ಗ್ರೆಗರ್ ಮೆಂಡೆಲ್

ಗಣಿತಜ್ಞ

ಗ್ರೆಗೋರ್ ಯೋಹಾನ್ ಮೆಂಡಲ್ (1822-84) ಆಸ್ಟ್ರಿಯದ ಪ್ರಸಿದ್ಧ ತಳಿವಿಜ್ಞಾನಿ.

ಗ್ರೆಗರ್ ಮೆಂಡೆಲ್

ಜನನ, ಬಾಲ್ಯ, ವಿದ್ಯಾಭ್ಯಾಸ

1822 ಜುಲೈ 22ರಂದು ಆಸ್ಟ್ರಿಯದ ಉತ್ತರ ಮೊರೇವಿಯ ಜಿಲ್ಲೆಯ ಹೈನ್‌ಸೈನ್‌ಡಾರ್ಫ್ ಎಂಬ ಹಳ್ಳಿಯಲ್ಲಿ ಜನಿಸಿದ.[೧] ಈ ಹಳ್ಳಿಯ ಈಗಿನ ಹೆಸರು ಹ್ರನೀಸ್. ತಂದೆ ಆಂಟೋನ್ ಮೆಂಡಲ್. ಕುಟುಂಬದ ಪ್ರಧಾನವೃತ್ತಿ ಬೇಸಾಯವಾಗಿದ್ದು ಜೇನುಸಾಕಣೆ ಮತ್ತು ಗಿಡಗಳ ಕಸಿಕಟ್ಟುವುದರಲ್ಲಿ ಈತನಿಗೆ ಆಸಕ್ತಿಯಿತ್ತು.

ಗ್ರೆಗೋರ್‌ನ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಿನಲ್ಲೆ ಆರಂಭವಾಯಿತು. ಪ್ರಕೃತಿವಿಜ್ಞಾನ ಅಧ್ಯಯನ ಪಠ್ಯಕ್ರಮಗಳಲ್ಲೊಂದಾದ್ದರಿಂದ ಉಪಾಧ್ಯಾಯರುಗಳು ಮಕ್ಕಳನ್ನು ಬಯಲಿಗೆ ಪ್ರಕೃತಿ ಅಧ್ಯಯನಕ್ಕಾಗಿ ಕರೆದುಕೊಂಡು ಹೋಗಿ ಅವರಲ್ಲಿ ಪ್ರಚೋದನೆಯನ್ನುಂಟು ಮಾಡುತ್ತಿದ್ದರು. ಗ್ರೆಗೋರ್ ಪ್ರಕೃತಿಯಲ್ಲಿ ಕಂಡುಬಂದ ಕೆಲವು ವಿಚಿತ್ರ ವಿಷಯಗಳನ್ನು ಕುರಿತು ತನ್ನ ತಂದೆತಾಯಿಗಳ ಜೊತೆಯಲ್ಲೂ ಗುರುಹಿರಿಯರ ಜೊತೆಯಲ್ಲೂ ಚರ್ಚಿಸುತ್ತಿದ್ದನಲ್ಲದೆ ಇವಕ್ಕೆ ಕಾರಣಗಳನ್ನು ಕಂಡುಹಿಡಿಯುವ ದಿಸೆಯಲ್ಲಿ ಯೋಚಿಸುತ್ತಿದ್ದ. ಯಾವುದೇ ಗಿಡದ ಆಕಾರ, ಬಣ್ಣ, ಬೀಜಗಳ ಆಕಾರ, ಹೂಗಳ ವಿನ್ಯಾಸ, ಇವುಗಳಿಗೆ ಏನು ಕಾರಣ, ಪ್ರೇರಕಗಳಾವುವು ಮುಂತಾದ ವಿಷಯಗಳು ಗ್ರೆಗೋರ್‌ನನ್ನು ಕಾಡುತ್ತಿದ್ದವು.

