ರುಚಿ

ರುಚಿಯು ಪದಾರ್ಥಗಳ ಪ್ರಮುಖ ರಾಸಾಯನಿಕ ಗುಣಗಳನ್ನು ಗುರುತಿಸಲು ಜೀವಿಗಳ ಒಂದು ಇಂದ್ರಿಯ ಕ್ರಿಯೆ. ಮುಖ್ಯವಾಗಿ ಒಂದು ಪದಾರ್ಥವು ಆಹಾರವೋ ಅಥವಾ ವಿಷವೋ ಎಂದು ಗುರುತಿಸಲು ಇದು ಕೆಲಸ ಮಾಡುತ್ತದೆ. ರುಚಿಯನ್ನು ಗುರುತಿಸುವ ಇಂದ್ರಿಯವು ನಾಲಿಗೆ. ನಾಲಿಗೆಯು ರುಚಿಯ ಜೊತೆಗೆ ಪದಾರ್ಥಗಳ ಇತರ ಗುಣಗಳನ್ನೂ ಗುರುತಿಸಿ ಆ ಪದಾರ್ಥದ ಅನುಭವವನ್ನು ನೀಡುತ್ತದೆ.

ರುಚಿಯನ್ನು ಗುರುತಿಸಲು ಸಹಾಯ ಮಾಡುವ ನಾಲಿಗೆಯ ಭಾಗ

ವಾಸನೆಗೂ ರುಚಿಗೂ ನಿಕಟ ಸಂಬಂಧ ಉಂಟು. ಆದರೆ ನಮಗೆ ಆಹಾರದ ಪೂರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ವಾಸನೆ ರುಚಿಗಳೆರಡೇ ಸಾಲವು. ಜೊತೆಗೆ ನೋಟ ಶಬ್ದಗಳ ಅರಿವು ಸಹ ಬೇಕು. ವಿಚಿತ್ರವೆಂದರೆ ಹಿಂದೆಂದೂ ರುಚಿ ಅನುಭವವಿಲ್ಲದ ಪ್ರಬಲರುಚಿ ಇಲ್ಲದ ಒಂದು ರಾಸಾಯನಿಕ ವಸ್ತುವನ್ನು ಮೊದಲ ಬಾರಿ ರುಚಿ ನೋಡಿದರೆ, ಆ ವಸ್ತುವಿನ ರುಚಿ ಇಂಥದ್ದೇ ಎಂದು ಹೇಳಲು ಕಷ್ಟವಾದೀತು. ವಸ್ತುವಿನ ರಾಸಾಯನಿಕ ರಚನೆಗೂ ರುಚಿಗೂ ಸಂಬಂಧ ಉಂಟು ಎಂದು ತಿಳಿದಿದ್ದರೂ ರುಚಿಯ ಸಂಪೂರ್ಣ ರಾಸಾಯನಿಕ ಹಿನ್ನಲೆ ಮಾತ್ರ ಅರ್ಥವಾಗಿಲ್ಲ. ಈ ಪ್ರಚೋದನೆ ಘ್ರಾಣ ನರತಂತುಗಳ ತುತ್ತತುದಿಯ ಅಂಗಗಳಲ್ಲಿ ಪ್ರಾರಂಭವಾಗುತ್ತದೆ. ಲವಂಗ ಮತ್ತು ಮೆಣಸು ರುಚಿಯೊಂದಿಗೆ ಉರಿಯನ್ನೂ ಉಂಟು ಮಾಡುತ್ತವೆ. ಉರಿ ರುಚಿಗೆ ಸೇರಿದ್ದಲ್ಲ. ಉಪ್ಪು, ಹುಳಿ, ಸಿಹಿ ಮತ್ತು ಕಹಿಗಳು ರುಚಿಗೆ ಸೇರಿದ್ದು. ಉರಿಯಾದರೋ ರಾಸಾಯನಿಕ ಪ್ರಚೋದಿತ.

ರುಚಿಮೊಗ್ಗುಗಳು

ರುಚಿಮೊಗ್ಗುಗಳು ಜೀವಕೋಶಗಳ ಗುಚ್ಛ.[೧] ಇವುಗಳ ಆಕಾರ ಬೋಗುಣಿಯಂತೆ. ಈ ಕೋಶಗಳು ನಾಲಗೆಯಲ್ಲಿ ಅಡಕವಾಗಿದ್ದು ರುಚಿರಂಧ್ರಗಳ ಮೂಲಕ ಬಾಯ ಒಳಕ್ಕೆ ತೆರೆಯುತ್ತವೆ. ಈ ಗುಚ್ಛದಲ್ಲಿರುವ ಜೀವಕೋಶಗಳು ಎರಡು ವಿಧ: ತಳಪಾಯದಲ್ಲಿರುವ ಆಸರೆಕೋಶಗಳು ಹಾಗೂ ರುಚಿಗ್ರಾಹಕ (ಗಸ್ಟೇಟರಿ) ಸೂಕ್ಷ್ಮ ತಂತು ಕೋಶಗಳು. ಇವುಗಳ ತುದಿಯಲ್ಲಿ ನವಿರಾದ ಕೂದಲಿನ ಎಳೆ ರುಚಿರಂಧ್ರದ ಹೊರಗೆ ಚಾಚಿರುತ್ತದೆ. ಮನುಷ್ಯನ ಮತ್ತು ಸ್ತನಿ ಪ್ರಾಣಿಗಳ ನಾಲಗೆಗಳಲ್ಲಿ ಫಂಗಿಫಾರಮ್, ಪೋಲಿಯೇಟ್ ಮತ್ತು ಸರ್‌ಕಂವ್ಯಾಲೇಟ್ ಪ್ಯಾಪಿಲ್ಲೆ ಎಂಬ ಉಬ್ಬುಗಳ ಮೇಲೆ ಹಾಗೂ ಅವುಗಳ ಪಕ್ಕಗಳಲ್ಲಿ ರುಚಿಮೊಗ್ಗುಗಳು ಇವೆ. ಅಲ್ಲದೆ ನಾಲಗೆ ಗಂಟಲುಗಳ ಮೇಲ್ಮೈಯಲ್ಲೂ ಅಡಕವಾಗಿರಬಹುದು. ರುಚಿಮೊಗ್ಗುಗಳನ್ನು ಹೋಗುವ ಜ್ಞಾನವಾಹಿ ನರತಂತು ರುಚಿಮೊಗ್ಗುಗಳ ಕೋಶಗಳ ಸುತ್ತ ಹೆಣೆದುಕೊಂಡು ಆವರಿಸಿ ಒಂದಲ್ಲ ಒಂದು ರುಚಿಗ್ರಾಹಕ ಕೋಶದೊಡನೆ ಸಂಪರ್ಕಿಸಿರುತ್ತದೆ. ನಾಲಗೆಯ ನರವನ್ನು ತುಂಡುಮಾಡಿದರೆ ನರತಂತುಗಳೂ ರುಚಿಮೊಗ್ಗಗಳೂ ಕ್ಷೀಣಿಸಿ ಹೋಗುತ್ತವೆ. ನರವನ್ನು ಪುನಃ ಸೂಕ್ತರೀತಿಯಲ್ಲಿ ಕೂಡಿಸಿದರೆ ಆ ಜಾಗದಲ್ಲೇ ಇರುವ ಮೇಲು ಪೊರೆಯ ಕೋಶಗಳಿಂದ ರುಚಿಮೊಗ್ಗುಗಳು ಪುನಃ ರೂಪುಗೊಳ್ಳುತ್ತವೆ.

