ಬುರ್ಜ್‌ ದುಬೈ

ಬುರ್ಜ್‌ ಖಲೀಫಾ (ಅರೇಬಿಕ್: برج خليفة "ಖಲೀಫಾ ಟವರ್‌ (ಖಲೀಫಾ ಗೋಪುರ"),[೭] - ಉದ್ಘಾಟನೆಗೆ ಮುಂಚೆ ಈ ಕಟ್ಟಡವನ್ನು ಬುರ್ಜ್‌ ದುಬೈ ಎಂದೂ ಕರೆಯಲಾಗುತ್ತಿತ್ತು. ಇದು ಸಂಯುಕ್ತ ಅರಬ್ ಎಮಿರೇಟ್‌ ದೇಶದ ಪ್ರಮುಖ ನಗರ ದುಬೈಯಲ್ಲಿರುವ ಒಂದು ಗಗನಚುಂಬಿ ಕಟ್ಟಡ. ಬುರ್ಜ್‌ ದುಬೈ ಇದುವರೆಗೂ ನಿರ್ಮಿಸಲಾದ ಅತ್ಯತ್ತರದ ಮಾನವ-ನಿರ್ಮಿತ ಕಟ್ಟಡವಾಗಿದೆ. 828 m (2,717 ft).[೭]

ಚಿತ್ರ:Burj Khalifa.jpg
ಬುರ್ಜ್ ಖಲೀಫಾ
Burj Khalifa
برج خليفة
ಚಿತ್ರ:200px
Burj Khalifa on 23 December 2009
ಹಳೆಯ ಹೆಸರುಗಳುBurj Dubai
ಸಾಮಾನ್ಯ ಮಾಹಿತಿ
ಸ್ಥಳDubai, United Arab Emirates
ತೆರೆಯುವ ದಿನಾಂಕ4 January 2010[೧]
ಬೆಲೆ$1.5 billion[೨]
Height
ಚಾವಡಿ828 m (2,717 ft)[೩]
ಮೇಲಿನ ಮಹಡಿ621.3 m (2,038 ft)[೩]
Technical details
ಮಹಡಿ ಸಂಖ್ಯೆ160 habitable floors[೪]
plus 46 maintenance levels in the spire[೫] and 2 parking levels in the basement
ಮಹಡಿಯ ಜಾಗ309,473 m2 (3,331,100 sq ft)[೩]
Design and construction
ವಾಸ್ತುಶಿಲ್ಪಿAdrian Smith at SOM
ಡೆವಲಪರ್Emaar Properties
ಎಂಜಿನಿಯರ್Bill Baker at SOM[೬]

ಇದರ ನಿರ್ಮಾಣವು 2004ರ ಸೆಪ್ಟೆಂಬರ್‌ 21ರಂದು ಪ್ರಾರಂಭವಾಯಿತು. ಈ ಕಟ್ಟಡದ ಹೊರಭಾಗ ರಚನೆಯ ನಿರ್ಮಾಣವು 2009ರ ಅಕ್ಟೋಬರ್‌ 1ರಂದು ಸಂಪೂರ್ಣಗೊಂಡಿತು. ಈ ಕಟ್ಟಡವು ಸಾರ್ವಜನಿಕರಿಗಾಗಿ 2010ರ ಜನವರಿ 4ರಂದು [೧][೮] ಅಧಿಕೃತವಾಗಿ ಮುಕ್ತವಾಯಿತು. ದುಬೈ ನಗರದ ಪ್ರಮುಖ ವಾಣಿಜ್ಯ ಜಿಲ್ಲೆಯ ಸನಿಹ ಷೇಕ್‌ ಜಯೆದ್‌ ರಸ್ತೆಯಲ್ಲಿನ 'ಫರ್ಸ್ಟ್‌ ಇಂಟರ್ಚೇಂಚ್‌'ನಲ್ಲಿ, 'ಡೌನ್ಟೌನ್‌ ದುಬೈ' (ದುಬೈ ವಾಣಿಜ್ಯ ಪ್ರದೇಶ) ಎಂಬ ಹೊಸ ಪ್ರತಿಷ್ಠಿತ 2 km2 (490-acre) ಅಭಿವೃದ್ಧಿ ಯೋಜನೆಯ ಅಂಗವಾಗಿದೆ.


ಅಮೆರಿಕಾ ಸಂಯುಕ್ತ ಸಂಸ್ಥಾನದ ಶಿಕ್ಯಾಗೊ ನಗರದಲ್ಲಿರುವ ಸ್ಕಿಡ್ಮೋರ್‌, ಒವಿಂಗ್ಸ್‌ ಅಂಡ್‌ ಮೆರಿಲ್‌ ಕಟ್ಟಡ ವಿನ್ಯಾಸ ಸಂಸ್ಥೆಯು, ಈ ಕಟ್ಟಡದ ರಚನೆ ಮತ್ತು ವಿನ್ಯಾಸ ಕಾರ್ಯ ಕೈಗೊಂಡಿತ್ತು. ಈಗ ತಮ್ಮದೇ ಉದ್ದಿಮೆ ನಡೆಸುತ್ತಿರುವ ಅಡ್ರಿಯನ್‌ ಸ್ಮಿತ್ ಬುರ್ಜ್‌ ದುಬೈ ಕಟ್ಟಡದ ಪ್ರಮುಖ ಶಿಲ್ಪಿ ಮತ್ತು ಬಿಲ್‌ ಬೇಕರ್‌ ಪ್ರಮುಖ ರಚನಾ ಎಂಜಿನಿಯರ್‌ ಆಗಿದ್ದರು.[೯][೧೦] ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಸಿ&ಟಿ ಈ ಕಟ್ಟಡ ನಿರ್ಮಾಣದ ಪ್ರಾಥಮಿಕ ಗುತ್ತಿಗೆದಾರ ಸಂಸ್ಥೆಯಾಗಿತ್ತು.[೧೧]

ಈ ನಿರ್ಮಾಣ ಯೋಜನೆಯ ಒಟ್ಟಾರೆ ವೆಚ್ಚ ಸುಮಾರು (US$1.5 ಬಿಲಿಯನ್)1.5 ಶತಕೋಟಿ ಅಮೆರಿಕನ್‌ ಡಾಲರ್‌ಗಳು, ಹಾಗೂ ಇಡೀ ಡೌನ್ಟೌನ್‌ ದುಬೈ ಅಭಿವೃದ್ಧಿಗಾಗಿ(US$20) 20 ಶತಕೋಟಿ ವೆಚ್ಚ ಅಮೆರಿಕನ್‌ ಡಾಲರ್‌ಗಳಾಗಿತ್ತು.[೧೨] ಈ ಯೋಜನೆಯ ಅಭಿವೃದ್ಧಿಕಾರ(ಹರಿಕಾರ) ಉದ್ದಿಮೆ ಎಮ್ಮಾರ್‌ ಪ್ರಾಪರ್ಟೀಸ್‌ನ ಮುಖ್ಯಸ್ಥ ಮೊಹಮ್ಮದ್‌ ಅಲಿ ಅಲಬ್ಬರ್‌ 2009ರ ಮಾರ್ಚ್‌ ತಿಂಗಳಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಬುರ್ಜ್‌ ಖಲೀಫಾದಲ್ಲಿ ಕಾರ್ಯಾಲಯಗಳಿಗಾಗಿ ಬಾಡಿಗೆಗೆ ನೀಡುವ ಜಾಗೆಯ ಬೆಲೆಯು ಪ್ರತಿ ಚದರಡಿಗೆ (US$4,000)4,000 ಅಮೆರಿಕನ್‌ ಡಾಲರ್‌ ತಲುಪಿತ್ತು. (ಪ್ರತಿ m2ಗೆ (US$43,000 ಪ್ರತಿ m2)43,000 ಅಮೆರಿಕನ್‌ ಡಾಲರ್‌ಗಳಿಗಿಂತಲೂ ಹೆಚ್ಚು). ಜೊತೆಗೆ, ಬುರ್ಜ್‌ ಖಲೀಫಾದಲ್ಲೇ ಇರುವ ಅರ್ಮಾನಿ ರೆಸಿಡೆನ್ಸಸ್‌ ಪ್ರತಿ ಚದರಡಿಗೆ (US$3,500)3,500 ಅಮೆರಿಕನ್‌ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. (ಪ್ರತಿ m2ಗೆ (ಒಟ್ಟು US$37,500 ಪ್ರತಿ m2)37,500 ಅಮೆರಿಕನ್‌ ಡಾಲರ್‌ಗಳಿಗಿಂತಲೂ ಹೆಚ್ಚು).[೧೩]

ಯೋಜನೆ ಸಂಪೂರ್ಣಗೊಳ್ಳುವ ಹೊತ್ತಿಗೆ 2007-2010 ಅವಧಿಯ ಜಾಗತಿಕ ಆರ್ಥಿಕ ಸಂಕಷ್ಟವು ಆರಂಭಗೊಂಡಿತ್ತು. ಆ ಸಮಯದಲ್ಲಿ ಹಲವು ವಿಶಾಲ ಕಟ್ಟಡಗಳು ನಿರ್ಮಾಣವಾಗಿ, ಇವುಗಳಲ್ಲಿ ಹಲವು ಬಾಡಿಗೆದಾರರಿಲ್ಲದೇ ಖಾಲಿ ಬಿದ್ದಿದ್ದವು.[೧೪] ಬಹಳಷ್ಟು ಮಹತ್ವಾಕಾಂಕ್ಷೆ ಹೊತ್ತಿದ್ದ ದುಬೈ ನಗರವು ಸಾಲದಂತಹ ಋಣದ ಸಂಕಷ್ಟದಲ್ಲಿ ಸಿಲುಕಿ, ಮುಳುಗುತ್ತಿದ್ದಾಗ, ತೈಲ-ಸಂಪತ್ತು ಹೊಂದಿದ್ದ ನೆರೆ-ನಗರ ಅಬುಧಾಬಿಯಿಂದ ಹಲವು ಶತಕೋಟಿ ಡಾಲರ್‌ ಮೌಲ್ಯದ ಧನಬೆಂಬಲ(ಸಹಾಯ) ಕೋರಲು ಸರ್ಕಾರ ಮುಂದಾಗಬೇಕಾಯಿತು. ಆನಂತರ, ಯುಎಇ ರಾಷ್ಟ್ರಾಧ್ಯಕ್ಷ ಖಲೀಫಾ ಬಿನ್‌ ಝಯದ್‌ ಅಲ್‌ ನಹ್ಯಾನ್‌ ಅತ್ಯಮೂಲ್ಯ ಬೆಂಬಲ ನೀಡಿದ್ದಕ್ಕಾಗಿ, ಅವರ ಗೌರವಾರ್ಥವಾಗಿ, ಉದ್ಘಾಟನಾ ಸಮಾರಂಭದಲ್ಲಿ ಈ ಕಟ್ಟಡವನ್ನು ಬುರ್ಜ್‌ ಖಲೀಫಾ ಎಂದು ಮರುನಾಮಕರಣ ಮಾಡಲಾಯಿತು.[೧೫]

ದುಬೈ ನಗರದ ಆಸ್ತಿಪಾಸ್ತಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದ ಕಾರಣ, ಉದ್ಘಾಟನೆಯ ನಂತರದ ಹತ್ತು ತಿಂಗಳುಗಳ ಕಾಲ ಬುರ್ಜ್‌ ಖಲೀಫಾದಲ್ಲಿ ಬಾಡಿಗೆ ದರಗಳು ಸುಮಾರು ಶೇ.40ರಷ್ಟು ಕುಸಿದಿದ್ದವು. ಆ ಸಮಯದಲ್ಲಿಯೇ, ಕಟ್ಟಡಗಳಲ್ಲಿನ 900 (ವಾಸಗೃಹಗಳು)ವಠಾರಗಳಲ್ಲಿ ಇನ್ನೂ 825 ಖಾಲಿ ಉಳಿದಿದ್ದವು.[೧೬][೧೭]

ಪರಿಕಲ್ಪನೆಯ ಹುಟ್ಟು

ಭಾರಿ ಪ್ರಮಾಣದ, ಮಿಶ್ರಿತ-ಬಳಕೆಯ ಅಭಿವೃದ್ಧಿ ಯೋಜನೆಯ ಕೇಂದ್ರಬಿಂದುವಾಗಿ ಬುರ್ಜ್‌ ಖಲೀಫಾ ಕಟ್ಟಡವನ್ನು ವಿನ್ಯಾಸ ಮಾಡಲಾಗಿದೆ. ಇದರಲ್ಲಿ 30,000 ಮನೆಗಳು, ದಿ ಅಡ್ರೆಸ್‌ ಡೌನ್ಟೌನ್‌ ದುಬೈ ಸೇರಿದಂತೆ ಒಂಬತ್ತು ಹೋಟೆಲ್‌ಗಳು, 3 hectares (7.4 acres)ರಷ್ಟು ಉದ್ಯಾನವನ ಪ್ರದೇಶಗಳು, ಕನಿಷ್ಠಪಕ್ಷ 19 ವಸತಿ ಕಟ್ಟಡಗಳು, ದುಬೈ ಮಾಲ್‌ ಹಾಗೂ 12-hectare (30-acre) ಮಾನವ-ನಿರ್ಮಿತ ಬುರ್ಜ್‌ ಖಲೀಫಾ ಕೆರೆ ಸೇರಿರುತ್ತವೆ.

ಈ ಕಟ್ಟಡದಿಂದಾಗಿ, ಭೂಮಿ ಮೇಲೆ ಅತ್ಯೆತ್ತರದ ಯಾವುದೇ ಆಚೀಚೆಯ ಸಂಪರ್ಕ ಹೊಂದಿರುವ ಮುಕ್ತವಾದ ಕಟ್ಟಡ ಹೊಂದಿರುವ ಹೆಗ್ಗಳಿಕೆಯನ್ನು ಮಧ್ಯಪ್ರಾಚ್ಯ ವಲಯಕ್ಕೆ ಪುನಃ ದಕ್ಕಿಸಿಕೊಟ್ಟಂತಾಗಿದೆ. ಇದಕ್ಕೆ ಮುಂಚೆ, ಸುಮಾರು ನಾಲ್ಕು ಸಹಸ್ರಮಾನಗಳ ಕಾಲ ಗಿಝಾದ ಬೃಹತ್‌ ಪಿರಮಿಡ್‌ ಈ ದಾಖಲೆ ಹೊಂದಿತ್ತು. ಇಸವಿ 1311ರಲ್ಲಿ ನಿರ್ಮಿತ ಇಂಗ್ಲೆಂಡ್‌ನ ಲಿಂಕನ್‌ ಪ್ರಧಾನ ಇಗರ್ಜಿ ಈ ಪಿರಮಿಡ್‌ಗಿಂತಲೂ ಮೀರಿ ಉನ್ನತವಾಗಿತ್ತು.

ಬುರ್ಜ್‌ ಖಲೀಫಾ ಕಟ್ಟಡದ ನಿರ್ಮಾಣವು, ತೈಲ-ಸಂಪನ್ಮೂಲ ಆಧಾರಿತ ಆರ್ಥಿಕತೆಯಿಂದ ವಿಭಿನ್ನವಾಗಿ, ಸೇವೆ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸರ್ಕಾರದ ನಿರ್ಧಾರವನ್ನು ಆಧರಿಸಿದೆ. ಅಧಿಕಾರಿಗಳ ಪ್ರಕಾರ, ಹೆಚ್ಚಿನ ಅಂತರರಾಷ್ಟ್ರೀಯ ಮನ್ನಣೆ ಮತ್ತು ಹೂಡಿಕೆ ಗಳಿಸಿಕೊಳ್ಳಲು ಬುರ್ಜ್‌ ಖಲೀಫಾದಂತಹ ಯೋಜನೆಗಳ ಅಗತ್ಯವಿದೆ. 'ಬಹಳ ಅದ್ದೂರಿಯಾದ ನಿರ್ಮಾಣದೊಂದಿಗೆ ದುಬೈ ನಗರವನ್ನು ವಿಶ್ವದ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಕಲ್ಪಿಸುವುದರ ಕುರಿತು ಷೇಕ್‌ ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಖ್ತೂಮ್‌ ಕನಸು ಹೊತ್ತಿದ್ದರು' ಎಂದು ನಖೀಲ್‌ ಪ್ರಾಪರ್ಟೀಸ್‌ ಸಂಸ್ಥೆಯಲ್ಲಿ ಪ್ರವಾಸೋದ್ಯಮ ಮತ್ತು ಗಣ್ಯ ವ್ಯಕ್ತಿಗಳ ಸಮೂಹಗಳ ಕಾರ್ಯದರ್ಶಿ ಜಾಕ್ವಿ ಜೊಸೆಫ್ ತಿಳಿಸಿದರು.[೧೮]

ಎತ್ತರ

  • ನೋಡಿ> ಅತಿ ಎತ್ತರದ ಕಟ್ಟಡ:[೧]

ಪ್ರಸ್ತುತ ದಾಖಲೆಗಳು

  • ತನ್ನ ಉನ್ನತ ಶೃಂಗದ ತನಕ ಅತ್ಯೆತ್ತರದ ಗಗನಚುಂಬಿ ಕಟ್ಟಡ: 828 m (2,717 ft) (ಮುಂಚೆ ತೈಪೆ 101 - 509.2 m (1,671 ft)*)
  • ನಿರ್ಮಿಸಲಾದ ಅತ್ಯೆತ್ತರದ ರಚನೆ: 828 m (2,717 ft) (ಮುಂಚೆ ವಾರ್ಸಾ ರೇಡಿಯೊ ಸ್ತಂಭ – 646.38 m (2,121 ft)*)
  • ಇಂದಿಗೂ ಇರುವ ಅತ್ಯೆತ್ತರದ ರಚನೆ: 828 m (2,717 ft) (ಮುಂಚೆ ಕೆವಿಎಲ್‌ವೈ-ಟಿವಿ ಸ್ತಂಭ – 628.8 m (2,063 ft)*)
  • ಅತ್ಯೆತ್ತರದ ಮುಕ್ತವಾಗಿರುವ ನಿಲುವಿನ ರಚನೆ: 828 m (2,717 ft) (ಮುಂಚೆ ಸಿಎನ್‌ ಟವರ್‌ – 553.3 m (1,815 ft)*)
  • ಅತಿಹೆಚ್ಚು ಅಂತಸ್ತುಗಳುಳ್ಳ ಕಟ್ಟಡ: 160 (ಮುಂಚೆ ವಿಲಿಸ್ ಟವರ್‌ – 108)[೧೯]
  • ವಿಶ್ವದಲ್ಲೇ ಅತಿಹೆಚ್ಚು ಜನನಿಬಿಡ(ಜನ ಆಕ್ರಮಿತ) ಅಂತಸ್ತು: 160ನೆಯ ಅಂತಸ್ತು [೨೦]
  • ಕಟ್ಟಡ ಮೇಲ್ತುದಿಯಲ್ಲಿ ತಿರುಳಿನೊಳಗಿರುವ, ವಿಶ್ವದಲ್ಲಿ ಅತ್ಯೆತ್ತರದ ಲಿಫ್ಟ್‌ ಅಳವಡಿಕೆ [೨೧][೨೨]
  • ವಿಶ್ವದಲ್ಲಿ ಅತಿವೇಗದ ಲಿಫ್ಟ್‌ (ವೇಗ 64 km/h (40 mph) ಅಥವಾ 18 m/s (59 ft/s)[೨೨] (ಮುಂಚೆ ತೈಪೆ 101 - ಪ್ರತಿ ಸೆಕೆಂಡ್‌ಗೆ 16.83 ಮೀಟರ್‌ಗಳು)
  • ಕಟ್ಟಡವೊಂದಕ್ಕೆ ಅತ್ಯೆತ್ತರದ ಲಂಬವಾದ ಗಾರೆ ಪಂಪಿಂಗ್‌: 606 m (1,988 ft)[೨೩] (ಮುಂಚೆ ತೈಪೆ 101 – 449.2 m (1,474 ft)*)
  • ಇತಿಹಾಸದಲ್ಲಿ ವಸತಿಗೃಹಗಳಿಗಾಗಿ ಸ್ಥಳ ಹೊಂದಿರುವ ಮೊಟ್ಟಮೊದಲ ವಿಶ್ವದ ಅತ್ಯೆತ್ತರದ ರಚನೆ[೨೪]
  • ವಿಶ್ವದಲ್ಲಿ ಅತ್ಯೆತ್ತರದ ಹೊರನೋಟ ವೀಕ್ಷಣಾ ವೇದಿಕೆ (124ನೆಯ ಅಂತಸ್ತು) 452 m (1,483 ft)[೨೫][೨೬] ಎತ್ತರ.
  • ವಿಶ್ವದಲ್ಲೇ ಅತ್ಯೆತ್ತರದ ಮಸೀದಿ (158ನೆಯ ಅಂತಸ್ತಿನಲ್ಲಿದೆ.) [೨೭][೨೮]
  • ವಿಶ್ವದ ಅತ್ಯೆತ್ತರದ ಅಲ್ಯೂಮಿನಿಯಮ್‌ ಮತ್ತು ಗಾಜಿನ ಮುಂಭಾಗ - 512 m (1,680 ft)[೨೯] ಎತ್ತರ.
  • ವಿಶ್ವದ ಅತ್ಯೆತ್ತರದಲ್ಲಿರುವ ಈಜುವ ಕೊಳ (76ನೆಯ ಅಂತಸ್ತು)[೨೭]
  • ವಿಶ್ವದ ಅತ್ಯೆತ್ತರದ ರಾತ್ರಿವಿಹಾರ ಕೇಂದ್ರ (144ನೆಯ ಅಂತಸ್ತು).[೩೦]

ಎತ್ತರ ಹೆಚ್ಚಿಸುವ ಕುರಿತಾದ ಇತಿಹಾಸ

ಇತರೆ ಚಿರಪರಿಚಿತ ಉನ್ನತ ರಚನೆಗಳಿಗೆ ಹೋಲಿಸಲಾದ ಬುರ್ಜ್ ಖಲೀಫಾ

ಕಟ್ಟಡವನ್ನು ನಿರ್ಮಿಸಿದಾಗಿಂದಲೂ, ಕಟ್ಟಡದ ಎತ್ತರವನ್ನು ಹೆಚ್ಚಿಸುವ ಯೋಜನೆಗಳ ಬಗ್ಗೆ ಹಲವು ವರದಿಗಳಿವೆ. ಆದರೆ ಅವು ಯಾವವೂ ಖಚಿತಪಡಿಸಲಾಗಿಲ್ಲ. ಮೂಲತಃ ಆಸ್ಟ್ರೇಲಿಯಾ ದೇಶದ ಮೆಲ್ಬೊರ್ನ್‌ ನಗರದಲ್ಲಿ ಡಾಕ್ಲೆಂಡ್ಸ್‌ ಜಲಾಭಿಮುಖ ಅಭಿವೃದ್ಧಿಯ ಅಂಗವಾಗಿ 560 m (1,837 ft) ಗ್ರೊಲೊ ಟವರ್‌ನ್ನು ಹೋಲುವಂತೆ ನಿರ್ಮಿಸುವ ಪ್ರಸ್ತಾಪವಿತ್ತು. ಈ ಕಟ್ಟಡವನ್ನು ಸ್ಕಿಡ್ಮೋರ್‌, ಒವಿಂಗ್ಸ್‌ ಅಂಡ್‌ ಮೆರಿಲ್‌ (ಎಸ್‌ಒಎಮ್‌) ಸಂಸ್ಥೆ ನಿರ್ಮಿಸಿತ್ತು.[೩೧] 2006ರ ತನಕ ಈ ಯೋಜನೆಯಲ್ಲಿ ಸೇವೆ ಸಲ್ಲಿಸಿದ ಎಸ್‌ಒಎಮ್‌ ವಾಸ್ತುಶಿಲ್ಪಿ ಮಾರ್ಷಲ್‌ ಸ್ಟ್ರಾಬಲಾ 2008ರ ಅಪರಾರ್ಧದಲ್ಲಿ ಹೇಳಿದಂತೆ, ಬುರ್ಜ್‌ ಖಲೀಫಾ ಕಟ್ಟಡವನ್ನು 808 m (2,651 ft) ರಷ್ಟು ಎತ್ತರವಿರುವಂತೆ ವಿನ್ಯಾಸ ಮಾಡಲಾಯಿತು.[೩೨]

ಕಟ್ಟಡದ ಮೇಲ್ಪಂಕ್ತಿಯು ಅದರ ಇತರೆ ಭಾಗಗಳೊಂದಿಗೆ ಸುಲಲಿತವಾಗಿ ಹೊಂದಿಕೊಂಡಿರದ ಕಾರಣ, ಕಟ್ಟಡದ ಎತ್ತರವನ್ನು ಈಗಿರುವ ಮಟ್ಟಕ್ಕೆ ಏರಿಸಲು ಬಯಸಿ ಅದಕ್ಕೆ ಮಂಜೂರಾತಿ ಪಡೆಯಲಾಯಿತು, ಎಂದು ವಿನ್ಯಾಸ ವಾಸ್ತುಶಿಲ್ಪಿ ಅಡ್ರಿಯನ್‌ ಸ್ಮಿತ್‌ ಹೇಳಿದರು. [ಸೂಕ್ತ ಉಲ್ಲೇಖನ ಬೇಕು] ಈ ಬದಲಾವಣೆಯಲ್ಲಿ ಹೆಚ್ಚುವರಿ ಅಂತಸ್ತುಗಳ ಸೇರ್ಪಡೆಯಿರಲಿಲ್ಲ. ಇದರಿಂದಾಗಿ, ಕಟ್ಟಡದ ಶೃಂಗಭಾಗವು ಇನ್ನಷ್ಟು ಸಣ್ಣದಾಗಿರುವಂತೆ ಸ್ಮಿತ್‌ ಮಾಡಿದ ವಿನ್ಯಾಸಕ್ಕೆ ಸೂಕ್ತವಾಗಿ ಹೊಂದಿಕೊಂಡಂತಾಯಿತು.[೩೩]

ವಿಳಂಬ

ಮೇಲ್ದರ್ಜೆಗೆ ಏರಿಸುವ ಕಾರ್ಯಗಳು ನಡೆಯುತ್ತಿದ್ದ ಕಾರಣ, ಬುರ್ಜ್‌ ಖಲೀಫಾ ಕಟ್ಟಡದ ನಿರ್ಮಾಣವು ವಿಳಂಬವಾಗಿದ್ದು, 2009ರ ಸೆಪ್ಟೆಂಬರ್‌ ತಿಂಗಳಲ್ಲಿ ಸಂಪೂರ್ಣಗೊಳ್ಳುವುದೆಂದು ಆಗ ಎಮ್ಮಾರ್‌ ಪ್ರಾಪರ್ಟೀಸ್‌ 2008ರ ಜೂನ್‌ 9ರಂದು ಘೋಷಿಸಿತು.[೩೪] ಎಮ್ಮಾರ್‌ ವಕ್ತಾರರೊಬ್ಬರು ಹೇಳಿದ ಪ್ರಕಾರ, '2004ರಲ್ಲಿ ಕಟ್ಟಡವನ್ನು ಆರಂಭಿಕ ಹಂತದಲ್ಲಿ ಪರಿಕಲ್ಪಿಸಿದಾಗ ನಿರ್ಧರಿಸಲಾದ ಸುವಿಹಾರಿ ವಿನ್ಯಾಸಗಳ ಬದಲಿಗೆ ಮೇಲ್ದರ್ಜೆಯ ಒಪ್ಪ-ಓರಣ ಕಾರ್ಯ ನಡೆಸಲಾಗಿದೆ. ಅಲಂಕಾರಿಕ ಕಲಾದೃಷ್ಟಿ ಮೂಲಕ ಇನ್ನಷ್ಟು ಆಕರ್ಷಕಗೊಳಿಸಲು ಹಾಗೂ ಕ್ರಿಯಾತ್ಮಕವಾಗಿ ಇನ್ನಷ್ಟು ಉತ್ತಮವಾಗಿರಿಸಲು, ವಾಸದ ಮಹಡಿಗಳ ವಿನ್ಯಾಸವನ್ನು ಇನ್ನಷ್ಟು ಆಧುನೀಕರಿಸಲಾಗಿದೆ.' [೩೫] ನಂತರ, ಕಟ್ಟಡ ಸಂಪೂರ್ಣಗೊಳಿಸುವಿಕೆಯ ಪರಿಷ್ಕೃತ ದಿನಾಂಕ 2 ಡಿಸೆಂಬರ 2009 ಎಂದು ಘೋಷಿಸಲಾಯಿತು.[೩೬] ಆದರೂ, ಬುರ್ಜ್‌ ಖಲೀಫಾ ಕಟ್ಟಡವನ್ನು 2010ರ ಜನವರಿ 4ರಂದು ವೀಕ್ಷಣೆಗೆ ಮುಕ್ತಗೊಳಿಸಲಾಯಿತು.[೧][೮]

ವಾಸ್ತುಶಿಲ್ಪ ಮತ್ತು ವಿನ್ಯಾಸ

ಅಡ್ಡ-ಕುಯ್ತದ ಹೋಲಿಕೆಗಳು
ಮೂರು ಹಾಲೆಗಳ ವಿನ್ಯಾಸದ ನಮೂನೆಗಾಗಿ ಆರು ಆರೆಗಳುಳ್ಳ ಹೈಮೆನೊಕಾಲಿಸ್‌ ಹೂವು.

ಈ ಕಟ್ಟಡವನ್ನು ಸ್ಕಿಡ್ಮೋರ್‌, ಒವಿಂಗ್ಸ್‌ ಅಂಡ್‌ ಮೆರಿಲ್‌ ವಿನ್ಯಾಸ ಸಂಸ್ಥೆಯು ವಿನ್ಯಾಸಗೊಳಿಸಿದೆ. ಇದಲ್ಲದೆ, ಈ ಸಂಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಶಿಕ್ಯಾಗೊ ನಗರದಲ್ಲಿರುವ ವಿಲ್ಲಿಸ್‌ ಟವರ್ (ಮುಂಚೆ ಸಿಯರ್ಸ್‌ ಟವರ್‌) ಹಾಗೂ ನ್ಯೂಯಾರ್ಕ್‌ ನಗರದಲ್ಲಿ ಹೊಸದಾದ ಒನ್‌ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡವನ್ನೂ ವಿನ್ಯಾಸಗೊಳಿಸಿದೆ. ವಿಲ್ಲಿಸ್‌ ಟವರ್‌ನಂತೆಯೇ, ಈ ಕಟ್ಟಡ ಸಹ ಟೊಳ್ಳಾದ ಒಟ್ಟಿಗೆ ಕಟ್ಟಿಹಾಕಲಾದ ನಾಳಸಮೂಹದಂತೆ ಕಾಣುತ್ತದೆ, ಆದರೆ ಬಂಧಿಸಲ್ಪಟ್ಟ ರಚನಾ ಕೊಳವೆಗಳಂತಿಲ್ಲ. ಇದರ ವಿನ್ಯಾಸವು, ಶಿಕ್ಯಾಗೊ ನಗರದಲ್ಲಿರುವ ಒಂದು ಮೈಲ್‌ ಎತ್ತರದ ದಿ ಇಲಿನಾಯ್‌ ಎಂಬ ಗಗನಚುಂಬಿ ಕಟ್ಟಡ ನಿರ್ಮಾಣಕ್ಕಾಗಿ ಫ್ರ್ಯಾಂಕ್ ಲಾಯ್ಡ್‌ ರೈಟ್‌‌ಅವರು ಮಾಡಿದ ದೃಷ್ಟಿಕೋನವನ್ನು ನೆನಪು ಮಾಡುತ್ತದೆ. ಕಟ್ಟಡದ ವಿನ್ಯಾಸ ತಂಡದ ಸದಸ್ಯ, ಎಸ್‌ಒಎಮ್‌ ವಾಸ್ತುಶಿಲ್ಪಿ ಮಾರ್ಷಲ್‌ ಸ್ಟ್ರಬಲಾ ಹೇಳಿದಂತೆ, ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ, 73 ಅಂತಸ್ತುಗಳುಳ್ಳ, ಟವರ್‌ ಪ್ಯಾಲೇಸ್‌ ಥ್ರೀ ಎಂಬ ಸಂಪೂರ್ಣ ಗೃಹವಾಸಿ ಕಟ್ಟಡದ ವಿನ್ಯಾಸವನ್ನು ಆಧರಿಸಿ, ಬುರ್ಜ್‌ ಖಲೀಫಾ ಕಟ್ಟಡವನ್ನು ವಿನ್ಯಾಸ ಮಾಡಲಾಯಿತು. ಯೋಜನೆಯ ಆರಂಭಿಕ ಹಂತದಲ್ಲಿ, ಬುರ್ಜ್‌ ಖಲೀಫಾ ಸಂಪೂರ್ಣವಾಗಿ ಗೃಹವಾಸಿ(ವಸತಿ) ಕಟ್ಟಡ ಮಾಡಬೇಕೆಂದು ಎಂದು ಯೋಜಿಸಲಾಗಿತ್ತು.[೩೨]

ಸ್ಕಿಡ್ಮೋರ್‌, ಒವಿಂಗ್ಸ್‌ ಅಂಡ್‌ ಮೆರಿಲ್‌ ಸಂಸ್ಥೆ ರಚಿಸಿದ ಮೂಲತಃ ವಿನ್ಯಾಸದ ನಂತರ, ಎಮ್ಮಾರ್‌ ಪ್ರಾಪರ್ಟೀಸ್‌ ಉದ್ದಿಮೆಯು ಹೈದರ್‌ ಕನ್ಸಲ್ಟಿಂಗ್‌ ಸಂಸ್ಥೆಯನ್ನು ಉಸ್ತುವಾರಿ ಎಂಜಿನಿಯರ್‌ ಆಗಿ ಆಯ್ಕೆ ಮಾಡಿಕೊಂಡಿತು.[೩೭] ರಾಚನಿಕ ಮತ್ತು ಎಂಇಪಿ (ಯಾಂತ್ರಿಕ, ವಿದ್ಯುತ್‌ ಮತ್ತು ನೀರು ಸರಬರಾಜು ವ್ಯವಸ್ಥೆ) ಇಂಜಿನಿಯರಿಂಗ್ ಪರಿಣತಿ ಹೊಂದಿದ್ದ ಕಾರಣ ಹೈದರ್‌ ಸಂಸ್ಥೆಯನ್ನು ನೇಮಿಸಿಕೊಳ್ಳಲಾಯಿತು.[೩೮] ಕಟ್ಟಡ ನಿರ್ಮಾಣದ ಮೇಲ್ವಿಚಾರಣೆ, ಎಸ್‌ಒಎಮ್‌ ವಿನ್ಯಾಸಗಳ ಪ್ರಮಾಣೀಕರಣ ಹಾಗೂ ಯುಎಇ ಪ್ರಾಧಿಕಾರಕ್ಕಾಗಿ ಅಧಿಕೃತ ವಾಸ್ತುಶಿಲ್ಪಿ ಹಾಗೂ ಇಂಜಿನಿಯರ್‌ ಕಾರ್ಯ ನಿರ್ವಹಣೆ ಮಾಡುವುದು ಹೈದರ್ ಕನ್ಸಲ್ಟಿಂಗ್‌ ಸಂಸ್ಥೆಯ ಪಾತ್ರವಾಗಿತ್ತು.[೩೭] ಕಾಂಕ್ರೀಟ್‌ ಮತ್ತು ಉಕ್ಕಿನ ಕೆಲಸಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಜಿಎಚ್‌ಡಿ,[೩೯] ಎಂಬ ಅಂತರರಾಷ್ಟ್ರೀಯ ಬಹುಕ್ಷೇತ್ರೀಯ ಸಲಹಾ ಸಂಸ್ಥೆಯನ್ನು ಎಮ್ಮಾರ್‌ ಪ್ರಾಪರ್ಟೀಸ್‌ ನೇಮಿಸಿಕೊಂಡಿತು.

ಇಸ್ಲಾಮಿಕ್‌ ವಾಸ್ತುಶೈಲಿ ಹೊಂದಿರುವ ವಿನ್ಯಾಸ ವ್ಯವಸ್ಥೆಗಳಿಂದ ಬುರ್ಜ್‌ ಖಲೀಫಾ ಕಟ್ಟಡದ ವಿನ್ಯಾಸವನ್ನು ಪಡೆದುಕೊಳ್ಳಲಾಗಿದೆ.[೨೧] ರಾಚನಿಕ ಇಂಜಿನಿಯರ್ ಎಸ್‌ಒಎಮ್‌ನ ಬಿಲ್‌ ಬೇಕರ್‌‌ ಅವರ ಪ್ರಕಾರ, ಈ ಕಟ್ಟಡದ ವಿನ್ಯಾಸವು, ಆ ಪ್ರದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡಿದೆ. Y-ಅಕಾರದ ಯೋಜನೆಯು ಗೃಹವಸತಿ ಮತ್ತು ಹೋಟಲ್‌ ವಾಸಕ್ಕಾಗಿ ಸೂಕ್ತವಾಗಿದೆ. ಈ ಕಟ್ಟಡದ ಕೆಲವು ಅಂಶಗಳು, ಸುಂದರ ಬಾಹ್ಯನೋಟಕ್ಕಾಗಿ ಹಾಗೂ ನೈಸರ್ಗಿಕ ಬೆಳಕಿಗೂ ಅವಕಾಶ ನೀಡುತ್ತವೆ.[೨೧] ಕಟ್ಟಡದ ಪಾದಭಾಗದಲ್ಲಿ ಮುಪ್ಪಟ್ಟು ಹಾಲೆಗಳು ಹೈಮೆನೊಕ್ಯಾಲಿಸ್‌ ಹೂವಿನ ರಚನೆಯನ್ನು ಆಧರಿಸಿತ್ತು ಎಂದು ವಿನ್ಯಾಸದ ವಾಸ್ತುಶಿಲ್ಪಿ ಅಡ್ರಿಯನ್‌ ಸ್ಮಿತ್‌ ಹೇಳಿದ್ದಾರೆ.[೪೦]


ಅಗ್ರ ಭಾಗದ ಮಧ್ಯದ ತಿರುಳಿನ ಸುತ್ತಲೂ ಜೋಡಿಸಲಾಗಿರುವ ಮೂರು ಅಂಶಗಳನ್ನು ಸೇರಿಸಿ ಈ ಕಟ್ಟಡ ನಿರ್ಮಿಸಲಾಗಿದೆ.  ಸಮತಟ್ಟಾದ ಮರುಭೂಮಿ ನೆಲದಿಂದ ಕಟ್ಟಡವು ಒಡಮೂಡುವಾಗ, ಮೇಲ್ಗಡೆ ಸಾಗುವ ಸುರುಳಿಯ ವಿನ್ಯಾಸದಲ್ಲಿ ಪ್ರತಿಯೊಂದು ಅಂಶದಲ್ಲೂ, ಕಟ್ಟಬಹುದಾಗಿದ್ದ ಜಾಗಕ್ಕಿಂತಲೂ ಹಿಂದಕ್ಕೆ ಕಟ್ಟಲಾಗುತ್ತದೆ. ಈ ಕಟ್ಟಡವು ಆಕಾಶದತ್ತ ಏರುತ್ತಿದ್ದಂತೆ ಅದರ ಅಡ್ಡಲಾದ ವಿಭಾಗದ ವಿಸ್ತೀರ್ಣ ಕಡಿಮೆಯಾಗುತ್ತದೆ.  ಬುರ್ಜ್‌ ಖಲೀಫಾದಲ್ಲಿ 27 ತಾರಸಿಗಳಿವೆ.  ಕಟ್ಟಡದ ತುತ್ತತುದಿಯಲ್ಲಿ ಕೇಂದ್ರ ತಿರುಳು ಹೊರಹೊಮ್ಮಿ, ಮೊನೆಯಾಕಾರದಲ್ಲಿ ಅಂತ್ಯಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.  Y-ಅಕಾರದ ನೆಲ ವಿನ್ಯಾಸವು ಪರ್ಷಿಯನ್‌ ಕೊಲ್ಲಿಯ ನೋಟವನ್ನು ಗರಿಷ್ಠಗೊಳಿಸುತ್ತದೆ.  ಮೇಲಿನಿಂದ ಅಥವಾ ಅಡಿಯಿಂದ ವೀಕ್ಷಿಸಿದಲ್ಲಿ, ಈ ಆಕಾರವು ಇಸ್ಲಾಮಿಕ್ ವಾಸ್ತುಶೈಲಿಯ ಈರುಳ್ಳಿಯಂತೆ ಕಾಣುವ ಗುಮ್ಮಟಗಳಂತೆ ಕಾಣುತ್ತದೆ.  ವಿನ್ಯಾಸ ಪ್ರಕ್ರಿಯೆಯಲ್ಲಿ, ಬೀಸುವ ಗಾಳಿಯಿಂದ ಉಂಟಾಗುವ ಒತ್ತಡ ಕಡಿಮೆಗೊಳಿಸಲು, ಇಂಜಿನಿಯರ್‌ಗಳು ಕಟ್ಟಡವನ್ನು ಅದರ ಮೂಲ ಸ್ಥಾನದಿಂದ 120 ಡಿಗ್ರಿಗಳಷ್ಟು ಸುತ್ತುವರೆಯುವಂತೆ ತಿರುಗಿಸಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]  ಅದರ ಅತ್ಯೆತ್ತರದ ಸ್ಥಳದಲ್ಲಿ ವಿನ್ಯಾಸಗೊಳಿಸಿದ ಕಟ್ಟಡವು ಒಟ್ಟು 1.5 m (4.9 ft)ರಷ್ಟು ತೂಗಾಡುತ್ತದೆ.[೪೧]

ಕಟ್ಟಡದ ಅಭೂತಪೂರ್ವ ಎತ್ತರದ ಕಾರಣ ಅದಕ್ಕೆ ಆಧಾರ ಬೆಂಬಲ ನೀಡಲು, ಇಂಜಿನಿಯರ್‌ಗಳು 'ಆಧಾರ ತಿರುಳು' ಎನ್ನಲಾದ ಹೊಸ ರಾಚನಿಕ ವ್ಯವಸ್ಥೆ ವಿನ್ಯಾಸ ಮಾಡಿದರು. ಇದು Y ಆಕಾರದಲ್ಲಿರುವ ಮೂರು ಆಧಾರಗಳೊಂದಿಗೆ ಬಲಪಡಿಸಲಾದ ಷಡ್ಭುಜಾಕಾರದ ಅಂಶವನ್ನು ಹೊಂದಿದೆ. ಈ ರಾಚನಿಕ ವ್ಯವಸ್ಥೆಯು ಕಟ್ಟಡಕ್ಕೆ ಬದಿಭಾಗದ ಆಸರೆ ನೀಡಿ, ಕಟ್ಟಡವು ತಿರುಚುವುದನ್ನು ತಡೆಗಟ್ಟುತ್ತದೆ.[೨೧]

ಬುರ್ಜ್‌ ಖಲೀಫಾದ ಶಿಖರದ ಮೊನಚು ಭಾಗವು ಸುಮಾರು 4,000 tonnes (4,400 short tons; 3,900 long tons)ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಾಚನಿಕ ಉಕ್ಕು ಹೊಂದಿದೆ. 350 tonnes (390 short tons; 340 long tons) ತೂಕವಿರುವ, ಮಧ್ಯದ ತುತ್ತತುದಿಯ ಕೊಳವೆಯನ್ನು ಕಟ್ಟಡದ ಒಳಭಾಗದಿಂದ ನಿರ್ಮಿಸಲಾಗಿದ್ದು, ತಂತು ಆಧಾರ ವ್ಯವಸ್ಥೆ ಬಳಸಿ, 200 m (660 ft) ಕ್ಕೂ ಮೀರಿದ ತನ್ನ ಪೂರ್ಣಪ್ರಮಾಣದ ಎತ್ತರಕ್ಕೆ ವಿಸ್ತರಿಸಲಾಗಿದೆ. ಈ ಮೊನೆಯು ಸಂಪರ್ಕ-ಸಂವಹನಾ ವ್ಯವಸ್ಥೆ ಹೊಂದಿದೆ.[೪೨]

ಬುರ್ಜ್‌ ಖಲೀಫಾ ಕಟ್ಟಡದ ಒಳಭಾಗಗಳಲ್ಲಿ ಸುಮಾರು 1,000ಕ್ಕೂ ಹೆಚ್ಚು ಕಲಾಕೃತಿಗಳನ್ನು ಜೋಡಿಸಲಾಗುವುದು. ಕಟ್ಟಡದ ಗೃಹವಸತಿಯ ಮುಂಗೋಣೆಯಲ್ಲಿ ಜಾಮ್‌ ಪ್ಲೆನ್ಸಾರ ಕಲಾಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ 196 ಕಂಚಿನ ಮತ್ತು ಹಿತ್ತಾಳೆಯ ಮಿಶ್ರಲೋಹದ ಝಲ್ಲರಿಗಳಿವೆ. ಇವು ವಿಶ್ವದ 196 ದೇಶಗಳನ್ನು ನಿರೂಪಿಸುತ್ತವೆ.[೪೩] 18-ಕ್ಯಾರಟ್‌ ಚಿನ್ನದ ಲೇಪನ ಹೊಂದಿದ ಝಲ್ಲರಿಗಳ ಮೇಲೆ ತೊಟ್ಟಿಕ್ಕುವ ನೀರು ಬಿದ್ದಾಗ, ನೀರು ಎಲೆಗಳ ಮೆಲೆ ಬೀಳುವ ಸದ್ದಿನ ಅನುಕರಣೆಯನ್ನು ಮುಂಗೋಣೆಯಲ್ಲಿನ ಸಂದರ್ಶಕರು ಆಲಿಸಬಹುದಾಗಿದೆ.[೪೪]

ಬುರ್ಜ್‌ ಖಲೀಫಾದ ಹೊರ ಹೊದಿಕೆಯು 142,000 m2 (1,528,000 sq ft)ರಷ್ಟು ಪ್ರತಿಫಲನದ ಗಾಜಿನ ಕಿಟಕಿಗಳು, ಲಂಬವಾದ ಕೊಳವೆಯಾಕಾರದ ಮುಂದೆ ಚಾಚಿದ ಭಾಗಗಳುಳ್ಳ ಅಲ್ಯೂಮಿನಿಯಮ್‌ ಹಾಗೂ ನಿರ್ದಿಷ್ಟ ಸ್ಪರ್ಶವುಳ್ಳ ಕ್ರೊಮಿಯಮ್‌ ಮಿಶ್ರಿತ ಉಕ್ಕಿನ ಕಮಾನುಗಳ ಮೇಲೆ ಮುಮ್ಮೂಲೆಗಟ್ಟು ಅಂಕಣಗಳನ್ನು ಹೊಂದಿದೆ. ದುಬೈ ನಗರದ ಅತ್ಯಧಿಕ ಉಷ್ಣಾಂಶವನ್ನು ತಡೆದುಕೊಳ್ಳುವಂತೆ ಕಟ್ಟಡದ ಹೊದಿಕೆಯ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನೂ ಹೆಚ್ಚಿಗೆ, ಕಟ್ಟಡದ ತುತ್ತತುದಿಯಲ್ಲಿ ಹೊರಾಂಗಣ ಉಷ್ಣಾಂಶವು, ತನ್ನ ಅಡಿಭಾಗಕ್ಕಿಂತಲೂ ಸುಮಾರು 6 °C (11 °F) ತಂಪಾಗಿರುತ್ತದೆ.[೪೫] ಬುರ್ಜ್‌ ಖಲೀಫಾ ಕಟ್ಟಡದ ಹೊರಹೊದಿಕೆಗಾಗಿ 26,000ಕ್ಕಿಂತಲೂ ಹೆಚ್ಚು ಗಾಜಿನ ಪಂಕ್ತಿಗಳನ್ನು ಬಳಸಲಾಗಿತ್ತು. ಗೋಪುರದ ಮೇಲೆ ಹೊದಿಕೆಯ ಕೆಲಸಕ್ಕಾಗಿ ಚೀನಾದಿಂದ ಸುಮಾರು 300ಕ್ಕೂ ಹೆಚ್ಚು ವಿಶೇಷ ತಜ್ಞರನ್ನು ಕರೆತರಲಾಯಿತು.[೪೨]

304 ಕೋಣೆಗಳುಳ್ಳ ಅರ್ಮಾನಿ ಹೋಟೆಲ್‌ (ನಾಲ್ಕು ಅರ್ಮಾನಿ ಹೋಟೆಲ್‌ಗಳಲ್ಲಿ ಇದು ಮೊದಲನೆಯದು) ಕೆಳಗಿನ 39 ಅಂತಸ್ತುಗಳಲ್ಲಿ 15 ಅಂತಸ್ತುಗಳನ್ನು ಆವರಿಸಿದೆ.[೩][೪೬] ಈ ಹೋಟೆಲ್‌ 2010ರ ಮಾರ್ಚ್‌ 18ರಂದು ಆರಂಭವಾಗಬೇಕಿತ್ತು.[೪೭][೪೮] ಆದರೆ ಹಲವು ವಿಳಂಬಗಳ ನಂತರ ಅಂತಿಮವಾಗಿ ಈ ಹೋಟೆಲ್ ಸಾರ್ವಜನಿಕರಿಗಾಗಿ 2010ರ ಏಪ್ರಿಲ್‌ 20ರಂದು ತೆರೆಯಿತು.[೪೯]‌ ಸಾಂಸ್ಥಿಕ ಕೋಣೆಗಳು ಮತ್ತು ಕಾರ್ಯಾಲಯಗಳು ಸಹ ಮಾರ್ಚ್‌ ತಿಂಗಳಲ್ಲಿಯೇ ತೆರೆಯಬೇಕಿತ್ತು.[೫೦] ಆದರೆ ಈ ಕಟ್ಟಡದಲ್ಲಿ ಸದ್ಯಕ್ಕೆ ತೆರೆದಿರುವುದು ಕೇವಲ ಹೋಟೆಲ್‌ ಮತ್ತು ಪರಿವೀಕ್ಷಣಾ ವೇದಿಕೆ ಮಾತ್ರ.

43ನೆಯ ಮತ್ತು 76ನೆಯ ಅಂತಸ್ತುಗಳಲ್ಲಿರುವ ಆಕಾಶ ಮುಂಗೋಣೆಗಳಲ್ಲಿ ಈಜುಕೊಳಗಳಿರುತ್ತವೆ.[೫೧] 108ನೆಯ ಅಂತಸ್ತಿನ ವರೆಗೆ 900 ಖಾಸಗಿ ಗೃಹವಾಸಿ ವಸತಿ ಮಹಡಿಗಳಿರುತ್ತವೆ. ಕಟ್ಟಡದ ನಿರ್ಮಾತೃಗಳ ಪ್ರಕಾರ, ಮಾರುಕಟ್ಟೆಗೆ ಬಂದ ಎಂಟು ಗಂಟೆಗಳೊಳಗೆ ಇವೆಲ್ಲವುಗಳೂ ಸಂಪೂರ್ಣವಾಗಿ ಮಾರಾಟವಾಗಿದ್ದವು. ಹೊರಾಂಗಣದ ಆರಂಭಿಕ-ಪ್ರವೇಶಾವಕಾಶದ ಈಜುಕೊಳವು ಗೋಪುರದ 76ನೆಯ ಅಂತಸ್ತಿನಲ್ಲಿರುತ್ತದೆ. ಸಾಂಸ್ಥಿಕ ಕಾರ್ಯಾಲಯಗಳು ಮತ್ತು ಕೋಣೆಗಳು ಉಳಿದ ಅಂತಸ್ತುಗಳಲ್ಲಿ ಬಹಳಷ್ಟನ್ನು ಆವರಿಸಿವೆ. ಆದರೆ, 122, 123ನೆಯ ಹಾಗೂ 124ನೆಯ ಅಂತಸ್ತುಗಳಲ್ಲಿ ಕ್ರಮವಾಗಿ ಅಟ್ಮಾಸ್ಫಿಯರ್ ‌ ಉಪಾಹಾರ ಕೇಂದ್ರ, ಗಗನ ಮುಂಗೋಣೆ ಮತ್ತು ಒಳಾಂಗಣ ಹಾಗೂ ಹೊರಾಂಗಣ ಪರಿವೀಕ್ಷಣಾ ಜಗಲಿಗಳಿವೆ. ಬುರ್ಜ್‌ ಖಲೀಫಾ ತನ್ನ ಮೊಟ್ಟಮೊದಲ ರಹವಾಸಿಗಳನ್ನು 2010ರ ಫೆಬ್ರವರಿ ತಿಂಗಳಲ್ಲಿ ಸ್ವಾಗತಿಸಿತು. ಸದ್ಯ ಅಲ್ಲಿ ವಾಸಿಸುವ 25,000 ಮಂದಿ ಜನರಲ್ಲಿ ಈ ಗುಂಪು ಮೊದಲ ಗುಂಪಾಗಿರುತ್ತದೆ.[೫೧][೫೨]

ಬುರ್ಜ್‌ ಖಲೀಫಾ ಕಟ್ಟಡವು ಒಂದು ಹೊತ್ತಿಗೆ ಸುಮಾರು 35,000 ಜನರಿಗೆ ಸ್ಥಳಾವಕಾಶ ಮಾಡಿಕೊಡುವ ಸಾಮರ್ಥ್ಯ ಪಡೆದಿದೆ.[೨೧][೫೩] ಒಟ್ಟಾರೆ 57 ಲಿಫ್ಟ್‌ಗಳು ಹಾಗೂ 8 ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ.[೪೨] ಈ ಲಿಫ್ಟ್‌ಗಳು ಸುಮಾರು 12ರಿಂದ 14 ಜನರನ್ನು ಮೊದಲ ಬಾರಿಗೆ ಒಯ್ಯಬಹುದು. 18 m/s (59 ft/s)ವರೆಗೂ ಅತಿವೇಗವಾಗಿ ಮೇಲೇರಲೂಬಹುದು ಹಾಗೂ ಕೆಳಗಿಳಿಯಬಹುದು.[೨೧][೫೪] ಇಂಜಿನಿಯರ್‌ಗಳು ವಿಶ್ವದಲ್ಲಿಯೇ ಮೊಟ್ಟಮೊದಲ ಮೂರು ಪಂಕ್ತಿಗಳ ಲಿಫ್ಟ್‌ಗಳನ್ನು ಅಳವಡಿಸುವ ಯೋಜನೆ ಹೊಂದಿದ್ದರು; ಆದರೆ ಅಂತಿಮ ವಿನ್ಯಾಸದ ಪ್ರಕಾರ ಎರಡು ಪಂಕ್ತಿಗಳ ಲಿಫ್ಟ್‌ಗಳನ್ನು ಮಾತ್ರ ಅಳವಡಿಸಲಾಯಿತು.[೨೪] ಎರಡು ಪಂಕ್ತಿಗಳ ಲಿಫ್ಟ್‌ಗಳು ಎಲ್‌ಸಿಡಿ ಪರದೆಗಳಂತಹ ಮನರಂಜನಾತ್ಮಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿವೆ. ಪರಿವೀಕ್ಷಣಾ ವೇದಿಕೆಗೆ ಸಾಗಿ ಹೋಗುತ್ತಿರುವ ಸಂದರ್ಶಕರು ಈ ಪರದೆಗಳನ್ನು ವೀಕ್ಷಿಸಬಹುದು.[೫೫] ಕಟ್ಟಡದಲ್ಲಿ ನೆಲ ಮಾಳಿಗೆಯಿಂದ 160ನೆಯ ಅಂತಸ್ತಿನ ವರೆಗೆ 2,909 ಮೆಟ್ಟಿಲುಗಳಿವೆ.[೫೬]

ದುಬೈ ಮೂಲದ ಬ್ರ್ಯಾಷ್‌ ಬ್ರ್ಯಾಂಡ್ಸ್,‌ ಬುರ್ಜ್‌ ಖಲೀಫಾದ ರೇಖಾಚಿತ್ರಕದ ವಿನ್ಯಾಸವನ್ನು ಗುರುತಿನ ಕಾರ್ಯ ನಡೆಸುತ್ತದೆ. ಬುರ್ಜ್‌ ಖಲೀಫಾ ಕಟ್ಟಡಕ್ಕಾಗಿ ನಡೆಸಲಾದ ಪ್ರೊತ್ಸಾಹಕರ ಕಾರ್ಯಕ್ರಮಗಳ ವಿನ್ಯಾಸವನ್ನೂ ಸಹ ಬ್ರ್ಯಾಷ್‌ ಬ್ರ್ಯಾಂಡ್ಸ್‌ ಕೈಗೊಂಡಿದೆ. ಜಾಗತಿಕ ಮಟ್ಟದ ಸಮಾರಂಭಗಳು, ಸಂವಹನಗಳು, ಸಂದರ್ಶಕರ ಕೇಂದ್ರಗಳು,[೫೭] ಜೊತೆಗೆ ಬುರ್ಜ್‌ ಖಲೀಫಾ ಕಟ್ಟಡದಲ್ಲಿರುವ ಅರ್ಮಾನಿ ಹೋಟೆಲ್‌ನ ವಿಭಾಗ ಅರ್ಮಾನಿ ರೆಸಿಡೆನ್ಸಸ್‌ಗಾಗಿ ಹೊರಾಂಗಣದಲ್ಲಿನ ಪ್ರೊತ್ಸಾಹಕರ ಪ್ರದರ್ಶನಾ ಕಾರ್ಯಕ್ರಮಗಳನ್ನು ಮಿಲಾನ್‌, ಲಂಡನ್‌, ಜೆಡ್ಡಾ, ಮಾಸ್ಕೊ ಮತ್ತು ದಿಲ್ಲಿ ನಗರಗಳಲ್ಲಿ ನಡೆಸಲಾಯಿತು. ‌[೫೮]

ನೀರು ಸರಬರಾಜು ವ್ಯವಸ್ಥೆ

ಬುರ್ಜ್‌ ಖಲೀಫಾದ ನೀರು ಸರಬರಾಜು ವ್ಯವಸ್ಥೆಯ ಮೂಲಕ ಪ್ರತಿದಿನವೂ ಸರಾಸರಿ 946,000 L (250,000 US gal) ರಷ್ಟು ನೀರು ಪೂರೈಸುತ್ತದೆ.[೨೧]

ಶೈತ್ಯೀಕರಣ ಪ್ರಕ್ರಿಯೆ ಹೆಚ್ಚಾದ ಸಮಯಗಳಲ್ಲಿ, ಒಂದು ದಿನಕ್ಕೆ 10,000 t (22,000,000 lb)ರಷ್ಟು ಕರಗುವ ಇಬ್ಬನಿ ನೀಡುವ ತಂಪಿಗೆ ಸಮನಾದ ಶೈತ್ಯೀಕರಣದ ವ್ಯವಸ್ಥೆಯು ಈ ಕಟ್ಟಡಕ್ಕೆ ಅಗತ್ಯವಿದೆ. ಕಟ್ಟಡದಲ್ಲಿ, ಶೈತ್ಯೀಕರಣದ ಆವಶ್ಯಗಳೊಂದಿಗೆ ಹೆಚ್ಚಿನ ಉಷ್ಣ ಮತ್ತು ಆರ್ದ್ರತೆಯುಳ್ಳ ಬಾಹ್ಯ ಹವೆಯನ್ನು ಬಳಸುವ ಘನೀಕೃತ ವಸ್ತು ಸಂಗ್ರಹಣಾ ವ್ಯವಸ್ಥೆಯಿದೆ. ಇದರಿಂದಾಗಿ ಗಾಳಿಯಿಂದ ತೇವಾಂಶವು ಗಮನಾರ್ಹ ಪ್ರಮಾಣದಲ್ಲಿ ದೃವೀಕರಣಗೊಳ್ಳುವುದು. ಈ ಸಾಂದ್ರೀಕೃತ ನೀರನ್ನು ಸಂಗ್ರಹಿಸಿ, ಕಟ್ಟಡದಡಿಯಲ್ಲಿ ಕಾರ್‌ ನಿಲುಗಡೆಯಲ್ಲಿರುವ ಶೇಖರಣೆಯಲ್ಲಿ ಹರಿಬಿಡಲಾಗುವುದು. ಈ ನೀರನ್ನು ಪುನಃ ನೀರಾವರಿ ವ್ಯವಸ್ಥೆಗೆ ಪೂರೈಸಿ ಬುರ್ಜ್‌ ಖಲೀಫಾ ಉದ್ಯಾನದಲ್ಲಿ ಬಳಸಲು ಏರ್ಪಾಟು ಮಾಡಲಾಗುತ್ತದೆ.[೨೧]

ನಿರ್ವಹಣೆ

ಕಟ್ಟಡದ ಎಲ್ಲಾ 24,348 ಕಿಟಕಿಗಳನ್ನು ತೊಳೆಯಲು, ಬುರ್ಜ್‌ ಖಲೀಫಾ ಕಟ್ಟಡದ ಹೊರಭಾಗದಲ್ಲಿ 40, 73 ಹಾಗೂ 109ನೆಯ ಅಂತಸ್ತುಗಳಲ್ಲಿ ವಿಭಾಗಗೊಳಿಸಲಾದ ಜಲಸಂಪರ್ಕಪಥವನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪಥದಲ್ಲೂ ಒಂದು ನೀರು ಸಾಗಿಸುವ ಮೊಗೆಬಟ್ಟಲಿನ, 1,500 kg (3,300 lb) ಬಕೆಟ್‌ ಯಂತ್ರವಿರುತ್ತದೆ. ಭಾರೀ ತಂತಿಗಳ ಸಹಾಯದಿಂದ ಈ ಯಂತ್ರವು ಅಡ್ಡಲಾಗಿ ಹಾಗೂ ಉದ್ದುದ್ದಕ್ಕೆ ಚಲಿಸುತ್ತದೆ. 109ನೆಯ ಅಂತಸ್ತಿಗಿಂತಲೂ ಮೇಲಕ್ಕೆ, 27ನೆಯ ಪಂಕ್ತಿಯ ತನಕ ದೋಣಿಗಳಿಂದ ಸಾಂಪ್ರದಾಯಿಕ ತೊಟ್ಟಿಲುಗಳನ್ನು ಬಳಸಲಾಗುತ್ತದೆ. ಆದರೆ, ಶೃಂಗದ ತುತ್ತತುದಿಯನ್ನು ಕೇವಲ ಪರಿಣತರಾಗಿರುವ ಕಿಟಕಿ ಸ್ವಚ್ಛಗೊಳಿಸುವವರಿಗೆ ಕುಶಲ ಕೆಲಸಗಾರರಿಗೆ ಮಾತ್ರ ವಹಿಸಲಾಗುತ್ತದೆ. ಏಕೆಂದರೆ ಅವರು ಅಷ್ಟು ಎತ್ತರ ಮತ್ತು ವೇಗದ ಗಾಳಿಯನ್ನು ಸಹಿಸಿಕೊಂಡು, ಕಟ್ಟಿದ ಹಗ್ಗಗಳಿಂದ ಓಲಾಡಿಕೊಂಡು ತುದಿ ಭಾಗವನ್ನು ಸ್ವಚ್ಛಗೊಳಿಸಲು ಸಮರ್ಥರಾಗಿರುವರು.[೫೯] ಸಾಮಾನ್ಯ ಸ್ಥಿತಿಗಳಲ್ಲಿ ಕಟ್ಟಡದ ಎಲ್ಲಾ ರೀತಿಯ ದುರಸ್ತಿ ಕೆಲಸವೂ ನಡೆಯುತ್ತಿರುವಾಗ, 36 ಕಾರ್ಮಿಕರು ಕಟ್ಟಡದ ಇಡೀ ಬಾಹ್ಯಭಾಗವನ್ನು ಸ್ಚಚ್ಛಗೊಳಿಸಲು ಸುಮಾರು ಮೂರರಿಂದ ನಾಲ್ಕು ತಿಂಗಳು ಸಮಯ ತೆಗೆದುಕೊಳ್ಳುವರು.[೪೨][೬೦]

ಮಾನವ ನಿಯಂತ್ರಿತವಲ್ಲದ ಯಂತ್ರಗಳು ಮೇಲಿನ 27 ಹೆಚ್ಚುವರಿ ಪಂಕ್ತಿಗಳು ಹಾಗೂ ಗಾಜಿನ ಶೃಂಗವನ್ನು ಸ್ವಚ್ಛಗೊಳಿಸುತ್ತವೆ. ಸ್ವಚ್ಛಗೊಳಿಸುವ ಈ ವ್ಯವಸ್ಥೆಯನ್ನು ಆಸ್ಟ್ರೇಲಿಯಾ ದೇಶದ ಮೆಲ್ಬೊರ್ನ್‌ನಲ್ಲಿ, ಎಂಟು ದಶಲಕ್ಷ (A$8 ಮಿಲಿಯನ್)ಆಸ್ಟ್ರೇಲಿಯನ್‌ ಡಾಲರ್‌ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಯಿತು.[೬೦]

ವೈಶಿಷ್ಟ್ಯಗಳು

ದುಬೈ ಕಾರಂಜಿ

ಕಟ್ಡಡದ ಹೊರಗೆ, 800 ದಶಲಕ್ಷ ದಿರ್ಹಮ್‌ (217 ದಶಲಕ್ಷ ಅಮೆರಿಕನ್‌ ಡಾಲರ್‌) ವೆಚ್ಚದಲ್ಲಿ, ಅಭೂತಪೂರ್ವ ಕಾರಂಜಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಯಿತು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾ ಮೂಲದ ಡಬ್ಲ್ಯೂಇಟಿ ಡಿಸೈನ್‌ ಸಂಸ್ಥೆಯು ವಿನ್ಯಾಸ ಮಾಡಿತ್ತು. ಲಾಸ್‌ ವೆಗಾಸ್‌ನ ಬೆಲಜಿಯೊ ಹೋಟೆಲ್‌ನಲ್ಲಿರುವ ಕಾರಂಜಿಗಳ ವಿನ್ಯಾಸವನ್ನೂ ಇದೇ ಸಂಸ್ಥೆ ಮಾಡಿತ್ತು. 6,600 ದೀಪಗಳು ಹಾಗೂ 50 ವಿವಿಧ ಬಣ್ಣ-ಬಣ್ಣದ ಪ್ರೊಜೆಕ್ಟರ್‌ಗಳಿಂದ ಬೆಳಗಿಸಲಾಗಿರುವ ಈ ಕಾರಂಜಿಗಳು 275 m (902 ft) ಉದ್ದವಿದ್ದು ನೀರನ್ನು 150 m (490 ft) ಮೇಲಕ್ಕೆ ಚಿಮ್ಮಿಸುತ್ತವೆ. ಇದರ ಹಿನ್ನೆಲೆಯಲ್ಲಿ ಶಾಸ್ತ್ರೀಯ ಅಥವಾ ಸಮಕಾಲೀನ ಅರಾಬಿಕ್‌ ಹಾಗೂ ವಿಶ್ವವಿಖ್ಯಾತ ಶ್ರೇಣೀಕೃತ ಸಂಗೀತವನ್ನು ಮಾರ್ದನಿಗೊಳಿಸಲಾಗುತ್ತದೆ.[೬೧] ಕಾರಂಜಿಗಳನ್ನು ಹೆಸರಿಸುವ ಸ್ಪರ್ಧೆಯ ಫಲಿತಾಂಶಗಳನ್ನು ಆಧರಿಸಿ, ಈ ಕಾರಂಜಿಯನ್ನು ದುಬೈ ಕಾರಂಜಿ ಎನ್ನಲಾಗುವುದು ಎಂದು ಎಮ್ಮಾರ್‌ 2008ರ ಅಕ್ಟೋಬರ್‌ 26ರಂದು ಘೋಷಿಸಿತು.[೬೨]

ಪರಿವೀಕ್ಷಣಾ ಜಗಲಿ

ಅಟ್ ದಿ ಟಾಪ್ ‌ ಎಂದು ಹೆಸರಿಸಲಾದ ಹೊರಾಂಗಣ ಪರಿವೀಕ್ಷಣಾ ವೇದಿಕೆಯನ್ನು 2010ರ ಜನವರಿ 5ರಂದು 124ನೆಯ ಅಂತಸ್ತಿನಲ್ಲಿ ಆರಂಭಿಸಲಾಯಿತು.[೬೩] ಇದು ವಿಶ್ವದಲ್ಲಿ ಎರಡನೆಯ ಅತ್ಯೆತ್ತರದ ಪರಿವೀಕ್ಷಣಾ ವೇದಿಕೆ ಹಾಗೂ 452 m (1,483 ft) ಎತ್ತರದಲ್ಲಿ ಅತ್ಯೆತ್ತರದ ಹೊರಾಂಗಣ ಪರಿವೀಕ್ಷಣಾ ಜಗಲಿಯಾಗಿದೆ.[೬೪] ಪರಿವೀಕ್ಷಣಾ ವೇದಿಕೆಯಲ್ಲಿ ಬಿಹೋಲ್ಡ್‌, ಅವಲೋಕನಾ ದೂರದರ್ಶಕವೂ ಸೇರಿದೆ. ಕೆನಡಾ ದೇಶದ ಮಾಂಟ್ರಿಯಾಲ್‌ ನಗರದ gsmprjct° ಅಭಿವೃದ್ಧಿಗೊಳಿಸಿದ ಈ ಉಪಕರಣವು ವರ್ಧಿತ ವಾಸ್ತವಿಕತಾ ಉಪಕರಣವಾಗಿದೆ. ಇದರ ಮೂಲಕ ಸಂದರ್ಶಕರು ಸುತ್ತಮುತ್ತಲ ಭೂಚಿತ್ರಣವನ್ನು ನೋಡಬಹುದು. ದಿನದ ವಿವಿಧ ಸಮಯಗಳಲ್ಲಿ, ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ವೀಕ್ಷಿಸಿ ಉಳಿಸಿದ ಹಿಂದಿನ ಚಿತ್ರಗಳನ್ನೂ ಸಹ ವೀಕ್ಷಿಸಬಹುದಾಗಿದೆ.[೬೫][೬೬] ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ನಿರ್ವಹಿಸಲು, ಅವರ ಬರುವಿನ ನಿರ್ದಿಷ್ಟ ದಿನಾಂಕ ಮತ್ತು ಸಮಯಕ್ಕಾಗಿ, ಸ್ಥಳದಲ್ಲಿ ಕೊಂಡ ಟಿಕೆಟ್‌ಗಳಿಗಿಂತಲೂ 75% ರಿಯಾಯತಿಯಲ್ಲಿ ಮುಂಚಿತವಾಗಿಯೇ ಟಿಕೆಟ್‌ ಕೊಳ್ಳಬಹುದಾದ ವ್ಯವಸ್ಥೆ ಇದೆ.[೬೭]

2010ರ ಫೆಬ್ರವರಿ 8ರಂದು, ವಿದ್ಯುತ್ ಪೂರೈಕೆ ಸಮಸ್ಯೆಯಿಂದಾಗಿ ಎರಡು ಅಂತಸ್ತುಗಳ ನಡುವೆ ಸಿಲುಕಿ, ಪ್ರವಾಸಿಗಳ ಗುಂಪು ಸುಮಾರು 45 ನಿಮಿಷಗಳ ಕಾಲ ತೊಂದರೆಗೀಡಾಯಿತು. ಈ ಕಾರಣಕ್ಕಾಗಿ ಪರಿವೀಕ್ಷಣಾ ವೇದಿಕೆಯನ್ನು ಸಾರ್ವಜನಿಕರಿಗಾಗಿ ಮುಚ್ಚಲಾಯಿತು.[೬೮][೬೯] ಸೇಂಟ್‌ ವ್ಯಾಲೆಂಟೀನ್ಸ್‌ ದಿನದಂದು (14 ಫೆಬ್ರವರಿ) ಈ ವೇದಿಕೆಯು ಪುನಃ ತೆರೆಯುವುದು ಎಂಬ ಮಾತುಗಳು ಕೇಳಿಬಂದವು.[೭೦] ಆದರೆ ಅದನ್ನು 2010ರ ಏಪ್ರಿಲ್‌ 4ರ ತನಕ ಮುಚ್ಚಲಾಗಿತ್ತು.[೭೧][೭೨][೭೩]

ಬುರ್ಜ್‌ ಖಲೀಫಾ ಉದ್ಯಾನ

ಬುರ್ಜ್‌ ಖಲೀಫಾ ಕಟ್ಟಡದ ಸುತ್ತಲೂ ಒಂದು 11 ha (27-acre) ಉದ್ಯಾನವಿದೆ. ಭೂಚಿತ್ರಣ ಸಲಹಾ ಸಂಸ್ಥೆ ಎಸ್‌ಡಬ್ಲ್ಯೂಎ ಗ್ರೂಪ್‌ ಇದನ್ನು ವಿನ್ಯಾಸ ಮಾಡಿತ್ತು.[೭೪] ಹೈಮೆನೊಕ್ಯಾಲಿಸ್‌ ಎಂಬ ಮರುಭೂಮಿ ಪುಷ್ಪದ ಸಮ್ಮಿತಿಯ ಆಕೃತಿಗಳನ್ನು ಆಧರಿಸಿದ ಬುರ್ಜ್‌, ಖಲೀಫಾದ ಮೂಲಭೂತ ವಿನ್ಯಾಸದ ಪರಿಕಲ್ಪನೆಗಳು ಉದ್ಯಾನದ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದವು.[೭೫] ಉದ್ಯಾನದಲ್ಲಿ ಆರು ಜಲಸಂಬಂಧಿತ ಕ್ರೀಡಾ ಮನೋರಂಜನಾ ವಿನ್ಯಾಸಗಳು, ಸುಂದರ ತೋಟಗಳು, ತಾಳೆ ಮರಗಳು ಸಾಲು ಕಾಲುದಾರಿಗಳು ಮತ್ತು ಹೂಬಿಡುವ ಮರಗಳಿವೆ.[೭೬] ಉದ್ಯಾನದ ಮಧ್ಯ ಹಾಗೂ ಬುರ್ಜ್‌ ಖಲೀಫಾದ ಅಡಿಪಾಯದಲ್ಲಿ ನೀರಿನ ಕೊಠಡಿಯಿದೆ. ಇಲ್ಲಿ ಹಲವು ಈಜುಕೊಳ ಮತ್ತು ಕಾರಂಜಿಗಳಿವೆ. ಜೊತೆಗೆ, ಕಂಬಿಬೇಲಿ, ವಿಶ್ರಾಂತಿಯ ಆಸನಗಳು ಮತ್ತು ಸಂಕೇತ ಫಲಕಗಳು ಬುರ್ಜ್‌ ಖಲೀಫಾ ಮತ್ತು ಹೈಮೆನೊಕ್ಯಾಲಿಸ್ ‌ ಹೂವಿನ ಚಿತ್ರಗಳನ್ನು ಹೊಂದಿವೆ.

ಶೈತ್ಯೀಕರಣ ವ್ಯವಸ್ಥೆಯಿಂದ ನೀರು ಬಳಸುವ ಕಟ್ಟಡದ ಘನೀಕರಣ ಶೇಖರಣಾ ವ್ಯವಸ್ಥೆಯ ಮೂಲಕ ಗಿಡಗಳು ಮತ್ತು ಪೊದೆಗಳಿಗೆ ನೀರು ಪೂರೈಕೆಯಾಗುತ್ತದೆ. ಈ ವ್ಯವಸ್ಥೆಯು ವಾರ್ಷಿಕವಾಗಿ 68,000,000 L (15,000,000 imp gal) ರಷ್ಟು ಒದಗಿಸುತ್ತದೆ.[೭೬] ದುಬೈ ಕಾರಂಜಿಯ ವಿನ್ಯಾಸಕ ಸಂಸ್ಥೆಯಾದ ಡಬ್ಲ್ಯೂಇಟಿ ಡಿಸೈನರ್ಸ್‌, ಈ ಉದ್ಯಾನದ ಆರು ಜಲ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಿದೆ.[೭೭]

ಅಂತಸ್ತುಗಳ ನೆಲಗಟ್ಟಿನ ಯೋಜನೆಗಳು

ಅಂತಸ್ತುಗಳ ಯೋಜನೆ ಕೆಳಕಂಡಂತಿದೆ:[೪೨][೭೮]

ಮಹಡಿಗಳ ಸಂಖ್ಯೆಬಳಕೆ
160 ಹಾಗೂ ಇನ್ನೂ ಮೇಲೆಯಾಂತ್ರಿಕ
156–159ಸಂವಹನ ಮತ್ತು ಪ್ರಸಾರ
155ಯಾಂತ್ರಿಕ
139–154ಸಿರಿವಂತ ವ್ಯಾಪಾರಿಗಳ ಅನುಕೂಲಕ್ಕಾಗಿರುವ ಕೋಣೆಗಳು
136–138ಯಾಂತ್ರಿಕ
125–135ಸಿರಿವಂತ ವ್ಯಾಪಾರಿಗಳ ಅನುಕೂಲಕ್ಕಾಗಿರುವ ಕೋಣೆಗಳು
124ಅಟ್‌ ದಿ ಟಾಪ್ ಪರಿವೀಕ್ಷಣಾ ಕೇಂದ್ರ
123ಗಗನ ಪ್ರವೇಶಾಂಗಣ
122ಅಟ್ಮಾಸ್ಫಿಯರ್‌ (At.mosphere) ಉಪಾಹಾರ ಕೇಂದ್ರ
111–121ಸಿರಿವಂತ ವ್ಯಾಪಾರಿಗಳ ಅನುಕೂಲಕ್ಕಾಗಿರುವ ಕೋಣೆಗಳು
109–110ಯಾಂತ್ರಿಕ
77–108ವಸತಿ ಕೋಣೆಗಳು
76ಗಗನ ಪ್ರವೇಶಾಂಗಣ
73–75ಯಾಂತ್ರಿಕ
44–72ಗೃಹವಸತಿ
43ಗಗನ ಪ್ರವೇಶಾಂಗಣ
40–42ಯಾಂತ್ರಿಕ
38–39ಅರ್ಮಾನಿ ಹೋಟೆಲ್‌ ಕೋಣೆಗಳು
19–37ಅರ್ಮಾನಿ ಗೃಹಗಳು
17-18ಯಾಂತ್ರಿಕ
9–16ಅರ್ಮಾನಿ ಗೃಹಗಳು
1-8ಅರ್ಮಾನಿ ಹೋಟೆಲ್‌
ನೆಲ ಅಂತಸ್ತುಅರ್ಮಾನಿ ಹೋಟೆಲ್‌
ಅಂಗಣಅರ್ಮಾನಿ ಹೋಟೆಲ್‌
B1–B2ವಾಹನ ನಿಲುಗಡೆ ಸ್ಥಳ, ಯಾಂತ್ರಿಕ

ನಿರ್ಮಾಣ

ನಿರ್ಮಾಣ ವಿಧಾನದ ಅನಿಮೇಷನ್‌ ನಿರೂಪಣೆ
2008ರ ಮಾರ್ಚ್‌ ತಿಂಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಬುರ್ಜ್‌ ಖಲೀಫಾದ ಪಕ್ಷಿ ನೋಟ.

ದಕ್ಷಿಣ ಕೊರಿಯಾದ ನಿರ್ಮಾಣ ಸಂಸ್ಥೆ ಸ್ಯಾಮ್ಸಂಗ್‌ ಇಂಜಿನಿಯರಿಂಗ್‌ & ಕಂಸ್ಟ್ರಕ್ಷನ್‌ ಗೋಪುರ ನಿರ್ಮಾಣ ಕೈಗೊಂಡಿತ್ತು. ಇದೇ ಸಂಸ್ಥೆಯು ಪೆಟ್ರೊನಾಸ್‌ ಅವಳಿ ಗೋಪುರಗಳು ಮತ್ತು ತೈಪೆ 101 ಗೋಪುರಗಳ ನಿರ್ಮಾಣಕಾರ್ಯವನ್ನೂ ಮಾಡಿತ್ತು.[೭೯] ಬೆಲ್ಜಿಯಮ್‌ನ ಬಿಸಿಕ್ಸ್‌ ಹಾಗೂ ಯುಎಇಯ ಅರಬ್‌ಟೆಕ್‌ ಸಂಸ್ಥೆಗಳೊಂದಿಗಿನ ಜಂಟಿ ಸಹಯೋಗಲ್ಲಿ ಸ್ಯಾಮ್ಸಂಗ್‌ ಇಂಜಿನಿಯರಿಂಗ್‌ & ಕಂಸ್ಟ್ರಕ್ಷನ್ಸ್‌ ಈ ಕಟ್ಟಡ ನಿರ್ಮಿಸಿತ್ತು. ಮುಖ್ಯ ನಿರ್ಮಾಣ ಗುತ್ತಿಗೆಯಲ್ಲಿ ಟರ್ನರ್ ಯೋಜನಾ ವ್ಯವಸ್ಥಾಪಕರು.[೮೦]

ಯುಎಇ ಕಾನೂನಿನಡಿ, ಗುತ್ತಿಗೆದಾರರು ಹಾಗೂ ಅಧಿಕೃತ ಇಂಜಿನಿಯರ್‌ ಆಗಿರುವ ಹೈದರ್‌ ಕನ್ಸಲ್ಟಿಂಗ್‌ ಬುರ್ಜ್‌ ಖಲೀಫಾ ಗೋಪುರದ ನಿರ್ಮಾಣ ಮತ್ತು ನಿರ್ವಹಣೆಗೆ ಜಂಟಿಯಾಗಿ ಮತ್ತು ಹಲವು ರೀತ್ಯಾ ಹೊಣೆಯಾಗಿವೆ.

ಪ್ರಬಲ ಗಟ್ಟಿ ಜಲ್ಲಿಗಾರೆಯು ಬುರ್ಜ್ ಖಲೀಫಾದ ಪ್ರಾಥಮಿಕ ರಾಚನಿಕ ವ್ಯವಸ್ಥೆಯಾಗಿದೆ. ಕಟ್ಟಡದ ಜಲ್ಲಿಗಾರೆ ಮತ್ತು ಉಕ್ಕಿನ ಅಡಿಪಾಯ ನಿರ್ಮಿಸಲು ಸುಮಾರು 110,000 tonnes (120,000 short tons; 110,000 long tons) ಕ್ಕಿಂತಲೂ ಹೆಚ್ಚು ತೂಕದ, ಸುಮಾರು 45,000 m3 (58,900 cu yd)ಕ್ಕಿಂತಲೂ ಹೆಚ್ಚು ಜಲ್ಲಿಗಾರೆ ಬಳಸಲಾಯಿತು. ಅಡಿಪಾಯದಲ್ಲಿ 192 ಒಂದರ ಮೇಲೊಂದು ಪೇರಿಸಿಟ್ಟ ಪೈಲ್‌ಗಳಿವೆ. ಪ್ರತಿಯೊಂದು ಪೈಲ್‌ ಸುಮಾರು 1.5 ಮೀಟರ್‌ ವ್ಯಾಸ ಹಾಗೂ 43 ಮೀಟರ್‌ ಉದ್ದವಿವೆ. ಇವನ್ನು ಸುಮಾರು 50 m (164 ft)ಕ್ಕಿಂತಲೂ ಅಧಿಕ ಆಳವಾದ ನೆಲದಲ್ಲಿ ಇಳಿಸಿ ಹೂಳಲಾಗಿದೆ.[೨೪] ಬುರ್ಜ್‌ ಖಲೀಫಾ ಗೋಪುರದ ನಿರ್ಮಾಣದಲ್ಲಿ 330,000 m3 (431,600 cu yd)ರಷ್ಟು ಜಲ್ಲಿಗಾರೆ ಮತ್ತು 55,000 ಟನ್‌ಗಳಷ್ಟು ಉಕ್ಕಿನ ಸರಳುಗಳು ಬಳಕೆಯಾದವು. ನಿರ್ಮಾಣವು 22 ದಶಲಕ್ಷ ಗಂಟೆಗಳ ಮಾನವ ದುಡಿಮೆ ಶ್ರಮವನ್ನು ತೆಗೆದುಕೊಂಡಿತು.[೯] ಬುರ್ಜ್‌ ಖಲೀಫಾ ಅಡಿಪಾಯಗಳಲ್ಲಿ ಹೆಚ್ಚಿನ ಸಾಂದ್ರತೆಯ, ಕಡಿಮೆ ವ್ಯಾಪ್ಯತೆಯ ಜಲ್ಲಿಗಾರೆಯನ್ನು ಬಳಸಲಾಗಿತ್ತು. ಸ್ಥಳೀಯ ಅಂತರ್ಜಲದಲ್ಲಿರುವ ತುಕ್ಕು ಹಿಡಿಸುವ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಯಾವುದೇ ಹಾನಿಕರ ಪ್ರಭಾವವನ್ನು ಕನಿಷ್ಠಗೊಳಿಸಲು ಹಾಸಿನಡಿ ಕ್ಯಾತೊಡಿಕ್ ನ ಋಣದ್ವಾರದ ರಕ್ಷಣಾ ವ್ಯವಸ್ಥೆ ಬಳಸಲಾಗಿದೆ.[೪೨] 2008ರ ಮೇ ತಿಂಗಳಲ್ಲಿ, ಬೃಹತ್ ಪ್ರಮಾಣದ ಜಲ್ಲಿಗಾರೆಯನ್ನು 156ನೆಯ ಅಂತಸ್ತಿಗೆ, ಅಂದರೆ 606 m (1,988 ft),[೨೩] ಎತ್ತರಕ್ಕೆ ಸಾಗಿಸಲಾಗಿದ್ದು ಅಂದಿನ ವಿಶ್ವದಾಖಲೆಯಾಗಿತ್ತು. ಅದಕ್ಕಿಂತಲೂ ಮೇಲಿನ ರಚನೆಯನ್ನು ಹಗುರವಾದ ಉಕ್ಕಿನೊಂದಿಗೆ ನಿರ್ಮಿಸಲಾಗಿದೆ.

ಬುರ್ಜ್‌ ಖಲೀಫಾ ಗೋಪುರವು ಬಹಳಷ್ಟು ಹಂತಗಳಲ್ಲಿ ವಿಭಾಗಿಸಲಾಗಿದೆ. ಹೆಚ್ಚುಕಡಿಮೆ ಪ್ರತಿ 35 ಅಂತಸ್ತುಗಳಲ್ಲಿ ಒತ್ತಡವುಳ್ಳ, ಹವಾನಿಯಂತ್ರಿತ ಆಶ್ರಯ ಅಂತಸ್ತುಗಳಿವೆ. ಅಗ್ನಿ ದುರಂತದಂತಹ ತುರ್ತು ಪರಿಸ್ಥಿತಿಗಳಲ್ಲಿ, ಮೆಟ್ಟಿಲು ಬಳಸಿ ಇಳಿಯುವ ಜನರು ಇಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.[೪೨][೮೧]

ಈ ಭಾರೀ ಕಟ್ಟಡದ ತೂಕವನ್ನು ಸಹಿಸಿಕೊಳ್ಳಲು ಜಲ್ಲಿಗಾರೆಯ ವಿಶೇಷ ಮಿಶ್ರಣಗಳನ್ನು ತಯಾರಿಸಲಾಗಿದೆ. ಬಲವರ್ಧಿತ ಜಲ್ಲಿಗಾರೆ ನಿರ್ಮಾಣಗಳಂತೆ ಇದರಲ್ಲಿಯೂ ಸಹ, ಪ್ರತಿಯೊಂದು ಜಲ್ಲಿಗಾರೆ ಏಕಮಾನವನ್ನು ದೃಢತಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಯೋಜನೆಯಲ್ಲಿ ಬಳಸಲಾದ ಗಾರೆಯ ಜಲ್ಲಿಗಾರೆಯ ಸ್ಥಾಯಿತ್ವ ಬಹಳ ಮುಖ್ಯ ಹಾಗೂ ಅತ್ಯಗತ್ಯವಾಗಿತ್ತು. ಅದರ ಮೇಲೆ ಹೇರಲಾಗುವ ಸಾವಿರಾರು ಟನ್‌ಗಳಷ್ಟು ತೂಕ ಹಾಗೂ 50 °C (122 °F)ರಷ್ಟು ಹೆಚ್ಚಿಗೆ ತಲುಪಬಲ್ಲ ಪರ್ಷಿಯನ್‌ ಕೊಲ್ಲಿ ವಲಯದ ಉಷ್ಣಾಂಶವನ್ನು ಸಹಿಸಬಲ್ಲ ದೃಢ ಜಲ್ಲಿಗಾರೆಯನ್ನು ರಚಿಸುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು, ಹಗಲಿನ ಹೊತ್ತು ಜಲ್ಲಿಗಾರೆಯನ್ನು ಸುರಿಯುತ್ತಿರಲಿಲ್ಲ. ಇದರ ಬದಲಿಗೆ, ಬೇಸಿಗೆಯ ತಿಂಗಳುಗಳಲ್ಲಿ ಈ ಮಿಶ್ರಣಕ್ಕೆ ಇಬ್ಬನಿಯನ್ನು ಸೇರಿಸಲಾಯಿತು. ರಾತ್ರಿಯ ವೇಳೆ ಹವೆಯು ತಂಪಾಗಿದ್ದು, ಆರ್ದ್ರತೆಯು ಹೆಚ್ಚಾಗಿದ್ದ ಕಾರಣ, ಜಲ್ಲಿಗಾರೆಯನ್ನು ರಾತ್ರಿಯ ವೇಳೆ ಹೊಯ್ದು ಸುರಿಯಲಾಗುತ್ತಿತ್ತು. ಇನ್ನೂ ತಂಪಾಗಿರುವ ಜಲ್ಲಿಗಾರೆ ಮಿಶ್ರಣವು ಎಲ್ಲೆಡೆಯೂ ಒಂದೇ ರೀತಿಯಲ್ಲಿ ಘನವಾಗಿ ಹೊಂದಿಕೊಳ್ಳುತ್ತದೆ. ಇದರಿಂದಾಗಿ ಇದು ತ್ವರಿತವಾಗಿ ಕುದುರುವುದು ಅಥವಾ ಸೀಳುವ ಸಾಧ್ಯತೆ ಕನಿಷ್ಠವಾಗುವುದು. ಯಾವುದೇ ಗಮನಾರ್ಹ ಸೀಳುಗಳು ಕಂಡುಬಂದಲ್ಲಿ ಇಡೀ ಯೋಜನೆಯನ್ನು ಅಪಾಯದ ಸ್ಥಿತಿಗೆ ಒಡ್ಡಿದಂತಾಗುವುದು.

ಬುರ್ಜ್‌ ಖಲೀಫಾ ಕಟ್ಟಡದ ಅಪೂರ್ವ ವಿನ್ಯಾಸ ಮತ್ತು ತಂತ್ರವೈಜ್ಞಾನಿಕ ಸವಾಲುಗಳ ಬಗ್ಗೆ ಹಲವು ಕಿರುತೆರೆ ಸಾಕ್ಷ್ಯಚಿತ್ರಗಳಲ್ಲಿ ಪ್ರದರ್ಶಿಸಲಾಗಿದೆ. ಇದರಲ್ಲಿ ಬಿಗ್‌, ಬಿಗ್ಗರ್ ಬಿಗ್ಗೆಸ್ಟ್‌ ಸರಣಿ ನ್ಯಾಷನಲ್‌ ಜಿಯೊಗ್ರಫಿಕ್‌ ಹಾಗೂ ಫೈವ್‌ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಜೊತೆಗೆ, ಡಿಸ್ಕವರಿ ಚಾನೆಲ್‌ನಲ್ಲಿ ಮೆಗಾ ಬಿಲ್ಡರ್ಸ್‌ ಸರಣಿಯೂ ಪ್ರಸಾರವಾಗಿತ್ತು.

ಮೈಲಿಗಲ್ಲುಗಳು

  • ಜನವರಿ 2004: ಅಗೆಯುವಿಕೆಯ ಆರಂಭ.[೨೯]
  • ಫೆಬ್ರವರಿ 2004: ಪೈಲಿಂಗ್‌ ಆರಂಭ.[೨೯]
  • 21 ಸೆಪ್ಟೆಂಬರ್‌ 2004: ನಿರ್ಮಾಣ ಆರಂಭಿಸಿದ ಎಮ್ಮಾರ್‌ ಗುತ್ತಿಗೆದಾರರು.[೮೨]
  • ಮಾರ್ಚ್‌ 2005: ಬುರ್ಜ್‌ ಖಲೀಫಾದದ ರಚನೆಯ ಎತ್ತರದಲ್ಲಿ ಹೆಚ್ಚಳ.[೨೯]


  • ಜೂನ್‌ 2006: 50ನೆಯ ಅಂತಸ್ತಿನ ನಿರ್ಮಾಣ ಸಂಪೂರ್ಣ.[೨೯]
  • ಫೆಬ್ರವರಿ 2007: ಸಿಯರ್ಸ್‌ ಟವರ್ಸ್‌ನ್ನು ಮೀರಿ, ಇದು ಅತಿ ಹೆಚ್ಚು ಅಂತಸ್ತುಗಳನ್ನು ಹೊಂದಿರುವ ಕಟ್ಟಡವಾಯಿತು.
  • 13 ಮೇ 2007: ಯಾವುದೇ ಕಟ್ಟಡದಲ್ಲಿ ಅತ್ಯೆತ್ತರಕ್ಕೆ (452 m (1,483 ft)) ಜಲ್ಲಿಗಾರೆ ಸಾಗಿಸುವ ದಾಖಲೆ ಸೃಷ್ಟಿಯಾಯಿತು. ಬುರ್ಜ್‌ ಖಲೀಫಾ ಕಟ್ಟಡ 130ನೆಯ ಅಂತಸ್ತು ತಲುಪಿದಾಗ, ತೈಪೆ 101 ಕಟ್ಟಡದ ನಿರ್ಮಾಣದಲ್ಲಿ 449.2 m (1,474 ft) ಎತ್ತರಕ್ಕೆ ಜಲ್ಲಿಗಾರೆ ತಳ್ಳಿದ ದಾಖಲೆಯನ್ನೂ ಹಿಂದಿಕ್ಕಿತು.[೨೯][೮೩]
  • 21 ಜುಲೈ 2007: 141ನೆಯ ಅಂತಸ್ತು ತಲುಪುವುದರೊಂದಿಗೆ, 509.2 m (1,671 ft) ಎತ್ತರದ ತೈಪೆ 101ರ ದಾಖಲೆಯನ್ನು ಹಿಂದಿಕ್ಕಿ, ವಿಶ್ವದಲ್ಲಿ ಅತ್ಯೆತ್ತರದ ಕಟ್ಟಡವಾಯಿತು.[೨೯][೮೪]
  • 12 ಆಗಸ್ಟ್‌ 2007: 527.3 m (1,730 ft) ಎತ್ತರದ ಸಿಯರ್ಸ್‌ ಟವರ್ಸ್‌ ಆಂಟೆನಾವನ್ನು ಮೀರಿದ ಬುರ್ಜ್‌ ಖಲೀಫಾ.
  • 12 ಸೆಪ್ಟೆಂಬರ್‌ 2007: 555.3 m (1,822 ft) ಎತ್ತರ ತಲುಪಿದ ಬುರ್ಜ್‌ ಖಲೀಫಾ, ಟೊರೊಂಟೊ ನಗರದ ಸಿಎನ್ ಟವರ್‌ನ್ನೂ ಮೀರಿ, 150ನೆಯ ಅಂತಸ್ತು ತಲುಪಿತು.[೨೯][೮೫]
  • 7 ಏಪ್ರಿಲ್‌ 2008: 629 m (2,064 ft) ಎತ್ತರದಲ್ಲಿ, ಕೆವಿಎಲ್‌ವೈ-ಟಿವಿ ಸ್ತಂಭವನ್ನು ಮೀರಿ, ಅತ್ಯೆತ್ತರದ ಮಾನವ-ನಿರ್ಮಿತ ರಚನೆಯಾಯಿತು. 160ನೆಯ ಅಂತಸ್ತು ತಲುಪಿತು.[೨೯][೮೬]
  • 17 ಜೂನ್‌ 2008: 'ಬುರ್ಜ್‌ ಖಲೀಫಾದ ಎತ್ತರವು 636 m (2,087 ft) ಮೀರಿದೆ. 2009ರ ಸೆಪ್ಟೆಂಬರ್‌ನಲ್ಲಿ ನಿರ್ಮಾಣ ಸಂಪೂರ್ಣಗೊಳ್ಳುವ ತನಕ ಇದರ ಅಂತಿಮ ಎತ್ತರವನ್ನು ತಿಳಿಸಲಾಗುವುದಿಲ್ಲ' ಎಂದು ಘೋಷಿಸಿದ ಎಮ್ಮಾರ್.[೩೪]
  • 1 ಸೆಪ್ಟೆಂಬರ್‌ 2008: 688 m (2,257 ft) ಮೀರಿದ ಎತ್ತರ. ಪೋಲೆಂಡ್‌ ದೇಶದ ಕಾನ್‌ಸ್ಟೆಂಟಿನೊವ್‌ನಲ್ಲಿರುವ ವಾರ್ಸಾ ರೇಡಿಯೊ ಸ್ತಂಭವನ್ನು ಮೀರಿದ ಬುರ್ಜ್‌ ಖಲೀಫಾ, ಅತ್ಯೆತ್ತರದ ಮಾನವ-ನಿರ್ಮಿತ ಕಟ್ಟಡವಾಯಿತು.[೮೭]
  • 17 ಜನವರಿ 2009: 828 m (2,717 ft) ತಲುಪಿದ ಎತ್ತರ.[೮೮]
  • 1 ಅಕ್ಟೋಬರ್‌ 2009: ಕಟ್ಟಡದ ಹೊರಭಾಗದ ನಿರ್ಮಾಣ ಸಂಪೂರ್ಣವಾಗಿದೆ ಎಂದು ಘೋಷಿಸಿದ ಎಮ್ಮಾರ್‌.[೮೯]
  • 4 ಜನವರಿ 2010: ಬುರ್ಜ್‌ ಖಲೀಫಾದ ಅಧಿಕೃತ ಸಮಾರಂಭ ಆಯೋಜಿತ; ಬುರ್ಜ್ ಖಲೀಫಾ ಸಾರ್ವಜನಿಕರಿಗಾಗಿ ತೆರೆಯಲಾಯಿತು. ಯುಎಇ ರಾಷ್ಟ್ರದ ಇಂದಿನ ರಾಷ್ಟ್ರಾಧ್ಯಕ್ಷ ಹಾಗೂ ಅಬುಧಾಬಿಯ ಮುಖ್ಯಸ್ಥ ಷೇಕ್‌ ಖಲೀಫಾ ಬಿನ್‌ ಝಯೆದ್‌ ಅಲ್‌ ನಹ್ಯನ್‌ ಅವರ ಗೌರವಾರ್ಥವಾಗಿ, ಬುರ್ಜ್‌ ದುಬೈ ಬುರ್ಜ್‌ ಖಲೀಫಾ ಎಂದು ಮರುನಾಮಕರಣ.[೭]

ಅಧಿಕೃತ ಉದ್ಘಾಟನಾ ಸಮಾರಂಭ

ಚಿತ್ರ:Burj khalifa opening ceremony.jpg
ಉದ್ಘಾಟನಾ ಸಮಾರಂಭದಂದು ಬುರ್ಜ್‌ ಖಲೀಫಾದ ನೋಟ

ಬುರ್ಜ್‌ ಖಲೀಫಾ ಕಟ್ಟಡವನ್ನು 2010ರ ಜನವರಿ 4ರಂದು ಉದ್ಘಾಟಿಸಲಾಯಿತು.[೯೦] ಈ ಸಮಾರಂಭದಲ್ಲಿ ಸುಮಾರು 10,000 ಸುಡುಮದ್ದುಗಳು, ಗೋಪುರದ ಮೇಲೆ ಅಥವಾ ಸುತ್ತಲೂ ದೀಪಗಳ ಸಾಲಂಕೃತ ರೇಖಾಕೃತಿಗಳು, ಬಾಣ ಬಿರುಸುಗಳೊಂದಿಗೆ ಇನ್ನಷ್ಟು ಧ್ವನಿ, ಬೆಳಕು ಮತ್ತು ನೀರಿನ ಎಫೆಕ್ಟ್‌ಗಳನ್ನು ವಿನ್ಯಾಸ ಮಾಡಲಾಯಿತು.[೯೧] ಯುನೈಟೆಡ್‌ ಕಿಂಗ್ಡಮ್‌ ಮೂಲದ ಬೆಳಕಿನ ವಿನ್ಯಾಸಗಾರರಾದ ಸ್ಪೇಯರ್ಸ್‌ ಅಂಡ್‌ ಮೇಜರ್‌ ಇಂತಹ ಉತ್ಸವದ ಬೆಳಕಿನ ವಿನ್ಯಾಸ ಮಾಡಿದರು.[೯೨] 868 ಪ್ರಬಲ ಭ್ರಮಣದರ್ಶಕ ಬೆಳಕುರೇಖೆಗಳನ್ನು ಗೋಪುರದ ಮುಂಗೋಣೆ ಮತ್ತು ಶೃಂಗದಲ್ಲಿ ಒಟ್ಟುಗೂಡಿಸಲಾಯಿತು. ವಿವಿಧ ಬೆಳಕುಕ್ರಮಗಳನ್ನು ಸಂಯೋಜಿಸಲಾಯಿತು. ಜೊತೆಗೆ, ಇತರೆ ಎಫೆಕ್ಟಗಳ 50 ವಿವಿಧ ಸಂಯೋಜನೆಗಳನ್ನೂ ಸಹ ಬಳಸಲಾಯಿತು.

ದುಬೈ ನಗರದ ಇತಿಹಾಸ ಮತ್ತು ಬುರ್ಜ್‌ ಖಲೀಫಾ ವಿಕಾಸಗೊಂಡ ಬಗೆಗಿನ ಕಿರುಚಿತ್ರದೊಂದಿಗೆ ಈ ಸಮಾರಂಭವು ಆರಂಭಗೊಂಡಿತು. ನಂತರ ಧ್ವನಿ, ಬೆಳಕು, ನೀರು ಮತ್ತು ಸುಡುಮದ್ದುಗಳ ಪ್ರದರ್ಶನ ನಡೆಯಿತು.[೯೧] ವಿವಿಧ ಉಜ್ವಲ ಬೆಳಕು, ನೀರು ಮತ್ತು ಧ್ವನಿ ಪ್ರದರ್ಶನಗಳನ್ನು ಮೂರು ವಿಭಾಗಗಳನ್ನಾಗಿ ಮಾಡಲಾಯಿತು. ಮೊದಲ ಭಾಗದಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನವುಂಟು. ಇದು ಮರುಭೂಮಿಯ ಪುಷ್ಪ ಮತ್ತು ಹೊಸ ಗೋಪುರದ ನಡುವಿನ ಬೆಸುಗೆಯ ವಿಷಯವನ್ನಾಗಿ ಆಯ್ದು, ದುಬೈ ಕಾರಂಜಿ ಮತ್ತು ಉಜ್ವಲ ಬೆಳಕಿನ ಪ್ರದರ್ಶನ ಆಯೋಜಿತ ಪ್ರದರ್ಶನವಾಗಿದೆ. ಎರಡನೆಯ ಭಾಗಕ್ಕೆ 'ಹಾರ್ಟ್‌ ಬೀಟ್‌' ಎನ್ನಲಾಗಿತ್ತು. 300 ಪ್ರೊಜೆಕ್ಟರ್‌ಗಳನ್ನು ಬಳಸಿ, ಬೆಳಕು ಪ್ರದರ್ಶನದ ಮೂಲಕ ಕಟ್ಟಡ ನಿರ್ಮಾಣದ ಹಂತಗಳನ್ನು ನಿರೂಪಿಸಲಾಯಿತು. ಮೂರನೆಯ ಭಾಗದಲ್ಲಿ, ಅಕಾಶ ಜಾಡುಗಳು ಹಾಗೂ ಬಾಹ್ಯಾಕಾಶ ತೋಪುಗಳ ಮೂಲಕ ಕಟ್ಟಡವನ್ನು ಬರೀ ಶುಭ್ರ ಬೆಳಕಿನಲ್ಲಿ ಆವರಿಸಲಾಯಿತು. ಬುರ್ಜ್‌ ಖಲೀಫಾದ ಶೃಂಗದಲ್ಲಿರುವ ಮಿಂಚು ತಂತಿಯನ್ನು ಸಕ್ರಿಯಗೊಳಿಸಿದಾಗ ಈ ಬಿಳಿ ಬೆಳಕು ವಿಸ್ತರಿಸಿತು.[೯೧]

ಬುರ್ಜ್‌ ಪಾರ್ಕ್‌ ದ್ವೀಪದಲ್ಲಿರುವ ಬೃಹತ್‌ ಪರದೆಯ ಮೇಲೆ ಈ ಸಮಾರಂಭದ ನೇರ ಪ್ರಸಾರ ಮಾಡಲಾಯಿತು. ಜೊತೆಗೆ, ದುಬೈ ವಾಣಿಜ್ಯ ಕೇಂದ್ರದುದ್ದಕ್ಕೂ ಇಡಲಾಗಿದ್ದ ಹಲವು ದೂರದರ್ಶನ ವಿಶಾಲ ಪರದೆಗಳ ಮೂಲಕವೂ ಪ್ರಸಾರ ಮಾಡಲಾಯಿತು. ವಿಶ್ವದಾದ್ಯಂತ ಹಲವು ಮಾಧ್ಯಮಗಳು ಈ ಸಮಾರಂಭದ ನೇರ ಪ್ರಸಾರಕ್ಕೆ ಒತ್ತುಕೊಟ್ಟವು.[೯೧] ಇದಲ್ಲದೇ ಮಾಧ್ಯಮಗಳ ಜೊತೆಗೆ, ಸುಮಾರು 6,000 ಅತಿಥಿಗಳನ್ನು ನಿರೀಕ್ಷಿಸಲಾಗಿತ್ತು.[೯೩]

==

ಉನ್ನತ ಕಟ್ಟಡಗಳು ಮತ್ತು ನಗರ ವಾಸಸ್ಥಳ ಮಂಡಳಿಯು, 2010ರ ಅಕ್ಟೋಬರ್‌ 25ರಂದು ನಡೆದ ತನ್ನ ವಾರ್ಷಿಕ 'ಅತ್ಯುತ್ತಮ ಉನ್ನತ ಕಟ್ಟಡ ಪ್ರಶಸ್ತಿ ಸಮಾರಂಭ'ದಲ್ಲಿ ಬುರ್ಜ್‌ ಖಲೀಫಾಗೆ ಹೊಸ ಪ್ರಶಸ್ತಿ ನೀಡಿತು. ಜೊತೆಗೆ ಬುರ್ಜ್‌ ಖಲೀಫಾ ಸಿಟಿಬಿಯುಎಚ್‌ನ ಹೊಸ ಉನ್ನತ ಕಟ್ಟಡ ಗ್ಲೋಬಲ್‌ ಐಕಾನ್ ಪ್ರಶಸ್ತಿ ಕೂಡ ಗಳಿಸಿತು. ಸಿಟಿಬಿಯುಎಚ್‌ ಪ್ರಕಾರ, ಹೊಸ 'ಗ್ಲೋಬಲ್‌ ಐಕಾನ್‌' ಪ್ರಶಸ್ತಿಯು ಬಹಳ ವಿಶೇಷವಾದ, ಅತ್ಯೆತ್ತರದ ಗಗನಚುಂಬಿ ಕಟ್ಟಡಗಳಿಗೆ ನೀಡಲಾಗುವುದು. ಇವು ಸ್ಥಳೀಯ ಅಥವಾ ವಲಯವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಅತ್ಯೆತ್ತರದ ಕಟ್ಟಡಗಳ ವಿನ್ಯಾಸದ ಮೇಲೆ ಪ್ರಭಾವ ಬೀರುವಂತಹ ಕಟ್ಟಡಗಳಿಗೆ ನೀಡಲಾಗುವುದು. ಯೋಜನೆ, ವಿನ್ಯಾಸ ಮತ್ತು ಕಾರ್ಯದಲ್ಲಿ ನವೀನತೆ ಮೆರೆದ ಈ ಕಟ್ಟಡವು, ಅತ್ಯೆತ್ತರದ ಕಟ್ಟಡದ ವಾಸ್ತುಶೈಲಿ, ಇಂಜಿನಿಯರಿಂಗ್‌ ಮತ್ತು ನಗರವಾಸ ಯೋಜನೆಯ ಕ್ಷೇತ್ರದ ಮೇಲೆ ಬಹಳಷ್ಟು ಪ್ರಭಾವ ಬೀರಿರಬಹುದು. ಈ ಪ್ರಶಸ್ತಿಯನ್ನು ಆಗಾಗ್ಗೆ (ಬಹುಶಃ ಹತ್ತು ಅಥವಾ ಹದಿನೈದು ವರ್ಷಗಳಲ್ಲೊಮ್ಮೆ) ನೀಡಲಾಗುವುದು, ಯಾವುದಾದರು ಬಹಳಷ್ಟು ಆಸಾಧಾರಣ ಎನಿಸಿದ ಯೋಜನೆಗೆ ನೀಡಲಾಗುವುದು.[೯೪]

ಸಿಟಿಬಿಯುಎಚ್‌ ಪ್ರಶಸ್ತಿ ಮಂಡಳಿ ಮುಖ್ಯಸ್ಥ, ಅಡ್ರಿಯನ್‌ ಸ್ಮಿತ್‌ + ಗೊರ್ಡಾನ್‌ ಗಿಲ್‌ ಆರ್ಕಿಟೆಕ್ಚರ್‌ ಸಂಸ್ಥೆಯ ಗೊರ್ಡಾನ್‌ ಗಿಲ್‌ ಹೇಳಿದಂತೆ:

"'ವರ್ಷದ ಅತ್ಯುತ್ತಮ ಎತ್ತರದ ಕಟ್ಟಡ'ವನ್ನು ಬುರ್ಜ್‌ ಖಲೀಫಾಗೆ ಪ್ರದಾನ ಮಾಡಿದ್ದು ಅಷ್ಟೂ ಸೂಕ್ತವಲ್ಲ ಎಂದು ತೀರ್ಪುಗಾರ ಮಂಡಳಿಯ ಸದಸ್ಯರಲ್ಲಿ ಚರ್ಚೆಯಿತ್ತು. ನಾವು ಚರ್ಚಿಸುತ್ತಿರುವುದು ಸಂಪೂರ್ಣಗೊಳ್ಳುವ ಮುಂಚೆಯೇ ವಾಸ್ತುಶೈಲಿಯ ಕ್ಷೇತ್ರದ ಭೂಚಿತ್ರಣದ ಮೇಲೆ ಬಹಳಷ್ಟು ಪ್ರಭಾವ ಬೀರಿದ, ಹಾಗೂ, ಇದರ ವಾಸ್ತುಶೈಲಿಯು ಅಂತರರಾಷ್ಟ್ರೀಯ ಮನ್ನಣೆ ಪಡೆದ ಕಟ್ಟಡದ ಬಗ್ಗೆ. ಇದಕ್ಕೆ 'ಶತಮಾನದ ಕಟ್ಟಡ' ಎನ್ನುವುದು ಸೂಕ್ತ." [೯೪]

ಬೇಸ್‌ ಜಿಗಿತ

ಹಲವು ಅನುಭವಿ ಬೇಸ್‌ ಜಿಗಿತ ಸಾಹಸಿಗಳು ಅಧಿಕೃತ ಹಾಗೂ ಅನಧಿಕೃತ ಬೇಸ್‌ ಜಿಗಿತ ಸಾಹಸಗಳಿಗಾಗಿ ಈ ಕಟ್ಟಡವನ್ನು ಬಳಸಿದ್ದಾಗಿದೆ:

  • 2008ರ ಮೇ ತಿಂಗಳಲ್ಲಿ, ಹರ್ವೆ ಲೆ ಗಾಲ್‌ ಮತ್ತು ಇನ್ನೊಬ್ಬ ಅನಾಮಧೇಯ ವ್ಯಕ್ತಿಯು ಇಂಜಿನಿಯರ್‌ಗಳ ಪೋಷಾಕು ಧರಿಸಿ, 650 ಮೀಟರ್‌ ಎತ್ತರವಿದ್ದ ಬುರ್ಜ್ ಖಲೀಫಾ ಕಟ್ಟಡವನ್ನು ಅಕ್ರಮವಾಗಿ ಪ್ರವೇಶಿಸಿದರು. 160ನೆಯ ಅಂತಸ್ತಿಗೆ ಎರಡು ಅಂತಸ್ತು ಕೆಳಮಟ್ಟದಲ್ಲಿರುವ ಮುಂಚಾಚಿನಿಂದ ಕೆಳಕ್ಕೆ ಜಿಗಿದರು.[೯೫][೯೬]
  • 2010ರ ಜನವರಿ 8ರಂದು, ಅಧಿಕಾರಿಗಳ ಅನುಮತಿಯೊಂದಿಗೆ, ಎಮಿರೇಟ್ಸ್‌ ಹವಾಯಾನ ಸಮಾಜದ ಸದಸ್ಯರಾದ ನಸರ್‌ ಅಲ್‌ ನಿಯದಿ ಮತ್ತು ಒಮರ್‌ ಅಲ್‌ ಹಗಲನ್ ಬೇಸ್‌ ಜಿಗಿತದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಅವರಿಬ್ಬರೂ 160ನೆಯ ಮಹಡಿಗೆ ಜೋಡಿಸಲಾದ ಒಂದು ಕ್ರೇನ್‌ ಯಂತ್ರದಿಂದ ಜಿಗಿದರು. 672 m (2,205 ft)‌ ಇವರಿಬ್ಬರೂ ಸುಮಾರು 220 km/h (140 mph) ವೇಗದಲ್ಲಿ ಕೆಳಗೆ ಬಿದ್ದರು. 90 ಸೆಕೆಂಡ್‌ ಜಿಗಿತದಲ್ಲಿ ಅವರು ಮೊದಲ ಹತ್ತು ಸೆಕೆಂಡ್‌ಗಳಲ್ಲಿ ತಮ್ಮ ಇಳಿಕೊಡೆಯನ್ನು ತೆರೆಯಲು ಸಾಧ್ಯವಾಯಿತು.[೯೭][೯೮]

ಶ್ರಮಿಕರ ವಿವಾದ

ಬುರ್ಜ್‌ ಖಲೀಫಾ ನಿರ್ಮಾಣದಲ್ಲಿ ಪಾಲ್ಗೊಂಡ ಬಹಳಷ್ಟು ಕಾರ್ಮಿಕರು ದಕ್ಷಿಣ ಏಷ್ಯಾ ಮೂಲದವರಾಗಿದ್ದರು [೯೯][೧೦೦] 2008ರ ಜೂನ್‌ 17ರಂದು, ನಿರ್ಮಾಣ ಸ್ಥಳದಲ್ಲಿ 7,500 ತರಬೇತಾದ ಕೆಲಸಗಾರು ಸೇವೆ ಸಲ್ಲಿಸುತ್ತಿದ್ದರು.[೩೪] 2006ರಲ್ಲಿ ಪ್ರಕಟಿತ ಪತ್ರಿಕಾ ವರದಿಗಳ ಪ್ರಕಾರ, ಅಲ್ಲಿ ಕೆಲಸ ಮಾಡುತ್ತಿದ್ದ ಬಡಗಿಗಳು ಒಂದು ದಿನಕ್ಕೆ 4.34 ಯುಕೆ ಪೌಂಡ್‌ಗಳು ಹಾಗೂ ಶ್ರಮಿಕರು 2.84 ಯುಕೆ ಪೌಂಡ್‌ಗಳಷ್ಟು ಗಳಿಸುತ್ತಿದ್ದರು.[೯೯] ಬಿಬಿಸಿ ತನಿಖೆ ಹಾಗೂ ಮಾನವ ಹಕ್ಕು ನಿರ್ವಹಣಾ ವರದಿ ಪ್ರಕಾರ, ಕೆಲಸಗಾರರನ್ನು ತೀರಾ ಕಳಪೆ ಸ್ಥಿತಿಗಳಲ್ಲಿ ನಡೆಸಿಕೊಳ್ಳಲಾಗುತ್ತಿತ್ತು. ಅವರ ಸಂಬಳಗಳನ್ನು ಕ್ಷುಲ್ಲಕ ಕಾರಣಗಳಿಗಾಗಿ ತಡೆಹಿಡಿಯಲಾಗುತ್ತಿತ್ತು. ಉದ್ಯೋಗದಾರರು ಅವರ ಪಾರಪತ್ರಗಳನ್ನು ಕಸಿದುಕೊಳ್ಳುತ್ತಿದ್ದರು. ಅವರೆಲ್ಲರೂ ಬಹಳಷ್ಟು ಅಪಾಯಕಾರಿ ಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ್ದರಿಂದ ಅಪಘಾತಗಳು ಸಂಭವಿಸಿ ಬಹಳಷ್ಟು ಸಾವು-ನೋವುಗಳು ಸಂಭವಿಸಿದ್ದುಂಟು.[೧೦೧] ಬುರ್ಜ್‌ ಖಲೀಫಾ ಗೋಪುರದ ನಿರ್ಮಾಣದ ಸಮಯ, ಕೇವಲ ಒಂದೇ ಒಂದು ನಿರ್ಮಾಣ-ಸಂಬಂಧಿತ ಸಾವು ವರದಿಯಾಗಿತ್ತು.[೧೦೨] ಆದರೂ, ಯುಎಇ ದೇಶದಲ್ಲಿ ಇಂತಹ ಗಾಯಗಳು ಮತ್ತು ಸಾವುಗಳನ್ನು 'ಸಮರ್ಪಕವಾಗಿ ದಾಖಲಿಸಲಾಗುವುದಿಲ್ಲ' ಎಂಬುದು ಗಮನಾರ್ಹ ಅಂಶ.[೧೦೩]

2006ರ ಮಾರ್ಚ್‌ 21ರಂದು, ತಮ್ಮ ಕೆಲಸದ ನಂತರ ನಿವಾಸಗಳಿಗೆ ಒಯ್ಯಬೇಕಾಗಿದ್ದ ಬಸ್‌ಗಳು ವಿಳಂಬಗೊಂಡ ಕಾರಣ, ಸುಮಾರು 2,500 ಕೆಲಸಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾರುಗಳು, ಕಾರ್ಯಾಲಯಗಳು, ಕಂಪ್ಯೂಟರ್‌ಗಳು ಹಾಗೂ ನಿರ್ಮಾಣ ಉಪಕರಣಗಳನ್ನು ಹಾಳು ಮಾಡಿದರು.[೯೯] ದಂಗೆಯೆದ್ದವರು ಸುಮಾರು 500,000 ಯುಕೆ ಪೌಂಡ್‌ಗಳಷ್ಟು ನಷ್ಟವೆಸಗಿದರು ಎಂದು ದುಬೈ ಆಂತರಿಕ ಸಚಿವಾಲಯ ಅಧಿಕಾರಿ ತಿಳಿಸಿದರು.[೯೯] ಗಲಭೆಯಲ್ಲಿ ಪಾಲ್ಗೊಂಡವರಲ್ಲಿ ಬಹಳಷ್ಟು ಜನರು ಮಾರನೆಯ ದಿನ ಕೆಲಸಕ್ಕೆ ಹಾಜರಾದರು ಕೆಲಸ ಮಾಡಲು ನಿರಾಕರಿಸಿದರು.[೯೯]

ಚಿತ್ರಸಂಪುಟಗಳು

ನಿರ್ಮಾಣ ಹಂತದಲ್ಲಿರುವ ಕಟ್ಟಡ

ನಿರ್ಮಾಣದ ನಂತರ

ಇವನ್ನೂ ಗಮನಿಸಿ

  • ಡೌನ್ಟೌನ್‌ ದುಬೈ (ದುಬೈ ವಾಣಿಜ್ಯ ಪ್ರದೇಶ)
  • ದುಬೈಯಲ್ಲಿರ ಅಭಿವೃದ್ಧಿ ಯೋಜನೆಗಳ ಪಟ್ಟಿ
  • ವಿಶ್ವದ ಅತ್ಯುನ್ನತ ಎತ್ತರದ ಕಟ್ಟಡಗಳ ಪಟ್ಟಿ
  • ದುಬೈನ ಅತಿ ಎತ್ತರದ ಕಟ್ಟಡಗಳ ಪಟ್ಟಿ
  • ವಿಶ್ವದಲ್ಲಿನ ಅತ್ಯೆತ್ತರದ ಕಟ್ಟಡ ಹಾಗೂ ರಚನೆಗಳ ಪಟ್ಟಿ
  • ಸಂಯುಕ್ತ ಅರಬ್‌ ಎಮಿರೇಟ್‌ ದೇಶದಲ್ಲಿ ಅತ್ಯೆತ್ತರದ ಕಟ್ಟಡಗಳ ಪಟ್ಟಿ
  • 100 ಅಥವಾ ಹೆಚ್ಚು ಅಂತಸ್ತುಗಳುಳ್ಳ ಕಟ್ಟಡಗಳ ಪಟ್ಟಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು


Records
ಪೂರ್ವಾಧಿಕಾರಿ
Warsaw Radio Mast
646.38 m (2,120.67 ft)
World's tallest structure ever built
2008 – present
Incumbent
ಪೂರ್ವಾಧಿಕಾರಿ
KVLY-TV mast
628.8 m (2,063 ft)
World's tallest structure
2008 – present
ಪೂರ್ವಾಧಿಕಾರಿ
CN Tower
553.33 m (1,815.39 ft)
World's tallest free-standing structure
2007 – present
ಪೂರ್ವಾಧಿಕಾರಿ
Taipei 101
509.2 m (1,670.6 ft)
World's tallest building
2010 – present
ಪೂರ್ವಾಧಿಕಾರಿ
Willis Tower
108 floors
Building with the most floors
2007 – present

25°11′49.7″N 55°16′26.8″E / 25.197139°N 55.274111°E / 25.197139; 55.274111