ಶಾಲೆಯ ಅಧ್ಯಾಪಕರು ಯೋಹಾನನ ಮೇಲ್ಮಟ್ಟದ ಆಸಕ್ತಿಯನ್ನೂ ಪ್ರತಿಭೆಯನ್ನೂ ಗಮನಿಸಿ ತಂದೆತಾಯಿಗಳಿಗೆ ಸಲಹೆ ನೀಡಿ ಪಕ್ಕದ ಊರಾದ ಲೈಪ್‌ನಿಕ್ ಎಂಬಲ್ಲಿಯ ಶಾಲೆಗೆ ಸೇರಿಸಲು ಸಲಹೆ ನೀಡಿದರು. ಲೈಪ್‌ನಿಕ್‌ನ ಶಾಲೆಯಲ್ಲಿ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿ ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿದ. ಇಂಥ ಪ್ರತಿಭಾವಂತ ವಿದ್ಯಾರ್ಥಿಯ ಮುನ್ನಡೆಗೆ ತೊಂದರೆ ಉಂಟಾಗಬಾರದೆಂದು ಗ್ರೆಗೋರ್‌ನ ತಂದೆತಾಯಿಗಳು ಟ್ರೋಪೌ ಎಂಬ ಊರಿಗೆ ಹೆಚ್ಚಿನ ವಿದ್ಯಾರ್ಜನೆಗಾಗಿ ಕಳುಹಿಸಿಕೊಟ್ಟರು. ಈ ಊರಿನ ಈಗಿನ ಹೆಸರು ಪ್ರೇರೊ. ಮನೆಯ ಆರ್ಥಿಕಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲವಾದ್ದರಿಂದ ಗ್ರೆಗೋರ್ ಬಲು ಕಷ್ಟದಿಂದ ವಿದ್ಯಾಭ್ಯಾಸ ಮಾಡಬೇಕಾಯಿತು. ಕಾಲಕಾಲಕ್ಕೆ ಆಹಾರವಿಲ್ಲದೆ ದೇಹ ಕೃಶವಾಯಿತು. ಅನಾರೋಗ್ಯನಿಮಿತ್ತ ಹುಟ್ಟೂರಿಗೆ ಹೋಗಿ ಸುಧಾರಿಸಿಕೊಳ್ಳುತ್ತಿದ್ದ. ಈ ಮಧ್ಯೆ ಗ್ರೆಗೋರ್‌ನ ತಂದೆ ಅಪಘಾತಕ್ಕೆ ಒಳಗಾಗಿ, ಅಂಗಹೀನನಾದ್ದರಿಂದ ಸಂಸಾರಕ್ಕೆ ಇದ್ದ ಸಂಪಾದನೆಯೂ ಕುಂಠಿತವಾಯಿತು. ಇಷ್ಟೆಲ್ಲ ಕಷ್ಟವನ್ನು ಎದುರಿಸಿ ಛಲವನ್ನು ಬಿಡದೆ ಗ್ರೆಗೋರ್, ಕೆಲವು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಹಣವನ್ನು ಸಂಪಾದಿಸಿ ವಿದ್ಯಾರ್ಜನೆಯನ್ನು ಬಿಡದೆ ಮುಂದುವರಿಸಿದನಲ್ಲದೆ 1840ರಲ್ಲಿ ನಡೆದ ಪ್ರೌಢಶಾಲಾ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ತೇರ್ಗಡೆ ಹೊಂದಿದ. ವಿದ್ಯಾಭ್ಯಾಸ ಮುಂದುವರಿಸಲು ಆಕಾಂಕ್ಷೆಯಿದ್ದರೂ ಅನುಕೂಲವಿರಲಿಲ್ಲ. ಇಂಥ ಸಮಯದಲ್ಲಿ ಗ್ರೆಗೋರ್‌ನ ತಂಗಿಯಾದ ತೆರೇಸಿಯ, ಅಣ್ಣನ ಆಸೆ ಮಣ್ಣುಪಾಲಾಗಲು ಬಿಡದೆ, ತನ್ನ ವರದಕ್ಷಿಣೆಗಾಗಿ ತಂದೆ ಕೊಟ್ಟಿದ್ದ ಕುಟುಂಬದ ಸ್ಥಿರ ಆಸ್ತಿಯ ಭಾಗವನ್ನು ವಿತರಣೆಮಾಡಿ, ಓದನ್ನು ಮುಂದುವರಿಸಲು ಸಹಾಯಮಾಡಿದಳು. ಓಲ್‌ಮಟ್ಸ್ ಎಂಬ ಊರಿನಲ್ಲಿದ್ದ (ಈಗಿನ ಹೆಸರು ಓಲೋಮಕ್) ತತ್ತ್ವಶಾಸ್ತ್ರಾಧ್ಯಯನ ಸಂಸ್ಥೆಗೆ ಸೇರಿಕೊಂಡ. ಬಡತನ ಇಲ್ಲಿಯೂ ಕಾಡಿತು. ಇದರಿಂದ ಬೇಸರಗೊಂಡ ಗ್ರೆಗೋರ್ ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಹಿಡಿಯುವುದೇ ಯುಕ್ತ ಎಂದ. ಯೋಚಿಸಿದ ಮನದ ತೊಳಲಾಟವನ್ನು ಗುರುಗಳಾದ ಫೈಡ್ರಿಶ್ ಫ್ರಾನ್ಸ್‌ರವರಲ್ಲಿ ತೋಡಿಕೊಂಡಾಗ ಕ್ರೈಸ್ತಸನ್ಯಾಸಿ ಜೀವನವೇ ತಕ್ಕುದೆಂದು ಬುದ್ಧಿವಾದ ಹೇಳಿದರು.