ಕೀಟಗಳಲ್ಲಿ ರುಚಿಯ ಅನುಭವ

ಅಕಶೇರುಕಗಳಲ್ಲಿ, ಉದಾಹರಣೆಗೆ ಕೀಟಗಳಲ್ಲಿ, ಘ್ರಾಣ ಹಾಗೂ ರುಚಿಯ ಪೂರ್ಣ ವಿಭೇದವಿರುವುದನ್ನು ಕಾಣಬಹುದು. ಜಠರಪದಿ, ಹುಳುಗಳು ಇತ್ಯಾದಿ ಪ್ರಾಣಿಗಳು ಕಹಿ ಬೆರೆತ ಆಹಾರವನ್ನು ತ್ಯಜಿಸುವುದನ್ನೂ ಸಿಹಿ ಬೆರೆತ ಆಹಾರವನ್ನು ಸೇವಿಸುವುದನ್ನೂ ಪ್ರಯೋಗಗಳಿಂದ ಇತ್ಯರ್ಥ ಮಾಡಿ ತೋರಿಸಬಹುದು. ಕೀಟಗಳಿಗೆ ಅವುಗಳ ಕಾಲಿನ ಸುತ್ತ ರೋಮ ಹಾಗೂ ಬಾಯಿ ಸುತ್ತ ರಾಸಾಯನಿಕ ಗ್ರಾಹಿಗಳು ಸಾಕಷ್ಟಿವೆ. ಇವುಗಳಿಂದ ಕೀಟಗಳಿಗೆ ಸ್ಪರ್ಶದ ಅರಿವಾಗುವುದೊಂದೇ ಅಲ್ಲದೆ ರುಚಿಗ್ರಹಣವೂ ಆಗುತ್ತದೆ. ರೋಮ ಒಂದಕ್ಕೆ ಸಕ್ಕರೆ ತೊಟ್ಟಿನ ಸ್ಪರ್ಶ ಮಾಡಿಸಿದರೆ ಅದರ ಹೀರುಕೊಳವೆ (ಪ್ರೊಬೋಸಿಸ್) ಮುಂದಕ್ಕೆ ಚಾಚಿ ಬರುತ್ತದೆ. ಈ ತೊಟ್ಟಿಗೆ ಉಪ್ಪು ಬೆರೆಸಿ ಸ್ಪರ್ಶ ಮಾಡಿಸಿದರೆ ಹೀರುಕೊಳವೆ ಅಷ್ಟಾಗಿ ಮುಂಚಾಚುವುದಿಲ್ಲ. ನೊಣಗಳ ತುಟಿರೋಮಗಳಲ್ಲಿ ಮೂರು ನರತಂತುಗಳಿವೆ. ಇವುಗಳಲ್ಲಿ ಎರಡು ರೋಮಗಳು ಮಾತ್ರ ತುದಿಯಲ್ಲಿರುವ ರಾಸಾಯನಿಕ ಗ್ರಾಹಿಗಳವರೆಗೆ ಮುಂದುವರೆಯುತ್ತವೆ. ಈ ತಂತುಗಳ ಪ್ರಚೋದನೆಯಿಂದ ಉಂಟಾದ ವಿದ್ಯುತ್ ಸ್ಪಂದನವನ್ನು ನಿರೂಪಿಸಿ ಪರಿಶೀಲಿಸಲು ಸಾಧ್ಯ. ಈ ರಾಸಾಯನಿಕ ಗ್ರಾಹಿಗಳು ಹೀರುಕೊಳವೆಯಲ್ಲೂ ಗ್ರಾಹಕತಂತುವಿನಲ್ಲೂ ಕೆಲವು ವೇಳೆ ಇರಬಹುದಾದರೂ ಇವೆರಡು ಅಂಗಗಳು ಮಾತ್ರ ಮುಖ್ಯವಾಗಿ ಕೀಟದ ಘ್ರಾಣೇಂದ್ರಿಯಗಳು.

