುತಿಸಲಾಗುತ್ತದೆ.[೪೪]

ಎಮ್ಲೆನ್‌ ಕೊಳವೆ

ವಲಸೆಯನ್ನು ಪರಿಮಾಣಿಸಲು ಇನ್ನೂ ಹಳೆಯ ತಂತ್ರವೇನೆಂದರೆ, ಪೂರ್ಣಚಂದ್ರನ ಮುಖದತ್ತ ವೀಕ್ಷಿಸುತ್ತಾ,, ರಾತ್ರಿಯ ವೇಳೆ ಹಾರುವ ಹಕ್ಕಿ ಗುಂಪುಗಳ ಛಾಯಾರೇಖಾಕೃತಿಗಳನ್ನು ಎಣಿಸುವುದು.[೪೫][೪೬]

ಎಮ್ಲೆನ್‌ ಫನೆಲ್ ‌ ಎಂಬ ವ್ಯವಸ್ಥೆಯ ವೈವಿಧ್ಯಗಳನ್ನು ಬಳಸಿ,ಹಕ್ಕಿಗಳ ಸ್ಥಳನಿರ್ಣಯ ವರ್ತನೆಯ ಸಾಂಪ್ರದಾಯಿಕ ಅಧ್ಯಯನಗಳನ್ನು ನಡೆಸಲಾಗಿದೆ. ಎಮ್ಲೆನ್‌ ಫನೆಲ್‌ ವ್ಯವಸ್ಥೆಯಲ್ಲಿ ದುಂಡಗಿನ ಪಂಜರ, ಅದರ ಮೇಲ್ಭಾಗವು ಗಾಜಿನಿಂದ ಅಥವಾ ತಂತಿ-ಪರದೆಯ ಮೂಲಕ ಮುಚ್ಚಿ ಆಕಾಶವು ಗೋಚರಿಸುವಂತೆ ಮಾಡಲಾಗುತ್ತದೆ ಅಥವಾ ಈ ವ್ಯವಸ್ಥೆಯನ್ನು ತಾರಾಲಯದಲ್ಲಿ ಇರಿಸಲಾಗುತ್ತದೆ ಅಥವಾ ಪರಿಸರೀಯ ಕುರುಹುಗಳ ನಿಯಂತ್ರಕಗಳೊಂದಿಗೆ ಇರಿಸಲಾಗುತ್ತದೆ. ಪಂಜರದ ಗೋಡೆಗಳ ಮೇಲೆ ಹಕ್ಕಿಯು ಮಾಡುವ ಗುರುತುಗಳ ವಿತರಣೆಯನ್ನು ಬಳಸಿಕೊಂಡು, ಪಂಜರದಲ್ಲಿರುವ ಹಕ್ಕಿಯ ಸ್ಥಾನನಿರ್ಣಯಿಕ ವರ್ತನೆಯನ್ನು ಪ್ರಮಾಣಾತ್ಮಕವಾಗಿ ಅಧ್ಯಯನ ನಡೆಸಲಾಗುತ್ತದೆ.[೪೭] ಮನೆಗೆ ಹಿಂತಿರುಗಿ ಹಾರಿಬರುವ ಪಾರಿವಾಳಗಳ ಅಧ್ಯಯನಗಳಲ್ಲಿ ಹಕ್ಕಿಯು ಕ್ಷಿತಿಜದಲ್ಲಿ ಕಣ್ಮರೆಯಾಗುವ ದಿಕ್ಕನ್ನು ಬಳಸಿಕೊಂಡು ಇತರೆ ವಿಧಾನಗಳನ್ನು ಅನುಸರಿಸಲಾಗಿದೆ.

ಅಪಾಯಗಳು ಮತ್ತು ಸಂರಕ್ಷಣೆ

ಮಾನವ ಚಟುವಟಿಕೆಗಳು ಹಲವು ವಲಸಿಗ ಹಕ್ಕಿ ಪ್ರಭೇದಗಳಿಗೆ ಅಪಾಯವೊಡ್ಡಿದೆ. ಹಕ್ಕಿ ವಲಸೆಯಲ್ಲಿ ಒಳಗೊಂಡಿರುವ ದೂರಗಳೆಂದರೆ ಅವು ದೇಶಗಳ ರಾಜಕೀಯ ಗಡಿಗಳನ್ನು ದಾಟುತ್ತವೆ. ಹಾಗಾಗಿ ಸಂರಕ್ಷಣೆ ಕ್ರಮಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರದ ಅಗತ್ಯವಿದೆ. ಇಸವಿ 1918ರಲ್ಲಿ USನ ಮೈಗ್ರೇಟರಿ ಬರ್ಡ್‌ ಟ್ರೀಟಿ ಆಕ್ಟ್‌ (ವಲಸಿಗ ಹಕ್ಕಿ ಒಪ್ಪಂದ ಕಾಯಿದೆ) [೪೮] ಹಾಗೂ ಆಫ್ರಿಕನ್‌-ಯುರೇಷಿಯನ್‌ ಮೈಗ್ರೇಟರಿ ವಾಟರ್ಬರ್ಡ್‌ ಅಗ್ರಿಮೆಂಟ್‌ (ಆಫ್ರಿಕಾ-ಯುರೇಷ್ಯಾ ವಲಸೆ ನೀರುಹಕ್ಕಿ ಒಪ್ಪಂದ) ಸೇರಿದಂತೆ, ವಲಸೆ ಹಕ್ಕಿ ಪ್ರಭೇದಗಳನ್ನು ರಕ್ಷಿಸಲು ಹಲವು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.[೪೯] ವಲಸೆಯ ಸಮಯ ಹಕ್ಕಿಗಳ ಸಾಂದ್ರತೆಯು ಪ್ರಭೇದಗಳಿಗೆ ಅಪಾಯವೊಡ್ಡುವ ಸಾಧ್ಯತೆಯಿದೆ. ಕೆಲವು ಅಪೂರ್ವ ವಲಸೆ ಹಕ್ಕಿಗಳ ಸಂಖ್ಯೆ ಈಗಾಗಲೇ ಕ್ಷೀಣಿಸಿವೆ.ಇವುಗಳಲ್ಲಿ ಗಮನಾರ್ಹವಾದದ್ದು ಪ್ಯಾಸೆಂಜರ್‌ ಪಿಜನ್‌ (ಎಕ್ಟೊಪಿಸ್ಟೆಸ್‌ ಮೈಗ್ರೆಟೊರಿಯಸ್‌ ). ವಲಸೆಯ ಸಮಯ, ಹಕ್ಕಿಗಳ ಗುಂಪು ಒಂದು ಮೈಲಿ ಅಗಲ(1 .6ಕಿಮೀ) ಮತ್ತು 300 ಮೈಲು(500 ಕಿಮೀ) ಉದ್ದವಿರುತ್ತದೆ. ಇವು ಹಾದು ಹೋಗಲು ಹಲವು ದಿನಗಳು ಬೇಕಾಗುತ್ತವೆ ಹಾಗೂ ಈ ಗುಂಪಿನಲ್ಲಿ ಒಂದು ಶತಕೋಟಿವರೆಗೆ ಹಕ್ಕಿಗಳಿರುತ್ತವೆ.ಹಕ್ಕಿಗಳ ಸಂತಾನವೃದ್ಧಿ ಹಾಗೂ ಚಳಿಗಾಲದ ವಲಸೆಯ ತಾಣಗಳಲ್ಲದೆ, ಮಾರ್ಗಮಧ್ಯದಲ್ಲಿ ನಿಲುಗಡೆಯ ತಾಣಗಳೂ ಗಮನಾರ್ಹ ತಾಣಗಳಾಗಿವೆ.[೫೦] ಸಂತಾನವೃದ್ಧಿ ಮತ್ತು ವಲಸೆ ಹೋಗಲು ಆಯ್ದುಕೊಂಡ ಜಾಗಗಳನ್ನೇ ನೆಚ್ಚಿಕೊಂಡಿದ್ದ ಪ್ಯಾಸೆರೀನ್‌ ವಲಸಿಗ ಹಕ್ಕಿಗಳ ಕ್ಯಾಪ್ಚರ್-ರಿಕ್ಯಾಪ್ಚರ್(ಟ್ಯಾಗ್ ಅಥವಾ ಬ್ಯಾಂಡ್ ಮೂಲಕ ಗುರುತಿಸುವ ಕ್ರಿಯೆ) ಅಧ್ಯಯನದ ಪ್ರಕಾರ ಅವು ವಲಸೆಯ ಮಧ್ಯದಲ್ಲಿ ನಿಲುಗಡೆಗೆ ಯಾವುದೇ ಖಚಿತ ನಂಟು ಹೊಂದಿರುವುದನ್ನು ತೋರಿಸಲಿಲ್ಲ.[೫೧]

ವಲಸೆಯ ಮಾರ್ಗದಲ್ಲಿ ಬೇಟೆಯಾಡುವಿಕೆಯು ವಲಸಿಗ ಹಕ್ಕಿಗಳ ಅಪಾರ ಸಾವಿಗೆ ಕಾರಣವಾಗಬಹುದು. ವಲಸೆಯ ಮಾರ್ಗದಲ್ಲಿ, ನಿರ್ದಿಷ್ಟವಾಗಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ವಲಯದಲ್ಲಿ ಬೇಟೆಯಾಡುವಿಕೆಯ ಕಾರಣ, ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತಿದ್ದ ಸೈಬೀರಿಯನ್‌ ಕೊಕ್ಕರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಚಳಿಗಾಲದಲ್ಲಿ ಭಾರತಕ್ಕೆ ಆಗಮಿಸಿದ ಈ ಹಕ್ಕಿಗಳು ಕೊನೆಯ ಬಾರಿಗೆ 2002ರಲ್ಲಿ ಅವುಗಳ ನೆಚ್ಚಿನ ಕಿಯೊಲಾದೇವ್‌ ರಾಷ್ಟ್ರೀಯ ಉದ್ಯಾನದಲ್ಲಿ ಕಾಣಸಿಕ್ಕಿತ್ತು.[೫೨]ವಿದ್ಯುತ್‌ ತಂತಿಗಳು, ಪವನ ಯಂತ್ರಗಳು ಮತ್ತು ಕಡಲತೀರದಾಚೆಗಿನ ತೈಲ ಸಂಸ್ಕರಣಾ ಯಂತ್ರಗಳು ಸಹ ವಲಸೆಯ ಹಕ್ಕಿಗಳಿಗೆ ಹಾನಿಕಾರಕವಾಗಬಹುದು.[೫೩] ನೆಲದ ಬಳಕೆಯಲ್ಲಿ ಬದಲಾವಣೆಗಳ ಮೂಲಕ ಹಕ್ಕಿಯ ವಾಸಸ್ಥಾನಕ್ಕೆ ಹಾನಿಯು ಅತಿ ದೊಡ್ಡ ಅಪಾಯವಾಗಿದೆ.ನಿಲುಗಡೆಗಳಾದ ಆಳವಿಲ್ಲದ ನೀರಿನ ಪ್ರದೇಶಗಳು ಮತ್ತು ಚಳಿಗಾಲದ ಸ್ಥಳಗಳನ್ನು ಮಾನವನ ಬಳಕೆಗಾಗಿ ವಿಶೇಷವಾಗಿ ಬರಿದುಮಾಡಿ ವಾಸಕ್ಕೆ ಅಥವಾ ಕೃಷಿಗೆ ಮರುಬಳಕೆ ಮಾಡುವ ಮೂಲಕ ವಿಶೇಷವಾಗಿ ಅಪಾಯ ತಂದೊಡ್ಡಿದೆ.

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • Alerstam, T. (2001). ಡಿಟೂರ್ಸ್‌ ಇನ್‌ ಬರ್ಡ್‌ ಮೈಗ್ರೇಷನ್‌. ಜರ್ನಲ್‌ ಆಫ್‌ ಥಿಯರೆಟಿಕಲ್ ಬಯಾಲಜಿ , 209, 319-331. (PDF Orn-lab.ekol.lu.se[ಶಾಶ್ವತವಾಗಿ ಮಡಿದ ಕೊಂಡಿ])
  • Berthold, Peter (2001) ಬರ್ಡ್‌ ಮೈಗ್ರೇಷನ್‌: ಎ ಜನರಲ್‌ ಸರ್ವೇ. ಎರಡನೇ ಆವೃತ್ತಿ. ಆಕ್ಸ್‌ಫರ್ಡ್‌ ಯೂನಿವರ್ಸಿಟ್ ಪ್ರೆಸ್ ISBN 0-913757-65-9
  • Dingle, Hugh. ಮೈಗ್ರೇಷನ್‌: ದಿ ಬಯಾಲಜಿ ಆಫ್‌ ಲೈಫ್‌ ಆನ್‌ ದಿ ಮೂವ್‌. ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 1996.
  • Weidensaul, Scott. ಲಿವಿಂಗ್‌ ಆನ್‌ ದಿ ವಿಂಡ್‌: ಅಕ್ರಾಸ್‌ ದಿ ಹೆಮಿಸ್ಫಿಯರ್‌ ವಿತ್‌ ಮೈಗ್ರೇಟರಿ ಬರ್ಡ್ಸ್‌. ಡಗ್ಲಸ್‌ & ಮೆಕಿಂಟೈರ್‌, 1999.
  • ಡೆಡಿಕೇಟೆಡ್ ಇಶ್ಯೂ ಆಫ್ ಫಿಲೋಸೋಫಿಕಲ್ ಟ್ರಾನ್ಸಾಕ್ಷನ್ಸ್ B ಆನ್ ಅಡಾಪ್ಟೇಷನ್ ಟು ದಿ ಆನ್ಯೂಯಲ್ ಸೈಕಲ್ [ಶಾಶ್ವತವಾಗಿ ಮಡಿದ ಕೊಂಡಿ]ಕೆಲವು ಲೇಖನಗಳು ಉಚಿತವಾಗಿ ಲಭ್ಯ.[ಶಾಶ್ವತವಾಗಿ ಮಡಿದ ಕೊಂಡಿ]
  • Hobson, Keith and Wassenaar, Leonard (2008) ಟ್ರ್ಯಾಕಿಂಗ್‌ ಅನಿಮಲ್‌ ಮೈಗ್ರೇಷನ್‌ ವಿತ್‌ ಸ್ಟ್ಯಾಪಲ್‌ ಐಸೊಟೋಪ್ಸ್‌. ಅಕ್ಯಾಡೆಮಿಕ್‌ ಪ್ರೆಸ್‌. ISBN 978-0-12-373867-7

ಬಾಹ್ಯ ಕೊಂಡಿಗಳು

  1. REDIRECT Template:Swarming