ವೃತ್ತಿ, ಸಾಧನೆಗಳು

ಗುರುಗಳ ಬಯಕೆಯಂತೆ ಬ್ರೂಯಿನ್‌ನಲ್ಲಿದ್ದ ಸೇಂಟ್ ತಾಮಸ್‌ರ ಕ್ರೈಸ್ತಮತವನ್ನು ಪ್ರತಿಜ್ಞಾಪೂರ್ವಕವಾಗಿ ಸ್ವೀಕರಿಸಿ ಅಗಸ್ಟೀನಿಯನ್ ಪಂಥದ ಶಿಷ್ಯನಾದ.[೨] ಆಗ ಈತನಿಗೆ ಕೇವಲ ಇಪ್ಪತ್ತೊಂದು ವರ್ಷ ವಯಸ್ಸು. ಇಲ್ಲಿ ನಾಲ್ಕು ವರ್ಷಗಳ ಕಾಲ ಶ್ರದ್ಧಾಪೂರ್ವಕ, ಧಾರ್ಮಿಕ ಜೀವನ ನಡೆಸಿ ವಿಧಿಪೂರ್ವಕವಾಗಿ ಕ್ರೈಸ್ತ ಸಂನ್ಯಾಸ ದೀಕ್ಷೆಯನ್ನು ಪಡೆದು ಗ್ರೆಗೊರ್ ಎಂಬ ನಾಮಾಂಕಿತ ಪಡೆದ.[೩] ಕ್ರೈಸ್ತ ಪಾದ್ರಿಯಾಗಿದ್ದರೂ ಉಪಾಧ್ಯಾಯ ವೃತ್ತಿಯ ಕಡೆಗೆ ಈತನ ಒಲವು. ಒಂದು ಪ್ರೌಢಶಾಲೆಯಲ್ಲಿ ಉಪಾಧ್ಯಾಯನಾಗಿ ಸೇವೆ ಸಲ್ಲಿಸಲು ಅವಕಾಶ ಒದಗಿತು. ಸೌಜನ್ಯ, ಸ್ನೇಹಪರತೆ, ಕಾರ್ಯತತ್ಪರತೆಯಿಂದ ಎಲ್ಲರ ಮನವನ್ನು ಸೆಳೆದ. ಸಹೋದ್ಯೋಗಿ ಪ್ರಚೋದನೆಯಿಂದ ಬೋಧಕವೃತ್ತಿಯ ಅರ್ಹತಾಪರೀಕ್ಷೆಗೆ ಕುಳಿತುಕೊಳ್ಳಲು ನಿರ್ಧರಿಸಿದ. ಆದರೆ ಪ್ರಯತ್ನ ಸಫಲವಾಗಲಿಲ್ಲ. ಮೆಂಡಲನನ್ನು ಪರೀಕ್ಷಿಸಿದ ಪರಿಣತರು ಆತನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಗಮನಿಸಿ ವಿಶ್ವವಿದ್ಯಾಲಯ ತರಬೇತಿಗೆ ಕಳುಹಿಸಬೇಕೆಂದು ಸಲಹೆ ನೀಡಿ ಮುಖ್ಯಾಧಿಕಾರಿಯ ಮನ ಒಲಿಸಿದರು. ಇದರಿಂದಾಗಿ 1851ರಿಂದ ಎರಡು ವರ್ಷಗಳ ಕಾಲ ಭೌತವಿಜ್ಞಾನ, ಗಣಿತವಿಜ್ಞಾನ ಮತ್ತು ಪ್ರಕೃತಿವಿಜ್ಞಾನಗಳ ಅಧ್ಯಯನ ಮುಗಿಸಿ ಹಿಂತಿರುಗಿ ಪುನಃ ಅಧ್ಯಾಪಕವೃತ್ತಿಯನ್ನು ಹಿಡಿದ. 1856ರಲ್ಲಿ ಪುನಃ ಬೋಧಕ ವೃತ್ತಿಯ ಅರ್ಹತಾ ಪರೀಕ್ಷೆಗೆ ಕುಳಿತು ಅನುತ್ತೀರ್ಣನಾದ.[೪] ಆದರೂ ಇವನ ಪ್ರತಿಭೆಯನ್ನು ಗುರುತಿಸಿದ ಶಾಲಾ ಸಂಸ್ಥೆಯ ಮುಖ್ಯರು ಬೋಧಕವೃತ್ತಿಯಲ್ಲಿ ಉಳಿಯಲು ಅವಕಾಶ ಕೊಟ್ಟರು. ಇದರಿಂದ ಮೆಂಡಲನು ಜೀವನದಲ್ಲಿ ಬಯಸಿದ ಶಾಂತಿ ಮತ್ತು ಸುಖ ಸಿಕ್ಕಿತು.