ಮಾನವರಲ್ಲಿ (ಕಶೇರುಕ) ರುಚಿಯ ಅನುಭವ

ರುಚಿ ಒಂದರ ಅರಿವನ್ನು ಮಾತ್ರ ಉಂಟು ಮಾಡುವ ಏಕೈಕ ಜ್ಞಾನವಾಹಿ ನರತಂತು ಕಶೇರುಕ ಪ್ರಾಣಿವರ್ಗದಲ್ಲಿ ಇಲ್ಲ. ಮೂರು ನರಗಳು ಬೇರೆ ಅರಿವಿನ ಜೊತೆಗೆ ರುಚಿಯ ಅರಿವನ್ನೂ ಉಂಟು ಮಾಡುತ್ತವೆ. ಮಾನವನಲ್ಲಿ ನಾಲಗೆಯ ಮುಂದಿನ 2/3 ಭಾಗದಲ್ಲಿ ಜಿಹ್ವಾನರದ ವ್ಯಾಪನೆ ಉಂಟು.[೨][೩] ಹಿಂದಿರುವ 1/3 ಭಾಗಕ್ಕೆ ಗಂಟಲ ಕುಹರ ಜಿಹ್ವಾನರದ ವ್ಯಾಪನೆ ಇದೆ. ಗಂಟಲು, ಧ್ವನಿಪೆಟ್ಟಿಗೆಗಳಿಗೆ ವೇಗಸ್ ನರದ ಕೆಲವು ಶಾಖೆಗಳು ಹೋಗುತ್ತವೆ. ಸ್ಪರ್ಶ, ಉಷ್ಣತೆ ಹಾಗೂ ನೋವುಗಳ ಅರಿವನ್ನು ಉಂಟುಮಾಡುವ ಕ್ರಿಯೆಯಲ್ಲಿ ಜಿಹ್ವಾನರಗಳು ಭಾಗಿಗಳಾಗುವುವು. ನಾಲಗೆಯ ಮುಂಭಾಗದಲ್ಲಿ ಉಂಟಾಗುವ ರುಚಿಯ ಅರಿವನ್ನು ಸಾಗಿಸುವ ನರತಂತುಗಳು ಜಿಹ್ವಾನರದಿಂದ ಬೇರ್ಪಟ್ಟು ಬೇರೆ ಒಂದು ಸೂಕ್ಷ್ಮ ನರತಂತುವಾಗಿ ಕಾರ್ಡಟಿಂಪಾನಿ ಎಂಬ ಹೆಸರಿನಿಂದ ಕಿವಿತಮಟೆಯ ಮೂಲಕ ಹಾದು ಮಿದುಳು ಬಳ್ಳಿಯನ್ನು ಸೇರುತ್ತದೆ.[೪] ಕಿವಿತಮಟೆಯ ಶಸ್ತ್ರಚಿಕಿತ್ಸೆ ನಡೆಸುವಾಗ ಈ ಕಾರ್ಡಟಿಂಪಾನಿ ನರತಂತುವಿಗೆ ಅಪಾಯವಾಗುತ್ತದೆ. ಅಥವಾ ಅದು ಕಿತ್ತುಹೋಗುವುದೂ ಉಂಟು. ಈ ಸಂದರ್ಭಗಳಲ್ಲಿ ಯಾವ ಕಡೆ ನರತಂತು ಕಿತ್ತುಹೋಗಿದೆಯೋ ಅಥವಾ ಅಪಾಯ ಸಂಭಿಸಿದೆಯೋ ಆ ಭಾಗದಲ್ಲಿ ರುಚಿಮೊಗ್ಗುಗಳು ಅದೃಶ್ಯವಾಗಿ ನಾಲಗೆಯ ಮುಂಭಾಗದ ಎಡ ಅಥವಾ ಬಲ ಪಾರ್ಶ್ವದಲ್ಲಿ ರುಚಿಯ ಅರಿವು ನಾಶವಾಗುತ್ತದೆ.[೫] ಬಾಯಿಯಿಂದ ಹೊರಡುವ ರುಚಿಯ ನರತಂತುಗಳನ್ನು ಒಳಗೊಂಡಿರುವ ಎಲ್ಲ ಜ್ಞಾನವಾಹೀ ನರಗಳೂ ಒಂದುಗೂಡಿ ಟ್ರ್ಯಾಕ್ಟಸ್ ಸಾಲಿಟೇರಿಯಸ್ ಪಥದಲ್ಲಿ ಹಾಗೂ ಮಿದುಳಿನ ಮೆಡುಲ್ಲ ಅಬ್ಲಾಂಗೇಟಕ್ಕೆ ಸಂಬಂಧಪಟ್ಟ ನ್ಯೂಕ್ಲಿಯಸಿನಲ್ಲಿ ಹಾಯುತ್ತವೆ. ಇಲ್ಲಿರುವ ಹಾಗೂ ಮಿದುಳಿನ ಇತರ ಎಲ್ಲ ಹಂತಗಳಲ್ಲಿ ಕೂಡ ಇರುವ ರುಚಿನರತಂತುಗಳು ನಾಲಗೆಯ ಸ್ಪರ್ಶ, ಉಷ್ಣತೆಗಳ ಅರಿವನ್ನು ಉಂಟುಮಾಡುವ ನರತಂಡದೊಂದಿಗೇ ಅತಿ ನಿಕಟವಾಗಿ ಒಡಗೂಡಿರುವುದು ಕಾಣುತ್ತದೆ. ಮುಂದೆ ಮೆಡುಲ್ಲದಿಂದ ನರತಂತುಗಳು ಮೇಲೇರಿ ಇತರ ತಂತುಗಳೊಂದಿಗೆ ಸ್ವಲ್ಪಮಟ್ಟಿಗೆ ಬೆರೆತು ಶಿರಗುಳಿಯ (ಥಲೆಮಸ್) ಸಂವೇದನ ನ್ಯೂಕ್ಲಿಯಸ್ ಮಧ್ಯಭಾಗದಲ್ಲಿ ಅಡಕವಾಗಿರುವ ಸಣ್ಣ ಕೋಶಗಳ ಗುಚ್ಛ ಒಂದನ್ನು ಸೇರುತ್ತವೆ. ಇಲ್ಲಿಂದ ಮುಂದೆ ರುಚಿ ನರತಂತುಗಳು ನಿಮ್ಮಿದುಳ ತೊಗಟೆಯ (ಸೆರೆಬ್ರಲ್ ಕಾರ‍್ಟೆಕ್ಸ್) ಮುಂಭಾಗಕ್ಕೆ ನಾಲಗೆಯ ಸ್ಪರ್ಶ ಮತ್ತು ಉಷ್ಣತಾ ನರತಂತುಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿಯೇ ಬಾಯಿಯಿಂದ ಬರುವ ಜ್ಞಾನವಾಹಿಗಳನ್ನು ಅಂಗೀಕರಿಸುವ ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಬರುತ್ತವೆ.[೬][೭] ರುಚಿಪ್ರಜ್ಞೆಗೇ ನಿಮ್ಮಿದುಳಿನ (ಸೆರೆಬ್ರಮ್) ಯಾವ ಒಂದು ಭಾಗವೂ ಸೀಮಿತವಾಗಿಲ್ಲ. ಆಮ್ಲಗಳನ್ನು ಬಿಟ್ಟು ಉಳಿದ ಪದಾರ್ಥಗಳ ರುಚಿ ಪ್ರಜ್ಞೆಗೂ ರಾಸಾಯನಿಕ ಧಾತು ವೈವಿಧ್ಯಕ್ಕೂ ಒಂದು ಸರಳ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಇನಾರ್ಗ್ಯಾನಿಕ್ ಲವಣಗಳ ರುಚಿಗುಣ ತೊಡಕು. ಸೋಡಿಯಮ್ ಕ್ಲೋರೈಡ್ ಅಥವಾ ಅಡುಗೆ ಉಪ್ಪಿನ ರುಚಿ ಉಪ್ಪುಪ್ಪು. ಸಿಹಿ ಕಹಿ ರುಚಿಗಳು ಬೇರೆ ಬೇರೆ ರಾಸಾಯನಿಕ ವರ್ಗಗಳಿಗೆ ಸೇರಿದ ಪದಾರ್ಥಗಳಲ್ಲಿ ಕಂಡುಬರುತ್ತವೆ.

ನಾಲಗೆಯ ಪೂರ್ಣಕ್ಷೇತ್ರದಲ್ಲಿ ರುಚಿಪ್ರಜ್ಞೆ ಇರುವುದಿಲ್ಲ. ಇದರ ಮಧ್ಯಕ್ಷೇತ್ರ ರುಚಿರಹಿತ. ನಾಲಗೆಯ ಅಂಚಿನಲ್ಲಿ ಉಪ್ಪು, ನಾಲಗೆಯ ತುದಿಯಲ್ಲಿ ಸಿಹಿ, ನಾಲಗೆಯ ಇಬ್ಬದಿಗಳಲ್ಲಿ ಹುಳಿ ಮತ್ತು ನಾಲಗೆಯ ಹಿಂಭಾಗದಲ್ಲಿ ಕಹಿ ಅರಿವಾಗುತ್ತವೆ. ಮೂಲತಃ ನಾಲ್ಕು ಅಂದರೆ ಉಪ್ಪು, ಹುಳಿ, ಸಿಹಿ ಮತ್ತು ಕಹಿಗಳನ್ನು ಗುರುತಿಸುವ ರುಚಿಗ್ರಾಹಿಗಳು ಮಾತ್ರ ಇವೆ ಎಂದು ನಂಬಲಾಗಿತ್ತು. ಪ್ರಾಣಿಗಳ ನಾಲಗೆಯ ವಿವಿಧ ಭಾಗಗಳನ್ನು ವಿದ್ಯುತ್‍ಕ್ರಿಯಾ ಪ್ರಚೋದನೆಗೆ ಒಳಪಡಿಸಿ ಹೊರಬಿದ್ದ ಚಿತ್ರಗಳ ಅಧ್ಯಯನದಿಂದ ಈ ನಂಬಿಕೆ ಆಧಾರರಹಿತವಾದದ್ದೆಂದೂ ರುಚಿ ವೈವಿಧ್ಯ ಪ್ರಾಣಿಗಳಲ್ಲಂತೂ ಇಷ್ಟು ಸರಳವಲ್ಲವೆಂದೂ ತಿಳಿದಿದೆ. ನಾಲಗೆಯ ಒಂದೇ ನರತಂತುವಿನಲ್ಲಿ ವಿವಿಧ ರುಚಿ ಪ್ರಚೋದನೆ ಸಾಧ್ಯ. ಮೂಲರುಚಿಯೊಂದೇ ಅಲ್ಲದೆ ಇತರ ಮಿಶ್ರ ರುಚಿ ಪ್ರಚೋದನೆ ಅಂದರೆ ಆಮ್ಲ+ಕ್ಷಾರ ಅಥವಾ ಆಮ್ಲ+ಕ್ಷಾರ+ಸಿಹಿ ರುಚಿಗಳು ಒಂದೇ ನರತಂತುವಿನ ಪ್ರತಿಕ್ರಿಯೆಯಾಗಿರಬಲ್ಲವು. ರುಚಿ ಮೊಗ್ಗುಗಳು ಒಂದೇ ರುಚಿಯಲ್ಲದೆ ಬೇರೆ ಬೇರೆ ರುಚಿಯ ಅನುಭವವನ್ನು ವ್ಯಕ್ತಿಗೆ ಮೂಡಿಸಬಲ್ಲವು ಎಂದು ತೋರುತ್ತದೆ. ಕೆಲವು ಜಾತಿ ಪ್ರಾಣಿಗಳಲ್ಲಿ ನೀರು ಕೂಡ ಕೆಲವು ರುಚಿಗ್ರಾಹಿಗಳನ್ನು ಪ್ರಚೋದಿಸಬಲ್ಲುದು. ಅಂತೆಯೇ ಉಪ್ಪು ಈ ಪ್ರಚೋದನೆಗೆ ಅಡ್ಡಿ ತರಬಹುದು. ರುಚಿ ಇಂಥದೇ ಎಂಬ ಅನುಭವ ಮಿದುಳು ಈ ಪ್ರಚೋದನೆಗಳನ್ನು ಯಾವ ರೀತಿ ಅಳವಡಿಸಿಕೊಳ್ಳುತ್ತದೆ, ಯಾವ ರೀತಿ ರುಚಿವಾಹಿನಿಯನ್ನು ನರತಂತುಗಳ ಮೂಲಕ ಅಂಗೀಕರಿಸುತ್ತದೆ ಎಂಬುದನ್ನು ಅವಲಂಬಿಸಿದೆ.

ಮೂಲಭೂತ ರುಚಿಗಳು

ನರಶಾಸ್ತ್ರದಲ್ಲಿ ಐದು ರುಚಿಗಳನ್ನು ಗುರುತಿಸಲಾಗಿದೆ. ಇವು ಉಪ್ಪು, ಹುಳಿ, ಕಹಿ, ಸಿಹಿ ಮತ್ತು ಖಾರ.[೮][೯][೧೦][೧೧]

ಹುಳಿ

ಹುಳಿ ರುಚಿಯು ಆಮ್ಲೀಯತೆಯನ್ನು ಪತ್ತೆಹಚ್ಚುವ ರುಚಿ. ಪದಾರ್ಥಗಳ ಹುಳಿಯನ್ನು ೧ ಹುಳಿ ಸೂಚಕವನ್ನು ಹೊಂದಿರುವ ಸಾರಗುಂದಿಸಿದ ಹೈಡ್ರೊಕ್ಲೋರಿಕ್ ಆಮ್ಲಕ್ಕೆ ತುಲನಾತ್ಮಕವಾಗಿ ನಿರ್ಧರಿಸಲಾಗುತ್ತದೆ. ಹುಳಿ ರುಚಿಯನ್ನು ನಾಲಿಗೆಯಲ್ಲಿನ ಎಲ್ಲ ರುಚಿ ಮೊಗ್ಗುಗಳಾದ್ಯಂತ ಹರಡಿದ ಜೀವಕೋಶಗಳ ಉಪಸಮೂಹವು ಪತ್ತೆಹಚ್ಚುತ್ತದೆ. ಆಮ್ಲಗಳಲ್ಲಿರುವ ಹೈಡ್ರೋಜನ್ನಿನ ಅಯಾನುಗಳು ಹುಳಿ ರುಚಿಯ ಪ್ರಜ್ಞೆಗೆ ಕಾರಣ. ಈ ಅಯಾನುಗಳ ಸಾಂದ್ರತೆ ಪದಾರ್ಥದಲ್ಲಿ ಹೆಚ್ಚಿದಷ್ಟೂ ಹುಳಿ ಹೆಚ್ಚುತ್ತದೆ. ಆದರೆ ಹುಳಿ ರುಚಿಗೆ ಇದೊಂದೇ ಕಾರಣವಲ್ಲ. ಸಾರರಿಕ್ತ ಆರ್ಗ್ಯಾನಿಕ್ ಆಮ್ಲಗಳು, ಉದಾಹರಣೆಗೆ ಅಸಿಟಿಕ್ ಆಮ್ಲ, ಹೈಡ್ರೊಜನ್ ಅಯಾನುಗಳ ಸಾಂದ್ರತೆಗೆ ತಕ್ಕಂತೆ ಹುಳಿ ಹುಟ್ಟಿಸುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ತೋರುತ್ತದೆ. ಬಹುಶಃ ಅಧಿಕವಾದ ಅದರ ಛೇದಕಸಾಮರ್ಥ್ಯದಿಂದ ಇದು ಸಾಧ್ಯವಾಗಿದೆ.

ಉಪ್ಪು

ಉಪ್ಪಿನ ಪ್ರಜ್ಞೆ ಮೂಡುವುದು ನೀರಲ್ಲಿ ವಿಲೀನವಾಗುವ ಲವಣಗಳಿಂದ. ಅನೇಕ ರಾಸಾಯನಿಕ ಲವಣಗಳು ವಿವಿಧ ರುಚಿಗಳ ಅನುಭವ ಕೊಡುತ್ತವೆ. ಕಹಿ ಲವಣಗಳು, ಹುಳಿ ಲವಣಗಳು ಇತ್ಯಾದಿ ಉದಾಹರಣೆಗಳು. ಕಡಿಮೆ ಅಣುತೂಕವಿರುವ ಲವಣಗಳಲ್ಲಿ ಉಪ್ಪು ರುಚಿ ಪ್ರಧಾನ. ಆದರೆ ಬೆರಿಲಿಯಮ್ ಲವಣಗಳು ಸಿಹಿ. ಹೆಚ್ಚು ಅಣುತೂಕವಿರುವ ಲವಣಗಳಲ್ಲಿ ಕಹಿ ಪ್ರಧಾನ. ಪಾದರಸದ ಲವಣಗಳಂತೆ ಬಹುತೂಕವುಳ್ಳ ಲವಣಗಳು ಒಂದು ರೀತಿಯ ಲೋಹ ಪ್ರಧಾನ ರುಚಿಯನ್ನು ಪ್ರಚೋದಿಸುತ್ತವೆ. ಸೀಸ ಲವಣಗಳು ಸಿಹಿರುಚಿ ಕೊಡುತ್ತವೆ. ಧನ ವಿದ್ಯುತ್ ಕಣ ಹಾಗು ಋಣ ವಿದ್ಯುತ್ ಕಣಗಳೆರಡೂ ರುಚಿಯ ಗುಣಮಟ್ಟವನ್ನು ನಿರ್ಧರಿಸುವುದೊಂದೇ ಅಲ್ಲದೆ ಅದರ ಪ್ರಚೋದನೆಯ ಯಶಸ್ಸಿಗೂ ಕಾರಣ. ಮನುಷ್ಯರಲ್ಲಿ ಅಮೋನಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಸೋಡಿಯಮ್, ಲಿಥಿಯಮ್ ಮತ್ತು ಮೆಗ್ನೀಸಿಯಮ್ ಲವಣಗಳು ಅನುಕ್ರಮವಾಗಿ ಅತಿಕ್ಷಾರದಿಂದ ಅತ್ಯಲ್ಪ ಕ್ಷಾರರುಚಿ ಪ್ರಚೋದಕಗಳು.

ಕಹಿ

ಕಹಿರುಚಿಯು ರುಚಿಗಳಲ್ಲಿ ಅತ್ಯಂತ ಸೂಕ್ಷ್ಮವಾದದ್ದು, ಮತ್ತು ಅನೇಕರು ಈ ರುಚಿಯನ್ನು ಅಹಿತಕರ, ಕಟು, ಅಥವಾ ಒಗ್ಗದಂಥಾದ್ದು ಎಂದು ಗ್ರಹಿಸುತ್ತಾರೆ, ಆದರೆ ಕೆಲವೊಮ್ಮೆ ಇದು ಅಪೇಕ್ಷಣೀಯವಾಗಿದ್ದು ಇದನ್ನು ವಿವಿಧ ಕಹಿಬರಿಸುವ ಪದಾರ್ಥಗಳ ಮೂಲಕ ಉದ್ದೇಶಪೂರ್ವಕವಾಗಿ ಸೇರಿಸಲಾಗುತ್ತದೆ. ಸಾಮಾನ್ಯ ಕಹಿ ಆಹಾರಗಳು ಮತ್ತು ಪೇಯಗಳಲ್ಲಿ ಕಾಫಿ, ಸಕ್ಕರೆ ಸೇರಿಸದ ಕೋಕೊ, ಮ್ಯಾಟೆ, ಹಾಗಲಕಾಯಿ, ಆಲಿವ್, ಸಿಟ್ರಸ್ ಹಣ್ಣುಗಳ ಸಿಪ್ಪೆಗಳು, ಬ್ರ್ಯಾಸಿಕೇಸಿಯೀ ಕುಟುಂಬದಲ್ಲಿನ ಅನೇಕ ಸಸ್ಯಗಳು, ಕಾಡುಸೇವಂತಿಗೆ ಎಲೆಭಾಗಗಳು, ಕಾಡು ಚಿಕೋರಿ ಮತ್ತು ಎಸ್ಕರೋಲ್ ಸೇರಿವೆ. ಮದ್ಯಸಾರಯುಕ್ತ ಪಾನೀಯಗಳಲ್ಲಿನ ಎಥನಾಲ್ ಕಹಿ ರುಚಿ ಹೊಂದಿರುತ್ತದೆ.

ಕಹಿ ಕೂಡ ಸಿಹಿಯಂತೆ ಅನೇಕ ರಾಸಾಯನಿಕಗಳಿಂದ ಪ್ರಚೋದಿತವಾಗುತ್ತದೆ. ಕಹಿಯೊಂದಿಗೆ ಸಿಹಿ ಮತ್ತಿತರ ರುಚಿಗಳ ಅನುಭವವೂ ಸೇರಿರುವುದು. ಇನಾರ್ಗ್ಯಾನಿಕ್ ಲವಣಗಳ ಅಣುಭಾರ ಹೆಚ್ಚಿದಂತೆ ಅಥವಾ ಆರ್ಗ್ಯಾನಿಕ್ ಅಣುಗಳ ಇಂಗಾಲ ಸರಪಳಿ ಹೆಚ್ಚಿದಂತೆ ಕಹಿಗುಣವೂ ವೃದ್ಧಿಯಾಗುತ್ತದೆ. ಕಹಿಗುಂಪಿಗೆ ಸೇರಿದ ಆಲ್ಕಲಾಯಿಡುಗಳು - ಉದಾಹರಣಗೆ ಕ್ವಿನೈನ್, ಕ್ಯಾಫೀನ್, ಸ್ಟ್ರಿಕ್ನಿನ್ ಇತ್ಯಾದಿ-ಅತಿ ಕಹಿವಸ್ತುಗಳು; ಹಾಗೂ ಇವು ಅತಿ ಅಲ್ಪಪ್ರಮಾಣದಲ್ಲೇ ಪಾಷಾಣವಾಗಿ ಪರಿಣಮಿಸುತ್ತವೆ. ಕೆಲವರಿಗೆ ಕಹಿ ರುಚಿ ತಿಳಿಯುವುದಿಲ್ಲ. ಇವರು ರುಚಿ ಅಂಧರು. ಈ ಗುಣ ಮೆಂಡಲ್ ತತ್ತ್ವವನ್ನು ಅನುಸರಿಸಿ ಅಪ್ರಭಾವಶೀಲ ಜೀನುಗಳೊಂದಿಗೆ (ರಿಸೆಸ್ಸಿವ್ ಜೀನ್ಸ್) ಶಿಶುವಿಗೆ ಹಾಯುತ್ತದೆ. ಈ ವ್ಯಕ್ತಿಗಳಿಗೆ ಫೀನೈಲ್ ಥಯೋ ಕಾರ್ಬಮೈಡಿನ (ಪಿ.ಟಿ.ಸಿ.) ಮತ್ತು ಇದರಂತೆ ಇರುವ ಮತ್ಯಾವುದೇ ರಾಸಾಯನಿಕ ವಸುಗಳ ರುಚಿ ಹತ್ತುವುದಿಲ್ಲ. ಕಾಕೇಶಿಯನ್ ಬುಡಕಟ್ಟಿಗೆ ಸೇರಿದ ಮೂರನೆಯ ಒಂದು ಭಾಗ  ವ್ಯಕ್ತಿಗಳಿಗೆ ಈ ಗುಣ ಉಂಟು, ಉಳಿದ ಜನಾಂಗಗಳಲ್ಲಿ ಇದರ ಪ್ರಮಾಣ ವ್ಯತ್ಯಾಸವಾಗುತ್ತದೆ. ಪಿ.ಟಿ.ಸಿ. ರುಚಿ ಅಂಧತ್ವ ಮನುಷ್ಯ ಹಾಗೂ ಅವನ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಕಂಡುಬರುವ ವೈಶಿಷ್ಟ್ಯ. ಇದಕ್ಕೆ ಸಂಬಂಧಪಟ್ಟ ಜೀನಿನ ವಿಕಸನ ಬಹಳ ತಡವಾಗಿ ಹೊರಬಿದ್ದಿರಬೇಕು.

ರುಚಿ ಅಂಧತ್ವ

ರುಚಿ ಅಂಧತೆಗೆ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ. ರುಚಿ ಬದಲಾವಣೆ ಕೆಲವು ಸಂದರ್ಭಗಳಲ್ಲಿ ಕಾಣಬಹುದು. ಅತಿ ಬಿಸಿಯಾದ ಅಥವಾ ಅತಿ ಶೀತಾವಸ್ಥೆಯ ಪದಾರ್ಥ ಬಾಯಿಗೆ ಬಿದ್ದರೆ ತಾತ್ಕಾಲಿಕ ರುಚಿ ಅಂಧತ್ವವಾಗುವುದು ಎಲ್ಲರ ಅನುಭವ. ದೇಹದ ಉಷ್ಣತಾಮಟ್ಟ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಉಷ್ಣತೆಗಳಲ್ಲಿ ರುಚಿಯ ಅನುಭವ ಉತ್ಕೃಷ್ಟ. ಉಷ್ಣತೆ ಅಧಿಕಗೊಂಡರೆ ಸಿಹಿಯ ಗುಣಗ್ರಹಣವೂ ಉತ್ತಮಗೊಳ್ಳುತ್ತದೆ. ಆದರೆ ಉಪ್ಪು ಮತ್ತು ಕ್ವಿನೈನುಗಳ ರುಚಿ ಕಡಿಮೆಯಾಗುತ್ತದೆ. ಆಮ್ಲಗಳ ರುಚಿ ಬದಲಾವಣೆ ಅಷ್ಟಿಲ್ಲ. ರುಚಿಗುಣಗ್ರಹಣವನ್ನು ಒಂದು ನಿರ್ದಿಷ್ಟ ರಾಸಾಯನಿಕ ಕ್ರಿಯೆ ಎಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಸಾಧ್ಯವಾಗುತ್ತಿದ್ದರೆ ಎಲ್ಲ ರುಚಿಗಳ ಗ್ರಹಣವೂ ಉಷ್ಣತೆ ಅಧಿಕಗೊಂಡಂತೆಲ್ಲ ಉತ್ತಮಗೊಳ್ಳಬೇಕಿತ್ತು. ಬಾಯಿಯಲ್ಲಿಯೇ ಸ್ವಲ್ಪಕಾಲ ಒಂದು ದ್ರವವನ್ನು ಇಟ್ಟುಕೊಂಡಿದ್ದರೆ ಅದರ ರುಚಿ ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಮರೆಯಾಗಬಹುದು. ಇನ್ನು ಕೆಲವು ವೇಳೆ ಒಂದು ಆಮ್ಲದಿಂದ ಈ ರೀತಿ ರುಚಿ ವ್ಯತ್ಯಾಸವಾದರೆ ಎಲ್ಲ ಆಮ್ಲಗಳಿಗೂ ಅದೇ ರೀತಿ ವ್ಯತ್ಯಾಸ ಕಾಣಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಪರಸ್ಪರ ರುಚಿ ಗುಣ ವ್ಯತ್ಯಾಸಗಳಿಂದ ಒಂದು ಮತ್ತೊಂದರ ರುಚಿ ಕೊಡಬಹುದು. ಸಾರರಿಕ್ತ ಆಮ್ಲದ ರುಚಿಗ್ರಹಣದ ತರುವಾಯ ಸಾಂದ್ರೀಕರಿಸಿದ ನೀರು ಸಿಹಿರುಚಿಕೊಡಬಹುದು. ಒಂದರ ರುಚಿಯನ್ನು ಇತರ ವಸ್ತುಗಳ ಮಿಶ್ರಣದಿಂದ ಕಾಣದಂತೆ ಮಾಡುವುದು ಎಲ್ಲರಿಗೂ ತಿಳಿದಿದೆ. ಉದಾಹರಣಗೆ ಹುಳಿಯನ್ನು ಬೆಲ್ಲ ಸಕ್ಕರೆ ಬೆರೆಸಿ ಮುಚ್ಚುವುದು. ರುಚಿ ಬದಲಾವಣೆಯನ್ನು ನಾಲಗೆ ಗ್ರಹಿಸಲು ಸಾರ ಕಡೇಪಕ್ಷ 20% ರಷ್ಟು ಹೆಚ್ಚಬೇಕು. ಹಾಗೂ ಸಾರ 100ಕ್ಕೆ 100 ರಷ್ಟು ಹೆಚ್ಚದಾಗಲೂ ವ್ಯತ್ಯಾಸ ಕಂಡುಬರುವ ಸಂದರ್ಭಗಳೂ ಉಂಟು.

ಆಹಾರವನ್ನು ಆರಿಸಿಕೊಳ್ಳುವುದು

ಜೀವಿಗಳು ತಮಗೆ ಬೇಕಾದ ಆಹಾರ ಆರಿಸಿಕೊಳ್ಳುವುದೂ ಬೇಡದ್ದನ್ನು ಬಿಡುವುದೂ ಒಂದು ನಿಯಮಕ್ಕೆ ಒಳಪಟ್ಟಿದೆ ಎಂದರೆ ತಪ್ಪಿಲ್ಲ. ಜನಿಸಿದ ಶಿಶು ಮೊಲೆ ಚೀಪುವುದು ಒಂದು ನಿರಿಚ್ಛಾ ಪ್ರತಿಕ್ರಿಯೆ.[೧೨] ಇದನ್ನು ರುಚಿ ಬದಲಾವಣೆಯಿಂದ ಮಾರ್ಪಡಿಸಬಹುದು, ಚೀಪುವುದನ್ನು ಸಿಹಿ ಪದಾರ್ಥಗಳು ಹೆಚ್ಚಿಸುತ್ತವೆ. ಕಹಿ, ಉಪ್ಪು ಹಾಗೂ ಹುಳಿ ಪದಾರ್ಥಗಳಾದರೋ ಚೀಪುವುದನ್ನೇ ನಿಲ್ಲಿಸುತ್ತವೆ.[೧೩] ರುಚಿಯೇ ನಮ್ಮ ಮನಸ್ಸಿಗೆ ಹಿತವಾದ ಆಹಾರ ಎಂದು ಪ್ರಚೋದಿಸಿ ಅದನ್ನು ಸ್ವೀಕರಿಸುವಂತೆ ಪ್ರೇರೇಪಿಸುವುದು. ಮಕ್ಕಳಲ್ಲಿ ಹಾಗೂ ಇತರ ಕೆಳವರ್ಗದ ಜೀವಿಗಳಲ್ಲಿ ಆಹಾರದ ಸ್ವೀಕಾರ ಇಲ್ಲವೇ ತಿರಸ್ಕಾರ ಆಗುವುದು ಈ ರುಚಿ ವಿಶೇಷದಿಂದಲೇ. ಕೀಟಗಳಲ್ಲಿ ರುಚಿಗೆ ಪ್ರತಿಕ್ರಿಯೆ ಅವುಗಳ ಹೀರುಕೊಳವೆ ಉದ್ದಕ್ಕೆ ಚಾಚಿಕೊಳ್ಳುವುದು ಅಥವಾ ಮುದುಡಿಕೊಳ್ಳುವುದರಿಂದ ತಿಳಿಯಬಹುದು. ಸಿಹಿಯನ್ನು ಬಾಯಿಗಾಗಲೀ ಕಾಲಿಗಾಗಲೀ ಸೋಕಿಸಿದರೆ ಹೀರುಕೊಳವೆ ಮುಂದಕ್ಕೆ ಚಾಚಿರುತ್ತದೆ.[೧೪] ನೊಣವನ್ನು ಹೊಟ್ಟೆಗಿಲ್ಲದಂತೆ ಹಸಿವೆ ಹುಟ್ಟಿಸಿ ಅತಿ ಕಡಿಮೆ ಸಾರವಿರುವ ದ್ರವವನ್ನು ಸೋಕಿಸಿದರೂ ಹೀರುಕೊಳವೆ ಚಾಚುವಂತೆ ಮಾಡಬಹುದು. ಅದೇ ನೊಣಕ್ಕೆ ಹೊಟ್ಟೆ ತುಂಬಿದ ವೇಳೆಯಲ್ಲಿ ಇದೇ ದ್ರವವನ್ನು ಸೋಕಿಸಿದರೆ ಯಾವ ಪ್ರತಿಕ್ರಿಯೆಯನ್ನೂ ತೋರಿಸುವುದಿಲ್ಲ. ಆದ್ದರಿಂದಲೇ ಹೀರುಕೊಳವೆಯ ಚಾಚುವಿಕೆಯನ್ನು ಕೀಟಗಳಲ್ಲಿ ರುಚಿಸೂಚಿ ಎಂದು ಪರಿಗಣಿಸಲಾಗಿದೆ.

ಕೆಳದರ್ಜೆಯ ಸ್ತನಿಗಳಲ್ಲಿ, ಉದಾಹರಣೆಗೆ ಇಲಿಗಳಲ್ಲಿ, ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ತಮ್ಮ ದೇಹಕ್ಕೆ ಬೇಕಾದ ಸತ್ತ್ವಾಂಶಗಳುಳ್ಳ ಆಹಾರವನ್ನೇ ಚುನಾಯಿಸಿಕೊಳ್ಳುವ ಆಶ್ಚರ್ಯಕರ ಧೋರಣೆ ಇರುವುದು ಕಂಡುಬರುತ್ತದೆ. ಇದು ಅವುಗಳ ರುಚಿಗ್ರಾಹಕ ಸಾಮರ್ಥ್ಯವನ್ನೇ ಅವಲಂಬಿಸಿದೆ. ಪ್ರಯೋಗಶಾಲೆಯಲ್ಲಿರುವ ಇಲಿಗಳಿಗೆ ಪಿಷ್ಟ, ಜಿಡ್ಡು, ಪ್ರೋಟೀನ್, ವಿಟಮಿನ್ ಮತ್ತು ಲವಣಗಳುಳ್ಳ ಆಹಾರವಷ್ಟನ್ನೂ ಮುಂದಿಟ್ಟರೆ ತಮ್ಮ ಶ್ರಮ, ದಣಿವು ಇತ್ಯಾದಿಗಳನ್ನು ಅವಲಂಬಿಸಿದಂತೆ ತಮಗೆ ಸೂಕ್ತವಾದ ಆಹಾರವನ್ನೇ ಆರಿಸಿಕೊಳ್ಳುತ್ತವೆ. ಅಡ್ರಿನಲ್ ಗ್ರಂಥಿಯನ್ನು ಇಲಿಯಿಂದ ತೆಗೆದರೆ ಅವಲ್ಲಿ ಆಗ ಉಪ್ಪಿನ ಕೊರತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅವು ತಮ್ಮಷ್ಟಕ್ಕೆ ತಾವೇ ಉಪ್ಪನ್ನು ಹೆಚ್ಚಿಗೆ ಸೇರಿಸಿ ಕೊರತೆಯನ್ನು ಹೋಗಲಾಡಿಸಿಕೊಂಡು ಇತರ ಇಲಿಗಳಂತೆಯೇ ಆರೋಗ್ಯವಾಗಿ ಬೆಳೆಯುವುದು ಕಂಡುಬಂದಿದೆ.[೧೫] ಅವುಗಳಲ್ಲಿ ರುಚಿಗ್ರಾಹಕ ನರಗಳನ್ನು ಛೇದಿಸಿ ಅವಕ್ಕೆ ರುಚಿ ತಿಳಿಯದಂತೆ ಮಾಡಿದರೆ ಇದು ಸಾಧ್ಯವಿಲ್ಲ. ಈ ರೀತಿ ಉಪ್ಪಿನ ಕೊರತೆ ಹೋಗಲಾಡಿಸಿಕೊಳ್ಳದಿದ್ದರೆ ಆ ಇಲಿ ಜೀವದಿಂದ ಇರಲಾಗುತ್ತಿರಲಿಲ್ಲ. ಈ ಗುಣ ಮನುಷ್ಯರಲ್ಲೂ ಇದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಅಡ್ರಿನಲ್ ಗ್ರಂಥಿಯ ರೋಗವನ್ನು ಅನುಭವಿಸುತ್ತಿದ್ದ ಮಗು ಒಂದು ತನ್ನ ಉಪ್ಪಿನ ದಾಹವನ್ನು ಶಮನಮಾಡಿಕೊಳ್ಳಲು ಯಥೇಚ್ಛವಾಗಿ ಉಪ್ಪು ತಿನ್ನುತ್ತಿದ್ದುದು ವರದಿಯಾಗಿದೆ. ಅಡ್ರಿನಲ್ ರೋಗವಿರುವ ದೊಡ್ಡವರಲ್ಲೂ ಈ ರೀತಿಯ ಪ್ರತಿಕ್ರಿಯೆ ಉಂಟೇ ಅಂದರೆ ಇಲ್ಲ ಎನ್ನಬೇಕಾಗುತ್ತದೆ. ಏಕೆಂದರೆ ದೊಡ್ಡವರಲ್ಲಿ ಅವರ ಆಹಾರ ಸೇವನೆಯ ರೂಪ ರೇಖೆಗಳು ಹುಟ್ಟಿದಂದಿನಿಂದ ಬಂದಿರುವ ಅನುಭವವನ್ನು ಅವಲಂಬಿಸಿರುತ್ತದೆ. ಈ ಸಂದರ್ಭದಲ್ಲಿ ದೇಹದ ಹಿತಾಹಿತಗಳನ್ನು ಸೇವಿಸಲು ಪ್ರೇರೇಪಣೆ ಇರುತ್ತದೆ. ಮಾನವನ ಆಹಾರಾಭ್ಯಾಸಗಳು ಬಹುಮಟ್ಟಿಗೆ ಆತನ ಅಂತಸ್ತು, ಸಂಸ್ಕೃತಿ, ಸಂಪ್ರದಾಯ ಹಾಗೂ ಮನೋಭಾವಗಳನ್ನು ಪ್ರತಿಬಿಂಬಿಸುತ್ತವೆ.

ವಿಷಪದಾರ್ಥಗಳ ರುಚಿ

ವಿಷಪದಾರ್ಥಗಳು ಅವುಗಳ ರುಚಿ ವಿಶೇಷದಿಂದಲೇ ತ್ಯಜಿಸಲ್ಪಡುತ್ತವೆ. ಆದರೆ ಎಲ್ಲ ವಿಷಗಳಿಗೂ ರುಚಿ ಇದ್ದೇ ತೀರಬೇಕೆಂಬ ನಿಯಮವಿಲ್ಲ. ಇಲಿ ಪಾಷಾಣ (ಆಲ್ಫನ್ಯಾಫ್ತೈಲ್ ಥಯೋ ಯೂರಿಯಾ) ಎಂಬ ಅತಿ ವಿಷವಸ್ತುವಿಗೆ ರುಚಿಯೇ ಇಲ್ಲ. ಸೀಸ ಲವಣಗಳು ಅತಿ ವಿಷ. ಆದರೆ ಅವುಗಳ ರುಚಿ ಸಿಹಿ. ಹಿಂದೆ ಈ ಲವಣಗಳು ಸಿಹಿರುಚಿಯಾಗಿ ಬಳಸಲ್ಪಟ್ಟು ಅನಾಹುತಗಳಾಗಿ ಅನಂತರ ಅವನ್ನು ಕೈಬಿಟ್ಟ ವರದಿಗಳಿವೆ. ರುಚಿಯೊಂದನ್ನೇ ಪ್ರಧಾನವಾಗಿಟ್ಟುಕೊಂಡು ಪದಾರ್ಥಗಳನ್ನು ಬಳಸುವುದು ಅಪಾಯಕಾರಿ.

ಇತರ ಗುಣಗಳು

ನಾಲಿಗೆಯಲ್ಲಿ ಸ್ಪರ್ಶವನ್ನು ಗುರುತಿಸುವ ಭಾಗಗಳೂ ಇರುವುದರಿಂದ ಪದಾರ್ಥಗಳ ಈ ಇತರ ಗುಣಗಳನ್ನೂ ಗುರುತಿಸಲಾಗುತ್ತದೆ.

  • ಒಗರು - ಒಗರು ಎಂದರೆ ಅಪಕ್ವ ಹಣ್ಣುಗಳಲ್ಲಿರುವ ಟ್ಯಾನಿನ್‍ಗಳಿಂದ[೧೬][೧೭] ಉಂಟಾಗುವ ಒಣ, ಸುಕ್ಕಾಗಿಸುವ ಬಾಯಿಯ ಅನಿಸಿಕೆ. ವಾಸ್ತವದಲ್ಲಿ ಈ ರಾಸಾಯನಿಕಗಳು ಹಣ್ಣುಗಳ ತಿನ್ನುವಿಕೆಯನ್ನು ತಡೆಯುವ ಮೂಲಕ ಹಣ್ಣುಗಳು ಪಕ್ವವಾಗುವಂತೆ ನೋಡಿಕೊಳ್ಳುತ್ತವೆ. ಬ್ಲ್ಯಾಕ್‍ಥಾರ್ನ್, ಚೋಕ್‍ಬೆರಿ, ಚೋಕ್‍ಚೆರಿ, ಬರ್ಡ್ ಚೆರಿ, ಶ್ರೀಫಲ ಹಾಗೂ ಪರ್ಸಿಮನ್ ಹಣ್ಣುಗಳು, ಮತ್ತು ಬಾಳೆಹಣ್ಣಿನ ಸಿಪ್ಪೆಗಳು ಸೇರಿದಂತೆ ಪಕ್ವ ಹಣ್ಣುಗಳು ಮತ್ತು ಹಣ್ಣಿನ ಭಾಗಗಳು ಬಹಳ ಒಗರಾಗಿರುತ್ತವೆ;[೧೮] ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಸ್ವಲ್ಪಮಟ್ಟಿಗೆ ಒಗರಾಗಿರುತ್ತವೆ. ಟ್ಯಾನಿನ್‍ಗಳು ಜೊಲ್ಲು ಪ್ರೋಟೀನ್‍ಗಳನ್ನು ಬಂಧಿಸುತ್ತವೆ ಮತ್ತು ಅವುಗಳು ಘನರೂಪದಲ್ಲಿ ಮತ್ತು ಒಟ್ಟಾಗಿ ಬರುವಂತೆ ಮಾಡುತ್ತವೆ,[೧೯][೨೦][೨೧] ಮತ್ತು ಬಾಯಿಯಲ್ಲಿ ಒರಟಾದ, ಮರಳು ಕಾಗದದಂತಹ ಒಣ ಸಂವೇದನೆಯನ್ನು ಉತ್ಪಾದಿಸುತ್ತವೆ.
  • ಖಾರ
  • ಉಷ್ಣಾಂಶ

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: