ಜೇಮ್ಸ್.ಡಿ.ವಾಟ್ಸನ್

ಜೇಮ್ಸ್ ಡೀವಿ ವ್ಯಾಟ್ಸನ್ ಅವರು ಆಣ್ವಿಕ ಜೀವಶಾಸ್ತ್ರಜ್ಞ, ವಂಶವಾಹಿ ವಿಜ್ಞಾನದ ಶಾಸ್ತ್ರಜ್ಞ, ಪ್ರಾಣಿಶಾಸ್ತ್ರಜ್ಞರು. ಇವರು ಡಿಎನ್ಎಯ ರಚನೆಯನ್ನು ಕಂಡು ಹಿಡಿದ ವಿಜ್ಞಾನಿಯಾಗಿದ್ದಾರೆ. ೧೯೫೩ರಲ್ಲಿ ವ್ಯಾಟ್ಸನ್‍ರವರು ಸಹ-ಶೋಧಕರಾಗಿ ಫ್ರಾನ್ಸಿಸ್ ಕ್ರಿಕ್ ಜೊತೆಗೆ ಡಿಎನ್ಎ ಕಣ ರಚನೆಗಾಗಿ ಇಬ್ಬರು ಅತ್ಯಂತ ಪ್ರಸಿದ್ಧರಾದರು. ಜೇಮ್ಸ್ ವ್ಯಾಟ್ಸನ್ ಮತ್ತು ಮಾರಿಸ್ ವಿಲ್ಕಿನ್ಸ್ ಅವರ ನ್ಯೂಕ್ಲಿಯಿಕ್ ಆಮ್ಲಗಳ ಆಣ್ವಿಕ ರಚನೆಗೆ ಸಂಬಂಧಿಸಿದ ಮತ್ತು ಜೀವಂತ ವಸ್ತುವಿನಲ್ಲಿ ಮಾಹಿತಿಯ ವರ್ಗಾವಣೆಯ ಮಹತ್ವಕ್ಕಾಗಿ ಇರುವ ತಮ್ಮ ಸಂಶೋಧನೆಗೆ, ಅವರಿಗೆ ಜಂಟಿಯಾಗಿ ೧೯೬೨ರಲ್ಲಿ ಶರೀರಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ನೀಡಲಾಯಿತು.[೧೧]

ಜೇಮ್ಸ್ ವ್ಯಾಟ್ಸನ್
ಜನನJames Dewey Watson
(1928-04-06) ೬ ಏಪ್ರಿಲ್ ೧೯೨೮ (ವಯಸ್ಸು ೯೬)[೧]
Chicago, United States
ರಾಷ್ಟ್ರೀಯತೆUnited States
ಕಾರ್ಯಕ್ಷೇತ್ರGenetics
ಸಂಸ್ಥೆಗಳು
  • Indiana University
  • Cold Spring Harbor Laboratory
  • Laboratory of Molecular Biology
  • Harvard University
  • University of Cambridge
  • National Institutes of Health
ಅಭ್ಯಸಿಸಿದ ವಿದ್ಯಾಪೀಠ
  • University of Chicago (B.S., 1947)
  • Indiana University (Ph.D., 1950)
ಮಹಾಪ್ರಬಂಧThe Biological Properties of X-Ray Inactivated Bacteriophage (1951)
ಡಾಕ್ಟರೇಟ್ ಸಲಹೆಗಾರರುSalvador Luria
ಡಾಕ್ಟರೇಟ್ ವಿದ್ಯಾರ್ಥಿಗಳು
  • Mario Capecchi[೨]
  • Bob Horvitz
  • Peter B. Moore
  • Joan Steitz[೩]
Other notable students
  • Ewan Birney[೪]
  • Ronald W. Davis (postdoc)
  • Phillip Allen Sharp (postdoc)
  • Richard J. Roberts (postdoc)[೫]
  • John Tooze (postdoc)[೬][೭]
ಪ್ರಸಿದ್ಧಿಗೆ ಕಾರಣ
  • DNA structure
  • Molecular biology
ಗಮನಾರ್ಹ ಪ್ರಶಸ್ತಿಗಳು
  • Albert Lasker Award for Basic Medical Research (1960)
  • Nobel Prize (1962)
  • John J. Carty Award (1971)
  • ForMemRS (1981)[೮]
  • EMBO Membership (1985)[೯]
  • Copley Medal (1993)[೮][೧೦]
  • Lomonosov Gold Medal (1994)
ಸಂಗಾತಿElizabeth Watson (née Lewis) (ವಿವಾಹ 1968)
ಮಕ್ಕಳು2
ಹಸ್ತಾಕ್ಷರ

ವೈಯಕ್ತಿಕ ಜೀವನ

ಜೇಮ್ಸ್ ವ್ಯಾಟ್ಸನ್ ಇಲಿನಾಯ್‍ನ ಷಿಕಾಗೊದಲ್ಲಿ ಎಪ್ರಿಲ್ ೬,೧೯೨೮ರಂದು ಜನಿಸಿದರು. ಇವರ ತಂದೆ ಜೇಮ್ಸ್ ವ್ಯಾಟ್ಸನ್ ಹಾಗೂ ತಾಯಿ ಜೀನ್ ಮಿಚೆಲ್. ವ್ಯಾಟ್ಸನ್ ಇವರು ೧೯೬೮ರಲ್ಲಿ ಎಲಿಜಬೆತ್ ಲೆವಿಸ್ ಅವರನ್ನು ವಿವಾಹವಾದರು. ರಾಬರ್ಟ್ ವ್ಯಾಟ್ಸನ್ ಮತ್ತು ಡಂಕನ್ ಜೇಮ್ಸ್ ವ್ಯಾಟ್ಸನ್ ಅವರ ಪುತ್ರರಾಗಿದ್ದಾರೆ.[೧೨]

ವಿದ್ಯಾಭ್ಯಾಸ

ವ್ಯಾಟ್ಸನ್ ಅವರು ಷಿಕಾಗೊದ ದಕ್ಷಿಣ ಭಾಗದಲ್ಲಿ ಬೆಳೆದರು. ಅಲ್ಲಿ ಅವರು ಪಬ್ಲಿಕ್ ಸ್ಕೂಲ್ ಜೊತೆಗೆ ಹೊರೇಸ್ ಮಾನ್ ಗ್ರಾಮರ್ ಸ್ಕೂಲ್ ಮತ್ತು ಸೌತ್ ಶೋರ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಪಕ್ಷಿಗಳನ್ನು ವೀಕ್ಷಿಸುವುದು ವ್ಯಾಟ್ಸನ್ ಅವರ ಆಸಕ್ತಿಯಾಗಿತ್ತು. ತಮ್ಮ ಈ ಆಸಕ್ತಿಯ ಕುರಿತು ವ್ಯಾಟ್ಸನ್ ಅವರು ತಂದೆಯಲ್ಲಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದ ಅವರನ್ನು ಪಕ್ಷಿಶಾಸ್ತ್ರಜ್ಞ ಎಂದು ಕರೆಯಲಾಗುತ್ತಿತ್ತು. ವ್ಯಾಟ್ಸನ್ ಅವರು ಬಾಲ್ಯದಲ್ಲಿದ್ದಾಗ ಕ್ವಿಜ್, ರೇಡಿಯೋ ಶೋಗಳಲ್ಲಿ ಭಾಗವಹಿಸುತ್ತಿದ್ದರು. ವ್ಯಾಟ್ಸನ್ ೧೫ನೇ ವರ್ಷವಾಗಿದ್ದಾಗ 'ಟ್ಯೂಷನ್ ಸ್ಕಾಲರ್ಶಿಪ್' ಎಂಬ ಪ್ರಶಸ್ತಿಯನ್ನು ಷಿಕಾಗೊ ವಿಶ್ವವಿದ್ಯಾನಿಲಯ ನೀಡಿತು. ಅಲ್ಲಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. 15 ವರ್ಷ ವಯಸ್ಸಿಗೆ ಶಿಕಾಗೊ ವಿಶ್ವವಿದ್ಯಾಲಯ ಪ್ರವೇಶಿಸಿದ ಬಾಲಪ್ರತಿಭೆ.

ಎರ್ವಿನ್ ಸ್ಕ್ರೋಡಿಂಜರ್ ಬರೆದಿರುವ 'ವಾಟ್ ಈಸ್ ಲೈಫ್' ಎಂಬ ಪುಸ್ತಕವನ್ನು ೧೯೪೬ರಲ್ಲಿ ಓದಿದ ನಂತರ ವ್ಯಾಟ್ಸನ್ ತಮ್ಮ ಆಸಕ್ತಿ ಹಾಗೂ ಗುರಿಯಾಗಿದ್ದ ಪಕ್ಷಿಶಾಸ್ತ್ರವನ್ನು ತೊರೆದು ವಂಶವಾಹಿ ವಿಜ್ಞಾನದ ಕುರಿತು ಆಸಕ್ತಿ ಹೆಚ್ಚಿಸಿದರು. ನಂತರ ಪ್ರಾಣಿಶಾಸ್ತ್ರದ ವಿಷಯಕ್ಕೆ ಸಂಬಂಧಿಸಿ ಷಿಕಾಗೊ ವಿಶ್ವವಿದ್ಯಾನಿಲಯದಿಂದ ೧೯೪೭ರಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆದರು.

'ಅವೊಯಿಡ್ ಬೋರಿಂಗ್ ಪೀಪಲ್' ಎಂಬುದು ವ್ಯಾಟ್ಸನ್ ಅವರ ಆತ್ಮಕಥನವಾಗಿತ್ತು. ಅದರಲ್ಲಿ ಷಿಕಾಗೊ ವಿಶ್ವವಿದ್ಯಾನಿಲಯದ ವಿವರಣೆ ಮತ್ತು ಈ ಶಿಕ್ಷಣ ಸಂಸ್ಥೆಯು ವ್ಯಾಟ್ಸನ್ ಅವರಿಗೆ ಹಲವಾರು ನಿರ್ಣಾಯಕ ಭಾವನೆಗಳನ್ನು ಅನುಭವಕ್ಕೆ ತಂದ ವಿವರಣೆಯನ್ನು ನೀಡಲಾಗಿದೆ. ೧೯೪೭ರಲ್ಲಿ ವ್ಯಾಟ್ಸನ್ ಅವರು ಷಿಕಾಗೊ ವಿಶ್ವವಿದ್ಯಾನಿಲಯವನ್ನು ಬಿಟ್ಟು ಇಂಡಿಯಾನ ವಿಶ್ವವಿದ್ಯಾನಿಲಯಕ್ಕೆ ತಮ್ಮ ಪದವೀಧರ ಶಿಕ್ಷಣವನ್ನು ಮುಂದುವರೆಸಲು ಬಂದರು.[೧೩]

ತದನಂತರ ತಳಿವಿಜ್ಞಾನಿ ಹರ್ಮನ್ ಜೋಸೆಫ್ ಮುಲ್ಲರ್ (1890-1967) ಮತ್ತಿತರರಿಂದ ಪ್ರಭಾವಿತನಾಗಿ  ‘ದಿ ಎಫೆಕ್ಟ್ ಆಫ್ ಹಾರ್ಡ್ ಎಕ್ಸ್‌ರೇಸ್ ಆನ್ ಬ್ಯಾಕ್ಟೀರಿಯೊಫ್ಯಾಜ್ ಮಲ್ಟಿಪ್ಲಿಕೇಶನ್’ ವಿಷಯದಲ್ಲಿ ಇಂಡಿಯಾನ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಗಳಿಕೆ (1950).

ನಂತರದ ಜೀವನ

(ಬ್ಯಾಕ್ಟೀರಿಯಗಳಿಗೆ ಸೋಂಕುವ ವೈರಸ್‌ಗಳ ಡಿಎನ್‌ಎ ಕುರಿತು ಸೆಪ್ಟೆಂಬರ್ 1950-ಸೆಪ್ಟೆಂಬರ್ 1951 ಅವಧಿಯಲ್ಲಿ ಕೋಪೆನ್‌ಹೇಗನ್‌ನ ನ್ಯಾಶನಲ್ ರಿಸರ್ಚ್ ಕೌನ್ಸಿಲ್‌ನಲ್ಲಿ) ಮೇ 1951ರಲ್ಲಿ ನೇಪಲ್ಸ್‌ನಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಮಾರಿಸ್ ಹಗ್ ಫ್ರೆಡ್ರಿಕ್ ವಿಲ್ಕಿನ್ಸ್‌ನೊಂದಿಗೆ (1916-2004) ಭೇಟಿ ಮತ್ತು ಸ್ಫಟಿಕೀಯ ಡಿಎನ್‌ಎಯ ಎಕ್ಸ್‌ಕಿರಣ ವಿವರ್ತನ ಪ್ರರೂಪ ವೀಕ್ಷಣೆ. ನ್ಯೂಕ್ಲಿಕಾಮ್ಲ ಮತ್ತು ಪ್ರೋಟೀನುಗಳ ಸಂರಚನ ರಸಾಯನವಿಜ್ಞಾನವನ್ನು ತನ್ನ ಸಂಶೋಧನ ಕ್ಷೇತ್ರವಾಗಿ ಆಯ್ದುಕೊಳ್ಳಲು ಉದ್ದೀಪನೆ. ಸಂಶೋಧನೆ ಮಾಡಲು ಆಗಸ್ಟ್ 1951ರಲ್ಲಿ ಕೇಂಬ್ರಿಜ್‌ನ ಕ್ಯಾವೆಂಡಿಶ್ ಪ್ರಯೋಗಾಲಯ ಪ್ರವೇಶ. ಅಲ್ಲಿ ಅದೇ ವರ್ಷ ಇಂಗ್ಲೆಂಡಿನ ಜೀವಭೌತವಿಜ್ಞಾನಿ ಫ್ರಾನ್ಸಿಸ್ ಹ್ಯಾರಿ ಕಾಂಪ್ಟನ್ ಕ್ರಿಕ್‌ನ (1916-2004) ಭೇಟಿ. ಡಿಎನ್‌ಎ ಅಣು ಸಂರಚನೆಯ ರಹಸ್ಯ ಭೇದಿಸುವ ಸಂಶೋಧನೆಯ ಆರಂಭ (1952). ಆನುವಂಶಿಕ ಗುಣಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುವ ಡಿಎನ್‌ಎ ಅಣು ಸಂರಚನೆಯ ಆವಿಷ್ಕಾರಕ್ಕಾಗಿ ಈ ಮೂವರೂ ನೊಬೆಲ್ ಪ್ರಶಸ್ತಿ ಹಂಚಿಕೊಳ್ಳುವುದಕ್ಕೆ (1962) ಬುನಾದಿ ಸಿದ್ಧವಾದದ್ದು ಹೀಗೆ.

ಸಮಾನಾಸಕ್ತಿಯ ತಳಹದಿಯ ಮೇಲೆ ಎಕ್ಸ್‌ಕಿರಣ ವಿವರ್ತನ ಪರಿಣತ ಕ್ರಿಕ್ ಮತ್ತು ಬ್ಯಾಕ್ಟೀರಿಯ ತಳಿವಿಜ್ಞಾನ ಪರಿಣತ ವಾಟ್ಸನ್‌ರ  ಮಿತ್ರತ್ವ ರೂಪುಗೊಂಡುದರ ಫಲಿತವೇ  ಡಿಎನ್‌ಎ ಸಂರಚನೆಯ ದ್ವಿಸುರುಳಿ (ಡಬಲ್ ಹೆಲಿಕ್ಸ್) ಪ್ರಸ್ತಾವನೆ ಮತ್ತು ಅದರ ಯಥಾಪ್ರತಿ ಸೃಷ್ಟಿ ವಿಧಾನದ ನಿರೂಪಣೆ (1953). ವಿಲ್ಕಿನ್ಸ್‌ನ ಅಧ್ಯಯನಗಳು ಸಂಗ್ರಹಿಸಿದ್ದ  ಭೌತ ಮತ್ತು ಎರ್ವಿನ್ ಚಾರ್ಗಾಫ್ (1905-2002) ಸಂಗ್ರಹಿಸಿದ್ದ ರಾಸಾಯನಿಕ ಮಾಹಿತಿಗಳನ್ನು ಆಧರಿಸಿ ವಾಟ್ಸನ್ ಮತ್ತು ಕ್ರಿಕ್ ಈ ಸಿದ್ಧಾಂತ ರೂಪಿಸಿದ್ದರು. ಸುರುಳಿಯಾಗಿ ತಿರುಚಿದ ಏಣಿಯಂತಿದ್ದ ಈ ಮಾದರಿಯಲ್ಲಿ ಪ್ರತ್ಯಾಮ್ಲಗಳ ಮೆಟ್ಟಿಲುಗಳಿಂದ ಹೆಣೆದಿರುವ ಸಕ್ಕರೆ ಫಾಸ್ಫೇಟುಗಳ ಎರಡು ಎಳೆಗಳಿದ್ದುವು. ಪ್ರತ್ಯಾಮ್ಲಗಳ ಪೈಕಿ ಒಂದು ಎಳೆಯ ಗ್ವಾನೀನ್ ಮತ್ತೊಂದರ ಸೈಟೊಸೀನ್‌ಗೂ ಒಂದರ ಅಡೆನೀನ್ ಮತ್ತೊಂದರ ಥೈಮೀನ್‌ಗೂ ಜೋಡಣೆ ಆಗಿರುವುದರಿಂದ ದ್ವಿಸುರುಳಿಯ ಅಗಲ ಏಕರೂಪವಾಗಿರುತ್ತದೆ. ಕೋಶ ವಿಭಜನೆ ಆಗುವಾಗ ಎಳೆಗಳು ಬೇರ್ಪಡುತ್ತವೆ. ಪ್ರತಿಯೊಂದು ಎಳೆಯೂ ಮತ್ತೊಂದು ಎಳೆ ರೂಪುಗೊಳ್ಳುವುದಕ್ಕೆ ಬೇಕಾದ ಪ್ರರೂಪವನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯಿಂದ ಜೀನ್ ಮತ್ತು ಕ್ರೋಮೊಸೋಮುಗಳು ದ್ವಿಪ್ರತಿಗೊಳ್ಳುತ್ತವೆ. ಇದು ‘ನೇಚರ್’ ಪತ್ರಿಕೆಯಲ್ಲಿ (1953 ಎಪ್ರಿಲ್ 25) ಪ್ರಕಟವಾದ ಈ ಸಿದ್ಧಾಂತದ ತಿರುಳು. ತದನಂತರ ವಿಲ್ಕಿನ್ಸ್ ಮಾಡಿದ ಎಕ್ಸ್‌ಕಿರಣ ವಿವರ್ತನ ಅಧ್ಯಯನಗಳು (1960, 1962) ಈ ಪ್ರಸ್ತಾವನೆಯನ್ನು ದೃಢೀಕರಿಸುವ ಮಾಹಿತಿ ಒದಗಿಸಿದುವು. ಎಂದೇ, ವಾಟ್ಸನ್, ಕ್ರಿಕ್ ಮತ್ತು ವಿಲ್ಕಿನ್ಸ್ ಮೂವರಿಗೂ 1962ರ ದೇಹವಿಜ್ಞಾನ ಮತ್ತು ವೈದ್ಯ ವಿಜ್ಞಾನ ನೊಬೆಲ್ ಪ್ರಶಸ್ತಿ ಲಭಿಸಿತು.

‘ಡಿಎನ್‌ಎ’ಯ ದ್ವಿಸುರುಳಿ ಮಾದರಿಯ ಆವಿಷ್ಕಾರಾನಂತರ ವಾಟ್ಸನ್ ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೀವವಿಜ್ಞಾನದ ಸೀನಿಯರ್ ರಿಸರ್ಚ್ ಫೆಲೊ ಆಗಿ (1953-55) ಅಲೆಕ್ಸಾಂಡರ್ ರಿಚ್‌ನ ಜೊತೆಗೂಡಿ ಆರ್‌ಎನ್‌ಎಯ ಎಕ್ಸ್‌ಕಿರಣ ವಿವರ್ತನ ಅಧ್ಯಯನ ಮಾಡಿದ. ಮುಂದೆ ಕ್ಯಾವೆಂಡಿಶ್ ಪ್ರಯೋಗಾಲಯಕ್ಕೆ ಹಿಂತಿರುಗಿ ಕ್ರಿಕ್‌ನ ಜೊತೆಗೂಡಿ ಸಂಶೋಧನೆಗಳಲ್ಲಿ ಮಗ್ನನಾದ. ಇವರು ಈ ಅವಧಿಯಲ್ಲಿ ಚಿಕ್ಕ ವೈರಸ್‌ಗಳ ಸಂರಚನೆಯ ಸಾರ್ವತ್ರಿಕ ಸಿದ್ಧಾಂತ ಮಂಡಿಸಿದರು. ತದನಂತರ ಅಧ್ಯಾಪಕನಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗ ಸೇರಿದ ವಾಟ್ಸನ್ ಅಸಿಸ್ಟೆಂಟ್ ಪ್ರೊಫೆಸರ್ (1956), ಅಸೋಸಿಯೇಟ್ ಪ್ರೊಫೆಸರ್ (1958), ಪ್ರೊಫೆಸರ್ (1961) ಆಗಿ ಸೇವೆ ಸಲ್ಲಿಸಿದ (1956-76). ಈ ಅವಧಿಯಲ್ಲಿ ಈತನ ಸಂಶೋಧನೆಗಳ ವಿಷಯ: ‘ರೋಲ್ ಆಫ್ ಆರ್‌ಎನ್‌ಎ ಇನ್ ಪ್ರೋಟೀನ್ ಸಿಂತೆಸಿಸ್’. ಈ ಸಂಶೋಧನೆಗಳ ಫಲಿತವೇ ಸಂದೇಶವಾಹಕ (ಮೆಸೆಂಜರ್) ಆರ್‌ಎನ್‌ಎ ಪರಿಕಲ್ಪನೆಯನ್ನು ಬೆಂಬಲಿಸುವ ಬಹುತೇಕ ಪ್ರಾಯೋಗಿಕ ಪುರಾವೆಗಳು. ಹಾರ್ವರ್ಡಿನಲ್ಲಿ ಇರುವಾಗಲೇ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ಲಾಂಗ್ ಐಲ್ಯಾಂಡಿನ ‘ಕೋಲ್ಡ್ ಸ್ಪ್ರಿಂಗ್ ಹಾರ್ಬರ್’ ಪ್ರಯೋಗಾಲಯದ ನಿರ್ದೇಶಕನಾಗಿ ಅದನ್ನು ಬಲಪಡಿಸಿದ. ಇತ್ತ ಹಾರ್ವರ್ಡ್ ಹುದ್ದೆಗೆ ರಾಜಿನಾಮೆ ನೀಡಿ ಹಾರ್ಬರ್ ಪ್ರಯೋಗಾಲಯದ ಪೂರ್ಣಕಾಲಿಕ ನಿರ್ದೇಶಕನಾದ (1976). ಪ್ರಸ್ತುತ ಅದು ತಳಿವಿಜ್ಞಾನ ಸಂಶೋಧನೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆ. ವಾಟ್ಸನ್‌ನ ಮಾರ್ಗದರ್ಶನದಲ್ಲಿ ಅಲ್ಲಿಯ ವಿಜ್ಞಾನಿಗಳು ಕ್ಯಾನ್ಸರಿನ ಅಣು ಸ್ವರೂಪವನ್ನು ಪತ್ತೆಹಚ್ಚಿ ಕ್ಯಾನ್ಸರ್‌ಕಾರಕ ಜೀನ್‌ಗಳನ್ನು ಗುರುತಿಸಿದರು. ‘ಮಾನವ ಜೀನೋಮ್ ಯೋಜನೆಯ’ ಸಹಾಯಕ ನಿರ್ದೇಶಕನಾಗುವಂತೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನೀಡಿದ ಆಹ್ವಾನವನ್ನು ಸ್ವೀಕರಿಸಿದ (1988), ಮುಂದೆ ಅದರ ನಿರ್ದೇಶಕನೂ ಆದ (1989). ವಿವಾದಗಳನ್ನು ಹುಟ್ಟುಹಾಕಿದ ಈ ಯೋಜನೆಯನ್ನು ಸಮರ್ಥವಾಗಿ ದಿಗ್ದರ್ಶಿಸಿದ. ಈ ಹುದ್ದೆಗೆ ರಾಜಿನಾಮೆ ನೀಡಿ (1992) ಪುನಃ ಲಾಂಗ್ ಐಲ್ಯಾಂಡ್ ಪ್ರಯೋಗಾಲಯಕ್ಕೆ ಹಿಂತಿರುಗಿದ (1992), ಆ ಸಂಸ್ಥೆಯ ಅಧ್ಯಕ್ಷನೂ ಆದ (1994). ಈ ಪ್ರಯೋಗಾಲಯ ಕ್ಯಾನ್ಸರ್, ಸಸ್ಯಅಣುಜೀವವಿಜ್ಞಾನ, ಕೋಶಜೀವರಸಾಯನವಿಜ್ಞಾನ ಮತ್ತು ನರವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟದ ಸಂಶೋಧನೆಗಳಲ್ಲಿ ನಿರತವಾಗಿರುವುದಲ್ಲದೆ ಡಿಎನ್‌ಎ ವಿಜ್ಞಾನದಲ್ಲಿ ಸ್ನಾತಕೋತ್ತರ ವಿಶ್ವವಿದ್ಯಾಲಯವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಕೃತಿಗಳು

ಈ ಮೇಧಾವಿ ವಿಜ್ಞಾನಿಗೆ ಅನೇಕ ಪುರಸ್ಕಾರಗಳು, ಗೌರವ ಸದಸ್ಯತ್ವಗಳು, ಗೌರವ ಪದವಿಗಳು ಲಭಿಸಿವೆ. ಡಿಎನ್‌ಎ ಆವಿಷ್ಕಾರದ ಕಥೆ ‘ದಿ ಡಬಲ್ ಹೆಲಿಕ್ಸ್’ ಸಹೋದ್ಯೋಗಿಗಳನ್ನು ಕೀಳಾಗಿ ಚಿತ್ರಿಸಿದೆ ಎಂಬ ವಿವಾದ ಹುಟ್ಟುಹಾಕಿದ ಜನಪ್ರಿಯ ಪುಸ್ತಕ ಈತನ ಮೊದಲನೆಯ ಕೃತಿ (1968). ‘ಮಾಲೆಕ್ಯುಲರ್ ಬಯಾಲಜಿ ಆಫ್ ದಿ ಜೀನ್’ (1968), ‘ಮಾಲೆಕ್ಯುಲರ್ ಬಯಾಲಜಿ ಆಫ್ ದಿ ಸೆಲ್,’ ‘ರೀಕಂಬೈನೆಂಟ್ ಡಿಎನ್‌ಎ-ಎ ಶಾರ್ಟ್ ಕೋರ್ಸ್,’ ‘ದಿ ಡಿಎನ್‌ಎ ಸ್ಟೋರಿ’ (1981) ಮತ್ತು ‘ಜೀನ್ಸ್, ಗರ್ಲ್ಸ್ ಅ್ಯಂಡ್ ಗ್ಯಾಮೊ’ (2003)-ಇವು ಇವನ ಇತರ ಕೃತಿಗಳು.

ಪ್ರಶಸ್ತಿಗಳು ಮತ್ತು ಗೌರವಗಳು

  • ಅಲ್ಬರ್ಟ್ ಲಾಸ್ಕರ್ ಪ್ರಶಸ್ತಿ,೧೯೬೦
  • ಬೆಂಜಮಿನ್ ಫ್ರಾಂಕ್ಲಿನ್ ಪದಕ,೨೦೦೧
  • ಚಾರ್ಲ್ಸ್ ಎ.ಡಾನಾ ಪ್ರಶಸ್ತಿ,೧೯೯೪
  • ಕೋಪ್ಲೆ ಪದಕ,೧೯೯೩
  • ಸಿಎಸ್ಎಚ್ಎಲ್ ಡಬಲ್ ಹೆಲಿಕ್ಸ್,೨೦೦೮
  • ಲಿಬರ್ಟಿ ಪದಕ,೨೦೦೦
  • ಮೆಂಡಲ್ ಪದಕ,೨೦೦೮
  • ಷಿಕಾಗೊ ವಿಶ್ವವಿದ್ಯಾನಿಲಯದ ಅಲ್ಯುಮಿನಿ ಪದಕ,೧೯೯೮
  • ಲಂಡನ್ ವಿಶ್ವವಿದ್ಯಾನಿಲಯದ ಪ್ರಶಸ್ತಿ,೨೦೦೦
  • ನೋಬೆಲ್ ಪ್ರಶಸ್ತಿ,೧೯೬೨[೧೪]

ಇದನ್ನೂ ನೋಡಿ

[೧೫]

ಉಲ್ಲೇಖಗಳು