ಉಪಾಧ್ಯಾಯ ವೃತ್ತಿಯಲ್ಲಿ ಮೆಂಡಲನಿಗೆ ಹೆಚ್ಚು ವಿರಾಮ ದೊರೆಯುತ್ತಿದ್ದುದರಿಂದ ತನ್ನ ಮನದಲ್ಲಿ ಪ್ರಚೋದನೆಗೊಳ್ಳುತ್ತಿದ್ದ ಅದ್ಭುತ ಪ್ರಕೃತಿಲೀಲೆಯ ಸಮಸ್ಯೆಗಳ ಅಧ್ಯಯನ ನಡೆಸಲು ಅವಕಾಶವಾಯಿತು. ತಾನು ವಾಸಮಾಡುತ್ತಿದ್ದ ಕ್ರೈಸ್ತಮಠವೇ ಪ್ರಯೋಗಶಾಲೆಯಾಯಿತು. ಅಲ್ಲಿಯೇ ಮಿಶ್ರತಳಿ ಮತ್ತು ಅನುವಂಶೀಯತೆ ಬಗ್ಗೆ ವಿಶೇಷ ಪ್ರಯೋಗಗಳನ್ನು ನಡೆಸಿದ. ಈ ಪ್ರಯೋಗಗಳಿಗೆ ಬಟಾಣಿಗಿಡವೇ ಬಹಳ ಅನುಕೂಲವಾದದ್ದು ಎಂದು ಯೋಚಿಸಿ ಈ ಗಿಡವನ್ನು ಉಪಯೋಗಿಸಿ ಪ್ರಯೋಗಗಳನ್ನು ನಡೆಸಿದ.[೫][೬][೭] ಎಂಟುವರ್ಷಗಳ ಕಾಲ (1856-64) ಪ್ರಯೋಗ ನಡೆಸಿ ಪ್ರತಿಯೊಂದು ಪೀಳಿಗೆಯ ಪ್ರತಿಯೊಂದು ಗಿಡದ ಗುಣ ವಿಶೇಷವನ್ನೂ ಪರೀಕ್ಷಿಸಿ, ನಿಖರವಾದ ಅಂಕಿಅಂಶಗಳನ್ನು ಸಂಗ್ರಹಿಸಿ, ಅವನ್ನು ಗಣಿತಾತ್ಮಕ ಸೂತ್ರಗಳಿಗೆ ಅಳವಡಿಸಿಕೊಂಡು ಅನುವಂಶೀಯತೆಯ ಮೂಲಭೂತವಾದ ಎರಡು ನಿಯಮಗಳನ್ನು ನಿರೂಪಿಸಿದ.

1851ರಲ್ಲಿ ಪ್ರಕೃತಿ ವಿಜ್ಞಾನ ಸಂಘ ಸ್ಥಾಪನೆಯಾಗಿತ್ತು. ಒಂದು ದಿನ ಮೆಂಡಲನ ಭಾಷಣವನ್ನು ಅಲ್ಲಿ ಏರ್ಪಡಿಸಿದ್ದರು. ಸಸ್ಯಗಳಲ್ಲಿ ತಳಿಮಿಶ್ರಣ ಪ್ರಯೋಗ ಪರೀಕ್ಷೆಗಳು ಮತ್ತು ತಳಿಮಿಶ್ರಣ ಪ್ರಯೋಗ ಫಲಿತಾಂಶಗಳಿಂದ ಕಂಡ ಅನುವಂಶೀಯತೆಯ ನಿಯಮಗಳು ಎಂಬ ವಿಷಯಗಳ ಮೇಲೆ ಭಾಷಣ ಮಾಡಿದ. ಇವನ ಭಾಷಣಗಳು ಸಂಘದ ವಾರ್ಷಿಕ ವರದಿಯಲ್ಲಿ ಪ್ರಕಟವಾದುವು. ಅನಂತರ ಇವನು ಮಠದ ಮುಖ್ಯಾಧಿಕಾರಿಯಾದ.[೮] ಸಮಯಾಭಾವದಿಂದ ತಳೀಕರಣ ಕುರಿತ ಕೆಲಸ ಕುಂಠಿತವಾಯಿತು. ಈತ ಬದುಕಿರುವ ತನಕ ಈತನ ಸಂಶೋಧನೆ ಮೂಲೆ ಸೇರಿ ಮರೆತುಹೋದುದರಿಂದ ಈತನ ವೈಜ್ಞಾನಿಕ ಕೊಡುಗೆಯನ್ನು ಯಾರೂ ಗುರುತಿಸಲಿಲ್ಲ. 1884 ಜನವರಿ 4ರಂದು ಈತ ಸಾವನ್ನಪ್ಪಿದ. 1900ರಲ್ಲಿ ಹಾಲೆಂಡಿನ ಹ್ಯೂಗೋಡ ವ್ರೀಸ್‌ನೆಂಬ ವಿಜ್ಞಾನಿ ಸಸ್ಯದ ಮಿಶ್ರತಳಿಗಳು ಎಂಬ ಗ್ರಂಥವನ್ನು ಓದುತ್ತಿದ್ದಾಗ, ತನ್ನ ಫಲಿತಾಂಶಗಳನ್ನೇ ಹೋಲುತ್ತಿದ್ದ ಮೆಂಡಲನ ದತ್ತಾಂಶಗಳನ್ನು ಕಂಡು, ತಾನು ಕಂಡ ಅನುವಂಶೀಯತೆಯ ನಿಯಮಗಳನ್ನೇ ಮೆಂಡಲನು 35 ವರ್ಷಗಳ ಹಿಂದೆ ಆವಿಷ್ಕರಿಸಿದ್ದರಿಂದ ಅವನಿಗೆ ಮಾನ್ಯತೆ ಕೊಟ್ಟು, ಆ ವಿಷಯವನ್ನು ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಿಸಿದ. ಮೆಂಡಲ್ ಆವಿಷ್ಕರಿಸಿದ ಅನುವಂಶೀಯತೆಯ ನಿಯಮಗಳು ಮೆಂಡಲ್ ನಿಯಮಗಳು ಎಂದು ಹೆಸರಾದುವು.[೯]

ಪ್ರಾರಂಭದಲ್ಲಿ ಕೇವಲ ಕಲೆಯಾಗಿದ್ದ ತಳೀಕರಣಶಾಸ್ತ್ರಕ್ಕೆ ಮೆಂಡಲನ ಪ್ರಯೋಗಗಳಿಂದ ವೈಜ್ಞಾನಿಕ ತಳಹದಿ ದೊರೆತಂತಾಗಿ ತಳಿ ಸುಧಾರಣೆಗೆ ನೇರ ಹಾದಿ ರೂಪುಗೊಂಡಿತು. ಈತನನ್ನು ಆಧುನಿಕ ತಳಿವಿಜ್ಞಾನದ ಪಿತಾಮಹ ಎಂದೂ ಕರೆದಿದೆ.[೧೦]

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: